ಬುಷ್ ಪೆಪ್ಪರ್- ಕೊಯಿಲು ಬೆಳೆಸುವುದು ಹೇಗೆ- ಅನುಕೂಲ ಏನು?

ಕರಿಮೆಣಸು ಹೀಗೆ ಬೆಳೆಸಬಹುದು

ತೋಟದಲ್ಲಿ ಮರಕ್ಕೆ ಅಥವಾ ಯಾವುದಾದರು ಅಧಾರಕ್ಕೆ  ಹಬ್ಬಿಸಿ ಬೆಳೆಸಿದ ಕರಿಮೆಣಸನ್ನು  ಬೆಳೆಸುವುದು ನಮಗೆಲ್ಲಾ ಗೊತ್ತಿರುವ ಬೆಳೆ ಕ್ರಮ. ಇದನ್ನು ಮರಕ್ಕೆ ಹಬ್ಬಿಸು  ಬೆಳೆಸುವುದಲ್ಲದೆ ನೆಲದಲ್ಲಿಯೆ ಬೆಳೆಸಿ ಮೆಣಸು ಪಡೆಯಬಹುದು. ಈ ರೀತಿ ಮೆಣಸು ಬೆಳೆಸುವುದಕ್ಕೆ ಬುಷ್ ಪೆಪ್ಪರ್ ,ಪೊದೆಮೆಣಸು (bush pepper) ಎನ್ನುತ್ತಾರೆ. ಇದನ್ನು ಕೊಯ್ಯುವುದು ಸುಲಭ. ವರ್ಷದಲ್ಲಿ ಎರಡು ಮೂರು ಬಾರಿ ಇಳುವರಿಯು ಕೊಡುತ್ತದೆ. ಕೆಲವು ಇತಿಮಿತಿಗಳಲ್ಲಿ  ಇದನ್ನು ಬೆಳೆಸಬಹುದು. ಅಸಾಂಪ್ರದಾಯಿಕ ಪ್ರದೇಶಗಲ್ಲಿ ತಾಜಾ ಮೆಣಸು ಬಯಸುವವರಿಗೆ ಇದು ಉತ್ತಮ. 

 • ಕಾಳು ಮೆಣಸು ಬೆಳೆಸಬೇಕೆಂಬ  ಆಸಕ್ತಿ ಉಳ್ಳವರಿಗೆ  ಅನುಕೂಲವಾಗುವಂತೆ ಬಂದ ತಾಂತ್ರಿಕತೆ ಎಂದರೆ  ಮರಕ್ಕೆ ಹಬ್ಬಿಸದೇ ನೆಲಮಟ್ಟದಲ್ಲಿ ಬೆಳೆಸುವುದು.
 • ಇದನ್ನು  ಹೂವಿನ ಗಿಡ ಬೆಳೆಸಿದಂತೆ ಬೆಳೆಯಬಹುದು.ತೊಟದಲ್ಲು  ಬೆಳೆಸಬಹುದು. ಇದಕ್ಕೆ ಸಾಂಪ್ರದಾಯಿಕ ಕರಿಮೆಣಸು ಬೆಳೆಸುವಲ್ಲಿ ಇರುವ ಇತಿ ಮಿತಿಗಳು ಇಲ್ಲ.

ಇದು ಬರೇ ಅಲಂಕಾರಕ್ಕೂ ಅಗಬಹುದು, ವಾಣಿಜ್ಯಿಕವಾಗಿಯೂ ಇದನ್ನು ಬೆಳೆಸಬಹುದು. ಸಾಂಪ್ರದಾಯಿಕ ಕ್ರಮಕ್ಕಿಂತ ಇದರಲ್ಲಿ ಸಾಕಷ್ಟು ಅನುಕೂಲಗಳು ಇವೆ.  ಆದರೆ ಸಾಂಪ್ರದಾಯಿಕ ಕ್ರಮ ವಾಣಿಜ್ಯ ಕೃಷಿಗೆ ಎಲ್ಲಾ ಮಟ್ಟಿನಲ್ಲೂ ಅನುಕೂಲಕರ.

ಬುಷ್ ಪೆಪ್ಪರ್

ಪೊದೆ ಮೆಣಸು ಹೇಗೆ:

 • ಕರಿಮೆಣಸಿನಲ್ಲಿ ನೆಲದಲ್ಲಿ  ಹಬ್ಬಿ ಬೆಳೆಯುವ ಬಳ್ಳಿಗಳನ್ನು  (Runner shoots) ಸಸಿ ಮಾಡಿ ಅಥವಾ ಅದನ್ನೇ ನೇರವಾಗಿ ನೆಟ್ಟು ಅದು ಬೆಳೆಸುವುದು ಸಾಂಪ್ರದಾಯಿಕ ಕ್ರಮ. ಈ ಬಳ್ಳಿ ಅಧಾರಕ್ಕೆ ಏರುತ್ತಾ   ಅದರಲ್ಲಿ ಕವಲು  (lateral branches) ಚಿಗುರುಗಳು ಬಂದು  ಅದರಲ್ಲಿ  ಹೂ ಮೊಗ್ಗುಗಳು ಬಂದು ಕಾಯಿಯಾಗುತ್ತದೆ.
 • ಪೊದೆ ಮೆಣಸು ಎಂಬುದು   ಕವಲು ಬಳ್ಳಿಗಳನ್ನೇ ನೆಟ್ಟು ಫಲ ಪಡೆಯುವುದು.
 • ವಿಯೆಟ್ ನಾಮ್  ದೇಶದಲ್ಲಿ ಇದೇ  ಮರಕ್ಕೆ ಏರಿ ಬೆಳೆಯುವ  ಗೆಲ್ಲುಗಳನ್ನು ( Orthotropic shoots ) ನೆಟ್ಟು ಅದರಲ್ಲೇ ಫಸಲು  ಪಡೆಯುತ್ತಾರಂತೆ. ನಮ್ಮಲ್ಲಿಯೂ ಕೆಲವರು ಆಧಾರ ಮರಕ್ಕೆ  ಇಂತಹ  ಗೆಲ್ಲನ್ನು ನೆಟ್ಟು ಬೆಳೆಸಿದ್ದು ಇದೆ.
 • ಕವಲು ಬಳ್ಳಿ ಆಥವಾ ಫಲ ಕೊಡುವ  ರೆಂಬೆಯನ್ನು  ಬೇರು ಬರುವಂತೆ ಪ್ರಚೋದನೆ  ಮಾಡಬೇಕಾಗುತ್ತದೆ. ಇದರಲ್ಲಿ ಗಂಟುಗಳಿದ್ದರೂ ಬೇರು ಸುಲಭವಾಗಿ  ಬರುವುದಿಲ್ಲ.  ಬೇರು ಬಂದ ನಂತರ ಅದು ಕವಲು ರೆಂಬೆಯ ತರಹವೇ ಬೆಳೆಯುತ್ತಾ ಹೋಗುತ್ತದೆ.  ಮೇಲೆ ಏರುವುದಿಲ್ಲ. ಅಗಲಕ್ಕೆ ಬೆಳೆಯುತ್ತದೆ. ಚಿಗುರಿದಂತೆ  ಅದರಲ್ಲಿ ಹೂವು ಕರೆಗಳೇ ಬರುತ್ತವೆ.

ಸಾಂಪ್ರದಾಯಿಕ ವಿಧಾನದಲ್ಲಿ ನಾಟಿ ಮಾಡಿದ ಬಳ್ಳಿ  ಬೆಳೆಯಬೇಕು. ಅದರಲ್ಲಿ ಕವಲು ರೆಂಬೆಗಳು ಬರಬೇಕು. ಅದು ಬೆಳೆಯಬೇಕು ನಂತರ ಹೂ ಗೊಂಚಲು ಬಿಡಬೇಕು. ಅದಕ್ಕೆ ಏನಿಲ್ಲವೆಂದರೂ 1.5 ವರ್ಷವಾದರೂ ಬೇಕು.ರೆಂಬೆಯನ್ನೇ ಬೇರು ಬರಿಸಿದಾಗ ಅಷ್ಟು ಸಮಯ ಉಳಿತಾಯ ಮತ್ತು ನಾಟಿ ಮಾಡಿ ಬೆಳೆವಣಿಗೆ ಹೊಂದಿ 2-3 ತಿಂಗಳಿಗೇ ಹೂ ಕರೆ ಬರಲು ಪ್ರಾರಂಭವಾಗುತ್ತದೆ.

ನೆರಳು ಬಲೆ ಅಡಿಯಲ್ಲಿ ಬೆಳೆದ ಮೆಣಸು

 • ಇದನ್ನು ಹೆಚ್ಚಾಗಿ ಕುಂಡಗಳಲ್ಲಿ ಅಲಂಕಾರದ ಗಿಡವಾಗಿ ಬೆಳೆಸುತ್ತಿದ್ದರು.
 • ಈಗ ಇದನ್ನು ವಾಣಿಜ್ಯಿಕವಾಗಿ ಬೆಳೆಯುವ ಬಗ್ಗೆ ರೈತರು ಮತ್ತು ವಿಜ್ಞಾನಿಗಳು ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ.

ಬೇರು ಬರಿಸುವುದು:

ಇಂತಹ ಗೆಲ್ಲುಗಳನ್ನು ಬೇರು ಬರಿಸಬೇಕು
ಇಂತಹ ಗೆಲ್ಲುಗಳನ್ನು ಬೇರು ಬರಿಸಬೇಕು
 • ಹಬ್ಬು ಬಳ್ಳಿಯನ್ನು  ನೆಡುವಾಗ ಅದರಲ್ಲಿ ಆಗಲೇ ಮೂಡಿದ ಬೇರುಗಳು ಇರುತ್ತವೆ.
 • ಆದರೆ  ಕವಲು ರೆಂಬೆಯಲ್ಲಿ  ಬೇರು ಇರುವುದಿಲ್ಲ.
 • ಹಾಗೆಂದು ಅದರ ಗಂಟಿನಲ್ಲಿ  ಬೇರು  ಬರುವ ಆಕ್ಸಿನ್  ಸ್ವಲ್ಪ ಮಟ್ಟಿಗೆ  ಇರುತ್ತದೆ.
 • ಕವಲು ಗೆಲ್ಲನ್ನು ಗಂಟು ಸಮೇತ ತೆಗೆಯಬೇಕು.
 • ಆ ಗಂಟನ್ನು ಬೇರು ಬರಿಸುವ ಕೆಲವು ಹಾರ್ಮೋನು ( ಕೆರಡಿಕ್ಸ್ IBA) ಮುಂತಾದ ಪ್ರಚೋದಕದಲ್ಲಿ ಅದ್ದಿ, ಬೇರು ಬರಲು ಸೂಕ್ತವಾದ ಶುದ್ಧ ಮಾಧ್ಯಮದಲ್ಲಿ  ಇಟ್ಟು ಅಧಿಕ ನೆರಳು ಮಾಡಿದರೆ  ಅದರಲ್ಲಿ ಸುಮಾರು 1 ತಿಂಗಳು ಕಳೆದಾಗ ಬೇರು ಬರುತ್ತದೆ.
 • ಕವಲು ರೆಂಬೆಯ ಎಲ್ಲಾ ಎಲೆಗಳನ್ನು ತೊಟ್ಟು  ಮಾತ್ರ ಸ್ವಲ್ಪ ಉಳಿಸಿ ತೆಗೆಯಬೇಕು. ಸಸಿ ಮಾಡುವಾಗ  ಪ್ಲಾಸ್ಟಿಕ್ ಮುಚ್ಚಬೇಕು.
 • ಆಗ ಬಾಡುವುದಿಲ್ಲ.
 • ಬೇರು ಬರಿಸುವ ಮಾಧ್ಯಮ ಮಾತ್ರ ಪರಿಶುದ್ಧವಾಗಿರಬೇಕು.
ನೆಲದಲ್ಲಿ ನೆಡುವಾಗ ಮಣ್ಣು ತಾಗದಂತೆ ನೆಲಕ್ಕೆ ಪ್ಲಾಸ್ಟಿಕ್ ಹೊದಿಕೆ ಬೇಕು.
ನೆಲದಲ್ಲಿ ನೆಡುವಾಗ ಮಣ್ಣು ತಾಗದಂತೆ ನೆಲಕ್ಕೆ ಪ್ಲಾಸ್ಟಿಕ್ ಹೊದಿಕೆ ಬೇಕು.

ಹಾರ್ಮೋನು ರಹಿತವಾಗಿಯೂ ಬೇರು ಬರಿಸಲಿಕ್ಕೆ ಆಗುತ್ತದೆ. ಕೆಲವರು ಮರದ ಬುಡದಲ್ಲೇ ನೆಟ್ಟು ಬೇರು ಬರಿಸಿದವರೂ ಇದ್ದಾರೆ. ಹ್ಯೂಮಿಕ್ ಅಸಿಡ್ ಬೇರು ಬರಲು ಪ್ರಚೋದನೆ ನೀಡುತ್ತದೆ. ಇದನ್ನು ಮಾಧ್ಯಮಕ್ಕೆ ಸೇರಿಸಬೇಕು.

 • ಸ್ಟೆರಿಲೈಸ್ ಮಾಡಿದ ತೆಂಗಿನ ನಾರಿನ ಹುಡಿಯಲ್ಲಿ ಬೇರು ಬರುತ್ತದೆ.
 • ಕಾಡಿನ ಮರದಲ್ಲಿ ನೇತಾಡುವ ಮೋಸ್ ( ಹಾವಸೆ)ಯಲ್ಲೂ ಬೇರು ಬರುತ್ತದೆ.
 • ಭತ್ತದ ಸುಟ್ಟ ಕರಿಯಲ್ಲೂ ಬೇರು ಬರುತ್ತದೆ.
 • ಬೇರು ಬರುವ ತನಕವೂ ಸ್ವಲ್ಪವೂ ರೆಂಬೆ ಬಾಡಬಾರದು.

ಬೇರು ಬಂದ ಗೆಲ್ಲು ಮೊದಲು ಹೊಸ ಚಿಗುರನ್ನು  ಬಿಡುತ್ತದೆ.ಕ್ರಮೇಣ ಎಲೆ ಬಿಡಿಸಿಕೊಂಡು ಹೆಚ್ಚು ಹೆಚ್ಚು ಎಲೆ  ಬರುತ್ತದೆ. ಆಗ ಹೆಚ್ಚುವರಿ ಫಲವತ್ತಾದ ಮಾದ್ಯಮಕ್ಕೆ ಅದನ್ನು ವರ್ಗಾಯಿಸಿದರೆ ಅದರಲ್ಲಿ ಬೆಳೆಯುತ್ತದೆ.

ಮೆಣಸಿನ ಇಳುವರಿ

ಎಲ್ಲಿ ನೆಡಬಹುದು:

 • ಕವಲು ರೆಂಬೆಗಳಿಂದ ಮಾಡಿದ ಸಸಿ ಮೇಲೇರಿ ಬೆಳೆಯುವ ಗುಣ ಇಲ್ಲದ ಕಾರಣ ಅದನ್ನು ನೆಲದಲ್ಲಿ ಸಾಲು ಮಾಡಿ ಬೆಳೆಸಬಹುದು.
 • ಕುಂಡಗಳಲ್ಲಿ ಬೆಳೆಸಬಹುದು.
 • ಚಿತ್ರದಲ್ಲಿ ತೋರಿಸಿದಂತೆ ವಯರ್ ಮೆಶ್ ನ ಒಳಗೆ ತೆಂಗಿನ ನಾರಿನ ಹುಡೀ ಹಾಕಿ ಬೆಳೆಸಬಹುದು.
 • ಇದನ್ನು ಹಬ್ಬಿಸಲಿಕ್ಕಾಗಿಯೇ ಕಬ್ಬಿಣದ ಚಪ್ಪರದ ತರಹ ಮಾಡಬಹುದು.
 • ಇದಕ್ಕೆ 10 ವರ್ಷ ಬಾಳ್ವಿಕೆ ಇದೆ.
 • ನೆಲದಲ್ಲಿ ಬೆಳೆಸಿದಾಗ ಬೇಸಿಗೆಯಲ್ಲಿ  ನೆರಳು ಬಲೆ ಹಾಕಬೇಕು.

ಅನುಕೂಲಗಳು:

 • ಕೊಯಿಲು ಸುಲಭ ಸಾಮಾನ್ಯ ಕೆಲಸಗಾರರಿಂದಲೂ ಕೊಯಿಲು ಮಾಡಿಸಬಹುದು.
 • ಮಿಶ್ರ ಬೆಳೆಯಾಗಿ ಬೆಳೆದಾಗ ಆಗುವಂತೆ ಪೋಷಕಾಂಶದ ಪೈಪೋಟಿಯಿಂದ ರೋಗ ಬರುವ ಸಾಧ್ಯತೆ ಇಲ್ಲ.
 • ನೀರಾವರಿ ಮುಂತಾದ ಅನುಕೂಲಗಳ ಫಲವಾಗಿ ವರ್ಷ ಪೂರ್ತಿ ಫಸಲು ಇರುತ್ತದೆ.
 • ಇದನ್ನು ಪಾಲೀ ಹೌಸ್ ಒಳಗೆಯೂ ಬೆಳೆಯಬಹುದು.
 • ತೋಟದ ಮಧ್ಯಂತರದಲ್ಲಿಯೂ ಬೆಳೆಯಬಹುದು.
 • ಒಂದು ಬುಡದಲ್ಲಿ 3-4  ವರ್ಷದ ನಂತರ ವಾರ್ಷಿಕ 2-3 ಕಿಲೋ ಹಸಿ ಮೆಣಸು ಪಡೆಯಬಹುದು.

ವಾಣಿಜ್ಯ ಬೆಳೆಗೆ ಯೋಗ್ಯವಲ್ಲ:

 • ವಾಣಿಜ್ಯ ಬೆಳೆ ಬೆಳೆಸುವಾಗ  ಬಳ್ಳಿಯೊಂದಕ್ಕೆ 2-8 ಕಿಲೋ ತನಕ ಒಣ ಮೆಣಸಿನ ಇಳುವರಿ ಪಡೆಯಲು ಸಾಧ್ಯ.
 • ಇದರಲ್ಲಿ ಹೆಚ್ಚೆಂದರೆ ½ ಕಿಲೋ ಪಡೆಯಬಹುದು.
 • ವಾಣಿಜ್ಯಿಕವಾಗಿ ಬೆಳೆಯಲು ಏರು ಬಳ್ಳಿ (Orthotropic shoots)  ಬಳಕೆ ಒಳ್ಳೆಯದು.
 • ಅದು  ನೆಟ್ಟ ಮರುವರ್ಷವೇ ಇಳುವರಿ ಕೊಡುತ್ತದೆ. ಹೆಚ್ಚು ಇಳುವರಿ ಕೊಡುತ್ತದೆ.
 • ಸಸಿ ಮಾಡುವುದೂ ಸುಲಭ. ಇದು ತಾಜಾ ಮೆಣಸು ಉತ್ಪಾದನೆ ಮಾಡಿ ಬಳಸಬೇಕು ಎಂಬವರಿಗೆ ಮತ್ತು ಹವ್ಯಾಸಿಗಳಿಗೆ ಹೆಚ್ಚು ಸೂಕ್ತ.  
 • ಕೆಲವು ಗಿಡಗಳನ್ನು ನರ್ಸರಿಯಿಂದ ತಂದು ಬೆಳೆಸಿ ಅದರ ಬೆಳವಣಿಗೆ ಮತ್ತು ನಿರ್ವಹಣೆಯ ಅನುಭವ ಪಡೆಯಿರಿ.
 • ಅಡಿಕೆ ತೋಟದ ಒಳಗೆ  ಬೆಳೆದರೆ ಮಳೆಗಾಲದಲ್ಲಿ ರೋಗದ ಸಮಸ್ಯೆ ಇದೆ.
 • ತೆರೆದ ಪ್ರದೇಶದಲ್ಲಿ  ಬೆಳೆಯಬೇಕು. ಬೇಸಿಗೆಯಲ್ಲಿ ನೆರಳು ಬಲೆ ಬೇಸಿಗೆಯಲ್ಲಿ ಬೇಕು.

ಕೆಲವು ಪ್ರದೇಶಗಳಲ್ಲಿ ಮೆಣಸನ್ನು ಮರಗಳಿಗೆ ಹಬ್ಬಿಸಿ ಬೆಳೆ ಪಡೆಯಲಿಕ್ಕೆ ಅಲ್ಲಿನ ವಾತಾವರಣದ ಅನುಕೂಲ ಇರುವುದಿಲ್ಲ. ಅಂತಲ್ಲಿ ಈ ರೀತಿ ಬೆಳೆಸಿ ಅದಕ್ಕೆ ಸಿಂಚನ ( sprinkler) ನೀರಾವರಿ ಮಾಡಿ ಫಸಲು ಪಡೆಯಬಹುದು. ಖರ್ಚು ವೆಚ್ಚಗಳು ಹೆಚ್ಚು ಆಗಲಾರದು. ವರ್ಷ  ಪೂರ್ತಿ ಅಲ್ಪ ಸ್ವಲ್ಪ ಇಳುವರಿ ಪಡೆಯುತ್ತಾ ಇರಬಹುದು. ಇದಕ್ಕೂ ರೋಗ ಬಾಧೆ ಇದೆ.  ಸಂಶೋಧನಾ ಸಂಸ್ಥೆಗಳಲ್ಲಿ ಇದನ್ನು ಪ್ರಾತ್ಯಕ್ಷಿಕೆಯಾಗಿ ಬೆಳೆಸುತ್ತಾರೆ.ಪಾಲಿ ಹೌಸ್ ಅಥವಾ ನೆರಳು ಬಲೆಯ ಕೆಳಗೆ ವ್ಯವಸ್ಥಿತವಾಗಿ ಬೆಳೆದರೆ ಚೆನ್ನಾಗಿ ಬೆಳೆಸಬಹುದು.

Leave a Reply

Your email address will not be published. Required fields are marked *

error: Content is protected !!