ಶುಂಠಿ ಮುಂತಾದ ಗೆಡ್ಡೆ ಗೆಣಸು ಬೆಳೆಗಳನ್ನು ಬೆಳೆಸುವರೇ ಕುಂಭ ಮಾಸ ಅತ್ಯಂತ ಸೂಕ್ತ ಕಾಲ. ಶುಂಠಿಗೆ ಈ ವರ್ಷ ಬೆಲೆ ಕುಸಿತವಾಗಿದೆ ಎಂದು ಬೆಳೆ ಬಿಟ್ಟು ಬಿಡಬೇಡಿ. ಈ ವರ್ಷ ಮತ್ತೆ ಶುಂಠಿಗೆ ಚಾನ್ಸ್ ಬರುವ ಸಾಧ್ಯತೆ ಇದೆ. ಜೊತೆಗೆ ಬಿತ್ತನೆ ಗಡ್ಡೆಯೂ ಕಡಿಮೆ ಬೆಲೆಗೆ ಲಭ್ಯ. ಮಾರ್ಚ್ ನಂತರ ಶುಂಠಿ ನೆಟ್ಟರೆ ಮಳೆ ಬರುವ ಸಮಯಕ್ಕೆ ಗಿಡ ಬೆಳೆದು ರೋಗ ಸಾಧ್ಯತೆ ಕಡಿಮೆ.
ಮಾಗಿ ತಿಂಗಳು ಅಥವಾ ಕುಂಭ ಮಾಸ ಕಳೆದರೆ ಮಳೆಗಾಲ. ಆಷಾಢ ಕಳೆದರೆ ಬೇಸಿಗೆ ಕಾಲ ಎಂಬ ಮಾತಿದೆ.ಇದು ಹಿಂದಿನವರು ಮಾಡಿದ ಗಾದೆ. ಯಾಕೆಂದರೆ ಆಗಿನ ಕಾಲ ಹಾಗಿತ್ತು. ಈಗ ಸ್ವಲ್ಪ ವಾತಾವರಣ ಬದಲಾಗಿದೆ. ಅದರೂ ಅಂಥಹ ವೆತ್ಯಾಸ ಆಗಲಿಲ್ಲ. ಕುಂಭ ಮಾಸದ ತರುವಾಯ (ಕುಂಭ ಸಂಕ್ರಮಣದ ತರುವಾಯ)ಗಡ್ಡೆ ಗೆಣಸುಗಳು ತಮ್ಮ ಸುಪ್ತಾವಸ್ಥೆ ಕಳಚಿ ಹೊಸ ಜೀವ ಕಳೆ ಪಡೆಯುತ್ತವೆ. ಅದಕ್ಕೇ ಈ ಸಮಯದಲ್ಲಿ ಗಡ್ಡೆ ಗೆಣಸು ನಾಟಿ ಮಾಡಬೇಕು ಎನ್ನುವುದು.
- ನಿಮ್ಮ ಮನೆಯಲ್ಲಿ ಕೆಸುವಿನ ಗಡ್ಡೆಯೋ, ಸುವರ್ಣ ಗಡ್ಡೆಯೋ, ಅಥವಾ ಶುಂಠಿ, ಅರಶಿನ ಯಾವುದಾದರೂ ಹಸಿ ಗಡ್ಡೆಗಳಿದ್ದರೆ ಒಮ್ಮೆ ಅದನ್ನು ಈಗ ಪರೀಕ್ಷಿಸಿರಿ.
- ಮೊಳಕೆ ಚಿಗುರು ಹೊರಟಿರುತ್ತದೆ. ಅದು ಹೊರ ವಾತಾವರಣದಲ್ಲಿ ಇರಬೇಕೆಂದೇನೂ ಇಲ್ಲ.
- ಶೆಡ್ ನ ಒಳಗೆ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಕಟ್ಟಿ ಇಟ್ಟಿದ್ದರೂ ಸಹ ಅದು ಪ್ರಕೃತಿ ಸಹಜವಾಗಿ ಮೊಳಕೆ ಹೊರಹಾಕುತ್ತದೆ.
ಈಗ ನೆಟ್ಟರೆ ಪ್ರಯೋಜ ಏನು:
- ಈ ಸಮಯದಲ್ಲಿ ಶುಂಠಿ ಗಡ್ಡೆಯಲ್ಲಿ ಹೊಸ ಚಿಗುರು ಮೊಳಕೆ ಮೂಡುವ ಸಮಯ. ಜೊತೆಗೆ ಬೇರುಗಳೂ ಸಹ ಮೂಡುತ್ತದೆ.
- ಇದು ಅದರ ಶಕ್ತಿ. ಆ ಸುಪ್ತ ಶಕ್ತಿ ಚೆನ್ನಾಗಿರುವ ಸಮಯದಲ್ಲಿ ನಾಟಿ ಮಾಡಿದರೆ ಬೆಳವಣಿಗೆ ಉತ್ತಮ ಅವಕಾಶ ದೊರೆತಂತೆ ಆಗುತ್ತದೆ.
- ಮೊಳಕೆ ಮೂಡುವ ಹಂತದಲ್ಲಿ ಗಡ್ಡೆಯಲ್ಲಿ ಒಂದು ಆಕ್ಸಿನ್ ಕ್ರಿಯಾತ್ಮಕವಾಗಿದ್ದು, ಅದು ಬೆಳವಣಿಗೆಯನ್ನು ಪ್ರಚೋದಿಸುತ್ತದೆ.
- ಶುಂಠಿ ಗಿಡ ಬಹಳ ಸೂಕ್ಷ್ಮ ಸಸ್ಯವಾಗಿದ್ದು, ಇದು ಅಧಿಕ ತೇವಾಂಶವನ್ನು ಸಹಿಸಿಕೊಳ್ಳುವುದಿಲ್ಲ.
- ಸದಾ ಕಾಲ ತೇವಾಂಶ ಬೇಕಾದರೂ ಸ್ವಲ್ಪವೂ ತೇವ ಹೆಚ್ಚಾಗದಂತೆ ನೋಡಿಕೊಳ್ಳಬೇಕು.
- ಒಂದು ವೇಳೆ ಮಳೆಗಾಲ ಪ್ರಾರಂಭವಾಗುವಾಗ ನೆಡುವುದೇ ಆದರೆ ಆ ಸಮಯದಲ್ಲಿ ಎಡೆ ಬಿಡದೆ ಮಳೆ ಸುರಿದರೆ ಮೊಳಕೆ ಕೊಳೆಯುತ್ತದೆ.
- ಗಡ್ಡೆ ಕೊಳೆಯುತ್ತದೆ.ಈಗ ನಾಟಿ ಮಾಡಿದ್ದೇ ಆದರೆ ಅದಕ್ಕೆ ಸುಮಾರು 2 ತಿಂಗಳ ತನಕ ಬೇಸಿಗೆ ಅವಧಿ ಸಿಗುತ್ತದೆ.
- ಈ ಸಮಯದಲ್ಲಿ ತೇವಾಂಶ ಹೆಚ್ಚಳವಾಗುವ ಸಂಭವ ಇರುವುದಿಲ್ಲ.
- ಮೊಳಕೆಗೆ ಗಡ್ಡೆಗೆ ಬಾಹ್ಯಮೂಲದಿಂದ ಯಾವ ಶಿಲೀಂದ್ರ ಬಾಧೆಯೂ ಉಂಟಾಗುವುದಿಲ್ಲ.
- ಮಳೆಗಾಲ ಬರುವಾಗ ಸಸ್ಯವು ಬೆಳೆದು ಸ್ವಲ್ಪ ಪ್ರಮಾಣದಲ್ಲಿ ಬೇರು ಕೊಟ್ಟಿರುತ್ತದೆ.
- ಗಿಡಕ್ಕೆ ಸ್ವಲ್ಪ ಮಟ್ಟಿಗೆ ಗಟ್ಟಿ ತನ ಉಂಟಾಗಿರುತ್ತದೆ. ಈ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ತೇವಾಂಶವನ್ನು ತಡೆದುಕೊಳ್ಳುವ ಶಕ್ತಿಯೂ ಸಸ್ಯಕ್ಕೆ ಇರುತ್ತದೆ.
- ಮಳೆ ಬರುವ ಸಮಯಕ್ಕೆ ಗಿಡ ಬೆಳೆದು ನೆಲಕ್ಕೆ ನೆರಳು ಬೀಳುವ ಕಾರಣ ಕಳೆ ಕಡಿಮೆ.
ಹಾಗೆಂದು ಬೇಸಿಗೆಯಲ್ಲಿ ನಾಟಿ ಮಾಡುವಾಗ ನೀರಾವರಿ ಮಾಡುವಾಗ ಲೆಕ್ಕಕ್ಕಿಂತ ಹೆಚ್ಚು ನೀರು ಉಣಿಸಬಾರದು. ಮಣ್ಣು ನೀರನ್ನು ನಿಧಾನವಾಗಿ ಬಿಟ್ಟುಕೊಡುವಂತಿದ್ದರೆ ಮಾತ್ರ ಗಿಡ ಕೊಳೆಯಲಾರದು. ಗಡ್ಡೆಯನ್ನು ತುಂಬಾ ಆಳದಲ್ಲಿ ನೆಡಬಾರದು.ಮೇಲೆ ನೆಟ್ಟು ಒಣಗದಂತೆ ತೆಳುವಾಗಿ ಮುಚ್ಚಿದರೆ ಗಡ್ಡೆ, ಬೇರು ಕೊಳೆ ಕಡಿಮೆಯಾಗುತ್ತದೆ.
ಹೇಗೆ ನೆಡಬೇಕು:
- ಶುಂಠಿಯನ್ನು ಹೆಚ್ಚಿನವರು ಜೋಡಿ ಏರಿ ಸಾಲುಗಳಲ್ಲಿ ನಾಟಿ ಮಾಡುತ್ತಾರೆ.
- ಇದು ಕೆಟ್ಟದಲ್ಲವಾದರೂ ನೀರು ಹೆಚ್ಚಾದರೆ ಬಸಿಯಲು ಅನನುಕೂಲವಾಗುತ್ತದೆ.
- ಇದರ ಬದಲಿಗೆ ಒಂಟಿ ಸಾಲುಗಳಲ್ಲಿ ನಾಟಿ ಮಾಡುವುದು ಉತ್ತಮ.
- ಏಕ ಸಾಲು ಮಾಡಿ ನಾಟಿ ಮಾಡಿದ್ದೇ ಆದರೆ ನೀರಿನ ಬಸಿಯುವಿಕೆಗೆ ತುಂಬಾ ಅನುಕೂಲವಾಗುತ್ತದೆ.
- ಮಳೆಗಾಲದಲ್ಲಿ ನೀರು ಬಸಿಯುವಿಕೆ ಚೆನ್ನಾಗಿರುತ್ತದೆ. ಕಳೆ ನಿಯಂತ್ರಣಕ್ಕೆ ಪಾಲಿಥೀನ್ ಮಲ್ಚಿಂಗ್ ಸಹ ಹಾಕಬಹುದು.
- ಒಂಟಿ ಸಾಲು ಆದರೆ ಇನ್ ಲೈನ್ ಡ್ರಿಪ್ ಹಾಕಿ ಬೇಕಾದಷ್ಟೇ ನೀರಾವರಿ ಮಾಡಬಹುದು.
- ಕಳೆ ತೆಗೆಯುವ ಖರ್ಚು ಮತ್ತು ನಂತರ ಏರಿ ಮಾಡುವ ಖರ್ಚು ಮಲ್ಚಿಂಗ್ ಶೀಟು ಮತ್ತು ಇನ್ ಲೈನ್ ಡ್ರಿಪ್ ಗೆ ಹೊಂದಾಣಿಕೆಯಾಗುತ್ತದೆ.
- ಮಲ್ಚಿಂಗ್ ಶೀಟು ಹಾಕಿದರೆ ನೀರು ನಿಂತು ಜೌಗು ಆಗುವುದಿಲ್ಲ ಬಿಸಿ ವಾತಾವರಣ ಇದ್ದು, ಮೊಳಕೆ ಬರಲು, ಬೇರು ಬರಲು ಸಹಾಯಾವಾಗುತ್ತದೆ.
ಶುಂಠಿ ನಾಟಿ ಮಾಡಲು ತೀರಾ ಅಂಟು ಮಣ್ಣು ಸೂಕ್ತವಲ್ಲ. ಮರಳು ಮಿಶ್ರಿತ ಸಡಿಲ ಮಣ್ಣು ಉತ್ತಮ. ಇಲ್ಲಿ ಬೆಳೆದ ಶುಂಠಿಗೆ ರೋಗ ಸಾಧ್ಯತೆ ಕಡಿಮೆ. ಸಿಂಪರಣೆ ಇತ್ಯಾದಿ ಉಳಿಯುತ್ತದೆ. ಮಳೆಗಾಲ ಬರುವ ಮುಂಚೆ ಸುಮಾರು ¾ ಅಡಿ ಎತ್ತರ ಮತ್ತು ಎರಡು ಮೊಳಕೆಗಳು ಬಂದರೆ ಬೆಳೆ ಉಳಿಸಿಕೊಳ್ಳುವುದು ಸುಲಭ. ಆದ ಕಾರಣ ನಾಟಿ ಈಗಲೇ ಪ್ರಾರಂಭಿಸುವುದು ಸೂಕ್ತ.