ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯೂ ಮೇಲೆ.

ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯನ್ನೂ ಮೇಲೆತ್ತಬಹುದು!

ಬಹಳ ಸಮಯದ ತನಕ ಅಲ್ಲಾಡದೆ ಅಸ್ಥಿರವಾಗಿದ್ದ ಕೆಂಪಡಿಕೆ ಧಾರಣೆ ಜೂನ್ ಎರಡನೇ ವಾರ ಮತ್ತೆ ಚೇತರಿಕೆ ಕಾಣಲಾರಂಭಿಸಿದೆ. ಪ್ರತೀ ವರ್ಷದ ಮಾರುಕಟ್ಟೆ ಲಯವನ್ನು ಗಮನಿಸಿದರೆ ಸಾಮಾನ್ಯವಾಗಿ ಜೂನ್ ತಿಂಗಳಿಗೆ ಏರಿಕೆ ಪ್ರಾರಂಭವಾಗುತ್ತದೆ. ನಿಧಾನವಾಗಿ ಏರುತ್ತಾ ಆಗಸ್ಟ್ ಸಪ್ಟೆಂಬರ್ ತಿಂಗಳಿಗೆ ಮತ್ತೆ ಹಿಮ್ಮುಖವಾಗುತ್ತದೆ. ಈ ವರ್ಷವೂ ಅದೇ ಆಗಿದೆ. ಕೆಂಪಡಿಕೆ ದರ ಏರಿದ ಪರಿಣಾಮ ಚಾಲಿ ದರ ಚೇತರಿಕೆ ಆಗಲಾರಂಭಿಸಿದೆ. ಕರಿಕೋಕಾ, ಪಟೋರಾ, ಉಳ್ಳಿಗಡ್ಡೆ ಸಹ ಏರಿಕೆ ಕಂಡಿದೆ. ಇಂದು ಖಾಸಗಿ ವ್ಯಾಪಾರಿಗಳು ಹೊಸ ಅಡಿಕೆ ರೂ.405-410 ಕ್ಕೆ ಖರೀದಿ ಮಾಡಲಾರಂಭಿಸಿದ್ದಾರೆ.
ಚಾಲಿ ಅಡಿಕೆಗೆ ಅದರದ್ದೇ ಆದ ಮಾರುಕಟ್ಟೆ ಇದೆ. ಉತ್ತಮ ಗುಣಮಟ್ಟದ ಚಾಲಿ ಕಚ್ಚಾ ಸುಪಾರಿ ರೂಪದಲ್ಲಿ ಬಳಕೆಯಾದರೆ ಕಳಪೆ ಎಲ್ಲವೂ ಗುಟ್ಕಾ ತಯಾರಿಕೆಗೆ ಬಳಕೆಯಾಗುತ್ತದೆ. ಹಳೆಯ ಅಡಿಕೆ ಎಂದರೆ ಅದರ ಗುಣಮಟ್ಟ ಮತ್ತು ರುಚಿ ಭಿನ್ನವಾಗಿರುತ್ತದೆ. ಅದಕ್ಕೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಈ ವರ್ಷ ಮಾತ್ರ ಹಳೆ ಅಡಿಕೆ ಅದರಲ್ಲೂ ಸಿಂಗಲ್ ಚೋಳ್ ಬಹಳ ರಗಳೆ ಸೃಷ್ಟಿಸಿದೆ. ಖಾಸಗಿಯವರು ನಾವು ಹಳೆಯದನ್ನು ಖರೀದಿಸುವುದಿಲ್ಲ ಎನ್ನುವ ಸ್ಥಿತಿ ಉಂಟಾಗಿರುವುದು ಇದೇ ಮೊದಲೇನೋ ? ಯಾಕೆ ಹೀಗಾಯಿತು ಎಂಬುದಕ್ಕೆ ನಿಖರವಾದ ಉತ್ತರ ಇಲ್ಲ. ಕೆಲವು ಮೂಲಗಳ ಪ್ರಕಾರ ಯಾರದ್ದೋ ಒಬ್ಬರ ದೊಡ್ಡ ಪ್ರಮಾಣದ ದಾಸ್ತಾನು ಹಾಳಾಗಿದೆ. ಅದನ್ನು ವಿಲೇವಾರಿ ಮಾಡುವರೇ ಬಹಳ ಪ್ರಯಾಸಪಡಬೇಕಾಗಿ ಬಂದ ಪರಿಣಾಮ ಇಡೀ ಅಡಿಕೆ ಮಾರುಕಟ್ಟೆ ಮಲಗಿದಂತಾಗಿದೆ. ಖರೀದಿ ಬೆಲೆಗಿಂತ ತುಂಬಾ ಕಡಿಮೆ ಬೆಲೆಗೆ ಅದನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಇದೆ. ಅದರ ನಷ್ಟ ಹೊಂದಾಣಿಕೆಗೋಸ್ಕರ ದರ ಏರಿಸಲಿಲ್ಲ ಎನ್ನುತ್ತಾರೆ. ಕಳೆದ ವರ್ಷದ ಅಡಿಕೆ ಗುಣಮಟ್ಟ ಉತ್ತಮವಾಗಿಲ್ಲ ಎಂಬ ಕಾರಣಕ್ಕಾಗಿ ಬೇಡಿಕೆಯೇ ಇಲ್ಲದಾಗಿ ಖಾಸಗಿ ವ್ಯಾಪಾರಿಗಳೂ ಸಹ ಬಹಳ ತೊಂದರೆ ಅನುಭವಿಸಿದ್ದರು. ಹೊಸ ಅಡಿಕೆ ಮಾರಾಟಕ್ಕೆ ಬರಲು ಪ್ರಾರಂಭವಾದ ನಂತರ ಮಾರುಕಟ್ಟೆ ಸ್ವಲ್ಪ ಚೇತರಿಕೆ ಆಯಿತು. ಹಳೆಯದು ಮಾತ್ರ ಕುಂಟುತ್ತಲೇ ಇದೆ. ಗರಿಷ್ಟ ದರದಲ್ಲಿ ಖರೀದಿಯೇ ನಡೆಯುತ್ತಿಲ್ಲ. ಆದರೂ ಕೆಲವು ಉದ್ದೇಶಗಳಿಗಾಗಿ ಗರಿಷ್ಟ ದರ ತೋರಿಸಲಾಗುತ್ತದೆ. ಈಗ ಮತ್ತೆ ಚಾಲಿ ಮುನ್ನೆಲೆಗೆ ಬರುವ ಸೂಚನೆ ಇದೆ. ಅದರ ಮುನ್ಸೂಚನೆ ಕೆಂಪಡಿಕೆ ಮಾರುಕಟ್ಟೆಯ ಮೂಲಕ ಕಾಣಲಾರಂಭಿಸಿದೆ. ಕಳೆದ ಒಂದು ವಾರದಿಂದ ಕೆಂಪಡಿಕೆ ರಾಶಿ ದರ ಏರಿಕೆ ಪ್ರಾರಂಭವಾಗಿದೆ. ಖಾಸಗಿಯವರು ಚಿತ್ರದುರ್ಗ ಸುತ್ತಮುತ್ತ 55,000-56,000 ತನಕವೂ ಖರೀದಿ ನಡೆಸುತ್ತಿದ್ದಾರಂತೆ. ಜುಲೈ ಕೊನೇ ತನಕವೂ ಸ್ವಲ್ಪ ಸ್ವಲ್ಪ ಏರಿಕೆ ಆಗಬಹುದು ಎಂಬ ಸುದ್ದಿ ಇದೆ. ಕೆಂಪಡಿಕೆ ಏರಿಕೆ ಆದಾಗ ಅದಕ್ಕನುಗುಣವಾಗಿ ಚಾಲಿಗೂ ಏರಿಕೆ ಆಗಲೇ ಬೇಕು. ಇದೇ ಕಾರಣಕ್ಕೆ ಈಗ ಸಿಪ್ಪೆ ಗೋಟಿನ ಬೆಲೆ (22,000 ತನಕ)ಮೇಲೇ ಏರಿದೆ. ಹೊಸ ಅಡಿಕೆ ಗುಣಮಟ್ಟ ಉತ್ತಮವಾಗಿರುವ ಕಾರಣ ಅದಕ್ಕೆ ಬೇಡಿಕೆ ಹೆಚ್ಚು ಇದೆ.


ಯಾಕೆ ಏರಿಕೆ ಆಗಿದೆ?

 • ಅಡಿಕೆ, ಹಾಗೆಯೇ ಇನ್ನಿತರ ಹೆಚ್ಚಿನೆಲ್ಲಾ ಕೃಷಿ ಉತ್ಪನ್ನಗಳ ಮಾರುಕಟ್ಟೆ ಕೆಲವು ಸಮಯದಲ್ಲಿ ಏರಿಕೆ ಆಗುವುದು, ಕೆಲವು ಸಮಯ ಇಳಿಕೆಯಾಗುವುದು, ಕೆಲವು ಸಮಯ ಸ್ಥಿರವಾಗಿ ಮುಂದುವರಿಯುವುದು ಇದ್ದೇ ಇರುತ್ತದೆ.
 • ವರ್ಷದಲ್ಲಿ ಎರಡು ಮೂರು ಸಾರಿ 1-2 ತಿಂಗಳ ಕಾಲ ಸ್ವಲ್ಪ ಸ್ವಲ್ಪ ಏರುತ್ತಾ ಒಂದು ಹಂತಕ್ಕೆ ಒಯ್ದು ಮತ್ತೆ ಇಳಿಕೆ ಪ್ರಾರಂಭವಾಗುತ್ತದೆ.
 • ಹಾಗೆಯೇ ಈಗಲೂ ಆಗಿದೆ.ಸುಮಾರು 1 ತಿಂಗಳಿಂದ ಮಾರುಕಟ್ಟೆ ಸ್ವಲ್ಪ ಹಿಂದೆ ಇತ್ತು.
 • ಈಗ ಮತ್ತೆ ಚೇತರಿಕೆ ಪ್ರಾರಂಭವಾಗಿದೆ. ಎಲ್ಲಿಯ ತನಕ ಏರಿಕೆ ಆಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ.
 • ಚಾಲಿ ಮಾರುಕಟ್ಟೆಯಲ್ಲಿ ಹೊಸ ಚಾಲಿಗೆ 405-410-415 ತನಕ ಖರೀದಿ ನಡೆಯುತ್ತಿದೆ.
 • ಹಳೆ ಚಾಲಿ ಮಾತ್ರ ಮಿಸುಕಾಡಿಲ್ಲ. ದಬ್ಬಲ್ ಚೋಲ್ + ಸಿಂಗಲ್ ಚೋಲ್ ದರ ಹೊಂದಾಣಿಕೆ ಆಗುವ ಸಂಭವ ಇದೆ.
 • ಹಳೆ ಚಾಲಿ ದರ ಹಿಂದಕ್ಕೆ ತಂದು, ಹೊಸತಕ್ಕೂ ಹಳೆಯದಕ್ಕೂ ಅಂತರ ಕಡಿಮೆ ಮಾಡುವ ಸೂಚನೆ ಕಾಣಿಸುತ್ತಿದೆ
 • ಕೆಂಪಡಿಕೆಯ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ 53,000 ತನಕ ಏರಿಕೆಯಾಗಿದೆ.
 • ಹೊಸನನಗರ ಮಾರುಕಟ್ಟೆಯಲ್ಲಿ ಶುಕ್ರವಾರ ಗರಿಷ್ಟ 53,800 ತನಕ ಖರೀದಿ ನಡೆದಿದೆ.
 • ಸರಾಸರಿ 52,800 ರಲ್ಲಿ ಖರೀದಿ ನಡೆದಿದೆ.
 • ಚೆನ್ನಗಿರಿಯಲ್ಲಿ ಗರಿಷ್ಟ 54,100 ಸರಾಸರಿ 53,800 ಬೆಲೆಯಲ್ಲಿ ಬಿಡ್ಡಿಂಗ್ ನಡೆದಿದೆ.
 • ಶಿರಸಿ ಸಿದ್ದಾಪುರಗಳಲ್ಲಿ ಸರಾಸರಿ ಮತ್ತು ಗರಿಷ್ಟ ಬೆಲೆ ಸಮನಾಗಿ ಇತ್ತು. ಸಾಗರದಲ್ಲಿ ಗರಿಷ್ಟ ಬೆಲೆ 52300 ಸರಾಸರಿ 52800 ಇತ್ತು.
 • ಇಲ್ಲೆಲ್ಲಾ ಗಮನಿಸಿದಾಗ ಸರಾಸರಿ ಬೆಲೆಗೂ ಗರಿಷ್ಟ ಬೆಲೆಗೂ ಅಂತರ ಕಡಿಮೆಯಾದ ಕಾರಣ ಬೇಡಿಕೆ ಚೆನ್ನಾಗಿದೆ ಎಂದರ್ಥ.
 • ಬೇಡಿಕೆ ಇದ್ದಾಗ ಬಿಡ್ ಮಾಡುವವರ ಸಂಖ್ಯೆಯೂ ಹೆಚ್ಚು ಇರುತ್ತದೆ. ಈಗ ಆ ಸ್ಥಿತಿ ಇದೆ.
 • ಕೆಲವು ವದಂತಿಗಳ ಪ್ರಕಾರ ಈ ಬಾರಿ ರಾಶಿ ಬೆಲೆಯನ್ನು 55,000 ತನಕ ಏರಿಸುವ ಸಾಧ್ಯತೆ ಇದೆ.
 • ಜುಲೈ ಕೊನೇ ವಾರದಲ್ಲಿ ದಾವಣಗೆರೆ , ಚಿತ್ರದುರ್ಗ ಕಡೆ ಕೊಯಿಲು ಪ್ರಾರಂಭವಾಗುತ್ತದೆ.
 • ಆ ತನಕ ದರ ಏರಿಕೆಯಲ್ಲೇ ಮುಂದುವರಿಯಲಿದೆ ಎನ್ನುತ್ತಾರೆ.
 • ಮಳೆಗಾಲದಲ್ಲಿ ಗುಟ್ಕಾ ಉತ್ಪಾದನೆ ಸ್ವಲ್ಪ ಕಡಿಮೆಯಾದರೂ ಸಹ ದಾಸ್ತಾನಿಗೋಸ್ಕರ ಖರೀದಿ ನಡೆಯುತ್ತಿದೆ.


ಚಾಲಿ – ಎಲ್ಲಿ ಯಾವ ದರ ಇತ್ತು?

 • ಮಂಗಳೂರು: ಹೊಸತು: 39000, 41000,
 • ಹಳತು: 40400, 46500, 42000
 • ಪುತ್ತೂರು: ಹೊಸತು:33500, 41500, 37000
 • ಹಳೆಯದು:40000-46000- 42500
 • ಕಾರ್ಕಳ: ಹೊಸತು: 30000, 41500, 35000
 • ಹಳತು: 40000, 51500, 46000
 • ಬಂಟ್ವಾಳ: ಹಳೆಯದು: , 46000, 50500, 49000
 • ಹೊಸತು: 27500, 41500, 39000
 • ಕುಂದಾಪುರ: ಹಳತು: 43000, 46000, 45000
 • ಹೊಸತು: 36000, 40000, 38000
 • ಬೆಳ್ತಂಗಡಿ: ಹೊಸತು: 28800, 40000, 35000
 • ಹಳತು: 40400, 46500, 42000
 • ಶಿರಸಿ: 35019, 40158, 38564(ಹೊಸತು)
 • ಸಿದ್ದಾಪುರ: 36499, 39399, 38899(ಹೊಸತು)
 • ಸಾಗರ: 34270, 39601, 38699(ಹೊಸತು)
 • ಕುಮಟಾ: 35900, 39769, 38549 (ಹೊಸತು)
 • ಸಿಪ್ಪೆಗೋಟು: 12345, 22599, 21789
ಸಿಂಗಲ್ ಚೋಳ್ ಬಹಳ ರಗಳೆ ಸೃಷ್ಟಿಸಿದೆ


ಕೆಂಪಡಿಕೆ ರಾಶಿ ದರ:

 • ಚೆನ್ನಗಿರಿ: 52699, 54199, 53037
 • ಶಿವಮೊಗ್ಗ: 36066, 53999, 52811
 • ಸಾಗರ: 36099, 52319, 51699
 • ಹೊಸನಗರ: 48199, 53899, 52839
 • ಸಿದ್ದಾಪುರ: 45099, 50509, 49989
 • ತುಮಕೂರು: 52100, 53100, 52450
 • ದಾವಣಗೆರೆ: 40569, 52869, 52202
 • ಕೊಪ್ಪ: 36699, 50699, 494999
 • ತೀರ್ಥಹಳ್ಳಿ: 40049, 53899, 53099
 • ಸೊರಬ: 48709, 51099, 48744
 • ಯಲ್ಲಾಪುರ: 43986, 54619, 51869
 • ಬದ್ರಾವತಿ: 45199, 52629, 51663
ಕೆಂಪಡಿಕೆ ವ್ಯವಹಾರ ಬಹಳ ಚುರುಕಾಗಿದೆ
ಕೆಂಪಡಿಕೆ ವ್ಯವಹಾರ ಬಹಳ ಚುರುಕಾಗಿದೆ


ಎಷ್ಟು ಸಮಯದ ತನಕ ಏರಿಕೆ?

 • ಬೆಲೆ ಏರಿಕೆ ಎಂಬುದು ರೈತರ ಅನುಕೂಲಕ್ಕೆ ಅಲ್ಲ. ರೈತರ ಬಳಿ ಅಡಿಕೆ ಅಥವಾ ಇನ್ಯಾವುದೇ ಉತ್ಪನ್ನ ಇದ್ದಾಗ ಬೆಲೆ ಏರಿಕೆ ಆಗುವುದು ಕಡಿಮೆ.
 • ವ್ಯಾಪಾರಿಗಳ ಕೈಗೆ ಹೆಚ್ಚಿನ ಮಾಲು ಬಂದ ನಂತರ ಬೆಲೆ ಏರಿಕೆ ಪ್ರಾರಂಭವಾಗುತ್ತದೆ.
 • ಬೆಲೆ ಏರಿಕೆ ಆಗುವಾಗ ರೈತರು ಕಾದು ನೊಡುವ ತಂತ್ರ ಅನುಸರಿಸುತ್ತಾರೆ.
 • ಹಾಗಾಗಿ ಅವರ ಸ್ಟಾಕು ಮಾಲನ್ನು ಮಾರಾಟ ಮಾಡಿ, ಹೊಸ ಬಂಡವಾಳದೊಂದಿಗೆ ಮತ್ತೆ ದರ ಇಳಿಸಿ ವ್ಯವಹಾರ ಮಾಡಲಾಗುತ್ತದೆ.
 • ಇದು ವ್ಯಾಪಾರಿ ಧರ್ಮ. ಈಗ ಏರಿದ ಧಾರಣೆ ಇನ್ನು ಒಂದು ತಿಂಗಳು ತನಕ ಹೀಗೆ ಮುಂದುವರಿಯಬಹುದು.
 • ಮತ್ತೆ ಪುನಹ ಇಳಿಕೆ ಪ್ರಾರಂಭವಾಗುತ್ತದೆ. ಹಾಗೆಯೇ ಇಳಿಕೆಯಲ್ಲಿ ಸ್ವಲ್ಪ ಸಮಯ ವ್ಯವಹಾರ ನಡೆದು ಮತ್ತೆ ಏರಿಕೆ ಪ್ರಾರಂಭವಾಗುತ್ತದೆ.
 • ಒಂದು ತಿಂಗಳ ಅವಧಿಯಲ್ಲಿ ಸ್ವಲ್ಪ ಸ್ವಲ್ಪ ಮಾರಾಟ ಮಾಡಿ, ಅಧಿಕ ಬೆಲೆ ಪಡೆಯುವುದು ರೈತನ ಜಾಣ್ಮೆ.

ಕರಿಮೆಣಸು ಚೇತರಿಕೆ ಇಲ್ಲ:

 • ಕರಿಮೆಣಸು ಧಾರಣೆ ಈ ಸಮಯಕ್ಕೆ ಏರಿಕೆ ಆಗಬೇಕಿತ್ತು. ಆದರೆ ಬೇಡಿಕೆಯ ಕೊರತೆಯಿಂದ ಬೆಲೆ ಏರಿಕೆ ಆಗಿಲ್ಲ.
 • ಕೆಲವು ಸಿದ್ದ ಉತ್ಪನ್ನ ತಯಾರಕರು ದ್ವಿತೀಯ ದರ್ಜೆಯ ಮೆಣಸನ್ನೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ.
 • ಹಾಗಾಗಿ ಮೆಣಸಿನ ಧಾರಣೆ ಏರಿಕೆ ಆಗಿಲ್ಲ. ಕರಾವಳಿಯಲ್ಲಿ ಅತ್ಯಂತ ಕಡಿಮೆ ದರಕ್ಕೆ (ಕ್ವಿಂಟಾಲಿಗೆ 46500) ಖರೀದಿ ನಡೆಯುತ್ತಿದೆ.
 • ಸಕಲೇಶಪುರ, ಮೂಡಿಗೆರೆ, ಚಿಕ್ಕಮಗಳೂರು, ಮಡಿಕೇರಿ, ಶಿರಸಿ, ಸಾಗರಗಳಲ್ಲಿ 48000-48500 ತನಕ ಖರೀದಿ ನಡೆಯುತ್ತಿದೆ.
 • ರಪ್ತು ಬೇಡಿಕೆ ಇಲ್ಲ. ಅದು ಬಂದರೆ ಮಾತ್ರ ದರ ಏರಿಕೆ ಆಗಬಹುದು.
 • ಶ್ರೀಲಂಕಾ, ಮಲೇಶಿಯಾ, ಇಂಡೋನೇಶಿಯಾ ದೇಶಗಳಲ್ಲಿ ಅತೀ ಕಡಿಮೆ ಬೆಲೆಗೆ ಮೆಣಸು ಲಭ್ಯವಿದ್ದು, ಅರಬ್ ರಾಷ್ಟ್ರಗಳು ಇಲ್ಲಿನ ಮೆಣಸನ್ನು ಖರೀದಿಸುತ್ತಿವೆ.
 • ಮುಂದಿನ ಜುಲೈ – ಆಗಸ್ಟ್ ತಿಂಗಳಲ್ಲಿ 10-15 ರೂ. ತನಕ ಏರಿಕೆ ಆಗಬಹುದು ಎಂಬ ಸೂಚನೆ ಇದೆ. ಆ ನಂತರ ದರ ಎರಿಕೆ ಸಾಧ್ಯತೆ ಕಡಿಮೆ.

ಶುಂಠಿ ಧಾರಣೆ:

 • ಶುಂಠಿ ಧಾರಣೆ ಈ ವರ್ಷ ಕಲ್ಪನೆ ಮಾಡದಷ್ಟು ಏರಿಕೆ ಆಗಿದೆ.
 • ಒಂದೆಡೆ ಬಿತ್ತನೆ ಶುಂಠಿಗೆ ಬೇಡಿಕೆ, ಮತ್ತೊಂದೆಡೆ ಚಿಲ್ಲರೆ ಮಾರಾಟಕ್ಕೆ ಬೇಕಾಗಿರುವ ಕಾರಣ ಬೆಲೆ ಏರಿದೆ.
 • ರೈತರ ಬಳಿ ಶುಂಠಿ ಬಹುತೇಕ ಮುಗಿದ ನಂತರ ದರ ಎರಲಾರಂಭಿಸಿದೆ.
 • ಉತ್ತರ ಭಾರತದಿಂದ ಹಸಿ ಶುಂಠಿ ಹಾಗೆಯೇ ಒಣ ಶುಂಠಿ ಎರಡಕ್ಕೂ ಸಾಕಷ್ಟು ಬೇಡಿಕೆ ಇದೆ.
 • ಶಿವಮೊಗ್ಗದಲ್ಲಿ ಹಸಿ ಶುಂಠಿಗೆ 10000-12500-15000 ತನಕ ಬೆಲೆ ಇದೆ.
 • ಬೇಲೂರು. ಹಾಸನ, ಚನ್ನರಾಯಪಟ್ನ ಇಲ್ಲೆಲ್ಲಾ 8000-11000-13000 ತನಕ ಇದೆ.
 • ಚಿಲ್ಲರೆ ವ್ಯಾಪಾರಿಗಳು 20000 ತನಕವೂ ಮಾರಾಟ ಮಾಡುತ್ತಿದ್ದಾರೆ.
 • ಮುಂದೆ ಆಗಸ್ಟ್ ತನಕ ಈ ದರ ನಿಲ್ಲಬಹುದುದು. ಈ ವರ್ಷ ಶುಂಠಿ ಬಿತ್ತನೆ ಮಾಮೂಲಿನ ಪ್ರಕಾರವೇ ನಡೆದಿದೆ.


ಕೊಬ್ಬರಿ ಧಾರಣೆ:

 • ಕಳೆದ ತಿಂಗಳಿನಿಂದ ಕೊಬ್ಬರಿ ಧಾರಣೆ ಕುಸಿತ ಕಾಣುತ್ತಿದ್ದು, ಎಲ್ಲಿ ಕೊನೆ ಎಂದೇ ತಿಳಿಯದಾಗಿದೆ.
 • ದಿನದಿಂದ ದಿನಕ್ಕೆ 100-150 ರೂ. ಬೆಲೆ ಕಡಿಮೆಯಾಗುತ್ತಿದೆ.
 • ತೆಂಗಿನ ಕಾಯಿಯ ಉತ್ಪಾದನೆ ಹೆಚ್ಚಾಗಿದೆ. ಬಳಕೆ ಕಡಿಮೆಯಾಗಿದೆ.
 • ತೆಂಗಿನೆಣ್ಣೆ ದರ ತುಂಬಾ ಕಡಿಮೆ ಆದ ಕಾರಣ ಕೊಬ್ಬರಿ ದರ ಇಳಿಕೆಯಾಗಿದೆ.
 • ಉತ್ತರ ಭಾರತದಲ್ಲಿ ಖಾದ್ಯ ಕೊಬರಿಗೆ ಬೆಡಿಕೆ ಕಡಿಮೆಯಾಗಿದೆ. ಎಳನೀರಿಗೆ ಬೇಡಿಕೆ ಚೆನ್ನಾಗಿದೆ.
 • ಆದರೆ ಎಳನೀರು ಕೊಯಿಲು, ಮಾರಾಟ ಖರ್ಚಿನ ಬಾಬ್ತು ಆದ ಕಾರಣ ಜನ ಕಾಯಿಗೆ ಬಿಡುತ್ತಿದ್ದಾರೆ.
 • ಕಾಯಿ ಮತ್ತು ಎಳನೀರು 40:60 ಪ್ರಮಾಣಕ್ಕೆ ಬಂದರೆ ತೆಂಗಿನ ಬೆಳೆ ಲಾಭದಾಯಕವಾಗಬಹುದು.
 • ಒಂದೆಡೆ ತೆಂಗಿನ ಎಣ್ಣೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ.
 • ಆದರೆ ಮಿಲ್ ನಲ್ಲಿ ತೆಗೆದದ್ದು ಅಲ್ಲ. ನಾವು ಗಾಣದಿಂದ ತೆಗೆದದ್ದು ಉತ್ತಮ ಎಂದು ಪ್ರಚಾರ ಮಾಡಿ ಒಟ್ಟಾರೆ ಮಾರುಕಟ್ಟೆಯಲ್ಲಿ ಹಾಳು ಮಾಡಲಾಗುತ್ತಿದೆ.


ಕಾಫೀ ಧಾರಣೆ:

 • ಕಾಫೀ ಧಾರಣೆ ಸ್ಥಿರವಾಗಿದೆ.
 • ಅರೇಬಿಕಾ ಪಾರ್ಚ್ ಮೆಂಟ್ 14800-15200
 • ಅರೇಬಿಕಾ ಚೆರಿ: 7500-8250
 • ರೋಬಸ್ಟಾ ಪಾರ್ಚ್ ಮೆಂಟ್:10700 10900
 • ರೋಬಸ್ಟಾ ಚೆರಿ:6000-6300


ರಬ್ಬರ್ ಧಾರಣೆ:

 • ರಬ್ಬರ್ ತುಸು ಚೇತರಿಕೆ. ಅದರೆ ಟ್ಯಾಪಿಂಗ್ ಗೆ ಬಹಳಷ್ಟು ಜನ ವಿಧಾಯ ಹೇಳಿದ್ದಾರೆ.
 • ಗ್ರೇಡ್: 165.00
 • RSS 4 : 150.00
 • RSS 5:145.00
 • RSS 3 150.50
 • Lot: 126.00
 • Scrap1:82.00
 • Scrap 2:74.00


ಬೆಳೆಗಾರರು ಸ್ವಲ್ಪ ಸ್ವಲ್ಪ ಮಾರಾಟ ಮಾಡಿ ನಗದೀಕರಣ ಮಾಡಿಕೊಳ್ಳುವುದು ಉತ್ತಮ. ಬೆಲೆ ನಮ್ಮ ನಿರೀಕ್ಷೆಯಂತೆ ಯಾವಾಗಲೂ ಇರುವುದಿಲ್ಲ. ಏರಿಕೆ ಸಮಯದಲ್ಲಿ ಸ್ವಲ್ಪ ಮಾರಾಟ ಮಾಡಿ ಮುಂದಿನ ಏರಿಕೆ ಸಮಯದಲ್ಲಿ ಮಾರಾಟ ಮಾಡಲು ಸ್ವಲ್ಪ ಉಳಿಸಿಕೊಳ್ಳುವುದು ಮಾತ್ರ ಬೆಳೆಗಾರರು ಉತ್ತಮ ಬೆಲೆ ಪಡೆಯುವ ವಿಧಾನ.

One thought on “ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯೂ ಮೇಲೆ.

 1. ಅಡಿಕೆ ಮತ್ತೆ ಹೊಸ ಅಡಿಕೆ ಬರೋವರೆಗೂ ದರ ಏರುತ್ತಲೆ ಇರುತ್ತೆ ಆದ್ರೆ ಸ್ವಲ್ಪ ಸ್ವಲ್ಪ ಯಾಕೆಂದರೆ ಪ್ರತಿಯೊಂದು ವಸ್ತುವಿನ ಬೆಲೆ ಹೆಚ್ಚಳ ಆಗಿರೋದ್ರಿಂದ ಅದೂ ಇದರ ಮೇಲೆ ಪರಿಣಾಮ ಬೀರುತ್ತೆ ಹಾಗಾಗಿ ಸ್ಥಿರತೆ ಕಾಯ್ದುಕೊಳ್ಳಬಹುದು

Leave a Reply

Your email address will not be published. Required fields are marked *

error: Content is protected !!