ಇಂತಹ ಬಳ್ಳಿ ನೆಟ್ಟರೆ 2 ವರ್ಷಕ್ಕೇ ಕರಿಮೆಣಸು ಇಳುವರಿ.

ಇಂತಹ ಬಳ್ಳಿ ಬೆಟ್ಟರೆ 2 ವರ್ಷಕ್ಕೆ ಇಳುವರಿ

ಕರಿಮೆಣಸು ಬೆಳೆಸುವವರು ನೆಡಲು ಉಪಯೋಗಿಸುವ ಬಳ್ಳಿಯನ್ನು ಅವಲಂಭಿಸಿ ಬೇಗ ಇಳುವರಿ ಪಡೆಯಲು ಸಾಧ್ಯವಿದೆ. ಇದು ಹೇಗೆ ಎಂಬುದರ ಪೂರ್ಣ ಪರಿಚಯ  ಇಲ್ಲಿದೆ.

ಕರಿಮೆಣಸು ನಾಟಿಮಾಡುವವರು  ಕೆಲವರು ನೇರವಾಗಿ ಬಳ್ಳಿ ತುಂಡುಗಳನ್ನು ನಾಟಿ ಮಾಡುತ್ತಾರೆ. ಕೆಲವರು ಬಳ್ಳಿಯನ್ನು ಪ್ಲಾಸ್ಟಿಕ್ ಕೊಟ್ಟೆಗೆ ಹಾಕಿ ಸಸಿ ಮಾಡಿ ನಾಟಿ ಮಾಡುತ್ತಾರೆ. ಇವೆಲ್ಲಾ ವಿಧಾನಗಳಲ್ಲಿ ಮೆಣಸಿನ ಬಳ್ಳಿ ಇಳುವರಿ ಪ್ರಾರಂಭವಾಗಲು 3 ವರ್ಷ ಬೇಕಾದರೆ ಈ ವಿಧಾನದಲ್ಲಿ ಮಾತ್ರ 1.5 ವರ್ಷಕ್ಕೇ ಇಳುವರಿ ಪ್ರಾರಂಭವಾಗುತ್ತದೆ. ಬುಡದಿಂದಲೇ ಇಳುವರಿ ಪ್ರಾರಂಭವಾಗಿ  ಉತ್ತಮ ಅಡ್ದ ಚಿಗುರುಗಳು ಬೆಳೆದು ಅತ್ಯಧಿಕ ಇಳುವರಿ ಬರುತ್ತದೆ.

  • ಕರಿಮೆಣಸಿನಲ್ಲಿ ಮೂರು ನಮೂನೆಯ ಬಳ್ಳಿಗಳು ಇರುತ್ತವೆ.
  • ನೆಲದಲ್ಲಿ ಹರಿಯುವ ಬಳ್ಳಿಗಳಿಗೆ ಹಬ್ಬು ಬಳ್ಳಿ ( Creapers) ಎಂದು ಕರೆಯುತ್ತಾರೆ.
  • ಬಳ್ಳಿ ಬೆಳೆದ ನಂತರ ಅದರಲ್ಲಿ ಕೆಲವು ತಳಿಗಳಲ್ಲಿ ಕೆಳಮುಖವಾಗಿ ಬಳ್ಳಿಗಳು  ಇಳಿಯುತ್ತವೆ.
  • ಈ ಬಳ್ಳಿಗಳು ಸಹ ನೆಲವನ್ನು ಮುಟ್ಟಿದರೆ ಅದರಲ್ಲಿ ಬೇರು ಬಂದು ಬೆಳೆಯುತ್ತದೆ.
  • ಇದನ್ನು  ಜೋಲು  ಬಳ್ಳಿ ಎಂದು ಕರೆಯುತ್ತಾರೆ.
  • ಇದನ್ನು ಸಹ ಸಸ್ಯಾಭಿವೃದ್ದಿಗೆ ಬಳಕೆ ಮಾಡಬಹುದು. 
  • ಹಾಗೆಯೇ  ಮರಕ್ಕೆ ಹಬ್ಬುತ್ತಿರುವ ಬಳ್ಳಿಗಳನ್ನು ಸಹ ಸಸ್ಯಾಭಿವೃದ್ದಿ ಮಾಡಲು ಬಳಕೆ ಮಾಡಬಹುದು.

ಎರಡನೇ ವಿಧಾನದ ಬಳ್ಳಿಯನ್ನು ಸಸ್ಯಾಭಿವೃದ್ದಿ ಮಾಡುವುದು ಶಿಫಾರಿತವಲ್ಲವಾದರೂ,  ಇಂತಹ ಬಳ್ಳಿ ತುಂಡುಗಳನ್ನು ನೆಟ್ಟರೆ ಬೇರು ಬರುತ್ತದೆ,  ಪಾಲಿಥೀನ್ ಚೀಲದಲ್ಲಿ ಹಾಕಿದರೆ ಸಸಿಯೂ ಆಗುತ್ತದೆ. ಇದರ ನ್ಯೂನತೆ ಎಂದರೆ ಇದು ಉದ್ದಕ್ಕೆ ಬಳ್ಳಿಯಂತೇ ಬೆಳೆಯುತ್ತದೆ. ಕವಲು ಗೆಲ್ಲುಗಳನ್ನು ಬಿಡುವುದು ತಡವಾಗುತ್ತದೆ. ತುದಿ ತುಂಡು ಮಾಡುತ್ತಾ ಅದರಲ್ಲಿ ಕವಲು ಗೆಲ್ಲುಗಳನ್ನು ಬರುವಂತೆ ಮಾಡಬೇಕಾಗಬಹುದು. ಕೆಲವು ಖರೀದಿಸಿ ತಂದ ಸಸಿಗಳು ಬಳ್ಳಿ ಮಾತ್ರ ಬೆಳೆಯುತ್ತಾ ಇರುವುದು ಈ ಮೂಲದಿಂದ ಸಸಿ ಮಾಡಿದ ಕಾರಣದಿಂದ ಎನ್ನಲಾಗುತ್ತದೆ.

ಎರು ಬಳ್ಳಿಗಳಿಂದ ಮಾಡಿದ 2 ವರ್ಷಕ್ಕೆ ಇಳುವರಿ ಕೊಟ್ಟ ಬೆಳೆ.
ಎರು ಬಳ್ಳಿಗಳಿಂದ ಮಾಡಿದ 2 ವರ್ಷಕ್ಕೆ ಇಳುವರಿ ಕೊಟ್ಟ ಬೆಳೆ.
  • ಮೂರನೇ ವಿಧಾನದ ಬಳ್ಳಿಯ ಸಸ್ಯಾಭಿವೃದ್ದಿ ಬಹಳ ಪ್ರಯೋಜನಕಾರಿಯಾದರೂ ಅಧಿಕ ಪ್ರಮಾಣದಲ್ಲಿ ಸಸ್ಯೋತ್ಪಾದನೆ ಮಾಡಲು ತುಂಬಾ ಕಷ್ಟವಾದೀತು.
  • ಇದು ಮೆಣಸಿನ ಬಳ್ಳಿಯಲ್ಲಿ  ಮೇಲೆ ಏರುವ ಬಳ್ಳಿ (Growing stem)  Orthotropic shoot) ಬಳಿಯನ್ನು ನೆಡಲು ಬಳಸಿದ್ದೇ ಆದರೆ ಅದರ ಮೂಲ ಲಕ್ಷಣದಂತೆ  ಅದು ಬೆಳೆಯುತ್ತದೆ.
  • ಬುಡದಿಂದಲೇ ಕವಲು ಬಳ್ಳಿಗಳನ್ನು ( Fruit bearing lateral soots) ಬಿಡುತ್ತಾ ಬೆಳೆಯುತ್ತದೆ.
  • ಇದನ್ನು ನೆಟ್ಟು ಬೆಳೆಸುವುದು ಅವರವರೇ ಸಸ್ಯಾಭಿವೃದ್ದಿ ಮಾಡುವುದಾದರೆ ಉತ್ತಮ ವಿಧಾನ.

ಹೇಗೆ ಸಸ್ಯಾಭಿವೃದ್ದಿ:

  • ಮೆಣಸಿನ ಬಳ್ಳಿ ಒಂದು ಯಾವುದಾದರೂ ಆಧಾರಕ್ಕೆ ಹಬ್ಭಿದೆ ಎಂದಾದರೆ ಅದರ  ಬೆಳೆಯುವ ಭಾಗವನ್ನು ಸುಮಾರು 1 -1.5 ಅಡಿ ಉದ್ದಕ್ಕಿರುವಂತೆ ಕತ್ತರಿಸಬೇಕು.
  • ಅದರಲ್ಲಿ ಅಧಾರ ಮರಕ್ಕೆ ಅಂಟಿಕೊಳ್ಳುವ ಬೇರುಗಳು ಇರುತ್ತವೆ.
  • ಈ ಬೇರುಗಳಿಗೆ ಬೇರು ಬೆಳವಣಿಗೆಗೆ ಅವಕಾಶ ಸಿಕ್ಕಿದರೆ ಬೇರು ಬೆಳೆಯುತ್ತದೆ.
  • ಇಂತಹ ಏರು ಬಳ್ಳಿಯ ತುಂಡುಗಳನ್ನು ಕತ್ತರಿಸಿ ಅದನ್ನು ಪಾಲಿಥೀನ್ ಚೀಲಕ್ಕೆ ಹಾಕಿ , ಕೆಲವು ದಿನಗಳ ವರೆಗೆ  ಪ್ಲಾಸ್ಟಿಕ್ ಮುಚ್ಚಿದ ಮನೆಯೊಳಗೆ ಇರಿಸಿದರೆ ಬೇರು ಬರುತ್ತದೆ.
  • ಇದನ್ನೇ ನೇರವಾಗಿ ನೆಟ್ಟು ಬೆಳೆಸಬಹುದು ಎನ್ನುತ್ತಾರೆ ಓರ್ವ ಅತೀ ದೊಡ್ಡ ಮೆಣಸು ಬೆಳೆಗಾರ ಜೊಮಿ ಮ್ಯಾಥ್ಯು ಅವರು.
  • ಇವರು  ಸಾವಿರಾರು ಮೆಣಸಿನ ಬಳ್ಳಿಗಳನ್ನು ಈ ರೀತಿಯಲ್ಲಿ ಬೆಳೆಸಿದ್ದಾರೆ.
  • ಹೆಚ್ಚು ಬದುಕುಳಿಯುವ ಸಾಧ್ಯತೆಗಾಗಿ ಇದನ್ನು ಪಾಲಿಥೀನ್ ಚೀಲಗಳಲ್ಲಿ ಸುರಕ್ಷಿತವಾಗಿ ಮಾಡುವುದು ಉತ್ತಮ.
  • ಇದನ್ನು ಗಿಡದಲ್ಲಿಯೇ ಸಸ್ಯಾಭಿವೃದ್ಧಿ ಮಾಡಬಹುದು.
  • ಬೇರು ಇರುವ ಗಂಟಿನ ಭಾಗಕ್ಕೆ ಬೇರು ಬರುವಂತೆ ಒಂದು ಕಾಗದದ ಲೊಟದೊಳಗೆ ತೆಂಗಿನ ನಾರಿನ ಹುಡಿ ಅಥವಾ ಗೂಟಿ ಕಸಿಗೆ ಬಳಸುವ ಮಾಧ್ಯಮವನ್ನು ಹಾಕಿ ಎರಡೂ ಬದಿಯಲ್ಲಿ ಕಟ್ಟಿ  ನೀರು ಸಿಂಪಡಿಸುತ್ತಿದ್ದರೆ ಅಲ್ಲಿಯೇ ಬೇರು ಬೆಳೆಯುತ್ತದೆ.
  • ಅದನ್ನೇ ನೇರವಾಗಿ ನಾಟಿಗೆ ಬಳಕೆ ಮಾಡಬಹುದು.

ಇದು ಹೊಸ ವಿಧಾನ ಅಲ್ಲ. ಇದನ್ನು ಭಾರತೀಯ ಸಾಂಬಾರು ಬೆಳೆಗಳ ಸಂಶೊಧನಾ ಸಂಸ್ಥೆಯವರು ಬಹಳ ಹಿಂದೆಯೇ ಮಾಡಿ ನೋಡಿ ಯಶಸ್ಸು ಕಂಡಿದ್ದಾರೆ.  ಒಂದಷ್ಟು ರೈತರು ಈ ವಿಧಾನದಲ್ಲೇ ಸಸಿ ಮಾಡಿ ಮೆಣಸು ಬೆಳೆದವರೂ ಇದ್ದಾರೆ.

ಹೆಚ್ಚು ಸಸ್ಯಾಭಿವೃದ್ದಿ ಮಾಡುವ ವಿಧಾನ
ಹೆಚ್ಚು ಸಸ್ಯಾಭಿವೃದ್ದಿ ಮಾಡುವ ವಿಧಾನ

ಹೆಚ್ಚು ಸಸಿ ಮಾಡಿಕೊಳ್ಳಲು ಹೀಗೆ ಮಾಡಬಹುದು:

  • ಈ ಚಿತ್ರದಲ್ಲಿ ತೋರಿಸಿರುವಂತೆ  ಸಸಿಗಳನ್ನು ಒಂದು ಕಾಂಪೋಸ್ಟು ತುಂಬುದ ವಯರ್ ಮೆಶ್ ನ ಮೇಲೆ ಹಬ್ಬುವಂತೆ ಅನುಕೂಲಮಾಡಿಕೊಟ್ಟರೆ ನಮಗೆ ಹೆಚ್ಚಿನ ಪ್ರಮಾಣದಲ್ಲಿ ಹಬ್ಬು ಬಳ್ಳಿಗಳ ಸಸಿಗಳನ್ನು ಪಡೆಯಲು ಸಾಧ್ಯವಿದೆ.
  • ಸಾಮಾನ್ಯವಾಗಿ ಬೆಳೆಯುತ್ತಿರುವ ಬಳ್ಳಿಗಳಲ್ಲಿ ಸುಮಾರು 4-5 ಸಂಖ್ಯೆಯಲ್ಲಿ  ಇಂತಹ ಬಳ್ಳಿಗಳು ಸಿಗುತ್ತವೆ.
  • ಈ ಬಳ್ಳಿಯನ್ನು ತೆಗೆದೆರೆ ಮೂಲ ಬಳ್ಳಿಯಲ್ಲಿ ಕವಲು ಬಳ್ಳಿಗಳು ಹೆಚ್ಚಾಗುತ್ತವೆ.
ಸಸ್ಯಾಭಿವೃದ್ದಿ ಮಾಡುವ ವಿಧಾನ

ಕವಲು ಬಳ್ಳಿಗಳ ಸಸ್ಯೋತ್ಪಾದನೆ:

  • ಕವಲು ಬಳ್ಳಿಗಳು ಅಥವಾ ಇಳುವರಿ ಕೊಡುವ ಗೆಲ್ಲುಗಳನ್ನೂ ಸಹ ಸಸ್ಯಾಭಿವೃದ್ದಿ ಮಾಡಿ ಬೆಳೆಸುವ ಕ್ರಮ ಇದೆ.
  • ಇದಕ್ಕೆ ಬೇರು ಬರಿಸಲು ಬೇರು ಬರಿಸುವ ಹಾರ್ಮೋನಿನ ಬಳಕೆ ಬೇಕಾಗುತ್ತದೆ.
  • ಅದು ಯಾವುದೇ ಆದಾರಕ್ಕೂ ಏರಿಕೊಂಡು  ಬೆಳೆಯುವುದಿಲ್ಲ.
  • ಇದ್ದಲ್ಲೇ  ಹೆಚ್ಚು ಹೆಚ್ಚು ಕವಲು ಗೆಲ್ಲುಗಳನ್ನು ಬಿಡುತ್ತಾ ನೆಲಮಟ್ಟದಲ್ಲಿ ಬೆಳೆಯುತ್ತಿರುತ್ತದೆ.
  • ಇದನ್ನು ಬುಷ್ ಪೆಪ್ಪರ್ (BUSH PEPPER) ಎಂಬುದಾಗಿ ಕರೆಯುತ್ತಾರೆ.
  • ಈ ಸಸಿಗಳು ಅಲಂಕಾರ ಉದ್ದೇಶಕ್ಕೆ ಮಾತ್ರ ಸೂಕ್ತ ಎನ್ನಬಹುದು.

ಏರು ಬಳ್ಳಿಗಳ ಸಸಿಗಳ ಅನುಕೂಲತೆ:

  • ಏರು ಬಳ್ಳಿಗಳನ್ನು ಸಸ್ಯಾಭಿವೃದ್ದಿ ಮಾಡಿದರೆ  ಅದು ತಕ್ಷಣ  ಕವಲು ಗೆಲ್ಲುಗಳನ್ನು(SIDE BRANCHES) ಬಿಡುತ್ತಾ ಬೆಳೆಯುತ್ತದೆ. 
  • ಬುಡದಿಂದಲೇ ಕವಲು ಗೆಲ್ಲುಗಳು ಬಿಡುವ ಕಾರಣ ಇಳುವರಿ ಬೇಗ ಬರುತ್ತದೆ.
  • ಹೆಚ್ಚಿನ ಇಳುವರಿಯೂ ಬರುತ್ತದೆ.
  • ಸಾಮಾನ್ಯವಾಗಿ ನೆಲದಲ್ಲಿ ಹಬ್ಬಿ ಬೆಳೆಯುವ ಬಳ್ಳಿಗಳಲ್ಲಿ ಮಣ್ಣು ಜನ್ಯ ರೋಗಗಳ ಸೋಂಕು ಹೆಚ್ಚು.
  • ಅದರೆ ಬದುಕಿ ಬೆಳೆಯುತ್ತಿರುವ ಬಳ್ಳಿಗಳಲ್ಲಿ ರೋಗ ಸಾಧ್ಯತೆ ಕಡಿಮೆ ಇರುತ್ತದೆ.
  • ಒಂದು ವೇಳೆ ರೋಗದ ಸೋಂಕು ಇದ್ದರೆ ಅದು ಬದುಕುವುದೇ ಇಲ್ಲ.
  • ಈ ವಿಧಾನದಿಂದ ರೋಗ ರಹಿತ ಸಸ್ಯಗಳನ್ನೂ ಸಹ ಹೊಂದಬಹುದು.

ಕೆಲವು ವಿದೇಶದ ಮೆಣಸು ಬೆಳೆಯುವ ತಾಂತ್ರಿಕತೆಯನ್ನು ಕಂಡು ಬಂದವರು ವಿಯೆಟ್ನಾಂ ಮುಂತಾದ ದೇಶಗಳಲ್ಲಿ ಇದೇ ರೀತಿ ಸಸ್ಯಾಭಿವೃದ್ದಿ ಮಾಡುತ್ತಾರೆ ಎಂಬುದಾಗಿ ಹೇಳುತ್ತಾರೆ. ಅದೇ ಕಾರಣದಿಂದ ಅಲ್ಲಿ ಬುಡದಿಂದ ತುದಿ ತನಕ್ವೂ ಏಕ ಪ್ರಕಾರ ಇಳುವರಿ  ಬರುತ್ತದೆ ಎನ್ನುತ್ತಾರೆ. ಇಲ್ಲಿಯೂ ಇದನ್ನು ಮಾಡಿ ಯಶಸ್ವಿಯಾದವರು ಇದ್ದಾರೆ.

Leave a Reply

Your email address will not be published. Required fields are marked *

error: Content is protected !!