ಸಾವಯವ ರಸಗೊಬ್ಬರ – ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ.

ಸಾವಯವ ರಸಗೊಬ್ಬರ – ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ.

ಸಾವಯವ ರಸಗೊಬ್ಬರ ಎಂದರೆ ಅದು ರಾಸಾಯನಿಕ ಗೊಬ್ಬರಗಳಿಗೆ ಸಮನಾದ ಫಲಿತಾಂಶವನ್ನು ಕೊಡುವಂತಹ ಸಾವಯವ ಮೂಲವಸ್ತುಗಳನ್ನು ಸೇರಿಸಿ ತಯಾರಿಸಿದ ಗೊಬ್ಬರ. ರಸ ಗೊಬ್ಬರ, ರಾಸಾಯನಿಕ ಗೊಬ್ಬರ ಬೇರೆ ಬೇರೆ. ರಸ ಗೊಬ್ಬರ ಎಂಬುದು ಹೆಚ್ಚು ಸಾತ್ವಾಂಶಗಳ ಯಾವುದೇ ಮೂಲವಸ್ತುಗಳ ಮೂಲಕ ತಯಾರಿಸಬಹುದು. ‘ರಸ’ ಎಂದರೆ ಹೆಚ್ಚು ಸತ್ವ ಉಳ್ಳ ತಯಾರಿಕೆ.  

ರಾಸಾಯನಿಕ ಮಾತ್ರವಲ್ಲ, ಸಾವಯವ ಮೂಲದಲ್ಲೂ ರಸಗೊಬ್ಬರ ತಯಾರಿಸಬಾರದು ಎಂದಿಲ್ಲ. ತಯಾರಿಸಬಹುದು. ಇದು ಹೊಸ ತಂತ್ರಜ್ಞಾನವಂತೂ ಅಲ್ಲ. ಮರೆತು ಹೋಗಿರಬಹುದು ಅಥವಾ ಕಷ್ಟ ಎಂದು ಬಿಟ್ಟಿರಬಹುದು. ಸಾವಯವ ರೂಪದ ರಸಗೊಬ್ಬರ ಅಸಾಧಾರಣ ಫಲ  ಕೊಡಬಲ್ಲುದು.ಕೆಲವು ಹಿರಿಯರು ಈಗಲೂ ಹೇಳುವುದಿದೆ. ಬರೇ ಸಗಣಿ ಹಾಕಿದರೆ ಸಾಲದು, ಸ್ವಲ್ಪ ಬೂದಿಯೂ ಹಾಕಬೇಕು, ಜೊತೆಗೆ ಸ್ವಲ್ಪ ಶೇಂಗಾ ಹಿಂಡಿ ಹಾಕಿದರೆ ಅದ್ಭುತ ಫಲಿತಾಂಶ. ಉಡುಪಿ, ಭಟ್ಕಳ ಕಡೆಯಲ್ಲಿ ಮಲ್ಲಿಗೆ ಬೆಳೆಯುವವರು ಈಗಲೂ ಮಲ್ಲಿಗೆಯಲ್ಲಿ ಹೆಚ್ಚು ಚಿಗುರು ಬಂದು  ಹೂ ಪಡೆಯಲು ಬಳಕೆ ಮಾಡುವುದು ನೆಲಕಡ್ಲೆ ಹಿಂಡಿ. ಸಸ್ಯ ಜನ್ಯ ಬೆಳೆ ತ್ಯಾಜ್ಯವಾಗಿರುವ ಇದರಲ್ಲಿ ಅತ್ಯಧಿಕ ಪೋಷಕಾಂಶಗಳು ಒಳಗೊಂಡಿವೆ.

ಸಾವಯವ ಕೃಷಿಯ ತುರ್ತು ಅಗತ್ಯ ಇದೆ ಎಂಬುದಾಗಿ ಸರಕಾರ ಹೇಳುತ್ತದೆ. ಅವರ ತಾಳಕ್ಕೆ  ಸಂಬಂಧಿಸಿದ ಇಲಾಖೆಗಳು, ವಿಜ್ಞಾನಿಗಳು ತಾಳ ಹಾಕುತ್ತಾರೆ. ಆದರೆ ಹೊಲದಲ್ಲಿ ಮಾಡುವವರು ಮಾತ್ರ ಬೇರೆ ಮಂದಿ. ಕಷ್ಟ ನಷ್ಟಗಳಿಗೆ ಮಾಡುವವರು ಹೊಣೆಗಾರರೇ ಹೊರತು ಬೇರೆ ಯಾರೂ ಇಲ್ಲ.  ಬಂಡವಾಳ ಹಾಕುವವರು ಕೃಷಿಕರು. ಕೃಷಿ ಮಾಡುವವರಿಗೆ ಇದುವೇ ಜೀವನೋಪಾಯ. ಹಾಗಿರುವಾಗ ಅವರಿಗೆ ಖಾತ್ರಿಯ ಫಲಿತಾಂಶ ಕೊಡುವ ತಂತ್ರಜ್ಞಾನವನ್ನು ಮಾತ್ರ ಹೇಳಬೇಕು. ಹಸುವಿನ ಸಗಣಿ ಹಾಕಿ, ಗಂಜಳ ಹಾಕಿ, ಮಜ್ಜಿಗೆ ಹಾಕಿ, ಸಿಂಪಡಿಸಿ, ಬೆಳ್ಳುಳ್ಳಿ, ಶುಂಠಿ, ಸಾಸುವೆ ರಸ ಸಿಂಪಡಿಸಿ ಇವೆಲ್ಲಾ ಹೇಳಲು ಚಂದ. ಮಾಡಿದಾಗ ಫಲ ಸಿಕ್ಕರೆ ಸಂತೋಷ.  ಆದರೆ ಈ ತಂತ್ರಜ್ಞಾನದಲ್ಲಿ ಪ್ರಥಮ ಪ್ರಯತ್ನದಲ್ಲೇ ಎಡವಟ್ಟು ಮಾಡಿಕೊಂಡವರು ಹೆಚ್ಚು. ಯಾವುದೇ ತಂತ್ರಜ್ಞಾನ ಇದ್ದರೂ  ಅದು ರೈತರ  ಹೊಲದಲ್ಲಿ ಸಾರ್ವತ್ರಿಕವಾಗಿ ಫಲಿತಾಂಶ ಕೊಡುವಂತಿರಬೇಕು. ಖರ್ಚು ವೆಚ್ಚಗಳು ಹೆಚ್ಚು ಕಡಿಮೆ ಅದು ಅವರವರ ಆಯ್ಕೆ.

ಸಾವಯವ ಕೃಷಿ  ಅಗತ್ಯ ಮತ್ತು ಉತ್ತಮ:

ಸಗಣಿ, ನೆಲಕಡ್ಲೆ ಹಿಂಡಿ ಬೂದಿ ಸೇರಿಸಿದ ರಸಾಯನ
ಸಾವಯವ ರಸಗೊಬ್ಬರ ಸಗಣಿ, ನೆಲಕಡ್ಲೆ ಹಿಂಡಿ ಬೂದಿ ಸೇರಿಸಿದ ರಸಾಯನ
  • ಸಾವಯವ ವಸ್ತುಗಳನ್ನು ಬಳಸಿ ಕೃಷಿ ಮಾಡಿದರೆ ಒಳ್ಳೆಯದು. ಅದರೆ ಅದರಲ್ಲಿ ಉತ್ತಮ ಫಲ ಸಿಗಬೇಕು. 
  • ಸಾವಯವ ಕೃಷಿ ವಿಧಾನದಲ್ಲಿ ಮಣ್ಣು ಒಳ್ಳೆಯದಾಗುತ್ತದೆ. ಮಣ್ಣಿನಲ್ಲಿ ಜೀವಾಣುಗಳು  ಜೀವಂತವಾಗಿ ಕ್ರಿಯಾತ್ಮಕವಾಗಿ ಇರಬೇಕಾದರೆ ಅಲ್ಲಿ ಸಾವಯವ  ಅಂಶಗಳು ಇರಲೇಬೇಕು.
  • ಜೀವಾಣುಗಳಲ್ಲಿ ಪೋಷಕಾಂಶಗಳನ್ನು  ಲಭ್ಯವಾಗುವಂತೆ ಮಾಡುವ, ರೋಗ ನಿರೋಧಕ ಶಕ್ತಿ ಕೊಡುವಂತವುಗಳು  ಹೀಗೆ ಹಲವಾರು ಹಲವಾರು ಇವೆ.  
  • ನಾವು ಅಲ್ಪ ಸ್ವಲ್ಪ ಸಾವಯವ ತ್ಯಾಜ್ಯಗಳನ್ನು ಬಳಸುತ್ತೇವೆಯಾದರೂ ಅದು ಕೊಚ್ಚಣೆಯಿಂದ ನಷ್ಟವಾಗುತ್ತದೆ.
  • ಸಾವಯವ ವಸ್ತುಗಳು ನೆಲದ ಮೇಲುಸ್ತರದಲ್ಲಿ ತಂಗುತ್ತಾ ನಿರಂತರವಾಗಿ ಮಣ್ಣು ಮೆಕ್ಕಲು ರೂಪಕ್ಕೆ ಪರಿವರ್ತನೆಯಾಗುತ್ತಾ ಇದ್ದರೆ ಅಲ್ಲಿ ಜೀವಾಣುಗಳು  ಉತ್ಪತ್ತಿಯಾಗುತ್ತವೆ, ಬದುಕುತ್ತವೆ.
  • ಸಾವಯವ ವಸ್ತುಗಳು ಜೀವಾಣುಗಳು ಬದುಕುವ ಮಾಧ್ಯಮ. ಅವುಗಳಿಗೆ  ಆಶ್ರಯ  ಮತ್ತು ಆಹಾರ ಅದೇ ಆಗಿರುತ್ತದೆ.
  • ಅಲ್ಲಿ ಮಾತ್ರ ಅವು ಸಂಖ್ಯಾಭಿವೃದ್ಧಿಯಾಗುತ್ತಾ, ನಿರೀಕ್ಷೆಯ ಫಲಿತಾಂಶ ಕೊಡುತ್ತಿರುತ್ತವೆ. 
  • ಬೆಳೆ ಬೆಳೆಯುವ ರೈತನಿಗೆ ಇಳುವರಿಯೂ ಕಡಿಮೆಯಾಗಬಾರದು.
  • ಮಣ್ಣೂ ಸಹ  ಉತ್ತಮವಾಗಬೇಕು.  ಪ್ರೋಟೀನು, ಕಾರ್ಬೋಹೈಡ್ರೇಟ್ ಮತ್ತು ಇನ್ನಿತರ ವಸ್ತುಗಳು ಜೀವಾಣುಗಳು ಬದುಕಲು ಆಶ್ರಯ.
  • ಸ್ವಲ್ಪ ತೀಕ್ಷ್ಣ ಸಾವಯವ ಗೊಬ್ಬರಗಳನ್ನು ಕೊಡುತ್ತಾ ಇದ್ದರೆ ಅದರಲ್ಲಿರುವ ಅಧಿಕ ಸತ್ವಗಳು ಜೀವಾಣುಗಳನ್ನು ಬದುಕಿಸಿ, ಬೆಳೆಗಳಲ್ಲಿ ಇಳುವರಿಯನ್ನೂ ಹೆಚ್ಚಿಸುತ್ತವೆ.

ತೀಕ್ಷ್ಣ ಸಾವಯವ ರಸಗೊಬ್ಬರ ಏನು?

  • ಸಸ್ಯ ಜನ್ಯ ಅಥವಾ ಪ್ರಾಣಿಜನ್ಯ ವಸ್ತುಗಳಲ್ಲಿ ಅತ್ಯಧಿಕ ಪೊಷಕಾಂಶಗಳು ಯಾವುದರಲ್ಲಿ ಇವೆಯೋ ಅದನ್ನು  ಬಳಸಿ ಸಾವಯವ ರಸ ಗೊಬ್ಬರವನ್ನು ತಯಾರಿಸಬಹುದು.
  • ಇದನ್ನು ತೀಕ್ಷ್ಣ ಗೊಬ್ಬರ ಎನ್ನುತ್ತೇವೆ.
  • ಅತ್ಯಧಿಕ ಪ್ರಮಾಣದಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಹಾಗೂ ಪ್ರೋಟೀನು, ಕಾರ್ಬೋಹೈಡ್ರೇಟ್ ಖನಿಜಗಳು ಮತ್ತು ಸೂಕ್ಷ್ಮ ಪೊಷಕಾಂಶಗಳು ಇರುವ ವಸ್ತು ಎಂದರೆ ನೆಲಕಡ್ಲೆ ಹಿಂಡಿ.
  • ಇದರಲ್ಲಿ N: 7.3%, P:3%, K:2.2 % ಪ್ರೊಟೀನ್ 13% ಕಾರ್ಬೋಹೈಡ್ರೇಟ್  55% ಅಲ್ಲದೆ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಗಂಧಕ  ಇದೆ. 
  • ಅನಂತರದ ಸ್ಥಾನ ಹರಳಿನ ಹಿಂಡಿ. ಇದರಲ್ಲಿ N: 4-4.5%, P1.5%, K:1.25 -1.50% ಸಾವಯವ ವಸ್ತು(ಸಿಪ್ಪೆ ಇತ್ಯಾದಿ)  75%  ಅಲ್ಲದೆ ಕ್ಯಾಲ್ಸಿಯಂ, ಮೆಗ್ನೀಶಿಯಂ, ಗಂಧಕ ಸತು ಮ್ಯಾಂಗನೀಸ್ ಮತ್ತು ತಾಮ್ರದ ಅಂಶ ಇದೆ.
  • ಬೇವಿನ ಹಿಂಡಿ.  ಇದರಲ್ಲಿ N: 2-5%,  P: .5-1% ,K:1-2% Calcium 0.5% to 3.0%,Magnesium 0.3% to 1.0%,Sulphur 0.2% to 3.0%,Zinc 15 ppm to 60 ppm, Copper 4 ppm to 20 ppm, Iron 500 ppm to 1200 ppm, Manganese 20 ppm to 60 ppm ಇದೆ.
  • ಇದು ಧೀರ್ಘಾವಧಿಯ ತನಕ ಬೆಳೆಗಳಿಗೆ ಸಾರಾಂಶಗಳನ್ನು ಬಿಡುಗಡೆ ಮಾಡುತ್ತಿರುತ್ತದೆ.
  • ಹಾಗೆಯೇ ಹತ್ತಿ ಕಾಳಿನ ಹಿಂಡಿಯಲ್ಲೂ NPK ಅಂಶ ಹಾಗೂ ಕಾರ್ಬೋ ಹೈಡ್ರೇಟ್ ಪ್ರೋಟೀನು ಇತ್ಯಾದಿ ಇದೆ.
  • ಆದರೆ ಇದು ಮಣ್ಣನ್ನು ಸ್ವಲ್ಪ ಮಟ್ಟಿಗೆ ಹುಳಿಯಾಗಿಸುತ್ತದೆ.
  • ಇವುಗಳನ್ನು ಬಳಸಿ ಸಾವಯವ ರಸಗೊಬ್ಬರವನ್ನು ನಾವೇ ತಯಾರಿಸಿಕೊಳ್ಳಬಹುದು.
  • ಇವೆಲ್ಲಾ ಸಸ್ಯಜನ್ಯ ವಸ್ತುಗಳಲ್ಲಿ ಪೊಟ್ಯಾಶ್ ಅಂಶ ಕಡಿಮೆ ಇದ್ದು, ಅದನ್ನು ಬೇರೆ ಸಾವಯವ  ವಸ್ತುಗಳ ಸೇರಿಸುವಿಕೆಯಿಂದ ಸಮತೋಲನ ಮಾಡಬಹುದು.

ತಯಾರಿಸುವ ವಿಧಾನ:

  • ಸಾಮಾನ್ಯವಾಗಿ ಬಹುತೇಕ ಕೃಷಿಕರಲ್ಲಿ ಒಂದು ಎರಡು ಹಸುಗಳು ಇರುತ್ತವೆ. ಇದು ಗೊಬ್ಬರಕ್ಕಾಗಿ ಅಲ್ಲ. ಹಾಲಿಗಾಗಿ.
  • ಅದಕ್ಕೆ ಕೊಟ್ಟ ಹುಲ್ಲು ಆಹಾರದಿಂದ ವಿಸರ್ಜಿಸಿದ ಸಗಣಿಯನ್ನು ಸಂಪ್ರದಾಯಿಕ ಕ್ರಮದಂತೆ ಎಲ್ಲಾ ಬೆಳೆಗಳಿಗೂ ಬಳಸಲು ಸಾಕಾಗುವುದಿಲ್ಲ 
  • ಅದನ್ನು ಸ್ವಲ್ಪ ಸ್ವಲ್ಪ ಬಳಸಿ ಎಲ್ಲದಕ್ಕೂ ಹಂಚಬಹುದು.
  • ಸಗಣಿ ಮತ್ತು ಮೇಲೆ ತಿಳಿಸಿದ ನೆಲಕಡ್ಲೆ ಹಿಂಡಿ ಮತ್ತು ಪೊಟ್ಯಾಶಿಯಂ ಸತ್ವಕ್ಕಾಗಿ ಮರ ಸುಟ್ಟ ಬೂದಿಯನ್ನು ಅಥವಾ ಸಕ್ಕರೆ ಕಾರ್ಖಾನೆಯ ಮೊಲಾಸಸ್ (molasses) (ಇದರಲ್ಲಿ 14 % ದಷ್ಟು ಪೊಟ್ಯಾಶ್ ಇರುತ್ತದೆ. 
  • ಇವುಗಳನ್ನು ಬಳಸಿ ಅದನ್ನು ಸಮತೋಲನ ಮಾಡಬಹುದು.
  • ಸಗಣಿ ಎಂಬುದು ಅನಿವಾರ್ಯ ಅಲ್ಲ.
  • ಸಗಣಿ  ಲಭ್ಯ ಇರುವವರು ಇದನ್ನು ಬಳಸಬಹುದು. ಇಲ್ಲವಾದರೆ ಕೇವಲ ಹಿಂಡಿ ಮತ್ತು ಬೂದಿ/ ಮೊಲಾಸಸ್ ಸಾಕು.

ಒಂದು 200 ಲೀ. ನೀರು ಹಿಡಿಯುವ ಬ್ಯಾರಲ್ ಗೆ ದಿನವೊಂದಕ್ಕೆ ಸಿಗುವ ಸಗಣಿಯನ್ನು ಹಾಕಿ ಅದಕ್ಕೆ 3 ಕಿಲೋ ನೆಲಕಡ್ಲೆ ಹಿಂಡಿ ಮತ್ತು 10  ಕಿಲೋ ಬೂದಿ ಅಥವಾ 3 ಕಿಲೋ ಮೊಲಾಸಸ್ ಹಾಕಿ ನೀರಿನಲ್ಲಿ ಮಿಶ್ರಣ ಮಾಡಿ ಒಂದು ದಿನ ಹುಳಿ ಬರಿಸಿ( ಹೆಚ್ಚು ದಿನ ಹುಳಿ ಬರಿಸ ಬಹುದು ಆದರೆ ಅದು ವಾಸನೆ ಹೆಚ್ಚಾಗುತ್ತದೆ)  ತೆಂಗು ಅಡಿಕೆ, ಬಾಳೆ, ತರಕಾರಿ ಎಲ್ಲಾ  ಬೆಳೆಗಳಿಗೂ ಇದನ್ನು ಬಳಸಬಹುದು. ಈ ದ್ರಾವಣದಲ್ಲಿ ಪ್ರತೀ ಲೀಟರಿನಲ್ಲಿ ಸುಮಾರು 2% ಸಾರಜನಕ, .5 -.75%  ರಂಜಕ ಮತ್ತು 3% ಪೊಟ್ಯಾಶ್ ಅಂಶ ಹಾಗೂ ಅತ್ಯಲ್ಪ ಪ್ರಮಾಣದಲ್ಲಿ ಬೇಕಾಗುವ ಸೂಕ್ಷ್ಮ ಪೊಷಕಾಂಶ ಗಳು ಲಭ್ಯವಾಗುತ್ತದೆ. ಇದನ್ನು ರಸಾಯನ ಎಂದು ಕರೆಯಬಹುದು.ಇದರಲ್ಲಿ ಇರುವ ಪೋಷಕಗಳ ಪ್ರಮಾಣ ಕಡಿಮೆಯಾದರೂ ಅದೆಲ್ಲವೂ ಯಾವುದೇ ನಷ್ಟಕ್ಕೆ ಒಳಗಾಗದೆ ಸಸ್ಯಗಳಿಗೆ ಲಭ್ಯವಾಗುವ ಕಾರಣ ಇದು ರಾಸಾಯನಿಕ ಗೊಬ್ಬರದಷ್ಟು ಬೇಕಾಗುವುದಿಲ್ಲ.

5 ಲೀಟರ್ ಪ್ರಮಾಣದಲ್ಲಿ ಬಳಕೆ ಸುಲಭ
5 ಲೀಟರ್ ಪ್ರಮಾಣದಲ್ಲಿ ಬಳಕೆ ಸುಲಭ
  •  ಇದನ್ನು ಅಡಿಕೆಗೆ ವರ್ಷಕ್ಕೆ 3-4 ಸಲ ಪ್ರತೀ ಮರಕ್ಕೆ ತಲಾ 5 ಲೀ. ನಂತೆ ಬಳಸಿದಾಗ ಅದು ಶಿಫಾರಿತ ಪ್ರಮಾಣದ ಪೊಷಕಾಂಶದಷ್ಟೇ ಆಗುತ್ತದೆ. 
  • ತೆಂಗಿಗೆ ಪ್ರತೀ ಮರಕ್ಕೆ 10 ಲೀ. ನಂತೆ  ವರ್ಷಕ್ಕೆ 4  ಸಲ ಬಾಳೆಗೆ ಅಡಿಕೆಯಷ್ಟೇ ಹಾಗೂ ತರಕಾರಿಗಳಿಗೆ ಗಿಡಕ್ಕೆ  ಅರ್ಧ ಲೀ. ವಾರಕ್ಕೊಮ್ಮೆ ಬಳಸಬಹುದು.
  • ಇದು ಸಸ್ಯವನ್ನು ಹಚ್ಚ ಹಸುರಾಗಿಸುತ್ತದೆ. ದ್ಯುತಿಸಂಸ್ಲೇಷಣ ಕ್ರಿಯೆನ್ನು ಹೆಚ್ಚು ಮಾಡುತ್ತದೆ.
  • ಹೂ ಹೆಚ್ಚು ಮಾಡುತ್ತದೆ. ಅಧಿಕ ಇಳುವರಿಯನ್ನೂ ನೀಡುತ್ತದೆ.
  • ಸಣ್ಣ ಗಿಡಗಳು  ದಷ್ಟಪುಷ್ಟವಾಗಿ ಬೆಳೆಯುತ್ತವೆ.
  • ವಿಶೇಷವಾಗಿ ಇದರಲ್ಲಿ ಪ್ರೊಟೀನುಗಳು ಮತ್ತು ಕಾರ್ಬೋಹೈಡ್ರೇಟುಗಳು ಇರುವ ಕಾರಣ.
  • ಇದು ಮಣ್ಣಿನ ಸೂಕ್ಷ್ಮಾಣು ಜೀವಿಗಳಿಗೆ ಬದುಕಲು ಉತ್ತಮ ವಾತಾವರಣವನ್ನು ಕಲ್ಪಿಸಿಕೊಡುತ್ತದೆ.
  • ಸೂಕ್ಷ್ಮಾಣು ಜೀವಿಗಳು ಇದ್ದಲ್ಲೇ ಹೆಚ್ಚುತ್ತವೆ ಹಾಗೂ ನಾವು ಹೊರಗಡೆಯಿಂದ ತಂದು ಹಾಕಿದರೆ ಅದು ಚೆನ್ನಾಗಿ ಬದುಕಿ ಕೆಲಸ ಮಾಡುತ್ತದೆ.
  • ಹಸುವಿನ / ಎಮ್ಮೆಯ ಸಗಣಿ ಎಂದರೆ ಅದು ಸಾವಯವ ವಸ್ತುಗಳನ್ನು ಕರಗಿಸಿಕೊಡುವ ಒಂದು ಹೆಪ್ಪಿನ ತರಹದ ವಸ್ತು.
  • ಹಾಗಾಗಿ ಅದನ್ನು ಬಳಸುವುದು ಅಗತ್ಯವೂ ಸಹ. (ಒಂದು ಕಡೆ 1 ಬುಟ್ಟಿ ತರಗೆಲೆ ರಾಶಿ ಹಾಕಿ.
  • ಮತ್ತೊಂದೆಡೆ ಅಷ್ಟೇ ತರಗೆಲೆಗೆ ಸ್ವಲ್ಪ ಸಗಣಿ ದ್ರಾವಣ ಸೆರಿಸಿ. ಇದರಲ್ಲಿ ಎರಡನೆಯದ್ದು ತ್ವರಿತವಾಗಿ ಕಾಂಪೋಸ್ಟು ಆಗುತ್ತದೆ) 
  • ಈ ಸಾವಯವ ರಸ ಗೊಬ್ಬರದ ಜೊತೆಗೆ ಜೀವಾಣು ಗೊಬ್ಬರ ಬಳಕೆ ಮಾಡಬಹುದು. 
  • ಇದನ್ನು ಬಳಸಿದಾಗ ಹುಲ್ಲು ಇತ್ಯಾದಿ ಕಳೆ ಹೆಚ್ಚಾಗುತ್ತದೆ.
  • ಅದನ್ನು ಸವರಿ ನೆಲಕ್ಕೆ ಹೊದಿಸುವುದರಿಂದ ಮತ್ತಷ್ಟು ಮಣ್ಣು ಫಲವತ್ತಾಗುತ್ತದೆ.

ರೈತ ಮಿತ್ರರೇ ಈ ವಿಧಾನವನ್ನುಹಲವಾರು ಕೃಷಿಕರು ಅನುಸರಿಸುತ್ತಿದ್ದು, ಇದರಲ್ಲಿ ಉತ್ತಮ ಫಲಿತಾಂಶ ಕಂಡಿದ್ದಾರೆ. ತಾವು ಇದನ್ನು ಸಣ್ಣ ಕ್ಷೇತ್ರದಲ್ಲಿ ಅಳವಡಿಸಿ, ಫಲಿತಾಂಶ ತೃಪಿಕರವಾಗಿ ಕಂಡರೆ ಮುಂದುವರಿಸಬಹುದು. ಅದರೆ ಈಗ ಶೇಂಗಾ ಹಿಂಡಿ ಬಹಳ ದುಬಾರಿಯಾಗಿದೆ. ಹರಳು ಹಿಂಡಿ ಅಗ್ಗ. ಇದರಲ್ಲಿ ಕೈಗೆಟಕುವುದನ್ನು ಆಯ್ಕೆ ಮಾಡಬಹುದು.

ಮುಂದಿನ ದಿನಗಳಲ್ಲಿ ಅಗ್ಗವಾಗಿರುವ ರಾಸಾಯನಿಕ ಗೊಬ್ಬರಗಳು ಕೈಗೆಟಕದಷ್ಟು ದುಬಾರಿ ಅಗುತ್ತಾ  ಬರುತ್ತವೆ.  ಅದರ ಫಲಿತಾಂಶವೂ ನಿರೀಕ್ಷೆಯ ಮಟ್ಟದಲ್ಲಿ ಇರುವುದಿಲ್ಲ. ಮಣ್ಣು ಫಲವತ್ತತೆ ಕಳೆದುಕೊಂಡಂತೆ ಅವುಗಳ ಕ್ಷಮತೆಯೂ ಕಡಿಮೆಯಾಗುತ್ತಾ ಬರುತ್ತದೆ. ಹಾಗಿರುವಾಗ ಎಲ್ಲರೂ ಅದಕ್ಕೆ ಅವಲಂಭನೆ ಆಗುವ ಬದಲು ಸ್ವಲ್ಪ ಪ್ರಮಾಣದ ರೈತರಾದರೂ ಸಾವಯವ ವಿಧಾನವನ್ನು ಅನುಸರಿಸುವುದು ಸೂಕ್ತ. ಇದು ನಮ್ಮ ದೇಶದ ರೈತರು ಬೆಳೆಯುವ ಬೆಳೆಗಳ ಬೇಡಿಕೆಯನ್ನೂ ಹೆಚ್ಚಿಸುತ್ತದೆ.

Leave a Reply

Your email address will not be published. Required fields are marked *

error: Content is protected !!