ತೆಂಗು- ಅಡಿಕೆ ಮರಗಳಿಗೆ ಬಂದಿದೆ ಹೊಸ ಮಾರಣಾಂತಿಕ ಸಾಂಕ್ರಾಮಿಕ ರೋಗ.

ರೋಗ ಸೋಂಕಿತ ಮರ

ತೆಂಗು ಅಡಿಕೆ ಬೆಳೆ ಬೆಳೆಯುವುದು ಈಗ ಹಿಂದಿನಷ್ಟು ಸುಲಭವಾಗಿಲ್ಲ. ಹಿಂದೆ ಸಸಿ ನೆಟ್ಟರೆ ಅದು ನೀರಾವರಿ ಗೊಬ್ಬರ ಕೊಟ್ಟರೆ ಚೆನ್ನಾಗಿಯೇ ಬೆಳೆಯುತ್ತಿತ್ತು. ಈಗ ಹಾಗಿಲ್ಲ. ನೀರು, ಗೊಬ್ಬರ ಎರಡನ್ನು ಕೊಡಲು ನಾವು ಜಿಪುಣತನ ಮಾಡುವುದಿಲ್ಲ. ಆದರೆ ವಾತಾವರಣ ನಮಗೆ ಸಹಕಾರ ಕೊಡುತ್ತಿಲ್ಲ. ಹಿಂದೆ ಮೈನರ್ ರೋಗ ಕಾರಕಗಳಾಗಿದ್ದವು, ಈಗ ಪ್ರಭಲರೋಗಗಳಾಗುತ್ತಿವೆ. ಅದೇ ರೀತಿಯಲ್ಲಿ ಕೀಟಗಳೂ. ಕೀಟ – ರೋಗ ನಾಶಕಕ್ಕೆ ಬಗ್ಗದ ಸ್ಥಿತಿ  ಉಂಟಾಗಿದೆ. ಬಹುಷಃ ಇನ್ನು ಮುಂದಿನ ದಿನಗಳು ಅಡಿಕೆ ತೆಂಗು ಬೆಳೆಗಾರರಿಗೆ ರೋಗ – ಕೀಟಗಳು ಬೆಂಬಿಡದ ಬೇತಾಳನಂತೆ ಕಾಡುವ ಸಾದ್ಯತೆ ಇದೆ. ಈಗಾಗಲೇ ನಮ್ಮ ರಾಜ್ಯದ ಹಲವು ಕಡೆ ತೆಂಗು ಅಡಿಕೆಗೆ ಹೊಸ ಮಾರಣಾಂತಿಕ  ಸಾಂಕ್ರಾಮಿಕ ರೋಗವೊಂದು ಕಾಣಿಸಿಕೊಂಡಿದೆ.

ತೆಂಗಿನ ಸಸಿ ಬೆಳೆಸಲು ಕಷ್ಟವಿಲ್ಲ. ಉತ್ತಮ ಮಣ್ಣು, ಬೇಕಾದಷ್ಟು ನೀರು, ಗೊಬ್ಬರ. ಇವಷ್ಟು ಇದ್ದರೆ ತೆಂಗು ಬೆಳೆಯಬಹುದು ಎಂದು ನಾವು ತಿಳಿದುಕೊಂಡಿದ್ದೇವೆ. ಕಷ್ಟಪಟ್ಟು ಇವನ್ನೆಲ್ಲಾ ಮಾಡಿಯೂ ನಮ್ಮ ಪ್ರಯತ್ನಕ್ಕೆ  ಎಲ್ಲಾ ಹಂತದಲ್ಲೂ ಸಹಕಾರ ಕೊಡಬೇಕಾದದ್ದು  ವಾತಾವರಣ. ಅದು ನಮಗೆ ಇತ್ತೀಚೆಗೆ ಸಹಕರಿಸುತ್ತಿಲ್ಲ. ವಾತಾವರಣದ ವ್ಯತ್ಯಾಸ ಎಲ್ಲಾ ಬೆಳೆಗಳ ಮೇಲೆ ಸಣ್ಣ, ದೊಡ್ಡ ಪ್ರಮಾಣದಲ್ಲಿ ತೊಂದರೆ ಉಂಟು ಮಾಡುತ್ತಿದೆ. ಹೊಸ ಹೊಸ ರೋಗಕಾರಕಗಳು ನಾವಿದ್ದೇವೆ ಎನ್ನುತ್ತಿವೆ. ಬೆಳೆಗಳಿಗೆ ಭಾರೀ ಪ್ರಮಾಣದಲ್ಲಿ ತೊಂದರೆ ಮಾಡುತ್ತಿವೆ.

 • ತೆಂಗು ಅಡಿಕೆ ಬೆಳೆಗಾರರು ಇತ್ತೀಚೆಗೆ ತಮ್ಮ ತೋಟದಲ್ಲಿ ಮರಗಳು ನಿಸ್ತೇಜವಾಗುವುದನ್ನು ಗಮನಿಸಿರಬಹುದು.
 • ತೆಂಗಿನ ಮರಗಳ ಗರಿಗಳು ಪಕ್ವತೆಗೆ ಮುಂಚೆಯೇ ಒಣಗಿಕೊಳ್ಳುವುದು,  ಕಾಯಿಗಳು ಉದುರುವುದು , ಅಡಿಕೆಯ ಅರೆ ಬಲಿತ ಕಾಯಿಗಳು ಉದುರುವುದು ಇತ್ಯಾದಿಗಳನ್ನು ಗಮನಿಸಿರಬಹುದು.
 • ಇವೆಲ್ಲಾ ಒಂದು ಶಿಲೀಂದ್ರದಿಂದ ಉಂಟಾಗುವ ಹಾನಿಯಾಗಿದ್ದು, ಈ ಶಿಲೀಂದ್ರ ಇಷ್ಟೋಂದು ಮಾರಾಣಾಂತಿಕವಾಗಿ  ತೆಂಗು ಅಡಿಕೆಗೆ ಬಾಧಿಸಬಹುದು ಎಂದು ಯಾರೂ ಊಹಿಸಿಯೂ ಇರಲಿಕ್ಕಿಲ್ಲ.
 • ಇದು ಹೊಸತಾಗಿ ಬಂದ ರೋಗಾಣು ಅಲ್ಲ. ಆಗಲೇ ಇದನ್ನು ಗುರುತಿಸಲಾಗಿತ್ತು.
 • ಆದರೆ ಅದು ಕನಿಷ್ಟ ಹಾನಿಕಾರ ರೋಗಾಣುಗಳ ಪಟ್ಟಿಯಲ್ಲಿತ್ತು.
 • ಈ ರೋಗಾಣು ತೆಂಗಿನ ಬೆಳೆಗೆ ಬಾಧಿಸುವ ಬಗ್ಗೆ ಈ ಹಿಂದೆ ICAR  ನ ವಿಜ್ಞಾನಿ ಮಹೇಶ್ವರಪ್ಪ ಅವರು The Research gate ಇಲ್ಲಿ ವರದಿ ಮಾಡಿದ್ದಾರೆ.
ತೆಂಗಿನ ಮರಕ್ಕೆ ರೋಗ ಬಂದ ಲಕ್ಷಣ

ತೆಂಗಿನ ಮರಕ್ಕೆ ಹಾನಿ:

 • ಕಳೆದ 5 ವರ್ಷಕ್ಕೆ ಹಿಂದೆ ನಮ್ಮ ಹೊಲದಲ್ಲಿ ಸುಮಾರು 10 ಕಿತ್ತಳೆ ಗಿಡ್ದ ತಳಿಯ ತೆಂಗಿನ ಸಸಿಯನ್ನು ಬೆಳೆಸಿದ್ದೆ.
 • ಅದರ ಜೊತೆಗೆ ಐದು ಹೈಬ್ರೀಡ್ ಸಸಿಗಳನ್ನು ಬೆಳೆಸಿದ್ದೆ. ನೀರಾವರಿ, ಪೋಷಕಾಂಶ ಎಲ್ಲವನ್ನೂ ಚೆನ್ನಾಗಿಯೇ ಒದಗಿಸಲಾಗಿತ್ತು.
 • ನಿಗದಿತ ವರ್ಷಕ್ಕೆ (ಕಳೆದ ವರ್ಷ) ಪ್ರಥಮ ಫಲವನ್ನೂ ನೀಡಿದೆ.
 • ಈ ವರ್ಷ ಮಳೆಗಾಲ ಪ್ರಾರಂಭದಲ್ಲಿ ಈ ತೆಂಗಿನ ಸಸಿಗಳ ಬೆಳವಣಿಗೆ  ಚೆನ್ನಾಗಿಯೇ ಇತ್ತು.
 • ಮಳೆಗಾಲದಲ್ಲಿ ಬರುವ ನಾಗರ ಪಂಚಮಿಗೆ  ಎಳನೀರು ಕೀಳುವಾಗ ಆ ಎಳೆನೀರಿನ ಮೇಲ್ಮೈಯಲ್ಲಿ  ಸುಟ್ಟಂತಹ ಮಚ್ಚೆಗಳಿದ್ದವು. 
 • ಒಂದೆರಡು ಸುಟ್ಟ ಮಚ್ಚೆ ಇಡೀ ಎಳನೀರಿಗೆ ಹರಡಿ ಅದು ಅಪಕ್ವಸ್ಥಿತಿಯಲ್ಲೇ ಉದುರಿದ್ದವು. 
 • ಇದನ್ನು ಗಂಭೀರ ವಿಷಯವಾಗಿ ಪರಿಗಣಿಸಿರಲಿಲ್ಲ. ಮಳೆಗಾಲ ನವೆಂಬರ್ ತನಕವೂ ಮುಗಿಯಲಿಲ್ಲ.
 • ಸಸ್ಯಗಳಿಗೆ ಒಳ್ಳೆಯದು ಎಂದು ಭಾವಿಸಿದ್ದೆ.
 • ಆದರೆ ಮಳೆಗಾಲ ಮುಗಿಯುವ ಸಮಯಕ್ಕೆ ಈ ರೀತಿ ಮಚ್ಚೆ ಬಂದಿದ್ದ ತೆಂಗಿನ ಸಸಿ ಹಾಗೆಯೆ ಇನ್ನೂ ಒಂದೆರಡು ದೊಡ್ದ ಮರಗಳಲ್ಲಿ ಎಲೆಗಳೆಲ್ಲಾ ಒಣಗುವಿಕೆ ಪ್ರಾರಂಭವಾಯಿತು.
 • ಆಗ ಅದನ್ನು ಕೂಲಂಕುಶವಾಗಿ ಪರೀಕ್ಷಿಸುವ ಕೆಲಸ ಮಾಡಲೇ ಬೇಕಾಯಿತು.
 • ಕೂಲಂಕುಶವಾಗಿ ಪರೀಕ್ಷಿಸುವಾಗ ಕಂಡುಬಂದ ಚಿನ್ಹೆಗಳು ಇವು.
ಗರಿ ಬುಡಕ್ಕೆ ಸೋಂಕು
ಗರಿ ಬುಡಕ್ಕೆ ಸೋಂಕು

ಯಾವ ಯಾವ ಚಿನ್ಹೆಗಳು:

 • ತೆಂಗಿನ ಮರದ ಗರಿಗಳು ಬೆಳವಣಿಗೆ ಆಗುವ ಮುಂಚೆಯೇ ಎಲೆಗಳು ಒಣಗುತ್ತವೆ. ಅವು ಕಾಂಡಕ್ಕೆ ಜೋತು ಬೀಳುತ್ತವೆ. ಗರಿಗಳ ಎಲೆಗಳು ಹಳದಿಯಾಗಿ, ಚುಕ್ಕೆಗಳು ಕಾಣಿಸಿಕೊಳ್ಳುವುದೂ ಇದೆ. ಕೆಳಭಾಗದ ಗರಿಗಳಿಗೆ ಬಾಧೆ ಹೆಚ್ಚು. ಸುಳಿಗೆ ನಿಧಾನ.
 • ಇದರ ಮೊದಲ ಚಿನ್ಹೆ ಎಲೆಯಲ್ಲಿ ಸಣ್ಣ ಸಣ್ಣ ಚುಕ್ಕೆಗಳ ಮೂಲಕ ಕಾಣಿಸಿಕೊಳ್ಳುತ್ತದೆ. ಆ ಹಂತದಿಂದ ಅದು ಹೆಚ್ಚಾಗುತ್ತಾ ಹೋಗುತ್ತದೆ.
 • ಮೊದಲ ಹಂತದಲ್ಲಿ ತೆಂಗಿನ ಮರದ ಗರಿಯ ಬುಡ ಭಾಗದಲ್ಲಿ ರೆಡ್ ಆಕ್ಸೈಡ್ ಬಣ್ಣದ ಕಲೆಗಳನ್ನು ಗಮನಿಸಬಹುದು. ಈ ಕಲೆಗಳು ಗರಿ ಭಾಗದ ಬುಡದಿಂದ ಪ್ರಾರಂಭವಾಗಿ ಮೇಲೆ ಮೇಲೆ ಮುಂದುವರಿಯುತ್ತದೆ. ಮತ್ತೆ ಕಪ್ಪಗಾಗುತ್ತದೆ.
ಕಾಯಿಗೆ ಸೋಂಕು
ಕಾಯಿಗೆ ಸೋಂಕು
 • ಈ ಕಲೆಗಳ ಭಾಗವನ್ನು ಹರಿತವಾದ ಕತ್ತಿ ಇತ್ಯಾದಿಗಳಿಂದ ಕತ್ತರಿಸಿದಾಗ ಆ ಭಾಗ ಒಣಗಿದಂತೆ ಇರುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಸತ್ತಿರುತ್ತದೆ.  ಇಡೀ ಗರಿಯ ಸುತ್ತಲೂ ಇದು ಹರಡಿದ್ದರೆ ಮುಂದೆ ಆಹಾರ ಸರಬರಾಜು ನಿಂತು ಗರಿ ಒಣಗುತ್ತದೆ.
 • ಕಲೆಗಳು ಬುಡ ಭಾಗದ ಗರಿಗಳಲ್ಲಿ ಮೊದಲು ಪ್ರಾರಂಭವಾಗಿ ಅದು ಮೇಲಿನ ಗರಿಗಳಿಗೆ ವಿಸ್ತರಿಸುತ್ತಾ ಹರಡುತ್ತದೆ. ಜೀವ ಕೊಶ ಸತ್ತ ಮೇಲೆ ಆ ಶಿಲೀಂದ್ರ ಜೀವಂತ ಇರುವ ಜೀವಕೋಶಗಳ ಕಡೆಗೆ ಹೋಗುತ್ತದೆ.
 • ಕಾಯಿಗಳ ಮೇಲೆ ಸಣ್ಣ ಸಣ್ಣ ಗಾತ್ರದ ಬೆಂದಂತಹ ರಚನೆ ಕಂಡು ಬಂದು, ಅದು ಅಗಲವಾಗುತ್ತಾ ಇಡೀ ಕಾಯಿಗೆ ವ್ಯಾಪಿಸುತ್ತದೆ. ಕಾಯಿಯ ಮೇಲ್ಮೈ  ಚಿರುಟಿಕೊಳ್ಳುತ್ತದೆ. (Shrinking). ಎಳೆನೀರಿನ ಹಂತದಲ್ಲಿ ಬಾಧಿಸಿದಾಗ ಹೆಚ್ಚಾದರೆ ಅದು ಬೆಳೆಯದೆ ಉದುರಬಹುದು. ಒಂದು ವೇಳೆ ಉದುರದೇ ಉಳಿದರೆ ಅಲ್ಲಿಗೆ ಸಿಪ್ಪೆ ಚುರುಟಿಕೊಂಡು, ಕಾಯಿ ಪಕ್ವವಾಗುವ ಮುಂಚೆ ಒಣಗಬಹುದು.
ಶಿಲೀಂದ್ರ ದ ಬೆಳವಣಿಗೆ
ಶಿಲೀಂದ್ರ ದ ಬೆಳವಣಿಗೆ
 • ಕೇವಲ ಗರಿಗಳಿಗೆ ಮಾತ್ರ ಬಾಧಿತವಾಗುವುದಲ್ಲ. ಹೂ ಗೊಂಚಲಿಗೂ ಬಾಧಿಸುತ್ತದೆ. ಹೂ ಗೊಂಚಲು ಅರಳುವ ಮುಂಚೆ ಬಾಧಿಸಿದರೆ ಅದು ಅರಳುವುದೇ ಇಲ್ಲ.
 • ಅರಳಿದ ನಂತರ  ಬಾಧಿಸಿದರೆ ಮಿಡಿಗಳು ಬಲಿಯುವುದಿಲ್ಲ, ಹೂ ಗೊಂಚಲಿನ ದಂಟು ಬುಡ ಭಾಗದಿಂದ ಒಣಗುತ್ತಾ ಬರುತ್ತದೆ. ಎಳೆಯ ಮಿಡಿಗಳು ಉದುರುತ್ತವೆ. ಸ್ವಲ್ಪ ಬಲಿತಿದ್ದರೆ ಅಲ್ಲಿಗೇ ಅದು  ಮುರುಟಿಕೊಂಡು ಒಣಗುತ್ತದೆ.
 • ಈ ಶಿಲೀಂದ್ರ ಉಳಿದ ಶಿಲೀಂದ್ರಗಳಂತೆ ತೇವಾಂಶ ಇರುವ ಸಮಯದಲ್ಲಿ ಮಾತ್ರ ಚುರುಕಾಗಿರುವುದಲ್ಲ. ತೇವಾಂಶ ಇಲ್ಲದ ಒಣ ವಾತಾವರಣದಲ್ಲೂ ಇದು ಕ್ರಿಯಾತ್ಮಕವಾಗಿರುತ್ತದೆ.
 • ಗರಿಗಳಿಗೆ ಮಾತ್ರವಲ್ಲದೆ ಕಾಂಡದ ಭಾಗಕ್ಕೂ ಇದು ಹರಡಿ ಕಾಂಡವನ್ನು ಅಲ್ಲಲ್ಲಿ ಒಣಗುವಂತೆ ಮಾಡುತ್ತದೆ.
ಹೂಗೊಂಚಲಿಗೆ ಬಾಧಿಸಿದ ಫಲ
ಹೂಗೊಂಚಲಿಗೆ ಬಾಧಿಸಿದ ಫಲ
 • ಇದು ಹೈಬ್ರೀಡ್ ತಳಿಗಳಿಗೆ, ಕಿತ್ತಳೆ (COD, MYD, ಹಸುರು  CGD, MGD ) ಮುಂತಾದ ತಳಿಗಳಿಗೆ ಬೇಗ ಬಾಧಿಸುತ್ತದೆ. ಅಲ್ಲಿ ಉಲ್ಬಣವಾಗಿ ಇತರ ತಳಿಗಳಿಗೆ ಪ್ರಸಾರವಾಗುತ್ತದೆ.
 • ಎಳೆಯ ಸಸಿಗಳಿಗೂ ಈ ರೋಗಾಣು ಬಾಧಿಸುತ್ತದೆ. ಅಂತಹ ಗಿಡದ ಗರಿಗಳು ಒಣಗುತ್ತದೆ. ಸಸಿ ಬೆಳವಣಿಗೆ ಆಗುವುದಿಲ್ಲ.
ಮಿಡಿಗೆ ಬಾಧಿಸಿದ ಫಲ
ಮಿಡಿಗೆ ಬಾಧಿಸಿದ ಫಲ
 • ತೆಂಗಿಗೆ ಫೈಟೋಪ್ಥೆರಾ ಶಿಲೀಂದ್ರದಿಂದ ಸುಳಿ ಕೊಳೆ ರೋಗ ಬರುವುದು ನಮಗೆ ಗೊತ್ತು. ಇದರಲ್ಲಿ ಸುಳಿ ಭಾಗ ಕೊಳೆತು ವಾಸನೆ ಬರುತ್ತದೆ. ಈ ಶಿಲೀಂದ್ರದಿಂದ ವಾಸನೆ ರಹಿತವಾಗಿ ಸುಳಿ ಒಣಗುವುದೂ ಇದೆ. ಇದನ್ನೂ ಪತ್ತೆ ಹಚ್ಚಲಾಗಿದೆ ಎನ್ನುತ್ತಾರೆ CPCRI  ಕಾಸರಗೋಡಿನ ಹಿರಿಯ ರೋಗ ಶಾಸ್ತ್ರಜ್ಞ ಡಾ. ವಿನಾಯಕ ಹೆಗಡೆಯವರು.
 • ತೆಂಗಿನ ಮರದ ಜೀವ ಇರುವುದು ಅದರ ಎಲೆ ಅಥವಾ ಗರಿಗಳಲ್ಲಿ. ಈ ರೋಗ ಕಾರಕ ಶಿಲೀಂದ್ರ ಅಲ್ಲಿಗೇ ತನ್ನ ಹಾನಿಯನ್ನು ಉಂಟುಮಾಡುತ್ತದೆ. ಅಲ್ಲಿಂದ   ಹರಡುತ್ತಾ ಇದು ಕಾಯಿಗೆ ಹೂ ಗೊಂಚಲಿಗೆ  ಹಾನಿ ಮಾಡಿ ಬಹುಶಃ ಇದು ನಿಯಂತ್ರಣ ಕ್ರಮ ಕೈಗೊಳ್ಳದೆ ಇದ್ದರೆ ಇಡೀ ಮರವನ್ನೇ ಬಲಿತೆಗೆದುಕೊಳ್ಳಲೂ ಬಹುದು.

ತಜ್ಞರಲ್ಲಿಗೆ ಮಾದರಿ ಮತ್ತು ಫಲಿತಾಂಶ:

ಗರಿಯ ಅಂಗಾಂಶ ಸತ್ತು ಹೋಗಿರುತ್ತದೆ
ಗರಿಯ ಅಂಗಾಂಶ ಸತ್ತು ಹೋಗಿರುತ್ತದೆ
 • ತೆಂಗಿನ ಮರಕ್ಕೆ ಮಾರಣಾಂತಿಕವಾಗಿ ಹಾನಿ ಮಾಡುವ ಈ ಹೊಸ ರೋಗಕಾರಕ ಏನಿರಬಹುದು ಎಂಬ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಬಾಧಿತ ಕಾಯಿ, ಗರಿ, ಹೂ ಗೊಂಚಲು ಇತ್ಯಾದಿ ಎಲ್ಲಾ ಮಾದರಿಗಳನ್ನೂ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಗೆ CPCRI KASARAGODU ಒಯ್ಯಲಾಯಿತು.
 • ಸಂಸ್ಥೆಯ ಹಿರಿಯ ರೋಗ ಶಾಸ್ತ್ರಜ್ಞ ಡಾ. ವಿನಾಯಕ ಹೆಗಡೆಯವರು ಎಲ್ಲಾ ಮಾದರಿಗಳನ್ನು ಸೂಕ್ಷ್ಮ ದರ್ಶಕ ದ ಸಹಾಯದಿಂದ ಪರೀಕ್ಷೆಗೆ ಒಳಪಡಿಸಿದರು.
ಗರಿಗಳು ಜೋತು ಬೀಳುತ್ತದೆ
ಗರಿಗಳು ಜೋತು ಬೀಳುತ್ತದೆ
 • ಪರೀಕ್ಷೆಯಲ್ಲಿ ತಿಳಿದು ಬಂದಂತೆ ಈ ರೋಗಕ್ಕೆ ಕಾರಣ ಒಂದು ಶಿಲೀಂದ್ರ Lasiodiplodia ಜಾತಿಗೆ ಸೇರಿದ ಶಿಲೀಂದ್ರ.  ಇದು ಈ ಹಿಂದೆಯೇ ತಮಿಳುನಾಡಿನ ಪೊಲ್ಲಾಚಿ ಸುತ್ತಮುತ್ತ ಕೆಲವು ತೆಂಗಿನ ತೋಟಗಳಲ್ಲಿ ಇದನ್ನು ಗುರುತಿಸಲಾಗಿತ್ತು ಇದು ವಾತಾವರಣದ ಏರುಪೇರಿನಿಂದಾಗಿ ಈಗ ಮತ್ತೆ ಹೆಚ್ಚಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
 • ಈ ಶಿಲೀಂದ್ರ ಗಾಳಿಯ ಮೂಲಕ ಹರಡುವಂತದ್ದಾಗಿದ್ದು, ಮರದಿಂದ ಮರಕ್ಕೆ ಹಬ್ಬಲೂ ಬಹುದು.

ಪರಿಹಾರ ಕ್ರಮ:

ಎಳೆಯ ಸಸಿಗಳಲ್ಲಿ
ಎಳೆಯ ಸಸಿಗಳಲ್ಲಿ
 • ಮೊದಲನೆಯದಾಗಿ ಹಾನಿಗೊಳಗಾದ ಮರ/ ಸಸಿಯ ಎಲ್ಲಾ ಸೋಂಕಿತ ಭಾಗಗಳನ್ನು ಮರದಿಂದ ಪ್ರತ್ಯೇಕಿಸಬೇಕು.  Phytosanitation   
 • ಅದನ್ನು ತೆಗೆದು ಸ್ವಚ್ಚಮಾಡಿ ತೆಗೆದ ಭಾಗಗಳನ್ನು ದೂರದಲ್ಲಿ ಹಾಕಿ ಬೆಂಕಿ ಕೊಟ್ಟು ಸುಡಬೇಕು.
 • ಆಗ ಬಹುತೇಕ ಶಿಲೀಂದ್ರಗಳ ನಾಶ ಆಗುತ್ತದೆ.
 • ಆ ನಂತರ ಮರದ ಎಲೆ,  ಎಲೆ ದಂಟು ಕಾಂಡ ಎಲ್ಲದಕ್ಕೂ ತಾಗುವಂತೆ ಹೆಕ್ಸಾಕೊನೆಜ಼ಾಲ್, ಶಿಲೀಂದ್ರ ನಾಶಕವನ್ನು ಸಿಂಪಡಿಸಬೇಕು.
 • ಇದರಲ್ಲಿ  ಬಹುತೇಕ ಎಲ್ಲಾ ಶಿಲೀಂದ್ರಗಳು ಕಡಿಮೆಯಾಗುತ್ತದೆ.
 • ಒಂದು ವೇಳೆ ಇದಕ್ಕೆ ಬಗ್ಗದಿದ್ದ ಪಕ್ಷದಲ್ಲಿ ಪ್ರೊಪಿಕೊನೆಜ಼ಾಲ್ ಶಿಲೀಂದ್ರ ನಾಶಕವನ್ನು ಸಿಂಪರಣೆ ಮಾಡಬೇಕು.
ಎಳೆಯ ಸಸಿಗಳ ದಂಟಿನಲ್ಲಿ ಸೋಂಕು
ಎಳೆಯ ಸಸಿಗಳ ದಂಟಿನಲ್ಲಿ ಸೋಂಕು
 • ತೆಂಗಿನ ಮರದ ಆರೋಗ್ಯವಂತ ಬೇರಿನ ಮೂಲಕ ಶಿಲೀಂದ್ರ ನಾಶಕ ಉಣಿಸಬಹುದು.
 • ರೋಗ ಸೋಂಕು ತಗಲಿದ ಗರಿ, ಹೂ ಗೊಂಚಲು, ಕಾಯಿ ಇತ್ಯಾದಿಗಳನ್ನು ತೆಗೆಯದೆ ಯಾವ ಉಪಚಾರ ಮಾಡಿದರೂ ಪ್ರಯೋಜನ ಇಲ್ಲ.
 • ನಮ್ಮ ಹಿರಿಯರು ತೆಂಗಿನ ಮರದ ಶಿರಭಾಗವನ್ನು ಸ್ವಚ್ಚ ಮಾಡುತ್ತಿದ್ದರು.
 • ಇದು ಒಳ್ಳೆಯ ವಿಧಾನ. ತೆಂಗು ಇರಲಿ ಇನ್ಯಾವುದೇ ಬೆಳೆ ಇರಲಿ, ರೋಗ ನಿಯಂತ್ರಣ ಆಗಬೇಕಾದರೆ ಮೊದಲಾಗಿ ತಪ್ಪದೆ ಮಾಡಬೇಕಾದದ್ದು, ಸ್ವಚ್ಚತೆ.
 • ಬೇರೆ ಬೇರೆ ಕಡೆ ಬಾಧೆ ಇದ್ದರೆ ಗುರುತಿಸಿ ಎಲ್ಲರೂ ಪರಿಹಾರ ಕ್ರಮ ಕೈಗೊಳ್ಳಭೇಕು.

ತೆಂಗು ಮಾತ್ರವಲ್ಲ ಅಡಿಕೆಗೂ ಇದು ತೊಂದರೆ:

ಅಡಿಕೆಯ ಮೇಲ್ಮೈಯಲ್ಲಿ ಈ ರೀತಿ ಆಗುತ್ತದೆ
ಅಡಿಕೆಯ ಮೇಲ್ಮೈಯಲ್ಲಿ ಈ ರೀತಿ ಆಗುತ್ತದೆ
 • ಇತ್ತೀಚೆಗೆ ಚಿತ್ರದಲ್ಲಿ ಕಾಣಿಸಿದಂತಹ ಅಡಿಕೆಗಳು ಅಪಕ್ವವಾಗಿ ಉದುರುವಿಕೆ  ಬಹುತೇಕ ಎಲ್ಲಾ ತೋಟಗಾರರಲ್ಲೂ ಇದೆ. 
 • ಗರಿ ಚುಕ್ಕೆ ರೋಗ ಇದೆ. ಹಾಗೆಯೇ ಅಡಿಕೆ ಮರಗಳು/ ಸಸಿಗಳು ಬೇರಿಗೂ ಸುಳಿಗೂ ಯಾವುದೇ ತೊಂದರೆ ಆಗದೆ ಒಣಗುವುದು ಮುಂತಾದ ಸಮಸ್ಯೆಗಳು ಹೆಚ್ಚಾಗುತ್ತಿವೆ.
 • ಇದಕ್ಕೂ ಇದೇ ಶೀಲೀಂದ್ರ ಕಾರಣ.
 • ಅಡಿಕೆ ಮರದ ಸಿಂಗಾರ ಒಣಗುವ ಸಮಸ್ಯೆಯಲ್ಲಿ ಈ ರೋಗಕಾರಕಗಳೂ ಇರುವ ಸಾಧ್ಯತೆ ಇದೆ. 
 • ಈ ಕುರಿತಂತೆ ಮಾದರಿಗಳನ್ನು ವಿಶ್ಲೇಶಣೆಗೆ ಕಳುಹಿಸಲಾಗಿದ್ದು, ವರದಿಗೆ ಕಾಯಲಾಗುತ್ತದೆ. ಇದನ್ನು ಎಲ್ಲಾ ಬೆಳೆಗಾರರೂ ಗಮನಿಸಬೇಕಾಗಿದೆ.

Lasiodiplodia ಜಾತಿಯ ಶಿಲೀಂದ್ರದಲ್ಲಿ ಬೇರೆ ಬೇರೆ ವರ್ಗಗಳಿದ್ದು, ಅವು ಕೊಕ್ಕೋ, ಗೇರು ಹಾಗೆಯೇ ಬೇರೆ ಬೇರೆ ಬೆಳೆಗಳಿಗೆ ಹಾನಿ ಮಾಡುತ್ತವೆ. ಈ ರೋಗಕಾರಕ ಶಿಲೀಂದ್ರವನ್ನು ಇತ್ತೀಚೆಗೆ (2017) ಪತ್ತೆ ಹಚ್ಚಲಾಗಿದ್ದು, ಇದರ ಎಲ್ಲಾ ಕಾರ್ಯಚಟುವಟಿಕೆಗಳ ಅಧ್ಯಯನ ನಡೆಯುತ್ತಿದೆ. ಗೇರು ಮರದಲ್ಲಿ ಮೇಣ ಸ್ರಾವಕ್ಕೂ ಈ ಶಿಲೀಂದ್ರ ಕಾರಣವಾಗಿರುತ್ತದೆ. ಬ್ರೆಝಿಲ್ ನಲ್ಲಿ ತೆಂಗಿನ  Steem end rot ಗೆ Lasiodiplodia theobromae ಎಂಬ ಶಿಲೀಂದ್ರ ಕಾರಣ ಎಂದು ಪತ್ತೆ ಮಾಡಲಾಗಿದೆ. ನಂತರ ಅದರಲ್ಲಿ ಬೇರೆ ಬೇರೆ ವರ್ಗಗಳನ್ನು  ಗುರುತಿಸಲಾಗಿದೆ.

ಅಡಿಕೆ ತೆಂಗು ಬೆಳೆಗಾರರು ಇನ್ನು ಬಹಳ ಜಾಗರೂಕತೆಯಲ್ಲಿ ಇರಬೇಕು. ಮುಂದಿನ ದಿನಗಳಲ್ಲಿ ವಾತಾವರಣದ ಏರುಪೇರು ಹಲವಾರು ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಧಿಕ ಇಳುವರಿಯ , ಹೊಸ ಹೊಸ ತಳಿಗಳನ್ನು ಬೆಳೆಸುವ ಬದಲು ಸ್ಥಳೀಯ ತಳಿಗಳಿಗೆ ಆದ್ಯತೆ ನೀಡುವುದು ಉತ್ತಮ. ಸ್ಥಳೀಯ ತಳಿಗಳು  ಸಾಕಷ್ಟು ರೋಗ ಕೀಟಗಳಿಗೆ ನೈಸರ್ಗಿಕವಾಗಿ ನಿರೋಧಕ ಶಕ್ತಿಯನ್ನು ಪಡೆದಿರುತ್ತವೆ.

2 thoughts on “ತೆಂಗು- ಅಡಿಕೆ ಮರಗಳಿಗೆ ಬಂದಿದೆ ಹೊಸ ಮಾರಣಾಂತಿಕ ಸಾಂಕ್ರಾಮಿಕ ರೋಗ.

 1. ನಮಸ್ತೆ ಸರ್/ಮೇಡಂ ನನ್ನ ಹೆಸರು ರಜತ್.m

  ನಾನು ಅರಳಗುಪ್ಪೆ ತಿಪಟೂರು ತಾಲೂಕು ತುಮಕೂರು ಜಿರ್ಲೆ ನಿವಾಸಿ ನಮ್ಮ ತೋಟದಲ್ಲಿ ಒಂದು ತೆಂಗಿನ ಮರ ಕೆ ಕಾಯೆಲೆ ಆಗಿದು ಆ ಮರದ ಕಾಯಿ ಎಲ್ಲ ಕೆಟ್ಟು ಹೋಗಿದೆ ಹಾಗೂ ಈ ನಡುವೆ ಆ ಮರ ದಲ್ಲಿ ಕಾಯಿ ಕೂಡ ಇಲ್ಲ ಮರ ಪೂರ್ತಿ ಡಲ್ ಆಗಿದೆ ಇದಕೆ ಏನಾದ್ರು ಮೆಡಿಸಿನ್ ಇದಿಯ

Leave a Reply

Your email address will not be published. Required fields are marked *

error: Content is protected !!