ಹಿಂದೆ ಬೇಕಾಬಿಟ್ಟಿಯಾಗಿ ಸಿಗುತ್ತಿದ್ದ ಕರಂಡೆ ಕಾಯಿ/ ಹಣ್ಣುಗ ಳು ಈಗ ಮಾಯವಾಗಿವೆ. ಹಿಂದೆ ಕರಂಡೆ ಬೇಕಿದ್ದರೆ ಒಂದು ತಾಸು ಗುಡ್ಡಕ್ಕೆ ಹೋದರೆ ಅಲ್ಲಿ ಬೇಕಾದರೂ ಕರಂಡೆ ಕಾಯಿ ತರುತ್ತಿದ್ದರು. ಈಗ ಹಳ್ಳಿಯ ಜನ ಪೇಟೆಗೆ ಕರಂಡೆ ಕಾಯಿ ತರಲು ಹೋಗುವಂತಾಗಿದೆ. ಈಗ ಯಾವ ಗುಡ್ದದಲ್ಲೂ ಕರಂಡೆ ಗಿಡಗಳೇ ಕಾಣಿಸುತ್ತಿಲ್ಲ. ಕರಂಡೆಯ ಉಪ್ಪಿನಕಾಯಿ ಧೀರ್ಘ ಬಾಳ್ವಿಕೆ ಬರುವಂತದ್ದು.
ಕರಂಡೆ ಹಿನ್ನೆಲೆ:
- ಕರಂಡೆ (Karronda) ಸಸ್ಯ ಗುಡ್ಡದಲ್ಲಿ ನೀರಿಲ್ಲದೆ ಬೆಳೆಯುವ ಪೊದೆ.
- ಇದು ಬಹುವಾರ್ಷಿಕ ಸಸ್ಯವಾಗಿದ್ದು, ಕುರುಚಲು ಗಿಡಗಳು ಬೆಳೆಯುವ ಗುಡ್ದದಲ್ಲಿ ಮುಳ್ಳಿನ ಸಸ್ಯವಾಗಿ ವರ್ಷಾನುಗಟ್ಟಲೆ ಬೆಳೆಯುತ್ತದೆ.
- ಕೆಲವರು ಇದನ್ನು ಬೇಲಿ ಸಸ್ಯವಾಗಿ ಉಳಿಸಿಕೊಳ್ಳುವವರಿದ್ದರು.
- ಉಳಿದಂತೆ ಗುಡ್ದದಲ್ಲಿ ಅದರಷ್ಟಕ್ಕೇ ಬೆಳೆಯುತ್ತಿತ್ತು.
- ಕರಂಡೆ ಸಸ್ಯವು ಬೆಳೆದಂತೆ ಕಾಯಿ ಕೊಡುತ್ತದೆ.
- ಆ ಕಾಯಿಯನ್ನು ಉಪ್ಪಿನಕಾಯಿ ಮಾಡುತ್ತಾರೆ. ಅಲ್ಲದೇ ಅದನ್ನು ತಂಬುಳಿ (ಹಸಿ ಅಡಿಗೆ), ಚಟ್ನಿ, ಕಡುಗಾಯಿ ಮಾಡುವುದೂ ಇದೆ.
- ಮಾವಿನ ಕಾಯಿಯ ಉಪ್ಪಿನಕಾಯಿಯ ನಂತರದ ಸ್ಥಾನ ಕರಂಡೆ ಕಾಯಿಯದ್ದು.
- ಕರಂಡೆಯ ಉಪ್ಪಿನಕಾಯಿ ಸುಮಾರು ನಾಲ್ಕೈದು ವರ್ಷವಾದರೂ ಹಾಳಾಗದು.
- ಕಾಯಿ ಕೊಯ್ಯದೇ ಗಿಡದಲೇ ಉಳಿದವು, ಬೆಳೆದು ಹಣ್ಣಾಗಿ ನೇರಳೆ ಬಣ್ಣದ ಹುಳಿ–ಸಿಹಿ ಹಣ್ಣು ಪೋಕರಿ ಮಕ್ಕಳಿಗೆ ತಿನ್ನಲು ಸಿಗುತ್ತಿತ್ತು.
- ಕರಂಡೆ ಸಸ್ಯಗಳೇ ಇಲ್ಲದಾಗಿ ಅದಕ್ಕೆ ಯಾವ ಸೌಭಾಗ್ಯವಿದ್ದರೂ ಅದು ನಿಶ್ಪ್ರಯೋಜಕವಾಗಿದೆ.
- ಈಗ ಕರಂಡೆ ಕಾಯಿಯನ್ನು ಹುಡುಕುತ್ತಾ ಯಾವ ಗುಡ್ದ ಅಲೆದರೂ ಪ್ರಯೋಜನವಿಲ್ಲ.
- ಕರಂಡೆ ಬೆಳೆಯಲ್ಪಡುತ್ತಿದ್ದ ಗುಡ್ಡಗಳಲ್ಲಿ ಅಗೆಯುವ ಯಂತ್ರಗಳು ಕೆಲಸ ಮಾಡಿ ನೆಲವನ್ನೇ ಅಡಿ ಮೇಲು ಮಾಡಿವೆ.
- ಈ ಅಗೆತದ ರಭಸಕ್ಕೆ ಸಿಕ್ಕಿ ಕುರುಚಲು ಕರಂಡೆ ಸಸ್ಯಗಳು ನಶಿಸಿಯೇ ಹೋದವು.
- ಈಗಿನ ಹೊಸ ತಲೆಮಾರಿಗೆ ಕರಂಡೆ ಕುರಿತಾಗಿ ಹೇಳುವಷ್ಟೂ ಅವಶೇಷ ಉಳಿಯದಾಯಿತು.
ಮೂಲ -ತಳಿ:
- ಕರ್ನಾಟಕದ ಕರಾವಳಿಯ ಉದ್ದಕೂ, ಮಲೆನಾಡಿನ ಕೆಲವು ಭಾಗಗಳಲ್ಲೂ,
- ಮಹಾರಾಷ್ಟ್ರದ ಕೊಂಕಣ ತೀರದಲ್ಲಿ , ಬಿಹಾರ , ಪಶ್ಚಿಮ ಬಂಗಾಲ, ಉತ್ತರ ಪ್ರದೇಶ ಮುಂತಾದ ಕಡೆಗಳಲ್ಲಿಯೂ ಬೇಲಿ ಸಸ್ಯವಾಗಿ ಕಂಡು ಬರುತ್ತದೆ.
- ಕರಂಡೆಗೆ ಒಂದೊಂದೆಡೆ ಒಂದೊಂದು ಹೆಸರು. ಮಲೆನಾಡಿನಲ್ಲಿ ಇದನ್ನು ಕವಳೀಕಾಯಿ ಎನ್ನುತ್ತಾರೆ.
- ಈ ಸಸ್ಯದ ವೈಜ್ಞಾನಿಕ ಹೆಸರು (Carissa caranda) ನಿತ್ಯ ಹಸಿರಾಗಿರುವ ಈ ಸಸ್ಯದ ಕಾಂಡ , ಗೆಲ್ಲುಗಳಲ್ಲಿ ಮುಳ್ಳುಗಳಿವೆ.
- ಮಲ್ಲಿಗೆಯಂತಹ ಹೂವಾಗುತ್ತದೆ. ಫೆಬ್ರವರಿಯಿಂದ ಮೇ ತನಕ ಕಾಯಿಗಳಾಗುತ್ತವೆ. ಎಲೆ, ಕಾಯಿ, ಚಿಗುರು ಚಿವುಟಿದಾಗ ಅಂಟು ಮೇಣ ಸ್ರವಿಸುತ್ತದೆ.
- ಇದನ್ನು ಯಾರೂ ವ್ಯವಸಾಯ ಮಾಡಿ ಬೆಳೆಸಿರುವುದು ರೂಢಿಯಲ್ಲಿಲ್ಲ. ಉತ್ತರ ಪ್ರದೇಶದ ವಾರಣಾಶಿ ಸುತ್ತಮುತ್ತ ಇದರ ವ್ಯವಸಾಯ ಮಾಡಲಾಗುತ್ತಿದೆ ಎಂಬುದಾಗಿ ಉಲ್ಲೇಖವಿದೆ.
- ಇದರ ಬೇಸಾಯ ಬೇಸಾಯ ಕ್ರಮವನ್ನು ಪುಸ್ತಕದಲ್ಲಿ ತಿಳಿಸಲಾಗಿದೆ. ಇದರ ಕಾಯಿಯು ಹುಳಿ , ಒಗರು ರುಚಿಯದ್ದಾಗಿದ್ದು, ಕಬ್ಬಿಣಾಂಶ ಮತ್ತು ವಿಟಮಿನ್ “ಎ” ಇರುತ್ತದೆ.
- ಇದು ರಕ್ತ ಹೀನತೆಯನ್ನು ಸರಿಪಡಿಸಲು ಹಾಗೂ ವಸಡಿನ ರೋಗ ತಡೆಯುವ ಶಕ್ತಿಯನ್ನು ಹೊಂದಿದೆ.
ಎಲ್ಲಿ ಬೆಳೆಯುತ್ತದೆ:
- ಕರಂಡೆ ಕಾಯಿ ಎಂಥ: ಗುಡ್ದಗಾಡಿನಲ್ಲೂ, ಎಂತಹ ಮಣ್ಣಿನಲ್ಲೂ ಬೆಳೆಯಲ್ಪಡುತ್ತದೆ.
- ಕರಂಡೆ ಕಾಯಿಯ ಉಪ್ಪಿನಕಾಯಿ ಧೀರ್ಘ ಬಾಳ್ವಿಕೆ ಬರುವಂತದ್ದು. ಹಿಂದೆ ಉಪ್ಪಿನಕಾಯಿಯಲ್ಲಿ ವೈವಿಧ್ಯತೆಗಳು ಕಡಿಮೆಯಿದ್ದವು.
- ಉಪ್ಪಿನಕಾಯಿ ಗೆ ಮಾವೇ ಪ್ರಧಾನ. ಉಳಿದವುಗಳು ನಂತರ. ಆದರೆ ಈಗ ಹಾಗಿಲ್ಲ.
- ವೈವಿಧ್ಯತೆಯೇ ಪ್ರಧಾನ. ಕರಂಡೆಯ ಉಪ್ಪಿನಕಾಯಿಗೆ ಭಾರೀ ಬೇಡಿಕೆ. ಆದರೆ ಕರಂಡೆಯೇ ಇಲ್ಲ.
- ಅಳಿಯುತ್ತಿರುವ ಕಾಡು ಕರಂಡೆಯನ್ನು ಉಳಿಸಿ ಸುಧಾರಿಸುವ ಪ್ರಯತ್ನಕ್ಕೆ ಕೆಲವು ಸಂಶೋಧನಾ ಕೇಂದ್ರಗಳು ಮುಂದಡಿ ಇಟ್ಟಿವೆ.
- ಅಂಥಃ ಸಂಶೋಧನಾ ಕೇಂದ್ರಗಳಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ವೆಂಗುರ್ಲಾ ಪ್ರಾದೇಶಿಕ ಹಣ್ಣು ಸಂಶೋಧನಾ ಕೇಂದ್ರವೂ ಒಂದು.
- ಇಲ್ಲಿ ಕೊಂಕಣ್ ಕರಂಡಾ (KONKAN BOLD) ಎಂಬ ಸುಧಾರಿತ ಕರಂಡೆ ತಳಿಯನ್ನು ಅಭಿವೃದ್ದಿ ಮಾಡಿದ್ದಾರೆ.
- ಇದು ಗಾತ್ರದಲ್ಲಿ ಸ್ವಲ್ಪ ದೊಡ್ಡದಿದ್ದು, ರುಚಿಯಾಗಿದೆ. ಇದನ್ನು ಅವರು ಗೂಟಿ ಕಸಿ ಮಾಡುವ ಮೂಲಕ ಸಸ್ಯಾಭಿವೃದ್ದಿ ಮಾಡಿ ಒದಗಿಸುತ್ತಾರೆ.
- ಅದೇ ರೀತಿಯಲ್ಲಿ ಉತ್ತರ ಪ್ರದೇಶದ ನರೇಂದ್ರ ದೇವ ತಾಂತ್ರಿಕ ವಿಶ್ವ ವಿಧ್ಯಾನಿಲಯದಲ್ಲಿ ಮರೋನ್ (Maron) ಎಂಬ ಹೆಸರಿನ 13,14, 12,3 ಎಂಬ ತಳಿಯನ್ನು ಬಿಡುಗಡೆ ಮಾಡಿದ್ದಾರೆ.
- ಇದರಲ್ಲಿ ಒಂದು ನಟಾಲ್ ಪ್ಲಮ್ (Natal plum (Carissa grandiflora) ಹೆಸರಿನ ಆಫ್ರಿಕಾ ದೇಶದ ತಳಿಯೂ ಇದೆ.
ಸಸ್ಯಾಭಿವೃದ್ದಿ:
- ಕರಂಡೆಯನ್ನು ಬೀಜಗಳ ಮೂಲಕ ಸಸ್ಯಾಭಿವೃದ್ದಿ ಮಾಡಬಹುದು. ಗೂಟಿ ಕಸಿಯ ಮೂಲಕವೂ ಸಸ್ಯಾಭಿವೃದ್ದಿ ಮಾಡಬಹುದು.
- ಕರಂಡೆಯ ಕಾಯಿ ಚೆನ್ನಾಗಿ ಹಣ್ಣಾದ ಮೇಲೆ ಅದರೊಳಗಿನ ಬೀಜವನ್ನು ತಾಜ ಸ್ಥಿತಿಯಲ್ಲೇ ಬೇರ್ಪಡಿಸಿ ಅದನ್ನು ತೇವಾಂಶ ಇರುವ ಮರಳಿನ ರಾಶಿ ಇಲ್ಲವೇ ಪಾಲಿಥೀನ ಚೀಲಕ್ಕೆ ಹಾಕಿ ಇಟ್ಟರೆ ಅದು ಮೊಳಕೆಯೊಡೆಯುತ್ತದೆ.
- ಸಸಿಯ ಬೆಳವಣಿಗೆ ನಿಧಾನವಾದ ಕಾರಣ ಒಂದು ವರ್ಷ ಬೆಳೆಸಿ ನಂತರ ನಾಟಿ ಮಾಡಬೇಕು.
- ಕಸಿ ಗಿಡಗಳಿಗೆ ಕನಿಷ್ಟ 3 ತಿಂಗಳಾದರೂ ಪ್ರಾಯವಾಗಿರಬೇಕು.
- ಸಸಿ ನೆಟ್ಟು ಮೂರನೇ ವರ್ಷಕ್ಕೇ ಫಸಲಿಗಾರಂಭವಾಗುತ್ತದೆ.
- ಚೆನ್ನಾಗಿ ಬೆಳೆದ ಸಸ್ಯವೊಂದರಲ್ಲಿ 1 ಕಿಲೋ ತನಕವೂ ಕಾಯಿ ದೊರೆಯಬಲ್ಲುದು.
- ಇಂದು ಕರಂಡೆ ಕಾಯಿ ಕಿಲೋಗೆ 50 ರೂ. ಗೂ ಹೆಚ್ಚಿನ ದರವಿದೆ.
ಕರಂಡೆ ಸಸ್ಯಗಳು ಸ್ವಾಭಾವಿಕವಾಗಿ ಪುನರುತ್ಪತ್ತಿಯಾಗುತ್ತಾ ಬದುಕುತ್ತಿದ್ದ ಚಕ್ರ ನಿಂತಿದೆ. ಇನ್ನು ಅಳಿದುಳಿದುದನ್ನು ಹುಡುಕಿ ನೆಟ್ಟು ಬೆಳೆಸುವುದೇ ಆಯ್ಕೆ.
ಕರಂಡೆಗೆ ಒಳ್ಳೆಯ ಬೇಡಿಕೆ ಇದೆ. ಸ್ವ– ಬಳಕೆಗೆ ಮತ್ತು , ಮಾರಾಟಕ್ಕೆರಡಕ್ಕೂ ಬೇಕು. ಆದ ಕಾರಣ ಸುಧಾರಿತ ತಳಿ , ಇಲ್ಲವೇ ನಾಟೀ ತಳಿಯನ್ನು ಹುಡುಕಿ ತಂದು ನೆಟ್ಟು ಬೆಳೆಸೋಣ.