ಕೆಂಪಡಿಕೆ ಮಾಡಲು ಸೂಕ್ತವಾದ ವಿವಿಧ ತಳಿಗಳು.

by | May 19, 2022 | Krushi Abhivruddi | 2 comments

ಅಡಿಕೆ ಬೆಳೆಯುವ ಕೆಲವು ಪ್ರದೇಶಗಳಲ್ಲಿ ಬೇಯಿಸಿ ಕೆಂಪಡಿಕೆ ಮಾಡುವುದು ಅಲ್ಲಿನ ಪರಂಪರಾಗತ ಕ್ರಮ. ಬೇಯಿಸಲು ಅದಕ್ಕೆಂದೇ ಸೂಕ್ತವಾದ ತಳಿಗಳನ್ನು ಮಾತ್ರ ಬೆಳೆಸಬೇಕು. ಕೆಂಪಡಿಕೆ  ಮಾಡಲು ಹೊಂದುವ ಅಡಿಕೆ ಬಿಸಿಲಿನಲ್ಲಿ ಒಣಗಿಸಿ ಮಾಡುವ ಚಾಲಿ ಅಡಿಕೆಗೆ ಸೂಕ್ತವಲ್ಲ. ಚಾಲಿ ಮಾಡುವ ಅಡಿಕೆ ಕೆಂಪಡಿಕೆ ಮಾಡಲೂ ಸೂಕ್ತವಲ್ಲ. ಆಯಾಯಾ ಪ್ರದೇಶಕ್ಕೆ ಹೊಂದಿಕೆಯಾಗುವ ರೂಡಿಯ ತಳಿಗಳನ್ನು ಬೆಳೆಸುವುದು ಎಲ್ಲದಕ್ಕಿಂತ ಉತ್ತಮ. ಕರಾವಳಿಯ ಪ್ರದೇಶವನ್ನು  ಹೊರತಾಗಿಸಿ ರಾಜ್ಯದ ಉಳಿದ 6  ಜಿಲ್ಲೆಗಳಲ್ಲಿ ಅಡಿಕೆಯನ್ನು ಬೇಯಿಸುತ್ತಾರೆ. ಇದನ್ನು ಕೆಂಪಡಿಕೆ ಎನ್ನುತ್ತಾರೆ. ಈ ಉದ್ದೇಶಕ್ಕೆ  ಎಲ್ಲಾ ಅಡಿಕೆ ತಳಿಗಳೂ  ಹೊಂದಿಕೆಯಾಗುವುದಿಲ್ಲ. ಸ್ಥಳೀಯ ತಳಿಗಳೇ ಅದಕ್ಕೆ  ಸೂಕ್ತ.

  • ಸ್ಥಳೀಯ ತಳಿಗಳಲ್ಲಿ ಪ್ರಾದೇಶಿಕವಾಗಿ ಕೆಲವು ತಳಿಗಳನ್ನು ಆಯ್ಕೆ  ಮಾಡಲಾಗಿದೆ.
  • ಇವು ಉಳಿದ ತಳಿಗಳಿಗಿಂತ ಹೆಚ್ಚು ಇಳುವರಿ ಕೊಡುತ್ತವೆ.
  • ರೈತರು ಇಂಥಹ ತಳಿಯನ್ನು ಮಾತ್ರ ಆಯ್ಕೆ  ಮಾಡಬೇಕು.
  • ವಾತಾವರಣದ ಸ್ಥಿತಿಗತಿಯಲ್ಲಿ ಹೋಲಿಕೆ ಇರುವಂತಹ ಪ್ರದೇಶಗಳ ತಳಿ ಆಯ್ಕೆ ಸೂಕ್ತ.

ತಳಿಗಳು:

ಮುಖ್ಯವಾಗಿ ರೈತರು ಗಮನಿಸಬೇಕಾದ್ದು, ಸ್ಥಳೀಯ ಹವಾಮಾನದಲ್ಲಿ ಯಾವ ತಳಿ ಉತ್ತಮ ಇಳುವರಿ ಕೊಡುತ್ತದೆ ಎಂಬುದನ್ನು. ಆ ಆಧಾರದಲ್ಲಿ ಉದ್ದೇಶಕ್ಕನುಗುಣವಾಗಿ  ತಳಿ ಆಯ್ಕೆ  ಮಾಡಬೇಕು.

ಸಿರ್ಸಿ ಅರೆಕಾ ಸೆಲೆಕ್ಷನ್: SAS-1

  • ಶಿರಸಿ ಭಾಗದ ಅಡಿಕೆಯ ಗಾತ್ರ ಉಳಿದ ಮಲೆನಾಡಿನ ಅಡಿಕೆಗಿಂತ ಸ್ವಲ್ಪ ದೊಡ್ಡದಿರುತ್ತದೆ.
  • ಇದು ಚಾಲಿ ಹಾಗೂ ಕೆಂಪು ಮಾಡಲು ಹೊಂದಿಕೆಯಾಗುವ ತಳಿ.
  • ಉತ್ತಮ ಇಳುವರಿ ಕೊಡಬಲ್ಲ ಸಾಮರ್ಥ್ಯ ಹೊಂದಿದೆ.
  • ಶಿರಸಿ ಸುತ್ತಮುತ್ತ ಬೆಳೆಸಲ್ಪಡುವ ಬಹುತೇಕ ತಳಿಗಳು ಇವೇ ಆಗಿದ್ದು, ಒಂದು ಗೊನೆಯಲ್ಲಿ 300 ಕ್ಕೂ ಅಧಿಕ ಕಾಯಿಗಳಿರುತ್ತವೆ.
  • ಉತ್ತಮ ಆರೈಕೆಯಲ್ಲಿ ಮರವೊಂದರಲ್ಲಿ ಮೂರು ಗೊನೆಗೂ ಹೆಚ್ಚು ಅಡಿಕೆ ಆಗುತ್ತದೆ.
  • ಈ ತಳಿಯ ಇಳುವರಿ ಸಾಮರ್ಥ್ಯ ಮರಕ್ಕೆ 5 ಕಿಲೋ ಚಾಲಿ ಅಡಿಕೆ. ಎಕ್ರೆಗೆ  28 ಕ್ವಿಂಟಾಲು.

ಸಿರ್ಸಿ ಅರೆಕಾ ಸೆಲೆಕ್ಷನ್: SAS-1

ಸಿರಸಿ ಸುತ್ತಮುತ್ತ ಬೆಳೆಸಲ್ಪಡುತ್ತಿದ್ದ ತಳಿಯಲ್ಲಿ ಪ್ರತೀ ವರ್ಷ ಉತ್ತಮ ಇಳುವರಿ ಕೊಡಬಲ್ಲ ಸಾಮಾರ್ಥ್ಯ ಹೊಂದಿದ ತಳಿಮೂಲವನ್ನು ಆಯ್ಕೆ ಮಾಡಿ ಅದಕ್ಕೆ ಈ ನಾಮಕರಣ ಮಾಡಲಾಗಿದೆ. ಇದು ಕುಮಟಾ, ಹೊನ್ನಾವರ, ಸಿದ್ದಾಪುರ , ಯಲ್ಲಾಪುರದಂತಹ ಭೂ ಭಾಗಕ್ಕೆ ಹೊಂದಿಕೆಯಾಗುವ ತಳಿಯಾಗಿದೆ.

  • ತಳಿ ಗುಣದಲ್ಲೇ ಇದಕ್ಕೆ ವೈಶಿಷ್ಟ್ಯತೆ ಇರುವ ಕಾರಣ ಇದು ಪ್ರತಿಕೂಲ ಹವಾಮಾನದಲ್ಲೂ ಉತ್ತಮ ಕ್ಷಮತೆಯನ್ನು ತೋರಿಸಬಲ್ಲದು.
  • ಈ ತಳಿಯ ಗರಿಗಳು ಕಾಂಡಕ್ಕೆ  ಹೆಚ್ಚು ಜೋತು ಬೀಳುವುದಿಲ್ಲ.
  • ಅಧಿಕ ಪ್ರಮಾಣದಲ್ಲಿ ಹೆಣ್ಣು ಹೂವುಗಳು ಇರುವ ಕಾರಣ ಅಧಿಕ ಇಳುವರಿ ಕೊಡುತ್ತದೆ.
  • ಗೊನೆಯಲ್ಲಿ ಕಾಯಿಗಳು ಒತ್ತೊತ್ತಾಗಿರುತ್ತವೆ.
  • 1996 ರ ಸುಮಾರಿಗೆ ಇದನ್ನು ಬಿಡುಗಡೆಗೊಳಿಸಲಾಗಿದ್ದು ಇತ್ತೀಚೆಗೆ ಸಿರ್ಸಿ ಸೆಲೆಕ್ಷನ್ 2 ಮತ್ತು 3 ತಳಿಯನ್ನು ಬಿಡುಗಡೆ ಮಾಡಿದ್ದಾರೆ.

ಸಾಗರ (ಕ್ಯಾಸನೂರು ಸೀಮೆ) ಅಡಿಕೆ:

  • ಇದು ಯಾವುದೇ ಅಭಿವೃದ್ದಿಪಡಿಸಿದ ತಳಿ ಅಲ್ಲ.
  • ನೂರಾರು ವರ್ಷಗಳಿಂದ ಸಾಗರದ ಕೆಳದಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಸಲ್ಪಡುತ್ತಿದ್ದ ತಳಿ.
  • ವಿಶೇಷ ಎಂದರೆ ಈ ತಳಿಯ ಅಡಿಕೆ ಬೆಳೆಸುವ ರೈತರು ಅಡಿಕೆ ತೋಟದ ಆರೈಕೆಯನ್ನು ವಿಶೇಷವಾಗಿ  ಮಾಡದಿದ್ದರೂ ಸಹ ಸರಾಸರಿ ಎಕ್ರೆಗೆ 20 ಕ್ವಿಂಟಾಲು ಇಳುವರಿ ಪಡೆಯುತ್ತಾರೆ.
  • ಇದು ಕೆಂಪು ಹಾಗೂ ಚಾಲಿ ಎರಡಕ್ಕೂ ಸೂಕ್ತವಾದ ಅಡಿಕೆ.
  • ಇದು ಸುಮಾರಾಗಿ ಸಾಗರ, ರಿಪ್ಪನ್ ಪೇಟೆ, ಆನವಟ್ಟಿ, ಸಿದ್ದಾಪುರ, ತುಮಕೂರು, ಸೊರಬ ಮುಂತಾದ ಕಡೆಗಳಿಗೆ ಹೊಂದಿಕೆಯಾಗುವ ತಳಿ.
  • ನೆಟ್ಟು 4 ವರ್ಷಕ್ಕೆ ಇಳುವರಿ ಕೊಡಲು ಪ್ರಾರಂಭವಾಗುತ್ತದೆ.
  • ಅಂತರ ಗಿಣ್ಣುಗಳು ಹತ್ತಿರವಾಗಿದ್ದು ಮರ ಗಟ್ಟಿ ಮುಟ್ಟಾಗಿರುತ್ತದೆ.
  • ಉತ್ತಮ ಆರೈಕೆಯಲ್ಲಿ ಮರವೊಂದರಿಂದ 3- 4 ಗೊನೆ ಅಡಿಕೆ ಪಡೆಯಬಹುದು.
ಸಾಗರ (ಕ್ಯಾಸನೂರು ಸೀಮೆ) ಅಡಿಕೆ

ಸಾಗರ (ಕ್ಯಾಸನೂರು ಸೀಮೆ) ಅಡಿಕೆ

  • ಅಡಿಕೆ ಗೊನೆಯಲ್ಲಿ ಸರಾಸರಿ 300 ಕ್ಕೂ ಹೆಚ್ಚು ಅಡಿಕೆ ಇರುತ್ತದೆ.
  • ಇದು ಖುಷ್ಕಿ ಭೂಮಿಗೂ ಬಾಗಾಯ್ತು ಭೂಮಿಗೂ ಹೊಂದಿಕೆಯಾಗುವ ತಳಿಯಾಗಿದೆ.
  • ಗರಿಗಳು ಛತ್ರಿಯಾಕಾರದಲ್ಲಿ ಬಿಡುತ್ತದೆ.
  • ವರ್ಷವೂ ಏಕ ಪ್ರಕಾರ ಇಳುವರಿ ನೀಡುತ್ತದೆ.
  • ಹೆಣ್ಣು ಹೂವುಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಇಳುವರಿ ಹೆಚ್ಚು ಬರುತ್ತದೆ.
  • ಹೂ ಗೊಂಚಲಿನ ಗಾತ್ರ ಸ್ವಲ್ಪ ಸಣ್ಣದಾಗಿರುವ ಕಾರಣ ಗೊನೆಯಲ್ಲಿ ಕಾಯಿಗಳು ಒತ್ತೊತ್ತಾಗಿರುತ್ತವೆ.

ಹೊಸನಗರ ತಳಿ:

  •  ಮಳೆಗಾಲದಲ್ಲಿ ಉತ್ತಮ ಮಳೆ . ಚಳಿಗಾಲದಲ್ಲಿ ಭಾರೀ ಚಳಿ.
  • ಇಲ್ಲಿ ಹೆಚ್ಚಿನ ರೈತರು ಅಡಿಕೆ ಬೆಳೆಸುತ್ತಾರೆ.
  • ಇಲ್ಲಿಯ ಸ್ಥಳೀಯ ತಳಿಗೆ ಹೊಸನಗರ ಅಡಿಕೆ ಎಂಬ ಹೆಸರು.
  • ಇಲ್ಲಿಯ ಅಧಿಕ ಮಳೆಗೆ ಈ ತಳಿ ಹೊಂದಿಕೆಯಾಗುತ್ತದೆ.
  • ಇದನ್ನು ಹೊಸನಗರ, ನಿಟ್ಟೂರು, ನಗರ, ಆಗುಂಬೆ ತನಕ ಬೆಳೆಸಬಹುದು.
  • ಸಾಧಾರಣ ಆರೈಕೆಯಲ್ಲಿ ಈ ತಳಿ ಎಕ್ರೆಗೆ 15-18 ಕ್ವಿಂಟಾಲು ಇಳುವರಿ ಕೊಡಬಲ್ಲುದು.
  • ಉತ್ತಮ ಆರೈಕೆಯಲ್ಲಿ  20 ಕ್ವಿಂಟಾಲಿಗೂ ಅಧಿಕ ಇಳುವರಿ ಪಡೆಯುವವರಿದ್ದಾರೆ.
  • ಇದು ಸ್ವಲ್ಪ ಸಣ್ಣ ಗಾತ್ರದ ಅಡಿಕೆಯಾಗಿದ್ದು ಕೆಂಪಡಿಕೆಗೆ ಹೊಂದಿಕೆಯಾಗುವ ತಳಿ.
ಹೊಸನಗರ ತಳಿ

ಹೊಸನಗರ ತಳಿ

ತೀರ್ಥಹಳ್ಳಿ ತಳಿ:

  • ಉತ್ತಮ ಇಳುವರಿ ಕೊಡಬಲ್ಲ ಸಣ್ಣ ಅಡಿಕೆಯ ತಳಿ.
  • ತೀರ್ಥಹಳ್ಳಿಯಂತಹ ಹವಾಮಾನ ಸ್ಥಿತಿಯನ್ನು ಹೊಂದಿದ ಎಲ್ಲಾ ಪ್ರದೇಶಗಳಲ್ಲೂ ಇದನ್ನು ಬೆಳೆಸಬಹುದಾಗಿದೆ.
  • ಕೊಪ್ಪ, ಶ್ರೀಂಗೇರಿ ಕಡೆಯಲ್ಲೂ ಚಿಕ್ಕಮಗಳೂರು ಸುತ್ತಮುತ್ತ, ಶಿವಮೊಗ್ಗ ಮುಂತಾದೆಡೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲ್ಪಡುವ ತಳಿ ಇದು.
  • ಪೂರ್ತಿಯಾಗಿ ಕೆಂಪಡಿಕೆಗೆ ಸೂಕ್ತವಾದ ತಳಿಯಾಗಿದ್ದು, ಉತ್ತಮ ಗುಣಮಟ್ಟದ ಕೆಂಪಡಿಕೆ ಉತ್ಪಾದಿಸಲು ಸೂಕ್ತ  ತಳಿ.
  • ಇದು ಚಾಲಿಗೆ ಸೂಕ್ತವಲ್ಲ.
  • ಈ ತಳಿಯಲ್ಲಿ ಹೆಣ್ಣು ಹೂವುಗಳ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
  • ಆದ ಕಾರಣ  ಇಳುವರಿ ಹೆಚ್ಚು ಇರುತ್ತದೆ.
  • ಗೊನೆಯಲ್ಲಿ ಕಾಯಿಗಳು ಒತ್ತೊತ್ತಾಗಿರುತ್ತವೆ.

ಬೀರೂರು- ತರೀಕೆರೆ ತಳಿ:

  • ಕಡೂರು, ಬೀರೂರು, ತರೀಕೆರೆ ಮುಂತಾದ ಕಡೆಯಲ್ಲಿ ಹಲವಾರು ವರ್ಷಗಳಿಂದ ಅಡಿಕೆ ಬೆಳೆಯಲಾಗುತ್ತಿದ್ದು, ಇಲ್ಲಿನ ಸ್ಥಳೀಯ ತಳಿಗೆ ಬೀರೂರು ತಳಿ ಎನ್ನುತ್ತಾರೆ.
  • ಇದರ ಗಾತ್ರ ಸಾಧಾರಣ. ಇಳುವರಿ ಕ್ಷಮತೆ ಭಾರೀ ಉತ್ತಮವಾಗಿಲ್ಲವಾದರೂ ತಳಿ ಗುಣ ಇಲ್ಲಿನ ಪ್ರದೇಶಕ್ಕೆ ಹೊಂದಿಕೊಳ್ಳುತ್ತದೆ.
  • ಇಲ್ಲಿ ಮಳೆ ಸ್ವಲ್ಪ ಕಡಿಮೆ ಇರುತ್ತದೆ. ಇದನ್ನು ಕೆಲವರು ಅರೆ ಮಲೆನಾಡಿನಲ್ಲೂ ಬೆಳೆಸಿ ಉತ್ತಮ ಫಲಿತಾಂಶ ಕಂಡದ್ದಿದೆ.
  • ಸರಾಸರಿ ಎಕ್ರೆಗೆ 15 ಕ್ವಿಂಟಾಲು ಕೆಂಪು ಆಡಿಕೆ ಉತ್ಪಾದನೆ ಮಾಡಲಾಗುತ್ತದೆ.
ಬೀರೂರು- ತರೀಕೆರೆ ತಳಿ

ಬೀರೂರು- ತರೀಕೆರೆ ತಳಿ

ಮಧುರ ಮಂಗಳ:

  • ಇದು  ಚಾಲಿ ಅಡಿಕೆಗೆ ಮತ್ತು ಕೆಂಪು ಅಡಿಕೆ ಮಾಡಲು ಸೂಕ್ತವಾದ ತಳಿಯಾಗಿದೆ.
  • ಇದರ ಕಾಯಿಯ ಗಾತ್ರ ಸಿರ್ಸಿ ಸೆಲೆಕ್ಷನ್ ಅಡಿಕೆಯಂತೆ ದುಂಡಗೆ ಚಪ್ಪಟೆ ಇರುತ್ತದೆ.
  • ಇದರ ಅಡಿಕೆಯ ಗಾತ್ರ ಮತ್ತು ನೋಟ ಉತ್ತಮವಾಗಿರುತ್ತದೆ.
  • ತುಂಡು ಮಾಡಿದ ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತದೆ.
  • ಹಣ್ಣು ಅಡಿಕೆಯನ್ನು ಒಣಗಿಸಿದರೆ ಸರಾಸರಿ 3.54 ಕಿಲೋ ಇಳುವರಿ ಮತ್ತು ಎಳೆ ಕಾಯಿಯನ್ನು ಬೇಯಿಸಿ ಒಣಗಿಸಿದಾಗ  2.95 ಕಿಲೋ  ಇಳುವರಿ ದೊರೆಯುತ್ತದೆ.
  • ಸುಮಾರು 5 ವರ್ಷದ ಹಿಂದೆ ಬಿಡುಗಡೆ ಮಾಡಲಾದ ತಳಿ ಇದು.
  • ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ  ಮುಂದೆ ಹೆಚ್ಚು ಪ್ರಚಾರಕ್ಕೆ ಬರಬಹುದಾದ ಎರಡೂ ಬಗೆಯ ಸಂಸ್ಕರಣೆಗೆ ಹೊಂದುವ ತಳಿಯಾಗಿದೆ.
  • ಮರದ ಶಿರ ಭಾಗ ಸಿರಸಿ, ಸಾಗರ ಅಡಿಕೆ ತಳಿಯನ್ನು  ಹೋಲುತ್ತದೆ.
  • ನಾಟಿ ಮಾಡಿ 4-5 ನೇ ವರ್ಷಕ್ಕೆ ಇಳುವರಿಗೆ ಪ್ರಾರಂಭವಾಗುತ್ತದೆ. ಕಾಂಡ ದಪ್ಪ ಇರುತ್ತದೆ.

ಇದೇ ತಳಿಗಳನ್ನು ಬೇರೆ ಪ್ರದೇಶಗಳಲ್ಲಿ ಬೆಳೆಸಿ ಅಲ್ಲಿ ಅದರ ಕ್ಷಮತೆ  ಉತ್ತಮವಾಗಿ ಕಂಡು ಬಂದ ನಂತರ ಅದಕ್ಕೆ ಅಲ್ಲಿಯದೇ ಸ್ಥಳೀಯ ಹೆಸರನ್ನು ಕೊಟ್ಟು ಹೊಸ ನಾಮಕರಣ ಮಾಡಿದ ತಳಿಗಳು ಹಲವು ಇವೆ.

2 Comments

  1. Manoj Naik

    ಅಡಿಕೆ ಮರಕ್ಕೆ 14-06-21ಈ ರಾಸಾಯನಿಕ ಗೊಬ್ಬರವನ್ನು ಯಾವ ಪ್ರಮಾಣದಲ್ಲಿ ಒದಗಿಸಬೇಕು? What is the best method to apply chemical fertilizer?

    Reply
    • hollavenur

      100 ಗ್ರಾಮ್ ಹಾಕಿದಾಗ 14:6:21 ಅಗುತ್ತದೆ. ಒಂದು ಅಡಿಕೆ ಮರಕ್ಕೆ 120-60-150 ಶಿಫಾರಸು. ಕೊಟ್ಟಿಗೆ ಗೊಬ್ಬರ ಕೊಟ್ಟು 750 ಗ್ರಾಮ್ ಸಾಕು.

      Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!