ಅಡಿಕೆ ಸಸ್ಯ ಏಕದಳ ಸಸ್ಯವಾಗಿದ್ದು, ಇದಕ್ಕೆ ತಾಯಿ ಬೇರು ಇಲ್ಲ. ಕವಲು ಬೇರುಗಳಿರುವ ಏಕದಳ ಸಸ್ಯದ, ಬೇರಿನ ಗುಣ ಮೇಲು ಭಾಗದಲ್ಲಿ ಪಸರಿಸುತ್ತಾ ಬೆಳೆಯುವುದಾಗಿರುತ್ತದೆ. ಮೊದಲಾಗಿ ಎಲ್ಲಾ ಅಡಿಕೆ ಬೆಳೆಸುವ ರೈತರು ಸಸ್ಯ ಬೆಳವಣಿಗೆಯ ಕ್ರಮವನ್ನು ತಿಳಿದು, ಅದಕ್ಕನುಗುಣವಾದ ಬೇಸಾಯ ಕ್ರಮವನ್ನು ಅನುಸರಿಸಬೇಕು. ಅಡಿಕೆ ಸಸಿ ನೆಡುವ ಹೊಂಡ ಹೇಗಿರಬೇಕು, ಹೇಗೆ ನೆಡಬೇಕು- ಹೇಗೆ ರಕ್ಷಿಸಬೇಕು? ಎಂಬುದರ ಫೂರ್ತಿ ಮಾಹಿತಿ ಇಲ್ಲಿದೆ.
- ಎಳವೆಯಲ್ಲಿ ಒಂದು ಗಿಡವನ್ನು ಸರಿಯಾಗಿ ಪೋಷಣೆ ಮಾಡಿದರೆ ಮಾತ್ರ ಅದರ ಮುಂದಿನ ಬೆಳವಣಿಗೆಗೆ ಅಡಿಪಾಯ ಚೆನ್ನಾಗಿರುತ್ತದೆ.
- ಸೂಕ್ತ ಬೆಳೆ ಕ್ರಮವನ್ನು ಅನುಸರಿಸಿ ಸಸಿಯನ್ನು 4-5 ವರ್ಷಗಳ ತನಕ ಜೋಪಾನವಾಗಿ ಸಾಕಬೇಕು.
ಅಡಿಕೆ ನೆಡುವ ಸರಿಯಾದ ವಿಧಾನ:
- ಅಡಿಕೆ ಸಸಿಗೆ ತಾಯಿ ಬೇರು ಇಲ್ಲ ಎಂಬುದನ್ನು ಮೊದಲೇ ಹೇಳಿದ್ದೇವೆ.
- ನೀವು ಎಷ್ಟೇ ಆಳದ ಹೊಂಡ ಮಾಡಿ ನೆಟ್ಟರೂ ಸಹ ಅದರ ಬೇರುಗಳು ಪೋಷಕಾಂಶ ಹುಡುಕಿಕೊಂಡು ಮೇಲೆ ಬರುತ್ತವೆ.
- ಆದ ಕಾರಣ ಮಣ್ಣಿನ ಸಡಿಲತೆಗಾಗಿ 2-2.5 ಅಡಿ ಆಳದ ಹೊಂಡ ಮಾಡಿ.
- ಅಂತರ 9×9 ಉತ್ತಮ. ಅಂತರ ಬೆಳೆ ಬೆಳೆಯುವಾಗ ಬೇರೆ ಅಂತರ ಸಾಲಿನಿಂದ ಸಾಲಿಗೆ 10 ಗಿಡದಿಂದ ಗಿಡಕ್ಕೆ 8 ಅಡಿ ಮಾಡಿಕೊಳ್ಳಿ.
- ನೆಡುವಾಗ ಮುಕ್ಕಾಲು ಪಾಲು ಅಗೆದು ತೆಗೆದ ಮಣ್ಣನ್ನು ಮರಳಿ ತುಂಬಿ ಅದರ ಮೇಲೆ ತೇಲಿಸಿ ನಾಟಿ ಮಾಡಿ.
ಹೀಗೆ ನಾಟಿ ಮಾಡಿದಾಗ ಬೇರುಗಳು ಸಡಿಲ ಮಣಿನಲ್ಲಿ ನುಸುಳಿಕೊಂಡು ಕೆಳಗಿನ ತನಕ ಪಸರಿಸುತ್ತವೆ. ಇದು ಗಿಡದ ಗಟ್ಟಿ ತನಕ್ಕೆ ಒಳ್ಳೆಯದು. ಹೊಂಡವನ್ನು ಸಾಧ್ಯವಾದಷ್ಟು ಅಗಲ ಮಾಡಬಹುದು. ಅದು 3 ಅಡಿ ಸುತ್ತಳತೆಯಾದರೂ ತೊಂದರೆ ಇಲ್ಲ. ಒಟ್ಟಿನಲ್ಲಿ ನೆಲ ಸಡಿಲವಾಗುವುದೇ ಪ್ರಧಾನ ಅಂಶ.
- ತುಂಬಾ ಜೌಗು ಅಗುವ ಸ್ಥಳವಾದರೆ ಬಸಿಗಾಲುವೆ ಮಾಡಿ 1 ಅಡಿ ಆಳದಲ್ಲಿ ನಾಟಿ ಮಾಡಿ.
- ಇಲ್ಲವಾದರೆ ಮಳೆಗಾಲದಲ್ಲಿ ಕೆಲವೊಮ್ಮೆ ಗಿಡಗಳು ಗಾಳಿಗೆ ವಾಲುವುದು, ಮಗುಚಿ ಬಿಳುವುದು ಇರುತ್ತದೆ.
ಬಯಲು ಸೀಮೆಯ ರೈತರು ತೇಲಿಸಿ ನೆಡುತ್ತಾರೆ. ಇದು ಉತ್ತಮವಿಧಾನ. ಆದರೆ ಬಸಿ ವ್ಯವಸ್ಥೆ ಮಾಡದಿದ್ದರೆ ಸಸಿಗಳು ಎಳವೆಯಲ್ಲಿ ಬೆಳೆವಣಿಗೆ ಅಗುವುದಿಲ್ಲ.
- ಕೆಲವರು ಯಂತ್ರಗಳ ಮೂಲಕ ಕಾಲುವೆ ಮಾಡಿ ನಾಟಿ ಮಾಡುತ್ತಾರೆ.
- ಕಾಲುವೆಯಲ್ಲಿ ನಾಟಿ ಮಾಡುವವರು, ಮಧ್ಯಂತರದಲ್ಲಿ ಮಣ್ಣು ತುಂಬಿ ನೆಡಬೇಕು.
- ಇಲ್ಲವೇ ಬಸಿಗಾಲುವೆ ಮಾಡಬೇಕು.
- ಈ ವಿಧಾನದಲ್ಲಿ ನೀರು ಹೆಚ್ಚು ಸಮಯ ನಿಂತು ಬೇರು ಕೊಳೆಯುವಿಕೆ ಉಂಟಾಗುವ ಸಂಭವ ಹೆಚ್ಚು.
ಸಮತಟ್ಟು ಇಲ್ಲದ ಸ್ಥಳ, ಏರು ತಗ್ಗಿನ ಸ್ಥಳಗಳನ್ನು ಸಮತಟ್ಟು ಮಾಡಬೇಡಿ. ಟೆರೆಸಿಂಗ್ ಮಾಡಿ ನಾಟಿ ಮಾಡಿ. ಮೇಲು ಮಣ್ಣನ್ನು ಯಾವುದೇ ಕಾರಣಕ್ಕೂ ಅಡಿ ಭಾಗಕ್ಕೆ ಹಾಕಬೇಡಿ. ಗಿಡ ಗಂಟಿಗಳನ್ನು ಪೂರ್ತಿಯಾಗಿ ಬೇರು ಸಹಿತ ತೆಗೆಯಿರಿ.
ಬಸಿಗಾಲುವೆ:
ಪ್ರತೀ ಎರಡು ಸಸಿಯ ಹೊಂಡಕ್ಕೆ ಒಂದರಂತೆ ಬಸಿಗಾಲುವೆಯನ್ನು ಮಾಡಲೇ ಬೇಕು. ಈ ಬಸಿಗಾಲುವೆ ಬರೇ ನೀರು ಬಸಿಯಲಿಕ್ಕೆ ಮಾತ್ರವಲ್ಲ, ಬೇರುಗಳ ಉಸಿರಾಟಕ್ಕೆ ಅಗತ್ಯವಾಗಿ ಬೇಕು. ಸರಿಯಾದ ಬಸಿಗಾಲುವೆ ಮಾಡಿದ್ದೇ ಆದರೆ ಸಸ್ಯಗಳ ಬೇರು ಚೆನ್ನಾಗಿ ಪ್ರಸರಣವಾಗಲು ಅನುಕೂಲವಾಗುತ್ತದೆ.
- ಕೆಲವು ಸಸಿಗಳು ಎಷ್ಟೇ ಉತ್ತಮ ಪಾಲನೆ ಇದ್ದರೂ ಸಹ, ಸರಿಯಾದ ಬೆಳವಣಿಗೆ ಆಗದೆ ಇರಲು ಬಸಿ ವ್ಯವಸ್ಥೆ ಸರಿ ಇಲ್ಲದಿರುವುದೇ ಕಾರಣ.
- ಬೆಳೆವಣಿಗೆ ಆಗಿರದ ಸಸಿಗಳನ್ನು ಕಿತ್ತು ನೋಡಿದರೆ ಬೇರು ಬಂದಿರುವುದಿಲ್ಲ.
- ಬಂದ ಬೇರುಗಳಲ್ಲಿ ಕವಲು ಬೇರುಗಳು ಇರುವುದಿಲ್ಲ.
- ಬೇರಿನ ಭಾಗ ಕಪ್ಪಗಾಗಿರುತ್ತದೆ. ಇದಕ್ಕೆ ನೀರು ನಿಂತ ಸ್ಥಿತಿಯೇ ಕಾರಣ.
- ಬಯಲು ಸೀಮೆಯಲ್ಲಿ ಮಳೆ ಕಡಿಮೆ ಬರುತ್ತದೆಯಾದರೂ ಸಹ, ಇಲ್ಲಿಯೂ ಬಸಿಗಾಲುವೆ ಬೇಕೇ ಬೇಕು.
- ಇಲ್ಲಿ ಅಲ್ಪ ಸ್ವಲ್ಪ ಮಳೆ ಬಂದರೂ ಸಹ ಮಣ್ಣು ನೀರನ್ನು ಬಸಿಯಲು ಬಿಡದ ಕಾರಣ ಬೇರುಗಳಿಗೆ ತೊಂದರೆ ಉಂಟಾಗುತ್ತದೆ.
- ಅಡಿಕೆ ಸಸಿಯ ಬೆಳವಣಿಗೆಯ ಮೂರು ವರ್ಷದ ತನಕ ಬುಡ ಭಾಗದಲ್ಲಿ ½ ಗಂಟೆಗಿಂತ ಹೆಚ್ಚು ಸಮಯ ನೀರು ನಿಲ್ಲುವ ಸ್ಥಿತಿ ಇರಬಾರದು.
- ಒಂದು ವೇಳೆ ಒರತೆಯೇ ಆಗುವ ಸ್ಥಳವಾದರೂ ನೀರು ನಿಲ್ಲದೆ ಬಸಿಯುತ್ತಿದ್ದರೆ ಸಾಕಾಗುತ್ತದೆ.
- ಬಹಳಷ್ಟು ಕಡೆ ಖುಷ್ಕಿ ಜಮೀನಿನಲ್ಲಿ ಅಡಿಕೆ ಬೆಳೆಸುವವರು ನೀರು ನಿಲ್ಲುವುದಿಲ್ಲ ಎಂದು ಬಸಿಗಾಲುವೆ ಮಾಡುವುದಿಲ್ಲ.
- ಅಲ್ಲಿಯೂ ನಮಗೆ ಕಣ್ಣಿಗೆ ನೀರು ನಿಂತಿರುವುದು ಕಾಣಿಸುವುದಿಲ್ಲವಾದರೂ ತಳದಲ್ಲಿ ಮಣ್ಣು ಶೀತವಾಗುತ್ತದೆ. ಸಸಿ ಹಳದಿಯಾಗಿ ಬೆಳವಣಿಗೆ ಕುಂಠಿತವಾಗುತ್ತದೆ.
ನಾಟಿ ಮಾಡುವಾಗ ಮಳೆ ಇರಬಾರದು. ಮಳೆ ಬರುತ್ತಾ ಇರುವಾಗ ನಾಟಿ ಮಾಡಿದರೆ ಮಣ್ಣು ಕಲಸಿ ಹಾಕಿದಂತೆ ಆಗಿ ಬೇರಿನ ಬೆಳೆವಣಿಗೆಗೆ ತೊಂದರೆ ಉಂಟು ಮಾಡುತ್ತದೆ.ಮಳೆ ಇಲ್ಲದ ದಿನ ಮಣ್ಣು ಹುಡಿಯಾಗಿರುವಾಗ ನಾಟಿ ಮಾಡಬೇಕು. ನೆಟ್ಟ ನಂತರ ಬುಡ ಭಾಗಕ್ಕೆ ಸೊಪ್ಪು, ತರಗೆಲೆ ಇತ್ಯಾದಿಗಳನ್ನು ಹಾಕಲೇ ಬೇಕು. ಇದು ಮಳೆ ಹನಿಗಳು ನೆಲಕ್ಕೆ ಬಿದ್ದು, ಮಣ್ಣು ಚದುರಿಕೊಂಡು ಎಲೆಗೆ ಬೀಳುವುದನ್ನು ತಡೆಯುತ್ತದೆ. ಮಣ್ಣು ಸಿಡಿದು ಎಲೆಗಳಿಗೆ ಸಿಡಿದರೆ ಅಲ್ಲಿ ಎಲೆ ಕೊಳೆ ಉಂಟಾಗುವ ಸಾಧ್ಯತೆ ಇದೆ.
- ಮಳೆ ಹನಿ ಬುಡಕ್ಕೆ ಬಿದ್ದಾಗ ಬುಡ ಭಾಗದ ಮಣ್ಣು ಕೊಚ್ಚಣೆಗೆ ಒಳಗಾಗುತ್ತದೆ. ಇದರಿಂದ ಬೇರಿನ ಬೆಳೆವಣಿಗೆ ತೊಂದರೆ ಉಂಟಾಗುತ್ತದೆ.
- ನೀರು ಬಸಿಯದಿದ್ದರೆ ,ಜೌಗು ಸ್ಥಿತಿಯಲ್ಲಿ ಸುಳಿ ಕೊಳೆ ರೋಗ, ಸುಳಿ ಮುರುಟಿಕೊಳ್ಳುವ ಸಮಸ್ಯೆ ಹೆಚ್ಚಾಗುತ್ತದೆ.
- ಹಾಗೆಯೇ ಬೇರುಗಳಿಗೆ ಕೆಳಭಾಗದಲ್ಲಿ ಶೀತವಾದರೆ ಬೇರು ಮೇಲೆ ಮೇಲೆ ಬರುತ್ತದೆ.
ನೆಡಲು ಯೋಗ್ಯ ಸಸಿ:
- ನೆಡಲು ಬಳಸುವ ಅಡಿಕೆ ಸಸಿಗಳ ವಯಸ್ಸು ಎಷ್ಟು ಇರಬೇಕು ಎಂಬುದೇ ಎಲ್ಲರ ಪ್ರಶ್ನೆ.
- ಉತ್ತಮ ಬೆಳವಣಿಗೆಗೆ 4-5 ಎಲೆ ಬಂದ ಸಸಿಯನ್ನು ನಾಟಿಗೆ ಬಳಕೆ ಮಾಡುವುದು ಉತ್ತಮ.
- ವಯಸ್ಸಿನ ಲೆಕ್ಕದಲ್ಲಿ ಸುಮಾರು 6 ತಿಂಗಳು ಕಳೆದ ಸಸಿಯಾದರೆ ಒಳ್ಳೆಯದು.
- ಒಂದು ವರ್ಷ ಬೆಳೆದ ಸಸಿಯನ್ನು ನಾಟಿ ಮಾಡಿದರೆ ಸಸಿ ಬೆಳೆವಣಿಗೆ ಉತ್ತಮವಾಗಿರುತ್ತದೆ.
- ಆದರೆ ಸಸಿಗಳನ್ನು ದೂರ ದೂರ ಇಟ್ಟು ಬೆಳೆಸಿರಬೇಕು.
- ದೊಡ್ಡ ಸಸಿಯಾದರೆ ಅದರ ಎಲೆ ದೊಡ್ಡದಿದ್ದು, ಹೆಚ್ಚು ಎಲೆಗಳು ಇರುವ ಕಾರಣ ಅದು ಚೆನ್ನಾಗಿ ಬೆಳೆಯುತ್ತದೆ.
ಬೆಳವಣಿಗೆ ಪರಿವೀಕ್ಷಣೆ:
- ಮೊದಲ ಒಂದು ವರ್ಷ ತನಕ ಬುಡದಲ್ಲಿ ಕಳೆ ಬೆಳೆಯಲು ಬಿಡಬಾರದು. ಅಗಾಗ ತೆಗೆಯುತ್ತಿರಬೇಕು.
- ಅಡಿಕೆ ಸಸಿ ನೆಟ್ಟು ಪ್ರತೀ ಒಂದುವರೆ ತಿಂಗಳಿಗೆ ಒಂದು ಹೊಸ ಎಲೆ ಬರಬೇಕು.
- ನೆಟ್ಟ ವರ್ಷ ಇದು ಸ್ವಲ್ಪ ಕಡಿಮೆಯಾಗಬಹುದು. ಮುಂದಿನ ವರ್ಷದಿಂದ ವರ್ಷಕ್ಕೆ ಕನಿಷ್ಟ 10 ಎಲೆ ಬರಬೇಕು.
- ನಾಟಿ ಮಾಡಿ ಒಂದು ವರ್ಷ ಕಳೆದಾಗ ಸಸಿಯ ಬುಡ ಭಾಗದ ಬೊಡ್ಡೆ ಗೋಚರವಾಗಬೇಕು.
- ಒಂದು ವೇಳೆ ಬೊಡ್ಡೆ ಕಾಣಿಸದೆ ಇದ್ದರೆ ಅಂತಹ ಸಸಿಯನ್ನು ತೆಗೆದು ಬೇರೆ ಸಸಿ ನೆಡುವುದು ಉತ್ತಮ.
ನಾಟಿ ಮಾಡುವಾಗ 100 ಸಸಿಗೆ 10 ಸಸಿಯನ್ನು ಹೆಚುವರಿಯಾಗಿ ಇಟ್ಟುಕೊಂಡು ಅದನ್ನು 1 ಅಡಿ ಅಂತರದಲ್ಲಿ ನೆಟ್ಟು ಬೆಳೆಸಿರಬೇಕು. ಅಶಕ್ತ ಸಸಿಗಳನ್ನು ತೆಗೆದು ಇದನ್ನು ನೆಟ್ಟರೆ ಹಿಂದೆ ನೆಟ್ಟ ಸಮನಾಗಿ ಬೆಳವಣಿಗೆಯನ್ನು ಹೊಂದುತ್ತದೆ.
ಅಂತರ ಬೆಳೆ:
- ಅಡಿಕೆ ಮಾಡಿದ ವರ್ಷ ಅಂತರ ಬೆಳೆಯಾಗಿ ಬಾಳೆಯನ್ನು ಬೆಳೆಸಬೇಡಿ.
- ಬದಲಿಗೆ ಅರಶಿನ, ಶುಂಠಿ, ಅನನಾಸು, ಗೋವಿನ ಜೋಳ ಇತ್ಯಾದಿಗಳನ್ನು ಬೆಳೆಸಿ.
- ಸಸಿಗೆ ಅಲ್ಪ ಸ್ವಲ್ಪ ನೆರಳು ಬೇಕು. ಬಾಳೆ ನಾಟಿ ಮಾಡಿದರೆ ನೆರಳು ಹೆಚ್ಚಾಗುತ್ತದೆ.
- ಬೆಳಕಿನ ಕೊರತೆಯಿಂದ ಅಡಿಕೆ ಗಿಡ ಚೆನ್ನಾಗಿ ಬೆಳವಣಿಗೆ ಆಗುವುದಿಲ್ಲ.
- ಬಾಳೆಯಂತಹ ಮಿಶ್ರ ಬೆಳೆಯನ್ನು 4 ವರ್ಷದ ನಂತರವೇ ಬೆಳೆಸಿ.
- ನೆಡುವಾಗ ಬಿಸಿಲು ಇದ್ದರೆ ತಕ್ಷಣವೇ ನೆರಳು ಮಾಡಬೇಕು.
- ಇಲ್ಲವಾದರೆ ಎಲೆಗೆ ಬಿಸಿಲು ತಾಗಿ ಸಸಿಯ ದ್ಯುತಿ ಸಂಸ್ಲೇಶಣ ಕ್ರಿಯೆಗೆ ತೊಂದರೆ ಉಂಟಾಗುತ್ತದೆ.
ಯಾವುದೇ ಕಾರಣಕ್ಕೂ ಸಸಿ ಹಂತದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಎಲ್ಲಾ ಸಸಿಗಳೂ ಏಕಪ್ರಕಾರವಾಗಿ ಬೆಳವಣಿಗೆ ಹೊಂದುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ಕೃಷವಾಗಿ ಬೆಳೆದ ಸಸಿಗಳನ್ನು ಮುಂದೆ ನೋಡುವಾ ಎಂದು ಉಳಿಸಬೇಡಿ. ತಕ್ಷಣ ತೆಗೆದು ಬೇರೆ ನಾಟಿ ಮಾಡುವುದು ಸೂಕ್ತ. ಸಸಿಗಳು ಎತ್ತರ ಬೆಳೆದ ಮೇಲೆ ಹೊಸ ಸಸಿ ನೆಟ್ಟರೆ ಅದು ಸರಿಯಾಗಿ ಬೆಳೆವಣಿಗೆ ಆಗುವುದಿಲ್ಲ.
end of the article——————————————————————-
search words: areca planting method # arecanut plantation # model method of areca planting # scientific method of areca planting# arecanut # inter crop with arecanut#