ಮರೆಯಾಗುತ್ತಿದೆ ಕೃಷಿ ಕ್ಷೇತ್ರದ ‘ಪೂರ್ವ ಶಿಷ್ಟ ಪದ್ದತಿ’ಗಳು.

'ಪೂರ್ವ ಶಿಷ್ಟ ಪದ್ದತಿ'ಗಳನ್ನು ಪಾಲಿಸಿದ ಕೃಷಿ

ಪೂರ್ವ ಶಿಷ್ಟ ಪದ್ದತಿ (Customs and Usages) ಎಂದರೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವ್ಯವಸ್ಥೆ. ಇದು  ಕಾನೂನಾತ್ಮಕವಾಗಿಲ್ಲದಿದ್ದರೂ ಇದನ್ನು ಕಾನೂನು ರಕ್ಷಕರು ಅಥವಾ ನ್ಯಾಯಾಲಯ ತಳ್ಳಿ ಹಾಕುವಂತಿಲ್ಲ. ಪೂರ್ವ ಪದ್ದತಿಗಳನ್ನು ಮೀರಿ ಕಾನೂನು ಅಲ್ಲ ಎಂಬುದನ್ನು ಸರ್ವೋಚ್ಚ ನ್ಯಾಯಾಯಲವೂ ಒಪ್ಪಿಕೊಳ್ಳುತ್ತದೆ. ಇವು ಬ್ರಿಟೀಷ್ ಸರಕಾರ ವ್ಯವಸ್ಥೆಯಲ್ಲಿ ಗವರ್ನರ್ ಜನರಲ್ ಗಳು ಕೊಡುತ್ತಿದ್ದ ತೀರ್ಮಾನ. ಇದು ಎಲ್ಲರೂ ಒಪ್ಪಿರುವ ನ್ಯಾಯಸಮ್ಮತವಾದ ಪದ್ದತಿ. ಅನಾದಿ ಕಾಲದಿಂದಲೂ ಇದು ಚಾಲ್ತಿಯಲ್ಲಿತ್ತು. ಇದನ್ನು ಪ್ರತೀಯೊಬ್ಬ ಕೃಷಿಕನೂ ಅನುಸರಿಸಿದ್ದೇ ಆದರೆ ಪರಸ್ಪರ ಜಗಳ, ತಕರಾರು ಇರುವುದಿಲ್ಲ. ಇಂತಹ ಪದ್ದತಿಯಲ್ಲಿ ಇರುವಂತಹ ಕೆಲವು ಸಂಗತಿಗಳ ಬಗ್ಗೆ ಇಲ್ಲಿ ಚರ್ಚಿಸೋಣ.

ಇಂದು ಪ್ರತೀಯೊಬ್ಬ ಕೃಷಿಕನೂ ಕ್ಷೇಮದಲ್ಲಿ ಇಲ್ಲ. ಕಾರಣ ನೆರೆಹೊರೆಯವರೊಂದಿಗೆ ಜಾಗದ ತಕರಾರು. ದಾರಿ ನೀರಿನ ತಕರಾರು ಇದು ಬಿಟ್ಟರೆ ಬೇರೆ ಅವರೊಳಗೆ ಯಾವುದೇ ಮನಸ್ತಾಪಗಳು ಇರುವುದಿಲ್ಲ. ಇದೆಲ್ಲಾ ಯಾಕೆ ಆಗುತ್ತದೆ ಎಂದರೆ ಪರಸ್ಪರರಲ್ಲಿ ಒಬ್ಬ ಈ “ಪೂರ್ವ ಶಿಷ್ಟ ಪದ್ದತಿ”ಯನ್ನು ಪಾಲಿಸಿರುವುದಿಲ್ಲ. ಇದು ಮತ್ತೊಬ್ಬನನ್ನು ಕೆಣಕುವಂತಾಗಿ ಪರಸ್ಪರ ಜಗಳಗಳು, ಕೋರ್ಟು ಕಚೇರಿ ಅಲೆದಾಟ ಪ್ರಾರಂಭವಾಗುತ್ತದೆ. ಜೀವಮಾನದ ಹೆಚ್ಚಿನ ಸಮಯವನ್ನು ನ್ಯಾಯ ಪಡೆಯುವುದಕ್ಕಾಗಿ ವ್ಯಯಿಸುವಂತಾಗುತ್ತದೆ. ಈ ವೈಮನಸ್ಸು ತಮ್ಮ ನಂತರದ ತಲೆಮಾರಿಗೂ ವರ್ಗಾವಣೆಯಾಗುವುದೂ ಇರುತ್ತದೆ.  ಬಹುಷಃ ಕೃಷಿ ಕುಟುಂಬಗಳಲ್ಲಿ ನೆರೆಹೊರೆಯವರೊಡನೆ ಮುಸುಕಿನ ಗುದ್ದಾಟ ಇಲ್ಲದೆ ಇರುವ ಕುಟುಂಬಗಳೇ ಇರಲಿಕ್ಕಿಲ್ಲ. ಇನ್ನು ಬಹಿರಂಗ ಜಗಳ, ಹೊಡೆದಾಟಗಳು ಸಾಕಷ್ಟು ಇದೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲೂ ಇಂತವರ ಮನೆ ಎಲ್ಲಿ ಎಂದು ಆ ಮನೆಯ ನೆರೆಹೊರೆಯವನಲ್ಲಿ ಕೇಳಿದರೆ ಆತ ಗೊತ್ತಿಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದೆ.

  • ಇದನ್ನು ಹಿಂದೆಲ್ಲಾ ಸ್ಥಳೀಯ ಹಿರಿಯರು, ಪಂಚಾತಿಕೆ (ಊರಿನ ಹಿರಿಯರು ಸೇರಿ ಮಾಡುವ ತೀರ್ಮಾನ) ಮಾಡುವವರು ಬಗೆಹರಿಸುತ್ತಿದ್ದರು.
  • ಈಗ ಅದನ್ನು ಒಪ್ಪುವವರು ಇಲ್ಲ. ಜನ “ನೀನು ಎಂದರೆ ನಿನ್ನಪ್ಪ” ಎನ್ನುವಷ್ಟು ಮುಂದುವರಿದಿದ್ದಾರೆ.
  • ಹಾಗಾಗಿ ಯಾರೂ ಈ ವಿಷಯದಲ್ಲಿ ಮಧ್ಯಪ್ರವೇಶಕ್ಕೆ ಬರುವುದೂ ಇಲ್ಲ.
  • ಇದೆಲ್ಲವೂ ಪೋಲೀಸ್ ಸ್ಟೇಷನ್, ತಾಲೂಕು ಕಚೇರಿ ಕಚೇರಿ, ಏಸಿ ಕಚೇರಿ, ಡಿ ಸಿ ಕಚೇರಿ, ಕೋರ್ಟು ಇತ್ಯಾದಿ ವ್ಯವಸ್ಥೆಗಳ ಅಂಗಳಕ್ಕೆ ತಲುಪಿ ಅಲ್ಲಿ ವಾದ ವಿವಾದಗಳೇರ್ಪಟ್ಟು ತೀರ್ಮಾನ ಅಗದ ಸ್ಥಿತಿಯಲ್ಲೇ ಮುಂದುವರಿಯುತ್ತಾ ಇದೆ.
  • ಇಂತಹ ಮೂಲಭೂತ ಸಮಸ್ಯೆಗಳಿಗೆ ಕಾನೂನಾತ್ಮಕ ಚೌಕಟ್ಟು ಇಲ್ಲದೆ ವಿನಹ ಕೃಷಿಕರು ನೆಮ್ಮದಿಯಲ್ಲಿ ಬದುಕಲು ಸಾಧ್ಯವಿಲ್ಲ.
  • ಇಂತಹ ಕೆಲವು ಪೂರ್ವ ಶಿಷ್ಟ ಪದ್ದತಿಗಳ ಬಗ್ಗೆ ತಿಳಿದುಕೊಳ್ಳುವುದು ಪ್ರತೀಯೊಬ್ಬ ನಾಗರೀಕನ ಕರ್ತವ್ಯ.
  • ಇದನ್ನು ಪ್ರತೀಯೊಬ್ಬರೂ ಗೌರವಯುತವಾಗಿ ಪಾಲಿಸಿದರೆ ಇತ್ತಂಡಗಳಿಗೂ ಕ್ಷೇಮ.
  • ಇಬ್ಬರ ಜಗಳದಲ್ಲಿ ಬೇರೆಯವರಿಗೆ ಲಾಭವಾಗುತ್ತದೆಯೇ ವಿನಹ ಜಗಳ ಮಾಡಿದವರಿಗೆ ಕೊನೆಗೂ ಸಮಸ್ಯೆ ಪರಿಹಾರ ಆಗುವುದಿಲ್ಲ.
  • ಯಾರೂ ಹುಟ್ಟುವಾಗ ಭೂಮಿಯನ್ನು ಜೊತೆಗೆ ತರುವುದಿಲ್ಲ. ಹೋಗುವಾಗ ಒಯ್ಯುವುದೂ ಇಲ್ಲ.
  • ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ನಾವು ಮಾಡಿಟ್ಟದ್ದನ್ನು ಮುಂದುವರಿಸಿಯಾರೂ ಎಂಬ ಆಕಾಂಕ್ಷೆ ಯಾರಿಗೂ ಬೇಡ.
  • ಹಾಗಾಗಿ ನಮ್ಮ ಪೂರ್ವಜರಿಂದ ಲಾಗಾಯ್ತು ನಡೆದುಕೊಂಡು  ಬಂದ ಪೂರ್ವ ಶಿಷ್ಟ ಪದ್ದತಿಗಳನ್ನು ಪಾಲಿಸಿ ಬದುಕುದು ಉತ್ತಮ.
ಇಂತಹ ಹಿರಿಯರು ಕೋರ್ಟು ಕಚೇರಿ, ತಾಲೂಕಾಫೀಸು ಅಲೆಯದೆ ತಮ್ಮ ತಕಾರಾರುಗಳನ್ನು ಅಲ್ಲಲ್ಲೇ ಮುಗಿಸುತ್ತಿದ್ದರು.
ಇಂತಹ ಹಿರಿಯರು ಕೋರ್ಟು ಕಚೇರಿ, ತಾಲೂಕಾಫೀಸು ಅಲೆಯದೆ ತಮ್ಮ ತಕಾರಾರುಗಳನ್ನು ಅಲ್ಲಲ್ಲೇ ಮುಗಿಸುತ್ತಿದ್ದರು.

ದಾರಿ, ರಸ್ತೆಗಳು:

  • ಪ್ರತೀಯೊಬ್ಬನ ಮನೆಗೆ ಹೊಲಕ್ಕೆ ಹೋಗಲು ಕಾಲು ದಾರಿ ಎಂಬುದು ಅವನ ಮೂಲಭೂತ  ಹಕ್ಕು.
  • ಇದನ್ನು ಬಹುತೇಕ ಎಲ್ಲಾ ಕಡೆಯಲ್ಲೂ ಭೂಮಿಯನ್ನು ವಿಂಗಡಿಸಿಕೊಡುವಾಗ ಮೀಸಲು ಇಟ್ಟಿರುತ್ತಾರೆ.
  • ಕಾಲು ದಾರಿ ಹಕ್ಕಿಗೆ ಇರುವುದು 5 ಲಿಂಕ್ಸ್  ಅಗಲದ ಪ್ರದೇಶ.
  • ಮೂಲತಹ ಇದನ್ನು ಭೂಮಿ ಮಂಜೂರು ಮಾಡುವಾಗ ನಕಾಶೆಯಲ್ಲಿ ಕೆಂಪು  ಗೆರೆಯಲ್ಲಿ ತೋರಿಸಿರುತ್ತಾರೆ.
  • ಹಾಗೆಯೇ ಪಹಣಿಯಲ್ಲಿ  ಹಕ್ಕುಗಳು ಕಾಲಂ ನಲ್ಲಿ ಇದನ್ನು ಬರೆದಿರುತ್ತಾರೆ.
  • ಹಕ್ಕು ಪತ್ರ D Form ನಲ್ಲಿ ಇದನ್ನು ಬರೆದಿರುತ್ತಾರೆ. ಇದನ್ನು ಪ್ರತೀಯೊಬ್ಬನೂ ಬಿಡಬೇಕು.
  • ಹಾಗೆಂದು ಕೃಷಿ ಭೂಮಿಯ ಮಧ್ಯದಲ್ಲಿ ಈ ಕಾಲು ದಾರಿ ಹಾದು ಹೋಗುತ್ತಿದ್ದರೆ ಅದನ್ನು ಒಂದು ಒತ್ತಟ್ಟಿಗಿರುವಂತೆ ಮಾಡಿಕೊಡಲು ಅವಕಾಶ ಇರುತ್ತದೆ.
  • ಈ ರೀತಿ ಬದಲಾವಣೆ ಮಾಡುವಾಗ ಅದು ತೀರಾ ಸುತ್ತು ಆಗಿರಬಾರದು.

ದಾಖಲೆಯಲ್ಲಿ ದಾರಿ ಇಲ್ಲದಿದ್ದ ಪಕ್ಷದಲ್ಲೂ ಒಂದು ಮನೆಗೆ ಅಥವಾ ಮುದಿನ ಊರಿಗೆ ನಡೆದುಕೊಂಡು ಹೋಗಲು ದಾರಿಯೇ ಇಲ್ಲದಿದ್ದ ಪಕ್ಷದಲ್ಲಿ, ಅನಾದಿ ಕಾಲದಿಂದಲೂ ದಾಖಲೆ ರಹಿತವಾಗಿ ಆಲ್ಲೇ ನಡೆದು ಹೋಗುತ್ತಿದ್ದರೆ ಅದು ಸಹ ಮುಚ್ಚಬಹುದಾದ ದಾರಿ ಅಲ್ಲ.

  • ರಸ್ತೆಗಳ ವಿಚಾರದಲ್ಲಿ ಹಿಂದೆ ಕೆಲವೇ ಕೆಲವು ಕಡೆ ಮಾತ್ರ ಇದನ್ನು ದಾಖಲೆಯಲ್ಲಿ ನಮೂದಿಸಲಾಗಿತ್ತಾದರೂ ಈಗ ಅಂದರೆ ಸುಮಾರು 20 ವರ್ಷಗಳಿಂದ ಸ್ಥಳ ವಿಂಗಡನೆ ಮಾಡುವಾಗ ರಸ್ತೆಯ ಹಕ್ಕನ್ನು(150 ಲಿಂಕ್ಸ್)ಇಟ್ಟಿರುತ್ತಾರೆ.
  • ಹಿಂದಿನಿಂದಲೂ  ಇದ್ದ ರಸ್ತೆ, ಈಗ ಊರ್ಜಿತದಲ್ಲಿರುವ  ಉಪಯೋಗವಾಗುತ್ತಿರುವ ರಸ್ತೆಗಳನ್ನು ಹಕ್ಕಿನಲ್ಲಿ ನಮೂದಿಸಲ್ಪಡದಿದ್ದರೂ ಅದನ್ನು ಮುಚ್ಚುವಂತಿಲ್ಲ.

ನೀರಿನ ಹರಿವು ಮತ್ತು ಪದ್ದತಿ:

  • ಕೆಳಗೆ ಹರಿಯುವ ನೀರು ಮೂಲತಹ ಯಾವ ರೀತಿಯಲ್ಲಿ ಹರಿಯುತ್ತಿತ್ತೋ ಅದೇ ರೀತಿಯಲ್ಲಿ ಹರಿದು ಹೋಗುತ್ತಿರಬೇಕು.
  • ಒಂದು ವೇಳೆ ಕೃಷಿ ಉದ್ದೇಶ, ಮನೆ ಅಥವಾ ಕಟ್ಟಡ ಮಾಡುವಾಗ ಅದನ್ನು ಬದಲಿಸುವ ಸಂದರ್ಭ ಬಂದಲ್ಲಿ ಅದರ ಹರಿವಿನ ವೇಗ ಹಿಂದಿನಂತೆಯೇ ಇರುವಂತೆ ಬದಲಾವಣೆ ಮಾಡಬೇಕು.
  • ನೀರು ನಿಂತು ಚಲಿಸುವುದು, ಇದರಿಂದ ಮೇಲಿನ ಹೊಲದವರಿಗೆ ತೊಂದರೆ ಆಗುವುದು ಆಗಲೇ ಬಾರದು. 
  • ಪ್ರತೀಯೊಬ್ಬರ ಹೊಲದ ನೀರು ಕೆಳಗಿನ ತಗ್ಗಿನ ಜಾಗಕ್ಕೆ ಹರಿದು ಹೋಗಲೇ ಬೇಕು.
  • ಇದಕ್ಕೆ ತಗ್ಗಿನ ಜಾಗದವನು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ.
  • ಹಾಗೆಂದು ಮನಬಂದಂತೆ ನೀರನ್ನು ಕೆಳಗಿನ ಹೊಲದ ಬದಿಗೆ ಹರಿದು ಹೋಗಲು ಬಿಡಬಾರದು.
  • ಎಲ್ಲಿ ಸಹಜವಾಗಿ ನೀರು ಹರಿದು ಹೋಗುತ್ತಿತ್ತೋ ಆದೇ ತೋಡು ( ಕಾಲುವೆ) ವಿಗೆ ನೀರು ಹರಿಯುವಂತೆ ವ್ಯವಸ್ಥೆ ಮಾಡಿ ನೀರನ್ನು ಹರಿ ಬಿಡಬೇಕು.
  • ನೀರು ಹರಿಯುವ ದಾರಿಯನ್ನು ಮುಚ್ಚುವುದು, ಅದಕ್ಕೆ ತಡೆ ಮಾಡುವುದು,  ನೀರು ನಿಂತು ಜೌಗು ಉಂಟಾಗುವಂತೆ ಮಾಡುವುದು ಸಲ್ಲದು.
  • ಹೊಲದ ಮೂಲಕ ಹರಿದು ಹೋಗುವ ನೀರಿನ ತೋಡು ಇದ್ದಲ್ಲಿ, ಅದರಲ್ಲಿ ಬೇಸಿಗೆಯಲ್ಲಿ ನೀರು ಹರಿದುಹೋಗುತ್ತಿದ್ದರೆ ಅದನ್ನು ಮೇಲಿನ ಜಾಗದವನು ಪೂರ್ತಿ ಕಟ್ಟ (ತಡೆ) ಹಾಕಿ ಕೆಳಗೆ ನೀರು ಹರಿದು ಹೋಗದಂತೆ ತಡೆಯುವಂತಿಲ್ಲ.
  • ಅವನು ತನ್ನ ಹೊಲದ  ಮಟ್ಟದಷ್ಟು ಮಾತ್ರ  ಅದಕ್ಕೆ ಒಡ್ಡು ಹಾಕಬಹುದು.
  • ಆ ಒಡ್ಡಿನ ಮೂಲಕ ಹೆಚ್ಚುವರಿ ನೀರು ಕೆಳಕ್ಕೆ ಹರಿದುಹೋಗಬೇಕು.
  • ಕೆಳಭಾಗದ ಫಲಾನುಭವಿಯ ಹೊಲಕ್ಕೆ ನೀರು ಇಲ್ಲದಂತೆ ಆಗಬಾರದು.
  • ಹಾಗೆಂದು ಯಾರೇ ಒಡ್ಡು ಹಾಕಿದರೂ ಮೇಲಿನವವರ ಹೊಲದಲ್ಲಿ ಜೌಗು ಸ್ಥಿತಿ ಉಂಟಾಗಬಾರದು.
ಯಾವ ನ್ಯಾಯಾಲಯವೂ ಇಂತಹ ಪಂಚಾಯತು ಕಟ್ಟೆಯ ತೀರ್ಮಾನವನ್ನು ತಳ್ಳಿ ಹಾಕುತ್ತಿರಲಿಲ್ಲ. ಪಂಚಾಯತು ಕಟ್ಟೆಗಳೇ ಈಗ ಗೌರವ ಕಳೆದುಕೊಳ್ಳುತ್ತಿದೆ.
ಯಾವ ನ್ಯಾಯಾಲಯವೂ ಇಂತಹ ಪಂಚಾಯತು ಕಟ್ಟೆಯ ತೀರ್ಮಾನವನ್ನು ತಳ್ಳಿ ಹಾಕುತ್ತಿರಲಿಲ್ಲ. ಪಂಚಾಯತು ಕಟ್ಟೆಗಳೇ ಈಗ ಗೌರವ ಕಳೆದುಕೊಳ್ಳುತ್ತಿದೆ.

ತೋಟ ಅಥವಾ ಬೇಸಾಯ ಮಾಡುವ ಕ್ರಮ:

  • ಹಿಂದೆ ಪ್ರತೀಯೊಬ್ಬರೂ ಅವರವರ ಜಾಗಕ್ಕೆ ಅಗಳು ಹಾಕುವ ಪದ್ದತಿ ಇತ್ತು.
  • ಅವರವರ ಹೊಲದ ಬೌಂಡರಿಗಳು ಸುಮಾರು 3-4 ಅಡಿ ಅಗಲ ಮತ್ತು  ಆಳದ ಕಾಲುವೆ, ಅದರಿಂದ ತೆಗೆದ ಮಣ್ಣು ಅವನದ್ದೇ ಜಾಗಕ್ಕೆ ಹಾಕುವುದು ಕ್ರಮ.
  • ಅಗಳಿನ ಕಾಲುವೆ ಆ ಹೊಲದ ಮಾಲಿಕನ ಜಾಗವೇ ಆಗಿರುತ್ತದೆ.
  • ಅದಕ್ಕೆ ತಾಗಿದ ಜಾಗದವನೂ ಸಹ ಅಗಳು  ಹಾಕಿಯೇ ತನ್ನ ಜಾಗದ ಬದ್ರತೆಯನ್ನು ಮಾಡಿಕೊಳ್ಳಬೇಕು.
  • ಆಗ ನೀರಿನ ಹರಿವಿಗೆ ತೊಂದರೆ ಉಂಟಾಗುವುದಿಲ್ಲ. ಪರಸ್ಪರರ ಜಾಗದ ಮಧ್ಯೆ ಸುಮಾರು 6-8 ಅಡಿ ಖಾಲಿ ಸ್ಥಳ ಇರುತ್ತಿತ್ತು.
  • ಎಲ್ಲಾ ಕೃಷಿಯನ್ನೂ ಅಗಳಿನ ಮಣ್ಣು ಹಾಕಿದ ಜಾಗದ ನಂತರ ಮಾಡುವುದಾಗಿತ್ತು.
  • ಬದಿಯಲ್ಲಿ ನೆಟ್ಟ ತೆಂಗಿನ ಮರ ಇನ್ನೊಬ್ಬನ ಹೊಲದತ್ತ ಇಣುಕುವ ಪ್ರಶ್ಣೆ ಇರುತ್ತಿರಲಿಲ್ಲ. 
  • ಪಕ್ಕದವನ ಹೊಲದಲ್ಲಿ ಬೆಳೆಯುವ ಭತ್ತದ ಗದ್ದೆಗೆ ತೆಂಗಿನ ಮರದ ಗರಿಗಳ ದಪ್ಪ ಹನಿ ನೀರು ಬೀಳುವ ಸಂಭವವೂ ಇರುತ್ತಿರಲಿಲ್ಲ.
  • ಇನ್ನೊಬ್ಬನ ಜಾಗದ ಮರದ ಬೇರು ಅಥವಾ ಗೆಲ್ಲು ಮತ್ತೊಬ್ಬನ ಜಾಗಕ್ಕೆ ಚಾಚಿ ಹಾನಿ ಉಂಟಾಗುತ್ತಿರಲಿಲ್ಲ.
  • ಆದರೆ ಬಹಳಷ್ಟು ಜನ ಒಬ್ಬರು ಬೌಡರಿ ಹಾಕಿದರೆ ತಾವು ಅದರಲ್ಲೇ ಸುಧಾರಿಸಿಕೊಂಡು ಬೌಡರಿಯ ಬದಿಯಲ್ಲೇ ಕೃಷಿ ಮಾಡುವುದೂ ಇದೆ.
  • 1985 ನೇ ಇಸವಿಯ ತರುವಾಯ ಅಗಳು ಹಾಕುವ ಪದ್ದತಿ ಹೋಗಿ ಕಲ್ಲಿನ ಕಂಬ ನೆಟ್ಟು ತಂತಿ ಬೇಲಿ ಬಂದ ನಂತರ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು.
  • ಅವರವರ ಬೌಂಡರಿಯಲ್ಲಿ ಅವರವರು ಕೃಷಿ ಮಾಡಿ ಪರಸ್ಪರ ದ್ವೇಷ ಸಾಧಿಸುವಂತಾಯಿತು.
  • ಪೂರ್ವ ಶಿಷ್ಟ ಪದ್ದತಿಯ ಪ್ರಕಾರ ಅವರವರ ಜಾಗದಲ್ಲಿ  ಕೃಷಿ ಮಾಡುವಾಗ ಬೌಡರಿಯಿಂದ 5 ಲಿಂಕ್ಸ್ (ಸುಮಾರು 3 ಅಡಿ) ಬಿಟ್ಟು ಕೃಷಿ ಮಾಡಬೇಕು. 
  • ಮರಮಟ್ಟುಗಳನ್ನು ನೆಟ್ಟು ಬೆಳೆಸಿದರೆ ಅದರ ಗೆಲ್ಲುಗಳು ಪಕ್ಕದವನ ಹೊಲಕ್ಕೆ ಚಾಚಿಕೊಳ್ಳದಂತೆ ನೆಟ್ಟವನು ಜಾಗರೂಕತೆ ವಹಿಸಬೇಕು.
  • ಕಾಲ ಕಾಲಕ್ಕೆ ಅದರ ಗೆಲ್ಲುಗಳನ್ನು ಕಡಿಯಬೇಕು. ಬೇರುಗಳೂ ಸಹ ಇನ್ನೊಬ್ಬನ ಕೃಷಿ ಭೂಮಿಯ  ಬೆಳೆಗಳಿಗೆ ಹಾನಿ ಮಾಡಬಾರದು.

ಬೌಂಡರಿ ಮತ್ತು ಅಗಳು:

ಇಂತಹ ಅಗಳು ಈಗ ಕಾಣುವುದಕ್ಕೇ ಇಲ್ಲ.
ಇಂತಹ ಅಗಳು ಈಗ ಕಾಣುವುದಕ್ಕೇ ಇಲ್ಲ.
  • ಅಗಳು ಹಾಕುವ ಸಂಪ್ರದಾಯ ಅವರವರ ಹೊಲದ ಭದ್ರತೆ ಹಾಗೂ ನಿರ್ವಹಣೆ ದೃಷ್ಟಿಯಿಂದ ಉತ್ತಮ ಕ್ರಮ.
  • ಇದು ಬರೇ ಔಂಡರಿಗೆ ಮಾತ್ರವಲ್ಲ. ಹೊಲದಲ್ಲಿ ನೀರು ಹರಿದು ಹೋಗಲು, ಅಗತ್ಯ ಇದ್ದರೆ ನೀರು ಇಂಗಿಸಲು,
  • ಹಾಗೆಯೇ ಪರಸ್ಪರಿಬ್ಬರ  ಅಗಳಿನ ಮದ್ಯಂತರ ಜನ ಜಾನುವಾರುಗಳ ಸಂಚಾರಕ್ಕೆ , ನಿರ್ವಹಣೆಗೆ ಅಗತ್ಯ.
  • ಈ ಪದ್ದತಿಯನ್ನು ಅನುಸರಿಸಿದರೆ ಬೌಂಡರಿ ತಕರಾರುಗಳೇ ಇರುವುದಿಲ್ಲ.

ಗದ್ದೆ ಬೇಸಾಯದ ಪದ್ದತಿಗಳು:

  • ಗದ್ದೆ ಬೇಸಾಯ ಮಾಡುವಾಗ ಹುಣಿ( ಗದ್ದೆಯಿಂದ ಗದ್ದೆಗೆ ಒಡ್ಡುಗಳು) ಯ ಬದಿಯನ್ನು 3 ಅಡಿ  ಬಿಟ್ಟು ಉಳುಮೆ ಮಾಡಬೇಕು.
  • ಗದ್ದೆ ಬೇಸಾಯ ಮಾಡುವಾಗ ನೀರನ್ನು ಬಸಿಯುವಂತೆ ಮಾಡಲು ಹಾಗೂ ಹೆಚ್ಚುವರಿ ನೀರು ಹರಿದು ಹೋಗಲು ಹುಣಿಯ ಬದಿಯಲ್ಲಿ ಕಾಲುವೆ ತರಹ ಮಾಡುವಾಗ ಹುಣಿಗೆ ತಾಗಿಕೊಂಡು ಮಾಡಬಾರದು.
  • ಹುಣಿಯಿಂದ 1 ಅಡಿ ಬಿಟ್ಟು ಮಾಡಬೇಕು. ಹತ್ತಿರಕ್ಕೇ ಮಾಡುವುದರಿಂದ ಹುಣಿ ಅಗಲ ಕಿರಿದಾಗುತ್ತಾ ಕ್ರಮೇಣ ಇಲ್ಲದೆ ಆಗುವ ಸಂಭವ ಇರುತ್ತದೆ.
  • ಎತ್ತರದಲ್ಲಿ ಗದ್ದೆಯುಳ್ಳವರು ತಗ್ಗಿನ ಗದ್ದೆಯವರಿಗೆ ತೊಂದರೆ ಆಗದಂತೆ ನೀರನ್ನು ಹೊರ ಬಿಡಬೇಕು. ಮನ ಬಂದಂತೆ ನೀರು ಬಿಡಬಾರದು.

ಹೊಲ ಮತ್ತು ಬೇಣ:

  • ಬೇಸಾಯ ಮಾಡುವುದು ಮತ್ತು ಬೇಸಾಯಕ್ಕೆ ಪೂರಕವಾದ ಹಸು ಸಾಕಾಣಿಕೆ ಹಾಗೂ ಗೊಬ್ಬರಕ್ಕೆ ಹಸುರೆಲೆ ಸೊಪ್ಪು ಕಟ್ಟಿಗೆಗಳಿಗಾಗಿ
  • ಹಿಂದೆ ಬಹುತೇಕ ಬಾಗಾಯ್ತು ಭೂಮಿಯವರಿಗೆ ಕುಮ್ಕಿ ಅಥವಾ ಬೇಣ ಹೆಸರಿನಲ್ಲಿ ಒಂದಷ್ಟು ಭೂಮಿಯನ್ನು ಮಂಜೂರು ಮಾಡಿರುತ್ತಾರೆ.
  • ಇದರಲ್ಲಿ ಕೃಷಿ ಮಾಡಬಾರದು ಎಂಬ ಶರ್ತಗಳೂ ಇವೆ.
  • ಇದಕ್ಕೆ ಮೌಕಿಕ ಹಕ್ಕು ಇರುತ್ತದೆಯೇ ವಿನಹ ಶಾಸನ ಬದ್ಧ ಹಕ್ಕು ಇರುವುದಿಲ್ಲ.
  • ಇದನ್ನು  ಕೃಷಿಗೆ ಒಳಪಡಿಸದೆ ಅದನ್ನು ಸಂಭಂಧಿಸಿದವರು ಕೊಡಮಾಡಲ್ಪಟ್ಟ ಮೂಲೋದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂಬುದು ಪೂರ್ವ ಶಿಷ್ಟ ಪದ್ದತಿಯಾಗಿರುತ್ತದೆ.

ದನ ಆಡು ಮೇಯಿಸುವಿಕೆ:

  • ದನ ಆಡು ಕುರು, ಕೋಳಿ ಇತ್ಯಾದಿ ಸಾಕು ಪ್ರಾಣಿಗಳನ್ನು  ಸಾಕುವವರು ಅವುಗಳನ್ನು  ಸ್ವೇಚ್ಚೆಯಂತೆ ಮೇಯಲು ಬಿಡಬಾರದು.
  • ಅವುಗಳನ್ನು ಮೇಯಿಸಲು ಎಲ್ಲರೂ ಸೇರಿ ಆಳನ್ನು ಗೊತ್ತು ಮಾಡಬೇಕು. 
  • ಜಾನುವಾರುಗಳು ಮೇಯಲು ಬೇಕಾದ ಸ್ಥಳವನ್ನೂ ಗೊತ್ತುಪಡಿಸಿ ವಿಂಗಡಿಸಿಡಲಾಗಿದ್ದು, ಅಲ್ಲೇ ಮೆಂದು ಬರಬೇಕು ಎಂಬುದು ಪದ್ಧತಿ.
  • ಕೊಳಿಗಳನ್ನು  ಬೇರೆಯವರ ಹೊಲದಲ್ಲಿ ಸ್ವೇಚ್ಚೆಯಿಂದ ಸುತ್ತಾಡಲು ಬಿಡಬಾರದು. ಅದನ್ನು ಪಂಜರದಲ್ಲಿ ಕೂಡಿ ಸಾಕಬೇಕು.

ಇವುಗಳೆಲ್ಲಾ ಈ ಹಿಂದೆ ಹೇಳಿದಂತೆ ಬ್ರಿಟೀಷರ ಕಾಲದಿಂದ ಇದ್ದಂತದ್ದು. ಇದರಲ್ಲಿ ಹಲವು ಪದ್ದತಿಗಳು ಈಗಿನ ಕಾಲಕ್ಕೂ ಸೈ. ಕೆಲವೇ ಕೆಲವು  ಈಗಿನ ಬದಲಾದ ಸಮಯಕ್ಕೆ ಅನುಗುಣವಾಗಿ ಸ್ವಲ್ಪ ಮಾರ್ಪಾಡು ಆಗಬೇಕಾಗಿದೆ.ಆದರೆ ಇದಕ್ಕೆ ಯಾವುದೇ ಲಿಖಿತ ದಾಖಲೆಗಳು ಇಲ್ಲದ ಕಾರಣ ಬದಲಾವಣೆ ಆಗುತ್ತಿಲ್ಲ. ಇದರ ಸಮರ್ಪಕ ಅನುಷ್ಟಾನವೂ ಆಗುತ್ತಿಲ್ಲ.  ರೈತರ ಸಂಘಟನೆಗಳು ಇದನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಇಂತಹ ಪೂರ್ವ ಶಿಷ್ಟ ಪದ್ದತಿಗಳಿಗೆ ಕಾನೂನಾತ್ಮಕವಾಗಿ ಜ್ಯಾರಿಗೆ ತರಲು ಒತ್ತಾಯಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!