ಪ್ರೂನಿಂಗ್ ಮಾಡಿ  ಅಡಿಕೆ ಸಸ್ಯ ಬೆಳವಣಿಗೆ  ಹೆಚ್ಚಿಸಿ.

ಪ್ರೂನಿಂಗ್ ಮಾಡಿದ ಅಡಿಕೆ ಸಸ್ಯ

ಸಸ್ಯಗಳಲ್ಲಿ ಹಿತಮಿತವಾಗಿ ಎಲೆ ಗೆಲ್ಲು ಕಡಿದರೆ ಮತ್ತೆ ಬರುವ ಹೊಸ ಚಿಗುರುಗಳು ಸಧೃಢವಾಗಿ ಬರುತ್ತವೆ. ಏಕದಳ ಸಸ್ಯಗಳ ಗೆಲ್ಲು ಕಡಿದರೆ  ನಿರಾಯಾಸವಾಗಿ ಅದು ಚಿಗುರಿ ಬದುಕಿಕೊಳ್ಳುತ್ತದೆ. ಹಾಗೆಂದು ದ್ವಿದಳ ಸಸ್ಯಗಳಲ್ಲಿ ಎಲ್ಲಾ ಎಲೆ ಕಡಿಯುವ ಕ್ರಮ ಇಲ್ಲ. ಅದನ್ನು ಹಿತ ಮಿತವಾಗಿ ಸ್ವಲ್ಪ ಪ್ರೂನಿಂಗ್ ಮಾಡಿ ಬೆಳವಣಿಗೆಗೆ ಬೂಸ್ಟ್ ಕೊಡಬಹುದು. ಅಡಿಕೆ ಸಸಿಗಳಲ್ಲಿ ಒಂದು ಎರಡು ವರ್ಷ ಪ್ರಾಯದಲ್ಲಿ  ಬೆಳವಣಿಗೆ ಹೆಚ್ಚಿಸಲು ಕೆಳಭಾಗದ ಎರಡು ಎಲೆಯನ್ನು ಅರ್ಧ ದಷ್ಟು ತುಂಡು ಮಾಡಿದರೆ ಸಸ್ಯ ಬೆಳವಣಿಗೆಗೆ ಅನುಕೂಲವಾಗುತ್ತದೆ.

ಅಡಿಕೆ ಸಸಿ ಬೆಳೆಸುವಾಗ ಮೊದಲೆರಡು  ವರ್ಷ ಉತ್ತಮವಾಗಿ ಬೆಳೆಸಿದರೆ ಅದರ ಭವಿಷ್ಯವೇ ಬದಲಾಗುತ್ತದೆ. ಮೊದಲ ಎರಡು ವರ್ಷ  ಬೆಳೆವಣಿಗೆ  ಉತ್ತೇಜಿಸಲು ಎಲೆ ಪ್ರೂನಿಂಗ್  ಸಹಕಾರಿ. ಇದನ್ನು ಕೆಲವು ರೈತರು ಮಾಡಿ ನೋಡಿದ್ದಾರೆ. ಫಲವನ್ನೂ ಕಂಡಿದ್ದಾರೆ.

ಹಿಂದೊಂಮ್ಮೆ ಅಡಿಕೆ ಸಸ್ಯದ ಗರಿ ಕತ್ತರಿಸಿ ಸಸ್ಯವನ್ನು ಕುಬ್ಜವಾಗಿಸಬಹುದು ಎಂಬ ಪ್ರಚಾರ ಬಹಳ ಸುದ್ದಿಯಾಗಿತ್ತು. ಆದರೆ ಅದರ ಹಿಂದೆ ಹೋದಾಗ ತಿಳಿದದ್ದು ಸಸಿ ಗಿಡ್ಡವಾಗುವುದಲ್ಲ. ಸಸ್ಯ ಬೆಳವಣಿಗೆ ಸ್ವಲ್ಪ ಹೆಚ್ಚಳವಾಗುವುದು. ಹಾಗೆಂದು ಎಲೆಗಳನ್ನೆಲ್ಲಾ ಕತ್ತರಿಸುವುದಲ್ಲ. ಹಿತ ಮಿತ ಪ್ರೂನಿಂಗ್ ಅಷ್ಟೇ.

 ಮನುಷ್ಯ ಸಣ್ಣ ಪ್ರಾಯದಲ್ಲಿ  ಚೆನ್ನಾಗಿ ಬೆಳೆದರೆ ಮುಂದೆ ಅದೇ ಅವನಿಗೆ  ಆರೋಗ್ಯಕರ ಬೆಳವಣಿಗೆಗೆ ಅಡಿಪಾಯವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಅದೇ ರೀತಿಯಲ್ಲಿ ಸಸ್ಯಗಳೂ ಸಹ. ಸಸಿ ನೆಟ್ಟು ಬಿಟ್ಟರೆ ಮುಗಿಯಲಿಲ್ಲ. ಅದನ್ನು ಮಾಕ್ಕಳನ್ನು ಸಾಕಿದಂತೆ  ಎಳವೆಯಲ್ಲಿ  ಬೆಳೆಸಬೇಕು.

ಹೇಗೆ ಬೆಳೆಸುವುದು ಎನ್ನುತ್ತೀರಾ?  ಬರೇ ಗೊಬ್ಬರ ಕೊಡುವುದು ಒಂದರಿಂದಲೇ ಸಸ್ಯವನ್ನು ಉತ್ತಮವಾಗಿ ಬೆಳೆಸಲಿಕ್ಕೆ ಆಗುವುದಿಲ್ಲ.  ಅದರ  ಜೊತೆಗೆ ಕೆಲವು ನಿರ್ವಹಣೆ ಕ್ರಮವನ್ನೂ ಪಾಲಿಸಿದರೆ  ಮಾತ್ರ ಬೆಳವಣಿಗೆ  ಉತ್ತಮವಾಗುತ್ತದೆ.   

ಏನು ಮಾಡಬೇಕು:

 • ಅಡಿಕೆ  ಸಸ್ಯವನ್ನು ನೆಟ್ಟು ಆರು  ತಿಂಗಳ ತನಕ ಉತ್ತಮ ಬಸಿಗಾಲುವೆ ಮತ್ತು ಪೋಷಕಗಳನ್ನು ಕೊಟ್ಟು ಬೆಳೆಸಿರಿ.
 • 6 ತಿಂಗಳ ನಂತರ ಸುಳಿ ಭಾಗದ ಎರಡು ಎಲೆಯನ್ನು ಬಿಟ್ಟು ಕೆಳಭಾಗದ 2 ಎಲೆಯನ್ನು  ಅರ್ಧ ಪಾಲು ಕತ್ತರಿಸಿರಿ.
 • ಆಗ ಅದಕ್ಕೆ  ಬಳಕೆಯಾಗುವ ಪೋಷಕಗಳು  ಉಳಿತಾಯವಾಗುತ್ತದೆ.
 • ಅದು ಹೊಸ ಎಲೆಯ ಬೆಳವಣಿಗೆ ದೊರೆಯುತ್ತದೆ ಇದರಿಂದಾಗಿ ಅದರ ಬೆಳವಣಿಗೆ  ಶೀಘ್ರವಾಗುತ್ತದೆ.
 • ಗಿಡ ದೊಡ್ದದಾದ ನಂತರ ಇದನ್ನು ಮಾಡಬೇಕಾಗಿಲ್ಲ.
 • ಗಾಳಿ ಬೆಳಕು ಇರುವಲ್ಲಿ ಹೆಚ್ಚು ಪ್ರಯೋಜನಕಾರಿ. ನೆರಳಿನಲ್ಲಿ ಇದರ ಫಲಿತಾಂಶ ಕಂಡವರು ಇಲ್ಲ.
ಈ ರೀತಿ ಪ್ರೂನಿಂಗ್ ಮಾಡಬೇಕು.
ಈ ರೀತಿ ಪ್ರೂನಿಂಗ್ ಮಾಡಬೇಕು.

ಇದು ಹೇಗೆ:

 • ತೀರಾ ಎಳೆ ಸಸ್ಯದ ಗರಿಯನ್ನು ಕತ್ತರಿಸಬೇಡಿ. 5 ಕ್ಕಿಂತ ಹೆಚ್ಚು ಎಲೆ ಇದ್ದಾಗ ಮಾತ್ರ  ಕತ್ತರಿಸುವಿಕೆ ಪ್ರಾರಂಭಿಸಿ.
 • ಕತ್ತರಿಸುವಾಗ ಅರ್ಧ ಭಾಗ ಮಾತ್ರ  ಕತ್ತರಿಸಿ. ಬುಡದಿಂದ ಕತ್ತರಿಸಬೇಡಿ.
 • ಕೊಡಬೇಕಾದ ಎಲ್ಲಾ ಗೊಬ್ಬರಗಳನ್ನು  ಕೊಡಲೇ ಬೇಕು.
 • ಇದು  ಹೊಸ ಸುಳಿಗೆ  ಹೆಚ್ಚು ಆಹಾರ ದೊರೆಯುವಂತೆ ಮಾಡುತ್ತದೆ ಮತ್ತು ಅದಕ್ಕೆ ಶಕ್ತಿಯನ್ನು ಒದಗಿಸುತ್ತದೆಯೇ ವಿನಹ ಬೇರೇನೂ ಇಲ್ಲ.
 • ಇದು 1990  ನೇ ಇಸವಿಯಿಂದಲೂ ಬಳಕೆಯಲ್ಲಿದ್ದ ವಿಧಾನ. ಇದನ್ನು ಶಿರಸಿಯ ದಿವಂಗತ ಭೈರುಂಬೆ  ಜಿ ಎಂ ಹೆಗಡೆಯವರು ಮಾಡುತ್ತಿದ್ದರು. ಈಗ ಕೆಲವರು ಹೀಗೆ ಮಾಡುತ್ತಾರೆ.

ಬರೇ ಬೆಳವಣಿಗೆ ಮಾತ್ರವಲ್ಲ:

 • ಕೆಲವು ಅಡಿಕೆ ಸಸಿಗಳ ಲ್ಲಿ ಗರಿಗಳು ಕಾಂಡಕ್ಕೆ ಜೋತು ಬೀಳುವ ಸಮಸ್ಯೆ ಇರುತ್ತದೆ. ಇದನ್ನು ಸರಿಪಡಿಸಲು ಈ ವಿಧಾನ ಕೆಲವೊಮ್ಮೆ ಫಲಕಾರಿಯಾಗುತ್ತದೆ.
 • ಕೆಲವು ಅಡಿಕೆ ಸಸಿಗಳ ಎಲೆಯಲ್ಲಿ ಚುಕ್ಕೆ ಚುಕ್ಕೆ ಬೀಳುವ ಸಮಸ್ಯೆ ಇರುತ್ತದೆ.
 • ಇಂತಹ  ಸಮಸ್ಯೆ ಇರುವ ಸಸಿಯ ಆ ಗರಿಯನ್ನು ಕತ್ತರಿಸಿ ತೆಗೆಯುವುದರಿಂದ ಆ ಚುಕ್ಕೆ ರೋಗ ಬೇರೆ ಎಲೆಗಳಿಗೆ ಹರಡುವುದು ತಪ್ಪುತ್ತದೆ.
 • ಕೆಲವು ಸಂಧರ್ಭಗಳಲ್ಲಿ ಎಲೆ ಕಡಿದ ನಂತರ ಕೃಷವಾಗಿದ್ದ ಸಸಿಗಳು ಚೆನ್ನಾಗಿ  ಬೆಳವಣಿಗೆ ಆಗುವುದೂ ಇದೆ.
 • ಸುಳಿ ಭಾಗದ ಎಲೆಗೆ  ಏನಾದರೂ ಸಮಸ್ಯೆ ಉಂಟಾಗಿ ಅದು ಗಿಡ್ಡವಾದರೆ, ಆ ಎಲೆ ಉದುರಿದ ನಂತರ ಅಲ್ಲಿ ಉಂಟಾಗುವ ಗಂಟು ಸ್ವಲ್ಪ ಹತ್ತಿರ ಇರುತ್ತದೆ.
 • ಆ ಸಿದ್ದಾಂತದಂತೆ ಎಲೆಯ ತುದಿ ಕತ್ತರಿಸಿದಾಗ ಗಂಟು ಸ್ವಲ್ಪ ಹತ್ತಿರವಾಗುವ ಸಾಧ್ಯತೆ ಇದೆ.
 • ಯಾಕೆಂದರೆ ಕತ್ತರಿಸಿದ ಎಲೆಯು ಸಲ್ಪ ಬೇಗ ಬೆಳೆದು ಉದುರುತ್ತದೆ.
 • ಮೈಟ್ ಇತ್ಯಾದಿ ಎಲೆಯ ತುದಿ ಭಾಗಗಳಿಗೆ  ಹಾನಿ ಮಾಡಿ ಎಲೆ ಹಳದಿಯಾಗಿ ಕಾಣುತ್ತಿದ್ದರೆ ಬಾಧಿತ ಭಾಗವನ್ನು ಕತ್ತರಿಸಿ ತೆಗೆದು ದೂರ ಎಸೆತ್ಯುವುದರಿಂದ ಮೈಟ್  ಸಮಸ್ಯೆ ಕಡಿಮೆಯಾಗುತ್ತದೆ.

ಅಡಿಕೆ  ಬೆಳೆಸುವವರು ಈ ರೀತಿ ಸಸ್ಯ ಬೆಳವಣಿಗೆಯನ್ನು ನಿಯಂತ್ರಿಸುದರಿಂದ  ಬೇಗ ಸಸ್ಯ ಬೆಳವಣಿಗೆ ಪಡೆಯಬಹುದು. ಯಾವುದೇ ಕಾರಣಕ್ಕೆ ಎಲ್ಲಾ ಎಲೆಗಳನ್ನೂ ಕಡಿಯಬೇಡಿ. ಎಲೆಗಳೇ ಸಸ್ಯ ಬೆಳವಣಿಗೆಗೆ ಬೇಕಾಗುವ ಆಹಾರ ತಯಾರಿಸಿಕೊಡುವವುಗಳು. ಒಂದು ಎರಡು ಗಿಡವನ್ನು ಪ್ರಾಯೋಗಿಕವಾಗಿ ಮಾಡಿ ತೃಪ್ತಿ ಕಂಡರೆ ಮುಂದುವರಿಸಿ.

Leave a Reply

Your email address will not be published. Required fields are marked *

error: Content is protected !!