ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು ಕೃಷಿಕರ ಬಗ್ಗೆ ತೋರಿದ ಕಳಕಳಿ.

ಸುಪ್ರೀಮ್ ಕೋರ್ಟ್

ಎಲ್ಲರೂ ಕೃಷಿಕರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ. ಪರಿಸರ ಹಾನಿ ಮಾಡುತ್ತಾರೆ. ಮಾಲಿನ್ಯ ಮಾಡುತ್ತಾರೆ ಎಂದು ತಗಾದೆ ತೆಗೆಯುವವರು. ಇವರೆಲ್ಲರಿಗೂ ಒಂದು ರೀತಿಯಲ್ಲಿ  ಚಾಟಿ ಏಟಿನ ತರಹ ಪ್ರಶ್ನೆಯೊಂದನ್ನು ಭಾರತದ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾದ ಶ್ರೀ ಎನ್ ವಿ ರಮಣ ಇವರು ಕೇಳಿದ್ದಾರೆ.

ಎಲ್ಲಾ ತಕರಾರಿನಲ್ಲೂ ರೈತರ ವಿಷಯಗಳನ್ನು ನ್ಯಾಯಾಲಯದ ಕಟ್ಟಲೆಗೆ ತರುವುದು ಸೂಕ್ತವಲ್ಲ. ರೈತರು ಅವರ ಆರ್ಥಿಕ ಮೂಲಕ್ಕನುಗುಣವಾಗಿ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಕೃಷಿ ಕಾಯಕದಲ್ಲಿ ಮಾಡಬಹುದಾದರೂ ಅದನ್ನು ನಾವು ಬೇರೆ ತಪ್ಪುಗಳಿಗೆ ಹೋಲಿಸಿದರೆ ಏನೂ ಮಹಾಪರಾಧವಾಗುವುದಿಲ್ಲ. ಅವರನ್ನು ವೃಥಾ ದೂಷಣೆ ಮಾಡುವ ಅಥವಾ ಅವರಿಗೆ ಹೊರಲಾಗದ ಹೊರೆಯನ್ನು ಹೊರಿಸುವುದು ಸರಿಯಲ್ಲ ಎಂಬುದಾಗಿ ಅವರು ಅಭಿಪ್ರಾಯ ಪಡುತ್ತಾರೆ.

ವಿಷಯ ಇದು:

ದೆಹಲಿ ಮುಂತಾದ ನಗರಗಳಲ್ಲಿ ಮಾಲಿನ್ಯ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ಹರ್ಯಾಣ ಮುಂತಾದ  ರಾಜ್ಯಗಳ ರೈತರು ಭತ್ತದ ಹುಲ್ಲನ್ನು ಸುಡುವುದು ಕಾರಣವಂತೆ. ಈ ಹೊಗೆಯಿಂದಾಗಗಿ ನಗರಗಳಲ್ಲಿ ಮಾಲಿನ್ಯ ಹೆಚ್ಚುತ್ತಿದೆಯಂತೆ. ಈ ಕುರಿತಾಗಿ Aditya Dubey and law student Aman Banka  ಇವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯವು ಹೇಳಿದ್ದು ಹೀಗೆ.

ಕೃಷಿ ತ್ಯಾಜ್ಯ ಸುಡುವಿಕೆ
 • “ಎಲ್ಲದಕ್ಕೂ ರೈತರನ್ನು ಅಖಾಡಕ್ಕೆ ತರುವುದು ಯಾಕೆ. ಇತ್ತೀಚೆಗೆ ಇದೊಂದು ಫ್ಯಾಶನ್ ಆಗಿ ಬಿಟ್ಟಿದೆ.
 • ರೈತನ ಮಗನಾಗಿ ನನಗೆ ರೈತರಾದವರ ಕಷ್ಟ ಗೊತ್ತಿದೆ.
 • ರೈತರು ತಮ್ಮ ಹೊಲದ ಪೈರನ್ನು ಸರಿಯಾದ ವಿಲೇವಾರಿ ಮಾಡಲು ಸಾಕಷ್ಟು ಹಣಕಾಸಿನ ಮೂಲ ಇಲ್ಲದ ಕಾರಣಕ್ಕೆ ಅದನ್ನು ಬೆಂಕಿ ಹಾಕಿ ಸುಟ್ಟು ವಿವೇವಾರಿ ಮಾಡುತ್ತಿದ್ದಾರೆ.
 • ಅವರಿಗೆ ಹೀಗೆ ಮಾಡಿದರೆ ಏನು ತೊಂದರೆ ಎಂದು ಮನವರಿಕೆ ಮಾಡಿಕೊಟ್ಟು ಉಚಿತವಾಗಿ ಅದನ್ನು ಒಟ್ಟು ಮಾಡಿ ಉಂಡೆ ಮಾಡುವ ಯಂತ್ರಗಳನ್ನು ಒದಗಿಸಿ.
 • ಅದು ಬಿಟ್ಟು ಲಕ್ಷಗಟ್ಟಲೆ ಹುಲ್ಲು ಒಟ್ಟು ಸೇರಿಸಿ ಅದನ್ನು ಉಂಡೆ ಕಟ್ಟುವ ಯಂತ್ರಗಳಿವೆ ಎನ್ನುತ್ತೀರಲ್ಲಾ ಅವರೆಲ್ಲಾ ಉಚಿತವಾಗಿ ಈ ಕೆಲಸ ಮಾಡಿಕೊಡುತ್ತಾರೆಯೇ? 
 • ಅವರಿಗೆ ಹಣ ಕೊಡಬೇಡವೇ?
 • ರೈತನ ಮಗನಾಗಿ ನನಗೆ ತಿಳಿದಿರುವಂತೆ ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ ಗಳಲ್ಲಿ ನಮ್ಮ ದೇಶದ ಕಾನೂನಿನಂತೆ ಬಹುತೇಕ ರೈತರಲ್ಲಿ 2-3 ಎಕ್ರೆಯಷ್ಟು ಮಾತ್ರ ಭೂಮಿ ಇರುತ್ತದೆ.
 • ಈ ಹಿಡುವಳಿಯಲ್ಲಿ ಅವರು ಲಾಭ ಮಾಡಿಕೊಳ್ಳುವುದೂ ಕಷ್ಟ.
 • ಹಾಗಿರುವಾಗ ಯಂತ್ರ ಬಾಡಿಗೆಗೆ ಎಲ್ಲಿಂದ ಹಣ ಒಟ್ಟು ಸೇರಿಸುವುದು?” 
 • ನ್ಯಾಯಮೂರ್ತಿಗಳಾದ ಕಾಂತ ಇವರು ಸರಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇವರಿಗೆ ಯಾಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಂತ್ರಗಳನ್ನು ಒದಗಿಸುವ ವ್ಯವಸ್ಥೆ ಮಾಡಬಾರದು.
 • ಇದನ್ನು ಒಟ್ಟು ಸೇರಿಸಿ ಪೇಪರ್ ಮಿಲ್ ಅಥವಾ ಮೇವಿನ ಕೊರತೆ ಎದುರಿಸುವ ರಾಜಸ್ಥಾನದಲ್ಲಿ ಆಡುಗಳಿಗೆ ಮೇವಾಗಿ ಬಳಸಬಾರದು ಎಂದು ಕೇಳಿದ್ದಾರೆ. 
 • ಅದಕ್ಕೆ ಮೆಹ್ತಾ ಇವರು ರೈತರಿಗೆ ಈ ಯಂತ್ರಗಳು 80% ಸಹಾಯಧನದಲ್ಲಿ ಲಭ್ಯವಿದೆ ಎಂದರು.
 • ಅದಕ್ಕೆ ನ್ಯಾಯಮೂರ್ತಿಗಳು ನಿಜವಾದ ಸಬ್ಸಿಡಿ ಎಷ್ಟು ಎಂದು ದಾಖಲಿಸಿಕೊಳ್ಳುವಂತೆ ತಿಳಿಸಿದರು.
 • ಎಲ್ಲರೂ ಹೀಗೆ ರೈತರನ್ನೇ ದೂಷಿಸುತ್ತಾ ಇರುವುದೇ?
 • ರೈತರು ಭತ್ತದ ಹುಲ್ಲು ಸುಡುವುದು ದೊಡ್ಡ ಪ್ರಮಾದವಾದರೆ ಅದೆಷ್ಟೋ ಪಠಾಕಿಗಳನ್ನು ದೆಹಲಿಯಲ್ಲಿ ದೀಪಾವಳಿ ಸಮಯದಲ್ಲಿ ಉರಿಸಲಾಗಿದೆ.
 • ಅದಕ್ಕೆ ಪೋಲೀಸರು ಏನು ಕ್ರಮ ಕೈಗೊಂಡಿದ್ದಾರೆ? ಮಾಲಿನ್ಯ ಹೆಚ್ಚಾದರೆ ಎರಡು ಮೂರು ದಿನ ಲಾಕ್ ಡೌನ್ ಮಾಡಿ ಅದು ಬಿಟ್ಟು ರೈತರನ್ನು ಈ ವಿಷಯದಲ್ಲಿ ಟಾರ್ಗೆಟ್ ಮಾಡಬೇಡಿ.
 • ಇದು ಜವಾಬ್ಧಾರಿಯುತ ಸ್ಥಾನದಲ್ಲಿರುವ ನಿಜವಾದ ರೈತನ ಮನಸ್ಸನು ಅರ್ಥೈಸಿಕೊಂಡು ಹೇಳುವ ಮಾತು.

ರೈತರ ವಿಷಯದಲ್ಲಿ ತಗಾದೆ ಇದೊಂದೇ ಆಲ್ಲ:

 • ನಮ್ಮಲ್ಲಿ  ಹೆಚ್ಚಿನವರು ಅಡಿಕೆ ಬೆಳೆಯುವ ರೈತರು. ಇತ್ತೀಚೆಗೆ ಅಡಿಕೆಯಲ್ಲಿ ಹಾನಿಕಾರಕ ಅಂಶಗಳಿವೆ ಎಂಬ ತಗಾದೆ ಬಂದಿದೆ.
 • ಹಿಂದೆಯೂ ಬಂದಿತ್ತು. ಈ ಎಲ್ಲಾ ಶೋಧನೆಗಳು ಹೇಗೆ ಮಾಡಲಾಗಿದೆ ಯಾವ ಮಾದರಿಯಲ್ಲಿ ಮಾಡಲಾಗಿದೆ ಎಂಬುದನ್ನು ಬಹಿರಂಗಗೊಳಿಸದೆ
 • ಒಟ್ಟಾರೆ ಅಡಿಕೆ ನಿಷೇಧಿಸಬೇಕು ಎಂದು ಬಾಲಿಶ ಹೇಳಿಕೆ ಕೊಟ್ಟು ,ರೈತರ ಬದುಕಿನಲ್ಲಿ ಕೆಲವರು ಆಟ ಆಡುತ್ತಿದ್ದಾರೆ.
 • ಇನ್ನೂ ಒಂದು ವಿಷಯ ಗೊತ್ತೇ? ಭತ್ತ ಬೆಳೆಯುವುದು ಸಹ ಪರಿಸರಕ್ಕೆ ಹಾಳು ಎಂಬುದಾಗಿ ಒಂದು ತಗಾದೆ ಇದೆ.
 • ಭತ್ತ ಬೆಳೆಯುವಾಗ ಸಾಕಷ್ಟು ಮಿಥೇನ್ ಅನಿಲ ಬಿಡುಗಡೆ ಆಗುತ್ತದೆಯಂತೆ.
 • ಹಾಗೆಯೇ ಅಂಗಾರಾಮ್ಲ ಬಿಡುಗಡೆ ಆಗುತ್ತದೆ ಎಂಬುದಾಗಿಯೂ ಒಂದು ವಾದ ಇದೆ.
 • ಕೆಲವು ಸಂಶೋಧನೆ ಮತ್ತು ಸಂಶೊಧನಾ ವರದಿಗಳು ತಜ್ಞರು ತಮ್ಮ ಪದವಿಗಳಿಗಾಗಿ ಮಾಡಿರುತ್ತಾರೆ.
 • ಇನ್ನು ಕೆಲವು ಸರಕಾರ ವರದಿಯನ್ನು ಹೀಗೆಯೇ ನೀಡಬೇಕು ಎಂದು ಅವರಿಗೆ ಬೇಕಾದ  ತಜ್ಞರ ಸಮಿತಿ ಮಾಡಿ ವರದಿ ಪಡೆಯುತ್ತದೆ.
 • ಇದರಲ್ಲಿ ಕೆಲವು ವಿಷಯ ಸಿಕ್ಕದಿರುವುದಕ್ಕೆ ಇಂತಹ ಸೆನ್ಸೇಷನಲ್ ವಿಚಾರಗಳನ್ನು  ಬಳಸಿಕೊಳ್ಳುವುದು ಎಂದು ಕಾಣಿಸುತ್ತದೆ.
 • ಯಾವ ತಜ್ಞನೂ ತಂಬಾಕು  ಬೆಳೆ ನಿಷೇಧಿಸಿ ಎನ್ನುವುದಿಲ್ಲ.
 • ಸಿಗರೇಟು, ಬೀಡಿ ನಿಷೇಧಿಸಿ ಎನ್ನುವುದಿಲ್ಲ.
 • ಉಗ್ರಾಣಗಳ ದಾಸ್ತಾನು ವ್ಯವಸ್ಥೆಯ ಬಗ್ಗೆ ಚಕಾರ ಎತ್ತುವುದಿಲ್ಲ.
 • ಹೊಗೆಯುಗುಳುವ ಉದ್ದಿಮೆ ನಡೆಸುವವರ ಬಗ್ಗೆ ಮಾತಾಡುವುದಿಲ್ಲ.  
 •  ಅಲ್ಲೆಲ್ಲಾ ಸಾರ್ವಜನಿಕ ಅನಾರೋಗ್ಯಕ್ಕೆ ಕಾರಣವಾದ ಅಂಶಗಳು ಇದ್ದೇ ಇವೆ.

ರೈತರ ಮಕ್ಕಳು ಕಾನೂನು ಓದಬೇಕು:

ಮೇಲಿನ ವಿಷಯ ಒಂದು ಉದಾಹರಣೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರೆ ಬರೇ ಕಾನೂನು ಮಾತ್ರವಲ್ಲ. ಮಾನವೀಯತೆಯನ್ನೂ ಕಾನೂನಿನ ಒಳಗೆ ತರಬಹುದು.ಇದನ್ನು ಈ ವಿಷಯದಿಂದ ನಾವೆಲ್ಲಾ ತಿಳಿಯಬಹುದು.

ನಮ್ಮಲ್ಲಿ ಹಲವಾರು ಇಂತಹ ಸಮಸ್ಯೆಗಳಿವೆ.ಅದೆಲ್ಲಾ ಜಠಿಲ ಸಮಸ್ಯೆಯಾಗಿಯೇ ಮುಂದುವರಿಯುತ್ತಿವೆ. ಕಾರಣ ಬದಲಾವಣೆ ಆಗಲು ಅದನ್ನು ಫಲೋ ಮಾಡುವವರೇ ಇಲ್ಲ.  ರೈತರ ಹೊಲ ಮತ್ತು ಕೃಷಿ ವ್ಯವಸ್ಥೆಗಳು ಇಂದು ನೆರೆ ದೇಶಗಳ ನಡುವಿನ ಗುದ್ದಾಟಕ್ಕಿಂತ ದೊಡ್ಡದಾಗಿ ಇದೆ. ಪರಸ್ಪರ ನೆರೆ ಹೊರೆಯವರು ವೈರಿಗಳಾಗಿ ಬದುಕುತ್ತಿದ್ದಾರೆ. ಇದೆಲ್ಲಾ ಬದಲಾವಣೆ ಆಗದಿದ್ದರೆ ನಮ್ಮ  ದೇಶದ ಕೃಷಿ ವ್ಯವಸ್ಥೆ ಇನ್ನು  100 ವರ್ಷವಾದರೂ ಅಭಿವೃದ್ದಿ ಆಗುವುದಿಲ್ಲ. ಕಂದಾಯ ಕಾನೂನುಗಳು, ಹಕ್ಕುಗಳು ಅದರ ಪ್ರಸ್ತುತತೆಯನ್ನು ರೈತರ ಮಕ್ಕಳು ಕಾನೂನು ವ್ಯಾಸಂಗ ಮಾಡಿ ನ್ಯಾಯಾಲಯದಲ್ಲಿ ಪ್ರಶ್ನಿಸುವ ಮೂಲಕ ಅಥವಾ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿ ಸ್ಥಾನದಲ್ಲಿ ಕುಳಿತು  ಬದಲಾವಣೆಗೆ ಸರಕಾರಕ್ಕೆ ಸೂಚಿಸುವ ಮೂಲಕ ಎಲ್ಲರ ಒಳಿತಿಗೆ ಕಾರಣರಾಗಬಹುದು.

ರೈತರ ಮಕ್ಕಳಿಗೆ ಮಾತ್ರ ರೈತರ ನೈಜ ಕಷ್ಟಗಳು ಗೊತ್ತಿರುತ್ತವೆ. ಅದರ ಒಳಹೊರಗನ್ನು ಅರ್ಥ ಮಾಡಿಕೊಳ್ಳುವುದೂ ಗೊತ್ತಿರುತ್ತದೆ. ಅದೆಲ್ಲಕ್ಕಿಂತಲೂ ಮುಖ್ಯವಾಗಿ ರೈತ ಮಕ್ಕಳು ಹುಟ್ಟು ಸಹಜವಾಗಿ ಸಮಾಜಮುಖಿಗಳು ಮತ್ತು ಪ್ರಾಮಾಣಿಕತೆಯನ್ನು ಕೂಡಿಸಿಕೊಂಡವರಾಗಿರುತ್ತಾರೆ. ಆದ ಕಾರಣ ರೈತರ ವಿಷಯದಲ್ಲಿ ಮಾತಾಡಲು ರೈತರೇ ಆದರೆ ಉತ್ತಮ.

Leave a Reply

Your email address will not be published. Required fields are marked *

error: Content is protected !!