ನೇರಳೆ ಮರವನ್ನು ಪೊದೆಯಾಗಿ ಬೆಳೆಸುವ ವಿಧಾನ.

ನೇರಳೆ ಮರವನ್ನು ಪೊದೆಯಾಗಿ ಬೆಳೆಸುವ ವಿಧಾನ

ನೇರಳೆ ಮರ ಇದು ನಮಗೆಲ್ಲಾ ಗೊತ್ತಿರುವಂತದ್ದು. ಮರ ಪೊದೆಯಾಗಿದ್ದರೆ ಕೊಯ್ಯುವುದು ಬಹಳ ಸುಲಭ. ಇದನ್ನು ತರಬೇತಿಗೊಳಿಸುತ್ತಾ ಪೊದೆಯಾಕಾರದಲ್ಲಿ ಬೆಳೆಸಲು ಸಾಧ್ಯ. ನೇರಳೆ ಹಣ್ಣು ಒಂದು ಆರೋಗ್ಯ ಸಂಜೀವಿನಿಯಾಗಿದ್ದು, ಇದರ ಹಣ್ಣಿಗೆ ಭಾರೀ ಬೇಡಿಕೆ. ಇದರ ಬೀಜಕ್ಕೂ ಸಹ ಬೆಲೆ ಇದ್ದು, ಎಲ್ಲಾ ಬೆಳೆಗಳ ಜೊತೆಗೆ ಸ್ವಲ್ಪ ನೇರಳೆ  ಬೆಳೆಯೂ ಇದ್ದರೆ  ಒಳ್ಳೆಯದು.

ಹಳ್ಳಿಯ ಹಿರಿಯ ತಲೆಮಾರಿನ ಜನರಿಗೆ ನೇರಳೆ ಹಣ್ಣು , ಕುಂಟು ನೇರಳೆ ಹಣ್ಣು, ಹಾಗೆಯೇ ಇನ್ನಿತರ ಕಾಡು ಹಣ್ಣುಗಳನ್ನು ತಿಂದ ಅನುಭವ ಇದೆ. ಹಿಂದೆ ಹಳ್ಳಿಗಳ ಜನ ಒಂದೆರಡು ಮೈಲುಗಳಷ್ಟಾದರೂ ಕಾಲ್ನಡಿಗೆಯಲ್ಲಿ ನಡೆದು, ಶಾಲೆ ಕಾಲೇಜು ವ್ಯಾಸಂಗ ಮಾಡಿದವರು. ಪ್ರತೀಯೊಬ್ಬರೂ ಕೃಷಿ ಮೂಲದವರು. ಹಳ್ಳಿಯ ದಾರಿ ಅಂಚಿನ ಮರಗಿಡಗಳು, ಅದರಲ್ಲಿ ಬಿಡುವ ಹಣ್ಣು ಹಂಪಲುಗಳ ಎಲ್ಲದರ ಪರಿಚಯ ಅವರಿಗಿತ್ತು. ಎಲ್ಲಿ ಮಾವಿನ ಮರ ಇದೆ.  ಎಲ್ಲಿ ಕುಂಟು ನೇರಳೆ, ನೇರಳೆ ಹಣ್ಣಿನ ಮರವಿದೆ ಎಂಬುದೆಲ್ಲಾ  ಗೊತ್ತಿರುತ್ತಿತ್ತು. ಶಾಲೆಗೆ ಹೋಗುವಾಗ, ಬರುವಾಗ ಋತುಮಾನದಲ್ಲಿ ಸಿಗುವ ಈ ಎಲ್ಲಾ ಹಣ್ಣು ಹಂಪಲುಗಳನ್ನು ತಿನ್ನುತ್ತಿದ್ದವರು. ಇನ್ನು ರಜಾಕಾಲದಲ್ಲಿ  ಕೇಳುವುದೇ ಬೇಡ. ಇದಕ್ಕಿಂತಲೂ ಮುಖ್ಯವಾಗಿ ಹಿಂದೆ ಕೃಷಿಕರ  ಹೊಲದಲ್ಲಿ  ಹಾಗೂ ಅನಾದೀನ ಸ್ಥಳಗಳಲ್ಲಿ  ಒಂದಷ್ಟು ಹಣ್ಣು ಕೊಡುವ ಮರಮಟ್ಟುಗಳಿತ್ತು. ಕ್ರಮೇಣ ಈ ಎಲ್ಲಾ ಸ್ಥಳಗಳೂ ಕೃಷಿಗೊಳಪಟ್ಟವು. ಅನಾದೀನ ಸ್ಥಳಗಳು ಅತಿಕ್ರಮಣಕ್ಕೊಳಗಾಗಿ  ಮನೆನಿವೇಶನಗಳಾದವು. ಕಾಡುಗಳೆಂಬ ಹೆಸರಿನಿಂದ  ಕರೆಯುತ್ತಿದ್ದ ಪ್ರದೇಶಗಳೂ ಇಲ್ಲದಾಯಿತು. ಹಣ್ಣು ಕೊಡುವ ಮರಮಟ್ಟುಗಳನ್ನು ಬೇಕಿದ್ದರೆ ನಾವೇ ಬೆಳೆಸಿ ತಿನ್ನುವ ಕಾಲ ಬಂತು!

ಕಾಲ ಬದಲಾದಂತೆ ಶಾಲೆ ಕಾಲೇಜುಗಳಿಗೆ ನಡೆದು ಹೋಗುವುದು ಕಡಿಮೆಯಾಯಿತು. ಮಕ್ಕಳು  ಜೋಪಾನವಾಗಿ  ಶಾಲೆಗೆ ಹೋಗಿ ಬರುವುದು. ಸಮಯದ ಪಾಲನೆ ಪ್ರಾರಂಭವಾಯಿತು. ಸುಮಾರು 25-30 ವರ್ಷ ಪ್ರಾಯದ ಮಕ್ಕಳಿಗೆ ಹಣ್ಣು ಹಂಪಲಿನ ಮರಗಳ ಗುರುತು ಸಹ ಇಲ್ಲದ ಸ್ಥಿತಿ ಬಂದಿದೆ. ಇದು ಹಾಗೆಯೇ ಮುಂದುವರಿಯುತ್ತಿದೆ.  ಈಗ ಏನಿದ್ದರೂ ಉಚಿತವಾಗಿ ಕೊಯಿದು ತಿನ್ನುವ ಕಾಲ ಹೋಯಿತು. ಕೊಂಡು ತಿನ್ನುವ ಕಾಲ ಬಂತು.  ಅಂದು ಮಕ್ಕಳಾಟಿಕೆಯಲ್ಲಿ ಹೊಟ್ಟೆ ತುಂಬಲು ತಿನ್ನುತ್ತಿದ್ದ ಹಣ್ಣು ಹಂಪಲುಗಳನ್ನು ಈಗ  ಹಣ ಕೊಟ್ಟು, ಆರೋಗ್ಯಕ್ಕೆ ಒಳ್ಳೆಯದು ಎಂದು  ಲೆಕ್ಕಾಚಾರದಲ್ಲಿ ತಿನ್ನುವ ಕಾಲ ಬಂತು. ನೇರಳೆ  ಎಂಬ ಹಣ್ಣು ಬಹುತೇಕ  ಜನ ಅನುಭವಿಸುವ ಸಮಸ್ಯೆಯಾದ ಮಧು ಮೇಹ ನಿವಾರಣೆಗೆ ಉತ್ತಮ ಎಂಬ ಅಂಶ ಗೊತ್ತಾಯಿತು. ಕಡಿದು, ನಾಶ ಮಾಡಿದ ನಾವೇ ಮತ್ತೆ ನೆಟ್ಟು ಬೆಳೆಸುವ ಸ್ಥಿತಿ ಉಂಟಾಯಿತು.

ಮರಮಟ್ಟುಗಳಾಗಿ ಬೆಳೆಯುವ ಬಹುತೇಕ ಎಲ್ಲಾ ಸಸ್ಯವರ್ಗಗಳನ್ನು ಸರಿಯಾದ ತರಬೇತಿ ಮೂಲಕ ಪೊದರಿನ ತರಹ ನಮಗೆ ಬೇಕಾದಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಬಹುದು

ನೇರಳೆ ಒಂದು ದೈತ್ಯ ಮರ:

 • ನೇರಳೆ ಹಣ್ಣು ಗಿಡದಲ್ಲಿ ಆಗುವುದಲ್ಲ. ಒಂದು ವೇಳೆ ನಮ್ಮಲ್ಲಿ ನೇರಳ ಬೀಜ ಬಿದ್ದು ಹುಟ್ಟಿದ ಸಸಿ ಇದ್ದರೆ ಅದರಲ್ಲಿ  ಕಾಯಿಯಾಗಬೇಕಿದ್ದರೆ  ಹತ್ತಾರು ವರ್ಷ ಬೇಕು.
 • ಮರ ಬೆಳೆದ ನಂತರವೇ ಅದರಲ್ಲಿ ಹೂವಾಗಿ ಕಾಯಿಯಾಗುವುದು.
 • ಮರ ಎಷ್ಟು ದೈತ್ಯವಾಗಿ ಬೆಳೆಯುತ್ತದೆಯೋ ಅಷ್ಟು ಕಾಯಿಗಳು ಹೆಚ್ಚು ಹೆಚ್ಚು ಆಗುತ್ತದೆ.
 • ಮರ ಸುಮಾರು 15-20 ಮೀ. ಎತ್ತರದ ವರೆಗೂ ಬೆಳೆಯುವ ಮರ.
 • ದೈತ್ಯ ಮರದ  -ಗೆಲ್ಲಿನ ತುದಿಗಳಲ್ಲಿ ಗೊಂಚಲು ಗೊಂಚಲಾಗಿ ಕಾಯಿಯಾಗುವ ಈ ಹಣ್ಣನ್ನು ಕೀಳುವುದೇ ಒಂದು ಸಾಹಸ.
 • ಈಗಿನ ಹೊಸ ತಲೆಮಾರಿಗೆ ಮರ ಏರುವ ವಿದ್ಯೆಯೂ ತಿಳಿದಿಲ್ಲ.
 • ಹಾಗಾಗಿ ಮರದಲ್ಲಿ ಹಣ್ಣುಗಳಾದರೆ ಅದು ಹಲ್ಲಿಲ್ಲದವನಿಗೆ ಕಡಲೆ ತಿನ್ನಲು ಕೊಟ್ಟಂತೆ.
 • ಕೊಯ್ಯುವವರಿಲ್ಲದೆ ಹಣ್ಣುಗಳಾಗಿ ನೆಲಕ್ಕೆ ಉದುರಿ ನಷ್ಟವಾಗುವುದೇ ಹೆಚ್ಚು.

ಮರವನ್ನು ಪೊದರು ಮಾಡುವ ವಿಧಾನ:

 • ಮರಮಟ್ಟುಗಳಾಗಿ ಬೆಳೆಯುವ ಬಹುತೇಕ ಎಲ್ಲಾ ಸಸ್ಯವರ್ಗಗಳನ್ನು ಸರಿಯಾದ ತರಬೇತಿ ಮೂಲಕ ಪೊದರಿನ ತರಹ ನಮಗೆ ಬೇಕಾದಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಬಹುದು.  
 • ಹೀಗೆ ಬೆಳೆಸುವಾಗ ಎತ್ತರ ಮಾತ್ರ ಕಡಿಮೆಯಾಗುತ್ತದೆ ಹೊರತಾಗಿ ಅಗಲಕ್ಕೆ ಬೆಳವಣಿಗೆ  ಉತ್ತಮವಾಗಿಯೇ ಇರುತ್ತದೆ. 
 • ಮರಗಳನ್ನು ಪೊದೆಯಾಕಾರದಲ್ಲಿ ಬೆಳೆಸುವ ಉದ್ದೇಶವೇ ಅದರ ಫಸಲನ್ನು ಸುಲಭವಾಗಿ ಕೊಯಿಲು ಮಾಡುವುದು ಮತ್ತು ಸರಳವಾಗಿ ನಿರ್ಹಹಣೆಯನ್ನು ಮಾಡುವುದು.  
 • ಹಣ್ಣು ಹಂಪಲುಗಳಾದ ಮಾವು, ಸಪೋಟಾ, ದಾಳಿಂಬೆ, ರಾಂಬುಟಾನ್ ಇತ್ಯಾದಿಗಳನ್ನೂ ಸಹ ಪ್ರೂನಿಂಗ್ ಮಾಡುವ ಮೂಲಕವೇ  ಪೊದೆಯಾಕಾರದಲ್ಲಿ ಬೆಳೆಸಲಾಗುತ್ತದೆ.
 • ಮರವಾಗಿ ಬೆಳೆಯುವ ಎಲ್ಲಾ ಸಸ್ಯವರ್ಗಳಲ್ಲಿ  ನೇರವಾಗಿ ಬೆಳೆಯುವ ಗೆಲ್ಲು ಮತ್ತು  ಕವಲು ಗೆಲ್ಲುಗಳು ಎಂದು ಎರಡು ವಿಧಗಳಿವೆ.
 • ಕವಲು ಗೆಲ್ಲುಗಳೇ ಯಾವಾಗಲೂ ಫಲವಿಡುವಂತವುಗಳು.
 • ನೇರ ಗೆಲ್ಲುಗಳ ಬೆಳೆವಣಿಗೆಯನ್ನು ಹತ್ತಿಕ್ಕಿ, ಕವಲು ಗೆಲ್ಲುಗಳಿಗೆ ಬೆಳೆಯಲು ಅನುಕೂಲಮಾಡಿಕೊಡುತ್ತಿದ್ದರೆ, ಅದರ  ದೈತ್ಯ ಬೆಳವಣಿಗೆ ಕುಂಠಿತವಾಗುತ್ತದೆ.
 • ಮರದ ನೇರ ಗೆಲ್ಲು ಅಥವಾ ಕಂಬ ಚಿಗುರು ಅಥವಾ Water shoots ಗಳನ್ನು  ಆಗಾಗ  ತುಂಡು ಮಾಡಿ  ಬೆಳವಣಿಗೆಯನ್ನು ಹತ್ತಿಕ್ಕಬೇಕು.
 • ಕಾಫೀ ಬೆಳೆಗಾರರು  ಕಾಫಿಯ ಗಿಡವನ್ನು 20-25 ವರ್ಷವಾದರೂ  4-5 ಅಡಿ ಎತ್ತರಕ್ಕಿರುವಷ್ಟು ಮಾತ್ರ ಬೆಳೆಯಲು ಬಿಡುವುದು ಸಹ ಇದೇ ತಾಂತ್ರಿಕತೆಯಲ್ಲಿ.
 • ಯಾವಾಗಲೂ ಕಂಬ ಗೆಲ್ಲುಗಳ ಬೆಳವಣಿಗೆ ವೇಗವಾಗಿರುತ್ತದೆ.
 • ಅದು  ಬೆಳವಣಿಗೆ ಹೊಂದುತ್ತಲೇ ಇರುತ್ತದೆ. ಅದನ್ನು ಆಗಾಗ ಗುರುತಿಸಿ ಕತ್ತರಿಸುತ್ತಾ ಇರಬೇಕು.
 • ಈ ಕೆಲಸ ವರ್ಷ ಪೂರ್ತಿ ಇರುತ್ತದೆ.
 • ಅದನ್ನು ತೆಗೆಯುತ್ತಿದ್ದರೆ ಕವಲು ಗೆಲ್ಲುಗಳಿಗೆ ಹೆಚ್ಚುವರಿ ಆಹಾರ ಲಭ್ಯವಾಗಿ ಅದು ಚೆನ್ನಾಗಿ ಬೆಳೆದು ಹೂವಾಗುತ್ತದೆ.
ಕಸಿ ಮಾಡಿ ಬೆಳೆಸಿ 3-4 ವರ್ಷಕ್ಕೆ ಫಸಲು ಪಡೆಯಲು ಪ್ರಾರಂಭಿ

ಕಸಿ ಮಾಡುವುದರಿಂದ ಬೇಗ ಫಲ ಪಡೆಯಬಹುದು:

 • ಒಂದು ವೇಳೆ ನಮ್ಮಲ್ಲಿ ನೇರಳೆ ಸಸಿ ಇದ್ದರೆ ಅದಕ್ಕೆ ವಯಸ್ಸು ಆಗದೆ ವಿನಹ ಅದು ಹೂ ಬಿಡಲಾರದು.
 • ಹಾಗೆಂದು ವರ್ಷಗಟ್ಟಲೆ ಹೂ ಬಿಡುವ ವರೆಗೆ ಕಾಯುವುದು ಸೂಕ್ತವಲ್ಲ.
 • ಅದಕ್ಕೆ ಎಳವೆಯಲ್ಲಿಯೇ ಗಿಡವನ್ನು ಕಸಿ ತಾಂತ್ರಿಕತೆಯ ಮೂಲಕ  ಕಸಿ ಕಟ್ಟಿ ಬೇಗ ಫಲ ಕೊಡುವಂತೆ ಮಾಡಬಹುದು.  
 • ಫಲ ಕೊಡುತ್ತಿರುವ  ಮರದ ಕವಲು ಗೆಲ್ಲುಗಳನ್ನು ಮೃದು ಕಾಂಡ ಕಸಿಯ ಮೂಲಕ  ಕಸಿ ಜೋಡಣೆ ಮಾಡಿದರೆ ಅದು ಬೆಳೆವಣಿಗೆ ಆದಂತೆ ಫಲ ಬಿಡಲು ಪ್ರಾರಂಭವಾಗುತ್ತದೆ.
 • ಕಸಿ ಮಾಡಿದ ಗಿಡವು ನೆಟ್ಟ 3 ವರ್ಷಕ್ಕೇ ಫಸಲಿಗೆ ಪ್ರಾರಂಭವಾಗುತ್ತದೆ ಎಂಬುದು ತಿಳಿದುಬಂದಿದೆ.
 • ಬೆಂಗಳೂರು ಗ್ರಾಮಾಂತರ ಯಲಹಂಕದ ನಾಗದಾಸನ ಹಳ್ಳಿ ಚಿಕ್ಕಕೆಂಪಣ್ಣ ಪಟೇಲ್ N C PATEL ಇವರು ದೊಡ್ಡ ಪ್ರಮಾಣದಲ್ಲಿ ಇದರ ಕೃಷಿ ಮಾಡಿದ್ದಾರೆ.
 • ಇವರು ಪ್ರಾರಂಭದಲ್ಲಿ ಆಯ್ಕೆ ಮಾಡಿದ ಗಿಡ ಉತ್ತಮ ಫಸಲು ನೀಡದ ಕಾರಣ ಅದಕ್ಕೆ ಆಯ್ಕೆ ಮಾಡಿದ ಮರದ ಗೆಲ್ಲನ್ನು ಮೃದು ಕಾಂಡ ಕಸಿಯ ಮೂಲಕ ಕಸಿ ಮಾಡಿ ಬೆಳೆಸಿ 3-4 ವರ್ಷಕ್ಕೆ ಫಸಲು ಪಡೆಯಲು ಪ್ರಾರಂಭಿಸಿದ್ದಾರೆ.
 • ಇವರು ದೈತ್ಯಾಕಾರದಲ್ಲಿ ಬೆಳೆಯುವ ಮರವನ್ನು ಕುಬ್ಜವಾಗಿ ಪೊದೆಯಾಕಾರದಲ್ಲಿ ಬೆಳೆಸಿದ್ದಾರೆ. 
 • ಕಂಬ ಚಿಗುರುಗಳನ್ನು ಅವು ಬೆಳವಣಿಗೆ ಆಗುತ್ತಿದ್ದಂತೇ ಕತ್ತರಿಸುತ್ತಾ, ಕವಲು ಗೆಲ್ಲುಗಳನ್ನು ಮಾತ್ರ  ಬೆಳೆಯಲು ಬಿಟ್ಟು, ಸಸಿಯ ಎತ್ತರವನ್ನು 6 ಅಡಿಗೆ ಸೀಮಿತವಾಗಿರುವಂತೆ ಮಾಡಿಕೊಂಡಿದ್ದಾರೆ.
 • ವರ್ಷ ಹೆಚ್ಚಾದಂತೆ ಇಳುವರಿ ಹೆಚ್ಚಳವಾಗುತ್ತದೆ. ಕೊಯಿಲು, ಮತ್ತು ನಿರ್ವಹಣೆಗೆ ಗಿಡದ ತರಹ ಎತ್ತರ ಕಡಿಮೆಯಾಗಿ ಅಗಲಕ್ಕೆ ಬೆಳೆದರೆ  ಬಹಳ ಸುಲಭ.
 • ಹೆಂಗಸರು ಮಕ್ಕಳೂ ಸಹ ಕೊಯಿಲು ಮಾಡಬಹುದು.
 • ಯಾವಾಗಲೂ ಮೆದು ಜಾತಿಯ ಹಣ್ಣುಗಳನ್ನು ಬಹಳ ಜಾಗರೂಕತೆಯಲ್ಲಿ ಕೊಯಿಲು ಮಾಡಬೇಕು.
 • ಅದಕ್ಕೆ ಗಾಯಗಳಾಗಬಾರದು.
 • ಹಾಗೆ ಕೊಯ್ಲು ಮಾಡಲು ಗಿಡ ಕುಬ್ಜವಾಗಿದ್ದರೆ, ಕೈಯಲ್ಲೇ ಕೊಯಿಲು ಮಾಡಿ ಜಾಗರೂಕತೆಯಲ್ಲಿ ಹಣ್ಣು ಸಂಗ್ರಹಿಸಬಹುದು ಎಂಬುದು ಇವರ ಅಭಿಪ್ರಾಯ.

ನಮ್ಮ ದೇಶದಲ್ಲಿ ಬೆಳೆಯುವ ಹಣ್ಣು ಹಂಪಲುಗಳಲ್ಲಿ  ಸಮರ್ಪಕವಾಗಿ ಕೊಯಿಲು ಮಾಡಲಾಗದೆ ಹಾಳಾಗುವ ಪ್ರಮಾಣ 50% ಕ್ಕೂ ಅಧಿಕ. ಎತ್ತರದ ಮರಗಳು, ಸರಿಯಾಗಿ ಕೊಯಿಲು ಮಾಡದೆ , ಗಾಯಗಳಾಗಿ ಕೊಳೆತು ಹಾಳಾಗುವ ನಷ್ಟವನ್ನು  ಕಡಿಮೆ ಮಾಡಲು ಮರವನ್ನು ಗಿಡದಂತೆ ಕುಬ್ಜವಾಗಿ ಬೆಳೆಸುವುದು ಉತ್ತಮ ವಿಧಾನ. ವಿದೇಶಗಳಲ್ಲಿ ಈ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಬೆಳೆ ಬೆಳೆಯುತ್ತಾರೆ. ನಾವು ಈಗೀಗ ಈ ತಾಂತ್ರಿಕತೆಗೆ ಇಳಿಯುತ್ತಿದ್ದೇವೆ. ಹಣ್ಣಿನ ಬೆಳೆಗಳಲ್ಲಿ  ಕೈಯಿಂದ ಜೋಪಾನವಾಗಿ ಕಠಾವು ಮಾಡಿದರೆ  ಹಾಳಾಗುವ ಪ್ರಮಾಣವನ್ನು 90% ಕ್ಕೂ ಹೆಚ್ಚು ಕಡಿಮೆ ಮಾಡಲು ಸಾಧ್ಯವಿದೆ.  

Leave a Reply

Your email address will not be published. Required fields are marked *

error: Content is protected !!