ತೆಂಗಿನ ಸಸಿ ಬೇಗ ಫಲಕೊಡಬೇಕಾದರೆ ಮಾಡಬೇಕಾದ ಅಗತ್ಯ ಕೆಲಸ.

ತೆಂಗಿನ ಸಸಿ ಆರೋಗ್ಯವಾಗಿದ್ದರೆ ಹೀಗೆ ಇರುತ್ತದೆ.

ತೆಂಗಿನ ಸಸಿ ಹಾಗೂ ತಾಳೆ ಜಾತಿಯ ಎಲ್ಲಾ ಮರಗಳಿಗೂ ಕುರುವಾಯಿ ದುಂಬಿ ಕಾಟ ಇಲ್ಲದಿದ್ದರೆ, ಸಸಿ ಆರೋಗ್ಯವಾಗಿ ಬೆಳೆದು ಬೇಗ ಫಲ ಕೊಡುವುದರಲ್ಲಿ ಅನುಮಾನ ಇಲ್ಲ.
ತೆಂಗು ಜಾತಿಯ ಮರಗಳಲ್ಲಿ ಒಂದೇ ಮೊಳಕೆ (Bud) ಇರುವುದು. ಇವುಗಳ ತಲೆ ಕಡಿದರೆ ಅವು ಮತ್ತೆ ಇತರ ಮರಗಳಂತೆ ಚಿಗುರಿ ಬೆಳೆಯಲಾರದು. ಆದರೆ ಇತರ ಮರ ಮಟ್ಟುಗಳ  ಎಲ್ಲಾ ಎಲೆ ಗೆಲ್ಲು ಕಡಿದರೂ ಅದು ಮತ್ತೆ ಚಿಗುರಿ ಬೆಳೆಯುತ್ತದೆ. ಆದ ಕಾರಣ ತೆಂಗಿನಂತಹ ಮರಗಳಿಗೆ ಎಲೆಯೇ ಆಧಾರ. ಕೆಲವು ಸಂದರ್ಭಗಳಲ್ಲಿ ಸುಳಿ ಭಾಗ(Bud) ಮಾತ್ರ ಇದ್ದರೆ ಅದು ಬೆಳೆದು ಬದುಕುತ್ತದೆಯಾದರೂ ಅದರ  ಬೆಳೆವಣಿಗೆಯ ಮೇಲೆ ಸಾಕಷ್ಟು ಪರಿಣಾಮ ಬೀರಿರುತ್ತದೆ.ಆದ ಕಾರಣ ತೆಂಗಿನ ಮರದ ಗರಿಗೆ ಹಾನಿ ಆಗಬಾರದು.

  • ನಮ್ಮ ಹಿರಿಯರು ತೆಂಗಿನ ಮರದ ಹಸಿ ಗರಿಗಳನ್ನು ಯಾವುದೇ ಕಾರಣಕ್ಕೂ ಕಡಿಯಲು ಬಿಡುತ್ತಿರಲಿಲ್ಲ.
  • ಮರ ಕಡಿಯುವುದೆಂದರೆ ಮಹಾ ಪಾಪದ ಕೆಲಸ ಎಂದು ಯಾರೂ ಆ ಕೆಲಸ ಮಾಡಲು ಬಿಡುತ್ತಿರಲಿಲ್ಲ.
  • ಇದಕ್ಕೆ ಬಲವಾದ ವೈಜ್ಞಾನಿಕ ಕಾರಣ ಗೊತ್ತಿತ್ತೋ ಇಲ್ಲವೋ, ಜನ ಅದನ್ನು ಕಟ್ಟು ನಿಟ್ಟಾಗಿ ಪಾಲಿಸಲು ದೈವಿಕ ಭಾವನೆಯನ್ನು ಹೆಣೆದಿದ್ದರು.
  • ತೆಂಗಿನ ಮರದ ಗರಿ ಕಡಿಯಬಾರದು. ಮರ ಕಡಿಯಬಾರದು.
  • ಇದನ್ನು ಕಡಿದಾಗ ಅದರಿಂದ ಸ್ರವಿಸುವ ರಸದ ವಾಸನೆಗೆ ಕೆಂಪು ಮೂತಿ ಹುಳ, ಹಾಗೆಯೇ ಕುರುವಾಯಿ ಕೀಟ (rhinoceros beetle)ಆಕರ್ಷಿತವಾಗಿ ಮರಕ್ಕೆ ಹಾನಿ ಮಾಡುತ್ತದೆ.
  • ತೆಂಗಿನ ಮರದ ಪ್ರತೀಯೊಂದು ಗರಿಗೂ  ಯಾವುದೇ  ತೊಂದರೆ ಆಗದಿದ್ದರೆ  ಆ ಸಸಿ ಬೇಗ ಫಲ ಕೊಡುತ್ತದೆ.
Larvae of Rhinoceros  beetle
ಕುರುವಾಯಿ ಕೀಟ ಈ ಗೊಬ್ಬರದ ಹುಳದಿಂದ ಆಗುತ್ತದೆ

ತೆಂಗಿನ ಮರ/ಸಸಿಗೆ ಕುರುವಾಯಿಯೇ ಶತ್ರು:

  • ತೆಂಗಿನ ಸಸಿಯ ಗರಿ ಹಾಗೂ ಎಳೆ ಭಾಗಗಳ ರಸ ಕುರುವಾಯಿ ಕೀಟದ ಆಹಾರ.
  • ಅದು ಬದುಕುವುದೇ ಆ ರಸವನ್ನು ಹೀರಿಕೊಂಡು. ತೆಂಗಿನ ಮರ ಎತ್ತರವಾದ ನಂತರ ಅದರ ಬಾಧೆ ಸ್ವಲ್ಪ ಕಡಿಮೆ.
  • ಕಾರಣ ಅಷ್ಟು ಎತ್ತರಕ್ಕೆ ಅದಕ್ಕೆ ಹಾರಲಿಕ್ಕೆ ಆಗುವುದಿಲ್ಲ.ಸಣ್ಣ ಸಸಿಯಿಂದಾರಂಭವಾಗಿ  ಸುಮಾರು 20 ಅಡಿ ಎತ್ತರದ ತನಕ ಇದು ತೊಂದರೆ  ಮಾಡಿಯೇ ತೀರುತ್ತದೆ.
  • ಈ ದುಂಬಿ ಎಳೆಯ ಗರಿ ಕಂಕುಳಲ್ಲಿ ಸೇರಿಕೊಂಡು ತನ್ನ ಹರಿತವಾದ ಹಲ್ಲುಗಳಿಂದ ಅದರ ರಸವನ್ನು ಹೀರಿ ನಾರನ್ನು ಹೊರ ಹಾಕುತ್ತದೆ.
  • ಅದೇ ರೀತಿಯಲ್ಲಿ ಎಳೆಯ ಹೂ ಗೊಂಚಲಿನ ರಸವನ್ನು ಹೀರಿ ಅದರ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತದೆ.
  • ಅಂತಹ ಹೂ ಗೊಂಚಲು ಬೆಳವಣಿಗೆ ಆಗುವುದೇ ಇಲ್ಲ.
  • ಬಹಳಷ್ಟು ಸಂದರ್ಭಗಳಲ್ಲಿ ಎಳೆ ಭಾಗದ ರಸ ಹೀರುವಾಗ ಅದು ಕಾಂಡದ ಭಾಗಕ್ಕೂ ಹನಿ ಮಾಡಿ ಕಾಂಡದಲ್ಲಿ ದೊಡ್ದ ಗಾಯವಾಗುವಂತೆ ಮಾಡುತ್ತದೆ.
  • ಇದೆಲ್ಲವೂ ತೆಂಗಿನ ಸಸಿಯನ್ನು ಎಳಿಗೆಯಾಗಲು ಬಿಡುವುದಿಲ್ಲ.
beetle eat emerging fresh inflorescence
ಮೂಡುತ್ತಿರುವ ಹೂ ಗೊಂಚಲನ್ನು ಇದು ತಿನ್ನುತ್ತದೆ.

ಒಂದು ತೆಂಗಿನ ಸಸಿಯ ಒಂದು ಗರಿಗೆ ಹಾನಿಯಾದರೆ ಅದರ ಇಳುವರಿ ಕೊಡುವ ಅವಧಿ ಸುಮಾರು 2-3 ತಿಂಗಳು ಹಿಂದೆ ಬೀಳುತ್ತದೆ. ಆದ ಕಾರಣ ಕುರುವಾಯಿ ಕೀಟ ಮುಕ್ತ ತೆಂಗಿನ ಸಸಿ ಬೆಳೆಸಿದರೆ ಮಾತ್ರ ಯೋಗ್ಯ ಸಮಯದಲ್ಲಿ ಫಲ ಪಡೆಯಲು ಸಾಧ್ಯ.

ಕುರುವಾಯಿ ಎಲ್ಲಿಂದ ಬರುತ್ತದೆ:

  • ಕುರುವಾಯಿ ಕೀಟದ ಹುಟ್ಟು ನಮ್ಮ ಹೊಲವೇ ಆಗಿರುತ್ತದೆ.  ಇದು ಎಲ್ಲೆಲ್ಲಿಂದಲೋ ಹಾರಿ ಬರುವಂತದ್ದಲ್ಲ.
  • ನಾವು ಬಳಸುವ ಕಳಿಯದ ಸಾವಯವ ಗೊಬ್ಬರ ಈ ಕೀಟದ ಮೊಟ್ಟೆ ಇಡುವ ಸ್ಥಳ.
  • ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರ ಅಥವಾ ಸಗಣಿ ಗೊಬ್ಬರ, ಕುರಿ ಗೊಬ್ಬರವನ್ನು ಒಂದು ಕಡೆ ರಾಶಿ ಹಾಕಿ.
  •   ಸುಮಾರು 1 ತಿಂಗಳ ನಂತರ  ಅದನ್ನು ಒಮ್ಮೆ ತಿರುವಿ ಹಾಕಿ. ಅಥವಾ ಯಾವುದಾದರೂ ಕೋಲಿನಲ್ಲಿ ಅದನ್ನು ಕೆದಕಿರಿ.
  • ಆಗ ಅದರಲ್ಲಿ ಬಹಳಷ್ಟು ಹುಳಗಳು Adults ಕಾಣ ಸಿಗುತ್ತದೆ.
  • ಇದೇ ಕುರುವಾಯಿ ಕೀಟ ಆಗುವ ಹುಳಗಳು.
  • ಈ ಹುಳಗಳು ಅಲ್ಲೇ ಪ್ಯೂಪೆ ಹಂತವನ್ನು ಮುಗಿಸಿ, ದುಂಬಿಯಾಗುತ್ತದೆ.
  • ದುಂಬಿಯಾಗಿ 2-3 ವಾರ ಅಲ್ಲಿದ್ದು, ತಕ್ಷಣ ಅದರ ಕೆಲಸ ಬದುಕುವ  ಆಹಾರಕ್ಕಾಗಿ ತೆಂಗು, ತಾಳೆ ಮುಂತಾದ ಮರಗಳ ಎಳೆ ಭಾಗವನ್ನು ಆಶ್ರಯಿಸುವುದು.
  • ಅಲ್ಲಿ ಆಹಾರ ತಿಂದು ಮತ್ತೆ  ವಾತಾವರಣದಲ್ಲಿ ಗಂಡು ಹೆಣ್ಣು ಜೋಡಿಯಾಗಿ ಅದೇ ಕಳಿಯದ ಗೊಬ್ಬರದ ರಾಶಿಗೆ ಹೋಗಿ ಮೊಟ್ಟೆ ಇಡುತ್ತದೆ.
  • ಹೆಣ್ಣು ದುಂಬಿಯ ಹಿಂಬದಿಯ ಕಾಲುಗಳಲ್ಲಿ ಕೂದಲಿನ ತರಹದ ರಚನೆ ಇರುತ್ತದೆ.
  • ಗಂಡಿನಲ್ಲಿ ಇರುವುದಿಲ್ಲ.ಇದೇ ರೀತಿಯಲ್ಲಿ ಅವುಗಳ ಜೀವನ ಚಕ್ರ ಮುಂದುವರಿಯುತ್ತದೆ.

Rhinoceros beetle

 ನಿಯಂತ್ರಣ:

  • ಕುರುವಾಯಿ ದುಂಬಿಯ ಮೊಟ್ಟೆ ಮತ್ತು  ಹುಳಗಳನ್ನು ನಾಶ ಮಾಡುವುದೇ ದುಂಬಿಯ ನಾಶಕ್ಕೆ ಸೂಕ್ತ ವಿಧಾನ.
  • ಹೊರಗೆ ಹಾರುವ ದುಂಬಿಯನ್ನು ಟ್ರಾಪುಗಳಲ್ಲಿ ಬಂಧಿಸುವುದು, ಮರದ ಗರಿ ಕಂಕುಳಕ್ಕೆ ವಿಷ ಹಾಕುವುದು.
  • ಇವೆಲ್ಲಕ್ಕಿಂತ ಉತ್ತಮ ಪರಿಹಾರ ಕ್ರಮ ಎಂದರೆ  ಎಲ್ಲಿ ಹುಳಗಳು ಇರುತ್ತವೆಯೋ ಆಲ್ಲಿ ಅವುಗಳನ್ನು ನಾಶ ಮಾಡುವುದು.
  • ಇದು ಸಾಮೂಹಿಕವಾಗಿ ಮಾಡಬೇಕಾದ ಕೆಲಸ.
  • ಕಚ್ಚಾ ಸಾವಯವ ಗೊಬ್ಬರವನ್ನು ಬುಡಕ್ಕೆ ಹಾಕಿದರೆ ಅದನ್ನು  ತೆರೆದು ಇಡಬಾರದು.
  • ಅದನ್ನು ಪೂರ್ತಿಯಾಗಿ ಪ್ಲಾಸ್ಟಿಕ್ ಗೋಣಿ ಚೀಲದಿಂದ ಮುಚ್ಚಬೇಕು.
  • ಕಾಂಪೋಸ್ಟು ಮಾಡುವಾಗ ಸಹ ಪ್ಲಾಸ್ಟಿಕ್ ನಿಂದ ಮುಚ್ಚಿ ಕಳಿಯಲು ಬಿಡಬೇಕು.
  • ಆಗ ಮೊಟ್ಟೆ ಇಡಲು ಅವಕಾಶ ಸಿಗುವುದಿಲ್ಲ.
  • ಗೊಬ್ಬರದ ರಾಶಿಯನ್ನು ಕೆದಕಿ ಅದರಲ್ಲಿರುವ  ಹುಳಗಳನ್ನು ಆರಿಸಿ ಬಿಸಿಲಿಗೆ ಹಾಕಿದರೆ ಅದು ಸತ್ತು ಹೋಗುತ್ತದೆ.
  • ಪಕ್ಷಿಗಳು, ಇರುವೆಗಳು ತಿನ್ನುತ್ತವೆ.

Eating tender tissues

  • ವಿಷ ಬಳಕೆ ಮಾಡಲು ಮನಸ್ಸಿದ್ದವರು ಕಾಂಪೋಸ್ಟು ರಾಶಿಗೆ ಡೆಲ್ಟ್ಯ್ರಾಮೆಥ್ರಿನ್ ಕೀಟನಾಶಕವನ್ನು ಸ್ವಲ್ಪ ಚಿಮುಕಿಸುವುದರಿಂದ ಹುಳ ನಾಶವಾಗುತ್ತದೆ.
  • ಹುಡಿ ಚಿಪ್ಪು ಸುಣ್ಣವನ್ನು ಕಾಂಪೋಸ್ಟು ರಾಶಿಗೆ ಹಾಕುವುದರಿಂದಲೂ ಹುಳ ನಾಶವಾಗುತ್ತದೆ.
  • ತೆಂಗಿನ ನಾರಿನ ಹುಡಿಯನ್ನು ತೆರೆದು ಇರುವಂತೆ ರಾಶಿ ಹಾಕದಿರಿ. ತೆಂಗಿನ ಸಿಪ್ಪೆಯನ್ನೂ ಕಾಂಪೋಸ್ಟು  ಮಾಡಲು ತೆರೆದು ಹಾಕದಿರಿ.
  • ಕೊಳೆಯುವ ಮರಮಟ್ಟುಗಳಲ್ಲಿಯೂ ಇವು ಸಂತಾನಾಭಿವೃದ್ದಿ ಹೊಂದುತ್ತವೆ.
  • ಕಾಂಪೊಸ್ಟು ಅಥವಾ ಕಚ್ಚಾ ಗೊಬ್ಬರ ಹಾಕುವಾಗ ಅದರ ಮೇಲೆ ಮೆಟರೈಜಿಯಂ ಅನಿಸೋಫಿಲಾ  Metarhizium anisopliae ಶಿಲೀಂದ್ರದ ದ್ರಾವಣವನ್ನು ಎರೆಯುವುದು ತುಂಬಾ ಉಪಯುಕ್ತ.

Indigenous trap for beetles

ದುಂಬಿಗಳ ನಿಯಂತ್ರಣಕ್ಕೆ ಹೊಲದಲ್ಲಿ  ಎತ್ತರದಲ್ಲಿ ಬಲೆ ಕಟ್ಟುವ ಹುಲಿ ಜೇಡ (Tiger spider) ಬಲೆಗಳನ್ನು ನಾಶಮಾಡಬಾರದು. ಕೊಳೆತು ವಾಸನೆ ಬರುವ ಹರಳು ಹಿಂಡಿ, ನೆಲಕಡ್ಲೆ ಹಿಂಡಿ ಮುಂತಾದವುಗಳನ್ನು ಒಂದು ಪಾತ್ರೆಯಲ್ಲಿ  ನೆನೆ ಹಾಕಿ ಮುಕ್ಕಾಲು ಪಾಲು ನೀರು  ಇರುವಂತೆ ಹುಗಿಯುವುದರಿಂದ ಅದಕ್ಕೆ ದುಂಬಿಗಳು ಬಂದು ಬೀಳುತ್ತವೆ.  ಇದಕ್ಕೆ ಕಳ್ಳು ( ಸೇಂದಿ ಹಾಕಿದರೆ ಉತ್ತಮ) ಆ ದ್ರಾವಣಕ್ಕೆ 1 ಲಕ್ಷ್ಮಣ ರೇಖೆ ಚಾಕ್ ಹುಡಿ ಮಾಡಿ ಹಾಕಿದರೆ ಅವು ಸತ್ತೇ ಹೋಗುತ್ತದೆ.
ಒಂದು ಕುರುವಾಯಿ ಕೀಟವನ್ನು ಕೊಂದರೆ ಒಂದು ದೇವಸ್ಥಾನ ಕಟ್ಟಿದ ಫಲ ಎನ್ನುತ್ತಾರೆ ಹಿರಿಯರು. ಒಂದು ಕುರುವಾಯಿ  ಅದೆಷ್ಟೋ ತೆಂಗಿನ ಮರವನ್ನು ಹಾಳು ಮಾಡುತ್ತದೆ. ಇದರ ಹುಳಗಳು ಒಳ್ಳೆಯ ಕಾಂಪೋಸ್ಟರುಗಳೂ ಸಹ. ಆದರೆ ಅಂತಹ ಬೇರೆ ಬೇರೆ ಕಾಂಪೋಸ್ಟು ಮಾಡುವ ಜೀವಿಗಳು ಇರುವ ಕಾರಣ ಇದು ಬೇಕಾಗಿಲ್ಲ. ಅವುಗಳನ್ನು ಸಾಧ್ಯವಾದಷ್ಟು ನಾಶ ಮಾಡಿ.

error: Content is protected !!