ಸಾವಯವ ಕೃಷಿ ಎಂಬುದು ನಮ್ಮ ಪರಂಪರೆಯಿಂದ ನಡೆದು ಬಂದ ಕೃಷಿ ಪದ್ದತಿ. ಇತ್ತೀಚೆಗೆ ಕೆಲವು ಜನರಿಗೆ ಸಾವಯವ ಹೆಸರೇ ಮೈಮೇಲೆ ದೆವ್ವ ಬಂದಂತೆ ಬರುತ್ತಿರುವುದು ವಿಪರ್ಯಾಸ.
ಸಾವಯವ ಕೃಷಿ ಎಂದರೆ ಮಣ್ಣನ್ನು ಫಲವತ್ತಾಗಿಸಿಕೊಂಡು ಅದನ್ನೇ ಪೊಷಕಾಂಶ ಭರಿತವಾದ ಬೆಳೆ ಮಾಧ್ಯಮವಾಗಿ ಮಾಡಿ ಕೃಷಿ ಮಾಡುವುದು. ಮಣ್ಣು ಫಲವತ್ತಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆಗೆ ಬೇರೆ ಪೋಷಕಾಂಶಗಳು ಬೇಕಾಗುವುದಿಲ್ಲ. ಬೆಳೆ ಬೆಳೆದಂತೆ ಫಲವತ್ತಾದ ಮಣ್ಣಿನ ಪೋಷಕಗಳು ಉಪಯೋಗವಾಗಿ ಕಡಿಮೆಯಾಗುತ್ತಾ ಬರುತ್ತದೆ. ಅದನ್ನು ಮತ್ತೆ ಮತ್ತೆ ನವೀಕರಿಸುತ್ತಾ ಬೆಳೆ ಬೆಳೆಯಬಹುದು. ಈ ಕೃಷಿ ಪದ್ದತಿಯನ್ನು ಪಾಲಿಸಲು ಸಾಧ್ಯವಿದ್ದರೆ ಇದು ಉತ್ತಮ ಕೃಷಿ ಪದ್ದತಿ.
- ಬಹುಷಃ ಕೃಷಿ ವೃತ್ತಿ ಮಾಡುವವರಿಗೆಲ್ಲಾ ಮಿತ ವ್ಯಯದಲ್ಲಿ ಬೆಳೆಬೆಳೆಸಲು ಅದು ರಾಸಾಯನಿಕ ಪದ್ದತಿಯೇ ಆಗಬೇಕಾಗಿಲ್ಲ.
- ಕಡಿಮೆ ಖರ್ಚಿನಲ್ಲಿ ಆಗುವುದಿದ್ದರೆ ಸಾವಯವ ಕೃಷಿ ವಿಧಾನವೇ ಅವರ ಪ್ರಾಥಮಿಕ ಆದ್ಯತೆ.
- ಆದರೆ ಕಾಲ ಪರಿಸ್ಥಿತಿಯಲ್ಲಿ ಅದು ಕಷ್ಟವಾಗಲಾರಂಭಿಸಿದೆ.
- ಅದಕ್ಕಾಗಿ ಹಿತ ಮಿತವಾಗಿ ರೈತರು ಬೆಳೆ ಪೋಷಕವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಾರೆ.
- ಕೃಷಿಕರಲ್ಲದವರು ಅಥವಾ ಸಾವಯವ ಪದ್ದತಿಯನ್ನು ಮೈಮೇಲೆ ಎಳೆದುಕೊಂಡವರು ಹೇಳುವಂತೆ ಯಾವ ರೈತನೂ ಬೇಕಾಬಿಟ್ಟಿ ರಾಸಾಯನಿಕ ಬಳಕೆ ಮಾಡುವುದಿಲ್ಲ.
- ಕಾರಣ ಅದು ನಮ್ಮ ದೇಶದಲ್ಲಿ ಉಚಿತವಾಗಿ ದೊರೆಯುವುದಿಲ್ಲ.
ಯಾರು ಸಾವಯವ ಕಟ್ಟಾಳುಗಳು ಗೊತ್ತೇ?
- ನಾನು ಕಳೆದ ಹಲವಾರು ವರ್ಷಗಳಿಂದ ಗಮನಿಸಿದಂತೆ ಸಾವಯವ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದವರು ಕೃಷಿಯಲ್ಲದ ಬೇರೆ ಆದಾಯ ಮೂಲ ಹೊಂದಿದವರು.
- ಮಾಸಿಕ 50,000 ಕ್ಕೂ ಹೆಚ್ಚಿನ ಪೆನ್ಶನ್ ಹಣ ಪಡೆಯುವ ಉದ್ಯೋಗಿಗೆ, ಸರಕಾರಿ ಉದ್ಯೋಗದಲ್ಲಿ ಮೈಮುರಿಯದೆ ದೊರೆಯುವ ಸಂಬಳ ಮತ್ತು ಲಂಚದ ಹಣದಲ್ಲಿ ಕೃಷಿ ಮಾಡುವವರಿಗೆ ಸಾವಯವ ಕೃಷಿಯಲ್ಲಿ ಬಹಳ ಆಸಕ್ತಿ.
- ಅವರೇ ಇದರ ಮುಂದಾಳ್ಳುತ್ವ ವಹಿಸುತ್ತಾರೆ. ಅದರ ಪ್ರಚಾರಕರಾಗುತ್ತಾರೆ.
- ಹೊಲದಲ್ಲಿ ಜೀವನೋಪಾಯಕ್ಕಾಗಿ ದುಡಿಯುವವರಿಗೆ ಬುದ್ದಿವಾದ ಹೇಳುತ್ತಾರೆ.
- ಇನ್ನು ಕೆಲವರಿಗೆ ಸಾವಯವ ಹೆಸರಿನಲ್ಲಿ ಕೃಷಿ ಉತ್ಪನ್ನವನ್ನು, ಕೃಷಿ ಒಳಸುರಿಯನ್ನು ಮಾರಾಟ ಮಾಡುವ ವ್ಯವಹಾರ ಇರುತ್ತದೆ.
- ಇವರೆಲ್ಲಾ ಸಾವಯವ ಕೃಷಿ ಪದ್ದತಿಯನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ.
- ಮಾತನಾಡುವಾಗ ಸ್ವರ ನಾಭಿಯಿಂದ ಬರುತ್ತದೆ. ಕೆಲವರಿಗೆ ತುಂಡು ಭೂಮಿಯಲ್ಲಿ ಕೃಷಿ ಮಾಡಲೂ ಸಾಧ್ಯವಾಗುತ್ತಿಲ್ಲ.
- ಬೊಗಳುವ ನಾಯಿ ಕಚ್ಚುವುದಿಲ್ಲ. ಕಚ್ಚುವ ನಾಯಿ ಬೊಗಳುವುದಿಲ್ಲ ಎಂಬಂತಾಗಿದೆ ಸಾವಯವ ಪ್ರಚಾರಕರ ನಡೆ.
ಮಾತುಗಳಿಗೆ ಅಂಕುಶವೇ ಇಲ್ಲ:
- ಕೆಲವು ಸಾವಯವ ಕೃಷಿಕರಿಗೆ ಅಥವಾ ಸಾವಯವ ಕೃಷಿ ಪ್ರತಿಪಾದಕರಿಗೆ ಕೃಷಿಯ ಮೂಲಭೂತ ವಿಚಾರಗಳೇ ಗೊತ್ತಿಲ್ಲ.
- NPK ಎಂದಾಕ್ಷಣ ಅವರು ಹೌಹಾರುತ್ತಾರೆ. ನೀವೇ ಯೋಚಿಸಿ ಅವರ ತಲೆಯಲ್ಲಿ ಮೆದುಲೂ ಇದೆಯೇ ಸಗಣಿ ಇದೆಯೇ ಎಂದು.
- NPK ಎಂದರೆ ಸಾರಜನಕ ರಂಜಕ ಪೊಟ್ಯಾಶ್.
- ಇದು ತರಗೆಲಯಲ್ಲೂ ಇರುತ್ತದೆ. ಸಗಣಿಯಲ್ಲೂ ಇರುತ್ತದೆ.
- ರಾಸಾಯನಿಕದಲ್ಲೂ ಇರುತ್ತದೆ.
- ಮನುಷ್ಯ ಪ್ರಾಣಿಯ ಮಲ ಮೂತ್ರಗಳಲ್ಲೂ ಇರುತ್ತದೆ.
ಕೆಲವು ಸಾವಯವ ಪ್ರತಿಪಾದಕರ ವ್ಯವಹಾರವೇ ಬೇರೆ ಇರುತ್ತದೆ. ಒಂದು ಜುಬ್ಬಾ , ಸ್ವಲ್ಪ ಕುರುಚಲು ಗಡ್ದ ಹಾಕಿ, ಯಾವುದೋ ಉತ್ಪನ್ನವನ್ನು ಮಾರಾಟ ಮಾಡುವ ದಂಧೆ ಇರುತ್ತದೆ. ಇದರ ಮಾರಾಟ ಉದೇಶಕ್ಕಾಗಿ ರಂಗು ರಂಗಾಗಿ ಮಾತಾಡುತ್ತಾರೆ. ಒಂದಷ್ಟು ಅಮಾಯಕರ ಅದರಲ್ಲೂ ಪೇಟೆ ಪಟ್ಟಣಗಳಲ್ಲಿದ್ದುಕೊಂಡು ಹೊಸತಾಗಿ ಕೃಷಿಗೆ ಬರುವವರೇ ಇವರ ಟಾರ್ಗೆಟ್.
- ಸಾವಯವ ಕೃಷಿ ಮಾಡುವವರು ಪರಿಸರದಲ್ಲಿ ಓಡಾಡುತ್ತಾರೆ.
- ಶುದ್ಧತೆ ಬಯಸುವವರಾದ ಅವರಿಗೆ ಪರಿಸರದಲ್ಲಿ ಸೇರಿರುವ ರಾಸಾಯನಿಕಗಳು ( ಗಾಳಿ ಮತ್ತು ನೀರು) ಯಾವ ಪರಿಣಾಮವನ್ನೂ ಬೀರುವುದಿಲ್ಲ.
- ವಾಸ್ತವವಾಗಿ ನಮ್ಮ ಕೃಷಿ ಬಳಕೆಯ ರಾಸಾಯನಿಕಗಳಿಗಿಂತ ವಾತಾವರಣದ ಗಾಳಿಯಲ್ಲಿ ಆರೋಗ್ಯ ಹಾಳು ಮಾಡುವ ರಾಸಾಯನಿಕಗಳು ಹೆಚ್ಚು ಇವೆ.
- ಕಾರ್ಪೋರೇಶನ್, ಅಥವಾ ಸಾರ್ವಜನಿಕ ಸರಬರಾಜಿನ ನೀರಿನಲ್ಲೂ ನೇರವಾಗಿ ತೊಂದರೆ ಮಾಡುವ ರಾಸಾಯನಿಕಗಳು ಇವೆ.
ಇತ್ತೀಚೆಗೆ ಯಾರೋ ಸಾವಯವ ಕುಚ್ಚಲು ಅಕ್ಕಿಯ ಬಗ್ಗೆ ಹೇಳುತ್ತಾರೆ. ಇದು ಶುದ್ಧ ಸಾವಯವದಲ್ಲಿ ಬೆಳೆದ ಅಕ್ಕಿ. ಆದ ಕಾರಣ ಕಿಲೋ ಗೆ 60 ರೂ. ಮಹಾನುಭಾವರಿಗೆ ಕುಚ್ಚಲು ಅಕ್ಕಿಯಲ್ಲಿ ಹೇಗೆ ರಾಸಾಯನಿಕಗಳು ಉಳಿದಿರುತ್ತವೆ ಎಂಬ ಕನಿಷ್ಟ ಜ್ಞಾನವೂ ಇಲ್ಲ.ಅಕ್ಕಿಗೆ ಯಾರೂ ರಾಸಾಯನಿಕ ಸಿಂಪರಣೆ ಮಾಡುವುದಿಲ್ಲ. ಮಾಡುವುದಿದ್ದರೂ ಅದು ಉಗ್ರಾಣಗಳಲ್ಲಿ ವೈಜ್ಞಾನಿಕ ವಿಧಾನದಲ್ಲಿ ದಾಸ್ತಾನು ಕೀಟ ಬಾರಂತೆ ಉಪಚಾರ ಮಾಡುತ್ತಾರೆ.
- ಭತ್ತದ ಬೆಳೆಗೆ ಬೆಳೆ ಮಾಗುವ ಹಂತದಲ್ಲಿ ರಸ ಹೀರುವ “ಬಂಬು” ಗುಂಧಿ ಬಗ್ ನಿಯಂತ್ರಣಕ್ಕೆ ಮೆಲಾಥಿಯಾನ್ ಕೀಟನಾಶಕವನ್ನು ಸಿಂಪಡಿಸುತ್ತಾರೆ.
- ಇದು ಎರಡು ದಿನ ವಾಯಿದೆಯ ಸ್ಪರ್ಶ ಕೀಟನಾಶಕವಾಗಿದ್ದು, ಅದು ಭತ್ತಕ್ಕೆ ತಗಲಿದ್ದರೂ ಅದು ಕಟಾವು ಮಾಡುವ ಸಮಯಕ್ಕೆ ಅದರ ಉಳಿಕೆ ಹೋಗಿರುತ್ತದೆ.
- ಇನ್ನು ಅದನ್ನು ಬೇಯಿಸುವಾಗ ಅಲ್ಪ ಸ್ವಲ್ಪ ಉಳಿದಿದೆ ಎಂದಾದರೂ ಹೋಗುತ್ತದೆ.
- ಆ ನಂತರ ಅದರ ಸಿಪ್ಪೆ ತೆಗೆದು ಪಾಲಿಶ್ ಮಾಡುವಾಗ ಯಾವುದೇ ಶೇಷವೂ ಉಳಿಯುವುದಿಲ್ಲ.
- ಹಾಗಿರುವಾಗ ಕುಚ್ಚಲಕ್ಕಿಯಲ್ಲಿ ಸಾವಯವ, ರಾಸಾಯನಿಕ ಎಂಬ ವರ್ಗೀಕರಣಕ್ಕೆ ಯಾವ ಅರ್ಥವೂ ಇಲ್ಲ.
ರಾಸಾಯನಿಕ ಗೊಬ್ಬರಗಳನ್ನು ಬಳಸಿದಾಗ ಅದರ ಉಳಿಕೆಗಳು ( residues) ಆಹಾರ ಪದಾರ್ಥಗಳಲ್ಲಿ ಸೇರಿಕೊಳ್ಳುವ ಬಗ್ಗೆ ಜಗತ್ತಿನಲ್ಲಿ ಎಲ್ಲಿಯೂ ಸಂಶೋಧನೆಗಳಾಗಿಲ್ಲ. ಕೆಲವು ಪ್ರಚೋದಕ ರಾಸಾಯನಿಕಗಳಿರಬಹುದು. ಅದನ್ನು ಬಹುಸಂಖ್ಯೆಯ ರೈತರು ಬಳಕೆ ಮಾಡುವುದೇ ಇಲ್ಲ. ಅದಕ್ಕೆ ಸಾವಿರಾರು ರೂ. ಬೆಲೆ ಇರುತ್ತದೆ.
ಸಾವಯವ ಕೃಷಿ ಬೇಕೇ ಬೇಕು:
- ಪ್ರಾರಂಭದಲ್ಲೇ ಹೇಳಿದಂತೆ ಮಣ್ಣು ಮಾಧ್ಯಮದಲ್ಲಿ ಕೃಷಿ ಮಾಡುವಾಗ, ಆ ಮಣ್ಣು ನಿಮ್ಮ ಕೃಷಿ ಕ್ರಮಕ್ಕೆ ಸರಿಯಾಗಿ ನೆರವು ನೀಡಬೇಕಾದರೆ ಅದನ್ನು ಫಲವತ್ತಾದ ಸ್ಥಿತಿಯಲ್ಲಿ ಇಡಲೇ ಬೇಕು.
- ವರ್ಷ ವರ್ಷವೂ ಮಣ್ಣಿನ ಫಲವತ್ತತೆಯನ್ನು ನವೀಕರಿಸಲೇ ಬೇಕು.
- ಇದು ಸ್ಥೂಲ ಸಾವಯವ (ಅಧಿಕ ಪ್ರಮಾಣದಲ್ಲಿ ಕೊಡುವಂತದ್ದು) ವಸ್ತುಗಳಿಂದ ಆಗಬೇಕೇ ಹೊರತು ಬೇರೆ ಸಾವಯವ ಒಳಸುರಿಗಳಿಂದಲ್ಲ.
- ಕೆಲವರು ಸಾವಯವ ಹೆಸರಿನಲ್ಲಿ ಕೆಲವು ಬೆಳೆ ಪೋಷಕಗಳನ್ನು ಬಾಟಲಿಯಲ್ಲಿ ತುಂಬಿಸಿ ಕೊಡುತ್ತಾರೆ.
- ಇದು ತಾತ್ಕಾಲಿಕ ಪರಿಹಾರ. ಮಣ್ಣಿನಲ್ಲಿರುವ ಅಂತರ್ಗತ ಪೋಷಕ ಶಕ್ತಿಯನ್ನು ಒಮ್ಮೆ ಬೂಸ್ಟ್ ಮಾಡಿ ಕೊಡಬಹುದು.
- ಉತ್ತಮ ಕೊಟ್ಟಿಗೆ ಗೊಬ್ಬರ, ಕುರಿ ಮೇಕೆ ಗೊಬ್ಬರ, ಕೋಳಿ ಗೊಬ್ಬರ, ಸಾವಯವ ತ್ಯಾಜ್ಯಗಳು ಇವುಗಳನ್ನು ಹೇರಳವಾಗಿ ಬಳಕೆ ಮಾಡಿದರೆ ತುರ್ತು ಅಗತ್ಯ ಇದ್ದರೆ ಮಾತ್ರ ರಾಸಾಯನಿಕ ಬೇಕಾಗಬಹುದು.
- ಇಳುವರಿಯಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳುವುದೇ ಆಗಿದ್ದರೆ ಅದರ ಅವಶ್ಯಕತೆ ಇರುವುದಿಲ್ಲ.
- ಸ್ಥೂಲ ಗೊಬ್ಬರಗಳ ಹೇರಳ ಬಳಕೆಯಿಂದ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಪ್ರಾಕೃತಿಕವಾಗಿಯೇ ಬರುತ್ತದೆ.
ಸಾವಯವ ಕೃಷಿ ಕ್ರಮಕ್ಕೆ ಯಾವ ಪ್ರಚಾರವೂ ಬೇಕಾಗಿಲ್ಲ. ಇದು ಗೊತ್ತಿಲ್ಲದ ಕೃಷಿಕನೂ ಇಲ್ಲ. ಒಂದಲ್ಲ ಹತ್ತು ಬಾರಿ ಕೀಟನಾಶಕ, ರಸ ಗೊಬ್ಬರ ಬಳಕೆ ಮಾಡಬೇಕಾ ಬೇಡವೋ ಎಂದು ಯೋಚಿಸಿ ಬಳಕೆ ಮಾಡುವ ಕೃಷಿಕರೇ ಹೆಚ್ಚಿನವರು. ಇವರನ್ನು ಒಡೆಯುವುದು, ನಮ್ಮ ವ್ಯವಹಾರ ಕುದುರಿಸಲಿಕ್ಕಾಗಿ ಬಯೋತ್ಪಾದಕರಂತೆ ವರ್ತಿಸುವುದು ಶೋಭೆಯಲ್ಲ. ರೈತರೂ ಸೇರಿದಂತೆ ಸಾವಯವ, ಆರೋಗ್ಯಕ್ಕೆ ಉತ್ತಮ ಎಂಬ ಭ್ರಮೆಯಲ್ಲಿ ನಾವು ಹೆಚ್ಚು ಹಣ ಕೊಟ್ಟು ಖರೀದಿಸುವ ವಸ್ತುಗಳಿ ಯಾರದ್ದೋ ಜೇಬು ತುಂಬಿಸುವ ಕೆಲಸ ಮಾಡದಿರಲಿ. ಗ್ರಾಹಕರಿಗೆ ತಾವು ಖರೀದಿಸುವ ವಸ್ತುಗಳಲ್ಲಿ ಯಾವ ರಾಸಾಯನಿಕ ಶೇಷ ಇದೆ ಎಂಬುದನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಅವಕಾಶ ಇರುವ ಕಾರಣ ಇಂತಹ ಮೋಸದ ತರಹ ಕಾಣುವ ವ್ಯವಹಾರಕ್ಕೆ ಪ್ರೋತ್ಸಾಹ ಕೊಡಬಾರದು.