ಜೈವಿಕ ಬೆಳೆ ಪೋಷಕಗಳನ್ನು ಬಳಸುವಾಗ ಎಚ್ಚರವಿರಲಿ.

by | Apr 3, 2021 | Organic Cultivation (ಸಾವಯವ ಕೃಷಿ) | 0 comments

ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಬಗ್ಗೆ ಹೇಳುವುದೇ ಆದರೆ ಅವುಗಳ ಅಸಮತೋಲನ ಉಂಟಾದರೆ ಅದೂ ಸಹ ತೊಂದರೆದಾಯಕ.
ಇದು ಜೈವಿಕ ಉತ್ಪನ್ನಗಳ ಪ್ರಚಾರದ ಕಾಲ. ಸಾವಯವ , ಹಾನಿ ರಹಿತ, ಪರಿಸರ ಸ್ನೇಹಿ, ಎಂದೆಲ್ಲಾ ಪ್ರಚಾರಗಳ ಮೂಲಕ ರೈತರಿಗೆ ಜೈವಿಕ ಉತ್ಪನ್ನಗಳನ್ನು ಪರಿಚಯಿಸಲಾಗುತ್ತದೆ. ಜೈವಿಕ ಉತ್ಪನ್ನ್ಗಗಳ ಬಗ್ಗೆ ಹೇಳುವುದೆಲ್ಲಾ ನಿಜವಲ್ಲ. ಇದೂ ಸಹ ಅತಿಯಾದರೆ ತೊಂದರೆ ಉಂಟು.
ಕೃಷಿಕರಲ್ಲಿ ಕೆಲವರಿಗೆ ಕಾಲು ಹಿಮ್ಮಡಿ ಒಡೆಯುವ ಸಮಸ್ಯೆ ಇದೆ. ಹೆಚ್ಚಾಗಿ ಇದು ತೋಟದಲ್ಲಿ ಒಡಾಡುವಾಗ, ಧೂಳು ಇರುವ ಸ್ಥಳದಲ್ಲಿ ಹೋಗುವಾಗ ಹೆಚ್ಚಾಗುತ್ತದೆ. ಹಾಗೆಂದು ತೇವಾಂಶ ಒಳಗೊಂಡ ಕಾಡಿನ ಮಣ್ಣು ತರೆಗೆಲೆಗಳು ಉದುರಿ ಕೊಳೆತ  ಪ್ರದೇಶದಲ್ಲಿ  ಒಡಾಡಿದರೆ ಆ ಸಮಸ್ಯೆ ಕಡಿಮೆ.  ಕಾಲು ಒಡೆಯುವುದಕ್ಕೆ ಕಾರಣ ಯಾವುದೋ ಶಿಲೀಂದ್ರ. ಈ ಶಿಲೀಂದ್ರದ ಸಂಖ್ಯೆ ಕೆಲವು ಕಡೆ ಹೆಚ್ಚಾಗಿರುತ್ತದೆ. ಕೆಲವು ಕಡೆ ಕಡಿಮೆ ಇರುತ್ತದೆ. ಕಡಿಮೆ ಇರುವಲ್ಲಿ ಕಾಲು ಒಡೆಯದು. ಹೆಚ್ಚು ಇರುವಲ್ಲಿ ಒಡೆಯುವುದು ಜಾಸ್ತಿ. ಹೊಲದಲ್ಲಿ ಸೂಕ್ಷ್ಮಾಣು ಜೀವಿಗಳ ಅಸಮತೋಲನ ಆಗಿದ್ದರೆ ಆ ಮಣ್ಣಿನಲ್ಲಿ ನಡೆದಾಡಿದಾಗ ಕಾಲಿನ ಹಿಮ್ಮಡಿ ಒಡೆಯುವ ಸಮಸ್ಯೆ ಹೆಚ್ಚಾಗುತ್ತದೆ.

Farmer putting organic liquid manure

 • ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಅತ್ಯಂತ ನಿಕಟವಾಗಿ ನೆಲೆಸಿದ್ದು, ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತವೆ.
 • ಆದರೆ ಎಲ್ಲಾ ಸೂಕ್ಷ್ಮ  ಜೀವಿಗಳೂ ತಮ್ಮ ತಮ್ಮೊಳಗೆ ಸುಮಧುರ ಬಾಂಧವ್ಯವನ್ನು ಇಲ್ಲವೇ ಸಾಮರಸ್ಯವನ್ನು ಹೊಂದಿರುವುದಿಲ್ಲ.
 • ಕೆಲವು ಆಹಾರಕ್ಕಾಗಿ ಸ್ಪರ್ಧೆ ನಡೆಸುತ್ತವೆ.
 • ಅಂತಹ ಸಂದರ್ಭಗಳಲ್ಲಿ  ಕೆಲವು ಸೂಕ್ಷ್ಮ ಜೀವಿಗಳು ಇತರ ಸೂಕ್ಷ್ಮ ಜೀವಿಗಳ ಮೇಲೆ ವಿಜಯ ಸಂಪಾದಿಸಿ ತಮ್ಮ ಪ್ರಭಾವ ಬೀರುತ್ತದೆ.
 • ಕೆಲವು ಸೂಕ್ಷ್ಮ  ಜೀವಿಗಳು  ಇತರ ಸೂಕ್ಷ್ಮ ಜೀವಿಗಳನ್ನು  ವಿರೋಧಿಸಿ ಹಲವನ್ನು ಭಕ್ಷಿಸುವವು.
 • ಹಾಗೂ ಹಲವು ಜೀವಿಗಳ ಮೇಲೆ ಪರೋಪಜೀವಿಯಾಗಿ (ಬದನಿಕೆ) ಉದರ ಪೋಷಣೆ ಮಾಡಿಕೊಳ್ಳುವುದೂ  ಇದೆ.
 • ಆದ ಕಾರಣ ಮನ ಬಂದಂತೆ ಜೈವಿಕ ಉತ್ಪನ್ನಗಳನ್ನು ಮಣ್ಣಿಗೆ ಸೇರಿಸದಿರಿ ಜಾಗ್ರತೆ.

ಸೂಕ್ಷ್ಮ ಜೀವಿಗಳ ದುಶ್ಪರಿಣಾಮ:

 • ಮಣ್ಣು ಎಂಬುದು ಅಸಂಖ್ಯ ಸೂಕ್ಷ್ಮಾಣು ಜೀವಿಗಳ ಒಂದು ಮನೆ ಎಂದೇ ಹೇಳಬಹುದು.
 • ಇಲ್ಲಿ ಉಪಕಾರಿಗಳು, ಕೆಟ್ಟವುಗಳು  ಹೀಗೆ ಬೇರೆ ಬೇರೆ ಜೀವಾಣುಗಳು ಇರುತ್ತವೆ.
 • ಹೆಚ್ಚಾಗಿ ಎಲ್ಲಾ ನಮೂನೆಯ ಸೂಕ್ಷ್ಮಾಣು ಜೀವಿಗಳೂ ಬೇರಿನ ಸಮೀಪದಲ್ಲೇ ಆಶ್ರಯ ಪಡೆದಿರುತ್ತವೆ.
 • ಅಲ್ಲಿ ಅವುಗಳಿಗೆ ಒಳ್ಳೆಯ ಪೋಷಕ ಆಹಾರ ದೊರೆಯುತ್ತದೆ.
 • ಕೆಲವು ರೋಗ ಕಾರಕ ಶಿಲೀಂದ್ರ ಬ್ಯಾಕ್ಟೀರಿಯಾಗಳು ನಮಟೋಡುಗಳೂ, ಅಕ್ಟಿನೋಮೈಸೀಟುಗಳೂ ಸಹ ಬೇರಿನ ಸನಿಹದಲ್ಲಿ ಹೆಚ್ಚಾಗಿ ತಮ್ಮ ಕಾರುಬಾರನ್ನು ನಡೆಸುತ್ತವೆ.

ಬುಡ ಕೊಳೆಯುವಂತೆ ಮಾಡುವುದು, ಬೇರು ಕೊಳೆಯುವಂತೆ ಮಾಡುವುದು, ಬೇರನ್ನು ಗಾಯ ಮಾಡುವುದು, ಕಜ್ಜಿ ತರಹದ ರೋಗ ತರುವುದು ಮುಂತಾದ ಸಮಸ್ಯೆಗಳು ಹೆಚ್ಚಾಗಲು ಅವುಗಳ ವಿರೋಧಿ ಶಿಲೀಂದ್ರ, ಬ್ಯಾಕ್ಟೀರಿಯಾಗಳ ಮೇಲೆ ಅವು ಪ್ರಾಭಲ್ಯ ಸಾಧಿಸುವುದೇ ಆಗಿರುತ್ತದೆ. ಸಾಮಾನ್ಯವಾಗಿ ಬಾಧಕ ಜೀವಿಗಳು ಹೆಚ್ಚು ಕಾಲ ಬದುಕಿರುತ್ತವೆ.

 • ಹಲವಾರು ಸಸ್ಯಕ್ಕೆ ರೋಗ, ಮತ್ತು ಇನ್ನಿತರ ರಕ್ಷಣೆ ಕೊಡುವ ಜೀವಾಣುಗಳು ಇರುತ್ತವೆ.
 • ಅವುಗಳು ಬಾಧಕ ಜೀವಿಗಳಿಂದ  ಕಡಿಮೆಯಾಗುವುದೂ ಇರುತ್ತದೆ.
 • ಸೂಕ್ಷ್ಮಾಣು ಜೀವಿಗಳ ಪರಸ್ಪರ ಸಾಮರಸ್ಯದ ಕೊರತೆಯಿಂದ ಆಹಾರದ ಸರ್ಧೆ ನಡೆಯುತ್ತವೆ.
 • ಅದರಲ್ಲೂ ಸಾರಜನಕದ ಬಗೆಗಿನ ಸ್ಪರ್ಧೆ ಹೆಚ್ಚಾಗಿರುತ್ತದೆ.
 • ಈ ಸೂಕ್ಷ್ಮ ಜೀವಿಗಳು ಆಹಾರವಸ್ತುಗಳನ್ನು ಬೆಳೆಗಳಿಗಿಂತ ಮೊದಲೇ ಸೇವಿಸುವುದರಿಂದ  ಉಳಿದುದನ್ನು ಮಾತ್ರ ಸಸ್ಯಗಳು ಬಳಕೆ ಮಾಡಬೇಕಾಗಿ ಬರುತ್ತದೆ.
 • ಆಗ ಸಸ್ಯಕ್ಕೆ ಪೋಷಕದ ಕೊರತೆ ಉಂಟಾಗುತ್ತದೆ.
 • ಇಂಗುವಿಕೆ ಸರಿಯಾಗಿರುವ ಮಣ್ಣಿನಲ್ಲಿ ಅಲಸ್ವಲ್ಪ ಆಮ್ಲಜನಕವನ್ನು ಸೂಕ್ಷ್ಮ ಜೀವಿಗಳೇ  ಬಳಸಿಕೊಳ್ಳುತ್ತವೆ.
 • ಇದರಿಂದಾಗಿ ಸಸ್ಯಗಳಿಗೆ ಆಮ್ಲಜನಕದ ಕೊರೆತೆ ಉಂಟಾಗುತ್ತದೆ.
 • ಇಂಗುವಿಕೆ ಚೆನ್ನಾಗಿಲ್ಲದ ಭೂಮಿಯಲ್ಲಿ ಸಾರಜನಕ , ಗಂಧಕ, ಕಬ್ಬಿಣ, ಮ್ಯಾಂಗನೀಸ್ ಮುಂತಾದ ಆಹಾರ  ವಸ್ತುಗಳು ಅಪಕರ್ಷಣೆಗೊಂಡು ಸಸ್ಯಗಳಿಗೆ ಲಭ್ಯವಾಗಲಾರದು.

ಸೂಕ್ಷ್ಮ ಜೀವಿಗಳನ್ನು ಹೇಗೆ ಬಳಕೆ ಮಾಡಬೇಕು:

 • ನಿಮ್ಮ ಬೆಳೆಗಳಿಗೆ ಸಾಕಷ್ಟು ಪೋಷಕಗಳನ್ನು ನೀಡುತ್ತಾ ಇದ್ದರೂ ಸಹ ಅವು ಅದಕ್ಕೆ ಸರಿಯಾಗಿ ಸ್ಪಂದನೆ ನಡೆಸದೇ ಇದ್ದರೆ ಅಲ್ಲಿ ಉಪಕಾರೀ ಸೂಕ್ಷ್ಮಾಣು ಜೀವಿಗಳ ಪ್ರಮಾಣ ಕಡಿಮೆಯಾಗುತ್ತಿದೆ ಎಂದರ್ಥ.
 • ಸೂಕ್ಷ್ಮ ಜೀವಿಗಳಿಗೆ ಬೇಕಾಗುವ ಆಹಾರವಾದ ಸಾವಯವ ಅಂಶ ಉತ್ತಮವಾಗಿದ್ದರೆ ಅಸಮತೋಲನ ಉಂಟಾಗಲು ಅವಕಾಶ ಕಡಿಮೆ ಇರುತ್ತದೆ.
 • ಸಾವಯವ ಅಂಶ ಕಡಿಮೆ ಅಥವಾ ತೀರಾ ಕಡಿಮೆ ಇರುವ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಅದರಲ್ಲೂ ಉಪಕಾರಿ ಸೂಕ್ಷ್ಮಾಣು ಜೀವಿಗಳ ಬದುಕುವಿಕೆಗೆ ಅಡ್ಡಿಯಾಗುತ್ತದೆ.
 •   ಅವುಗಳು ಮಣ್ಣಿನಲ್ಲಿ ಆದರಷ್ಟಕ್ಕೇ ಹುಟ್ಟಿಕೊಳ್ಳುವುದೂ ಇಲ್ಲ.
 •  ಹೊರಗಡೆಯಿಂದ ತಂದು ಹಾಕಿದಾಗಲೂ ಅವು ಬದುಕಿ ಉಳಿಯುವುದಿಲ್ಲ.
 • ಮಣ್ಣು ಕೊಚ್ಚಣೆಯನ್ನು ತಡೆದು, ಅನಗತ್ಯ ಅಗೆಯುವಿಕೆ ಮಾಡದೆ ಮಣ್ಣಿನಲ್ಲಿ ಗಾಳಿಯಾಡುವಿಕೆ ಮತ್ತು ಬಸಿಯುವಿಕೆಯನ್ನು ಸಮರ್ಪಕವಾಗಿ ಮಾಡುವುದರಿಂದ ನಾವು ಹೊರ ಮೂಲದಿಂದ ಕೊಡುವ  ಸೂಕ್ಷ್ಮಾಣು ಜೀವಿಗಳು ಸ್ವಲ್ಪ ಮಟ್ಟಿಗೆ  ಕೆಲಸ ಮಾಡುತ್ತದೆ.
 • ಮಣ್ಣಿನಲ್ಲಿ ಕಳಿಯುವ ಕ್ರಿಯೆಗೆ ಸಹಕಾರಿಯಾಗುವ ಸೂಕ್ಷ್ಮಾಣುಗಳು ಹೆಚ್ಚಿನ ಪ್ರಮಾಣದಲ್ಲಿ ಇರುವಂತೆ ನೋಡಿಕೊಂಡರೆ ಎಲ್ಲಾ ಸೂಕ್ಷ್ಮಾಣು ಜೀವಿಗಳೂ ಸಮತೋಲನದಲ್ಲಿ ಇರುತ್ತದೆ.
 • ಅವುಗಳ ಪ್ರಮಾಣವೂ ಬಲವಾಗಿರುತ್ತದೆ. ಸಾಧ್ಯವಾದಷ್ಟು ಮಣ್ಣಿನ ಸ್ಥಿತಿಯನ್ನು ( ರಸಸಾರ, ಕೊಚ್ಚಣೆ, ಅತಿಯಾದ ಆಮ್ಲೀಯ ವಸ್ತುಗಳ ಬಳಕೆ) ಉತ್ತಮವಾಗಿಟ್ಟುಕೊಂಡರೆ  ಬದಲಾಗುವ ಪರಿಸ್ಥಿತಿಯಲ್ಲೂ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಸಮತೋಲನದಲ್ಲಿ ಇರುತ್ತವೆ.

ಇಲ್ಲಿ ಸೂಕ್ಷ್ಮಾಣು ಜೀವಿಗಳು ಹೇರಳವಾಗಿರುತ್ತದೆ:

 • ನಮ್ಮ ಹೊಲದಲ್ಲಿ ಮಣ್ಣಿಗೆ ಸೇರಿಸುವ ಸಾವಯವ ಪದಾರ್ಥಗಳು ಎಷ್ಟು ಬೇಗ ಕರಗಿ ಮಣ್ಣಾಗುತ್ತದೆ ಎಂಬುದರ ಮೇಲೆ ಅಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಚೆನ್ನಾಗಿರುತ್ತದೆ.
 • ಸಾವಯವ ವಸ್ತುಗಳಲ್ಲಿ ಸಿಹಿ ಅಂಶ ಚೆನ್ನಾಗಿದ್ದರೆ, ಬ್ಯಾಕ್ಟೀರಿಯಾಗಳು ಹೆಚ್ಚುತ್ತವೆ.
 • ಪಿಷ್ಟದ ಅಂಶ ಹೆಚ್ಚಾಗಿದ್ದರೆ ಅಕ್ಟಿನೋ ಮೈಸೀಟುಗಳೂ, ಸೆಲ್ಯುಲೋಸ್ ಅಂಶ ಇದ್ದರೆ ಶಿಲೀಂದ್ರಗಳು  ಹೆಚ್ಚಾಗಿರುತ್ತವೆ.
 • ಕ್ಷಾರ ಮಣ್ಣಿನಲ್ಲಿ ಬ್ಯಾಕ್ಟೀರಿಯಾ ಗಳು ಮತ್ತು  ಆಕ್ಟಿನೋಮೈಸಿಟು ಗಳ ಪ್ರಾಭಲ್ಯ ಹೆಚ್ಚಾಗಿರುತ್ತದೆ.
 • ಆಮ್ಲ ಮಣ್ಣಿನಲ್ಲಿ ಶಿಲೀಂದ್ರಗಳ ಪ್ರಾಭಲ್ಯ ಹೆಚ್ಚಾಗಿರುತ್ತದೆ.
 • ಮಣ್ಣಿನ ಸಾವಯವ ಅಂಶದಲ್ಲಿ ಸಾರಜನಕ , ಆಮೈನೋ ಆಮ್ಲಗಳು ಉತ್ತಮವಾಗಿದ್ದರೆ,  ಬ್ಯಾಕ್ಟೀರಿಯಾಗಳು ಹೆಚ್ಚುತ್ತವೆ. ಅದರ ಜೊತೆಗೆ ಇತರ ಸೂಕ್ಷ್ಮಾಣು ಜೀವಿಗಳೂ ಒಟ್ಟು ಸೇರಿಕೊಳ್ಳುತ್ತವೆ.

ಇತ್ತೀಚೆಗೆ ಹಳ್ಳಿ ಹಳ್ಳಿಗಳಲ್ಲಿ ನೆಲೆ ನಿಂತು ಜೈವಿಕ ಮೂಲದ ರಾಸಾಯನಿಕ ಇಲ್ಲದ ಶುದ್ಧ ಸಾವಯವ ಎಂಬ ಹೆಸರಿನಲ್ಲಿ ಹಲವಾರು ಜೈವಿಕ ಬೆಳೆ ಪೋಷಕಗಳನ್ನು ಮಾರಾಟ ಮಾಡಲಾಗುತ್ತಿದೆ. ಹೊಸ ಉತ್ಪನ್ನದ ಬಗ್ಗೆ ರೈತರಿಗೆ ಹೆಚ್ಚಿನ ಒಲವು. ಆದರೆ ಬಳಕೆ ಮಾಡುವಾಗ ಮಾತ್ರ ಎಚ್ಚರ ಇರಲಿ. ಒಮ್ಮೆ ಪ್ರತಿಫಲ ಕೊಟ್ಟಿತು ಎಂದು ಅದನ್ನೇ ಬಳಕೆ ಮಾಡಲು ಹೋಗದಿರಿ. ಅದು ಮತ್ತೆ ಫಲಕೊಡದೆ, ಅಥವಾ ಮ್ಯುಟೆಂಟ್ ಆಗಿ ಪರಿವರ್ತಿತವಾಗಿ ತೊಂದರೆಯೂ ಆಗಬಹುದು.

0 Comments

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!