ಅಡಿಕೆ -ಹಳದಿ ಎಲೆ ರೋಗ ಪರಿಹಾರದ ನಿರೀಕ್ಷೆ ಬೇಡ.

ಅಡಿಕೆ -ಹಳದಿ ಎಲೆ ರೋಗ ಪರಿಹಾರದ ನಿರೀಕ್ಷೆ ಬೇಡ

ಅಡಿಕೆ ಬೆಳೆಗೆ ಬಾಧಿಸಲ್ಪಟ್ಟ ಹಳದಿ ಎಲೆ ರೋಗ ಈಗಿನ ಪರಿಸ್ಥಿತಿಯಲ್ಲಿ ಇನ್ನು ನೂರು ವರ್ಷ ಕಳೆದರೂ ನಿವಾರಣೆ ಅಗುವುದಿಲ್ಲ, ಯಾಕೆ ಕೇಳಿ.
ಅಡಿಕೆ ಬೆಳೆಯಲಾಗುವ ಕರ್ನಾಟಕದ ಮಲೆನಾಡಿನ ಭಾಗಗಳಾದ ಶ್ರಿಂಗೇರಿ, ಕೊಪ್ಪ, ಬಾಳೆಹೊನ್ನೂರು, ಕಳಸ ಮುಂತಾದ ಕಡೆ ಎಲೆ ಹಳದಿಯಾಗುವ ಸಮಸ್ಯೆ ಪ್ರಾರಂಭವಾಗಿ ಸುಮಾರು 40 ವರ್ಷಗಳಾಗಿರಬಹುದು.  ಎಲೆ ಹಳದಿಯಾಗುವುದಕ್ಕೆ ಒಂದು ರೋಗ ಎಂದು ನಾಮಕರಣ ಮಾಡಲಾಗಿದೆ. ಪೈಟೋ ಪ್ಲಾಸ್ಮಾ ತರಹದ ಜೀವಾಣು ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಜಗತ್ತಿನಲ್ಲಿ ಈ ಜೀವಾಣುವನ್ನು ನಿಯಂತ್ರಿಸಬಲ್ಲ ಪರಿಹಾರ ಸಿಕ್ಕಿಲ್ಲ ಎಂದು ಸಹ ಹೇಳುತ್ತಿದಾರೆ. ಇದರ ನಿಯಂತ್ರಣಕ್ಕೆ ಸರಕಾರ ಈಗ 25 ಕೋಟಿ ಕೊಟ್ಟಿದೆ. ಇದು ಮುಗಿಯುವ ತನಕ ಸಂಶೋಧನೆಗಳು ನಡೆಯಲಿವೆ.

Yಹಳದಿ ಎಲೆ ರೋಗ ಬಾಧಿತ ಮರ

  • ಅಡಿಕೆ ಸಸಿ,ಮರಗಳಲ್ಲಿ  ಎಲೆಯ ಅಲಗಿನ ಭಾಗ ಹಳದಿಯಾಗಿ ಕ್ರಮೇಣ ಮರದ ಶಿರ ಭಾಗದಲ್ಲಿ ಗರಿಗಳ ಸಂಖ್ಯೆ ಕಡಿಮೆಯಾಗುತ್ತಾ ಬರುವುದು ಹಳದಿ ಎಲೆಯ ಲಕ್ಷಣ. ಬಾಧಿತ ಸಸ್ಯವು ಬೇಗ ಸಾಯುವುದಿಲ್ಲ.
  • ಇಳುವರಿಯೂ ಸಹ ಅಷ್ಟಕ್ಕಷ್ಟೇ.
  • ಪ್ರಾರಂಭದಲ್ಲಿ ಇದು ಕೆಲವು ಜೌಗು ತರಹದ ಪ್ರದೇಶಗಳಲ್ಲಿ ಮಾತ್ರ ಕಂಡು ಬಂದಿತು. ಈಗ ಬಹುತೇಕ ಎಲ್ಲಾ ಕಡೆ ನೆಟ್ಟ ಸಸಿಗಳಿಗೂ ಬರಲಾರಂಭಿಸಿದೆ.
  • ಈ ಪ್ರದೇಶದಿಂದ ಬೀಜ, ಸಸಿಯನ್ನು ತಂದು ಬೇರೆ ಕಡೆ ನೆಟ್ಟರೂ ಸಹ ಅಲ್ಲಿ ಹಳದಿ ರೋಗ ಕಾಣಿಸಿಕೊಳ್ಳುತ್ತದೆ.
  • ಈ ರೋಗ ಇರುವ ಪ್ರದೇಶಗಳ ಅಡಿಕೆ ಬೆಳೆಗಾರರು ಅಡಿಕೆಯ ಆಸೆ ಬಿಟ್ಟು ಬೇರೆ ಬೆಳೆಯ ಹುಡುಕಾಟದಲ್ಲಿದ್ದಾರೆ.
  • ಸಂಶೋಧನೆಗಳು ಹೊಸ ಹೊಸ ರೂಪದಲ್ಲಿ ನಿರಂತರ ನಡೆಯುತ್ತಲೇ ಇವೆ.

ಸಂಶೊಧನೆಗಳು ಅಧ್ಯಯನಗಳ ಸಾಕಷ್ಟು ಆಗಿವೆ:

  • ಸರಕಾರದ ಸಂಶೋಧನಾ ಸಂಸ್ಥೆಗಳು ಹಲವಾರು ವರ್ಷಗಳಿಂದ ರೋಗ ಪೀಡಿತ ಅಡಿಕೆ ತೋಟಗಳಿಂದ ಮಣ್ಣು ಒಯ್ಯುತ್ತವೆ, ನೀರು ಒಯ್ಯುತ್ತವೆ. ಮರದ ಭಾಗಗಳನ್ನು ಒಯ್ದು ಅದರ ಕೋಶಗಳನ್ನು  ಲ್ಯಾಬ್ ಗಳಲ್ಲಿ ನಿರಂತರ ಅಧ್ಯಯನ ನಡೆಸುತ್ತಾ ಇವೆ.
  • ಕೆಲವು ಸಂಶೋಧನಾ ವಿಧ್ಯಾರ್ಥಿಗಳೂ ಸಹ ಈ ವಿಷಯದಲ್ಲಿ  ಮಾಹಿತಿ ಕಲೆ ಹಾಕಿ ಸಂಶೋಧನಾ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಗಳಿಸಿದ್ದೂ ತೆರೆಮರೆಯಲ್ಲಿ ಇರಬಹುದು.
  • ಇದರ ಜೊತೆಗೆ ಖಾಸಗಿ ಔಷಧಿ, ಗೊಬ್ಬರ ತಯಾರಕರ ದಂಡು ಸಹ ಈ ಭಾಗದಲ್ಲಿ ಒಬ್ಬರ ನಂತರ ಒಬ್ಬರಂತೆ ತಮ್ಮ ಉತ್ಪನ್ನವನ್ನು ಬಳಸುವ ಅಥವಾ ಮಾರಾಟ ಮಾಡುವ ಕೆಲಸದಲ್ಲಿ ನಿರತವಾಗಿವೆ.
  • ಸಸ್ಯ ರೋಗ ಶಾಸ್ತ್ರಜ್ಞರೂ ಸಂಶೋಧನೆ ಮಾಡುತ್ತಾರೆ. ಬೇಸಾಯ ಶಾಸ್ತ್ರದವರೂ ಮಾಡುತ್ತಾರೆ.
  • ಮಣ್ಣು ವಿಜ್ಞಾನಿಗಳೂ ಮಾಡುತ್ತಾರೆ. ಪೋಶಕಾಂಶ ತಜ್ಞರೂ ಮಾಡುತ್ತಾ ಇದ್ದಾರೆ.
  • ಆದರೆ ಈ ತನಕ ಇದರ ಒಂದು ಎಳೆಯನ್ನೂ ಯಾರಿಂದಲೂ ಬಿಡಿಸಲಿಕ್ಕೆ ಆಗಲಿಲ್ಲ.
  • ಸಾವಿರಾರು ಹೆಕ್ಟೇರ್ ಅಡಿಕೆ ಕೃಷಿಯ ಈ ಭಾಗಗಳಲ್ಲಿ ಒಂದು ಹೆಕ್ಟೇರ್ ಸರಿ ಮಾಡಲಿಕ್ಕೆ ಆಗಲಿಲ್ಲ.
  • ಅಥವಾ ಹೊಸ ಪ್ರದೇಶಗಳಿಗೆ ಹರಡುವುದನ್ನು ತಪ್ಪಿಸಲಿಕ್ಕೆ ಆಗಲಿಲ್ಲ.
  • ದಿನ ಕಳೆದಂತೆ ಇದು ಒಂದು ಜ್ವಲಂತ ಸಮಸ್ಯೆಯಾಗಿಯೇ ಉಳಿಯುತ್ತಿದೆ!

ರೋಗ ಮೂಲ ಯಾವುದು?

Effected leaf

  • ಹಳದಿ ಎಲೆ ರೋಗ ಉಳ್ಳ ಭಾಗಗಳಲ್ಲಿ  ರೈತರು ಅಡಿಕೆ ತೋಟ ಮಾಡಿದ್ದು ಇಂದು ನಿನ್ನೆಯದಲ್ಲ.
  • ಸುಮಾರು 100-200 ವರ್ಷಗಳಿಂದಲೂ ಇಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿತ್ತು.
  • ಈ ಸಮಸ್ಯೆ ಪ್ರಾರಂಭವಾದುದು ಹಿಂದೆ ಹೇಳಿದಂತೆ ಸುಮರು 30-40 ವರ್ಷಗಳಿಂದೀಚೆಗೆ .
  • ಕಾರಣ ಏನಿರಬಹುದು? ಇದನ್ನು ಯಾರಾದರೂ ಚಿಂತನೆ ಮಾಡಿದ್ದುಂಟೇ?
  • ರೈತ ಕೃಷಿ ವಿಜ್ಞಾನಿ ಎಂದೇ ಕರೆಯಬಹುದಾದ ಶ್ರಿಂಗೇರಿ ನೆಮ್ಮಾರಿನ  ಶ್ರೀ ಬಾಲಕೃಷ್ಣ  ಎಂಬವರು ಇದರ ಒಂದು ಎಳೆಯನ್ನು ಬಿಚ್ಚಿ ತೋರಿಸಿದ್ದಾರೆ.
  • ಬಹುಷಃ ವಿಷಯದ ಶಿಕ್ಷಣ ಪಡೆದು, ಸೇವಾ ಹಿರಿತನ ಹೊಂದಿದ ತಜ್ಞರು ಮಾಡಿರುವ ಸಂಶೋಧನೆ ಗಿಂತ ಇದು ಮೇಲ್ಮಟ್ಟದ್ದು.

ಆದರೆ ಅವರ ಅಧ್ಯಯನ ಮತ್ತು ಸಲಹೆಗೆ ಮಾನ್ಯತೆ ಕಡಿಮೆ.  ಯಾಕೆಂದರೆ ಕೃಷಿ ವಿಷಯದಲ್ಲೂ ತಜ್ಞ ಪದವಿ ಗಿಟ್ಟಿಸಿದವರು ಹೇಳಿದರೆ ಮಾತ್ರ ಅದಕ್ಕೆ ಮನ್ನಣೆ. ಇಲ್ಲಿಯೂ ಲಾಬಿ ಇದೆ.ಜಾತಿ ಇದೆ. ಪ್ರಭಾವ  ಇದೆ. ಸಾಮಾನ್ಯ ಜನ ಈ ಬಗ್ಗೆ ಪ್ರಶ್ನೆ ಮಾಡಿದರೆ ಅದಕ್ಕೆ ಮನ್ನಣೆ ಇಲ್ಲ. ಇದು ನಡೆಯುತ್ತಿರುವ ವಾಸ್ತವಿಕತೆ.

  • ರೋಗ ಮೂಲ ಯಾವುದು ಎಂಬ ಬಗ್ಗೆ ಹೇಳುವುದೇ ಆದರೆ, ನಮ್ಮ ರೈತರು ಬಳಕೆ ಮಾಡಿದ ಬೆಳೆ ಪೋಷಕಗಳು ಎಂದೇ ಹೇಳಬಹುದು.
  • 1969 ರ ಹಸುರು ಕ್ರಾಂತಿಯ ತರುವಾಯ ರಸ ಗೊಬ್ಬರಗಳು ಕೃಷಿ ಬಳಕೆಗೆ ಪ್ರಚಾರಕ್ಕೆ ಬಂದವು.
  • ಸುಮಾರು 10-20 ವರ್ಷ ಸರಕಾರೀ ಗೊಬ್ಬರ ಎಂದು ಬಹಳ ಜನ ರೈತರು ಇದನ್ನು ಸ್ವೀಕರಿಸಲು ಒಪ್ಪಲಿಲ್ಲ.
  • ಆ ನಂತರ ಇದನ್ನು ರೈತರ ಮೇಲೆ ಹೇರುವಿಕೆ ಪ್ರಾರಂಭವಾಯಿತು.
  • ಹೇಗೆಂದರೆ 10,000 ರೂ. ಗಳ ಬ್ಯಾಂಕ್ /ಸೊಸೈಟಿ  ಸಾಲ ಮಾಡಿದರೆ ಅದರಲ್ಲಿ  2000 ರೂ. ಗಳ ರಸಗೊಬ್ಬರ ಕೊಟ್ಟು ಉಳಿದ ಮೊತ್ತವನ್ನು ಹಣದ ರೂಪದಲ್ಲಿ  ಕೊಡಲಾಗುತ್ತಿತ್ತು.
  • ಇದನ್ನು ಬಳಸುವ ಬಗ್ಗೆ ಸಮರ್ಪಕ ಮಾಹಿತಿ ಇರಲಿಲ್ಲ. ರೈತರಿಗೆ ಇದು ಬಂಗಾರ ಸಿಕ್ಕಿದಂತಾಗಿ ಹೇರಳವಾಗಿ ಬಳಕೆ ಮಾಡಲಾರಂಭಿಸಿದರು.
  • ಸಾಂಪ್ರದಾಯಿಕ ಬೇಸಾಯ ವಿಧಾನಗಳನ್ನು ಕಡಿತ ಮಾಡುತ್ತಾ ಬಂದದರ ಪರಿಣಾಮ ,ಮಣ್ಣಿನ ಬೌತಿಕ ಮತ್ತು ಜೈವಿಕ, ರಾಸಾಯನಿಕ ಗುಣಧರ್ಮಗಳ ವ್ಯತ್ಯಾಸಕ್ಕೆ ಕಾರಣವಾಯಿತು.
  • ಆಹಾರದ ವ್ಯತ್ಯಾಸದಿಂದ ಮಣ್ಣಿನ ಅನಾರೋಗ್ಯ ಉಂಟಾಗಿ, ಇವು ಬೆಳೆಯ ಮೇಲೆ ಪರಿಣಾಮ ಬೀರಿತು.
  •  ಶಾರೀರಿಕ ನ್ಯೂನತೆ ಯುಂಟಾಗಿ ಅದಕ್ಕೆ ರೋಗವೆಂಬ ನಾಮಕರಣ ಮಾಡಲಾಯಿತು ಎಂದರೆ ತಪ್ಪಿಲ್ಲ.
  • ಇದು ಭವಿಷ್ಯದಲ್ಲಿ ನಮ್ಮ ಎಲ್ಲಾ ಕೃಷಿ ಬೆಳೆಗಳಿಗೂ ನಿಧಾನಗತಿಯಲ್ಲಿ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

100 ಜನ ರೈತರಿರುವಲ್ಲಿ ಅವರೆಲ್ಲರನ್ನೂ ಮಾತಾಡಿಸಿದರೆ ಸುಮಾರು 90% ರೈತರಿಗೆ NPK ಗೊಬ್ಬರದ ಪೂರ್ವಾಪರ ಗೊತ್ತಿಲ್ಲ. ಅದು ಹೇಗೆ ಕೆಲಸ ಮಾಡುತ್ತದೆ ಗೊತ್ತಿಲ್ಲ. ಸರಕಾರಿ ಗೊಬ್ಬರ NPK ಎಂದಷ್ಟೇ ಗೊತ್ತು. ಬರೇ ಇಷ್ಟೇ ಸಾಕೇ, ಅವುಗಳ ಕೆಲಸಕ್ಕೆ ಪೂರಕವಾಗಿ ಬೇರೆ ಏನು ಪೋಷಕಗಳು ಅಗತ್ಯ ಇವುಗಳೂ ಸಹ ಗೊತ್ತಿಲ್ಲ. ನಮ್ಮ ವ್ಯವಸ್ಥೆಯೂ ಇದರ ಬಳಕೆ ಮತ್ತು ಅದರ ಪ್ರತಿಫಲಕ್ಕೆ ಏನೆಲ್ಲಾ ಆಗಬೇಕು ಎಂದು ಹೇಳಿಲ್ಲ. ಕಿಲೋ ಅಥವಾ  ಗ್ರಾಂ ಲೆಕ್ಕದಲ್ಲಿ ಹಾಕಿ ಎಂದು ಹೇಳಿದ್ದವು.

  • ಮೂಲಭೂತ ಸಂಗತಿಗಳ ಅರಿವಿಲ್ಲದದೆ ರೈತರು ಹೆಚ್ಚೋ ಕಡಿಮೆಯೋ ಹಾಕಿದರು.
  • ಇತರ ಯಾವುದೇ ಪೋಷಕ  ಹಾಕಿದರೂ ಅಗತ್ಯವಾಗಿ ಬಿಡಬಾರದಾಗಿರುವ ಸಾವಯವ ವಸ್ತುಗಳನ್ನು ಕಡಿಮೆ ಮಾಡುತ್ತಾ ಬಂದರು.
  • ಅಥವಾ ಅಸಮತೋಲನ ವಾಗಿ ಬಳಕೆ ಮಾಡಿದರು.ತತ್ಪರಿಣಾಮವಾಗಿ  ಇಂದು ಬೆಳೆಗಳು ಶಾರೀರಿಕ ಸಮತೋಲನದಲ್ಲಿ ರೋಗ ಗ್ರಸ್ತವಾಗಿವೆ.
  • ಇದನ್ನು 25   ಅಲ್ಲ, 250 ಕೋಟಿಯಲ್ಲೂ ಸರಿಮಾಡುವುದು ಕಷ್ಟ.
  • ಮಣ್ಣು ಸರಿಮಾಡದೆ ಬೆಳೆ ಸರಿಮಾಡಲು ಸಾಧ್ಯವಿಲ್ಲ.
  • ಮಣು ಸರಿಮಾಡುವ ಸರಿಯಾದ ಸಂಶೋಧನೆ ಆಗುವ ತನಕ ಪ್ರಯೋಜನ ಇಲ್ಲ.
  •  ಇದಕ್ಕೆ ಇರುವ ಏಕೈಕ ಪರಿಹಾರ ಒಂದಷ್ಟು  ಕಾಲ ಆ ಮಣ್ಣಿನಲ್ಲಿ ಬದಲಿ ಬೆಳೆ ಬೆಳೆದು ನೈಸರ್ಗಿಕವಾಗಿ ಮಣ್ಣನ್ನು ಮತ್ತೆ ಪುನರುಜ್ಜೀವನ ಗೊಳಿಸುವುದು ಮಾತ್ರ.

ಬದಲಿ ಬೆಳೆ ರೋಗವನ್ನು  ನಿಯಂತ್ರಿಸಬಹುದು:

effected garden

  • ಅಡಿಕೆ ಒಂದು ಏಕದಳ ಸಸ್ಯ. ಇದಕ್ಕೆ ಪೈಟೋ ಪ್ಲಾಸ್ಮಾ (Mycoplasama –likeorganisam) ಜೀವಾಣುವಿನ ( ಇದು ಒಂದು ಪರಾವಲಂಬಿ ಜೀವಾಣು) ತೊಂದರೆ ಇರುತ್ತದೆ ಎಂದಾದರೆ ಬಹುಷಃ ಇದಕ್ಕೆ ಮೊದಲ ಆಶ್ರಯ ಅಡಿಕೆ ಆಗಿದ್ದರೆ, ಮುಂದೆ ಅದು ಕಡಿಮೆಯಾದರೆ ಬೇರೆ ಏಕದಳ ಸಸ್ಯಕೂ ಬಾಧಿಸಬಹುದು.
  • ಆದ ಕಾರಣ ತೆಂಗು, ತಾಳೆ ಮುಂತಾದ ಬೆಳೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸೂಕ್ತವಲ್ಲ.
  • ಬದಲಿಗೆ ಮರ ಸಸ್ಯಗಳ ಕಡೆಗೆ ಗಮನಹಸ್ರಿಸುವುದು ಸೂಕ್ತ.  ಈ ಜೀವಾಣುಗಳು ಪ್ರಸಾರವಾಗುವಂತದ್ದು ಎನ್ನಲಾಗುತ್ತದೆ.
  • ಆದ ಕಾರಣ ಇದರ ಪ್ರಸಾರಕ್ಕೆ ನೆರವಾಗುವ ಮಣ್ಣು ಜನ್ಯ ಜೀವಿಗಳು, ಮತ್ತು ಕೀಟಗಳು ರಸ ಹೀರುವ ಕೀಟಗಳನ್ನು ಸಾಯುವಂತೆ ಮಾಡಲು ನೆಲಕ್ಕೆ ಮುಚ್ಚಿಗೆ ಹಾಕಿ ನಿಯಂತ್ರಿಸಬಹುದು ಎನ್ನುವ ಅಭಿಪ್ರಾಯ ಇದೆ.
  • ಬಯೋ ಡೀಗ್ರೇಡೆಬಲ್ ಮಲ್ಚಿಂಗ್ ಎಂಬುದು ಮಣ್ಣಿನಲ್ಲಿ ಕರಗಿ ವಿಲೀನವಾಗುವ ಕಾರಣ ಅಂತಹ ಪರಿಣಾಮ ಕೊಡುವುದು ಸಂಶಯವೆನಿಸುತ್ತದೆ.
  • ಮರಮಟ್ಟು ಬೆಳೆಗಳನ್ನು ಬೆಳೆಸಬಹುದು.
  • ಪ್ರಾದೇಶಿಕವಾಗಿ ಹೊಂದಿಕೊಳ್ಳುವ ಹಣ್ಣಿನ ಬೆಳೆಗಳನ್ನು ಬೆಳೆಸಬಹುದು. ಅದು ಅಡಿಕೆಯಷ್ಟು ಆದಾಯವನ್ನು ಅಷ್ಟೇ ಕಡಿಮೆ ಶ್ರಮದಲ್ಲಿ ಕೊಡುವಂತಿರಬೇಕು.

25 ಕೋಟಿಯಲ್ಲಿ ಹೆಚ್ಚೆಂದರೆ ಅಧ್ಯಯನ ತಂಡ ಆಗಬಹುದು. ಒಂದು ಸುಸಜ್ಜಿತ ಲ್ಯಾಬ್ ಆಗಬಹುದು. ಆಗಾಗ ಅಧ್ಯಯನಕ್ಕೆ ತೆರಳಲು ಸುಸಜ್ಜಿತ ವಾಹನದ ವ್ಯವಸ್ಥೆ ಆಗಬಹುದು. ಅಲ್ಲಿಗೆ ಅನುದಾನ ಮುಗಿದು, ಮುಂದುವರಿದ ಅನುಧಾನ ಬರುವ ತನಕ ಸಂಶೋಧನೆ ಸ್ಥಗಿತವಾಗಬಹುದು. ಆದ ಕಾರಣ ಬೆಳೆಗಾರರು ಯಾರದ್ದೋ ಮಾತಿಗೆ ಬೆಲೆ ಕೊಡಬೇಡಿ. ಅನುದಾನಗಳು ಯಾರ ಸ್ವಂತ ಜೇಬಿನಿಂದ ಕೊಡಮಾಡುವ ಹಣ ಅಲ್ಲ. ಅದು ನಮ್ಮ ಕರ ಪಾವತಿಯ ಮೇಲೆ ಹೊರೆ ಬೀಳುವ ವ್ಯವಸ್ಥೆ. ಆದ ಕಾರಣ ಹಳದಿ ಎಲೆ ರೋಗ ಕೆಲವರಿಗೆ ಕಾಮಾಲೆಯ ರೋಗವಾಗದಂತೆ ನಿಮ್ಮ ಸಹಕಾರವೋ ಅಸಹಕಾರವವನ್ನೋ ಮಾಡಿ.

error: Content is protected !!