ಕರಿಮೆಣಸು- 25% ಅಧಿಕ ಇಳುವರಿ ಪಡೆಯಲು ಏನು ಮಾಡಬೇಕು?

by | Jan 9, 2022 | Krushi Abhivruddi, Pepper (ಕರಿಮೆಣಸು) | 1 comment

ನಾವು ಹೆಚ್ಚಾಗಿ ಕರಿಮೆಣಸು ಕೊಯಿಲಿನ ಸಮಯದಲ್ಲಿ ಅವಸರ ಮಾಡುತ್ತೇವೆ. ಇನ್ನೇನು ಜನವರಿ ಬಂದಿದೆ. ಕರಿಮೆಣಸು ಬೆಳೆದು ಹಣ್ಣಾದರೆ ಹಕ್ಕಿಗಳು ತಿಂದು ನಷ್ಟವಾಗುತ್ತದೆ ಎಂದು ಬಲಿಯುವ ಮುನ್ನ ಕೊಯಿಲಿಗೆ ಪ್ರಾರಂಭಿಸುತ್ತೇವೆ. ಇದರಿಂದ ನಾವು 25 % ಕ್ಕೂ ಹೆಚ್ಚು ತೂಕ ನಷ್ಟ ಮಾಡಿಕೊಳ್ಳುತ್ತೇವೆ. ಈ ನಷ್ಟವನ್ನು ಕಡಿಮೆ ಮಾಡಿಕೊಂಡರೆ 1 ಕ್ವಿಂಟಾಲು ಇಳುವರಿ ಪಡೆಯುವ ಬದಲು ಇನ್ನೂ 25 ಕಿಲೋ ಹೆಚ್ಚು ಪಡೆಯಬಹುದು ಎಂಬುದು ಕೆಲವು ಉತ್ತಮ ಮೆಣಸು ಬೆಳೆಗಾರರ ಅಭಿಪ್ರಾಯ.

ಮೆಣಸಿನ ಬಳ್ಳಿಯಲ್ಲಿ ಕೆಲವು ಕರೆಗಳು ಹಣ್ಣಾದ ತಕ್ಷಣ ಕೊಯಿಲು ಮಾಡಲು ಪ್ರಾರಂಭಿಸುತ್ತೇವೆ. ಆದರೆ ಆ ಬಳ್ಳಿಯಲ್ಲಿ ಬಹುತೇಕ ಕಾಳುಗಳು ಬಲಿತಿರುವುದಿಲ್ಲ. ಇತ್ತಿಚೆಗೆ ಮಳೆ ಬೇಗ ಬರುವುದು ಮತ್ತೆ ನಿಲ್ಲುವುದು ಆಗುವ ಕಾರಣ ಎರಡು ಮೂರು ಸಲ ಹೂ ಕರೆ ಬಿಟ್ಟು ಕೆಲವು ಬೇಗ ಬೆಳೆಯುತ್ತದೆ. ಮತ್ತೆ ಕೆಲವು ನಿಧಾನ. ಮೆಣಸಿಗೆ ಸ್ವಲ್ಪ ಹೆಚ್ಚು ಬೆಲೆ ಮತ್ತು ತೂಕ ಹೆಚ್ಚಾಗಲು ಬಲಿತ ಕಾಳುಗಳನ್ನೇ ಕೊಯಿಲು ಮಾಡಬೇಕು. ಎಳೆಯದಾದ ಕಾಳುಗಳಾದರೆ ಸಕ್ಕರೆ ಗೋಣಿಯಲ್ಲಿ ತುಂಬಿ ಹೊಲಿದರೆ 60 ಕಿಲೋ ತೂಗುತ್ತದೆ. ಚೆನ್ನಾಗಿ ಬಲಿತಿದ್ದರೆ ಹಗ್ಗದಲ್ಲಿ ಬಾಯಿ ಕಟ್ಟಬಹುದು.

ದೊಡ್ದ ದೊಡ್ಡ ಮೆಣಸು ಬೆಳೆಗಾರರು  ತೋಟವನ್ನು ಗುತ್ತಿಗೆ  ಕೊಡುತ್ತಾರೆ. ಆಗ ಬಲಿತದ್ದು ಮಾತ್ರ ಕೊಯಿಲು ಮಾಡಿಸುವುದು  ಕಷ್ಟವಾಗುತ್ತದೆ. ಕೆಲಸಗಾರರ ಸಮಸ್ಯೆಯೂ ಸಹ ಇದಕ್ಕೆ ಅಡ್ಡಿಯಾಗಿದೆ. ಈಗ ಒಮ್ಮೆಲೆ ಕೊಯಿಲು ಮಾಡುವವರೇ ಹೆಚ್ಚು. ಹಾಗಾಗಿ ಬಹುತೇಕ ಬಲಿತಿರದ ಮೆಣಸೇ ಹೆಚ್ಚು.

ಇಷ್ಟು ಹಣ್ಣು ಆದರೆ ತೂಕ ಅಧಿಕ

ಇಷ್ಟು ಹಣ್ಣು ಆದರೆ ತೂಕ ಅಧಿಕ

ಯಾವಾಗ ಕೊಯಿಲು ಮಾಡಬೇಕು:

  • ಮೆಣಸು ಕಾಳುಗಳು ಬೆಳೆಯಲು 8  ತಿಂಗಳು ಕಾಲಾವಧಿ ಬೇಕು.
  • ಈ ಲೆಕ್ಕಾಚಾರದಲ್ಲಿ ಜುಲೈ ತಿಂಗಳಲ್ಲಿ ಹೂ ಕರೆ ಬಿಟ್ಟ ಕಾಳುಗಳು ಬೆಳೆಯುವ ಸಮಯ ಫೆಬ್ರವರಿ ತಿಂಗಳು.
  • ಈ ವರ್ಷ ಮಳೆ ತಡವಾದ ಕಾರಣ ಇದು ಇನ್ನೂ ಸ್ವಲ್ಪ ಮುಂದೆ ಹೋಗುವ ಸಾಧ್ಯತೆ ಇದೆ.
  • ಆದಾಗ್ಯೂ ಚಳಿ ಹೆಚ್ಚು ಇಲ್ಲದ ಕಾರಣ ಕರಾವಳಿಯಲ್ಲಿ  ಫೆಬ್ರವರಿ ಕೊನೆಗೆ ಬಲಿಯಲು ಪ್ರಾರಂಭವಾಗಬಹುದು.
  • ಆ ಸಮಯದ ವರೆಗೆ ಕೊಯಿಲಿಗೆ ಮುಂದಾಗಬೇಡಿ.   

ಎಡೆ ಎಡೆಯಲ್ಲಿ ಒಂದೆರಡು ಕರೆಗಳು ಹಣ್ಣಾಗಿದ್ದರೆ ಅದು ಮಳೆಗಾಲ ಮುಂಚಿನ ಮಳೆಗೆ  ಹೂ ಕರೆ ಬಿಟ್ಟು ಉಳಿದ ಕರೆಗಳೇ ಹೊರತು ಬೆಳೆ ಸೀಸನ್ ನ ಕರೆಗಳಲ್ಲ. ಬಳ್ಳಿಯಲ್ಲಿ ತುದಿ ಭಾಗದಲ್ಲಿ ಅರ್ಧ 10-15% ಕರೆಗಳಲ್ಲಿ ಹಣ್ಣು ಕಾಳುಗಳನ್ನು ಕಂಡಾಗ ಕೊಯಿಲಿಗೆ ಪ್ರಾರಂಭಿಸಿರಿ.
ಹಕ್ಕಿಗಳಿಂದ ಬೆಳೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದರೂ ಸಹ ಬಲಿತ ಕಾಳುಗಳನ್ನೇ ಕೊಯಿಲು ಮಾಡಿದರೆ ಆ ನಷ್ಟವೂ ಹೊಂದಿಕೆಯಾಗುತ್ತದೆ.
ಬಲಿತ ಕಾಳುಗಳ ಬಣ್ಣ ಎಳೆಯ ಕಾಳುಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಇದನ್ನು ಕೆಲಸಗಾರರಿಂದ ಗುರುತಿಸುವುದು ಕಷ್ಟವಾಗಬಹುದು. ಆದರೂ ಬಲಿಯದ ಕಾಳುಗಳನ್ನು ಉಗುರಿನಲ್ಲಿ ಒತ್ತಿದಾಗ ಅದು ತುಂಡಾಗುತ್ತದೆ. ಬಲಿತಿದ್ದರೆ ಸಿಪ್ಪೆ ಮಾತ್ರ ಗಾಯವಾಗುತ್ತದೆ.

ಬೆಳೆದ ಕಾಳುಗಳಲ್ಲಿ ಒಂದು ರೀತಿಯ ಹೊಳಪು ಇರುತ್ತದೆ.

ಬೆಳೆದ ಕಾಳುಗಳಲ್ಲಿ ಒಂದು ರೀತಿಯ ಹೊಳಪು ಇರುತ್ತದೆ.

ಹೇಗೆ  ಕೊಯಿಲು ಮಾಡಬೇಕು:

  • ಮೊದಲಾಗಿ ಕೊಯಿಲು ಮಾಡುವವರಿಗೆ  ಬಲಿತ ಕಾಳಿನ ಮತ್ತು ಬಲಿಯದ ಕಾಳಿನ ಗುರುತು ಮಾಡಿಕೊಡಬೇಕು. ಆ ಪ್ರಕಾರ ಕೊಯಿಲು ಮಾಡಲು ಹೇಳಬೇಕು.
  • ಮೊದಲು ಬಿಸಿಲು ಬೀಳುವ ಜಾಗದ ಬಳ್ಳಿಗಳ ಕೊಯಿಲು ಮಾಡಬೇಕು. ನೆರಳಿನ ಜಾಗದ್ದನ್ನು  ಕೊನೆಗೆ ಇಡಬೇಕು.
  • ಬಳ್ಳಿಯನ್ನು ಎರಡು ವಿಭಾಗ ಮಾಡಿಕೊಳ್ಳಬೇಕು. ತುದಿಯ ಅರ್ಧ ಭಾಗ ಬಿಸಿಲು ಚೆನ್ನಾಗಿ ಬೀಳುವ ಕಾರಣ ಬೇಗ ಬಲಿಯುತ್ತದೆ.
  • ಅದನ್ನು ಮೊದಲು ಕೊಯಿಲು ಮಾಡಬೇಕು. ಎಲ್ಲಾ  ತುದಿ ಭಾಗದ ಕೊಯಿಲು ಮುಗಿದ ನಂತರ ಎರಡನೇ ಭಾಗದ್ದನ್ನು ಕೊಯಿಲು ಮಾಡಬೇಕು.
  • ಕೊಯಿಲು ಮಾಡುವ ಕರೆಯಲ್ಲಿ ಒಂದೆರಡಾದರೂ ಕಾಳುಗಳು ಹಣ್ಣಾಗಿದ್ದರೆ  ಒಳ್ಳೆಯದು.
ಇಂಥಹ ಕಾಳುಗಳನ್ನು ಕೊಯಿಲು ಮಾಡಬೇಡಿ

ಇಂಥಹ ಕಾಳುಗಳನ್ನು ಕೊಯಿಲು ಮಾಡಬೇಡಿ

  • ಕೊಯಿಲಿಗೆ ಒಂದು ವಾರಕ್ಕೆ ಮುಂಚೆ ನೀರು ನಿಲ್ಲಿಸಿದರೆ ಆ ಕಾಳಿನ ತಿರುಳು ಚೆನ್ನಾಗಿ ಕೂಡಿಕೊಂಡು ತೂಕ ಬರುತ್ತದೆ.
  • ಹೆಚ್ಚು ತೂಕ ಬರಲು ಕೊಯಿಲಿಗೆ 1 ತಿಂಗಳು ಮುಂಚೆ 1 ಕಿಲೋ ಪೊಟ್ಯಾಶಿಯಂ ನೈಟ್ರೇಟ್ , 200 ಲೀ. ನೀರಿಗೆ ಬೆರೆಸಿ ಎಲೆ ಕಾಳುಗಳಿಗೆ ಸಿಂಪರಣೆ  ಮಾಡಿ.
  • ಕೊಯಿಲಿಗೆ 15 ದಿನ ಇರುವಾಗ 1 ಕಿಲೋ ಸಲ್ಫೇಟ್ ಆಫ್ ಪೊಟ್ಯಾಶ್ ಅನ್ನು  200 ಲೀ. ನೀರಿಗೆ ಬೆರೆಸಿ ಎಲೆ ಕಾಳುಗಳಿಗೆ ಸಿಂಪರಣೆ  ಮಾಡಿ.
  • ಸ್ವಲ್ಪ ಕೊಯಿಲು ಮಾಡಿ ಒಣಗಿಸಿದಾಗ ಅದು ಪೂರ್ತಿ ಬೆಳೆದಿದೆಯೇ ಇಲ್ಲವೇ ಎಂಬುದು ಗೊತ್ತಾಗುತ್ತದೆ.
ಬಲಿಯದೆ ಇರುವ ಕಾಳು

ಬಲಿಯದೆ ಇರುವ ಕಾಳು

ಗುಣಮಟ್ಟದ ಮೆಣಸಿಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಹೆಚ್ಚಿನ ಬೆಲೆ ಇರುತ್ತದೆ. ಭಾರತದ ಮೆಣಸು ಗುಣಮಟ್ಟಕ್ಕೆ  ಹೆಸರುವಾಸಿ. ಇದು ಉಳಿಯಲು ಬಲಿತ ಕಾಳನ್ನೇ ಕೊಯಿಲು ಮಾಡಿ.

1 Comment

  1. Krragavendrarao

    Verygoodobservation.but thisyear the scenario is little bit different.butinmy&myfriends gardentwenty20%harvestisover

    Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!