ಕೃಷಿ ಮಾಡುವ ನಾವೆಲ್ಲಾ ಮಣ್ಣಿನ ಬಗ್ಗೆ ಎಷ್ಟು ತಿಳಿದುಕೊಂಡರೂ ಸಾಲದು. ಮಣ್ಣು ಮೊದಲು. ಕೃಷಿ ಅನಂತರ.ಮಣ್ಣಿನಲ್ಲಿ ಫಲವತ್ತತೆ ಇದ್ದರೆ ಮಾತ್ರ ಅದರಲ್ಲಿ ಕೃಷಿ ಮಾಡಿ. ಫಲವತ್ತತೆ ಇಲ್ಲದಲ್ಲಿ ಕೃಷಿ ಯಾವಾಗಲೂ ಲಾಭದಾಯಕವಾಗುವುದಿಲ್ಲ.
ಇತ್ತೀಚೆಗೆ ಈಶ ಫೌಂಡೇಶನ್ ನ ಸಧ್ಗುರುಗಳು ತಮ್ಮ ವೀಡಿಯೊದಲ್ಲಿ ಕ್ಯಾಲಿಫೋರ್ನಿಯಾ ದೇಶವು ಅಕ್ಕಿಯನ್ನು ಥೈಲ್ಯಾಂಡ್ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಯಾಕೆ ಭಾರತದಿಂದ ಮಾಡುವುದಿಲ್ಲ ಎಂಬ ಬಗ್ಗೆ ಕೇಳಿದಾಗ ಭಾರತದ ಅಕ್ಕಿಯಲ್ಲಿ ಯಾವ ಪೋಷಕಾಂಶಗಳೂ ಇಲ್ಲ ಎನ್ನುತ್ತಾರೆ ಎಂದಿದ್ದಾರೆ. ಅದೇ ರೀತಿ ವಿಯೆಟ್ ನಾಂ ದೇಶ ಕೆಲವೇ ವರ್ಷಗಳಲ್ಲಿ ದೇಶದ ರೈತರ ಆದಾಯವನ್ನು 10 ಪಟ್ಟು ಹೆಚ್ಚಿಸಿಕೊಂಡ ಬಗ್ಗೆ ಹೇಳುತ್ತಾರೆ. ಇದೆಲ್ಲಾ ಒಂದು ದೃಷ್ಟಿಯಲ್ಲಿ ನೋಡಿದರೆ ಸರಿಯೆನ್ನಿಸುತ್ತದೆ.
- ಅದು ಸುಮಾರು 15 ವರ್ಷಕ್ಕೆ ಹಿಂದೆ ನಾನು ಗದಗ ಜಿಲ್ಲೆಯ ಮಂಡರಗಿಗೆ ಹೋಗಿದ್ದೆ.
- ಅಲ್ಲಿಯ ರೈತರಲ್ಲಿ ಹಿರಿಯರಾದ ಒಬ್ಬರು ಹೇಳಿದ್ದರು.
- ಈ ಭಾಗದಲ್ಲಿ ಬ್ರಿಟೀಷರ ಕಾಲದಲ್ಲಿ ಗೋಧಿಯ ಉತ್ತಮ ತಳಿಯ ಬೀಜವನ್ನು ರೈತರಿಗೆ ಕೊಟ್ಟು ಅವರಿಂದ ಗೋಧಿ ಬೆಳೆಸಿ ಅದನ್ನು ತಮ್ಮ ದೇಶಕ್ಕೆ ಒಯ್ಯುತ್ತಿದ್ದರಂತೆ.
- ಕಾರಣ ಮತ್ತೇನೂ ಅಲ್ಲ. ಈ ಮಣ್ಣಿನ ಫಲವತ್ತತೆಯಲ್ಲಿ ಬೆಳೆದ ಗೋಧಿಗೆ ಅದೇನೋ ವಿಷೇಷ ಗುಣ ಇತ್ತಂತೆ.
- ಅಂತಹ ಪಲವತ್ತೆತೆ ಇರುವ ಮಣ್ಣು ಉಳ್ಳ ಹೊಲಗಳನ್ನು ನಾವು ಉಳಿಸಿಕೊಂಡಿಲ್ಲ.
- ಉದ್ದಿಮೆ, ರಸ್ತೆ ,ಕಟ್ಟಡ, ವಸತಿ ಸಮುಚ್ಚಯ, ಮನೆ ಮುಂತಾದವುಗಳನ್ನು ಮಾಡಿದ್ದು, ಫಲವತ್ತಾದ ಭೂಮಿಯಲ್ಲಿ.
- ಕೃಷಿಗೆ ಉಳಿಸಿದ್ದು, ನಿರುಪಯುಕ್ತ ಭೂಮಿ. ಇದೇ ಇಂದು ಕೃಷಿ ಉತ್ಪಾದಕತೆ ಕಡಿಮೆಯಾಗಲು ಕಾರಣವಾಗಿರುವುದು.
ಮಂಗಳೂರಿನ ಪಣಂಬೂರಿನಿಂದ ಉಡುಪಿ ಕುಂದಾಪುರದ ತನಕದ ಭೂಮಿಯಲ್ಲಿ ಬಹಳ ಹಿಂದೆ ಕಬ್ಬು ಬೆಳೆಯುತ್ತಿದ್ದರಂತೆ. ಆ ಕಬ್ಬು ದೇಶದಲ್ಲೇ ಉತ್ಕೃಷ್ಟಗುಣಮಟ್ಟದ್ದಾಗಿತ್ತು ಎನ್ನುತ್ತಿದ್ದರು ಹಿರಿಯರಾದ ಶ್ರೀಯುತ ಕೆ.ವಿ. ಬೆಳಿರಾಯರು.
- ಇಂದು ನಮ್ಮಲ್ಲಿ ಉತ್ತಮ ಮಣ್ಣು ಕಡಿಮೆಯಾಗಿದೆ.
- ಮಣ್ಣನ್ನು ಹೆಚ್ಚು ಹೆಚ್ಚು ಶ್ರೀಮಂತಗೊಳಿಸುವ ತಿಳುವಳಿಕೆ ನೀಡುವಲ್ಲಿಯೂ ನಾವು ವಿಫಲರಾಗಿದ್ದೇವೆ.
ಮಣ್ಣಿನ ಗುಣವನ್ನು ಹೆಚ್ಚಿಸುವ ಅಂಶಗಳು:
- ಮಣ್ಣು ಸಹಸ್ರ ಸಹಸ್ರ ವರ್ಷಗಳಲ್ಲಿ ವಾತಾವರಣದ ಹಲವು ಕ್ರಿಯೆಗಳ ಮೂಲಕ ನಿರ್ಮಾಣವಾಗಿದೆ.
- ಮಣ್ಣಿನಲ್ಲಿ ಮೂರು ರೂಪಗಳು ಒಂದು ಘನ ಪದಾರ್ಥ ಎರಡು ದ್ರವ ರೂಪ ಮೂರು ಅನಿಲ ರೂಪ.
- ಈ ಮೂರೂ ಸರಿಯಾಗಿದ್ದರೆ ಆ ಮಣ್ಣು ಫಲವತ್ತಾಗಿರುತ್ತದೆ.
ಘನ ಪದಾರ್ಥ:
- ಮಣ್ಣಿನಲ್ಲಿರುವ ಘನ ಪದಾರ್ಥಗಳೆಂದರೆ ಖನಿಜಗಳು ಮತ್ತು ಸಾವಯವ ವಸ್ತುಗಳು.
- ಇವು ಸಾವಿರಾರು ವರ್ಷಗಳಿಂದ ಸಾವಯವ ತ್ಯಾಜ್ಯಗಳು, ಪ್ರಾಣಿ ಮುಂತಾದವುಗಳು ಸೂಕ್ಷ್ಮಾಣು ಜೀವಿಗಳ ಮೂಲಕ ವಿಭಜನೆಗೊಂಡು ಹುಟ್ಟಿಕೊಂಡವುಗಳು.
- ಸಾವಯವ ವಸ್ತುಗಳಲ್ಲೆಲಾ ಇಂಗಾಲದ ಅಂಶ ಹೆಚ್ಚು.
- ಇವು ವಿಭಜನೆಗೊಂಡಾಗ ಮಣ್ಣಿಗೆ ಶಕ್ತಿ ದೊರೆಯುವುದು.
- ಕೆಲವು ಸಾವಯವ ಸಂಯುಕ್ತಗಳು ಕಳಿಯುವುದಕ್ಕೆ ವಿರೋಧ ವ್ಯಕ್ತಪಡಿಸುತ್ತವೆ.
- ಅಂತಹ ಪದಾರ್ಥಗಳ ಸಂಗ್ರಹದಿಂದ ಹ್ಯೂಮಸ್ ಎಂಬ ಪದಾರ್ಥವು ಹುಟ್ಟಿಕೊಳ್ಳುತ್ತದೆ.
- ಈ ಹ್ಯೂಮಸ್ ಮಣ್ಣಿಗೆ ಕಪ್ಪು ಬಣ್ಣವನ್ನು ಕೊಡುತ್ತದೆ.
- ಹ್ಯೂಮಸ್ ಕಲಿಲಾತ್ಮಕವಾಗಿದ್ದು, ಮಣ್ಣಿಗೆ ಕಪ್ಪು ಬಣ್ಣವನ್ನು ಕೊಡುತ್ತದೆ.
- ಹ್ಯೂಮಸ್ ಗಳು ಮಣ್ಣಿನಲ್ಲಿರುವ ಸಾವಯವ ಶೇಷಗಳಲ್ಲಿ ವಿಲೀನವಾಗಿರುತ್ತವೆ.
ಖನಿಜ ಪದಾರ್ಥಗಳು:
- ಮಣ್ಣಿನಲ್ಲಿ ನೊರಜು ಕಲ್ಲುಗಳು, ಮರಳು, ಎರೆ ಮಣ್ಣು, ಕಲಿಲಗಳು ಇರುತ್ತವೆ.
- ಇವುಗಳಲ್ಲೆಲ್ಲಾ ಖನಿಜಾಂಶಗಳು ಇರುತ್ತವೆ.
- ಇವುಗಳ ಪ್ರಮಾಣಕ್ಕನುಗುಣವಾಗಿ ಮಣ್ಣಿನ ಸ್ವರೂಪ ನಿರ್ದಾರವಾಗುತ್ತದೆ.
- ಮಣ್ಣಿನ ಸ್ವರೂಪದ ಮೇಲೆ ಅದಕ್ಕೆ ಸಚ್ಚಿಧ್ರತೆ ಉಂಟಾಗುತ್ತದೆ.
- ಮಣ್ಣಿನ ನೀರು ಧಾರಣಾ ಸಾಮರ್ಥ್ಯ ಅದರ ಸಚ್ಚಿಧ್ರತೆತ ದ್ಯೋತಕ.
- ಮಣ್ಣಿನಲ್ಲಿ ಕಣಗಳು ಒದಕ್ಕೊಂದು ಬಿಗಿಯಲ್ಪಟ್ಟಿರಬೇಕು.
- ಆಗ ಮಣ್ಣು ಗುಂಪಾಗುತ್ತದೆ.
- ಗುಂಪಾದ ಮಣ್ಣಿನಲ್ಲಿ ಎರೆ ಕಣಗಳು ಇದ್ದು, ಮಣ್ಣಿಗೆ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ, ನೀರು ಇಂಗುವಿಕೆ, ಹಬೆಯಾಡುವಿಕೆ, ಚಿದ್ರಾವಕಾಶ ದೊರೆಯುತ್ತದೆ.
ಕೆಲವು ಮಣ್ಣು ನೀರಿನೊಂದಿಗೆ ಕೊಚ್ಚಣೆಯಾಗಿ ಹೋಗುವಾಗ ಅದರಲ್ಲಿ ಮಕ್ಕಳು ಅಯಸ್ಕಾಂತ ಹಿಡಿದು ಅದರಲ್ಲಿ ಕಬ್ಬಿಣವನ್ನು ಸಂಗ್ರಹಿಸುತ್ತಾರೆ. ಅದುವೇ ಮಣ್ಣಿನಲ್ಲಿ ಇರುವ ಖನಿಕಗಳು. ಕಬ್ಬಿಣ ಅಲ್ಲದೆ ಬೇರೆ ಬೇರೆ ಖನಿಜಗಳು ಇರುತ್ತವೆ. ಫಲವತ್ತಾದ ಅಂಟು ಮಣ್ಣು ಕೊಚ್ಚಣೆಯಾಗುವುದೇ ಇಲ್ಲ. ಅದರಲ್ಲಿ ಖನಿಜಗಳು ಇದ್ದರೂ ಗೊತ್ತಗಾದಂತಿರುತ್ತದೆ.
ಮಣ್ಣಿನ ದ್ರವ ರೂಪ:
- ಮಣ್ಣು ನೀರನ್ನು ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಹೀರಿಕೊಳ್ಳುವ ಗುಣವನ್ನು ಪಡೆದಿರಬೇಕು.
- ಮಣ್ಣಿನ ಕಣಗಳೆಲ್ಲಾ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಪಡೆದಿರುತ್ತದೆ.
- ಮಣ್ಣು ನೀರನ್ನು ಹೀರಿಕೊಂಡು, ಕೆಳಕ್ಕಿಳಿಸಿದಾಗ ಮಣ್ಣಿನ ಕೆಳಭಾಗದಲ್ಲಿರುವ ಅನಿಲವು ಮೇಲಕ್ಕೆ ಬರುವುದು.
- ನೀರು ಕಡಿಮೆಯಾದಂತೆ ಅನಿಲ ಮಣ್ಣಿನೊಳಗೆ ಸೇರುವುದು. ಮಣ್ಣಿನಲ್ಲಿ ನೀರು ಇರುವುದು ಮಣ್ಣಿನ ಗುಣದ ಮೇಲೆ.
- ಎಷ್ಟು ಬೇಕೋ ಅಷ್ಟನ್ನು ಮಣ್ಣು ಹೀರಿಕೊಳ್ಳುತ್ತದೆ. ಉಳಿದುದು ಹೊರ ಹರಿದು ಹೋಗುತ್ತದೆ.
- ಸ್ವಲ್ಪ ಬೇರುಗಳು ಹೀರಿಕೊಳ್ಳುತ್ತದೆ. ಸ್ವಲ್ಪ ಬಾಷ್ಪ ವಿಸರ್ಜನೆಯಿಂದ ನಷ್ಟವಾಗುತ್ತದೆ.
- ಸ್ವಲ್ಪ ಭಾಗ ಮಣ್ಣಿನಲ್ಲಿ ಸ್ಥಿರವಾಗಿ ಉಳಿಯುತ್ತದೆ.
- ಮಳೆಯ ರೂಪದಲ್ಲಿ ಬರುವ ನೀರನ್ನು ಮಣ್ಣು ಎಷ್ಟು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತದೆಯೋ ಅಷ್ಟು ಆ ಮಣ್ಣು ಫಲವತ್ತತೆಯ ಉತ್ತುಂಗದಲ್ಲಿರುತ್ತದೆ.
ಮಣ್ಣಿನಲ್ಲಿ ಅನಿಲ:
- ಮಣ್ಣಿನಲ್ಲಿ ಹವೆಯಾಡುವಿಕೆ ಎಂಬುದು ನಮಗೆಲ್ಲಾ ಗೊತ್ತಿದೆ.
- ಮಣ್ಣಿನಲ್ಲಿ ನೀರು ಕಡಿಮೆಯಾದಂತೆ ಅದರಲ್ಲಿ ಹವೆಯು ಹೆಚ್ಚುವುದು.
- ನೀರು ಹೆಚ್ಚಿದಂತೆ ಹವೆ ಕಡಿಮೆಯಾಗುವುದು. ಒಂದು ಮುದ್ದೆ ಮಣ್ಣನ್ನು ನೀರಿಗೆ ಹಾಕಿದಾಗ ಬರುವ ಗುಳ್ಳೆಗಳು ಹವೆ.
- ನೀರು ಹೀರಿಕೊಂಡ ಹೊರತೆಗೆದು ಹಾಗೆ ಇಟ್ಟಾಗ ಬಿಡುಗಡೆಯಾಗುವುದೂ ಹವೆ.
- ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಗುಣ ಇದ್ದಾಗ ಅಂದರೆ ಸಚ್ಚಿಧ್ರತೆ ಚೆನ್ನಾಗಿದ್ದರೆ ಮಣ್ಣಿನ ರಚನೆ ಉತ್ತಮವಾಗಿದೆ ಎಂದರ್ಥ.
- ಸಚ್ಚಿದ್ರತೆ ಚೆನ್ನಾಗಿದ್ದರೆ ಸಾರಜನಕದಂತಹ ಪೋಷಕಗಳನ್ನು ಸೂಕ್ಷ್ಮಾಣು ಜೀವಿಗಳು ರೂಪಾಂತರಿಸಿ ಕೊಡುತ್ತವೆ.
ಮಣ್ಣಿನಲ್ಲಿ ಘನ ಪದಾರ್ಥವೂ ಸಾಕಷ್ಟು ಇರಬೇಕು, ದ್ರವ ಪದಾರ್ಥವನ್ನು ಅದು ಬೇಕಾದಷ್ಟು ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿರಬೇಕು. ಹವೆಯನ್ನೂ ಸ್ವೀಕರಿಸುವ ಮತ್ತು ಬಿಟ್ಟುಕೊಡುವ ಗುಣ ಪಡೆದಿರಬೇಕು. ಆ ರೀತಿಯಲ್ಲಿ ಮಣ್ಣನ್ನು ಅಭಿವೃದ್ಧಿಪಡಿಸುವುದರಿಂದ ಅದು ಫಲವತ್ತಾದ ಮಣ್ಣಾಗುತ್ತದೆ.
ಕೃಷಿಗೆ ಮಣ್ಣೇ ಪ್ರಧಾನ ಆಸರೆ. ಮಣ್ಣಿನಲ್ಲಿ ಪಲವತ್ತತೆ ಹೆಚ್ಚಬೇಕಾದುದು ಅತೀ ಮುಖ್ಯ. ಇದು ಒಂದೆರಡು ವರ್ಷಗಳಲ್ಲಿ ಆಗುವಂತದ್ದಲ್ಲ. ನೂರಾರು ವರ್ಷ ಬೇಕಾಗಬಹುದು. ಆದ ಕಾರಣ ಫಲವತ್ತತೆ ಇರುವ ಮಣ್ಣಿನಲ್ಲಿ ಮನೆ , ಕಟ್ಟಡ ಕಟ್ಟಬೇಡಿ. ಅಲ್ಲಿ ಕೃಷಿ ಮಾಡಿ. ಸಾರಾಂಶ ಇಲ್ಲದ ಭೂಮಿಯಲ್ಲಿ ಮನೆ ಕಟ್ಟಡ ಕಟ್ಟಿಕೊಳ್ಳಿ. ಈ ನಿರ್ಧಾರವನ್ನು ಇಂದಿನ ದಿನ ಮಾಡಿಕೊಳ್ಳೋಣ.