ಕೃಷಿಕರಾದವರು ಕಾಲಸ್ಥಿತಿಗೆ ಅನುಗುಣವಾಗಿ ತಮ್ಮ ವೃತ್ತಿಕ್ಷೇತ್ರದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡು ಬಂದರೆ ಯಾವುದೋ ಕಷ್ಟವಿಲ್ಲದೆ ಅದರಲ್ಲಿ ಯಶಸ್ಸನು ಹೊಂದಬಹುದು ಎಂಬುದು ಕರಿಕಳ ಅಶೋಕ್ ಕುಮಾರ್ ಇವರ ಅನುಭವದ ಮಾತು. ಇವರು ಹುಟ್ಟು ಕೃಷಿಕರು. ಅದೇ ಕ್ಷೇತ್ರದಲ್ಲಿ ವ್ಯಾಸಂಗವನ್ನೂ ಮಾಡಿದವರು. ಜೊತೆಗೆ ಅದೇ ಕ್ಷೇತ್ರದಲ್ಲೇ ತನ್ನ ಬದುಕನ್ನೂ ಕಟ್ಟಿಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ಸಮೀಪದ ಕರಿಕಳ ಎಂಬಲ್ಲಿ ವೈದ್ಯರ ಮಗನಾಗಿ ಹುಟ್ಟಿ, ಈಗ ಬೆಂಗಳೂರು ದೊಡ್ಡಬಳ್ಳಾಪುರದಲ್ಲಿ ಕೃಷಿ ಮತ್ತು ಅದಕ್ಕೆ ಪೂರಕ ವೃತ್ತಿ ನಡೆಸುತ್ತಿದ್ದಾರೆ. ಇವರರನ್ನು ಕೃಷಿ ವಿಶ್ವ ವಿಧ್ಯಾನಿಲಯ ಬೆಂಗಳೂರು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದಿಂದ ಗುರುತಿಸಿ ಸನ್ಮಾನಿಸಲಾಗಿದೆ.
ಅಲ್ಯುಮ್ನಿ ಎಸೋಸಿಯೇಶನ್ , ಕೃಷಿ ವಿಶ್ವವಿಧ್ಯಾನಿಲಯ ಹೆಬ್ಬಾಳ ಬೆಂಗಳೂರು ಇವರು ದಿನಾಂಕ 23-09-2023 ರ ಶುಕ್ರವಾರದಂದು ಪ್ರತಿಭಾನ್ವಿತ ಮತ್ತು ನಾಮ ನಿರ್ಧೇಶಿತ ಅಲ್ಯುಮ್ನಿ ಸದಸ್ಯರಿಗೆ ಸನ್ಮಾನ ಮತ್ತು ವಿಶ್ವ ಬಿದಿರು ದಿನಾಚರಣೆಯನ್ನು ಹಮ್ಮಿಕೊಂಡಿತ್ತು. ಅಸೋಸಿಯೇಶನ್ ನ ಸಭಾಂಗಣ ( ಡಾ. ಜಿ. ಕೆ ವೀರೇಶ್ ಸಭಾಂಗಣ )ದಲ್ಲಿ ಈ ಕಾರ್ಯಕ್ರಮ ನಡೆದಿದೆ.ಈ ಸಮಾರಂಭದಲ್ಲಿ ಪ್ರತಿಭಾನ್ವಿತ ಅಲ್ಯೂಮ್ನಿ ಸದಸ್ಯರಾದ ಡಾ. ಎಸ್ ವಿ ಹಿತ್ತಲಮನಿ, ಡಾ|| ಕೆ. ಎನ್ ಗಣೇಶಯ್ಯ, ಶ್ರೀ ಕೆ ಎಸ್ ಅಶೋಕ್ ಕುಮಾರ್ ಕರಿಕಳ, ಶ್ರೀ ಬಿ ವಿ ದ್ವಾರಕಾನಾಥ್, ಶ್ರೀ ಎಚ್ ಆರ್ ಮುನಿರೆಡ್ಡಿ, ಮತ್ತು ಪ್ರವೀಣ್ ಎನ್ ನೂಜಿಬೈಲ್ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವಿತ್ತು. ಇವರಲ್ಲಿ ಡಾ|| ಎಸ್ ವಿ ಹಿತ್ತಲಮನಿ ಇವರು ನಡೆದಾಡುವ ತೋಟಗಾರಿಕಾ ಸಂತ ಎಂದೇ ಹೇಳಬಹುದು. ಶ್ರೀಯುತರು ನಿವೃತ್ತ ಅಪರ ತೋಟಗಾರಿಕಾ ನಿರ್ಧೇಶಕರಾಗಿದ್ದವರು. ತಮ್ಮ ಜೀವಮಾನವನ್ನೆಲ್ಲಾ ತೋಟಗಾರಿಕಾ ವಿಷಯದಲ್ಲಿ ಜ್ಞಾನಾರ್ಜನೆ ಮತ್ತು ಜ್ಞಾನ ಹಂಚಿಕೆಯಲ್ಲಿ ತೊಡಗಿಸಿಕೊಂಡವರು. ಹಾಗೆಯೇ ಶ್ರೀಯುತ ಅಶೋಕ್ ಕುಮಾರ್ ಕರಿಕಳ ಇವರು ಕೃಷಿ ಶಿಕ್ಷಣ ಪಡೆದು ಅದೇ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎಂದು ಪಣತೊಟ್ಟು ಅದರಲ್ಲೇ ಉತ್ತಮ ಜೀವನ ಕಂಡವರು. ಹುಟ್ಟಿ ಬೆಳೆದ ಊರಿನಿಂದ ದೂರದ ಬೆಂಗಳೂರಿಗೆ ತೆರಳಿ ಅಲ್ಲಿ ಕೃಷಿ ವೃತ್ತಿಯಲ್ಲೇ ತೊಡಗಿಸಿಕೊಂಡು ಜಮೀನು ಇತ್ಯಾದಿ ಮಾಡಿ ಕೃಷಿಕರಿಗೆ ಆಧುನಿಕ ಕೃಷಿ ಹೇಗಿರಬೇಕು ಎಂಬ ಸಂದೇಶವನ್ನು ಮಾಡಿ ತೋರಿಸಿದವರು. ಇವರ ಬಗ್ಗೆ ಕೆಲವೊಂದು ಮಾಹಿತಿ ಇಲ್ಲಿದೆ.
ಕೃಷಿ ಲಾಭದಾಯಕವಾಗಿರಬೇಕು- ಆಗ ಹೆಚ್ಚು ಸಮಯ ಅದರಲ್ಲಿ ಮುಂದುವರಿಯಬಹುದು:
- ಅಶೋಕ್ ಕುಮಾರ್ ಹೇಳುವುದು ನಾವು ಆಯ್ಕೆ ಮಾಡುವ ಕೃಷಿ ನಮ್ಮ ಜೀವನ ಚೆನ್ನಾಗಿ ನಡೆಸಿಕೊಂಡು ಹೋಗಲು ,ಅಭಿವೃದ್ದಿಯನ್ನು ಹೊಂದಲು ಸಹಾಯಕವಾಗಿರಬೇಕು.
- ಅದು ಖುಷಿ ಕೊಡಬೇಕು. ಹೀಗಿದ್ದರೆ ಮಾತ್ರ ಅದರಲ್ಲಿ ನಾವು, ನಮ್ಮ ನಂತರದ ತಲೆಮಾರು ಅದರಲ್ಲಿ ಮುಂದುವರಿಯಲು ಸಾಧ್ಯ.
- ನಮ್ಮ ಹಿರಿಯರು ಮಾಡಿಕೊಂಡು ಬಂದಿರುವ ಕೃಷಿ ಕ್ರಮ ಅದು ಆಗಿನ ಕಾಲಕ್ಕೆ ಸೂಕ್ತವಾಗಿರಬಹುದು.
- ಎಲ್ಲರೂ ಅದರಂತೇ ಮುಂದುವರಿಯಬೇಕಾಗಿಲ್ಲ. ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
- ಹಾಗೆಯೇ ಕೆಲವು ಹೊಸ ಅವಕಾಶಗಳನ್ನು ಹುಡುಕಬೇಕು. ಆಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ.
- ಕೆಲವೊಮ್ಮೆ ನಾವು ಆಯ್ಕೆ ಮಾಡಿದ ಕೃಷಿಯಲ್ಲಿ ಲಾಭ ಇಲ್ಲ ಎಂಬುದು ಕೆಲವು ಸಮಯದ ತರುವಾಯ ತಿಳುವಳಿಕೆಗೆ ಬರುತ್ತದೆ.
- ನಷ್ಟವಾದರೂ ಮುಂದೆ ಒಳ್ಳೆಯದಾಗುತ್ತದೆ ಎಂದು ಅದನ್ನೇ ಮುಂದುವರಿಸಿ ದೊಡ್ಡ ನಷ್ಟಕ್ಕೆ ಬೀಳುವ ಮುನ್ನ ನಾವು ಅದನ್ನು ಬಿಟ್ಟು ಬೇರೆ ಕ್ಷೇತ್ರದತ್ತ ಗಮನಹರಿಸಬೇಕು.
- ಸೋತ ಪಾಠದಲ್ಲಿ ಗೆಲುವಿನ ದಾರಿ ತಿಳಿಯಬೇಕು.
- ಯಾವುದಕ್ಕೆ ಮುಂದೆ ಭವಿಷ್ಯವಿದೆ, ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಬಹುದು ಎಂಬುದರ ಕಡೆಗೆ ದೂರದೃಷ್ಟಿ ಹರಿಸಿ ಆ ದಿಕ್ಕಿನತ್ತ ಗಮನಹರಿಸಬೇಕು.
- ಮಾಡುವ ಯಾವುದೇ ಕಾರ್ಯವನ್ನು ಹೆಚ್ಚು ನಿಗಾ ಕೊಟ್ಟು ವ್ಯವಸ್ಥಿತವಾಗಿ ಮಾಡಬೇಕು.
- ಕೃಷಿಯಲ್ಲಿ ದುಡ್ಡು ಸಂಪಾದನೆ ಆಗಬೇಕು. ಆಗ ಮಾತ್ರ ಅವನು ಕೃಷಿಕ ಆಗುತ್ತಾನೆ.
- ಸಮಾಜದಲ್ಲಿ ನೀವೂ ನೋಡಬಹುದು ಯಾರು ತನ್ನ ವೃತ್ತಿಕ್ಷೇತ್ರದಲ್ಲಿ ಒಂದಷ್ಟು ಸಂಪಾದನೆ ಮಾಡಿರುತ್ತಾನೆಯೋ ಅವನು ಮಾತ್ರ ಎಲ್ಲರಿಂದಲೂ ಗುರುತಿಸಲ್ಪಡುತ್ತಾನೆ.
- ಸರಳವಾಗಿ ಹೇಳಬೇಕಾದರೆ ಹೆಸರಿನೊಂದಿಗೆ “ಅಣ್ಣ” ಶಬ್ಧ ಸೇರಿಕೊಳ್ಳುತ್ತದೆ.
- ಜೀವಮಾನದಲ್ಲಿ ಸರಿಯಾದ ಆಯ್ಕೆಯನ್ನು ಮಾಡಿ ದುಡಿದರೆ ಮಾತ್ರ ಅದು ಎಲ್ಲರಿಗೂ ಪ್ರಿಯವಾಗುತ್ತದೆ.
- ಕೃಷಿ ಒಂದು ವ್ಯಾವಹಾರಿಕವೇ? ಅಥವಾ ಒಂದು ಸಂಬಂಧವೇ ಎಂಬುದು ಅವರವರಿಗೆ ಬಿಟ್ಟ ವಿಚಾರ.
- ವಾಸ್ತವಿಕವಾಗಿ ನಾವೆಲ್ಲರೂ ನಮ್ಮ ತಂದೆ ತಾಯಿ ಮಾಡಿದ ಕೃಷಿಯ ಮೂಲ ಬಂಡವಾಳದಿಂದ ( ಅದು ,ಆಸ್ತಿ ಆಗಿರಬೇಕಾಗಿಲ್ಲ- ಪ್ರೇರಣೆಯೂ ಅಗಿರಬಹುದು) ನಮ್ಮ ಸೌಧವನ್ನು ಮತ್ತಷ್ಟು ಮೇಲಕ್ಕೆರಿಸುತ್ತೇವೆ.
- ಅದು ಮುಂದಿನ ತಲೆಮಾರಿಗೆ ತೃಪಿಕರವಾಗಿದ್ದರೆ ಮಾತ್ರ ಅದು ಮುಂದುವರಿಯುತ್ತದೆ.
- ಆ ನಿಟ್ಟಿನಲ್ಲಿ ನಮ್ಮ ವೃತ್ತಿ ಸಾಗಬೇಕು ಎಂಬುದು ಇವರ ಒಟ್ಟಾರೆ ಕೃಷಿ ಮತ್ತು ಅದಕ್ಕೆ ಪೂರಕ ವೃತ್ತಿಯ ಸಾರಾಂಶ.
ಏನೆಲ್ಲಾ ಕೃಷಿ ಮಾಡಿದ್ದರು- ಯಾವುದರಲ್ಲಿ ತೃಪ್ತಿ ಕಂಡರು?
- ಶ್ರೀಯುತ ಅಶೋಕ್ ಕುಮಾರ್ ಕರಿಕಳ ಇವರು ಕೃಷಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದವರು.
- ವ್ಯಾಸಂಗದ ತರುವಾಯ ಕೆಲವು ವರ್ಷಗಳ ವರೆಗೆ ಹನಿ ನೀರಾವರಿ ವ್ಯವಸ್ಥೆಯ ಮಾರುಕಟ್ಟೆ, ಅಳವಡಿಕೆಯಂತಹ ಕೆಲಸವನ್ನು ಮಾಡಿದ್ದರು.
- ಅದರಲ್ಲಿ ಪಡೆದ ಅನುಭವ ಮತ್ತು ಜ್ಞಾನದ ತಳಹದಿಯಲ್ಲಿ ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿದರು.
- ಚಾಪೆ ವಿಧಾನದಲ್ಲಿ ಲಾನ್ (Carpet type lawn) ಬೆಳೆಸುವಿಕೆ, ಅದನ್ನು ಅಳವಡಿಕೆ ಮಾಡುವ ತಾಂತ್ರಿಕತೆಯನ್ನು ಪರಿಚಯಿಸಿದ ಮೊದಲಿಗರು ಇವರು.
- ಬಹುಶಃ ಈ ವ್ಯವಹಾರ ಇವರ ಬದುಕಿಗೆ ಹೊಸ ತಿರುವನ್ನು ಕೊಟ್ಟಿರಬೇಕು.
- ಆ ನಂತರ ದೊಡ್ಡಬಳ್ಳಾಪುರದ ಸಮೀಪ, ಹುಸ್ಕೂರು ಎಂಬಲ್ಲಿ ಕೃಷಿ ಭೂಮಿಯನ್ನು ಮಾಡಿಕೊಂಡು ಅಲ್ಲಿ ಪುಷ್ಪೋದ್ದಿಮೆಯನ್ನೂ ಮಾಡಿದರು.
- ಹಾಗೆಯೇ ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆಯನ್ನೂ ಮಾಡಿದವರು.
- ಕೆಲವು ವ್ಯವಹಾರಗಳಲ್ಲಿ ಸ್ವಲ್ಪ ಹಣ ಸಂಪಾದನೆ ಆದರೆ, ಕೆಲವು ನಷ್ಟದ್ದೂ ಆಗಿತ್ತು.
- ಆದರೆ ಮಹತ್ವಾಕಾಂಕ್ಷೆ, ಹೆಚ್ಚಿನ ವರಮಾನ ಗಳಿಸುವ ವೃತ್ತಿಯತ್ತ ಸೆಳೆಯುತ್ತಿತ್ತು.
- ಹಾಗಾಗಿ ಹ್ಯಾಚರಿ ಉದ್ದಿಮೆಗೆ ಇಳಿದರು. ದೊಡ್ಡ ಪ್ರಮಾಣದಲ್ಲಿ ಹ್ಯಾಚರಿ ಉದ್ದಿಮೆಯನ್ನು ಪ್ರಾರಂಭಿಸಿ maa integrators ಎಂಬ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯವಹಾರವನ್ನು ನಡೆಸಿ ಅದರಲ್ಲೇ ಮುಂದುವರಿಯುತ್ತಿದ್ದಾರೆ.
- ಮೊಟ್ಟೆ ಕೋಳಿ ಸಾಕಾಣೆ, ಮರಿಗಳ ಪೂರೈಕೆ, ಕೋಳಿ ಆಹಾರ ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಅದರ ಅವಕಾಶಗಳನ್ನು ನಗದೀಕರಣ ಮಾಡಿಕೊಂಡಿದ್ದಾರೆ.
ಯಾವುದೇ ವೃತ್ತಿಯನ್ನು ಮಾಡುವುದಿದ್ದರೂ ಅದರ ಸಂಪೂರ್ಣ ಮಾಹಿತಿಗಳನ್ನು ಆಳವಾಗಿ ಅರಿತುಕೊಳ್ಳಬೇಕು. ನಮ್ಮಲ್ಲಿ ಸ್ವಲ್ಪ ಮುಂದಾಳುತ್ವವೂ ಇರಬೇಕು. ಎಲ್ಲಕ್ಕೂ ಮುಖ್ಯವಾಗಿ ನಮ್ಮ ವೃತ್ತಿಯಲ್ಲಿ ನಾವು ಮಾತ್ರ ಬೆಳೆಯುವುದಲ್ಲ. ನಮ್ಮ ಜೊತೆ ಇರುವವರನ್ನೂ ಬೆಳೆಸಿ, ಅವರು ನಮ್ಮೊಂದಿಗೆ ಇರುವಂತೆ ವೃತ್ತಿಯನ್ನು ಮುನ್ನಡೆಸುವುದೇ ವೃತ್ತಿ ಕೌಶಲ್ಯ. ಬೇಡಿಕೆ ಯಾವುದಕ್ಕೆ ಇದೆ, ಅಂತಹ ಕೃಷಿ ಮಾಡಬೇಕು. ಬೇಡಿಕೆ ಇಲ್ಲದ ಯಾವುದೇ ಕೃಷಿ ನಮ್ಮನ್ನು ಸಲಹಲಾರದು.
- ತಮ್ಮ ಕೃಷಿ ಭೂಮಿಯಲ್ಲಿ ನೀರು, ಮತ್ತು ಕೆಲಸದವರ ಅವಲಂಭನೆಯನ್ನು ಕಡಿಮೆ ಇರುವಂತೆ ಬೆಳೆಸಬಹುದಾದ ಬೆಳೆಗಳಾದ ಹಲಸು, ಮಿಡಿ ಮಾವು ಇತ್ಯಾದಿ ಬೆಳೆಗಳ ಬಗ್ಗೆ ಆಸಕ್ತಿ ತೋರಿದ್ದಾರೆ.
- ಹತ್ತು ಎಕ್ರೆಗೂ ಹೆಚ್ಚು ಹಲವಾರು ವಿಶೇಷ ತಳಿಯ ಹಲಸಿನ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ.
- ಫಲ ಪಡೆಯುತ್ತಿದ್ದಾರೆ. ಹಾಗೆಯೇ ಗರಿಷ್ಟ ಪ್ರಮಾಣದಲ್ಲಿ ಮಿಡಿ ಮಾವಿನ ತಳಿಗಳನ್ನು ಬೆಳೆಸಿದ್ದಾರೆ.
- ಮುಂದಿನ ದಿನಗಳಲ್ಲಿ ನೀರು ಎಂಬುದು ಕೊರೆತೆಯಾಗುವ ಸಂಪನ್ಮೂಲ.
- ಒಮ್ಮೆ ಅತಿವೃಷ್ಟಿ ಆಗಬಹುದು, ಒಮ್ಮೆ ಅನಾವೃಷ್ಟಿ ಆಗಬಹುದು. ಹೊಸ ಹೊಸ ಕೀಟ, ರೋಗಗಳು ಬರಬಹುದು.
- ಇವೆಲ್ಲವನ್ನೂ ತಕ್ಕಮಟ್ಟಿಗೆಯಾದರೂ ಎದುರಿಸಬಲ್ಲ ಕೃಷಿ ಆಯ್ಕೆ ಮಾಡಬೇಕು.
- ಹಾಗೆಯೇ ಕೆಲಸದವರೂ ಸಹ. ಇದನ್ನು ಎದುರಿಸಿ ಕೃಷಿ ಉಳಿಸುವ ಕಡೆಗೆ ಗಮನ ಕೊಡಬೇಕು ಎಂಬುದು ಇವರ ಸಲಹೆ.
- ನಾವು ದೇಶ ಸುತ್ತಬೇಕು, ಕೋಶ ಓದಬೇಕು. ಎಂಬ ನಾಲ್ನುಡಿಯಂತೆ ನಾವು ಬೇರೆಯವನ್ನು ನೋಡಬೇಕು ಮತ್ತು ಕಲಿಯಬೇಕು.
- ಆಗ ನಮ್ಮ ಯೋಚನೆಗಳು ವಿಸ್ತಾರವಾಗುತ್ತವೆ.
- ಭವಿಷ್ಯದಲ್ಲಿ ಆಹಾರ ಭಧ್ರತೆಗಾಗಿ ಬೇಕಾಗುವ ಬೆಳೆಗಳತ್ತ ಗಮನ ಹರಿಸಿದರೆ ಕೃಷಿಕನ ಬಾಳು ಹಸನಾಗುತ್ತದೆ ಎಂಬುದು ಇವರು ಹೇಳುವ ಮಾತು.
ಇಂದು ಕೃಷಿ ಕ್ಷೇತ್ರಕ್ಕೆ ಹೊಸಬರ ಅದರಲ್ಲ್ಲೂ ಯುವ ಜನತೆಯ ಒಳವು ಹೆಚ್ಚಾಗುತ್ತಿದೆ. ಅವರು ಹೊಸ ಚಿಂತನೆಗಳ ಮೂಲಕ ಕೃಷಿ ಮಾಡಬೇಕು. ಎಲ್ಲರೂ ಮಾಡುವುದನ್ನು ಮಾಡುವುದಲ್ಲ. ಸ್ವಲ್ಪ ಭಿನ್ನವಾಗಿ ಮಾಡಿ, ಅದರಲ್ಲಿ ಲಾಭ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ Demand based production ಗೆ ಒತ್ತು ಕೊಡಿ. ಬೇಡಿಕೆ ಇದ್ದುದನ್ನು ಜಾಣ್ಮೆಯಿಂದ ಬೆಳೆಯಬೇಕು. ಜಾಣ್ಮೆಯಿಂದ ಮಾರಬೇಕು. ಸಣ್ಣ ಸಣ್ಣ ಹಿಡುವಳಿಗಳಿಂದ ಹೆಚ್ಚಿನದೇನೂ ಮಾಡಲಿಕ್ಕಾಗುವುದಿಲ್ಲ. ಸಮುದಾಯ ಆಧಾರಿತ ಬೇಸಾಯ ಮಾಡಿ ಕೃಷಿಕ ಬೇಡಿಕೆಯನ್ನು, ಮಾರುಕಟ್ಟೆಯನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಹುದು.