ದೀಪಾವಳಿ – ರೈತರಿಗೆ ಬಹಳ ವಿಶೇಷ ಹಬ್ಬ

ಪರಮ ಪವಿತ್ರವಾದ ಹಣತೆ ದೀಪ

ದೀಪಾವಳಿ ಎಂಬ ದೀಪ ಬೆಳಗುವ ಹಬ್ಬ ಕೇವಲ ದೀಪ ಬೆಳಗುವ ಮತ್ತು ಪಠಾಕಿ ಸಿಡಿಸುವ ಹಬ್ಬ ಅಲ್ಲ. ಇದು ರೈತರಿಗೆ ಸುಗ್ಗಿ ಪ್ರಾರಂಭದ ಸಂಮೃದ್ದಿಯ ಹಬ್ಬ. ಶರತ್ಕಾಲದಲ್ಲಿ ಬರುವ  ಈ ಹಬ್ಬ ಆಚರಿಸುವ ನಾವೆಲ್ಲರೂ ಹಬ್ಬದ ಬಗ್ಗೆ ಒಂದಷ್ಟು ತಿಳಿದುಕೊಂಡು ಇದನ್ನು ಹೆಚ್ಚು ಅರ್ಥಗರ್ಭಿತವಾಗಿ ಆಚರಿಸಿದರೆ  ಒಳ್ಳೆಯದು.

ಶರತ್ಕಾಲ ಅದರೆ ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಮೊದಲ ವಾರ ದೀಪಾವಳಿ ಎಂಬ ದೀಪದ ಹಬ್ಬವು ಬರುತ್ತದೆ. ಸಾಮಾನ್ಯವಾಗಿ ಈ ಹಬ್ಬವನ್ನು  ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ  ಸುಜ್ಞಾನದೆಡೆಗೆ, ಅಶುಭದಿಂದ ಶುಭದೆಡೆಗೆ, ನಿರಾಶೆಯಿಂದ ಆಶಾವಾದದ ಕಡೆಗೆ  ಬರುವ ಹಬ್ಬ ಎನ್ನಲಾಗುತ್ತಿದೆ. ಒಟ್ಟು 3 ದಿನಗಳ ತನಕ ನಡೆಯುವ ಈ ಹಬ್ಬ ಪ್ರಾರಂಭವಾಗುವುದು ಕಾರ್ತಿಕ ಮಾಸದ ತ್ರಯೋದಶಿಯ ಸಂಜೆಯ ನಂತರ. ಅಂದರೆ ತ್ರಯೋದಶಿಯ  ರಾತ್ರೆ  ಚತುರ್ದಶಿಯಂದು  ಅಭ್ಯಂಜನ ಸ್ನಾನ ಎಂಬ ಪ್ರತೀತಿ.

ಹಬ್ಬದ ಸ್ನಾನ:

  •  ಅಬ್ಯಂಜನ ಸ್ನಾನ ಎಂದರೆ ಗಡಿಬಿಡಿ ಇಲ್ಲದೆ ಮನ್ಸೋ ಇಚ್ಚೆ ಸ್ನಾನ ಮಾಡುವುದು.  
  • ಗುಡಾಣಕ್ಕೆ ನೀರು ತುಂಬುವುದೂ ಒಂದು ಶಾಸ್ತ್ರ.
  • ನೀರು ತುಂಬುವ ಮುನ್ನ ಸ್ನಾನದ ಮನೆಯನ್ನು ಶುಚಿಗೊಳಿಸಿ, ಸುಣ್ಣ ಬಣ್ಣ ಬಳಿಯುವ ಸಂಕೇತವಾಗಿ  ಬಿಳಿ ಜೇಡಿ ಮಣ್ಣಿನ ದ್ರಾವಣದಲ್ಲಿ ಕೈಯನ್ನು ಅದ್ದಿ, ಕೈಯ ಮುದ್ರೆಯನ್ನು  ಗೋಡೆಗೆ ಬಾಗಿಲಿಗೆ, ಗುಡಾಣಕ್ಕೆ ಮೆತ್ತಲಾಗುತ್ತದೆ.
  • ಗುಡಾಣದ ಬಾಯಿಗೆ  ಮುಳ್ಳು ಸೌತೆಯ ಬಳ್ಳಿಯನ್ನು ಸುತ್ತುತ್ತಾರೆ.
  • ಗುಡಾಣದ ಒಳಗೆ ಒಂದು ಇಡೀ ಅಡಿಕೆ ನಾಣ್ಯ, ಮತ್ತು ವೀಳ್ಯದೆಲೆಯನ್ನು ಹಾಕಿ ನಂತರ ನೀರು ಹಾಕಲಾಗುತ್ತದೆ.
  • ಸಾಮಾನ್ಯವಾಗಿ ದೀಪಾವಳಿಯ ನಂತರ  ಮುಳ್ಳು ಸೌತೆ ಬಳ್ಳಿಯಲ್ಲಿ ಕಾಯಿಯಾಗುವಿಕೆ ನಿಲ್ಲುತ್ತದೆ.
  • ಬಳ್ಳಿಯ ಎಲೆಗಳು ಹಳದಿಯಾಗಿ ಒಣಗಲು ಪ್ರಾರಂಭವಾಗುತ್ತದೆ.
  • ಇಂಥ ಬಳ್ಳಿಯ ತುಂಡೊಂದನ್ನು ತಂದು ಗುಡಾಣದ ಬಾಯಿಗೆ ಕಟ್ಟಿ, ಶಂಕ, ಘಂಟೆ, ಶಬ್ಧ ಮಾಡುತ್ತಾ ಗುಡಾಣಕ್ಕೆ  ಮನೆಯ ಹಿರಿಯರು , ಮಕ್ಕಳು ನೀರು ತುಂಬುತ್ತಾರೆ.
  • ಇದು ಸಯಂಕಾಲ ಗೋದೋಳಿ ಲಗ್ನದಲ್ಲಿ ನಡೆಯುವ ವಿಧಿ.
  • ಪೂರ್ತಿ ನೀರು ತುಂಬಿದ ಗುಡಾಣದ ಬಾಯಿಯನ್ನು ಮುಚ್ಚಿದರೆ ನಂತರ ಮರುದಿನವೇ ಆ ಗುಡಾಣದ ನೀರನ್ನು ಬಳಕೆ ಮಾಡುವುದು.
  • ಹಿಂದೆ ಈಗಿನಂತೆ ನಳ್ಳಿಗಳು, ಬಾಯ್ಲರುಗಳು ಇರಲಿಲ್ಲ.
  • ತಾಮ್ರದ ಹಂಡೆ (ಗುಡಾಣ) ಬಿಸಿನೀರು ಕಾಯಿಸುವ ಪಾತ್ರೆ. ಎಲ್ಲಾ ಮನೆಯಲ್ಲೂ ಇದೇ ಇದ್ದುದು.
  • ಈಗ ನಳ್ಳಿ ವ್ಯವಸ್ಥೆಗಳು ಬಂದು ಗುಡಾಣಗಳು ಕಣ್ಮರೆಯಾಗಿವೆ.
  • ಹಬ್ಬ ಆಚರಿಸುವಾಗ ಇದೇ ವ್ಯವಸ್ಥೆಗೇ ಪೂಜೆ ಮಾಡುವ ಪ್ರತೀತಿ ಇರುತ್ತದೆ.
ಗೂಡುದೀಪ

ಸಾಯಂಕಾಲ ನೀರು ತುಂಬಿದ ನಂತರ ಸ್ನಾನ ಮಾಡಲು ನಿರ್ಧಿಷ್ಟಗಳಿಗೆ ಇರುತ್ತದೆ. ಅಂದರೆ ಆ ದಿನ ಬೆಳಿಗ್ಗೆಯ ಹೊತ್ತು ಚಂದ್ರ ದರ್ಶನ ಚಂದ್ರೋದಯದ ಸಮಯ ಸುಮಾರಾಗಿ  4.50 ಯಿಂದ 5 ತನಕ ಇರುತ್ತದೆ. ಈ ಸಮಯದಲ್ಲಿ ಸ್ನಾನ ಮಾಡಬೇಕು ಎಂಬ  ವಾಡಿಕೆ ಇದೆ. (ಅಮಾವಾಸ್ಯೆ ಬರುವುದಕ್ಕೆ ಮುಂಚೆ)

ಯಾಕೆ ನರಕ ಚತುರ್ದಶಿ ಆಚರಣೆ:

  • ನರಕ ಚತುರ್ದಶಿ ಎಂದರೆ  ನರಕಾಸುರನನ್ನು  ವಧೆ ಮಾಡಿ ಮನುಕುಲಕ್ಕೆ ಕ್ಷೇಮವನ್ನುತಂದು ಕೊಟ್ಟ ದಿನ ಇದು.
  • ನರಕಾಸುರನೆಂಬ ರಾಕ್ಷಸ 16 ಸಾವಿರ ಹೆಂಗಳೆಯರನ್ನು ಬಂಧನದಲ್ಲಿಟ್ಟು ಸಮಾಜದಲ್ಲಿ ಹೀನ ಕೆಲಸ ಮಾಡಿದ್ದ. 
  • ಇಂತಹ ಹ್ಯೇಯ ಕೃತ್ಯ ಮಾಡಿದ ರಾಕ್ಷಸನನ್ನು ಶ್ರೀ ಕೃಷ್ಣನು ಕೊಂದು ಅವರನ್ನು ಬಂಧ ಮುಕ್ತ ಮಾಡಿದ ಶುಭ ದಿನ ಇದು.
  • ಅಂದರೆ ಸ್ತ್ರೀಯರಿಗೆ ನಮ್ಮ ಸಮಾಜದಲ್ಲಿ ಬಹಳ ಗೌರವ ಇತ್ತು.
  • ಅವರಿಗೆ ಆಗುವ ಅನ್ಯಾಯವನ್ನು ದೇವರೂ ಕ್ಷಮಿಸುತ್ತಿರಲಿಲ್ಲ ಎಂಬುದು ಈ ಘಟನೆಯ ಹಿಂದಿರುವ ಅರ್ಥ. 
  • ಅವನನ್ನು ಕೊಂದು ಲೋಕ  ಕಲ್ಯಾಣವನ್ನು ಉಂಟುಮಾಡಿದ ನೆನಪೇ ನರಕ ಚತುರ್ದಶಿ.

ಎಣ್ಣೆ ಸ್ನಾನದ ವಿಶೇಷ:

  • ನರಕ ಚತುರ್ದಶಿ ಎಂಬ ದೀಪಾವಳಿಯ  ಮೊದಲ ದಿನ ಬೆಳಿಗ್ಗೆ ಬೇಗನೇ ಎದ್ದು ಒಂದೆಡೆ ಬಿಸಿ ನೀರು ಖಾಯಿಸುವುದು,
  • ಮನೆ ಹಿರಿಯರು ವಿಶೇಷವಾಗಿ ಮನೆಯ  ಯಜಮಾನಿ (ತಾಯಿ) ಗಂಡನಿಗೆ, ಮಕ್ಕಳಿಗೆ , ತಲೆಗೆ, ಮೈಗೆ ಎಣ್ಣೆ ಹಾಕಿ ಚೆನ್ನಾಗಿ ತಿಕ್ಕುತ್ತಾರೆ.
  • ಎಣ್ಣೆ ಹಾಕುವ ಮುನ್ನ ದೇವರ ಎದುರು ಒಂದು ಕನ್ನಡಿ ಕುಂಕುಮದ ತಟ್ಟೆ ಹಾಗೂ ಒಂದು ತೆಂಗಿನ ಕಾಯಿಯನ್ನು ಇಡಲಾಗುತ್ತದೆ.
  • ಸುಮಾರು ಹತ್ತರಷ್ಟು ಗರಿಕೆ ಹುಲ್ಲಿನ ತುದಿಯನ್ನು ಕಟ್ಟು ಕಟ್ಟಿ ಇಡಲಾಗುತ್ತದೆ.
  • ಎಣ್ಣೆ ಹಾಕುವ ಮುನ್ನ ತಾಯಿಗೆ ನಮಸ್ಕಾರ ಮಾಡಬೇಕು, ನಂತರ ತಂದೆಗೆ, ಆ ನಂತರ ಹಿರಿಯರಿಗೆ.
  • ತಾಯಿ ಎಣ್ಣೆ ಹಾಕುವ ಮುನ್ನ ಹಣೆಗೆ ಕುಂಕುಮದ ತಿಲಕ ಇಟ್ಟು ಗರಿಕೆ ಹುಲ್ಲಿನ ಕಟ್ಟಿನಲ್ಲಿ ಎಣ್ಣೆ ಮುಳುಗಿಸಿ ಏಳು ಭಾರಿ ಸಪ್ತ ಚಿರಂಜೀವಿಗಳಾದ ಆಶ್ವತ್ತಾಮ, ಬಲಿ, ವ್ಯಾಸ, ಹನುಮ ವಿಭೀಷಣ ಕೃಪ, ಪರಶುರಾಮರ ಹೆಸರನ್ನು ಸ್ಮರಿಸಿ ನೆಲಕ್ಕೆ ಏಳು ತೊಟ್ಟು ಎಣ್ಣೆಯನ್ನು  ಸವರಿ ನಂತರ ಎಣ್ಣೆ ತಿಕ್ಕುವವರಿಗೆಲ್ಲಾ ಮೂರು ಭಾರಿ ಗರಿಕೆ ಹುಲ್ಲಿನ ನಲ್ಲಿ ಹಣೆಗೆ ಎಣ್ಣೆ ಸವರಿ ನಂತರ ಕೈಯಲ್ಲಿ ಎಣ್ಣೆ ಹಾಕುತ್ತಾರೆ.
  • ಎಣ್ಣೆ ಹಾಕಿ ಚೆನ್ನಾಗಿ ತಿಕ್ಕಿ ಒಬ್ಬೊಬ್ಬರೇ ಅಭ್ಯಂಜನ ಮಾಡುತ್ತಾರೆ.  
  • ಇದರ ಮೂಲ ಅರ್ಥ,ಈ ಹಿಂದೆ ಬೇಸಾಯ ಇತ್ಯಾದಿಗಳ  ಆಯಾಸ ಪರಿಹಾರ ಆಗಲಿ ಎಂಬುದೇ ಆಗಿರುತ್ತದೆ.
  • ಸಾಮಾನ್ಯವಾಗಿ ತುಲಾ ಸಂಕ್ರಮಣದ ನಂತರ  ಹಬ್ಬ ಮುಗಿಯುವ ತನಕ ಅಂದರೆ ತುಳಸೀ ಪೂಜೆಯ ತನಕವೂ ( ಕಾವೇರಿ ಸಂಕರಮಣ) ಹಳ್ಳಿಯ ಮನೆಗಳಲ್ಲಿ ಯಾವಾಗಲೂ ದೋಸೆಯೇ ಇರುವುದು ವಾಡಿಕೆ.
  • ತುಲಾ ಸಂಕ್ರಮಣವು ದೀಪಾವಳಿ ಹಬ್ಬದ ಸಮಯಕ್ಕೇ ಬರುತ್ತದೆ. 
  • ಅಭ್ಯಂಜನ ಮಾಡಿ ಬಂದ ನಂತರ ದೇವರಿಗೆ ನಮಸ್ಕಾರ ಮಾಡಿ ಗುರು ಹಿರಿಯರಿಗೆ ನಮಸ್ಕರಿಸಿ ಹೊಸ ಬಟ್ಟೆ ತೊಟ್ಟು ನಂತರ ದೋಸೆ ತಿನ್ನುವುದು ವಾಡಿಕೆ.
  • ಸಾಮಾನ್ಯವಾಗಿ ಎಲ್ಲಾ ಮನೆಯಲ್ಲೂ ಹಬ್ಬದ ದಿನಗಳಲ್ಲಿ ದೋಸೆಯದ್ದೇ ಇರುತ್ತದೆ.
  • ಕೆಲವು ಜನರು ನರಕ ಚತುರ್ದಶಿಯನ್ನು ಆಚರಿಸುವುದಿಲ್ಲ. 
  • ಮನೆ ಮುಂದೆ , ತುಳಸೀ ಕಟ್ಟೆಯ ಸುತ್ತ ರಂಗೋಲಿ ಹಾಕಿ ಸಂಭ್ರಮಾಚರಿಸುತ್ತಾರೆ.
  • ಈ ದಿನದಿಂದಲೇ ಹಬ್ಬಕ್ಕೆ ತಯಾರು ಮಾಡುವ ತಿನಿಸುಗಳ ತಯಾರಿಕೆ ಪ್ರಾರಂಭ.
ಕೃಷಿ ಸಾಮಾಗ್ರಿಗಳಿಗೆ ಪೂಜೆ

ಈ ದಿನದಂದು ಹೊಸ ಮದುಮಕ್ಕಳು ಹಬ್ಬಕ್ಕೆ ಬರುವುದು ವಾಡಿಕೆ. ಮನೆಯಿಂದ ಮದುವೆಯಾದ ಹುಡುಗಿಯರು ತಮ್ಮ ಗಂಡನ ಸಮೇತ ಹೊಸ ಹಬ್ಬ ಆಚರಿಸಲು ತಾಯಿ ಮನೆಗೆ ಬರುತ್ತಾರೆ. ಇವರಿಗೆ ಈ ದಿನ ಎಣ್ಣೆ ಸ್ನಾನ, ಹೊಸ ಬಟ್ಟೆ ಬರೆ ಉಡುಗೊರೆ ಎಲ್ಲವನ್ನೂ ನೀಡಿ ಸತ್ಕರಿಸಲಾಗುತ್ತದೆ.

ಹಬ್ಬದ ಅಮಾವಾಸ್ಯೆಯ ವಿಶೇಷತೆ:

  • ನರಕಚತುರ್ದಶಿ ಎಂಬುದು ಚತುರ್ದಶಿಯ ಕೊನೇ ಗಳಿಗೆಗೇ ಆಚರಿಸಲ್ಪಡುತ್ತದೆ.
  • ಚತುರ್ದಶಿ ಗಳಿಗೆ ಇರುವ ಹೊತ್ತಿಗೇ ಅಭ್ಯಂಜನ ಸ್ನಾನ ಮುಗಿಸಬೇಕು. ನಂತರ ಅಮಾವಾಸ್ಯೆ ಬರುತ್ತದೆ.
  • ಅದಕ್ಕಾಗಿ ಪಂಚಾಂಗಕರ್ತರು ಬೆಳಗ್ಗೆ ಇಂತಿಷ್ಟು ಗಂಟೆಯೊಳಗೆ ಸ್ನಾನ ಮಾಡಬೇಕು ಎಂದು ತಿಳಿಸಿರುತ್ತಾರೆ. 
  • ಅಮಾವಾಸ್ಯೆ ತಿಥಿ ಬಂತೆಂದರೆ ಅಂದೇ ಹಬ್ಬ ಪ್ರಾರಂಭ.
  • ಅಮಾವಾಸ್ಯೆಯ ದಿನ ನಮ್ಮ ಹಿರಿಯರನ್ನು ನಾವು ನಮ್ಮ ಹಬ್ಬದ ಸಂಭ್ರಮೋಲ್ಲಾಸದಲ್ಲಿ ಪಾಲ್ಗೊಳ್ಳಿ ಎಂದು ಕರೆಯುವ ದಿನ.
  • ನಮ್ಮನ್ನಗಲಿದ ಹಿರಿಯರು ನಮ್ಮ ತಲೆಮಾರು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಲು ಅವರಿಗೆ ಸ್ವಾತಂತ್ರ್ಯ ನೀಡಲಾಗುತ್ತದೆಯಂತೆ.
  • ಹಾಗಾಗಿ ಅವರು ನಮ್ಮ ಯೋಗ ಕ್ಷೇಮವನ್ನು ನೋಡಲು ಬರುತ್ತಾರೆ ಎಂಬ ನಂಬಿಕೆ.

 ಈ ದಿನ ಬಲಿ ಚಕ್ರವತಿಯು ತನ್ನ ಕರ್ಮ ಭೂಮಿಗೆ ಭೇಟಿ ಕೊಡುವ ವರವನ್ನು ಪಡೆದಿದ್ದಾನೆ. ಅವನ ಬರುವಿಕೆ ಯನ್ನು ಸ್ವಾಗತಿಸಲಿಕ್ಕಾಗಿ ನಾವು ನಮ್ಮಿಂದ ಎತ್ತರದದಲ್ಲಿ ದೀಪವನ್ನಿಟ್ಟು ಬಲಿಯೆಂದ್ರಾ ಬಾ ಬಾ ಎಂದು ಕೂಗುವ ವಾಡಿಕೆ ಇದೆ. ಕೆಲವರು ಇದನ್ನು ದೀಪಾವಳಿ ಪಾಡ್ಯದ ಮರುದಿನ ಆಚರಿಸುತ್ತಾರೆ. ಮೂರೂ ದಿನಗಳ ಕಾಲ ಬಲಿ ಚಕ್ರವರ್ತಿ ಭೂಮಿಗೆ ಬರುವ ವರ ಪಡೆದ ಕಾರಣ ಇದೂ ತಪ್ಪಲ್ಲ.  ಈ ದಿನವೇ ದೀಪಾವಳಿಯ ಪ್ರಯುಕ್ತ  ಗೂಡು ದೀಪ (ಆಕಾಶ ದೀಪ) ಏರಿಸುವುದು. ಅಮಾವಾಸ್ಯೆಯ ಮರುದಿನದ ಆಚರಣೆಯೇ ಹಬ್ಬದ ಪಾಡ್ಯ. 

ಹಬ್ಬದ ಪಾಡ್ಯ ಮತ್ತು ಹೊಸ ಅಕ್ಕಿ ಊಟ:

  • ಹಬ್ಬದ ಪಾಡ್ಯ ಎಂಬುದು ಬಹಳ ಗೌಜಿಯ ದಿನ. ಎಲ್ಲರೂ ಆಚರಿಸುವ ದೀಪಾವಳಿ ಇದು.
  • ಮನೆ ಮಂದಿಯೆಲ್ಲಾ ಹೊಸ ಬಟ್ಟೆ  ಧರಿಸುವುದು, ದೇವಸ್ಥಾನಗಳಿಗೆ ಹೋಗುವುದು, ನೆಂಟರಿಷ್ಟರ ಮನೆಗೆ ಹೋಗುವುದು ಮುಂತಾದ ಸಂಭ್ರಮಾಚರಣೆ ಇರುತ್ತದೆ. 
  • ದೀಪಾವಳಿ ಪಾಡ್ಯಕ್ಕೆ ಎಲ್ಲರ ಮನೆಯಲ್ಲೂ ದೋಸೆಯ ಪರಿಮಳ ಹೊರ ಸೂಸುತ್ತಿರುತ್ತದೆ.
  • ಉದ್ದು ಹಾಕಿದ ದೋಸೆ, ಅದಕ್ಕೆ ಬೆಲ್ಲದ ರವೆ, ಕೊಬ್ಬರಿ ಎಣ್ಣೆ, ಮುಂತಾದ ಪಾಕಗಳಿರುತ್ತವೆ.
  • ಈ ದಿನ ಮಧ್ಯಾನ್ಹ ಸುಮಾರಾಗಿ ಕೃಷಿಕರ ಮನೆಯಲ್ಲಿ ಹೊಸ ಅಕ್ಕಿಯ ಊಟ ವಾಡಿಕೆ.
  • ಹೊಸ ಅಕ್ಕಿ ಅಂದರೆ ಆ ವರ್ಷದ ಬೆಳೆಯಿಂದ ಪಡೆದ ಅಕ್ಕಿ. ಹಿಂದೆ ಈ ಸಮಯಕ್ಕೆ ಭತ್ತ ಕಠಾವು ಮಾಡಿ ಅಕ್ಕಿ ಮಾಡುವುದು ಇತ್ತು. 
  • ಈಗಲೂ ಮೊದಲು ನಾಟಿಮಾಡಿದ ಕಡೆ ಈ ಸಮಯಕ್ಕೆ  ಪೈರು ಕಠಾವಿವೆ ಬರುತ್ತದೆ.
  • ಆ ಪೈರಿನ ಅಕ್ಕಿ ಮಾಡಿ ಹೊಸ ಅಕ್ಕಿಯ ಊಟವನ್ನು ಹಬ್ಬದ ಪಾಡ್ಯದ ದಿನದಂದು ಉಣ್ಣುವುದು  ಸಂಪ್ರದಾಯ.
  • ಹೊಸ ಅಕ್ಕಿ ಊಟ ಎಂದರೆ ಅದು ಬಹಳ ಗೌಜಿಯ ಊಟ. ಊಟಕ್ಕೆ ಕನಿಷ್ಟ  ಏಳು ಬಗೆಯ ಅಡುಗೆಗಳಾದರೂ ಬೇಕು ಎಂಬ ಕ್ರಮ.
  • ಮುಳ್ಳು ಸೌತೆಯನ್ನು ಕೊಚ್ಚಿ ಮಾಡಿದ ಹಸಿ ಅಡಿಗೆ, ಎರಡು ಬಗೆ ಪಲ್ಯ, ಕೆಸುವಿನ ಎಲೆಯ ಪತ್ರೋಡೆ  ಮಾಡಿ ಅದರ ಪಲ್ಯ.
  • ಮಾಮೂಲಿ ಸಾರು, ಸಾಂಬಾರು, ಅಲ್ಲದೇ ಈ ದಿನದ ವಿಶೇಷವಾದ ಬೆಳ್ತಿಗೆ ಅಕ್ಕಿಯನ್ನು ಬೇಯಿಸಿ ಅದಕ್ಕೆ ತೆಂಗಿನ ಕಾಯಿಯ ಹಾಲನ್ನು ಹಾಕಿ ಅದಕ್ಕೆ ಅರಶಿನ ಎಲೆಯನ್ನು ಹಾಕಿ, ಮಾಡಿದ ಹಾಲು ಪಾಯಸ.
  • ಇದಕ್ಕೆ ಮತ್ತೆ ಕರಿಕೆಸ ಮತ್ತು ಹರಿವೇ ಸೊಪ್ಪು ದಂಟು ಮಿಶ್ರಿತ ಜೀರಿಗೆ ಹಾಕಿದ ಹುಳಿ , ಅಲ್ಲದೇ ಹಬ್ಬದ ವಿಷೇಶವಾಗಿ ಮತ್ತೆ ಸಿಹಿ ಪಾಯಸ ಇರುತ್ತದೆ. 
  • ಅಂದು ಬಂದವರಿಗೆಲ್ಲಾ  ಹಾಲು ಪಾಯಸ ಕೊಡುವುದು ಇರುತ್ತದೆ.
  • ಊಟದ ತರುವಾಯ ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು  ಹರಟೆ ಹೊಡೆಯುತ್ತಾ ಕವಳ ಹಾಕುವುದು,
  • ಆ ದಿನವನ್ನು ಯಾವುದೇ ಜಂಜಾಟಗಳಿಂದ ಮುಕ್ತರಾಗಿ ಕಳೆಯುವುದು ಕ್ರಮ.

ಹಿಂದೆ ಅವಿಭಕ್ತ ಕುಟುಂಬಗಳಿದ್ದಾಗ ಹಬ್ಬದ ದಿನದ ಹೊಸ ಅಕ್ಕಿ ಊಟಕ್ಕೆ  ಭಾರೀ ಮೆರುಗು ಇತ್ತು. ಈಗ ವಿಭಕ್ತ ಕುಟುಂಬಗಳಾಗಿ ಎಲ್ಲರೂ ಅವರವರ ಮನೆಯಲ್ಲಿ  ಹೊಸ ಅಕ್ಕಿ ಊಟ ಮಾಡುವ ಕಾರಣ ಬರುವವರು ಹೋಗುವವರು ತುಂಬಾ ಕಡಿಮೆ.  ಮನೆಯವರಿಗೆ ಮನೆಯವರಿಂದಲೇ ಹಬ್ಬದೂಟ.

  • ಹಬ್ಬದ ದಿನದಂದು ಸಾಮಾನ್ಯವಾಗಿ ಭತ್ತ ಕೊಯಿಲು ಆಗಿರುತ್ತದೆ.
  • ಹೊಸ ಅಕ್ಕಿಯಿಂದಲೇ ಅಡಿಗೆ ಮಾಡಲು ಸಾಧ್ಯ. ಆದರೆ ಕೆಲವೆಡೆ ಚೌತಿಗೇ ಹೊಸ ಅಕ್ಕಿ ಊಟ ಮಾಡುವುವ ವಾಡಿಕೆ ಇದೆ.
  • ಅಲ್ಲಿ  ಹಳೆ ಅಕ್ಕಿಗೆ ಹೊಸ ಭತ್ತದ ಏಳು ಅಕ್ಕಿಯನ್ನು ಹಾಕಿ  ಹೊಸ ಅಕ್ಕಿ ಅನ್ನ ಎಂದು ಉಣ್ಣುವ ಕ್ರಮ ಇದೆ.
  • ಇನ್ನು ನಂತರದ ಸಂಕ್ರಮಣದಂದು (ಕನ್ಯಾ ಸಂಕ್ರಮಣ) ಮಾಡುವರೂ ಏಳು ಅಕ್ಕಿಯನ್ನು ಹಾಕಿ ಮಾಡುತ್ತಾರೆ.
  • ಕೆಲವರು ತುಲಾ ಸಂಕ್ರಮಣಕ್ಕೆ ಮಾಡುವುದಿದೆ. ಆಗ ಹೊಸ ಅಕ್ಕಿ ಸಿದ್ದವಾಗಿರುತ್ತದೆ.
  • ಹಿಂದೆ ಸಾಗುವಳಿ ಇರುವವರು ತಮ್ಮ  ಬಳಕೆಗೆ  ನಮ್ಮದೇ ಗದ್ದೆಯ ಅಕ್ಕಿಯನ್ನು ಬಳಸುತ್ತಿದ್ದರು.
  • ಹಬ್ಬಕಾಗಿ ಬೆಳ್ತಿಗೆ ಅಕ್ಕಿ ಮಾಡುವುದು ಸಾಮಾನ್ಯವಾಗಿ ಎಲ್ಲರೂ ಮಾಡುವ ಕ್ರಮ. ಆದರೆ ಈಗ ಹೆಚ್ಚಿನವರು  ತಮ್ಮ ಗದ್ದೆಯ ಭತ್ತವನ್ನು ತಾವೇ ಬಳಕೆ ಮಾಡುವುದು ಎಂಬ ಯಾವುದೇ ಸಂಪ್ರದಾಯವನ್ನು ಇಟ್ಟುಕೊಂಡಿಲ್ಲ.
  • ಬೆಳ್ತಿಗೆ ಅಕ್ಕಿ ಮಾಡಿದರೆ ಅಕ್ಕಿ ತುಂಡಾಗಿ ನಷ್ಟವಾಗುತ್ತದೆ ಎಂದು ಅಂಗಡಿಯಿಂದ ಅಕ್ಕಿ ತರುವ ಸಾಗುವಳಿದಾರರೇ ಅಧಿಕವಾಗಿದ್ದಾರೆ.
ಆಧುನಿಕತೆಯಲ್ಲಿ ಬದಲಾದ ಹಣತೆ ದೀಪಗಳು
ಆಧುನಿಕತೆಯಲ್ಲಿ ಬದಲಾದ ಹಣತೆ ದೀಪಗಳು

ದೈವ ದೇವರಿಗೂ ಹಬ್ಬ:

  • ಹಬ್ಬದ ಪಾಡ್ಯಕ್ಕೆ ಹೆಚ್ಚಾಗಿ ಎಲ್ಲರೂ ತಮ್ಮ ಮನೆಯ ದೈವ ದೇವರಿಗೆ ವಿಷೇಶ ಪೂಜೆ ಮತ್ತು ಆಹಾರಗಳನ್ನು ನೀಡುವುದು ವಾಡಿಕೆ. 
  • ಕಾರ್ತಿಕ ಮಾಸ ಎಂಬುದು ಇಡೀ ವರ್ಷದಲ್ಲಿ ಪರ್ವಪುಣ್ಯ ಕಾಲ. ಈ ಕಾಲದ ದೈವ ದೇವರಿಗೆ ಬಹಳ ಇಷ್ಟ.
  • ಆದ ಕಾರಣ ಕಾರ್ತಿಕ ಮಾಸ ಪೂರ್ತಿಯಾಗಿ ಹಬ್ಬದ ವಾತಾವರಣವೇ ಇರುತ್ತದೆ.
  • ಕಾರ್ತಿಕ ಮಾಸಾಂತ್ಯದ ವರೆಗೂ ಪ್ರತೀ ಮನೆಯಲ್ಲಿ  ಆಕಾಶ ದೀಪವನ್ನು  ಇಡಲಾಗುತ್ತಿದೆ.
  • ಹಬ್ಬದ ನಂತರ ಮಳೆಗಾಲ  ಮುಗಿಯಿತು ಎಂದರ್ಥ.
  • ಆ ಕಾರಣಕ್ಕಾಗಿಯೇ  ಯಕ್ಷಗಾನ ಮೇಳಗಳು ತಮ್ಮ ತಿರುಗಾಟವನ್ನು ಹಬ್ಬದ ಪಾಡ್ಯದಿಂದಾರಂಭವಾಗಿ ಪ್ರಾರಂಭಿಸುತ್ತವೆ.
  • ಜಾತ್ರೆಗಳು, ನೇಮಗಳು  ನಡೆಯುವುದು ಹಬ್ಬದ ಪಾಡ್ಯದ ನಂತರವೇ. 

ದೀಪಾವಳಿ ಹಬ್ಬವನ್ನು  ಕೇವಲ ಭಾರತ ದೇಶದಲ್ಲಿ ಮಾತ್ರವೇ ಆಚರಿಸುವುದಲ್ಲ. ನೆರೆಯ ನೇಪಾಳ, ಶ್ರೀ ಲಂಕಾ, ಮಯನ್ಮಾರ್, ಮಾರೀಶಿಯಸ್, ಮಲೇಶಿಯಾ, ಸಿಂಗಾಪುರ ಮತ್ತು ಫುಜಿ ಮುಂತಾದ ಕಡೆಗಳಲ್ಲೂ ಆಚರಿಸಲಾಗುತ್ತದೆ. ಇಲ್ಲೆಲ್ಲಾ ದೀಪಾವಳಿಗೆ ರಾಷ್ಟ್ರೀಯ ರಜೆ ಇರುತ್ತದೆ. ಹಿಂದುಗಳೆಲ್ಲರೂ ಈ ಹಬ್ಬವನ್ನು  ತಪ್ಪದೇ ಆಚರಿಸುತ್ತಾರೆ. ಇತರ ಧರ್ಮದವರೂ ಸಹ ಈ ಹಬ್ಬದ ಒಳ ತಿರುಳನ್ನು  ಅರಿತು ಇದನ್ನು ಗೌರವಿಸುತ್ತಾರೆ. ಜೈನರಲ್ಲಿ ಈ ದಿನವನ್ನು ಮಹಾವೀರ ನಿರ್ವಾಣ ದಿನವೆಂದು ಆಚರಿಸಲಾಗುತ್ತದೆ.

ದೀಪಾವಳಿ ಮತ್ತು ಗೂಡು ದೀಪಗಳು:

  • ಗೂಡು ದೀಪಗಳೆಂದರೆ ಆಕಾಶ ದೀಪಗಳೆಂದು ಹೆಸರು.ಆಧುನೀಕರಣದಲ್ಲಿ ಇದಕ್ಕೆ ಗೂಡು ದೀಪ ಎಂಬ ಹೆಸರು ಬಂದಿದೆ.
  • ಹಿಂದೆ ಈಗಿನ ಬಣ್ಣ ಬಣ್ಣದ ವ್ಯವಸ್ಥೆಗಳಿಲ್ಲದಿದ್ದಾಗ  ಹೊರಗೆ ಉರಿಸಿದ ದೀಪ ಆರದಿರಲೆಂದು ಅದಕ್ಕೆ ಸುತ್ತಲೂ  ತಡೆಯಾಗಿ ಇಡುತ್ತಿದ್ದರು.
  • ಅದಕ್ಕೆ ಸ್ವಲ್ಪ ಬಣ್ಣ ಸೇರಿತು ಆಧುನೀಕರಣವಾಯಿತು. 
  • ಗೂಡು ದೀಪಗಳನ್ನು ಉರಿಸುವ ಉದ್ದೇಶ ನಮ್ಮ ಹಬ್ಬದ ಸಂಭ್ರಮಾಚರಣೆಯಲ್ಲಿ ನಮ್ಮ ಪಿತ್ರುಗಳು ಭಾಗವಹಿಸಲಿ ಎಂಬುದು.
  • ಅವರನ್ನು ನಾವು ಕರೆಯುವ ಕ್ರಮ ಇದು. ದೇವಸ್ಥಾನಗಳಲ್ಲಿ ಕೊಡಿ ಏರುವುದು ಎಂಬ ಸಂಪ್ರದಾಯ ಇದೆ.
  • ಇದು ಉತ್ಸವ ಪ್ರಾರಂಭ ಸಮಯದಲ್ಲಿ ನಡೆಯುವ ವಿಧಿ.
  • ಕಾರಣ ಆ ಸ್ಥಳದ ದೇವರು, ಆ ದೇವರ ಗಣಗಳು, ಸಹಚರರು, ಮಿತ್ರರು ಎಲ್ಲರೂ ಈ ಉತ್ಸವ ಸಮಾರಂಭದಲ್ಲಿ ಭಾಗವಹಿಸಲು ನೀಡುವ ತಂತ್ರ ಸೂತ್ರದ ಆವ್ಹಾನ ಎನ್ನಲಾಗುತ್ತದೆ.
  • ಅದೇ ರೀತಿಯಲ್ಲಿ ದೀಪಾವಳಿಯ ಗೂಡು ದೀಪವೂ ಸಹ.
  • ಯಾವುದೇ ಸಂಭ್ರಮಾಚರಣೆಯ ಹಿಂದೆ ನಮ್ಮ ಪಿತ್ರುಗಳ ಆಶೀರ್ವಾದ  ಬೇಕೇ ಬೇಕು.ಅವರನ್ನು ನೆನವರಿಕೆ ಮಾಡಿಕೊಂಡೇ ಎಲ್ಲಾ ಕಾರ್ಯಗಳಿಗೂ ಮುಂದಡಿ ಇಡಬೇಕು ಎಂಬ ಪ್ರತೀತಿ ನಮ್ಮದು.
  • ಅವರೆಲ್ಲರನ್ನೂ ಆಹ್ವಾನಿಸುವ ವಿಧಾನ ಆಕಾಶ ದೀಪಗಳು.
  • ಈಗ ನಾವು ಗೂಡು ದೀಪಗಳನ್ನು ಮನೆಯ ಒಂದು ಬದಿಯಲ್ಲಿ ನೇತು ಹಾಕುತ್ತೇವೆ.
  • ಕೆಲವರು ಮನೆ ಸುತ್ತಲೂ ನೇತು ಹಾಕುತ್ತಾರೆ. ಹಿಂದೆ ಹಾಗಿರಲಿಲ್ಲ.
  • ಒಂದು ಎತ್ತರದ ಕಂಬ ನೆಟ್ಟು ಅದಕ್ಕೆ ರಾಟೆಯನ್ನು ಹಾಕಿ ಅದಕ್ಕೆ ಹಗ್ಗ ಹಾಕಿ ಹಣತೆಯ ದೀಪವನ್ನು  ಉರಿಸಿ ಅದನ್ನು ಜಾಗರೂಕತೆಯಲ್ಲಿ ಮೇಲೇರಿಸಲಾಗುತ್ತಿತ್ತು.
  • ಈಗ ಹಣತೆಯ ದೀಪದ ಬದಲಿಗೆ ವಿದ್ಯುತ್ ಶಕ್ತಿ ಬಲ್ಬುಗಳು ಬಂದಿವೆ.   

ದೀಪಾವಳಿ ಮತ್ತು ಹಣತೆ:

  • ದೀಪಾವಳಿ ಎಂದರೆ ಬೆಳಕಿನ ಹಬ್ಬ. ಬೆಳಕು ಕೆಟ್ಟದ್ದನ್ನು ದೂರ ಮಾಡುತ್ತದೆ.
  • ನಮ್ಮಲ್ಲಿ ಜ್ಞಾನ , ಪರಿಜ್ಞಾನ ಇದರೆ ನಾವು ದಾರಿ ತಪ್ಪುವುದಿಲ್ಲ ಹೇಗೋ ಹಾಗೆಯೇ ಇದೂ .
  • ಬೆಳಕು ಎಲ್ಲಾ ಕೆಟ್ಟದ್ದನೂ ದೂರ ಮಾಡುತ್ತದೆ. ಸಾದ್ಯವಾದಷ್ಟು ಹೆಚ್ಚು ಹೆಚ್ಚು ದೀಪ ಉರಿಸಿ ದೀಪಾವಳಿಯನ್ನು ಆಚರಿಸಿದರೆ ಒಳ್ಳೆಯದು.
  • ಹಿಂದಿನಿಂದಲೂ ನಾವು ಕೃಷಿಯನ್ನು ನಂಬಿ ಬದುಕಿದವರು.
  • ಕೃಷಿಯೇ ಜಗತ್ತಿನಲ್ಲಿ ಮನುಕುಲಕ್ಕೆ ಜೀವ ನೀಡಿದ ವೃತ್ತಿ.
  • ಮಳೆಗಾಲದಲ್ಲಿ ಭೂಮಿಯಲ್ಲಿ ಹುಲ್ಲು, ಕಳೆ ಎಲ್ಲವೂ ಬೆಳೆಯುತ್ತದೆ, ಬೆಳೆಯೂ ಬೆಳೆಯುತ್ತದೆ.
  • ಎಲ್ಲದರೊಂದಿಗೆ ಬೆಳೆಯನ್ನು ಹಾಳು ಮಾಡುವ ಕೀಟಗಳು ಬದುಕುತ್ತವೆ.
  • ದೀಪಾವಳಿಯ ಸಮಯಕ್ಕೆ ಎಲ್ಲಾ ಕಳೆಗಳು ಹೂ ಬಿಡಲು ಪ್ರಾರಂಭಿಸುತ್ತವೆ.
  • ಆಗ ಕೀಟ ಸಮಸ್ಯೆ ಹೆಚ್ಚುತ್ತದೆ. ಇದರಿಂದಾಗಿ ಬೆಳೆಯುವ ಬೆಳೆಗೂ ತೊಂದರೆಯಾಗುತ್ತದೆ.
  • ಇದನ್ನು ಕಡಿಮೆ ಮಾಡಲು ರಾತ್ರೆ ಹೊತ್ತು ದೀಪ ಉರಿಸುವ ಕ್ರಮವನ್ನು  ತರಲಾಯಿತು.
  • ಬೆಳೆಗೆ ಹಾನಿ ಮಾಡುವ ಕೀಟಗಳು ದೀಪದ ಬೆಳಕಿಗೆ ಆಕರ್ಷಿತವಾಗಿ ಅವುಗಳ ತೊಂದರೆ ಕಡಿಮೆ ಮಾಡುವುದೇ ದೀಪಾವಳಿಯಲ್ಲಿ ಹಣತೆಯಲ್ಲಿ ದೀಪ ಉರಿಸುವ ಪದ್ದತಿ.
  • ಕಾರ್ತಿಕ ಮಾಸದಲಿ ಕೆಲವೊಂದು ದೇವಸ್ಥಾನಗಳಲ್ಲಿ ಲಕ್ಷ ದೀಪೋತ್ಸವಗಳು  ನಡೆಯುತ್ತವೆ.
  • ಇದೂ ಸಹ ನಮ್ಮ ಹಿರಿಯರು ಬೆಳೆ ಸಂರಕ್ಷಣೆಗಾಗಿ ಮಾಡಿದ ಒಂದು ಸಾಮೂಹಿಕ ಕಾರ್ಯಕ್ರಮ ಎಂದೇ ಹೇಳಬಹುದು.
  • ಹಿಂದೆ ಎಲ್ಲರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ದೀಪ ಉರಿಸಲು ಎಣ್ಣೆ ಇರಲಿಲ್ಲ.
  • ಇದನ್ನು ಸಾಮೂಹಿಕವಾಗಿ ಮಾಡಲು ಎಲ್ಲರ ಸಹಕಾರ ಇತ್ತು ಆದ ಕಾರಣ ಇದು ಉತ್ಸವದ ರೂಪದಲ್ಲಿ ನಡೆಯುತ್ತಾ ಬಂದಿದೆ.    

ದೀಪಾವಳಿ ಮತ್ತು ಪಠಾಕಿಗಳು:

  • ದೀಪಾವಳಿ ಎಂದರೆ ಉಂಡು, ತಿಂದು, ನಲಿದು, ಸಂತೋಷ ಪಡಲಿಕ್ಕಾಗಿಯೇ ಇರುವ ದಿನಗಳು.
  • ವರ್ಷದುದ್ದಕ್ಕೂ  ಜೀವನದ ಜಂಜಾಟದಲ್ಲಿ ಕಳೆದು ವರ್ಷದಲ್ಲಿ  ಒಂದೆರಡು ದಿನವಾದರೂ ಖುಶಿ ಪಟ್ಟು ಬದುಕಲು ಇರುವ ಅವಕಾಶ ಈ ದೀಪಾವಳಿ.
  • ಈ ಸಮಯದಲ್ಲಿ ಖುಷಿಯನ್ನು ಇನ್ನಷ್ಟು ಹೆಚ್ಚಿಸಲು ಬಂದ ವ್ಯವಸ್ಥೆಯೇ ಶಭ್ಧ ಉಂಟು ಮಾಡುವ, ಹೆಚ್ಚು ಬೆಳಕನ್ನು ಕೊಡುವ ಪಠಾಕಿಗಳು.   
  • ಹಿಂದೆ ಈಗಿನಂತೆ ಅಪಾಯಕಾರಿ ಪಠಾಕಿಗಳು ಇರಲಿಲ್ಲ. ಹೆಚ್ಚೆಂದರೆ ಗರ್ನಾಲ್ ( ಅಟಾಂ ಬಾಂಬು) ನಂತರ ಕೇಪು.
  • ಬೆಳಕು ಕೊಡುವ ಕಡ್ಡಿಗಳು. ಅವರವರ ವಯಸ್ಸಿಗನುಗುಣವಾಗಿ ಇದನ್ನು ಸುಡುತ್ತಿದ್ದರು.
  • ಹಿಂದೆ ಕಾಡಿನ ಕೆಲವು ಪ್ರಾಣಿಗಳ ಭಯವೂ ಇತ್ತು. ಅವುಗಳನ್ನು ದೂರ ಮಾಡಲು ಈ ಶಭ್ಧ ಮಾಡಲಾಗುತ್ತಿತ್ತು.

ಲಕ್ಷ್ಮೀ ಪೂಜೆ ಮತ್ತು ಮಹತ್ವ:

  • ಪಾಡ್ಯದ ಮರುದಿನ ಹೆಚ್ಚಾಗಿ ಜನರು ಲಕ್ಷ್ಮೀ ಪೂಜೆಯನ್ನು ನಡೆಸುತ್ತಾರೆ.
  • ಲಕ್ಷ್ಮಿ  ಒಬ್ಬೊಬ್ಬರಿಗೆ ಒಂದೊಂದು ರೀತಿ ಇರಬಹುದಾದರೂ ಅದರ ಒಳ ಅರ್ಥ ಒಂದೇ.
  • ವ್ಯಾಪಾರಿಗೆ ಅಂಗಡಿ ಲಕ್ಷ್ಮಿಯಾದರೆ ಅವನು ಅಂಗಡಿಪೂಜೆ ಮಾಡಿಸುತ್ತಾರೆ.
  • ಅಷ್ಟ ಲಕ್ಷ್ಮಿಗಳಲ್ಲಿ  ಕೃಷಿಕ ಉತ್ಪಾದಿಸುವ ಧಾನ್ಯ ಲಕ್ಷ್ಮಿಯೂ ಒಂದು.
  • ಧಾನ್ಯ ಲಕ್ಷ್ಮಿಯನ್ನು ಈ ದಿನದಲ್ಲಿ ನಾವು ಆರಾದಿಸುತ್ತೇವೆ. 
  • ಜೊತೆಗೆ ವರ್ಷ ಪೂರ್ತಿಯಾಗಿ ನಮ್ಮ ಕೃಷಿ ಕೆಲಸಗಳಿಗೆ ಸಹಕಾರ ನೀಡಿದ ಗುದ್ದಲಿ,ಕತ್ತಿ,  ಕೊಡಲಿ , ಯಂತ್ರ ಸಾಧನ ಎಲ್ಲವಕ್ಕೂ  ಲಕ್ಷ್ಮೀ ಸ್ಥಾನವನ್ನು ನೀಡಿ ಅದನ್ನು ತೊಳೆದು ಶ್ರಿಂಗರಿಸಿ ಹೂವಿಟ್ಟು ಆರತಿ ಮಾಡಿ ಪೂಜಿಸುತ್ತೇವೆ.
  • ಇದು ನಮ್ಮ ಮುಂದಿನ ಕೃಷಿ ಸುಭಿಕ್ಷೆಗೆ ತಳಹದಿ. 

ತುಳಸೀ ಪೂಜೆ:

  • ಹಬ್ಬಗಳಲ್ಲಿ  ಕೊನೆಯ ಹಬ್ಬವೇ ಉತ್ಥಾನ ದ್ವಾದಶಿಯಂದು ನಡೆಯುವ ತುಳಸೀ ಪೂಜೆ.
  • ತುಳಸಿ ಕಟ್ಟೆ ಮನೆಗೆ ಒಂದು ಶೋಭೆ ಎಂದು ನಂಬಿದವರು ಆವು.
  • ತುಳಸೀ ಗಿಡ ಮನೆಗೆ ರಕ್ಷೆ ಇದ್ದಂತೆ. ಇದಕ್ಕೆ ಸಾಕಷ್ಟು ಔಷಧೀಯ ಗುಣಗಳಿವೆ.
  • ಇದನ್ನು ಪಡೆಯುವ ನಾವು ಅದನ್ನು ಪೂಜಿಸುವ ದಿನವೇ ಉತ್ಥಾನ ದ್ವಾದಶಿಯ ದಿನ.
  • ತುಳಸೀ ಪೂಜೆಯಂದು ನಾವು ನೆಲ್ಲಿ ಕಾಯಿ ಇರುವ ಗೆಲ್ಲನ್ನು ತಂದು ತುಳಸೀ ಗಿಡದ ಜೊತೆಗೆ ಊರುತ್ತೇವೆ.
  • ತುಳಸೀ ಗಿಡಕ್ಕೆ ತಳಿರು ತೋರಣ ಮಾಡಿ ಅಲಂಕರಿಸುತ್ತೇವೆ. ಪೂಜೆ ಮಾಡುತ್ತೇವೆ.
  • ತುಳಸೀ ಕಟ್ಟೆ , ಮನೆ ಸುತ್ತಾ ದೀಪ ಉರಿಸುತ್ತೇವೆ.
  • ನೆಲ್ಲಿ ಸಸ್ಯದ ಗೆಲ್ಲನ್ನು ತಂದು ಇಲ್ಲಿ ಊರುವುದರ ಅರ್ಥ ಇನ್ನು ನೆಲ್ಲಿ ಕಾಯಿಯಲ್ಲಿ ಚೊಗರು ಕಡಿಮೆಯಾಗುತ್ತದೆ, ಔಷಧೀಯ ಗುಣ ಹೆಚ್ಚುತ್ತದೆ,
  • ಅದನ್ನು ಇನ್ನು ಧಾರಾಳವಾಗಿ ಬಳಕೆ ಮಾಡಬಹುದು ಎಂಬುದು.

ದೀಪಾವಳಿ  ನಮ್ಮ ದೇಶದ  ರಾಷ್ಟ್ರೀಯ ಹಬ್ಬಗಳಲ್ಲಿ ಒಂದು ಇದನ್ನು ರೈತರ ಹಬ್ಬ ಎಂಬುದಾಗಿ ಕರೆಯುವುದು ಹೆಚ್ಚು ಸೂಕ್ತ. ಕಾರ್ತಿಕ  ಮಾಸದಲ್ಲಿ  ಬರುವ ಈ ಹಬ್ಬದಿಂದ  ಮೊದಲ್ಗೊಂಡು ರೈತರ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ.

ಗೋವಿನ ಪೂಜೆ:

  • ಗೋ ಪೂಜೆ – ಬಲಿ ಪೂಜೆ ಇದೆರಡೂ ದೀಪಾವಳಿಯ ಪ್ರಮುಖ ಅಂಗ.
  • ಗೋವು ಮಾನವನ ಪ್ರಮುಖ ಸಾಕು ಪ್ರಾಣಿ.
  • ಇದಕ್ಕೆ ನಮ್ಮ ಸಮಾಜ ದೇವತೆಯ ಸ್ಥಾನ ನೀಡಿದೆ.
  • ಈ ಗೋವನ್ನು ಆಧರಿಸಿ ನಮ್ಮ ದೇಶದ ಕೃಷಿ ಸಹಸ್ರಮಾನಗಳಿಂದ ಬೆಳೆದು ಬಂದಿದೆ.
  • ಹಸು ಹಾಲು ನೀಡಲು ಸಾಕಿದರೆ ಹೋರಿಗಳನ್ನು ಗದ್ದೆ ಉಳುಮೆಗಾಗಿ ಸಾಕುತ್ತಾ ಬಂದವರು.
  • ಈ ಸಾಕು ಪ್ರಾಣಿಗಳಿಗೆ ಸಹ ಹಬ್ಬ ಇದೆ. ಅದುವೇ ಗೋ ಪೂಜೆ.
  • ಗೋ ಪೂಜೆಯ ದಿನ ಮನೆಯಲ್ಲಿ ಸಾಕುವ ದನ ಕರು ಹೋರಿಗಳನ್ನು  ಬೆಳಿಗ್ಗೆಯೇ ಬಿಸಿ ನೀರಿನಲ್ಲಿ ಸ್ನಾನ ಮಾಡಿಸುತ್ತಾರೆ. 
  • ಸ್ನಾನಕ್ಕೆ ಮುನ್ನ ಪ್ರತೀ ಹಸು , ಹೊರಿಯ ಹಣೆಗೆ  ಸ್ವಲ್ಪ ಎಣ್ಣೆ ಹಾಕುವ ವಾಡಿಕೆ ಇದೆ. 
  • ಸ್ನಾನ  ಮಾಡಿಸಿ  ಹಸು, ಕರು ಹೋರಿಗಳ ಮೈಗೆ  ಜೇಡಿ ಮಣ್ಣಿನ ದ್ರಾವಣದಲ್ಲಿ ಕೈಯನ್ನು ಅದ್ದಿ ವಿನ ಹಟ್ಟಿಯನ್ನು  ಸ್ವಚ್ಚ ಮಾಡುತ್ತಾರೆ.
  • ಸುಣ್ಣ ಬಣ್ಣ ಕೊಡಬೇಕೆಂಬ ವಾಡಿಕೆ ಇದ್ದರೂ ಸಹ ಅದನ್ನು ಮಾಡದೆ ಶಾಸ್ತ್ರಕ್ಕೆ  ಹಟ್ಟಿಯ ಗೋಡೆಗೆ ಜೇಡಿ ಮಣ್ಣಿನ ದ್ರಾವಣದಿಂದ ಕೈಯನ್ನು ಅದ್ದಿ ಗೋಡೆಗೆಲ್ಲಾ ಕೈಯ ಅಚ್ಚನ್ನು ಹಾಕಿ ಸಿಂಗರಿಸಲಾಗುತ್ತದೆ.  
  • ಪ್ರತೀ ಹಸುವನ್ನೂ  ಕಾಲು ತೊಳೆದು (ಸ್ನಾನ ಮಾಡಿಸಿ) ಪೂಜೆ ಮಾಡಲಾಗುತ್ತದೆ. ಆರತಿ ಮಾಡಲಾಗುತ್ತದೆ.
  • ಕೊರಳಿಗೆ ಚೆಂಡು ಹೂವಿನ ಮಾಲೆಯನ್ನು ಹಾಕಿ ಶ್ರಿಂಗರಿಸಲಾಗುತ್ತದೆ.
  • ಆ ದಿನ ಹಾಲು ಕರೆಯದೆ ಕರುಗಳಿಗೆ ಸ್ವೇಚ್ಚೆಯಿಂದ ಹಾಲು ತಿನ್ನಲು ಬಿಡಲಾಗುತ್ತದೆ.
  • ಹಸು, ಕರು ಹೋರಿಗಳಿಗೆ ದೋಸೆ, ತಿಂಡಿ ತಿನಿಸು ಕೊಡುತ್ತಾರೆ.
  • ಮರುದಿನ ಮೇಯಲು ಹೊರಗೆ ಬಿಡುವಾಗ ಗಂಟೆ, ಶಂಖ ನಾದಗಳಿಂದ ಬೀಳ್ಕೊಡಲಾಗುತ್ತದೆ.

ದೀಪಾವಳಿಯ  ಇವೆಲ್ಲಾ ಸಂಭ್ರಮಗಳೂ ಯಾವುದೇ ಜಾತಿ, ಧರ್ಮಗಳಿಗೆ ಅನುಗುಣವಾಗಿ ಇರುವುದಲ್ಲ. ಮಾನವನ  ಬದುಕಿನ ಒಂದು ಹಬ್ಬ ವಾಗಿ ಇದೆ ಎಂದರೆ ಅತಿಶಯೋಕ್ತಿಯಲ್ಲ.ದೀಪಾವಳಿ ಎಂಬುದು ಒಂದು ಅತೀ ದೊಡ್ದ ವ್ಯಾಪಾರ ವ್ಯವಹಾರದ ಕಾಲ. ಬಟ್ಟೆ ಬರೆ, ವಾಹನ,ಯಂತ್ರ ಸಾಧನ, ಆಭರಣ ಖರೀದಿ ಹೂಡಿಕೆ , ಪಠಾಕಿ ಖರೀದಿ, ದಾನ ಧರ್ಮ ಎಲ್ಲದಕ್ಕೂ  ದೀಪಾವಳಿಯು ಒಂದು ಶುಭ ಮುಹೂರ್ತ. 

Leave a Reply

Your email address will not be published. Required fields are marked *

error: Content is protected !!