ಜಲ –ಇದು ಲಕ್ಷ್ಮಿ . ಜಲವನ್ನು ಸಂರಕ್ಷಿಸೊಣ- ಗೌರವಿಸೋಣ.

ಕೊಡದಲ್ಲಿ ನೀರು ಸೇದಿ ಕುಡಿಯುವ ಭಾಗ್ಯ

ನಮಗೆ ಬಾವಿ ತೋಡಿದಾಗ ಹೇರಾವರಿ ನೀರು ಸಿಕ್ಕಿದರೆ ಅದು ನಮ್ಮ ಮನೆಗೆ ಲಕ್ಷ್ಮಿಯ ಕೃಪೆ ದಯಪಾಲಿಸಿದೆ ಎಂದರ್ಥ. ಲಕ್ಷ್ಮಿ ಒಲಿದಳೆಂದು ಸ್ವೇಚ್ಚಾಚಾರ ಮಾಡಿದರೆ ಯಾವುದೇ ಸಮಯದಲ್ಲಿ ಆಕೆ ನಿರ್ಗಮಿಸಿದರೂ ಅಚ್ಚರಿ ಇಲ್ಲ. ಇದು ನೀರು ಸಂಪತ್ತು ಎಲ್ಲದಕ್ಕೂ ಅನ್ವಯ.ಭಯ ಭಕ್ತಿ  ಗೌರವದಿಂದ ಪ್ರಾಕೃತಿಕ ಕೊಡುಗೆಗಳನ್ನು ಅನುಭವಿಸಬೇಕು.  

ವಿಶ್ವ ಜಲ ದಿನ ಮಾರ್ಚ್ 22. ಜೀವ ಜಲದ ಪ್ರಾಮುಖ್ಯತೆ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕು. ವರ್ಷ ವರ್ಷವೂ ನಾವು ಜಲ ದಿನ ಎಂದು ಈ ದಿನವನ್ನು ಆಚರಿ ಸುತ್ತೇವೆ. ಜೊತೆಗೆ ನೀರಿನ ವಿಚಾರದಲ್ಲಿ ಸ್ವೇಚ್ಚಾಚಾರ ಮಾಡುತ್ತಾ ಮುಂದುವರಿಯುತ್ತೇವೆ. ಪಂಚಭೂತಗಳಲ್ಲಿ ಒಂದಾದ  ಜಲವನ್ನು ಸಂರಕ್ಷಿಸುವುದು- ಗೌರವಿಸುವುದು ಮಾನವನ ಆದ್ಯ ಕರ್ತವ್ಯ. ಜಲ ಕೇವಲ ನೀರು ಅಲ್ಲ. ಇದು ಜೀವ ಜಲ. ಯಾಕೆ ಎಂಬುದನ್ನು ಎಲ್ಲರೂ ಅರಿಯಲೇ ಬೇಕು. ಇಡೀ ಖಗೋಳದಲ್ಲಿ ನೀರಿಗೆ ಅದರದ್ದೇ ಆದ ಸ್ಥಾನ ವಿದೆ.

ಪ್ರಕೃತಿಯ ಅಮೂಲ್ಯ ಕೊಡುಗೆಗಳಲ್ಲಿ ಜಲ, ವಾಯು, ಅಗ್ನಿ ಪ್ರಮುಖವಾದುದು. ಇದನ್ನು ಹೇಗೂ ಬಳಕೆ ಮಾಡಬಹುದು. ಇದು ನಮ್ಮ ರಕ್ಷಕವೂ ಹೌದು, ವಿನಾಶಕವೂ ಹೌದು. ಆದ ಕಾರಣ ಅವುಗಳನ್ನು ಗೌರವಿಸುತ್ತಾ ಸಹಜೀವನ ನಡೆಸುವುದು ಪ್ರಾಮುಖ್ಯವಾದ ಸಂಗತಿ. ಇವುಗಳ ಮುನಿಸನ್ನು ಮಾನವ ಮಾತ್ರರಿಂದ ತಡೆಯಲು ಸಾಧ್ಯವಿಲ್ಲ. ಮಳೆರೂಪದಲ್ಲಿ ಭೂಮಿಗೆ ವರ್ಷಂಪ್ರತೀ ಮರೆಯದೇ ಪ್ರಕೃತಿ ಕೊಡುವ ನೀರನ್ನು ನಾವು ಗೌರವದಿಂದ ಕಾಣಬೇಕು.

ಜಲಕ್ಕಾಗಿ ಇಷ್ಟು ಕಷ್ಟ ಇದೆ.

  • ಮಾರ್ಚ್22 ನ್ನು ವಿಶ್ವ ಜಲ ದಿನ ಎಂದು ಆಚರಿಸಲಾಗುತ್ತದೆ.
  • ಜನತೆಗೆ ಜಲ ಸಂಪನ್ಮೂಲದ ಮಹತ್ವವನ್ನು ನೆನಪಿಸಿಕೊಡಲಿಕ್ಕಾಗಿ ಜಗತ್ತಿನಾದ್ಯಂತ ಈ ದಿನವನ್ನು ವಿಶೇಷ ದಿನವಾಗಿ ಪರಿಗಣಿಸಲಾಗಿದೆ.
  • ನೀರಿನ ಮೌಲ್ಯ ಏನು ಎಂಬುದನ್ನು ಜನತೆಗೆ ತಿಳಿಯಪಡಿಸುವುದೇ ಈ ಆಚರಣೆಯ ಉದ್ದೇಶ.

ನೀರಿನ ಮಹತ್ವ:

  • ಜಗತ್ತು ನಡೆಯುವುದೇ ನೀರಿನ ಆಧಾರದಲ್ಲಿ ಎನ್ನಬಹುದು.
  • ಒಂದು ದಿನ ಒಂದು ಲೋಟವೂ ನೀರು ಸಿಗದಿದ್ದರೆ ಏನಾಗಬಹುದು ಎಂದು ಯೋಚಿಸಿದರೆ ಅದರ ಎಲ್ಲಾ ಮಹತ್ವಗಳ ಅರಿವು ನಮಗೆ ಆಗುತ್ತದೆ.
  • ಯಾವಾಗಲೂ ಒಂದು ವಸ್ತು ಹೇರಳವಾಗಿ ನಮ್ಮಲ್ಲಿದ್ದಾಗ ಅದರ ಮಹತ್ವ ನಮಗೆ ಅರಿವಾಗುವುದಿಲ್ಲ.
  • ಅದು ಇಲ್ಲದಾಗ ಎಲ್ಲವೂ ಗೊತ್ತಾಗುತ್ತದೆ.
  • ಹಳೆಯ ಕುಬ್ಜವಾದ ಕಸಬರಿಕೆಯನ್ನು ಬಿಸಾಡುತ್ತೇವೆ. ಆದರೆ ಹೊಸತು ಯಾವಾಗಲೂ ಸಿಗುವುದೇ ಇಲ್ಲ. ಆಗ ನೆರವಿಗೆ ಬರುವುದು ಬಿಸಾಡಿದ ಕಸಬರಿಕೆ.
  • ನಮ್ಮ ಎಳೆ ವಯಸ್ಸು, ಬಿಸಿ ರಕ್ತದಲ್ಲಿ ತಂದೆ ತಾಯಿ, ಗುರು ಹಿರಿಯರಿಗೆ ಮನ ನೋಯಿಸುತ್ತೇವೆ.
  • ಅವರು ಅಗಲಿದ ನಂತರ ನಮಗೆ ಅದರ ಕೊರಗು  ನಿತ್ಯವೂ ಇರುತ್ತದೆ.
  • ಜಲವೂ ಹಾಗೆಯೇ. ಪ್ರಕೃತಿ ನಮಗೆ ಯಾವುದೇ ರೀತಿಯಲ್ಲಿ ಮೋಸ ಮಾಡುವುದಿಲ್ಲ.
  • ವರ್ಷ ವರ್ಷವೂ ಮಳೆ ರೂಪದಲ್ಲಿ ಜೀವಜಲವನ್ನು ಮರು ಪೂರಣ ಮಾಡಿ ಸಲಹುತ್ತದೆ.
  • ಆದರೆ ನಾವು ಅದರಲ್ಲಿ ಸ್ವೇಚ್ಚಾಚಾರ ಮಾಡುತ್ತಿದ್ದೇವೆಯೋ ಎಂದೆಣಿಸುತ್ತದೆ.
  • ಮನಬಂದಂತೆ ನೀರಿನ ಬಳಕೆ ಮಾಡುವುದು, ನೀರನ್ನು ಕಲುಷಿತ ಮಾಡುವುದು, ಮಳೆ ಬರಲು ಬೇಕಾಗುವ ಮರಮಟ್ಟುಗಳನ್ನು ನಾಶ ಮಾಡುವುದು ಮಾಡುವುದರಿಂದ ಈ ಸಂಪನ್ಮೂಲದ ಕೊರತೆ ಉಂಟಾಗುವ ಸಾಧ್ಯತೆ ಇದೆ.

ನೀರಿನ ದುರುಪಯೋಗ ಎಲ್ಲೆಲ್ಲಾ ಆಗುತ್ತಿದೆ:

  • ಸುಮಾರು 30-40 ವರ್ಷಗಳ ಹಿಂದೆ ನಮ್ಮ ಎಲ್ಲಾ ಮನೆ ಬಾಗಿಲಲ್ಲಿ ಕೈಕಾಲು ತೊಳೆಯಲು ಇದ್ದ ವ್ಯವಸ್ಥೆ  ಇಂದು ಬದಲಾವಣೆ ಆಗಿ ದುಪ್ಪಟ್ಟು, ಮೂರು ಪಟ್ಟು ನೀರನ್ನು ಪೋಲು ಮಾಡುತ್ತಿದೆ. 
  • ಆಗ ಪ್ರತೀಯೊಬ್ಬರ ಮನೆ ಮುಂದೆ ಒಂದು ತೆಂಗಿನ ಮರವೋ ಅಥವಾ ಇನ್ಯಾವುದೋ ಫಲ ಕೊಡುವ ಮರದ ಬುಡದಲ್ಲಿ  ಹಂಡೆ ತರಹದ (ಕಪ್ಪಾಲು, ಹೂಜಿಯಾಕಾರದ ದೊಡ್ಡ ಮಣ್ಣಿನ ಪಾತ್ರೆ) ಮಣ್ಣಿನ ಪಾತ್ರೆ ಇಟ್ಟು ಅದರ ಸುತ್ತ ಮಣ್ಣು ಮೆತ್ತಿ ಬಾವಿಯಿಂದ ನೀರು ಸೇದಿ ಅದಕ್ಕೆ ತುಂಬಿ ಇಡಲಾಗುತ್ತಿತ್ತು.
  • ಅದಕ್ಕೆ ಹೆಚ್ಚಾಗಿ ತೆಂಗಿನ ಕಾಯಿಯ ಗೆರಟೆಯೇ (ತೆಂಗಿನ ಕಾಯಿಯ ಚಿಪ್ಪು) ನೀರು ತೆಗೆಯುವ ಮಗ್ ಆಗಿತ್ತು.
  • ಪಾತ್ರೆ, ನೀರು ತುಂಬುವ ಕಷ್ಟ ಎಲ್ಲರಿಗೂ ಗೊತ್ತಿದ್ದ ಕಾರಣ ಒಬ್ಬ ಕೈಕಾಲು ತೊಳೆಯಲು ಒಂದೆರಡು  ಗೆರಟೆ ಮಾತ್ರ  ನೀರು ಮುಗಿಸುತ್ತಿದ್ದರು.
  • ಈಗ ಅದೆಲ್ಲಾ ಎಲ್ಲೂ ಕಾಣಸಿಗುವುದಿಲ್ಲ.
  • ಅದೆಲ್ಲಾ ವ್ಯವಸ್ಥೆಗಳನ್ನು ನಳ್ಳಿಗಳೂ ಆಕ್ರಮಿಸಿವೆ.
  • ಈ ನಳ್ಳಿ ಅದುಮಿ ಕೈಕಾಲು ತೊಳೆಯಲು ಒಬ್ಬನು ಮುಗಿಸುವ ನೀರು ಕನಿಷ್ಟ 10 ಲೀ. ಹಿಂದಿನ 1 ಲೀ. ಎಲ್ಲಿ ಇಂದಿನ 10 ಲೀ. ಎಲ್ಲಿ?
  • ನೀರು ಕಷ್ಟದ ಸೊತ್ತು ಎಂಬುದರ ಪರಿಜ್ಞಾನ ನಮ್ಮಲ್ಲಿರಬೇಕು.
  • ಇದನ್ನು ಎಲ್ಲಿಂದ ತೆಗೆಯುತ್ತೇವೆ, ಅಲ್ಲಿಗೆ ಎಲ್ಲಿಂದ  ಬರುತ್ತದೆ ಎಂಬುದರ ಕಲ್ಪನೆ ನಮ್ಮಲ್ಲಿದ್ದರೆ ನಾವು ಅದನ್ನು ಮನಬಂದಂತೆ ಬಳಕೆ ಮಾಡಲಾರೆವು.
  • ಮನೆ ಬಳಕೆಯ ನೀರಿನಿಂದಾದಿಯಾಗಿ, ಕೃಷಿ ಬಳಕೆ ವರೆಗೂ ನೀರಿನ ಮಿತವ್ಯಯಕ್ಕೆ ಏನೆಲ್ಲಾ ವ್ಯವಸ್ಥೆಗಳಿವೆಯೋ ಅದನ್ನೆಲ್ಲಾ ಮಾಡಲೇ ಬೇಕು.
  • ಕೊಳವೆ ಬಾವಿ ಅನಿವಾರ್ಯವಾದರೂ ಅದರ ನೀರಿನ ಬಳಕೆಯಲ್ಲಿ ಮಿತವ್ಯಯ ಅಗತ್ಯವಾಗಿ ಮಾಡಬೇಕು.
  • ಅಂತರ್ಜಲ ಎಂಬ ನೀರಿನ ಮೂಲಕ್ಕೆ ಕನ್ನ  ಹಾಕುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡೋಣ.
  • ಸಾಧ್ಯವಾದಷ್ಟು ಕೈಕಾಲು ತೊಳೆದ ನೀರು, ಸ್ನಾನದ ನೀರು, ಪಾತ್ರೆ ತೋಲೆದ ನೀರನ್ನು ಬೆಳೆಗಳಿಗೆ ಬಳಕೆ ಮಾಡಿಕೊಳ್ಳಬೇಕು.
  • ಸಾವಯವ ತ್ಯಾಜ್ಯಗಳನ್ನು ಮುಚ್ಚಿಗೆ ಹಾಕುವ ಮೂಲಕ ನೀರಿನ ಆವೀಕರಣವನ್ನು ತಡೆಯಬೇಕು.
  • ಮಣ್ಣಿನ ಫಲವತ್ತತೆ ಹೆಚ್ಚಿಸಿ, ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವಂತೆ  ಮಾಡಬೇಕು. ಕೆರೆ, ಕಟ್ಟ ಮುಂತಾದವುಗಳ ಮೂಲಕ ಹೇರಳ ನೀರಿನ ಮೂಲಗಳು ಸಿಗುವುದಿದ್ದರೆ ಅದನ್ನು ಬಳಕೆ ಮಾಡಬೇಕು.   
  •  ಬಾವಿ ನೀರನ್ನು ಸೇದುವ ಆರೋಗ್ಯಕರ ಹವ್ಯಾಸವನ್ನು ಬಿಡದೆ, ವ್ಯಾಯಾಮಕ್ಕಾದರೂ ಇದನ್ನು ಮಾಡುತ್ತಿರಬೇಕು.

Do not expect this in future

ಸಾಧ್ಯವಾದಷ್ಟು ಮಿತ ಬಳಕೆ ಮಾಡೋಣ:

  • ಜಲ ಎಂಬುದು ನಮಗೆ ಮಾತ್ರವಲ್ಲ. ಭೂಮಿಯಲ್ಲಿ ಬದುಕುವ ಸಸ್ಯಗಳು, ಪ್ರಾಣಿಗಳು, ಸೂಕ್ಷ್ಮಾಣು ಜೀವಿಗಳು ಎಲ್ಲದಕ್ಕೂ ಅಗತ್ಯವಾಗಿ ಬೇಕು.
  • ಎಲ್ಲರೂ ಇದರ ಬಳಕೆಗೆ ಹಕ್ಕುದಾರರು. ಈ ತನಕ ನಮಗೆ ಇದರ ಕೊರತೆ ಆಗಿರಲಿಲ್ಲ.
  • ಈಗ ಸ್ವಲ್ಪ ಸ್ವಲ್ಪವೇ ಜಲದ ಕೊರತೆ ಪ್ರಾರಂಭವಾಗಿದೆ.
  • ಅಂತರ್ಜಲ ಎಂಬ ರಕ್ಷಿತ ನೀರಿನ ಮೂಲಕ್ಕೆ ನಾವು ಕೈಹಾಕಿದ ತರುವಾಯ ತೊಂದರೆಗಳು ಪ್ರಾರಂಭವಾಗಿದೆ.
  • ಇದನ್ನು ನಾವೂ ಈಗಾಗಲೇ ಗಮನಿಸಿದ್ದೇವೆ ಸಹ.
  • ಇನ್ನೂ ಇನ್ನೂ ನಾವು ಇದರಲ್ಲಿ ಮಕ್ಕಳಾಟಿಕೆ ಮಾಡುವುದು ಬೇಡ.
  • ಬೆಳೆ ಪೋಷಣೆಗೆ, ನಮ್ಮ ಬಳಕೆಗೆ ನೀರು ಬೇಕು.
  • ಅದನ್ನು ಹಿತಮಿತವಾಗಿ ಬಳಕೆ ಮಾಡೋಣ. ಬೆಳೆಗೆ ಎಷ್ಟು ಬೇಕೋ ಆಷ್ಟನ್ನು ಬಳಸುತ್ತಾ, ಅನವಶ್ಯಕ ಪೋಲಾಗುವ ನೀರನ್ನು ತಡೆಯುತ್ತಾ, ನೀರಿನ ಬಳಕೆಯಲ್ಲಿ ಮಿತವ್ಯಯವನ್ನು ಸಾಧಿಸಿದರೆ ನೀರು ನಮ್ಮ ಕೈಬಿಡಲಾರದು.
  • ಕೃಷಿಕರಾದ ನಾವು ಬೆಳೆಗಳಿಗೆ ಬೇಕಾದಷ್ಟೇ ನೀರನ್ನು ಬಳಕೆ ಮಾಡೋಣ.
  • ಕೆರೆ ಹೊಳೆಗಳಲ್ಲಿ ಅನವಷ್ಯಕವಾಗಿ ಹರಿದು ಸಮುದ್ರ ಸೇರುವ ನೀರನ್ನು ಸಾಧ್ಯವಾದಷ್ಟು ತಡೆದು, ನೆಲಕ್ಕೆ ಮರು ಪೂರಣ ಮಾಡೋಣ.
  • ನೆಲದ ಮೇಲಿನ ನೀರು ಆವೀಕರಣ ತಡೆಯಲು, ನೆಲದಲ್ಲಿ ಮುಚ್ಚಿಗೆಯಾಂತಹ ಹಸುರು ಹೊದಿಕೆ ಹೊದಿಸೋಣ.

ನಮ್ಮ ಮಕ್ಕಳಿಗೆ ನೀರು ಏನು, ಇದರ ಮಿತ ಬಳಕೆ ಯಾಕೆ ಅಗತ್ಯ ಎಂಬುದರ ಶಿಕ್ಷಣ ನೀಡೋಣ. ಕಾಲ ಕಾಲಕ್ಕೆ ಸರಿಯಾಗಿ ವರ್ಷಧಾರೆ ಆಗುತ್ತಿದ್ದು, ಭೂಮಿಯು ಹಸುರು ಹೊದಿಕೆಯ ಮೂಲಕ ಕಂಗೊಳಿಸುತ್ತಾ ಇರಲಿ ಎಂಬ ಮನೋಭಾವನೆಯನ್ನು ಎಲ್ಲರೂ ತಳೆಯೋಣ.ಇತ್ತೀಚೆಗೆ ನಮ್ಮ ಸರಕಾರ ಕಿರು ನೀರಾವರಿ ಯೋಜನೆಯಂತೆ ಹರಿದು ಹೋಗುವ ಹಳ್ಳ, ಹೊಳೆಗೆ ಅಣೆಕಟ್ಟು, ಕಿಂಡಿ ಆಣೆಕಟ್ಟು ಮಾಡುವ ಉತ್ತಮ ಕೆಲಸ ಮಾಡಿರುವುದು ನಿಜಕ್ಕೂ ಶ್ಲಾಘನೀಯ.  

error: Content is protected !!