ಒಕ್ಕಲುತನ ಮಾಡುತ್ತಾ ಜಗತ್ತಿನಲ್ಲಿ ಎಲ್ಲರಿಗೂ ಅನ್ನ ಕೊಡುತ್ತಾ ಬಂದವರು ರೈತರು. ಎಲ್ಲರೂ ಜೀವಮಾನ ಪರ್ಯಂತ ಬೇರೆಯವರ ಋಣದಲ್ಲಿದ್ದರೆ ಅದು ರೈತರಲ್ಲಿ. ರೈತರೆಂದರೆ ನಿತ್ಯ ಸ್ಮರಣೀಯರು. ಅದರೂ ಇಂದು ನಮಗಾಗಿ ವಿಶೇಷ ದಿನ.
ಡಿಸೆಂಬರ್ 23 ಇದು ಜಾಗತಿಕ ರೈತರ ದಿನ. ಅಥವಾ ಕಿಸಾನ್ ದಿವಸ್. ಈ ದಿನ ನಮ್ಮ ದೇಶದ ಮಾಜೀ ಪ್ರಧಾನಿ ಛೌಧುರಿ ಚರಣ್ ಸಿಂಗ್ ಇವರ ಜನ್ಮ ದಿನ. ಚೌಧುರಿ ಚರಣ್ ಸಿಂಗ್ ಇವರು ರೈತರ ಮುಖಂಡರು. ಸರಳ ಮನುಷ್ಯ. ಇವರು ಜೈ ಜವಾನ್ ಜೈ ಕಿಸಾನ್ ಎಂಬ ಧ್ಯೇಯ ವಾಖ್ಯವನ್ನು ಕೊಟ್ಟವರು.ನಮ್ಮ ರಾಜ್ಯವಾದ ಕರ್ನಾಟಕದಲ್ಲಿ ರೈತರ ದಿನಾಚರಣೆಯನ್ನು ಚೌಧುರಿ ಚರಣ್ ಸಿಂಗ್ ಜೊತೆಗೆ ರೈತರ ಅಸ್ತಿತ್ವವನ್ನು ತೋರಿಸಿಕೊಟ್ಟ ಮಹಾ ಚೇತನ ದಿವಂಗತ ಪ್ರೊಫೆಸರ್ ಎಂ ಡಿ ನಂಜುಂಡ ಸ್ವಾಮಿಯವರ ನೆನಪು ಮಾಡುತ್ತಾ ಆಚರಿಸಲಾಗುತ್ತದೆ.
ರೈತರು ತಾನು ಬದುಕುವುದರೊಂದಿಗೆ ಸಮಾಜದಲ್ಲಿ ಇತರರನ್ನೂ ಬದುಕಿಸುವವರು. ಹಾಲು ಉತ್ಪಾದಿಸುವ ರೈತರು, ಹಾಲು ಉತ್ಪಾದಕ ಸಂಘ, ಮಹಾ ಮಂಡಲವನ್ನು ಸಾಕುತ್ತಾರೆ.ಕೃಷಿ ಮಾಡಿ, ಉತ್ಪನ್ನ ಮಾರಾಟ ಮಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನು ಸಾಕುತ್ತಾರೆ. ಅದೆಷ್ಟೋ ವ್ಯಾಪಾರಿಗಳನ್ನು, ಅದೆಷ್ಟೋ ಉದ್ದಿಮೆಗಳನ್ನು, ಲೆಕ್ಕ ಇಲ್ಲದಷ್ಟು ಕೃಷಿ ಒಳಸುರಿ ( Agriculture inputs) ಮಾರಾಟಗಾರರನ್ನು, ಉತ್ಪಾದಕರನ್ನು ಸಾಕುತ್ತಾರೆ. ಈಗ ಹೇಳಿ ಸಮಾಜದಲ್ಲಿ ಹೃದಯ ಶ್ರೀಮಂತಿಕೆಯಲ್ಲಿ ಕೃಷಿಕ ಅಥವಾ ರೈತಷ್ಟು ಮೇಲೆ ಇರುವವರು ಯಾರಾದರೂ ಇದ್ದಾರೆಯೇ?
ಈ ದಿನದಿಂದ ನಾವು ಬದಲಾಗೋಣ:
- ರೈತರನ್ನು ಎಲ್ಲರೂ ಏಕವಚನದಲ್ಲಿ ಸಂಬೋಧಿಸುವವರು.
- ರೈತರನ್ನು ಅರೆ ಬರೆ ಉಡುಗೆಯಲ್ಲೇ ಬಿಂಬಿಸುವವರು.
- ಅನ್ನದಾತ ಎನ್ನುತ್ತಾರೆ. ಆದರೆ ಅವರಿಗೆ ಕೊಡುವ ಗೌರವ ಅಷ್ಟಕ್ಕಷ್ಟೇ .
- ಇದು ಸಮಾಜದಲ್ಲಿ ನಡೆಯುವ ವಸ್ತುಸ್ಥಿತಿ.
- ಈ ದಿನವಾದರೂ ಎಲ್ಲರೂ ರೈತರ ಬಗ್ಗೆ ಸ್ವಲ್ಪ ಯೋಚಿಸಿ.
- ಇಂದು ನಾವು ಉಂಡು ತಿಂದು ಬದುಕಿದ್ದರೆ ಅದು ರೈತರ ಪರಿಶ್ರಮದ ಕಾರಣದಿಂದ.
- ಇವರನ್ನು ಯಾವುದೇ ಕಾರಣಕ್ಕೆ ರೈತ ಎನ್ನಬೇಡಿ.
- ರೈತರು ಎಂದು ಬಹುವಚನದಲ್ಲಿ ಸಂಬೋಧಿಸುವುದನ್ನು ಪ್ರಾರಂಭಿಸೋಣ.
- ಇದು ಅವರ ಋಣವನ್ನು ಬಿಟ್ಟು ಬದುಕಲಾರದವರಾದ ನಾವು ಕೊಡುವ ಗೌರವವಾಗಿರಲಿ.
- ಯಾವುದೇ ಕಾರಣಕ್ಕೆ ಇವರನ್ನು ಅರೆ ನಗ್ನ ಸ್ಥಿತಿಯಲ್ಲಿ ಪೋಸ್ಟರುಗಳು, ಹಸ್ತ ಪ್ರತಿಗಳಲ್ಲಿ ಮುದ್ರಿಸಿ ಪ್ರಕಟಿಸುವುದನ್ನು ಬಿಡುವ ಪ್ರತಜ್ಞೆ ಮಾಡೋಣ.
- ರೈತರೂ ಇತರ ಸಮಾಜದ ಇತರ ನಾಗರೀಕರಂತೆ ಬದುಕುವವರು.
ಈ ಮಧ್ಯೆ ನಾವು ಖುಷಿ ಪಡಬೇಕಾದ ಸಂಗತಿಯೆಂದರೆ ಇಂದು ರೈತರ ಗುರುತು (Identity) ಬದಲಾಗಿದೆ. ರೈತ ಸಂಘಟನೆಗಳಿಂದಾಗಿ, ಸರಕಾರದ ಕ್ರಮಗಳಿಂದಾಗಿ ಈ ಸ್ಥಿತಿ ಬಂದಿದೆ. ರೈತರನ್ನು ಸ್ವಲ್ಪ ಮಟ್ಟಿಗೆ ಗೌರವಿಸುವ ವರ್ಗ ಇದೆ. ಇದು ಇನ್ನೂ ಹೆಚ್ಚಾಗುತ್ತದೆ.
ಆದಾಯ ಹೆಚ್ಚಳಕ್ಕೆ ಅಗತ್ಯ:
- ಈರುಳ್ಳಿಯ ಬೆಲೆ ಹೆಚ್ಚಾದರೆ ನಾವು ಭಾರೀ ಮಾತಾಡುತ್ತೇವೆ.
- ಹಾಲಿನ ದರ ತುಸು ಏರಿದರೆ ಗಲಾಟೆ ಮಾಡುತ್ತೇವೆ.
- ನಿವೇನಾದರೂ ರೈತರಿಗೆ ಇದರಿಂದ ಲಾಭವಾಗುತ್ತದೆ ಎಂದು ತಿಳಿದ್ದಿದ್ದೀರಾ?
- ವಾಸ್ತವಿಕತೆ ಎಂದರೆ ಹಾಲಿಗೆ ರೂ. 80 ಸಿಕ್ಕಿದರೂ ಅದು ಲಾಭದಾಯಕವಾಗುವುದಿಲ್ಲ.
- ಬೆಳೆಗಾರರ ಕಷ್ಟ ಕೂಲಿಯವರಿಗಿಂತ ಕೆಳಗಿನದ್ದು ಇದು ವಾಸ್ತವ.
- ಗ್ರಾಹಕರಿಗೆ ಹೊರೆಯಾಗಬಾರದು ಎಂಬ ಉದ್ದೇಶದಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಕಡಿಮೆ ಬೆಲೆ ಆಗಬಾರದು.
- ರೈತರು ಎಂದರೆ ಸಮಾಜದಲ್ಲಿ ಎಲ್ಲರಿಗಿಂತ ಶ್ರೀಮಂತ ವರ್ಗವಾಗಿರಬೇಕಿತ್ತು.
- ಇದ್ದರೆ ಅದು ಹೃದಯ ಶ್ರೀಮಂತಿಕೆಯಲ್ಲಿ. ಮನೆ ಬಾಗಿಲಿಗೆ ಹೋದವರನ್ನು ಕುಳ್ಳಿರಿಸಿ ನೀರು ಬೇಕೇ ಎಂದು ಕೇಳುವ ಒಂದು ವರ್ಗ ಇದ್ದರೆ ಅದು ರೈತರು ಮಾತ್ರ.
- ಅದೇನು ದೈವ ಲೀಲೆಯೋ ತಿಳಿಯದು ,ಸಮಾಜದಲ್ಲಿ ಕಡು ಬಡವರು ಎಂದರೆ ರೈತರು.
- ಎಷ್ಟೇ ಸಂಪಾದನೆ ಮಾಡಲಿ ಉತ್ಪಾದನಾ ಖರ್ಚು ಕಳೆದಾಗ ಕಿಸೆ ಖಾಲಿಯಾಗುವುದೇ.
- ಅದನ್ನು ಯಾರಿಗೂ ತೋರಿಸದೇ ಬದುಕುವವರೇ ರೈತರು.
- ರೈತರ ಆಕಾಂಕ್ಷೆಗಳು ಸಣ್ಣದು. ಆದ ಕಾರಣ ಅವರಿಗೆ ಸಮಾಜದಲ್ಲಿ ಇತರರ ಬದುಕುವ ಶೈಲಿಗಳು ಅಣಕಿಸುತ್ತಿಲ್ಲ.
ರೈತರು ಬಡವರಾದುದು ಹೀಗೆ?
- ನಮ್ಮ ದೇಶವೂ ಸೇರಿದಂತೆ ಪ್ರಪಂಚದ ಯಾವ ದೇಶದಲ್ಲೂ ರೈತರು ಬೆಳೆದ ಉತ್ಪನ್ನಕ್ಕೆ ಮಾರುಕಟ್ಟೆ ಬೆಲೆ ನಿರ್ಧಾರವಾಗುವುದು ಇತರರಿಂದ.
- ಆದ ಕಾರಣ ಇವರು ಬಡವರೇ ಆಗಿದ್ದಾರೆ.
- ಅದು ಬದಲಾಗುವ ತನಕ ಬಡವರಾಗಿಯೇ ಇರುತ್ತಾರೆ.
- ನಮ್ಮ ದೇಶದಲ್ಲಿ ಸುಮಾರು 80% ಜನ ಕೃಷಿಕರು.
- ಇವರಲ್ಲಿ ಸುಮಾರು 5% ತನಕದ ಜನ ತಕ್ಕಮಟ್ಟಿಗೆ ಇದ್ದಾರೆಯಾದರೂ 75% ಜನ ಮಾತ್ರ ಬಡತನದಲ್ಲೇ ಒಕ್ಕಲುತನ ಮಾಡುತ್ತಿರುವವರು.
- ನಮ್ಮಲ್ಲಿ ¼ ಎಕ್ರೆ ಹಿಡುವಳಿಯಿಂದಾರಂಭಿಸಿ ಎಲ್ಲರೂ ಕೃಷಿಕರೇ ಆಗಿದ್ದಾರೆ.
ದೇಶದ ರೈತರು ಸಾಲದಲ್ಲಿ ಬಿದ್ದಿದ್ದಾರೆ:
- ನಮ್ಮ ದೇಶದಲ್ಲಿ ಕೃಷಿ ನಡೆಯುವುದೇ ಬಂಡವಾಳದ ಮೇಲೆ.
- ಬಂಡವಾಳವೇ ರೈತರಲ್ಲಿ ಇಲ್ಲದ್ದು.
- ಇದಕ್ಕೆ ಬ್ಯಾಂಕು, ಲೇವಾದೇವಿದಾರರ ಮೂಲಕ ಹಣ ಕೂಡಿಸಿ ಕೃಷಿ ಮಾಡುತ್ತಾರೆ.
- ನೀರಿಗಾಗಿ ಹೋರಾಡುತ್ತಾರೆ. ಇದರಿಂದ ಇಂದು ನಮ್ಮ ದೇಶದ 95% ರೈತರು ಸಾಲದಲ್ಲೇ ಇದ್ದಾರೆ.
- ಒಮ್ಮೆ ಸಾಲ ಪಡೆದವ ನಾನು ವೃತ್ತಿಯಲ್ಲಿ ಸ್ವಾವಲಂಬಿಯಾಗಿ ಸಾಲ ಬೇಡ ಎಂಬ ಮಟ್ಟಕ್ಕೆ ಬಂದ ರೈತರೇ ಇಲ್ಲ.
- ದೇಶದಾದ್ಯಂತ ಬಹುತೇಕ ರೈತರ ಭೂಮಿಯು ಬ್ಯಾಂಕಿಗೆ ಸಾಲಕ್ಕಾಗಿ ಅಡಮಾನವಾಗಿದೆ.
ರೈತರ ಏಳಿಗೆಗೆ ಪರಿಣಾಮಕಾರೀ ಯೋಜನೆ ಅಗತ್ಯ:
- ಈ ತನಕ ಎಲ್ಲಾ ಸರಕಾರಗಳೂ ತಮ್ಮ ಲಾಭಕ್ಕೋಸ್ಕರ ರೈತರನ್ನು ಒಡೆಯುತ್ತಾ ಅವರನ್ನು ಛಿಧ್ರ ಮಾಡುತ್ತಾ ಬಂದಿದ್ದಾರೆ.
- ಯಾವ ಸರಕಾರದ ಯೋಜನೆಗಳೂ ರೈತರ ನೈಜ ಏಳಿಗೆಗಾಗಿ ನಡೆದಿಲ್ಲ.
- ಇನ್ನು ಕೆಲವೇ ಸಮಯದಲ್ಲಿ ರೈತರ ಸ್ಥಿತಿ ಬದಲಾಗಲಿದೆ ಎನ್ನಲಾಗುತ್ತಿದೆ.
- ರೈತರ ಆದಾಯ ದ್ವಿಗುಣವಾಗಲಿದೆ ಎಂದು ಹೇಳುತ್ತಾರೆ.
- ಇದನ್ನು ಕಾದು ನೋಡಬೇಕಾಗಿದೆ.
- ರೈತರ ಆದಾಯ ದ್ವಿಗುಣವಾಗುವ ಮುಂಚೆಯೇ ರೈತರಿಗೆ ಅನಿವಾರ್ಯವಾಗಿ ಬೇಕಾಗುವ ಕೃಷಿ ಒಳಸುರಿಗಳ ಬೆಲೆ ದುಪ್ಪಟ್ಟಾಗಿದೆ.
ರೈತರಿಗೆ ಮುಖಂಡತ್ವ ಅಗತ್ಯವಾಗಿದೆ:
ಕರ್ನಾಟಕದಲ್ಲಿ ಅಂದು ಪ್ರೊಫೆಸರ್ ನಂಜುಂಡ ಸ್ವಾಮಿಯವರು ರೈತರ ಅಸ್ತಿತ್ವವನ್ನು ಎತ್ತಿ ತೋರಿಸಿದ್ದರೆ, ಅವರ ಮಾತಿಗೆ ನಡೆಗೆ ಸರಕಾರವೇ ನಡುಗುತ್ತಿದ್ದರೆ, ಈಗ ಅವರ ಶ್ರಮ ಅವರ ಜೊತೆಗೆ ಹೋಗಿದೆ. ಇನ್ನಾದರೂ ಇವರ ತರಹ ಯಾರಾದರೂ ರೈತರ ಪರವಾಗಿ ನಿಲ್ಲುವ ಧೀಮಂತ ನಾಯಕರು ಬರಲಿ ಎಂದು ಈ ದಿನ ಆಶಿಸೋಣ.
ರೈತರಿಗೆ ಕಿವಿ ಮಾತು:
- ರೈತರೆಲ್ಲರೂ ಒಗ್ಗಟ್ಟಾಗಬೇಕು. ಆಗ ಮಾತ್ರ ಈ ದೇಶದಲ್ಲಿ ಅತೀ ದೊಡ್ಡ ಶಕ್ತಿಯಾಗುತ್ತೇವೆ.
- ರೈತ ಶಕ್ತಿ ಎಂದರೆ ದೇಶದಲ್ಲಿ ಸೈನಿಕ ಶಕ್ತಿಗಿಂತಲೂ ಮಿಗಿಲಾದುದು ಎಂಬುದು ಸತ್ಯ.
- ಒಳ ಜಗಳ, ರಾಜಕೀಯಕ್ಕೆ ಯಾವಾಗಲೂ ತಲೆ ಹಾಕಬೇಡಿ.
- ಹತ್ತು ಹಲವು ರೈತ ಸಂಘಟನೆಗಳನ್ನು ಕಟ್ಟಿ ರೈತರನ್ನು ಒಡೆಯಬೇಡಿ.
- ಪರಸ್ಪರ ನೆರೆಹೊರೆಯ ರೈತರು ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಾಗಬೇಕು.
- ಹೊಸ ಹೊಸ ತಾಂತ್ರಿಕತೆಯನ್ನು ಬಳಕೆ ಮಾಡಿ ಸಾಧ್ಯವಾದಷ್ಟು ಹೆಚ್ಚು ಉತ್ಪಾದನೆ ಮಾಡಿ.
- ಚುನಾವಣೆಯ ಸಮಯದಲ್ಲಿ ತಮ್ಮ ಪ್ರಾಬಲ್ಯವನ್ನು ತೋರಿಸಲು ಮರೆಯದಿರಿ.
- ಕೃಷಿ ಭೂಮಿಯನ್ನು ಮಾರಾಟ ಮಾಡುವುದು ಮಾಡಬೇಡಿ.
- ಕೃಷಿ ಮಾಡಲು ಕಷ್ಟ ವಾದರೆ ಮಾಡುವವರಿಗೆ ಲೀಸ್ ಆಧಾರದಲ್ಲಿ ಹೊಲವನ್ನು ಕೊಡಿ.
- ಆದಾಯದಲ್ಲಿ ಜೀವನ ಬಧ್ರತೆಗಾಗಿ ಉಳಿತಾಯ ಮಾಡಿ.
- ನಮ್ಮ ವೃದ್ದಾಪ್ಯದಲ್ಲಿ ನಮ್ಮನ್ನು ಕಾಯುವುದು ನಾವು ಮಾಡಿಟ್ಟ ಉಳಿತಾಯವೇ ಒಂದೇ.
- ಹೊಲ, ಮನೆ ಅಲ್ಲ. ಇವೆಲ್ಲಾ ಆಸ್ತಿಗೆ ನಮ್ಮ ಮಕ್ಕಳು ಹಕ್ಕುದಾರರಾಗಲೇ ಬೇಕಾಗುತ್ತದೆ.
- ಆ ಮೇಲೆ, ನಾವು ಖಾಲಿಯಾಗುತ್ತೇವೆ.
- ಅದಕ್ಕಾಗಿ ಕೊನೆ ಉಸಿರು ಇರುವ ತನಕ ಒಂದಷ್ಟು ಉಳಿತಾಯದ ಮೊತ್ತವನ್ನು ಇಟ್ಟುಕೊಳ್ಳಿ.
- ಅದರ ಸಿಹಿಯ ಆಸೆಗಾದರೂ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವವರು ಇರುತ್ತಾರೆ.
ಒಕ್ಕಲುತನ ಎಂಬ ವೃತ್ತಿ ನಿಜವಾಗಿಯೂ ಒಂದು ಪುಣ್ಯ ಕಾರ್ಯ. ಆದಾಯ ಇತರ ಮೂಲಗಳಿಗಿಂತ ಕಡಿಮೆ ಇರಬಹುದು. ಆದರೆ ಇದರಲ್ಲಿರುವ ಸುಖ ಮತ್ತೆ ಎಲ್ಲೂ ಸಿಗಲಾರದು. ಹಾಗಾಗಿ ನಮ್ಮನ್ನು ನಾವು ಕೃಷಿಕ, ರೈತ ಎಂದು ಸಾರ್ವಜನಿಕವಾಗಿ ಹೇಳುಕೊಳ್ಳಲು ಹಿಂಜರಿಯಬೇಡಿ.
ಜೈ ಕಿಸಾನ್- ನಾವೇ ಮಹಾನ್.