ಜೇನು ಹಿಡಿಯಲು ಇದು ಸೂಕ್ತ ಸಮಯ.

ಪೆಟ್ಟಿಗೆಗೆ ಹಾಕಲು ಜೇನು ನೊಣ

ಬಹಳ ಜನ ನನಗೊಂದು ಜೇನು ಕುಟುಂಬ ಬೇಕು, ಹೇಗಾದರೂ  ಜೇನು ಸಾಕಬೇಕು ಎಂದು ಇಚ್ಚೆ ಪಡುತ್ತಾರೆ. ಜೇನು ಹಿಡಿಯುವುದು ಕಷ್ಟವಲ್ಲ. ಪಾಲನೆಯೂ ಕಷ್ಟದ್ದಲ್ಲ.  ಜೇನು ಹಿಡಿಯುವವರಿಗೆ ಅಗತ್ಯ ಬೇಕಾಗಿರೋದು ಧೈರ್ಯ  ಹಾಗೂ ತಾಳ್ಮೆ.

  • ಹೊಸತಾಗಿ ಜೇನು ಕುಟುಂಬ ತರಲು, ಅಥವಾ ಹೊಸ ಕುಟುಂಬ ಪೆಟ್ಟಿಗೆಗೆ ಸೇರಿಸಲು  ದೀಪಾವಳಿ   ಸಮಯ  ಹೆಚ್ಚು ಸೂಕ್ತ.
  • ಈ ಸಮಯದಲ್ಲಿ ಅವು ಕಷ್ಟ ಇಲ್ಲದೆ ಸೆಟ್ ಆಗುತ್ತವೆ.

ಯಾಕೆ ಆ ಸಮಯ ಸೂಕ್ತ:

  • ನಿರ್ದಿಷ್ಟ ಸಮಯದಲ್ಲಿ ಕೂಡಿಸಿದ ಜೇನು ಕುಟುಂಬಗಳು ನಿರ್ದಿಷ್ಟ ಸಮಯಕ್ಕೆ ಪಾಲಾಗುತ್ತವೆ, ಕುಟುಂಬ ಸಧೃಢವಾಗುತ್ತದೆ, ಜೇನನ್ನೂ ಮಾಡುತ್ತವೆ. ಅದಕ್ಕೆ ಸೂಕ್ತ ಕಾಲಾವಧಿ ಮಳೆಗಾಲ ಕಳೆದ ನವರಾತ್ರೆಯ ನಂತರದ ದಿನಗಳು.
  • ಜೇನು ಕುಟುಂಬವನ್ನು ಎಲ್ಲಾ ಸಮಯದಲ್ಲೂ ಪೆಟ್ಟಿಗೆಯಲ್ಲಿ ಕೂರಿಸಬಹುದಾದರೂ ಈ ಸಮಯದಲ್ಲಿ  ಕೂರಿಸಿದರೆ ನಿರ್ವಹಣೆ  ಸುಲಭ.
  • ಮಳೆಗಾಲದಲ್ಲಿ ಆಹಾರದ ಲಭ್ಯತೆ ಇಲ್ಲದೆ ಬಿಸಿಲು ಬಂದಾಗ ಹೊರ ಹಾರಿ ಬೇರೆ ಸ್ಥಳ ಹುಡುಕುವುದು ಜೇನು ನೊಣಗಳ ಅಭ್ಯಾಸ.
  • ಶ್ರಾವಣದ ನಂತರ ಕಾರ್ತೀಕ  ಮಾಸದ ವರೆಗೆ ಬಿಸಿಲಿಗೆ ಅವು ಹೊರಗೆ ಹಾರಿ ಹೊಸ ಜಾಗ ಹುಡುಕುತ್ತವೆ. ಅವುಗಳನ್ನು ಉತ್ತಮ ಮನೆಯಲ್ಲಿ ( ಪೆಟ್ಟಿಗೆಯಲ್ಲಿ ) ಹಿಡಿದು ಹಾಕಿದರೆ ಅಲ್ಲೇ ಅವು ಅಭಿವೃದ್ದಿ ಹೊಂದುತ್ತವೆ.

ಸುಲಭದಲ್ಲಿ ಜೇನು ನೊಣ ಹಿಡಿಯುವುದು:

  • ಜೇನು ನೊಣ ಓಡಿ ಹೋಗಿ ಪೆಟ್ಟಿಗೆ ಖಾಲಿಯಾಗಿದ್ದರೆ ಜೇನು ಪೆಟ್ಟಿಗೆಯನ್ನು ಈ ಕೂಡಲೇ ಸ್ವಚ್ಚಗೊಳಿಸಿ.
  • ಅದರ ಚೌಕಟ್ಟು ಹಾಗೂ ಪ್ರೇಮುಗಳಿಗೆ ಜೇನು ಮೇಣ ಸವರಿ.
  • ಪ್ರೇಮುಗಳಿಗೆ ಮೇಣದ ಹಾಳೆಯನ್ನು ಅಂಟಿಸಿ.
  • ಪೆಟ್ಟಿಗೆಯನ್ನು ನೆರಳಿನ ಜಾಗದಲ್ಲಿ ಇಡಿ. ಅದಕ್ಕೆ ಜೇನು ಕುಟುಂಬಗಳು ತನ್ನಿಂದ ತಾನೇ ಬಂದು ಸೇರುತ್ತವೆ.
  • ಈ ಸಮಯದಲ್ಲಿ ಹಾರಿ ಹೋಗಿ ಹೊಸ ಆಶ್ರಯವನ್ನು ಅರಸುವ ನೊಣಗಳ ಕುಟುಂಬ ಇರುತ್ತದೆ.
  • ಅವುಗಳು ಇಂತದ್ದನ್ನು ಅರಸಿ ಕುಳಿತುಕೊಳ್ಳುತ್ತದೆ. ಇದು ಸುಲಭದಲ್ಲಿ ಜೇನು ಕುಟುಂಬ ಕೂಡಿಸುವ ವಿಧಾನ.
  • ಬಿಸಿಲಿನ ಸಮಯದಲ್ಲಿ ಬೆಳಗ್ಗಿನ ಹೊತ್ತು,ಸಂಜೆಯ ಹೊತ್ತು ಜೇನು ನೊಣಗಳ ಹಾರಾಟ ಕಂಡು ಬಂದರೆ ಅಲ್ಲಿ ಎಲ್ಲಿಯಾದರೂ  ಜೇನು ಕುಟುಂಬ  ವಾಸಿಸಿರಬಹುದು. ಅದನ್ನು ಹುಡುಕಿ ಪೆಟ್ಟಿಗೆಗೆ ಸೇರಿಸಿರಿ. ರಾಣಿ ಮೊಟ್ಟೆ ಇಟ್ಟು ನೊಣಗಳಾಗುವ ತನಕ ಗೇಟು ಹಾಕಿಕೊಂಡಿರಿ.

ಯಾವಾಗ ಹಿಡಿಯಬೇಕು:

  • ಜೇನು ಕುಟುಂಬಗಳನ್ನು ಯಾವಾಗಲೂ ಬಿಸಿಲು ಇರುವ ಸಮಯದಲ್ಲಿ ಹಿಡಿಯಬೇಕು.
  • ಮೋಡ ಕವಿದ ವಾತಾವರಣದಲ್ಲಿ ಹಿಡಿಯಲು ಹೋಗಬಾರದು.
  • ಬೆಳಗ್ಗಿನ ಹೊತ್ತು ಜೇನು ಕುಟುಂಬ ಹಿಡಿಯಲು ಸೂಕ್ತವಲ್ಲ.
  • ಮಧ್ಯಾನ್ಹದ ನಂತರದ ಅವಧಿ ಪ್ರಶಸ್ತ. ಜೇನು ಕುಟುಂಬವನ್ನು ಹಿಡಿಯಲು ಹೋದರೆ ಅದು ಸಂಜೆ ತನಕದ ಕೆಲಸ.
  • ಸಂಜೆಯಾಗದೇ ಜೇನು ನೊಣಗಳು  ಗೂಡನ್ನು ಸೇರುವುದಿಲ್ಲ. ಸಂಜೆ, ಹೊತ್ತು ಕವಿಯುವಾಗ ಎಲ್ಲವೂ ಗೂಡು ಸೇರುತ್ತವೆ.
  • ಈ ಸಮಯಕ್ಕೆ ಎಲ್ಲ ನೊಣಗಳೂ ಪೆಟ್ಟಿಗೆಯೊಳಕ್ಕೆ ಬಂದು ಸೇರಿರುತ್ತವೆ. ಬೆಳಗ್ಗೆ ಹಿಡಿಯಲು ಹೋದರೆ ನಾವು ಎಲ್ಲ ತಯಾರಿ ಮಾಡಿಕೊಳ್ಳುವಾಗ ಅವು ಹಾರಿ ಹೋಗಲೂ ಬಹುದು.
  • ಆದ ಕಾರಣ ಮಧ್ಯಾಹ್ನ ದ ಸಮಯದಲ್ಲಿ ಹೋದರೆ ಎರಿಗಳನ್ನೆಲ್ಲಾ ಜೋಡಿಸಿಯಾಗುವಾಗ ಗಂಟೆ ನಾಲ್ಕು ಆಗಿರುತ್ತದೆ. ಆ ನಂತರ ಅವು ಹಾರಿ ಹೋಗುವುದು ಕಡಿಮೆ.  ಒಂದು ವೇಳೆ ಹಾರಿದರೂ ಸಮೀಪವೇ ಅವು ಕುಳಿತುಕೊಳ್ಳುತ್ತವೆ.
  • ಆಹಾರದ ಲಭ್ಯತೆ ಪ್ರಾರಂಭವಾದೊಡನೆ ಜೇನು ನೊಣಗಳು ಮಧು ಹಾಗೂ ಮಕರಂದಗಳನ್ನು ಹುಡುಕಿ ತಂದು ತಮ್ಮ ಎರಿಗಳಲ್ಲಿ ಶೇಖರಿಸಲು ಪ್ರಾರಂಭಿಸುತ್ತವೆ.
  •  ಮಕರಂದ ದೊರೆತ ತಕ್ಷಣದಿಂದಲೇ ರಾಣಿನೊಣ ಮೊಟ್ಟೆ ಇಡಲಾರಂಭಿಸುತ್ತದೆ.
  • ರಾಣಿ ಮೊಟ್ಟೆ ಇಡಲು ಪ್ರಾರಂಭಿಸಿತೆಂದರೆ ಕುಟುಂಬ ವೃದ್ದಿಯಾಗಲು ಶುರುವಾಯಿತೆಂದರ್ಥ.
  • ನೊಣಗಳ ಸಂಖ್ಯೆ ಹೆಚ್ಚಿದೊಡನೆ  ಹೆಚ್ಚುವರಿ ಎರಿಗಳನ್ನು ಮಾಡಲು ಪ್ರಾರಂಭಿಸುತ್ತದೆ. ಇದೆಲ್ಲವೂ ಜೇನು ಕುಟುಂಬ ವೃದ್ದಿಯಾಗುವ ಲಕ್ಷಣ.

ಪೆಟ್ಟಿಗೆಗೆ ಸೇರಿಸಿದ ಸಮಯದಲ್ಲಿ ಒಂದು ವೇಳೆ ಆ ತಕ್ಷಣ ಆಹಾರ ರೂಪದ ಹೂವುಗಳು ಪರಿಸರದಲ್ಲಿ ದೊರೆಯದಿದ್ದಲ್ಲಿ ಪೆಟ್ಟಿಗೆಯ ಒಳಗೆ ಒಂದು ತೆಂಗಿನ ಕಾಯಿ ಗೆರಟೆಯಲ್ಲಿ 2 ಚಮಚ ಸಕ್ಕರೆ ಹಾಗೂ 10 ಚಮಚ ನೀರು ಹಾಕಿ ಕಲಕಿ ದ್ರಾವಣದ ಮೇಲೆ ಬಟ್ಟೆ ಇಲ್ಲವೇ ಹುಲ್ಲಿನ ತುಂಡುಗಳನ್ನು ಇಟ್ಟು ನೊಣಗಳು ಕುಡಿಯುವಂತೆ ಮಾಡಬೇಕು.

  • ಟೊಳ್ಳು ಮರ ಇದ್ದರೆ, ಅದನ್ನು ಸ್ವಚ್ಚ ಮಾಡಿ  ಅದನ್ನು ಒಂದು ಭಾಗ ಮುಚ್ಚಿ ನೆರಳಿನ ಜಾಗದಲ್ಲಿ ಪೊದರಿನ ಎಡೆಯಲ್ಲಿ  ಇಟ್ಟರೆ  ಅಲ್ಲಿಗೆ ಜೇನು ಕುಟುಂಬಗಳು  ಬಂದು  ಕುಳಿತುಕೊಳ್ಳುತ್ತವೆ.
  • ಮಡಕೆ ಇಟ್ಟರೆ ಸಹ ಅದರ ಒಳಗೆ ಜೇನುನೊಣ ವಾಸ ಅರಸಿ ಕುಳಿತುಕೊಳ್ಳುತ್ತವೆ.

ಜೇನು ಸಾಕಣೆಯಷ್ಟು ಖುಷಿ ಕೊಡುವ ಕಸುಬು ಬೇರೊಂದಿಲ್ಲ. ಮೊದಲೇ ಹೇಳಿದಂತೆ ಜಾಗರೂಕತೆಯಿಂದ ಜೇನು ನೊಣಗಳ ಜೊತೆ ಒಡನಾಟ ಮಾಡಿದರೆ ಅದು ಕಚ್ಚುವುದಿಲ್ಲ.  ಅವುಗಳನ್ನು ನಮ್ಮ ಗಲ್ಲದ ಮೇಲೂ ಕುಳಿತುಕೊಳ್ಳುವಂತೆ  ಮಾಡಬಹುದು. ಪ್ರತೀಯೊಬ್ಬನೂ ಒಂದು ಎರಡು ಜೇನು ಕುಟುಂಬ ಸಾಕಿದರೆ ಅವರ ಹೊಲದಲ್ಲಿ ಫಸಲು ಹೆಚ್ಚುತ್ತದೆ. ಶುದ್ಧ ಜೇನು ಸಹ ದೊರೆಯುತ್ತದೆ.

One thought on “ಜೇನು ಹಿಡಿಯಲು ಇದು ಸೂಕ್ತ ಸಮಯ.

Leave a Reply

Your email address will not be published. Required fields are marked *

error: Content is protected !!