ಕರಿಮೆಣಸು ಬೆಳೆಗಾರರು ನೋಡಬೇಕಾದ ಮಾದರಿ ತೋಟ ಇದು.

ಮಾದರಿ ಕರಿಮೆಣಸಿನ ತೋಟ

ತೀರ್ಥಹಳ್ಳಿಯ ಗರ್ತಿಕೆರೆ ಸಮೀಪದ  ಕಾರ್ಗೋಡ್ಲುವಿನಲ್ಲಿ ಶ್ರೀಯುತ ಜೋಸೆಪ್ ಚಾಕೋ ಎಂಬವರು  ಕರಿಮೆಣಸಿನ ಮಾದರಿಯ  ತೋಟ ಮಾಡಿದ್ದಾರೆ. ಬಹುಷಃ ಕರಿಮೆಣಸಿನ ತೋಟ ಮಾಡಿದರೆ ಅದರಲ್ಲಿ ವರ್ಷಕ್ಕೆ 10-15% ರೋಗ ಬರುವ ಸಾಧ್ಯತೆ ಹೆಚ್ಚು. ಅದರೆ ಇಲ್ಲಿ  ಹಾಗಿಲ್ಲ. 3000 ಮೆಣಸಿನ ಬಳ್ಳಿಗಳಲ್ಲಿ ಶೇ.1 ಸರಿಪಡಿಸಬಹುದಾದ  ರೋಗ ಲಕ್ಷಣಗಳನ್ನು ಕಾಣಬಹುದು.

  • 2018 ರಲ್ಲಿ ನಾನು ಇದೇ ತೋಟಕ್ಕೆ ಹೋಗಿದ್ದೆ. ಆಗ ಅಲ್ಲಿ ಹುಡುಕಿದರೂ ಒಂದು ಬಳ್ಳಿಯೂ ರೋಗ ತಗಲಿದ್ದು ಸಿಕ್ಕಿರಲಿಲ್ಲ.
  • ಈಗಲೂ ಅಷ್ಟೇ ಒಂದೆರಡು ಬಳ್ಳಿಗಳಲ್ಲಿ ಕೆಲವು ಎಲೆಗಳು ಹಳದಿಯಾದದ್ದು ಬಿಟ್ಟರೆ ಯಾವ ರೋಗ ಲಕ್ಷಣವೂ ಇಲ್ಲ.
  • ಇದಕ್ಕೆಲ್ಲಾ ಕಾರಣ  ಇವರ ಬೇಸಾಯ ವಿಧಾನ.
  • ಕೇರಳದಿಂದ ಈ ಊರಿಗೆ ಸುಮಾರು 40 ವರ್ಷಗಳ ಹಿಂದೆ ಇವರ ತಂದೆ ಬಂದವರು.
  • ಮಗ ಜೋಸೆಫ್ ಇಲ್ಲೇ ಕನ್ನಡ ಶಾಲೆಯಲ್ಲಿ ಕಲಿತವರು.
  • ರಿಪ್ಪನ್ ಪೇಟೆಯಲ್ಲಿ ಭೂಮಿ ಖರೀದಿ ಮಾಡಿ, ಅಲ್ಲಿ ರಬ್ಬರ್ ಶುಂಠಿ ಬೆಳೆಸಿದವರು.
  • ಹಾಗೆಯೇ ಲೀಸ್ ಗೆ ಜಾಗ ತೆಗೆದು ಅಲ್ಲೂ ಶುಂಠಿ ಅನನಾಸು ಬೆಳೆ ಬೆಳೆದು ಶ್ರಮಪಟ್ಟು ಮೇಲಕ್ಕೇರಿದವರು.
  • ಈ ಶ್ರಮದ ಫಲವೇ ಕರಿಮೆಣಸು ಬೆಳೆದ ಗರ್ತಿಕೆರೆ ಸಮೀಪದ ಕಾರ್ಗೋಡ್ಲುವಿನ 10 ಎಕ್ರೆ ಜಾಗ. ಇದು ಮಗ ಜೋಸೆಪ್  ಚಾಕೋ ಇವರ ಸೃಷ್ಟಿ.

ಹೆಚ್ಚಿನವರು ಪಣಿಯೂರು 1 ತಳಿಯ ಮೆಣಸನ್ನು ಬೆಳೆಸಿದರೆ ಇವರು ತಮ್ಮ ಅನುಭವದಲ್ಲಿ  ಪಣಿಯೂರು 5 ಉತ್ತಮ ಎಂದು ಅದನ್ನೇ ಪೂರ್ತಿಯಾಗಿ ಬೆಳೆಸಿದ್ದಾರೆ. ಇದರಲ್ಲಿ ಇಳುವರಿ ಹೆಚ್ಚು ಬರುತ್ತದೆ. ಕೊಯ್ಯಲು ಉದ್ದ ಕರೆ. ಸಿಪ್ಪೆ ತೆಳುವಾಗಿರುತ್ತದೆ. ಬೇರು ಸಧೃಢ, ಬರ ನಿರೋಧಕ , ಬೆಳವಣಿಗೆ ಶೀಘ್ರ ತೂಕ ಬರುತ್ತದೆ ಎನ್ನುತ್ತಾರೆ.

ಕರಿಮೆಣಸು ಬೆಳೆಗಾರ  ಜೋಸೆಬ್  ಚಾಕೋ

ಇದು ಪೂರ್ಣ ಮೆಣಸಿನ ತೋಟ:

  • ನಾವೆಲ್ಲಾ ಅಡಿಕೆ ಮರಗಳಿಗೆ, ತೆಂಗಿನ ಮರಗಳಿಗೆ ಹಾಗೆಯೇ ಮರಮಟ್ಟುಗಳಿಗೆ  ಮೆಣಸಿನ ಬಳ್ಳಿ ಹಬ್ಬಿಸುತ್ತೇವೆ.
  • ಆದರೆ ಇವರು ಹಬ್ಬಿಸಿದ್ದು, ರಬ್ಬರ್ ಮತ್ತು ಸಿಲ್ವರ್ ಮರಗಳಿಗೆ.
  • 2013 ರಲ್ಲಿ ಇವರು ರಬ್ಬರ್ ತೋಟ ಮಾಡುವ ಇಚ್ಚೆಯಿಂದ ಇಲ್ಲಿ ರಬ್ಬರ್ ಗಿಡ ಹಾಕಿದರಂತೆ.
  • ರಬ್ಬರ್ ಗಿಡ ಹಾಕಿ ಎರಡೇ  ವರ್ಷದಲ್ಲಿ ದರ ಕುಸಿಯಲಾರಂಭಿಸಿತು. ಏನು ಮಾಡುವುದು ರಬ್ಬರ್ ಮರಗಳನ್ನು ಉಳಿಸಿಕೊಂಡು ಅದರಲ್ಲಿ ಬೇರೆ ಉತ್ಪತ್ತಿ ಪಡೆಯುವ ಚಿಂತನೆ ಮಾಡಿದಾಗ ಹೊಳೆದದ್ದು ಇದು.
  • ರಬ್ಬರ್ ಮಧ್ಯಂತರದಲ್ಲಿ ಒಂದೊಂದು ಸಿಲ್ವರ್ ಗಿಡ ಹಾಕಿ ಎಲ್ಲಾ ಗಿಡಗಳ ಬುಡದಲ್ಲೂ ಮೆಣಸಿನ ಬಳ್ಳಿ ನೆಟ್ಟರು.
  • ಮರ ಬೆಳೆದಂತೆ ಮೆಣಸಿನ ಬಳ್ಳಿಯೂ ಬೆಳೆಯಿತು. ರಬ್ಬರ್ ತೋಟ ಹೋಗಿ ಅದು ಮೆಣಸಿನ ತೋಟವಾಗಿ ಪರಿವರ್ತನೆಯಾಯಿತು.
  • ದರ ಕುಸಿತದ ಸಮಯದಲ್ಲಿ ರಬ್ಬರ್  ಟ್ಯಾಪಿಂಗ್ ಮಾಡಿ, ನಷ್ಟ ಅನುಭವಿಸಬೇಕಾಗಿಲ್ಲ.
  • ರಬ್ಬರ್ ಮರ ಇರುವಷ್ಟ್ಟು ಸಮಯ ಅದರ ಹಾಲು ಎಲ್ಲೂ ಹೋಗುವುದಿಲ್ಲ.  
  • ಮೆಣಸು ರಬ್ಬರ್ ಕೊಡುವಂತಹ ಆದಾಯವನ್ನು ಕೊಡುತ್ತಾ ಇರುತ್ತದೆ.
  • ಸಮಯ ಸಂದರ್ಭ ಬಂದಾಗ ಭಾರಿ ಲಾಭ ಇದ್ದರೆ ರಬ್ಬರ್ ಟ್ಯಾಪಿಂಗ್ ಮಾಡಲು ಮರದಲ್ಲಿ ತೊಗಟೆ ಇದ್ದೇ ಇರುತ್ತದೆ. ಹೇಗಿದೆ ಲೆಕ್ಕಾಚಾರ!

ಬೇಸಾಯ ವಿಧಾನ ಹೀಗಿದೆ:

ಕರಿಮೆಣಸಿಗೆ ಬೇಕಾದ ಸೂಕ್ತ ಬಸಿ ವ್ಯವಸ್ಥೆ ( 2019 ರ ಫೊಟೋ)
ಕರಿಮೆಣಸಿಗೆ ಬೇಕಾದ ಸೂಕ್ತ ಬಸಿ ವ್ಯವಸ್ಥೆ ( 2019 ರ ಫೊಟೋ)
  • ಇವರು  ಕರಿಮೆಣಸನ್ನು ಹೊಸತಾಗಿ ಬೆಳೆದವರಲ್ಲ. ತಮ್ಮ ಮೂಲ ಸ್ಥಳ ರಿಪ್ಪನ್ ಪೇಟೆಯಲ್ಲೂ ಮೆಣಸು, ರಬ್ಬರ್ ತೆಂಗು ಬೆಳೆಯುತ್ತಿದ್ದವರು.
  • ಈ ಬೆಳೆಗೆ ಏನು ಮಾಡಬೇಕು, ಮಾಡಬಾರದು ಎಂಬುದನ್ನು ಮಾಡಿ ತಿಳಿದುಕೊಂಡಿದ್ದ ಕಾರಣ, ಹೊಸತಾಗಿ ತೋಟ ಮಾಡುವಾಗ ಹಿಂದೆ ಎಲ್ಲೆಲ್ಲಿ ತಪ್ಪುಗಳನ್ನು ಮಾಡಲಾಗಿದೆಯೋ ಅದನ್ನೆಲ್ಲಾ ಸರಿಪಡಿಸಿಕೊಂಡಿದ್ದಾರೆ.
  • ಮೆಣಸಿನ ಬಳ್ಳಿಯನ್ನು ಅಥವಾ ಸಸಿಯನ್ನು ಆಳದ ಹೊಂಡ ಮಾಡಿ ನೆಡಕೂಡದು. ಮೇಲ್ಭಾಗದಲ್ಲಿ ನೆಡಬೇಕು.
  • ಬಳ್ಳಿಯ ಬುಡದಲ್ಲಿ ಸ್ವಲ್ಪವೂ ನೀರು ನಿಲ್ಲುವಂತಿರಬಾರದು. ಪ್ರತೀ ಬುಡದ ಭಾಗ ಎತ್ತರವಾಗಿಯೂ  ಎರಡು ಬುಡಗಳ ಮಧ್ಯೆ ತಗ್ಗು ಇದ್ದು, ಅಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತಿರಬೇಕು.
  • ಬುಡ ಭಾಗ ಒಣಗದಂತೆ ರಕ್ಷಣೆಗಾಗಿ ಸಾವಯವ ತ್ಯಾಜ್ಯಗಳಾದ ಸೊಪ್ಪು ತರಗೆಲೆಗಳನ್ನು ಹಾಕಬೇಕು.
  • ರಬ್ಬರ್ ಹಾಗೆಯೇ ಸಿಲ್ವರ್ ಮರದ ಗೆಲ್ಲನ್ನೂ ಮಳೆಗಾಲಕ್ಕೆ ಒಂದು ತಿಂಗಳ ಮುಂಚೆ ಸವರಬೇಕು.
  • ಅಗತ್ಯವಾದ ಸಸ್ಯ ಸಂರಕ್ಷಣೆ ಮತ್ತು  ಗೊಬ್ಬರ ನಿರ್ವಹಣೆ ಮಾಡಬೇಕು.
2 ವರ್ಷದ ಕರಿಮೆಣಸು ಬಳ್ಳಿ
2 ವರ್ಷದ ಕರಿಮೆಣಸು ಬಳ್ಳಿ

ಏನು ಗೊಬ್ಬರ:

  • ಪ್ರತೀ ಬಳ್ಳಿಗೆ ಮುಂಗಾರು ಮಳೆ ಪ್ರಾರಂಭವಾಗುವಾಗಲೇ ಒಮ್ಮೆ   400 ಗ್ರಾಂ 15:15:15 ಗೊಬ್ಬರವನ್ನು ಕೊಡಬೇಕು.
  • ಮಳೆಗಾಲ ಮುಗಿಯುವ ಸಮಯದಲ್ಲಿ ಮತ್ತೆ   20:20:0:13  ಮತ್ತು   100 MOP  ಕೊಡಬೇಕು.  ಬಳ್ಳಿ ಬೆಳೆದಂತೆ ಗೊಬ್ಬರ ಹೆಚ್ಚು ಬೇಕು.
  • ಮಳೆಗಾಲ ಪ್ರಾರಂಭವಾಗುವಾಗ  ಎಲೆಗಳು ಮತ್ತು ಕರೆಗಳಿಗೆ ತಾಗುವಂತೆ ಒಮ್ಮೆ ಶೇ.1  ರ ಬೋರ್ಡೋ ದ್ರಾವಣ ಸಿಂಪರಣೆ ಮತ್ತು ಒಮ್ಮೆ ಪ್ರತೀ ಬಳ್ಳಿಯ ಬುಡಕ್ಕೆ 4-5 ಲೀ ಪ್ರಮಾಣದಲ್ಲಿ ಕಾಪರ್ ಆಕ್ಸೀ ಕ್ಲೋರೈಡ್ ಡ್ರೆಂಚಿಂಗ್ ಮಾಡುತ್ತಾರೆ.
  • ಮಧ್ಯ ಮಳೆಗಾಲದಲ್ಲಿ ಕರೆ ಕಟ್ಟಿದ ನಂತರ ಎರಡನೇ ಬಾರಿ ಶೇ.1  ರ ಬೋರ್ಡೋ ದ್ರಾವಣ ವನ್ನು ಸಿಂಪಡಿಸುತ್ತಾರೆ.
  • ಮಳೆಗಾಲ ಮುಗಿಯುವ ಸಮಯದಲ್ಲಿ ಮತ್ತೊಮ್ಮೆ ಪ್ರತೀ ಬಳ್ಳಿಯ ಬುಡಕ್ಕೆ 4-5 ಲೀ. ಪ್ರಮಾಣದಲ್ಲಿ ಕಾಪರ್ ಆಕ್ಸೀ ಕ್ಲೋರೈಡ್ (2.5 ಗ್ರಾಂ /1 ಲೀ. ನೀರು) ಬುಡಕ್ಕೆ ಡ್ರೆಂಚಿಂಗ್ ಮಾಡುತ್ತಾರೆ.
ಕರಿಮೆಣಸಿನ ಇಳುವರಿ
ಕರಿಮೆಣಸಿನ ಇಳುವರಿ

ಎಲ್ಲಿಯಾದರೂ ರೋಗದ ಲಕ್ಷಣಗಳಾದ ಎಲೆ ಚುಕ್ಕೆ ಮುಂತಾದವುಗಳು ಕಂಡು ಬಂದರೆ ಅಂತಹ ಬಳ್ಳಿಯನ್ನು ಗುರುತಿಸಿ ಅದಕ್ಕೆ ಕಾಪರ್ ಆಕ್ಸೀ ಕ್ಲೋರೈಡ್  ಮತ್ತು ಮೆಟಲಾಕ್ಸಿಲ್   ಉಪಚಾರ ಮಾಡುತ್ತಾರೆ, ಬಳ್ಳಿಯ ಬುಡದಲ್ಲಿ  ಬೆಳೆಯುವ ಹಬ್ಬು ಬಳ್ಳಿಗಳಿಗೆ ಮಣ್ಣಿನ ಸಂಪರ್ಕ ಆಗದಂತೆ ಅದನ್ನು ಗೆಲ್ಲು ಉಳ್ಳ ಸೊಪ್ಪಿನ ತುಂಡುಗಳ ಮೇಲೆ ಹರಿ ಬಿಡುತ್ತಾರೆ. ಮಣ್ಣು ಸಂಪರ್ಕ ಆದಾಗ ರೋಗ ಬರುವ ಸಾಧ್ಯತೆ ಹೆಚ್ಚು. ಇವರಿಗೆ ಈ ಬಳ್ಳಿಗಳು ಸಸ್ಯೋತ್ಪಾದನೆಗೆ ಬೇಕಾಗುತ್ತದೆ.

ಇಳುವರಿ :

ಪನಿಯೂರ್ 5 ಮೆಣಸಿನ ಕರೆಗಳು
ಪನಿಯೂರ್ 5 ಮೆಣಸಿನ ಕರೆಗಳು
  • ಇವರಲ್ಲಿ ಸುಮಾರು 3000  ಕ್ಕೂ ಹೆಚ್ಚು  ಮೆಣಸಿನ ಬಳ್ಳಿ ಇದೆ.
  • ಇದರಲ್ಲಿ ಎರಡನೇ ವರ್ಷಕ್ಕೆ ಇಳುವರಿ ಪ್ರಾರಂಭವಾಗಿದ್ದು, ಸರಾಸರಿ 1 ಕಿಲೋ ಒಣ ಮೆಣಸಿನ ಇಳುವರಿ ಪಡೆದಿದ್ದಾರಂತೆ.
  • ಮೂರನೇ ವರ್ಷ  ಸರಾಸರಿ 2 ಕಿಲೋ ಇಳುವರಿ ಪಡೆದಿದ್ದಾರಂತೆ.
  • ನಾಲ್ಕನೇ ವರ್ಷ ಹಾಲಿ ಬೆಳೆಯಲ್ಲಿ ಸರಾಸರಿ 3 ಕಿಲೋ  ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
  • ಒಟ್ಟು 3000 ಮರಗಳಿಂದ 9000 ಕಿಲೋ ಅಂದರೆ ಸುಮಾರು 27 ಲಕ್ಷ ರೂ. ಅದಾಯವನ್ನು ಈ ಬೆಳೆ ಯಿಂದ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಇದು ಪೂರ್ತಿ ಒಣ ಬೇಸಾಯವಾಗಿದ್ದು, ಹನಿ ನೀರಾವರಿ ವ್ಯವಸ್ಥೆ ಇದೆಯಾದರೂ ನೀರನ್ನು ಟ್ಯಾಂಕರ್ ಮೂಲಕ ತಂದು ಉಣಿಸುವ ಕಾರಣ ಬೇಸಿಗೆಯಲ್ಲಿ ಎರಡು ಮೂರು ಸಾರಿ ಮಾತ್ರ ಹನಿ ನೀರಾವರಿಯ ಮೂಲಕ ನೀರುಣಿಸುತ್ತಾರೆ.
ರೈತರ ಸಂಪರ್ಕಕ್ಕಾಗಿ:9449587278.
End of the article:———————————-
Search words: pepper cultivation# pepper on rubber plant# Model pepper garden#  Panniyur 5# Ripponpete# Konanduru# Garthikere# Joseph chako# Rubber and silver along with pepper# Good pepper plantation#

Leave a Reply

Your email address will not be published. Required fields are marked *

error: Content is protected !!