ಬದನೆಯ ಕಾಯಿ ಕೊಳೆಯಲು ಕಾರಣ ಮತ್ತು ಪರಿಹಾರ.

Wilt damage

ಬದನೆ ಬೆಳೆಯುವವರು ಎದುರಿಸುತ್ತಿರುವ ಕಾಯಿ ಕೊಳೆಯುವ ಸಮಸ್ಯೆ ಒಂದು ರೋಗವಾಗಿದ್ದು, ಇದಕ್ಕೆ ಸಮರ್ಪಕ ಪರಿಹಾರ ನೈರ್ಮಲ್ಯ ಮಾತ್ರ.
ಬದನೆ ಬೆಳೆಗಾರರ ಹೊಲದಲ್ಲಿ ನೋಡಿದರೆ ಕೊಯಿದ ಬದನೆಯ ಅರ್ಧ ಪಾಲು ಹೊಲದ ಮೂಲೆಯಲ್ಲಿ ಬಿಸಾಡಿದ್ದು ಸಿಗುತ್ತದೆ. ಬದನೆ ಎಲ್ಲಿ ಬೆಳೆದರೂ ಪರಿಸ್ಥಿತಿ ಹೀಗೆಯೇ. ಇದು ಒಂದು ಸೊರಗು ರೋಗ.  ಇದಕ್ಕೆ ಬೇಸಾಯ ಪದ್ದತಿಯಲ್ಲಿ ಮಾರ್ಪಾಡು ಮತ್ತು ನೈರ್ಮಲ್ಯ ಮಾತ್ರ ಸೂಕ್ತ ಪರಿಹಾರ. ಬದನೆ  ಬೆಳೆ ಎಷ್ಟು ಇಳುವರಿ ಬಂದರೂ  ಬೆಳೆಗಾರರಿಗೆ ಸಿಗುವುದು ಅರ್ಧ ಮಾತ್ರ. ಉಳಿದವು ಕೊಳೆಯುತ್ತದೆ.

Rotting of brinjal

 • ಇತ್ತೀಚಿನ ದಿನಗಳಲ್ಲಿ  ಜನ ಬದನೆ ಬೆಳೆಯುವುದನ್ನು ತುಂಬಾ ಕಡಿಮೆ ಮಾಡಿದ್ದಾರೆ ಕಾರಣ ಈ ಕೊಳೆಯುವ ರೋಗ.
 • ಬದನೆಗೆ ಬರುವ ಕಾಯಿ ಕೊರಕ ಮತ್ತು  ಕಾಯಿ ಕೊಳೆಯುವ ರೋಗ ಎಷ್ಟು ಔಷಧಿ ಹೊಡೆದರೂ ನಿವಾರಣೆಯಾಗುವುದಿಲ್ಲ.
 • ಬೆಳೆ ಉತ್ಪತ್ತಿಗಿಂತ  ಕೀಟ- ರೋಗ ನಾಶಕ ಔಷಧಿಗೇ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
 • ಬದನೆ ಬೆಳೆಸಲ್ಪಡುವ ಪ್ರದೇಶಗಳಲ್ಲಿ  ಸುತ್ತಾಡಿ, ಬದನೆ ಬೆಳೆಯುವ ಹೊಲವನ್ನು  ವೀಕ್ಷಿಸಿದರೆ  ತಿಳಿಯುತ್ತದೆ,
 • ರೈತರು  ಬೆಳೆಯುವುದಕ್ಕಿಂತ ಹೆಚ್ಚು ಪ್ರಮಾಣವನ್ನು  ರೋಗದಿಂದ ನಷ್ಟಮಾಡಿಕೊಳ್ಳುತ್ತಿದ್ದಾರೆ ಎಂಬ ಸತ್ಯ.
 • ಬದನೆ ಗಿಡದಲ್ಲಿ ಕಾಯಿಗಳು ಬೆಳೆಯುತ್ತಿದ್ದಂತೇ ಕೊಳೆತು ಹೋಗುವುದು, ಕ್ರಮೇಣ ಗಿಡವೇ ಬಾಡಿ ಸಾಯುವುದನ್ನು ಕಾಣಬಹುದು.

 ಕಾಯಿ ಕೊಳೆಯಲು ಕಾರಣ:

 • ಇದು ಯಾವ  ಕಾರಣಕ್ಕೆ ಆಗುತ್ತದೆ, ಪರಿಹಾರ ಏನು ಎಂಬ ಬಗ್ಗೆ  ಬಹುತೇಕ ರೈತರಿಗೆ ಮಾಹಿತಿ ಇಲ್ಲ.
 •  ಬೆಳೆಗಾರರು  ಸ್ಥಳೀಯ ಕೀಟನಾಶಕ,ಗೊಬ್ಬರ ಮಾರಾಟಗಾರಿಂದ  ಬೆಳೆ ಸಲಹೆ ಪಡೆಯುತ್ತಾರೆ.
 • ಅವರು ಕೊಟ್ಟ ಔಷಧಿ ಕೆಲವೊಮ್ಮೆ ಪರಿಣಾಮಕಾರಿಯಾದರೆ ಮತ್ತೆ ಕೆಲವೊಮ್ಮೆ ಫಲ ನೀಡದೆಯೂ ಇರುತ್ತದೆ.
 • ಇದು ಒಂದು ಬ್ಲೈಟ್ ರೋಗ  Phomopsis blight ( ಬ್ಲೈಟ್ = ಶಿಲೀಂದ್ರ ಜಾತಿಯ ಪರೋಪ ಜೀವಿಯಿಂದ  ಉಂಟಾಗುತ್ತದೆ.
 • ಕಪ್ಪಗಾಗುವ, ಒಣಗುವ, ಕೊಳೆಯುವ ರೋಗ) ಇದು  ಎಲೆಗಳಿಗೆ, ಕಾಂಡಕ್ಕೆ, ಕಾಯಿಗಳಿಗೂ ಬರುತ್ತದೆ.
 • ಮೊದಲಲ್ಲಿ ಸೋಂಕಿಗೊಳಗಾದ ಭಾಗ ಮೆದುವಾಗಿ, ಕೊಳೆತ ನೀರಿನ ತರಹ (Water decayed) ಆಗಿ ಕ್ರಮೇಣ ಕಪ್ಪಗಾಗುತ್ತದೆ.
 • ಇದು ಬೆಂದಂತೆ  ಕಂಡು ಬರುತ್ತದೆ. ಕಾಯಿಯ ಯಾವುದೇ ಭಾಗಕ್ಕೂ ಇದು ಬಾಧಿಸಬಹುದು.
 • ಮೊದಲು ಸಣ್ಣ ಚುಕ್ಕೆಯಿಂದ ಪ್ರಾರಂಭವಾಗಿ ಒಂದೆರಡು ದಿನದಲ್ಲಿ  ಹೆಚ್ಚು ಜಾಗಕ್ಕೆ ವಿಸ್ತಾರವಾಗುತ್ತದೆ.
 • ಬದನೆಯಲ್ಲಿ ಇದು  ಸ್ವಲ್ಪ  ದೊಡ್ದ ರೋಗವೆಂದೇ ಹೇಳಬಹುದು.

disease effected fruit
ಇದಕ್ಕೆ  ಕಾರಣ ಒಂದು ಶಿಲೀಂದ್ರ. ಸಾಮಾನ್ಯವಾಗಿ ತೊಂದರೆ ಇರುವ  ಪ್ರದೇಶದಿಂದ ಬೀಜ ತಂದು ಎಲ್ಲಿ ಬೆಳೆಸಿದರೂ ರೋಗ ತೊಂದರೆ ಬರುತ್ತದೆ. ಎಲ್ಲಿ ರೋಗ ಇದೆಯೋ ಅಲ್ಲಿ ವರ್ಷದಿಂದ ವರ್ಷಕ್ಕೆ ರೋಗ ಹೆಚ್ಚುತ್ತಲೇ ಇರುತ್ತದೆ. ಯಾವ ರೈತನೂ ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ವರದಿ ಇಲ್ಲ.

ನಿಯಂತ್ರಣ ವಿಧಾನ:

Plants effected by wilt

 • ಇದು ಶಿಲೀಂದ್ರ ರೋಗವಾಗಿದ್ದು, ಬೀಜ ಮತ್ತು ಮಣ್ಣಿನ ಮೂಲಕ ಪ್ರಸಾರವಾಗುತ್ತದೆ.
 • ಸಾಮಾನ್ಯವಾಗಿ ಬೀಜದಿಂದ ಸಸ್ಯಾಭಿವೃದ್ದಿ ಮಾಡುವ ಎಲ್ಲಾ ಬೀಜಕ್ಕೂ  ಬೀಜೋಪಚಾರ  ಮಾಡಬೇಕು ಎಂಬುದಾಗಿ ವಿಜ್ಞಾನ ಹೇಳುತ್ತದೆ.
 • ಇದನ್ನು ರಾಸಾಯನಿಕವಾಗಿಯೂ  ಮಾಡಬಹುದು. ಜೈವಿಕವಾಗಿಯೂ ಮಾಡಬಹುದು.
 • ರಾಸಾಯನಿಕ ಬೀಜೋಪಚಾರದಲ್ಲಿ  ಥೈರಂ ಅಥವಾ  ಕ್ಯಾಪ್ಟಾಪ್ (Thiram or Captof 2.5 g/kg) ಮೂಲಕ ಕಡಿಮೆ ಮಾಡ ಬಹುದು.
 • ಜೈವಿಕ ಶಿಲೀಂದ್ರ ನಾಶಕ ಟ್ರೈಕೋಡರ್ಮಾ, ಸುಡೋಮೋನಸ್ ಮುಂತಾದವುಗಳಿಂದ ಉಪಚಾರ ಮಾಡಿ ನಂತರ ಬಿತ್ತನೆ ಮಾಡಬೇಕು.
 • ಬೀಜಗಳನ್ನು  ಯಾವ ಗಿಡದಲ್ಲಿ ರೋಗ ಸೋಂಕು ತಗಲಿಲ್ಲವೋ  ಅದರಿಂದ ಮಾತ್ರ ಆಯ್ಕೆ ಮಾಡಬೇಕು.

ಮಣ್ಣಿನಲ್ಲಿ  ಈ ರೋಗಾಣು ಸುಪ್ತಾವಸ್ತೆಯಲ್ಲಿ  ಇರುತ್ತದೆ. ಒಂದೇ ಭೂಮಿಯಲ್ಲಿ ಪ್ರತೀ ವರ್ಷ  ಬದನೆ ಬೆಳೆದರೆ  ಅಲ್ಲಿ ವರ್ಷದಿಂದ ವರ್ಷಕ್ಕೆ ರೋಗ ಹೆಚ್ಚುತ್ತದೆ. ಅದಕ್ಕೆ ಸ್ಥಳವನ್ನು  ಬದಲಿಸಬೇಕು.  ಬದನೆ ಬೆಳೆದ ಸ್ಥಳದಲ್ಲಿ  ಹುರುಳಿ, ನೆಲಕಡ್ಲೆ, ಭತ್ತ, ಅವರೆ ಮುಂತಾದ  ಬೆಳೆ ಬೆಳೆ ಬೆಳೆಸಿ  ಬೆಳೆ ಪರಿವರ್ತನೆ  ಅಗತ್ಯವಾಗಿ ಮಾಡಬೇಕು.

 • ಸಾಮಾನ್ಯವಾಗಿ ಹೆಚ್ಚಿನ ಬೆಳೆಗಾರರು ರೋಗ ತಗಲಿದ ಕಾಯಿಯನ್ನು ಸಸ್ಯವನ್ನು ಹೊಲದಲ್ಲೇ  ಬಿಡುತ್ತಾರೆ.
 • ಅದು ರೋಗ ಸೋಂಕು ಉಲ್ಬಣವಾಗಲು ಸಹಕಾರಿ. ಅದನ್ನು  ದೂರ ಒಯ್ದು ಸುಡಬೇಕು.
 • ಬೆಳೆ ಬೆಳೆಸುವ ಮುನ್ನ ಹೊಲವನ್ನು ಚೆನ್ನಾಗಿ ಉಳುಮೆಮಾಡಿ ಅಷ್ಟೂ ಪ್ರದೇಶಕ್ಕೆ   ಪಾರದರ್ಶಕ ಪಾಲಿಥೀನ್ ಹೊದಿಕೆ ಹಾಕಿ  ಒಂದು ವಾರ ಕಾಲ  ಬಿಸಿಲಿಗೆ ಒಡ್ಡಿ ಸೋಲರೈಸೇಶನ್ ಮಾಡಬೇಕು.
 • ಇದರಿಂದ  ರೋಗಕಾರಕ  ಜೀವಾಣು ನಾಶವಾಗುತ್ತದೆ.
 • ಇದು ಕಷ್ಟವಾದ ಪಕ್ಷದಲ್ಲಿ  ಪ್ರತೀ  ಚದರ ಮೀಟರಿಗೆ 5 ಲೀ. ನಂತೆ  ಕೃಷಿ ಬಳಕೆಯ ಹೈಡ್ರೋಜನ್ ಪೆರಾಕ್ಸೈಡ್ ((H2 O2) ದ್ರಾವಣದಿಂದ ಉಪಚರಿಸಿದರೆ  ಮಣ್ಣು ಜನ್ಯ  ಯಾವುದೇ ಜೀವಿಗಳು ಉಳಿಯಲಾರವು.
 • ಹೈಡ್ರೋಜನ್ ಪೆರಾಕ್ಸೈಡ್ ಮೂಲಕ  ಉಪಚಾರ ಮಾಡಿದಲ್ಲಿ 4-6 ಗಂಟೆ ಬಿಟ್ಟು ನಂತರ ಮಣ್ಣಿನಲ್ಲಿ ನಾಟಿ ಮಾಡಬಹುದು.
 • ಬೀಜವನ್ನು  ಸುಡುಮಣ್ಣಿನಲ್ಲಿ  ಬಿತ್ತಿ ಸಸಿ ಮಾಡಿಕೊಳ್ಳಬೇಕು.
 • ಇದು ಸುಟ್ಟ ಮಣ್ಣಾದ ಕಾರಣ ಅದರಲ್ಲಿ  ರೋಗಾಣುಗಳು ಇರಲಾರವು.
 • ರೋಗ ಆದ ಕಾರಣ  ಇದಕ್ಕೆ ರೋಗ ನಾಶಕ ಸಿಂಪರಣೆ  ಮಾಡಬೇಕೇ ವಿನಹ ಕೀಟನಾಶಕದಿಂದ ಇದು ನಿಯಂತ್ರಣವಾಗುವುದಿಲ್ಲ.
 • ಡೈಥೇನ್ Z 78, ಶಿಲೀಂದ್ರ ನಾಶಕವನ್ನು 7-10 ದಿನಕೊಮ್ಮೆ ಸಿಂಪರಣೆ ಮಾಡಬೇಕು.
 • ರೋಗವು ಬಹುತೇಕ ನಾಟೀ ತಳಿಗಳನ್ನು ಬೆಳೆಸುವ ಪ್ರದೇಶಕ್ಕೆ ಪಸರಿಸಿದ್ದು ಎಲ್ಲರೂ ಇದಕ್ಕೆ ಸೂಕ್ತ ಬೀಜ, ಬೀಜೋಪಚಾರ, ಹೊಲದ ಸಿದ್ದತೆ ಮಾಡದೇ ಇದ್ದಲ್ಲಿ, ಮುಂದೊಂದು ದಿನ ಬೀಜವೇ ಅಳಿವಿನಂಚಿಗೆ ಬರಲೂಬಹುದು.

ಹೊಲದಲ್ಲಿ ಮಾತ್ರ ಕಾಯಿ ಕೊಳೆಯುವುದಲ್ಲ. ಇದು ಕೊಯಿಲಿನ ನಂತರ ಮಾರುಕಟ್ಟೆಗೆ ಸಾಗಿಸಿದ ನಂತರವೂ ಕೊಳೆಯುತ್ತದೆ. ಕೊಳೆಯುವ ಪ್ರಮಾಣಕ್ಕೆ ಅನುಗುಣವಾಗಿ ಬೆಲೆ ದೊರೆಯುತ್ತದೆ. ಆದ ಕಾರಣ ಬೆಳೆಗಾರರಿಗೂ , ಕೊಳ್ಳುವವರಿಗೂ ನಷ್ಟವಾಗದಂತೆ ನಿಯಂತ್ರಣ ವಿಧಾನ ಅನುಸರಿಸಬೇಕು.

error: Content is protected !!