ಬಹಳಷ್ಟು ಜನ ರೈತರು ಡ್ರಿಪ್ ನೀರಾವರಿಯಲ್ಲಿ ಕಟ್ಟಿಕೊಳ್ಳುವ ಸಮಸ್ಯೆ ರಗಳೆ ಎಂದು ಒಮ್ಮೆ ಅಳವಡಿಸಿ ನಂತರ ಕಿತ್ತು ಬಿಸಾಡುತ್ತಾರೆ. ಹೀಗೆ ಆಗುವುದು ಕಶ್ಮಲಗಳು ಸೇರಿಕೊಂಡು. ಒಂದು ದಿನದ ಕೆಲಸ ಮತ್ತು ಸ್ವಲ್ಪ ತಾಳ್ಮೆ ಇದ್ದರೆ ಅದನ್ನು ಸ್ವಚ್ಚ ಮಾಡುವುದು ತುಂಬಾ ಸುಲಭ.
ಹನಿ ನೀರಾವರಿ ವ್ಯವಸ್ಥೆಯಲ್ಲಿ ನೀರಿನ ಗುಣ ಹೊಂದಿಕೊಂಡು ಕಟ್ಟಿಕೊಳ್ಳುವ ಸಮಸ್ಯೆ ಉಂಟಾಗುತ್ತದೆ.ಇದನ್ನು ನಿವಾರಿಸಲು ಸೂಕ್ತ ಫಿಲ್ಟರ್ ಮತ್ತು ಆಗಾಗ ಪೈಪನ್ನು ಪ್ಲಶ್ ಮಾಡುವುದು ವರ್ಷಕ್ಕೊಮ್ಮೆ , ಆಮ್ಲ ಉಪಚಾರ ಮಾಡುವುದು ಪರಿಹಾರ. ಹನಿ ನೀರಾವರಿಗೆ ಬಳಸುವ ನೀರು ಒಂದೊಂದು ಬಾವಿಯಲ್ಲಿ ಒಂದೊಂದು ತರಹ ಇರುತ್ತದೆ. ಕೆಲವು ನೀರಿನಲ್ಲಿ ಕಣ್ಣಿಗೆ ಕಾಣುವ ಕಶ್ಮಲಗಳಿದ್ದರೆ ಮತ್ತೆ ಕೆಲವು ನೀರಿನಲ್ಲಿ ಕಣ್ಣಿಗೆ ಕಾಣದ ಕಶ್ಮಲಗಳು ಇರುತ್ತವೆ. ಬಹುತೇಕ ಕಣ್ಣಿಗೆ ಕಾಣದ ಕಶ್ಮಲಗಳು ಸೋಸು ವ್ಯವಸ್ಥೆಗಳಲ್ಲಿ ಎಡೆಯಲ್ಲಿ ನುಸುಳಿ ಹೋಗುತ್ತದೆ.
ನೀರು ತೊಟ್ಟಿಕ್ಕುವ ಸಾಧನಗಳಾದ ಡ್ರಿಪ್ಪರ್ ಗಳಿಗೆ ಅಂಟಿ ನಿಧಾನವಾಗಿ ಮುಚ್ಚಿಕೊಳ್ಳುವಂತೆ ಮಾಡುತ್ತದೆ.
- ನೀರು ಬೀಳುವುದು ಕಡಿಮೆಯಾಗುತ್ತಾ ಕ್ರಮೇಣ ನಿಂತೇ ಹೋಗುತ್ತದೆ.
- ಇದನ್ನು ಆಮ್ಲ ಉಪಚಾರದಲ್ಲಿ ಮಾತ್ರ ಸರಿ ಮಾಡಲು ಸಾಧ್ಯ.
ಎಲ್ಲಿಂದ ಕಶ್ಮಲಗಳು ಬರುತ್ತವೆ:
- ನೀರಿನಲ್ಲಿ ಕಶ್ಮಲಗಳು ಸೇರಿಕೊಳ್ಳುವುದು ಮಣ್ಣಿನ ಮತ್ತು ಬಂಡೆಗಳ ಸೆರೆಗಳಿಂದ.
- ಮಣ್ಣು ಮತ್ತು ಕಲ್ಲುಗಳ ಎಡೆಯಲ್ಲಿರುವ ಕೆಲವು ಖನಿಕ ಪದಾರ್ಥಗಳು, ನೀರಿನಲ್ಲಿ ಬೆಳೆಯುವ ಪಾಚಿಗಳು, ಡ್ರಿಪ್ಪರು ಕಟ್ಟಿಕೊಳ್ಳಲು ಕಾರಣ.
- ಇವು ನೀರಿನೊಡನೆ ತೇಲುವ ವಸ್ತುಗಳಾಗಿರುತ್ತವೆ.
- ತೆರೆದ ಬಾವಿ, ಕೆರೆ ಇವುಗಳಿಗೆ ಹೊರಗಡೆಯಿಂದ ಏನಾದರೂ ಸಾವಯವ ವಸ್ತುಗಳು ಬಿದ್ದಾಗ, ಬಿಸಿಲು ಬಿದ್ದಾಗ ಅಲ್ಲಿ ನೀರಿನ ಮೇಲೆ ಪಾಚಿಗಳು ಬೆಳೆಯುತ್ತವೆ.
- ಹೆಚ್ಚಾಗಿ ನೀರು ಮತ್ತು ಮಣ್ಣಿನಲ್ಲಿ ಪಾಚಿ ಬೀಜಾಣುಗಳು ಬೆಳೆಯುತ್ತಾ ಇರುತ್ತವೆ.
- ಪಾಚಿಯು ಡ್ರಿಪ್ಪರ್ ಗಳಲ್ಲಿ , ಪೈಪಿನಲ್ಲಿ ಅಂಟಿ ಕೊಂಡು, ನೆಲದಲ್ಲೂ ಬೆಳೆಯುತ್ತವೆ.
ಯಾವ ಕಶ್ಮಲಗಳು ತೊಂದರೆ ಮಾಡುತ್ತವೆ:
- ತೆರೆದ ಬಾವಿ, ಹೊಳೆ, ಕೆರೆ ಮುಂತಾದ ನೀರಿನಲ್ಲಿ ಹೆಚ್ಚಾಗಿ ಇರುವುದು ಪಾಚಿ.
- ಇದು ಜೀವ ಇರುವ ಕಶ್ಮಲವಾಗಿರುತ್ತದೆ.
- ಸೋಸು ವ್ಯವಸ್ಥೆಗಳಲ್ಲಿ ಇವು ಸ್ವಲ್ಪ ಸ್ವಲ್ಪ ನುಸುಳಿಕೊಂಡು ಹೋಗಿ ಪೈಪಿನ ಗೋಡೆಗಳಲ್ಲಿ, ಡ್ರಿಪ್ಪರಿಗಳಲ್ಲಿ ಸೆರಿಕೊಂಡು ಅಲ್ಲೇ ಬೆಳವಣಿಗೆಯಾಗಿ ಕಟ್ಟಿಕೊಳ್ಳುವಂತೆ ಮಾಡುತ್ತವೆ.
- ಕೆರೆಯ ನೀರಿನಲ್ಲಿ ಕೆಲವು ಮಣ್ಣಿನ ಖನಿಜಗಳಿಂದ ಬರುವ ಕಶ್ಮಲಗಳು ಇರುತ್ತವೆ.

ತೆರೆದ ಬಾವಿಯಲ್ಲಿ ಪಾಚಿ
- ಅಂತಹ ನೀರು ತಿಳಿಯಾಗಿ ಕಂಡರೂ ನೀರಿನಲ್ಲಿ ತೇಲುವ ಕೆಲವು ಮಣ್ಣಿನ ಕಣಗಳು ಇರುತ್ತವೆ.
- ವಾಸ್ತವವಾಗಿ ಇದು ಮಣ್ಣಿನಂತೆ ಕಂಡರೂ ಮಣ್ಣು ಅಲ್ಲ.
- ಅದು ಶಿಲೆಗಳ ಮೇಲ್ಮೈಯಲ್ಲಿ ಇರುವ ವಸ್ತುಗಳು.
- ಇದು ಖನಿಜ ವಸ್ತು ಎನ್ನಬಹುದು.
- ಇದು ಪಂಪಿನಿಂದ ಹೊರಟು ಎಲ್ಲೆಲ್ಲಾ ನೀರು ಸಂಚರಿಸುತ್ತದೆಯೋ ಅಲ್ಲೆಲ್ಲಾ ಪೈಪಿನ ಗೋಡೆಗಳಿಗೆ ಅಂಟುಕೊಳ್ಳುತ್ತವೆ.
- ಡ್ರಿಪ್ಪರಿನ ಒಳಗಿನ ನೀರು ಹೊರ ಹರಿಯುವ ಡಯಾಪ್ರಾಂ ನಲ್ಲಿ ಅಂಟಿಕೊಳ್ಳುತ್ತದೆ.
- ಅಂತಹ ಡ್ರಿಪ್ಪರು ಒಮ್ಮೆಲೇ ಬ್ಲಾಕ್ ಆಗುವುದಿಲ್ಲ.
- ನಿಧಾನವಾಗಿ ಬ್ಲಾಕ್ ಆಗುತ್ತಾ ಬರುತ್ತದೆ.
- ಹೆಚ್ಚಾದಂತೆ ಬ್ಲಾಕ್ ಆಗುತ್ತದೆ.
ಕೊಳವೆ ಬಾವಿಯ ಕಶ್ಮಲಗಳು:
- ಕೊಳವೆ ಬಾವಿಯ ನೀರಿನಲ್ಲಿ ಹೆಚ್ಚಾಗಿ ಮೇಲಿನ ಖನಿಜದ ಆಕ್ಶೈಡ್ ಇರುತ್ತದೆ.
- ಇಂತಹ ನೀರನ್ನು ಒಂದು ಪಾತ್ರೆಗೆ ಹಾಕಿ ಇಟ್ಟು ಒಂದು ದಿನ ಕಳೆದು ನೋಡಿದಾಗ ತಳದಲ್ಲಿ ಮಣ್ಣಿನ ತರಹ ವಸ್ತು ಕಾಣಿಸುತ್ತದೆ.
- ಇದು ಪೂರ್ತಿಯಾಗಿ ತಂಗುವುದಿಲ್ಲ. ತೇಲುತ್ತಾ ಇರುತ್ತದೆ.
- ಈ ನೀರನ್ನು ಸ್ಪ್ರಿಂಕ್ಲರ್ ಮೂಲಕ ಹರಿಸಿದರೂ ಸ್ಪ್ರೀಂಕ್ಲರ್ ನ ನಾಝಲ್ ಹಾಗೂ ಆ ನೀರು ಮರಕ್ಕೆ ತಾಗಿದಲ್ಲಿ ಅಂಟಿಕೊಂಡಿರುತ್ತದೆ.
- ಕಲ್ಲಿನ ಹುಡಿಗಳಿಗೆ ಸೋಸು ಸಾಧನಗಳೇ ಪರಿಹಾರ.
- ಕಲ್ಲಿನ ಸೂಕ್ಷ್ಮ ಹುಡಿಗಳು. ಇದು ಕೊರೆಯುವಾಗ ಬಿರುಕುಗಳಲ್ಲಿ ಸೇರಿಕೊಂಡ ಪುಡಿಗಳಾಗಿರುತ್ತವೆ.
- ಇದರ ದೊಡ್ಡ ಕಣಗಳು ಸೋಸು ವ್ಯವಸ್ಥೆಗಳಲ್ಲಿ ತಡೆಯಲ್ಪಡುತ್ತವೆ.
- ಅತೀ ಸಣ್ಣ ಕಣಗಳು ಮಾತ್ರ ಹೊರ ನುಸುಳುತ್ತವೆ.

ನೆಲದಿಂದ ಒಳ ಸೇರಿದ ಕಶ್ಮಲ
- ಇದನ್ನು ಇನ್ನಷ್ಟು ಸೂಕ್ಷ್ಮ ಸೋಸು ಸಾಧನಗಳ ಮೂಲಕ ಹೊರ ಹೋಗದಂತೆ ತಡೆಯಬಹುದು.
- ಇವು ಸ್ವಲ್ಪ ಪ್ರಮಾಣದಲ್ಲಿ ಡ್ರಿಪ್ಪರುಗಳನ್ನು ಬ್ಲಾಕ್ ಮಾಡುತ್ತವೆ . ಅದನ್ನು ಆಮ್ಲ ಉಪಚಾರದಲ್ಲಿ ಹೋಗಲಾಡಿಸಲು ಆಗುವುದಿಲ್ಲ.
- ಸೋಸುವಿಕೆ ಮತ್ತು ಆಗಾಗ್ಗೆ ಪ್ಲಶ್ ಮಾಡುವುದೇ ಇದಕ್ಕೆ ಪರಿಹಾರ.
- ಕೆಲವು ಕೊಳವೆ ಬಾವಿಗಳಲ್ಲಿ ಮರಳಿನಂತಹ ಕಲ್ಲುಗಳು ಬರುತ್ತವೆ.
- ಇದನ್ನು ಸೋಸು ಸಾಧನಗಳ ಮೂಲಕ ಮುಂದೆ ಹೋಗದಂತೆ ತಡೆಯಬಹುದು.
- ಸರಿಯಾದ ಸೋಸು ಸಾಧನದ ಆಯ್ಕೆ ಮಾಡಬೇಕು.
- ಸೋಸು ಸಾಧನದ ಒಳಗೊಡೆ ಮತ್ತು ಪೈಪಿನ ಒಳಗೋಡೆಯಲ್ಲಿ ಅಂಟಿ ಕೊಳ್ಳುವುದು ಏನಾದರೂ ಇದ್ದರೆ ಅದು ಹನಿ ನೀರಾವರಿಯನ್ನು ಬ್ಲಾಕ್ ಮಾಡುವಂತಃ ಕಶ್ಮಲ.
ಹನಿ ನೀರಾವರಿ ಅಳವಡಿಸಿಕೊಂಡವರು ಬರೇ ಅಳವಡಿಸಿಕೊಂಡು ನೀರಾವರಿ ಮಾಡುತ್ತಿದ್ದರೆ ಸಾಲದು. ತಮ್ಮ ನೀರಿನ ಮೂಲದಲ್ಲಿ ಯಾವ ರೀತಿಯ ಗಮನಕ್ಕ್ಕೆ ಬಾರದ ಕಶ್ಮಲಗಳು ಇದೆ ಎಂಬುದನ್ನು ಅಳವಡಿಸಿದ ನಂತರ ಸೂಕ್ಷ್ಮವಾಗಿ ಗಮನಿಸಿ ಅದನ್ನು ಹೆಚ್ಚಾಗದಂತೆ ನಿಯಂತಿಸಿಕೊಂಡರೆ ಹನಿ ನೀರಾವರಿ 100% ಸಮಸ್ಯೆ ಇಲ್ಲದೆ ಕಾರ್ಯ ನಿರ್ವಹಿಸಬಲ್ಲದು.
0 Comments