ಅಡಿಕೆ ಬೆಳೆಗಾರರಿಗೆ ಅಭಯ – ಕರಿಮೆಣಸು ಬೆಳೆಗಾರರಿಗೆ ಭಯ

ಅಡಿಕೆ

ಅಡಿಕೆ ಆಮದು ಆದ ತಕ್ಷಣ ಮಾರುಕಟ್ಟೆಯಲ್ಲಿ ಒಂದು ಸಂಚಲನ ಉಂಟಾಯಿತು. ದರ ಕುಸಿಯಲಾರಂಭಿಸಿತು. ಅಡಿಕೆ ಬೆಳೆಗಾರರು ಇನ್ನೇನು ಮಾರುಕಟ್ಟೆ ಭಾರೀ ಕುಸಿಯಲಿದೆ ಎಂಬ ಆತಂಕಕ್ಕೆ ಒಳಗಾದರು. ಖಾಸಗಿ ಮಾರುಕಟ್ಟೆಯಲ್ಲಿ ದರ ಭಾರೀ ಕುಸಿತ ಉಂಟಾಗಿತ್ತು. ಆ ಸಮಯದಲ್ಲಿ ಬೆಳೆಗಾರರು ಕಟ್ಟಿದ ಅಡಿಕೆ ಮಾರುಕಟ್ಟೆ ಸಹಕಾರಿ ಸಂಸ್ಥೆ ಕ್ಯಾಂಪ್ಕೋ  ಸಂಸ್ಥೆಯ ಪರವಾಗಿ ಅಧ್ಯಕ್ಷರು ಬೆಳೆಗಾರರು ಅಂಜಬೇಕಾಗಿಲ್ಲ ಇದು ತಾತ್ಕಾಲಿಕ ಕುಸಿತ, ಎಲ್ಲಾ ಹಿಂದಿನಂತೆ ಆಗುತ್ತದೆ ಎಂಬ ಅಭಯ ನೀಡಿದ್ದಾರೆ. ಅದೇ ಸಂಸ್ಥೆ ವ್ಯವಹರಿಸುವ ಕರಿಮೆಣಸು ಆಮದು ಬಗ್ಗೆ ಯಾವ ಅಭಯವನ್ನೂ ನೀಡದ ಕಾರಣ ಬೆಳೆಗಾರರಿಗೆ ಭಯ ಉಂಟಾಗುವಂತಾಗಿದೆ.

ಆಮದು ಆದದ್ದು ಅಡಿಕೆ ಮಾತ್ರವಲ್ಲ. ಕರಿಮೆಣಸು ಸಹ ಆಗಿದೆ. ಮೆಣಸು ಹಿಂದೆಯೂ ಅಲ್ಪ ಸ್ವಲ್ಪ ಪ್ರಮಾಣದಲ್ಲಿ  ಆಮದು ಆಗುತ್ತಿತ್ತು. ಈಗ ಗಡಿಯಲ್ಲಿ ಸಡಿಲಿಕೆ ಉಂಟಾದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಆಮದು ಆಗಲಾರಂಭಿಸಿದೆ. ಒಂದೇ ತಿಂಗಳ ಅಂತರದಲ್ಲಿ ಕ್ವಿಂಟಾಲು ಕಾಳು ಮೆಣಸಿನ ಬೆಲೆ 4000 ಕ್ಕೂ ಹೆಚ್ಚು ಕುಸಿತ  ಕಂಡಿದೆ.ದಿನದಿಂದ ದಿನಕ್ಕೆ ದರ ಸ್ವಲ್ಪ ಸ್ವಲ್ಪ ಇಳಿಕೆಯಾಗುತ್ತಿದ್ದು, ಕೊಳ್ಳುವವರು ಉದಾಸೀನ ತಳೆಯುತ್ತಿದ್ದಾರೆ. ದೇಶದ ಬಹುತೇಕ ಜನ ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಮಾಡುವ ಆರೋಗ್ಯಕ್ಕೆ ಉತ್ತಮವಾದ ಔಷಧೀಯ ಕರಿಮೆಣಸಿನ ಬೆಲೆ ಕುಸಿದಾಗ ಯಾರೂ ಮಾತಾಡುವುದಿಲ್ಲ. ನಿಯೋಗಗಳು ,ಪತ್ರ ವ್ಯವಹಾರಗಳು  ತಿಂದು ಉಗುಳುವ ಅಡಿಕೆ ಬಗ್ಗೆ ನಡೆಯುತ್ತವೆ. ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಬಳಕೆಯಾಗುವ ಈ  ಕರಿಮೆಣಸಿಗೆ ಅಡಿಕೆಗಿಂತ ಕಡಿಮೆ ಬೆಲೆ. ಅದರ ಬೆಂಬಲಕ್ಕೆ ಯಾರೂ ಇಲ್ಲದ ಸ್ಥಿತಿ! 

 • ಜೂನ್ ಮೊದಲವಾರದಲ್ಲಿ ಭಾರತಕ್ಕೆ ಕಾನೂನು ಬಾಹಿರವಾಗಿ (illegal import) ಮಯನ್ಮಾರ್ ಮೂಲಕ ಕರಿಮೆಣಸು ಆಮದು ಆಗಿದೆ.
 • ಇದರಿಂದಾಗಿ ಭಾರತದ ಕರಿಮೆಣಸಿನ ಮಾರುಕಟ್ಟೆಯಲ್ಲಿ  ದರ ಕುಸಿತ ಉಂಟಾಗಿದೆ. 
 • ಅಡಿಕೆಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯುವ ಕರಿಮೆಣಸು ಅಡಿಕೆಗಿಂತ ಕಡಿಮೆ ಉತ್ಪಾದನೆ ಹೊಂದಿದೆ.
 • ಆಮದು ಕಾರಣದಿಂದ ಕಳೆದ-4-5  ವರ್ಷ  ಭಾರೀ ಕುಸಿತ ಕಂಡದ್ದು, ಈ ವರ್ಷ ಸ್ವಲ್ಪ ಚೇತರಿಕೆ ಆಗಿತ್ತು. 
 • ಆಮದು ಬಿಗಿ ಮಾಡಿದ ಪರಿಣಾಮ  ಕ್ವಿಂಟಾಲಿಗೆ 55000 ತನಕ ಧಾರಣೆ ಏರಿಕೆಯಾಗಿತ್ತು. 
 • ಗಡಿಯಲ್ಲಿ ಆಮದು ಸಡಿಲಗೊಳಿಸಿದ ಕಾರಣದಿಂದ ವಿಯೆಟ್ನಾಂ ಮತ್ತು ಬ್ರೆಝಿಲ್ ನಿಂದ ಮಯನ್ಮಾರ್ ಮೂಲಕ ಅಮದು ಅಧಿಕ ಪ್ರಮಾಣದಲ್ಲಿ ನಡೆದಿದೆ.
 • ಇದರ ಪರಿಣಾಮವಾಗಿ ಸ್ಥಳೀಯ ಮೆಣಸಿನ ದರ ಕ್ವಿಂಟಾಲಿಗೆ 47,000 ಕ್ಕೆ ಇಳಿಯಿತು.
 • ಇದನ್ನು ಅಂತರ ರಾಷ್ಟ್ರೀಯ ಕರಿಮೆಣಸು ಸಮುದಾಯ (International pepper community) ಕೇಂದ್ರ ಸರಕಾರದ ಗಮನಕ್ಕೆ ತಂದಿದೆ.
 • ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ಈ ಅಕ್ರಮ ಆಮದನ್ನು ತಡೆಯಬೇಕು ಎಂದು ಒತ್ತಾಯಿಸಿದೆ.
 • ಕೇರಳದ ಕಾಳುಮೆಣಸು ಮತ್ತು ಸಾಂಬಾರ ವರ್ತಕರ ಮತ್ತು ಬೆಳೆಗಾರ ಸಂಘಟನೆಯೂ ಕೇಂದ್ರ ಸರಕಾರಕ್ಕೆ ಆಮದು ತಡೆಯುವಂತೆ ಒತ್ತಾಯಿಸಿವೆ.
 • ಆದರೆ ಕರ್ನಾಟಕದಿಂದ ಅಡಿಕೆ ಆಮದು ತಡೆಗೆ ಮನವಿ ಸಲ್ಲಿಸಲಾಗಿದ್ದರೂ ಕರಿಮೆಣಸಿನ ಸುದ್ದಿ ಯಾರೂ ಪ್ರಸ್ತಾಪಿಸಿದಂತಿಲ್ಲ.
 • ಈ ಹಿಂದೆಯೂ ಕೇಂದ್ರ ಸರಕಾರಕ್ಕೆ ಸಾಕಷ್ಟು ಮನವಿ ಸಲ್ಲಿಸಲಾಗಿದ್ದರೂ ಕರಿಮೆಣಸು ಬೆಳೆಗಾರರ ರಕ್ಷಣೆಗೆ ಸರಕಾರ ಗಮನಹರಿಸಿಲ್ಲ.
ಆಮದು ಕರಿಮೆಣಸು
ಆಮದು ಕರಿಮೆಣಸು

ಕರ್ನಾಟಕದ ಕರಿಮೆಣಸು- ಅತೀ ಶ್ರೇಷ್ಟ:

 • ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕರಿಮೆಣಸು ಬೆಳೆಯಲಾಗುತ್ತಿದೆಯಾದರೂ ಕರ್ನಾಟಕ ಮತ್ತು ಕೇರಳದ ಕರಿಮೆಣಸಿನ ಗುಣಮಟ್ಟಕ್ಕೆ ಸರಿಸಾಟಿಯಾದ ಮೆಣಸು ಬೇರೆಲ್ಲೂ ಬೆಳೆಯುವುದಿಲ್ಲ.
 • ಇಲ್ಲಿನ ಮೆಣಸಿನ ಲೀಟರ್ ತೂಕ 600 ಗ್ರಾಂ ಗಿಂತ ಮೇಲಿದ್ದು, ವಿದೇಶದ ಮೆಣಸು 500  ಗ್ರಾಂ ಗಿಂತಲೂ ಕಡಿಮೆ ಇದೆ.
 • ವಿದೇಶದ ಮೆಣಸಿನ ಜೊತೆಗೆ ಸ್ಥಳೀಯ ಮೆಣಸನ್ನು ಮಿಶ್ರಣ ಮಾಡಿ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ.
 • ಮುಂಬೈಯ ಒಬ್ಬ ಮಿತ್ರರು ಹೇಳುತ್ತಾರೆ, ಮಾರುಕಟ್ಟೆಯಲ್ಲಿ ಸಿಗುವ ಕರಿಮೆಣಸು ಒಂದು ಚಮಚ ಹಾಕಿದರೂ ಖಾರ ಗೊತ್ತೇ ಆಗುವುದಿಲ್ಲವಂತೆ.
 • ಇದಕ್ಕೆಲ್ಲಾ ಕಾರಣ ಕಳಪೆ ಮೆಣಸಿನ ಜೊತೆಗೆ ಸ್ಥಳೀಯ ಮೆಣಸಿನ ಮಿಶ್ರಣ.
 • ಕರ್ನಾಟಕ ಕೇರಳದ ಕರಿಮೆಣಸಿನ ಗುಣಮಟ್ಟ ಅನಾದಿ ಕಾಲದಿಂದಲೂ ಜಗತ್ತಿನಲ್ಲಿ ಮಾನ್ಯವಾದದ್ದು.
 • ಅಂತಹ ಖಾತಿ ಉಳ್ಳ ಮೆಣಸಿಗೆ ಕಲಬೆರಕೆ ಮಾಡಿ ಇಲ್ಲಿನ ಮೆಣಸಿನ ಹೆಸರು ಕೆಡಿಸಲಾಗುತ್ತಿದೆ ಎನ್ನುತ್ತಾರೆ ಬೆಳೆಗಾರರು.
 • ಕರ್ನಾಟಕ ಇಂದು ಕೇರಳಕ್ಕಿಂತ ಮೆಣಸಿನ ಬೆಳೆಯಲ್ಲಿ ಮುಂದೆ ಹೋಗುತ್ತಿದ್ದು, ಇಲ್ಲಿನ ಮಲೆನಾಡು ಭಾಗದಲ್ಲಿ ಬೆಳೆಯುವ ಮೆಣಸಿನ ಗುಣಮಟ್ಟಕ್ಕೆ ಸರಿಸಾಟಿಯಾದ ಮೆಣಸು ಬೇರೆಲ್ಲೂ ಇಲ್ಲ.
 • ಸರಕಾರ ಈ ರೀತಿ ವಿದೇಶದ ಕಳಪೆ ಗುಣಮಟ್ಟದ ಮೆಣಸನ್ನು ಆಮದು ಮಾಡುವುದಕ್ಕೆ ಅನುಮತಿ ನೀಡುವುದರಿಂದ
 • ದೇಶದ ಉತ್ತಮ ಗುಣಮಟ್ಟದ ಮೆಣಸು ತನ್ನ ಮೌಲ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.
ಕರಿಮೆಣಸು ಆಮದು

ಸರಕಾರದ ನಿರ್ಲಕ್ಷ್ಯ ಆಮದಿಗೆ ಕಾರಣ:

 • ಗಡಿ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದ  ಕೆಲವು ಕಡಕ್ ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ಆಮದು ಆಗುವುದನ್ನು ತಡೆದಿದ್ದ ಪರಿಣಾಮ ಅಡಿಕೆ ಬೆಳೆಗಾರರಿಗೆ ಉತ್ತಮ ದರ ಸಿಕ್ಕಿದೆ.
 • ಹಾಗೆಯೇ ಮೆಣಸಿನ ಬೆಳೆಗಾರರೂ ಸಹ  ಸರಕಾರ ತಮ್ಮ ಪರವಾಗಿ ಇದೆ ಎಂದು ನಂಬಿದ್ದರು.
 • ಆದರೆ ಮಾರ್ಚ್ ತಿಂಗಳಲ್ಲಿ ಭಾರತ ಬರ್ಮಾ ಗಡಿಯಲ್ಲಿ  ಕೆಲಸ ಮಾಡುತ್ತಿದ್ದ ಕೆಲವು ಕಡಕ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಪರಿಣಾಮ ಆಮದುದಾರರಿಗೆ ಅನುಕೂಲವಾಯಿತು.
 • ಹೆಸರಿಗೆ ಕಾನೂನು ಬಾಹಿರವಾದರೂ  ರಾಜಾರೋಶವಾಗಿ ಆಮದು ಆಗುವಂತಾಗಿದೆ.
ಶ್ರೀಲಂಕಾ ಮೂಲದ ಕೊಟ್ಟಾಯಂ ಗೆ ಆಮದು ಅದ ಅಡಿಕೆ
ಶ್ರೀಲಂಕಾ ಮೂಲದ ಕೊಟ್ಟಾಯಂ ಗೆ ಆಮದು ಅದ ಅಡಿಕೆ

ಅಡಿಕೆ ಆಮದು ಸಧ್ಯಕ್ಕೆ ನಿಲ್ಲುವ ಸೂಚನೆ ಇಲ್ಲ:

 • ಅಡಿಕೆ ಬೆಳೆಗಾರರ ಸಂಘಟನೆಗಳು ಎಷ್ಟೇ ಒತ್ತಡ ಹೇರಿದರೂ ಇನ್ನು ಕೆಲವು ಸಮಯದ ತನಕ ಆಮದು ಆಗುತ್ತಿರಬಹುದು.
 • ಈಗ ಆದ ಆಮದು ಅಡಿಕೆಯ ಹವಾ ಮಾರುಕಟ್ಟೆಯಲ್ಲಿ ಇದ್ದೇ ಇರುತ್ತದೆ.
 • ಈಗಾಗಲೇ ದೇಶದ ವಿವಿಧ ಭಾಗಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಆಮದು ಆಗಿದೆ. 
 • ಕೇರಳದ ಕೊಟ್ಟಾಯಂ ಗೂ ಸಹ ಶ್ರೀಲಂಕಾ ಮೂಲದ್ದೆಂದು ಹೇಳಲಾಗಿರುವ ಅಡಿಕೆ ಆಮದು ಆಗಿರುತ್ತದೆ.
 • ಮಂಗಳೂರಿಗೂ ಆಮದು ಅಡಿಕೆ ಬಂದಿದೆ ಎಂಬ ಸುದ್ದಿ ಇದೆಯಾದರೂ ಸ್ಪಷ್ಟ ಮಾಹಿತಿ ಇಲ್ಲ.
 • ಅಡಿಕೆ ಆಮದು ಮಾಡಿಕೊಳ್ಳುವವರು ಭಾರತ ದೇಶದವರೇ  ಅಗಿರುವ ಕಾರಣ ಈಗಿನ ಆಡಳಿತಾರೂಢ ಕೇಂದ್ರ ಸರಕಾರ ಒಮ್ಮೆಗೆ ಸಡಿಲಿಕೆ ಕೊಟ್ಟಿದ್ದರೂ
 • ಅದನ್ನು ಹೆಚ್ಚು ಸಮಯ ಮುಂದುವರಿಸಲಿಕ್ಕಿಲ್ಲ ಎಂಬುದು ಎಲ್ಲಾ ವರ್ತಕರಿಗೂ ಗೊತ್ತಿರುವ ಕಾರಣ ಗರಿಷ್ಟ ಪ್ರಮಾಣದಲ್ಲಿ ಈಗಾಗಲೇ ಆಮದು ಮಾಡಲಾಗಿದೆ ಎಂಬ ಸುದ್ದಿ ಇದೆ.
 • ಹಾಗಾದ ಕಾರಣ ಇನ್ನು ಎರಡು ಮೂರು ತಿಂಗಳ ಕಾಲ ಅಡಿಕೆ ಧಾರಣೆ ಹೀಗೇ ಮುಂದುವರಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವರು.
 • ಸಾಮಾಜಿಕ ಮಾಧ್ಯಮಗಳಲ್ಲಿ ವಿದೇಶದ ಆಮದು ಅಡಿಕೆ ಲಭ್ಯವಿದೆ ಎಂಬ ಜಾಹೀರಾತುಗಳು ಇದನ್ನು ಪುಷ್ಟೀಕರಿಸುತ್ತವೆ.
 • ತಾತ್ಕಾಲಿಕವಾಗಿ ಬೆಳೆಗಾರರ ಸಮಾಧಾನಕ್ಕೆ ಎಂಬಂತೆ ಸಾಂಸ್ಥಿಕ ಖರೀದಿದಾರರು 5-10 ರೂ. ಹೆಚ್ಚಿಸಿ, ಹಾಗೆಯೇ ಕಡಿಮೆ ಮಾಡುತ್ತಾ ತಮ್ಮ ವ್ಯವಹಾರವನ್ನು ಕುದುರಿಸಿಕೊಳ್ಳಬಹುದು.
 • ಕಳೆದ ತಿಂಗಳು ಚಾಲ್ತಿಯಲ್ಲಿದ್ದ ದರ ಮತ್ತೆ ಬರಲು ಇನ್ನು ಎರಡು ಮೂರು ತಿಂಗಳ ಕಾಲಾವಕಾಶ ಬೇಕಾಗಬಹುದು.
 • ಕ್ಯಾಂಪ್ಕೋ ಅಧ್ಯಕ್ಷರು ಬೆಳೆಗಾರರಿಗೆ ಭರವಸೆ ನೀಡಿದ ತರುವಾಯ ಅಡಿಕೆ ದರ ಇಳಿಕೆ ಆಗಲಿಲ್ಲ. ಸ್ವಲ್ಪ ಚೇತರಿಕೆ ಆಗಿದೆ.
ಆಮದು ಅಡಿಕೆ ಹೀಗಿದೆ
ಆಮದು ಅಡಿಕೆ ಹೀಗಿದೆ

ಕೆಂಪಡಿಕೆ  ಬೆಳೆಗಾರರು ಆತಂಕ ಪಡಬೇಕಾಗಿಲ್ಲ:

 • ಆಮದು ಆಗುವ ಅಡಿಕೆ ಪೂರ್ತಿ ಚಾಲಿ ಅಡಿಕೆ ಆಗಿದ್ದು, ಸ್ಥಳೀಯವಾಗಿ ಬೇಯಿಸಿದ ಕೆಂಪಡಿಕೆ ದರ ಇಳಿಕೆಯಾಗುವ ಸಾಧ್ಯತೆ ಕಡಿಮೆ ಇದೆ.
 • ಹಾಗೆಂದು ಏರಿಕೆಯೂ ಆಗುವ ಸಾಧ್ಯತೆ ಕಡಿಮೆ. ಕೆಂಪಡಿಕೆ ಉತ್ಪಾದನೆ ಕಳೆದ ವರ್ಷಕ್ಕಿಂತ ಕಡಿಮೆ ಇರುವ ಕಾರಣ ಸ್ಟಡಿಯಾಗಿ ಉಳಿಯಬಹುದು ಎನ್ನುತ್ತಾರೆ.
 • ಆಮದು ನಡೆದ ತರುವಾಯ ರಾಶಿ ಅಡಿಕೆ ಧಾರಣೆ ಕ್ವಿಂಟಾಲಿಗೆ ರೂ. 1000 ದಷ್ಟು ಇಳಿಕೆಯಾಗಿದೆ.
 • ಇನ್ನು ಇಳಿಕೆ ಆಗುವ ಸಾಧ್ಯತೆ ಕಡಿಮೆ.  ಏರಿಕೆಯೂ ತಕ್ಷಣ ಆಗುವ ಸಾಧ್ಯತೆ ಇಲ್ಲ.
 • ಭಾನುವಾರ  ತೀರ್ಥಹಳ್ಳಿಯಲ್ಲಿ ರಾಶಿಗೆ 49299 ರೂ ಇತ್ತು.
 • ಶುಕ್ರವಾರ ಹೊಸನಗರದಲ್ಲಿ 1726 ಚೀಲ ರೂ. 49499 ಗರಿಷ್ಟ ಬೆಲೆಗೆ ಮರಾಟ ಆಗಿದೆ.
 • ಚಿತ್ರದುರ್ಗ ರಾಶಿ ಗರಿಷ್ಟ 48069,ಸರಾಸರಿ 47879 ಇತ್ತು.
 • ಚೆನ್ನಗಿರಿ ರಾಶಿ ಗರಿಷ್ಟ  49199,ಸರಾಸರಿ 48723 ಇತ್ತು.
 • ದಾವಣಗೆರೆಯಲ್ಲಿ ರಾಶಿ ಗರಿಷ್ಟ 49199,ಸರಾಸರಿ 48975 ಇತ್ತು. 
 • ಇಂದು ಶಿವಮೊಗ್ಗ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಇತ್ತು. ಒಟ್ಟು  2302 ಚೀಲ ರಾಶಿ ಅಡಿಕೆ ಬಂದಿದ್ದು 49109 ಗರಿಷ್ಟ ದರ ಮತ್ತು 48599 ಸರಾಸರಿ ದರ ಇತ್ತು.
 • ಈ ಅಂತರ ಹೆಚ್ಚು ಇಲ್ಲದ ಕಾರಣ ಬೆಳೆಗಾರರು ಅಂಜಬೇಕಾಗಿಲ್ಲ. ದರ ಕುಸಿತ ಆಗಲಾರದು.
 • ಸಿರಸಿ ರಾಶಿ. 48886 ಗರಿಷ್ಟ ದರ 47342 ಸರಸರಿ ದರ ಇತ್ತು.
 • ಸಾಗರ ರಾಶಿ. 49199 ಗರಿಷ್ಟ ಮತ್ತು 48699 ಸರಾಸರಿ ಇತ್ತು.
 • ಯಲ್ಲಾಪುರದಲ್ಲಿ 53,000 ತಲುಪಿದ್ದ ರಾಶಿ ಅಡಿಕೆ ಧಾರಣೆ 50,800 ಕ್ಕೆ ಇಳಿದಿದೆ.
ಇಂಡೊನೇಶಿಯಾ ಅಡಿಕೆ ಇದೆ ಎಂಬ ಜಾಹೀರಾತು
ಇಂಡೊನೇಶಿಯಾ ಅಡಿಕೆ ಇದೆ ಎಂಬ ಜಾಹೀರಾತು

ಅಡಿಕೆ ಬೆಳೆಗಾರರು ತುರ್ತು ಅಗತ್ಯಗಳಿಗೆ ತಕ್ಕಂತೆ ಮಾರಾಟ ಮಾಡಿ. ದರ ಸ್ವಲ್ಪ ಕೆಳಗೆ ಬರಬಹುದಾದರೂ ಹರಿದಾಡುತ್ತಿರುವ ಸುದ್ದಿಯಂತೆ ಕ್ವಿಂಟಾಲಿಗೆ  35,000-30,000 ದ ಮಟ್ಟಕ್ಕೆ ಇಳಿಕೆಯಾಗಲಾರದು. ಮುಂದೆ ಚುನಾವಣೆ ಇರುವ ಕಾರಣ  ಸರಕಾರ ಆಮದಿಗೆ ಹೆಚ್ಚು ಸಮಯ ಅವಕಾಶವನ್ನೂ ಕೊಡಲಾರದು. ಹಳೆ ಅಡಿಕೆಗೆ ಬೇಡಿಕೆ ಇರುತ್ತದೆ. ಕರಿಮೆಣಸು ಆಮದನ್ನು ಕಟ್ಟುನಿಟ್ಟಾಗಿ ನಿರ್ಭಂದಿಸುವ ಮೂಲಕ  ಬೆಳೆಗಾರನ್ನು  ಸರಕಾರ ಪ್ರೋತ್ಸಾಹಿಸಬೇಕು. ಇದು ಆರೋಗ್ಯಕ್ಕೆ ಉತ್ತಮವಾದ  ಔಷದೀಯ ಸಾಂಬಾರ ವಸ್ತುವಾಗಿದೆ. ಪ್ರಪಂಚದ ಎಲ್ಲಾ ದೇಶಗಳೂ ಬಳಕೆ ಮಾಡುವ ಉತ್ಪನ್ನ. ಭಾರತದ  ಉತ್ಕೃಷ್ಟ ಗುಣಮಟ್ಟದ ಮೆಣಸಿಗೆ ಜಾಗತಿಕ ಬ್ರಾಂಡಿಂಗ್ ಮಾಡುವ ನಿಟ್ಟಿನಲ್ಲಿ ಸರಕಾರ  ಬೆಳೆಗಾರರನ್ನು ಪ್ರೋತ್ಸಾಹಿಸಬೇಕು.

Leave a Reply

Your email address will not be published. Required fields are marked *

error: Content is protected !!