ನವೆಂಬರ್ 19-20-21-22-23 ದಿನಗಳಲ್ಲಿ ವಿಶೇಷ ಕಿಸಾನ್ ಮೇಳ.

ನವೆಂಬರ್ 19-20-21-22-23 ದಿನಗಳಲ್ಲಿ ವಿಶೇಷ ಕಿಸಾನ್ ಮೇಳ.
ನವೆಂಬರ್ ತಿಂಗಳು ದಿನಾಂಕ 19 ಶನಿವಾರದಿಂದ ಮೊದಲ್ಗೊಂಡು 20-21-22-23 ರ ಬುಧವಾರದ ತನಕ ನೆಟ್ಟಣದ ಕಿಡುವಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ (CPCRI) ವಿಶೇಷ ಕಿಸಾನ್ ಮೇಳ ನಡೆಯಲಿದೆ. ಇದು ಇಲ್ಲಿನ ಇತಿಹಾಸದಲ್ಲೇ ಆತೀ ದೊಡ್ಡ  ರೈತ ಸಂಪರ್ಕ ಕಾರ್ಯಕ್ರಮವಾಗಿದ್ದು, ಇದಕ್ಕೆ ನಿಮ್ಮೆಲ್ಲರನ್ನೂ ಆಹ್ವಾನಿಸಲಾಗುತ್ತದೆ. ನೀವೂ ಬನ್ನಿ ನಿಮ್ಮ ಎಲ್ಲಾ ಮಿತ್ರರನ್ನೂ ಈ ಕಾರ್ಯಕ್ರಮಕ್ಕೆ ಬರುವಂತೆ ತಿಳಿಸಿ.
CPCRI ಸಂಸ್ಥೆಯ ಕರ್ನಾಟಕದಲ್ಲಿರುವ ತೆಂಗು – ಅಡಿಕೆ ಬೀಜೋತ್ಪಾದನಾ ಸಂಸ್ಥೆಗೆ 50 ವರ್ಷಗಳ ಸಂಭ್ರಮ.1972 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ (ಈಗ ಕಡಬ ತಾಲೂಕು) ನೆಟ್ಟಣ (ಬಿಳಿನೆಲೆ ಗ್ರಾಮ)ದಲ್ಲಿ ಈ ಸಂಶೋಧನಾ ಸಂಸ್ಥೆ ಪ್ರಾರಂಭವಾಗಿದ್ದು, ಇದು ಭಾರತದ ಅತೀ ದೊಡ್ಡ ತೆಂಗಿನ ತಳಿ ಸಂಗ್ರಹಣಾ ಕೇಂದ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ಸಂಧರ್ಭದಲ್ಲಿ ರೈತರೆಲ್ಲರನ್ನೂ ಈ ಕೇಂದ್ರಕ್ಕೆ ಆಹ್ವಾನಿಸಿ, ಕೇಂದ್ರದ ಎಲ್ಲಾ ಚಟುವಟಿಕೆಗಳನ್ನು ತೋರಿಸಿ, ತಜ್ಞ ವಿಜ್ಞಾನಿಗಳೊಡನೆ ಸಮಾಲೋಚನೆ ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ. 
ಕುಕ್ಕೆಸುಭ್ರಮಣ್ಯ ಬಹುಶಃ ಎಲ್ಲರಿಗೂ ಗೊತ್ತಿರುವ ಕ್ಷೇತ್ರ. ಅಲ್ಲಿಂದ ಸುಮಾರು 10 ಕಿಲೋ ಮೀಟರು ಅಂತದಲ್ಲಿ ಉಪ್ಪಿನಂಗಡಿ ಮಾರ್ಗದಲ್ಲಿ ಈ ಸಂಶೊಧನಾ ಕೇಂದ್ರ ಇದ್ದು, ಇದು ದಕ್ಷಿಣ ಏಶ್ಯಾದ  ಅಂತರ ರಾಷ್ಟ್ರೀಯ ತೆಂಗಿನ ತಳಿ ಸಂಗ್ರಹಣಾ ಕೇಂದ್ರವಾಗಿರುತ್ತದೆ.(International Coconut Gene Bank if South Asia) ಸುಮಾರು 120 ಹೆಕ್ಟೇರ್ ವಿಸ್ತೀರ್ಣದ ಈ ಸಂಶೋಧನಾ ಸಂಸ್ಥೆಯಲ್ಲಿ  95 ಹೆಕ್ಟೇರ್ ನಷ್ಟು ತೆಂಗು,7.5 ಎಕ್ರೆಯಷ್ಟು ಅಡಿಕೆ, 2.5 ಹೆಕ್ಟೇರ್ ಕೊಕ್ಕೋ ಬೆಳೆ ಇದೆ. ಇದಲ್ಲದೆ  1998 ರಲ್ಲಿ ಸ್ಥಾಪಿತವಾದ ಅಂತರರಾಷ್ಟ್ರಿಯ ತೆಂಗು ತಳಿ ಸಂಗ್ರಹಣಾ ಕೇಂದ್ರವನ್ನು International Coconut Gene Bank if South Asia coconut genetic resource network (COGENT) ಇನ್ನಷ್ಟು ಅಭಿವೃದ್ದಿಪಡಿಸುವ ಸಲುವಾಗಿ ಮತ್ತೆ 500 ಹೆಕ್ಟೇರ್ ಜಾಗವನ್ನು ಸೇರಿಸುವ ಪ್ರಸ್ತಾಪನೆ ಇದೆ.  ಇಲ್ಲಿ ದೇಶದ ಬಹುತೇಕ ಎಲ್ಲಾ ತಳಿಗಳ ಸಂಗ್ರಹ ಇದೆ. ವಿದೇಶಗಳ ತಳಿ ಸಂಗ್ರಹಣೆಯೂ ಇದೆ. ಮಂಗ, ಮೋಹಿತ್ ನಗರ ಮುಂತಾದ ಅಡಿಕೆಗಳ ಮೂಲ ತಳಿ ಸಂಗ್ರಹಗಳೂ ಇವೆ. ಮಂಗಳೂರಿನಿಂದ 110 ಕಿಲೋ ಮೀಟರ್, ದೂರದಲ್ಲಿ ಈ ಕೇಂದ್ರ ಇದೆ. ನೆಟ್ಟಣ ಇಲ್ಲಿಗೆ (ಸುಬ್ರಮಣ್ಯ ರೋಡ್) ರೈಲ್ವೆ ಸಂಪರ್ಕವೂ ಇದೆ. ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. 
ಇಲ್ಲಿಂದ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಗೆ ಗರಿಷ್ಟ ಪ್ರಮಾಣದಲ್ಲಿ ತೆಂಗಿನ ಹೈಬ್ರೀಡ್ ತಳಿಗಳು,ಆಯ್ಕೆ ತಳಿಗಳ ಸಸಿಗಳು, ಬೀಜಗಳು  ಸರಬರಾಜು ಆಗುತ್ತದೆ. ಅಸಂಖ್ಯಾತ ಬೆಳೆಗಾರರು ಇಲ್ಲಿಂದ ನೆಡು ಸಾಮಾಗ್ರಿಗಳನ್ನು ಪಡೆದು ತೆಂಗು ಅಡಿಕೆ ಬೆಳೆಸಿದವರಿದ್ದಾರೆ.ಇಲ್ಲಿರುವಷ್ಟು ತೆಂಗಿನ ವೈವಿಧ್ಯತೆ ಬೇರೆ ಎಲ್ಲೂ ಇಲ್ಲ ಎಂದರೂ ತಪ್ಪಾಗಲಾರದು.
ನೆಟ್ಟಣದ ಕಿಡುವಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ
ನೆಟ್ಟಣದ ಕಿಡುವಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ

ಕಿಸಾನ್ ಮೇಳದಲ್ಲಿ ಏನಿದೆ?

ನವೆಂಬರ್ 2022 ಐದು ದಿನಗಳ ಕಿಸಾನ್ ಮೇಳ ಎಂದರೆ ಸಣ್ಣದಲ್ಲ. ಪ್ರತೀ ದಿನ ಬರುವ ರೈತರಿಗೆ ಅಗತ್ಯವಾದ ಬೇರೆ ವಿಷಯಗಳನ್ನು  ತಿಳಿಸುವುದು, ಜೊತೆಗೆ ರೈತರಿಗೆ ಬೇಕಾಗುವ ಬೆಳೆ ಒಳಸುರಿ, ಸೇವೆ, ಮೌಲ್ಯವರ್ಧನೆ , ಆಧುನಿಕ ಕೃಷಿ ಸಾಧನ ಸಲಕರಣೆ ಮುಂತಾದವುಗಳ ಪ್ರದರ್ಶನ ಮಳಿಗೆಗಳೂ ಇರುತ್ತವೆ.

ಮೊದಲ ದಿನ ದಿನಾಂಕ 19 ನವೆಂಬರ್ 2022:

19 ನವೆಂಬರ್ ಕಿಸಾನ್ ಮೇಳದ ಉದ್ಗಾಟನೆ ಬೆಳಗ್ಗೆ 10 ಗಂಟೆಗೆ ನೆರವೇರಲಿದೆ. ಈ ಸಂದರ್ಭದಲ್ಲಿ ಗಣ್ಯರು, ಮತ್ತು ವಿಶೇಷ ಸಾಧನೆ ಮಾಡಿದವರ ಉಪಸ್ಥಿತಿ ಇರುತ್ತದೆ.  ಕೆಲವು ಪ್ರಕಟಣೆಗಳ ಬಿಡುಗಡೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪಡೆದವರಿಗೆ ಸನ್ಮಾನ ಕಾರ್ಯಕ್ರಮವೂ ಇರುತ್ತದೆ. ಮಧ್ಯಾನ್ಹ 12.30 ಕ್ಕೆ ಜೀವವೈವಿಧ್ಯ ಸಂರಕ್ಷಣಾ ಮೇಳ ನಡೆಯಲಿದ್ದು, ವಿಧ್ಯಾರ್ಥಿಗಳು, ರೈತರು ಜೀವವೈವಿಧ್ಯಗಳ ಸಂರಕ್ಷಣೆಯಲ್ಲಿ ತಮ್ಮ ಪಾತ್ರವನ್ನು ಹೇಗೆ ನಿಭಾಯಿಸಬಹುದು ಎಂಬುದರ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ. ಮಧ್ಯಾನ್ಹದ 2 ಗಂಟೆ ನಂತರ ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಕಾಲಿಕ ಬೆಳವಣಿಗೆಗಳು ಮತ್ತು ಕೃಷಿ ಕ್ಷೇತ್ರದ ಸುಸ್ಥಿರ ಬೆಳವಣಿಗೆಯ ಅವಕಾಶಗಳ ಕುರಿತಂತೆ ಸಮಾಲೋಚನೆ ನಡೆಯಲಿದೆ.  ಇದರ ಜೊತೆಗೆ ಅಡಿಕೆ, ತೆಂಗು ಬೆಳೆಗಳಿಗೆ ಡ್ರೋನ್ ಮೂಲಕ ಸಿಂಪರಣೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ.

2 ದಿನ ದಿನಾಂಕ:20 ನವೆಂಬರ್ 2022:

ಈ ದಿನ ಕಿಸಾನ್ ಮೇಳದಲ್ಲಿ   ಬೆಳಿಗ್ಗೆಯಿಂದ ಮಧ್ಯಾನ್ಹದ ತನಕ ಅಡಿಕೆ ಬೆಳೆ ಕ್ರಮಗಳು ಮತ್ತು ಸಸ್ಯ ಸಂರಕ್ಷಣಾ ವಿಧಾನಗಳ ಬಗ್ಗೆ CPCRI  ಸಂಸ್ಥೆಯ ಹಿರಿಯ ವಿಜ್ಞಾನಿಗಳಾದ ವಿನಾಯಕ ಹೆಗಡೆ ಮತ್ತು ರವಿ ಭಟ್ ಇವರ ಉಪನ್ಯಾಸ ಇರುತ್ತದೆ.   ಮಧ್ಯಾನ್ಹದ ನಂತರ  ಹೈಟೆಕ್ ತೋಟಗಾರಿಕಾ ತಂತ್ರಜ್ಞಾನ ಎಂಬ ಕಾರ್ಯಕ್ರಮದಲ್ಲಿ,  ಆಧುನಿಕ ತಾಂತ್ರಿಕತೆಗಳಾದ  ಕೃಷಿಯಲ್ಲಿ  ಪ್ಲಾಸ್ಟಿಕ್ ಗಳ ಬಳಕೆ, ಹೈಡ್ರೋಫೋನಿಕ್ಸ್, ಏರಿಯೋಫೋನಿಕ್ಸ್, ಕೊಕೋಫೋನಿಕ್ಸ್  ವರ್ಟಿಕಲ್ ಫಾರ್ಮಿಂಗ್ ಮುಂತಾದ ವಿಷಯಗಳ ಬಗ್ಗೆ  ತಜ್ಞರು ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಹೈಬ್ರೀಡ್ ತೆಂಗು
ಹೈಬ್ರೀಡ್ ತೆಂಗು

3 ನೇ ದಿನ ದಿನಾಂಕ 21-ನವೆಂಬರ್ 2022:

ನೈಸರ್ಗಿಕ ಸಂಪನ್ಮೂಲಗಳ ಬಳಕೆ ಕುರಿತಂತೆ ಮಾಹಿತಿಗಳನ್ನು ನೀಡುವ ಕಾರ್ಯಕ್ರಮ ಇರುತ್ತದೆ. ಇದರಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಕೃಷಿ ಮಾಡುವ ಬಗ್ಗೆ,  ಹೊರಗಡೆಯಿಂದ ತರುವ ಬೆಳೆ ಒಳಸುರಿಗಳನ್ನು ಕಡಿಮೆ ಮಾಡುವ ಬಗ್ಗೆ, ಸಾವಯವ ಕೃಷಿ, ವೈಜ್ಞಾನಿಕ ಕಾಂಪೋಸ್ಟಿಂಗ್ ವಿಧಾನ,  ಮೂಂತಾದವುಗಳ ಬಗ್ಗೆ ಚರ್ಚೆ  ಸಮಾಲೋಚನೆ ಇರುತ್ತದೆ. ಮಧ್ಯಾನ್ಹದ ನಂತರ ಕೊಕ್ಕೋ ಬೆಳೆಸುವಿಕೆ ಮತ್ತು ಸಂಸ್ಕರಣೆ ಕುರಿತಂತೆ ಮಾಹಿತಿ ನೀಡುವ ಕಾರ್ಯಕ್ರಮ ಇರುತ್ತದೆ.

4 ನೇ ದಿನ ದಿನಾಂಕ:22 ನವೆಂಬರ್- 2022:

ಬೆಳಗ್ಗಿನ ಕಾರ್ಯಕ್ರಮದಲ್ಲಿ ತೋಟಗಾರಿಕಾ ಬೆಳ ಮತ್ತು ಸಾಂಬಾರ ಬೆಳೆಗಳಲ್ಲಿ ಮೌಲ್ಯವರ್ಧನೆ  ಅವಕಾಶಗಳ ಬಗ್ಗೆ ತಜ್ಞರು ತಿಳಿಸಿಕೊಡಲಿದ್ದಾರೆ. ತೆಂಗಿನ ಮರದಿಂದ ನೀರಾ ತೆಗೆಯುವ ಕುರಿತಂತೆ, ನೀರಾದಿಂದ ಬೆಲ್ಲ, ಸಕ್ಕರೆ ಇತ್ಯಾದಿ ತಯಾರಿಸುವ ಬಗ್ಗೆಯೂ ಉಪನ್ಯಾಸ ಮತ್ತು ಚರ್ಚೆಗೆ ಅವಕಾಶ ಇರುತ್ತದೆ. ಮಧ್ಯಾನ್ಹದ ನಂತರ  ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಮತ್ತು ಅದರಲ್ಲಿ ಅನುಕೂಲಗಳ ಕುರಿತಾಗಿ ಸಂಪೂರ್ಣ ಮಾಹಿತಿ ನೀಡುವ ಕಾರ್ಯಕ್ರಮ ಇರುತ್ತದೆ. ಭವಿಷ್ಯದಲ್ಲಿ ಈ ಒಂದು ಸಂಘಟನೆ ಕೃಷಿಕರ ಪಾಲಿಗೆ ಅತೀ ದೊಡ್ಡ ವರವಾಗಲಿದ್ದು, ಇದರ ಬಗ್ಗೆ ವಿವರಗಳನ್ನು ತಜ್ಞರು ನೀಡಲಿದ್ದಾರೆ.
ಗಿಡ್ಡ ತಳಿಯ ತೆಂಗು COD
ಗಿಡ್ಡ ತಳಿಯ ತೆಂಗು COD

5 ನೇ ದಿನ ನವೆಂಬರ್ 23-2022:

ಈದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾನ್ಹದ ತನಕ  ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ಇರುತ್ತದೆ. ರೈತರ ಹೊಲದಲ್ಲಿ ಇರುವ ವಿಶೇಷ ಗುನದ ಸಸ್ಯಗಳ ಬಗ್ಗೆ ದಾಖಲಾತಿ ಮಾಡುವುದು, ಪೇಟೆಂಟ್ ಮಾಡುವುದು ಇತ್ಯಾದಿಗಳ ಬಗ್ಗೆ ಇಲ್ಲಿ  ಮಾಹಿತಿಗಳು ಇರುತ್ತದೆ. ಮಧ್ಯಾನ್ಹದ ನಂತರ 2 ಗಂಟೆ ತರುವಾಯ ಸಮಾರೋಪ ಕಾರ್ಯಕ್ರಮ ಇರುತ್ತದೆ.
ಮೂಲ ಮಂಗಳ ತಳಿಯ ಅಡಿಕೆ ತೋಟ
ಮೂಲ ಮಂಗಳ ತಳಿಯ ಅಡಿಕೆ ತೋಟ

ಮಳಿಗೆಗಳು ಮತ್ತು ಪ್ರದರ್ಶನಗಳು:

ಸುಮಾರು 150 ಕ್ಕೂ ಹೆಚ್ಚಿನ ಪ್ರದರ್ಶನ ಮಳಿಗೆಗಳು ಇರುತ್ತವೆ. ಇದರಲ್ಲಿ ಕೃಷಿ ಯಂತ್ರೋಪಕರಣ,ನೀರಾವರಿ, ಸಾಧನ ಸಲಕರಣೆ, ನರ್ಸರಿ,  ಮೌಲ್ಯವರ್ಧಿತ ಉತ್ಪನ್ನಗಳು ಇತ್ಯಾದಿಗಳು ಇರುತ್ತದೆ.

ಕೇಂದ್ರದ ತೋಟದಲ್ಲಿ ಏನಿರುತ್ತದೆ:

ಗಿಡ್ಡ ತಳಿಯ ತೆಂಗು MYD
ಗಿಡ್ಡ ತಳಿಯ ತೆಂಗು MYD
ತೆಂಗಿನಲ್ಲಿ ಬೇರೆ ಬೇರೆ ತಳಿಯ ಎತ್ತರ , ಗಿಡ್ಡ ತಳಿಗಳು , ಹೈಬ್ರೀಡ್ ತಳಿಗಳು, ತೆಂಗಿನ ಕಾಯಿಯ ಬ್ರೂಣ ತಂದು ಬೆಳೆಸಿ ತೋಟ ಮಾಡಿರುವ ತೆಂಗಿನ ಮರಗಳು, ಹನಿ ನೀರಾವರಿಯಲ್ಲಿ ಬೆಳೆಸಿದ ತೋಟ, ಬೀಜದ ಅಡಿಕೆ ತೋಟ ತೆಂಗಿನ ಸಸಿ ಮಾಡುವ ವಿಧಾನ, ಬೀಜ ಆಯ್ಕೆ ವಿಧಾನ ಇವುಗಳನ್ನು ಈ ವಿಶಾಲವಾದ ತೋಟದಲ್ಲಿ ನೊಡಬಹುದು. 5000 ಕ್ಕೂ ಹೆಚ್ಚಿನ ತೆಂಗಿನ ಮರಗಳುಳ್ಳ ತೋಟದಲ್ಲಿ ಸುತ್ತಾಡಲು ದಿನ ಒಂದು ಬೇಕಾಗಬಹುದು.
ಕೇಂದ್ರದ ವಿಜ್ಞಾನಿ ದಿವಾಕರ್ Y ಇವರು  ಮತ್ತು ಸಿಬ್ಬಂಧಿಗಳು, ಕಾಸರಗೊಡು ಮತ್ತು ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೊಧನಾ ಸಂಸ್ಥೆಯ ಮುಖ್ಯಸ್ಥರು , ವಿಜ್ಞಾನಿಗಳನ್ನು ಇಲ್ಲಿ ಭೇಟಿ ಮಾಡಬಹುದು. ಕಾರ್ಯಕ್ರಮವು ಕ್ಯಾಂಪ್ಕೋ, ನಬಾರ್ಡ್, ಮ್ಯಾಂಕೋಸ್, ತುಂಕೋಸ್, ತೆಂಗು ಅಭಿವೃದ್ದಿ ಮಂಡಳಿ, ಕರ್ನಾಟಕ ರಾಜ್ಯ ಸರಕಾರ  ಸಹಕಾರದಿಂದ ನಡೆಯುತ್ತದೆ. 
 

Leave a Reply

Your email address will not be published. Required fields are marked *

error: Content is protected !!