ಬೆಳೆಗಾರರ ಬಹು ನಿರೀಕ್ಷೆಯ ಉತ್ತಮ ಧಾರಣೆ ಯಾಕೋ ಈ ವರ್ಷ ಈಡೇರಲಿಲ್ಲ. ಕಳೆದ ವರ್ಷ ಇದೇ ಸಮಯದಲ್ಲಿ ಇದ್ದ ಧಾರಣೆಗಿಂತ ಈ ವರ್ಷ ಕಡಿಮೆ. ಕಾರಣ ಎನಿರಬಹುದು? ಯಾವಾಗ ಚೇತರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿರುವ ಬೆಳೆಗಾರರಿಗೆ ಇಲ್ಲಿದೆ ಕೆಲವು ಅಗತ್ಯ ಮಾಹಿತಿ. ಈ ವರ್ಷ ಅಡಿಕೆ ಧಾರಣೆ ಕಳೆದ ವರ್ಷದಷ್ಟು ಏರಿಕೆ ಆಗುವ ನಿರೀಕ್ಷೆ ಸದ್ಯಕ್ಕೆ ಇಲ್ಲ.
ಚಾಲಿ ಅಡಿಕೆ ಧಾರಣೆ ಮತ್ತೆ ಕ್ವಿಂಟಾಲಿಗೆ ರೂ.1000 ಕಡಿಮೆಯಾಗಿದೆ. ಡಬ್ಬಲ್ ಚೋಲ್ ಸಹ 1000 ದಷ್ಟು ಕಡಿಮೆಯಾಗಿದೆ. ಕೆಂಪಡಿಕೆಗೂ ರೂ.1000 ದಷ್ಟು ಕಡಿಮೆಯಾಗಿದೆ. ಮುಂದಿನ ವಾರ ಮತ್ತೆ ಸ್ವಲ್ಪ ಇಳಿಕೆಯೇ ಆಗಬಹುದು ಎನ್ನುತ್ತಾರೆ. ಉತ್ತರ ಭಾರತದಿಂದ ಬೇಡಿಕೆ ಕಡಿಮೆಯಾಗಿದೆ. ಆಮದು ಅಡಿಕೆ ಇದೆ. ಆಮದು ಅಡಿಕೆ ಗುಣಮಟ್ಟ ಚೆನ್ನಾಗಿಲ್ಲ ಎಂಬುದು ನಿಜವಲ್ಲ. ಇಲ್ಲಿಯ ಅಡಿಕೆಯಂತೆಯೇ ಇದೆ. ಹಾಗಾಗಿ ಆ ಅಡಿಕೆಗೆ ಸಮನಾಗಿ ಬೆಲೆ ನಿಲ್ಲಲಿದೆ ಎನ್ನುತ್ತಾರೆ ಕೆಲವು ವ್ಯಾಪಾರಿಗಳು. ಈ ಇಳಿಕೆಗೆ ಕಾರಣ ಗುಜರಾತ್ ಚುನಾವಣೆ ಎಂಬುದಾಗಿ ಭಾರೀ ಪ್ರಚಾರ ಇದೆ. ಗುಜರಾತ್ ಚುನಾವಣೆ ಡಿಸೆಂಬರ್ 8 ಕ್ಕೆ ಮುಗಿಯುತ್ತದೆ. ಆ ನಂತರವೇ ದರ ಏರಿಕೆ ಆಗುವುದು. ಚುನಾವಣೆ ಇರುವ ಕಾರಣ ಹಣ ಚಲಾವಣೆ ಕಷ್ಟವಾಗಿದೆ ಹಾಗಾಗಿ ಬೇಡಿಕೆ ಕಡಿಮೆ. ಖಾಸಗಿಯವರದ್ದು ಈಗ ಅಡಿಕೆ ವ್ಯಾಪಾರ ಏನಿದ್ದರೂ ಕೊಳ್ಳುವ ಗಿರಾಕಿ ಇದ್ದರೆ ಖರೀದಿ ಎಂಬಂತಾಗಿದೆ. ಕಷ್ಟವಾದರೆ ಆ ದಿನವೇ ಸಾಂಸ್ಥಿಕ ಖರೀದಿದಾರರಿಗೆ ಮಾರಾಟ.ಕೆಲವೇ ಕೆಲವು ಜನ ಭಾರೀ ರಿಸ್ಕ್ ತೆಗೆದುಕೊಂಡು ಸ್ಟಾಕ್ ಗೆ ಖರೀದಿ ಮಾಡುತ್ತಿದ್ದಾರೆ. ಹಣದ ಕೊರತೆ ಹಾಗೂ ಆಮದು ಅಡಿಕೆಯ ಹವಾ ಅಡಿಕೆ ಧಾರಣೆಯನ್ನು ಏರಲು ಬಿಡುತ್ತಿಲ್ಲ.
ದರ ಏರಿಕೆ ಆಗಬಹುದೇ?
ಮುಂದಿನ ಜನವರಿ ಮಧ್ಯದ ತನಕ ಚಾಲಿ ಹಾಗೂ ಕೆಂಪು ಅಡಿಕೆಗೆ ದರ ಏರಿಕೆ ಸಾಧ್ಯತೆಗಳು ತುಂಬಾ ಕಡಿಮೆ. ಆ ನಂತರ ಮಾರುಕಟ್ಟೆಗೆ ಬರುವ ಅಡಿಕೆ ಪ್ರಮಾಣಕ್ಕೆ ಅನುಗುಣವಾಗಿ ದರ ಸ್ವಲ್ಪ ಸ್ವಲ್ಪ ಏರಲು ಪ್ರಾರಂಭವಾಗಬಹುದು. ಈ ವರ್ಷದ ಪರಿಸ್ಥಿತಿಯಲ್ಲಿ ಬೆಳೆಗಾರರಲ್ಲಿ ಸಿಂಗಲ್ ಚೋಲ್ ಅಡಿಕೆ ದಾಸ್ತಾನು ಇದೆ. ಡಬ್ಬಲ್ ಚೋಲ್ ಮುಗಿದಿದೆ. ಸಿಂಗಲ್ ಚೋಲ್ ಕಳೆದ ವರ್ಷ ಒಳ್ಳೆಯ ಅಡಿಕೆ ತುಂಬಾ ಕಡಿಮೆ ಆದ ಕಾರಣ ದರ ಮೇಲೆ ಬರಲೇ ಇಲ್ಲ. ಹಳೆ ಅಡಿಕೆಗೆ ಈಗಲೂ ಬೇಡಿಕೆ ಇದೆ. ಕಾರಣ ಅದರ ಗುಣಮಟ್ಟ ಚೆನ್ನಾಗಿದೆ. ಕೆಲವು ಖಾಸಗಿಯವರು ಈಗಲೂ 50000 ಕ್ಕೆ ಹಳೆ ಅಡಿಕೆ ಖರೀದಿ ಮಾಡುತ್ತಾರೆ.ಸಿಂಗಲ್ ಚೊಲ್ ಉತ್ತಮ ಅಡಿಕೆ ಪ್ರಮಾಣವೇ ಕಡಿಮೆ ಇದೆ. ಅದು ಬರಬೇಕಾದದೆ ಇನ್ನೂ ಸ್ವಲ್ಪ ಸಮಯ ಬೇಕು. ನಾವು ಗ್ರಹಿಸಿದಂತೆ ಅಡಿಕೆ ವ್ಯಾಪಾರಿಗಳು ಹೆಡ್ಡರಲ್ಲ. ಮಾರುಕಟ್ಟೆ ಫೋರ್ಸ್ ಹೇಗೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಉತ್ತಮ ಗುಣಮಟ್ಟದ ಅಡಿಕೆ ಬರುವ ತನಕ ದರ ಎರಿಕೆ ಆಗುವುದು ಕಷ್ಟ.
ಈ ವರ್ಷ ಕಳೆದ ವರ್ಷಕ್ಕಿಂತ ವಾತಾವರಣದ ಅನುಕೂಲ ಚೆನ್ನಾಗಿದ್ದು, ಈಗಾಗಲೇ ಹೊಸ ಅಡಿಕೆಯೂ ಮಾರುಕಟ್ಟೆಗೆ ಬರಲಾರಂಭಿಸಿದೆ.ಮಳೆ ಮುಗಿದು ಚಳಿಗಾಲ ಬಂದಿದೆ. ಅಡಿಕೆ ಒಣಗಿಸಲು ಅಂತಹ ಕಷ್ಟಗಳಿಲ್ಲ. ವಾತಾವರಣ ಚೆನ್ನಾಗಿದ್ದರೆ ಅಡಿಕೆ ಒಣಗಲು ಅನುಕೂಲ. ಈ ಪರಿಸ್ಥಿತಿ ಇರುವ ಕಾರಣ ಹೊಸ ಅಡಿಕೆಗೆ ದರ ಸ್ವಲ್ಪ ಏರಿಕೆ ಆಗಬಹುದು. ಮಾರ್ಚ್ ಸುಮಾರಿಗೆ ಹೂಸ ಅಡಿಕೆ ಮತ್ತು ಹಳೆ ಅಡಿಕೆ ಅಂತರ ತುಂಬಾ ಕಡಿಮೆಯಾಗಬಹುದು ಎಂಬ ಸುದ್ದಿ ಇದೆ.

ಕೆಂಪಡಿಕೆ ಧಾರಣೆಯೂ ಸಹ ಮುಂದಿನ ಜನವರಿ ಕೊನೇ ತನಕ ಏರಿಕೆ ಕಷ್ಟಸಾಧ್ಯ. ಈಗಾಗಲೇ ಎಲ್ಲಾ ಕಡೆ ಕೊಯಿಲು ಪ್ರಾರಂಭವಾಗಿದೆ. ಈ ವರ್ಷ ಸಾಗರ, ಶಿರಸಿ, ಕೊಪ್ಪ, ಶ್ರಿಂಗೇರಿ ಕಡೆಯೂ ಬೇಗ ಕೊಯಿಲು ಪ್ರಾರಂಭವಾಗಬಹುದು. ಒಣಗಲು ಅನುಕೂಲ ಇದೆ.50% ಕ್ಕೂ ಹೆಚ್ಚಿನ ಬೆಳೆಗಾರರು ತೋಟ ಚೇಣಿಗೆ ಕೊಡುವವರು. ವಹಿಸಿಕೊಂಡವರು ತುರ್ತಿನ ಹಣಕಾಸಿನ ಅಗತ್ಯಗಳಿಗೆ ಸ್ವಲ್ಪ ಮಾಲನ್ನು ಮಾರಾಟ ಮಾಡುತ್ತಾರೆ. ಹಾಗಾಗಿ ದಾವಣಗೆರೆ, ಚಿತ್ರದುರ್ಗ, ಚೆನ್ನಗಿರಿ, ಇಲ್ಲೆಲ್ಲಾ ಅಡಿಕೆ ಒಣಗಿ ಆಗುವ ತನಕ ಬೆಲೆ ಏರುವ ಸಾಧ್ಯತೆ ಕಡಿಮೆ.
ಕೆಂಪಡಿಕೆ ಕೆಲವು ಕಡೆ ಕಡಿಮೆ:
ಸಾಂಪ್ರದಾಯಿಕ ಪ್ರದೇಶಗಳಾದ ಸಾಗರ, ಸಿದ್ದಾಪುರ, ಹೊಸನಗರ, ತೀರ್ಥಹಳ್ಳಿ, ಈ ಕೆಲವು ಭಾಗಗಳಲ್ಲಿ 10-15% ದಷ್ಟು ಕೊಳೆ ರೋಗದಿಂದ ಅಡಿಕೆ ಕಡಿಮೆಯಾಗಿದೆ. ಹಾಗೆಯೇ ಎಲೆ ಚುಕ್ಕೆ ರೋಗವೂ ಇಳುವರಿ ಕಡಿಮೆಯಾಗುವಂತೆ ಮಾಡಿದೆ. ಹಾಗೆಂದು ಇದು ಒಟ್ಟಾರೆ ಉತ್ಪಾದನೆಗೆ ದೊಡ್ಡ ಹೊಡೆತ ಉಂಟು ಮಾಡಲಾರದು. ಕೆಲವು ಕಡೆ ಇಳುವರಿ ಕಡಿಮೆ ಆಗಿದೆಯಾದರೂ, ಇನ್ನು ಕೆಲವು ಕಡೆ ಉತ್ತಮ ಇಳುವರಿ ಮತ್ತು ಹೊಸ ತೋಟಗಳಿಂದಾಗಿ ಅಲ್ಲಿಂದಲ್ಲಿಗೆ ಹೊಂದಾಣಿಕೆ ಆಗಬಹುದು.

ಚಾಲಿಗೆ ಪೈಪೋಟಿ ಪ್ರಾರಂಭವಾಗಿದೆ:
ಹಿಂದೆ ಕರಾವಳಿಯ ಅಡಿಕೆ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಮಂಗಳೂರು ಅಡಿಕೆ ಎಂಬ ಬ್ರಾಂಡ್ ಮೇಲೆ ಮಾರಾಟಾವಾಗುತ್ತಿದ್ದುದು ನಮಗೆಲ್ಲಾ ಗೊತ್ತು. ಈಗ ಅದಕ್ಕೆ ಸ್ವಲ್ಪ ಮಿಶ್ರಣ ಪ್ರಾರಂಭವಾಗಿದೆ. ಕೆಲವು ಮೂಲಗಳ ಪ್ರಕಾರ ಆನವಟ್ಟಿಯ ಚಾಲಿ ಅಡಿಕೆಗೂ ಕರಾವಳಿಯ ಚಾಲಿಗೂ ಸಾಮ್ಯತೆ ಇದೆ ಎನ್ನುತ್ತಾರೆ ಕೆಲವು ವ್ಯಾಪಾರಿಗಳು. ಅಲ್ಲಿ ದರ ಸ್ವಲ್ಪ ಕಡಿಮೆ ಇದ್ದು, ಅಲ್ಲಿಂದ ಖರೀದಿ ಮಾಡಿ ಮಿಕ್ಸಿಂಗ್ ಆಗಿ ಮಾರಾಟವಾಗುತ್ತಿದೆಯಂತೆ. ಬೇಡಿಕೆಗನುಗುಣವಾಗಿ ಪೂರೈಕೆ ಆಗುತ್ತಿದ್ದರೆ ದರ ಏರಿಕೆ ಆಗುವುದಿಲ್ಲ.
ಉತ್ತರ ಭಾರತದಲ್ಲೂ ಅಂತಹ ಬೆಲೆ ಇಲ್ಲ:
- ಉತ್ತರ ಭಾರತದಲ್ಲಿ ಅಡಿಕೆಗೆ ಅಷ್ಟು ಬೆಲೆ ಇದೆ,ಇಷ್ಟು ಬೆಲೆ ಇದೆ ಎಂಬುದಾಗಿ ಇಲ್ಲಿ ಕೆಲವರು ಹೇಳುವುದುಂಟು.
- ಅಂತಹ ಬೆಲೆ ಏನೂ ಇಲ್ಲ. ಇಲ್ಲಿಂದ ಹೋಗುವ ಅಡಿಕೆಯು ಪೂರ್ತಿಯಾಗಿ ಆರಿಸಿ (ಗಾರ್ಬಲ್) ಹೋಗುವುದು.
- ಅದರಲ್ಲಿ ದೊಡ್ಡ ಗಾತ್ರದ ಅಡಿಕೆಗೆ ಮಾತ್ರ ರೂ.60000 ತನಕ ಇರುತ್ತದೆ.
- ಉಳಿದ ಸಣ್ಣ ಗಾತ್ರದ ಅಡಿಕೆಗಳಿಗೆ 20000,25,000,30,000 ಹೀಗೆಲ್ಲಾ ಇರುತ್ತದೆ.
- ನಾವು ಮಾರಾಟ ಮಾಡುವ ಅಡಿಕೆಯಲ್ಲಿ ದೊಡ್ಡ ಗಾತ್ರದ ಅಡಿಕೆಯ ಪ್ರಮಾಣ ಕೇವಲ 20-25 % ಮಾತ್ರ.
- ಹಾಗಾಗಿ ವ್ಯಾಪಾರಿಗಳು ಬೆಳೆಗಾರರಿಗೆ ಮೋಸ ಮಾಡುವುದಲ್ಲ.
- ಅವರ ರಿಸ್ಕ್ ಗೆ ಹೊಂದಿಕೊಂಡು ಲಾಭ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಖರೀದಿ ಮಾಡಿ ತುಂಬಾ ಸಮಯದ ತನಕ ಬೇಡಿಕೆ ಇಲ್ಲದಿದ್ದರೆ , ವ್ಯಾಪಾರಿಗಳೂ ಭಾರೀ ನಷ್ಟಕ್ಕೊಳಗಾಗಬೇಕಾಗುತ್ತದೆ.


ಸದ್ಯದ ಸ್ಥಿತಿಯಲ್ಲಿ ಬೆಲೆ ಏರಿಕೆ ಆಗದೆ ಸ್ಥಿರವಾಗಿದ್ದರೆ ಕ್ಷೇಮ:
- ಅಡಿಕೆಗೆ ಬೆಲೆ ಏರಿಕೆ ಆಗುವುದು ಬೆಳೆಗಾರರಿಗೆ ಅತ್ತೀ ದೊಡ್ಡ ತೊಂದರೆ.
- ಈಗ ಎರಡು ಮೂರು ವರ್ಷಗಳಿಂದ ದರ ಏರಿಕೆ ಆಗಿ ಬಹುತೇಕ ಎಲ್ಲಾ ಬೆಳೆ ಒಳಸುರಿಗಳಿಗೆ ಬೆಲೆ ದುಪ್ಪಟ್ಟಾಗಿದೆ.
- ಹಾಗೆಯೇ ಕೆಲಸದವರ ಮಜೂರಿಯೂ ಮೂರು ವರ್ಷದಿಂದ 25-30% ಏರಿಕೆ ಆಗಿದೆ.
- ಅಡಿಕೆಗೆ ಬೆಲೆ ಹೆಚ್ಚಾದಂತೆ ನಮ್ಮ ಆಸೆ ಆಕಾಂಕ್ಷೆಗಳು ಹೆಚ್ಚಾಗುತ್ತವೆ.
- ನಿರ್ಮಾಣ ಕಾಮಗಾರಿಗಳನ್ನು ಮಾಡಿಸುತ್ತೇವೆ. ಕೃಷಿಯಲ್ಲಿ ಆಧುನೀಕರಣ ಮಾಡಲು ಬಂಡವಾಳ ತೊಡಗಿಸುತ್ತೇವೆ.
- ಅವುಗಳ ಬೆಲೆ ಹೆಚ್ಚಾಗುತ್ತದೆ. ಜನ ಕೃಷಿ ಕೆಲಸದಿಂದ ಬೇರೆ ಕ್ಷೇತ್ರಕ್ಕೆ ಬದಲಾವಣೆ ಮಾಡುತ್ತಾರೆ.
- ಅಡಿಕೆ ಬೆಳೆಗಾರರಿಗೆ ಉತ್ಪತ್ತಿ ತೆಗೆಯುವ ಅವಕಾಶ ಇದ್ದರೂ ತೆಗೆಯಲು ಅಸಾಧ್ಯವಾಗುವ ಪರಿಸ್ಥಿತಿ ಈ ದರ ಎರಿಕೆಯಿಂದ ಆಗಿದೆ.
- ಹಾಗಾಗಿ ದರ ಏರಿಕೆಗೆ ಬೆಳೆಗಾರರು ಹಂಬಲಿಸುವುದಕ್ಕಿಂತ ದರ ಸ್ಥಿರತೆ ಬರಲಿ ಎಂದು ಆಶಿಸುವುದು ಉತ್ತಮ.
ಬೆಳೆಗಾರರು ದರ ದರ ಕಡಿಮೆ ಇರಲಿ, ಏರುತ್ತಿರಲಿ, ಆಯಾದ ವಾರದ ಅವಶ್ಯಕತೆಗಳಿಗೆ ಬೇಕಾದಷ್ಟು ಉತ್ಪನ್ನವನ್ನು ಮಾರಾಟ ಮಾಡುತ್ತಾ ಇದ್ದರೆ ಉತ್ತಮ. ಬೆಲೆ ಏರಿಕೆ ಆಗುವ ಸಮಯದಲ್ಲಿ ಸ್ವಲ್ಪ ಹೆಚ್ಚು ಮಾಲನ್ನೂ ಉಳಿದ ಸಮಯದಲ್ಲಿ ಕಡಿಮೆ ಪ್ರಮಾಣವನ್ನೂ ವಿಕ್ರಯಿಸುತ್ತಾ ಇದ್ದರೆ ಬೆಲೆ ಸ್ಥಿರತೆ ಉಂಟಾಗುತ್ತದೆ.
ಮಾರುಕಟ್ಟೆಯಲ್ಲಿ ದರ ಹೇಗಿದೆ:
ಕರಾವಳಿಯ ಚಾಲಿ ಅಡಿಕೆಗೆ ಖಾಸಗಿಯವರ ದರ ಕ್ಯಾಂಪ್ಕೋ ದರಕ್ಕಿಂತ ಕಡಿಮೆ. ಅಡಿಕೆ ಕೇಳಿಕೊಂಡು ಬರುವ ವ್ಯಾಪಾರಿಗಳು ಇಲ್ಲ. ಕ್ಯಾಂಪ್ಕೋ ದರ ಪ್ರಕಟಣೆಯ ದರಕ್ಕಿಂತ ಕಡಿಮೆ ಇದೆ. ಹೊಸ ಚಾಲಿ 37000 ತನಕ ಇದೆ. ಹಳೆ ಚಾಲಿ 47000-47500 ತನಕ ಇದೆ. ಡಬ್ಬಲ್ ಚೋಲ್ 54500 ತನಕ ಇದೆ.
ಫಟೋರಾ (ಹಳೆಯದು) ಖಾಸಗಿಯವರ ದರ ರೂ.38000 ತನಕ ಕ್ಯಾಂಪ್ಕೋ 37000-37500 ತನಕ ಇದೆ. ಹೊಸತು 25000-26000 ತನಕ ಇದೆ. ಉಳ್ಳಿ ಗಡ್ಡೆ ದರ ಹಳೆಯದು 27000-27500 ತನಕ ಇದೆ. ಹೊಸತು 15000-17000 ತನಕ ಇದೆ. ಕರಿಗೋಟು ಹಳೆಯದು 26000-26500 ತನಕ ಹೊಸತು 18000-19000 ತನಕ ಇದೆ.
ಕೆಂಪಡಿಕೆ ಧಾರಣೆ:
- ಚಿತ್ರದುರ್ಗ ರಾಶಿ:45185-45369
- ಚೆನ್ನಗಿರಿ ರಾಶಿ: 45799-46799
- ಭದ್ರಾವತಿ ರಾಶಿ:46270-47400
- ಶಿವಮೊಗ್ಗ ರಾಶಿ:46300-47900
- ಶಿರಸಿ ರಾಶಿ:45124-46100
- ಸಿದ್ದಾಪುರ ರಾಶಿ:46300-47900
- ಸಾಗರ ರಾಶಿ:45200-47700
- ಹೊಸನಗರ ರಾಶಿ:47511-48100
- ತೀರ್ಥಹಳ್ಳಿ ರಾಶಿ;46611-47299
- ಯಲ್ಲಾಪುರ ರಾಶಿ:47099-48899
- ಸೊರಬ ರಾಶಿ:45000-45000
- ತುಮಕೂರು ರಾಶಿ:45900 -46800
ಮಾರುಕಟ್ಟೆಗೆ ಅಡಿಕೆ ಬರುವಿಕೆಯ ಪ್ರಮಾಣ ಕಡಿಮೆ ಇದೆ. ಸಿಪ್ಪೆ ಗೋಟಿನ ದರ ಇಳಿಕೆಯಾಗಿರುವ ಕಾರಣ ಚಾಲಿ ದರ ಇಳಿಕೆ ಸಾಧ್ಯತೆ ಹೆಚ್ಚು. ಶಿರಸಿ , ಸಾಗರ, ಸಿದ್ದಾಪುರಗಳಲ್ಲಿ ಮಾರುಕಟ್ಟೆಗೆ ಚಾಲಿ ಹೆಚ್ಚು ಬರುತ್ತಿದೆ. ಬೆಳ್ತಂಗಡಿಯಲ್ಲಿ ಅತ್ಯಧಿಕ 2389 ಚೀಲಗಳಷ್ಟು ಡಬ್ಬಲ್ ಚೋಲ್ ಅಡಿಕೆ ಬಂದಿದ್ದು 56,000 ಗರಿಷ್ಟ ದರದಲ್ಲಿ ಖರೀದಿ ಆಗಿದೆ. ಚೆನ್ನಗಿರಿಯಲ್ಲಿ ಮಾತ್ರ ಅಧಿಕ ಪ್ರಮಾಣದಲ್ಲಿ ರಾಶಿ ಅಡಿಕೆ ಮಾರುಕಟ್ಟೆಗೆ ಬಂದಿದೆ.
0 Comments