ಬಸಿಗಾಲುವೆ ಇಲ್ಲದ ಅಡಿಕೆ, ತೆಂಗಿನ ತೋಟದಲ್ಲಿ ಯಾವಾಗಲೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ನೆಲಕ್ಕೆ ಮಳೆಯ ಮೂಲಕ ಸೇರುವ ನೀರು ಮಣ್ಣನ್ನು ತೇವವಷ್ಟೇ ಮಾಡಿ ಸರಾಗವಾಗಿ ಹರಿದು ಹೋಗುತ್ತಿರಬೇಕು. ಆಗ ಸಸ್ಯಗಳ ಆರೋಗ್ಯಕ್ಕೆ ಅದು ಅನುಕೂಲಕರ. ಅಡಿಕೆ ತೆಂಗು, ತಾಳೆ, ಬಾಳೆ, ಕರಿಮೆಣಸು ಮುಂತಾದ ಏಕದಳ ಸಸ್ಯಗಳ ಬೇರು ನೀರಿಗೆ ಸೂಕ್ಷ್ಮ ಗ್ರಾಹಿಯಾಗಿದ್ದು, ಸ್ವಲ್ಪ ಹೆಚ್ಚಾದರೂ ತೊಂದರೆ ಉಂಟುಮಾಡುತ್ತದೆ.
ಸಸ್ಯಗಳಿಗೆ ನೀರು ಬೇಕೇ? ಬೇಡ. ಸಸ್ಯಗಳಿಗೆ ಅವು ಬೇರು ಬಿಟ್ಟಿರುವ ಮಣ್ಣು ಎಂಬ ಮಾಧ್ಯಮ ತೇವಾಂಶದಿಂದ ಕೂಡಿದ್ದರೆ ಸಾಕು. ವೈಜ್ಞಾನಿಕವಾಗಿ ಮಣ್ಣು ಗರಿಷ್ಟ 60% ದಷ್ಟು ತೇವಾಂಶವನ್ನು ಹೊಂದಿದ್ದರೆ ಅದು ಎಲ್ಲಾ ನಮೂನೆಯ ಬೆಳೆಗಳ ಬೇರು ವಲಯಕ್ಕೆ ಆರೋಗ್ಯಕರ ವಾತಾವರಣವನ್ನು ಕಲ್ಪಿಸುತ್ತದೆ. ಅದಕ್ಕಿಂತ ಹೆಚ್ಚಾದರೆ ಅದು ವಿಷವಾಗಿ ಪರಿಣಮಿಸುತ್ತದೆ. (Toxic) ಹಾಗೆಂದು ನೀರು ಅದರ ಕೆಲಸವನ್ನು ಮಾಡುತ್ತಾ ಅಂದರೆ ಹರಿಯುತ್ತಾ ಇದ್ದರೆ ಸಸ್ಯಗಳ ಬೇರುಗಳು ಅವುಗಳ ಕೆಲಸವನ್ನು ಮಾಡುತ್ತಾ ಇರುತ್ತವೆ. ನೀರು ಹರಿಯಲಾರದೆ ವಿಶ್ರಾಂತಿ ಪಡೆಯುವ ಸ್ಥಿತಿ ಉಂಟಾದರೆ ಅದು ವಿಷ. ಇದನ್ನು ಆಡು ಭಾಷೆಯಲ್ಲಿ ನೀರು ನಿಂತು ಹಳಸಲು ಆಗುವುದು Water Toxicicity ಎನ್ನುತ್ತಾರೆ. ಮಣ್ಣು ಮಳೆಗಾಲದಲ್ಲಿ ನೀರು ಕುಡಿದು ಸಂತೃಪ್ತ ಸ್ಥಿತಿಗೆ ತಲುಪಿ ಅದನ್ನು ಹೊರಹಾಕುವ ಸ್ಥಿತಿಯಲ್ಲಿ ಇರುತ್ತದೆ. ಹೊರ ಹಾಕುವ ನೀರು ತಗ್ಗಿನ ಕಡೆಗೆ ಹರಿಯಬೇಕು. ಹರಿಯಲು ಅವಕಾಶ ಮಾಡಿಕೊಡುವುದೇ ಬಸಿಗಾಲುವೆ. ಬಸಿಗಾಲುವೆಯಲ್ಲಿ ಮಳೆಗಾಲದುದ್ದಕ್ಕೂ ಸರಾಗವಾಗಿ ನೀರಿನ ಒರತೆ ಹರಿಯುತ್ತಿದ್ದರೂ ಅಡಿಕೆ ಮರಗಳಿಗೆ ಅಥವಾ ತೆಂಗು, ಬಾಳೆ, ಕರಿಮೆಣಸು ತಾಳೆ ಯಾವುದೇ ಬೆಳೆಗೂ ತೊಂದರೆ ಇಲ್ಲ. ಅವುಗಳ ಬೇರುಗಳು ತೇವಾಂಶ ಕಡಿಮೆ ಇರುವಲ್ಲಿ ಪಸರಿಸಿ ಅಲ್ಲಿ ಆರೋಗ್ಯಕರ ವಾತಾವರಣದ ಆಸರೆಯಲ್ಲಿ ಇರುತ್ತವೆ. ಬಸಿಗಾಲುವೆ ಎಂದರೆ ಹೆಚ್ಚುವರಿಯಾದ ನೀರು ಬೇರುವಲಯಕ್ಕಿಂತ ಕೆಳಗೆ ಅದರಷ್ಟಕ್ಕೆ ಹರಿಯಲು ಅವಕಾಶಮಾಡಿಕೊಡುವುದು. ಇದು ಇದ್ದರೆ ಫಸಲು ಜಾಸ್ತಿ, ಮರಗಳ ಆರೋಗ್ಯವೂ ಉತ್ತಮವಾಗಿರುತ್ತದೆ.
ಬಸಿಗಾಲುವೆಯ ಕೆಲಸ ಏನು?
ಇಲ್ಲಿ ಒಂದು ಚಿತ್ರವನ್ನು ಹಾಕಿದ್ದೇವೆ. ಈ ಚಿತ್ರದಲ್ಲಿ ನೆಟ್ಟ ಅಡಿಕೆ ಸಸಿಗಳು ಎತ್ತರದ ಭಾಗದಲ್ಲಿ ಇದೆ. ಇಲ್ಲಿಗೆ ಬಸಿಗಾಲುವೆಯ ಅಗತ್ಯ ಇಲ್ಲ ಎಂದು ಬಹಳಷ್ಟು ಜನ ವಾದ ಮಾಡಬಹುದು. ಆದರೆ ಇಲ್ಲಿಯೂ ಬಸಿಗಾಲುವೆ ಬೇಕು ಎಂಬುದನ್ನು ಈ ಚಿತ್ರ ತೋರಿಸುತ್ತದೆ. ಇಲ್ಲಿ ಅಗೆದ ಭಾಗದಲ್ಲಿ ಹಾವಸೆ ತರಹ ಇರುವ ಭಾಗವನ್ನು ಗಮನಿಸಿ. ಇದು ಏನು? ಮತ್ತೇನಲ್ಲ. ಇದು ಮಳೆಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ತೋಟಕ್ಕೆ ಉಣಿಸಲಾದ ನೀರಿನಲ್ಲಿ ಹೆಚ್ಚುವರಿಯಾದುದು ಇಳಿದು ಹೋದದ್ದು. ಇದರ ಜೊತೆಗೆ ಪೊಷಕಾಂಶದ ಸಾರವೂ ಇಳಿದು ಹೋಗಿರುವ ಕಾರಣ ಇಲ್ಲಿ ಹಾವಸೆ ಬೆಳೆದಿದೆ. ಇದು ನಮಗೆ ಹೇಳುತ್ತದೆ ಎಲ್ಲಾ ಕಡೆಗೂ ಬಸಿಗಾಲುವೆ ಬೇಕು ಎಂಬ ಅಂಶವನ್ನು.
ಹಾಗೆಯೇ ಇನ್ನೊಂದು ಚಿತ್ರವನ್ನು ಇಲ್ಲಿ ತೋರಿಸುತ್ತೇವೆ. ಇಲ್ಲಿ ಅಡಿಕೆ ಮರಗಳಿಗೆ ನೈರುತ್ಯ ದಿಕ್ಕು, ಮತ್ತು ದಕ್ಷಿಣದ ಬಿಸಿಲು ಯಥೇಚ್ಚವಾಗಿ ಬೆಳಗ್ಗಿನಿಂದ ಸಂಜೆ ತನಕ ಬೀಳುತ್ತದೆ.ಆದರೆ ಇಲ್ಲಿನ ಮರಗಳ ಕಾಂಡಕ್ಕೆ ಬಿಸಿಲಿನ ಘಾಸಿಯೇ ಇಲ್ಲ. ಒಂದು ಮರದ ಕಾಂಡವೂ ತೂತು ಬಿದ್ದಿಲ್ಲ. ಇದು ಒಂದು ಧರೆಯ ಬದಿಯಲ್ಲಿ ಇದೆ. ಇಲ್ಲಿ ಬಸಿಗಾಲುವೆ ಇಲ್ಲದಿದ್ದರೂ ಮಣ್ಣಿನಲ್ಲಿ ನೀರು ಹೆಚ್ಚಾಗದಂತೆ ಅದು ಧರೆಯ ತಗ್ಗಿನ ಭಾಗಕ್ಕೆ ಇಳಿದು ಹೋಗುತ್ತದೆ. ಹಿಂದೊಮ್ಮೆ ಮಿತ್ರರಾದ ನಿಟ್ಟೂರಿನ ಉದಯಸಿಂಹ ಅವರು ಹೇಳಿದ್ದು ಈಗಲೂ ನೆನಪಿದೆ. ಸಮರ್ಪಕ ಬಸಿಗಾಲುವೆ ಇರುವ ತೋಟದಲ್ಲಿ ಮರಗಳಿಗೆ ಯಾವ ದಿಕ್ಕಿನ ಬಿಸಿಲಿನಿಂದಲೂ ತೊಂದರೆ ಉಂಟಾಗಲಾರದು ಎಂಬುದು.
ಇನ್ನೂ ಒಂದು ಚಿತ್ರದ ಮೂಲಕ ಮತ್ತೊಂದು ವಿಚಾರವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ. ಇದು ಗದ್ದೆಯ ಕಟ್ಟ ಹುಣಿಯಲ್ಲಿ ಬೆಳೆಸಿದ ತೆಂಗಿನ ಮರಗಳು. ಈ ಮರಗಳಿಗೆ ಕೊಡುವ ಆಹಾರ ತುಂಬಾ ಕಡಿಮೆ. ನೀರೂ ಸಹ ಭತ್ತದ ಕೊಯಿಲಿನ ನಂತರ ಇಲ್ಲ. ಆದರೂ ಮರಗಳು ಗರಿಷ್ಟ ಇಳುವರಿಯನ್ನು ಕೊಡುತ್ತವೆ. ಆರೋಗ್ಯವಾಗಿ ಇವೆ. ಕಾರಣ ಇಷ್ಟೇ ಈ ಮರಗಳಿಗೆ ಹುಣಿಯೆಂಬ ವ್ಯವಸ್ಥೆ ನೀರು ಎಷ್ಟು ಬೇಕೋ ಅಷ್ಟನ್ನು ಮಾತ್ರ ಲಭ್ಯವಾಗುವಂತೆ ಮಾಡುತ್ತದೆ. ಹಾಗಾಗಿ ಇವು ಕನಿಷ್ಟ ಆರೈಕೆಯಲ್ಲೂ ಉತ್ತಮ ಫಲಕೊಡುತ್ತವೆ.
ಬಸಿಗಾಲುವೆ ಮಾಡುವ ವಿಧಾನ:
ಸಾಮಾನ್ಯವಾಗಿ ಅಡಿಕೆ ತೋಟ ಅಥವಾ ತೆಂಗಿನ ತೋಟಗಳಲ್ಲಿ ಪ್ರತೀ ಮರದ ಬುಡದಿಂದಲೂ ಹೆಚ್ಚುವರಿ ನೀರು ಬಸಿಯಲು ಕಾಲುವೆ ಬೇಕು. ಎರಡು ಸಾಲುಗಳ ಮಧ್ಯಕ್ಕೆ ಒಂದು ಕಾಲುವೆ ಮಾಡಿದಾಗ ಪ್ರತೀ ಗಿಡದ ಬುಡದಿಂದಲೂ ಹೆಚ್ಚುವರಿ ನೀರನ್ನು ಹೊರ ಕಳುಹಿಸಲು ಸಾಧ್ಯವಾಗುತ್ತದೆ.. ಗಿಡದ /ಮರದ ಬುಡಭಾಗದಿಂದ ಕಾಲುವೆ ಸುಮಾರು 2-3 ಅಡಿ ಅಂತರದಲ್ಲಿ ಇರುತ್ತದೆ. ಸಣ್ಣ ಸಸಿ ಇರುವಾಗ ಮಣ್ಣು ಜಿಗುಟು ಆಗಿದ್ದರೆ ಬುಡದಿಂದ ಕಾಲುವೆಗೆ ಸಂಪರ್ಕ ಕಲ್ಪಿಸಬೇಕು. ಮರ ಬೆಳೆದ ನಂತರ ಸಮಸ್ಯಾತ್ಮಕ ಮಣ್ಣು ಆಗಿದ್ದರೆ ಬೇಕು. ಇಲ್ಲವಾದರೆ ಬೇಡ. ಕಾಲುವೆ ಪ್ರಾರಂಭವಾಗುವಲ್ಲಿಂದ ಮುಕ್ತಾಯವಾಗುವ ಕಡೆಗೆ ಕನಿಷ್ಟ ½- ¾ ಅಡಿ ಓಟ ಇರಬೇಕು. ಯಾವುದೇ ಕಾರಣಕ್ಕೂ ಕೆಲಸ ಉಳಿಸಲು ಎರಡು ಸಾಲಿನ ಬದಲಿಗೆ ಮೂರು ಸಾಲಿಗೊಂದರಂತೆ ಕಾಲುವೆ ಮಾಡಬಾರದು.
ಗಿಡ ನೆಟ್ಟ ಆಳಕ್ಕನುಗುಣವಾಗಿ ಕಾಲುವೆಯ ಆಳ ಇರಬೇಕು. ಸಾಮಾನ್ಯವಾಗಿ ಕರಾವಳಿಯಲ್ಲಿ ಆಳದ ಹೊಂಡ ಮಾಡಿ ನೆಡುವ ಕಾರಣ ಅಲ್ಲಿ ಹೊಂಡಕ್ಕಿಂತ ½ ಅಡಿ ಹೆಚ್ಚು ಆಳ ಇರಬೇಕು. ತೇಲಿಸಿ ನೆಡುವಲ್ಲಿ ಸಹ 1.5 ಅಥವಾ 2 ಅಡಿ ಆಳಕ್ಕೆ ಕಾಲುವೆ ಇರಬೇಕು. ತೆಲಿಸಿ ನೆಡುವ ಮಲೆನಾಡು, ಅರೆಮಲೆನಾಡು, ಬಯಲು ಸೀಮೆ ಭಾಗಗಳಲ್ಲಿ ಮಳೆ ಕಡಿಮೆ ಆದರೂ ಬಂದ ಮಳೆಯ ನೀರು 4-5 ದಿನಗಳಾದರೂ ಮಣ್ಣಿನಿಂದ ಬಸಿಯದ ಕಾರಣ (ಇಲ್ಲಿ ಮಣ್ಣು ನೀರನ್ನು ಬಿಟ್ಟುಕೊಡುವುದೇ ಇಲ್ಲ) ಬಸಿಗಾಲುವೆ ಮಾಡುವುದು ತುಂಬಾ ಅಗತ್ಯ. ಕರಾವಳಿಯಲ್ಲಿ ವರ್ಷದಲ್ಲಿ 6 ತಿಂಗಳ ತನಕ ಮಳೆ ಇರುವ ಕಾರಣ ಯಾವ ತರಹದ ಭೂಮಿ ಆದರೂ ಬಸಿಗಾಲುವೆ ಬೇಕೇ ಬೇಕು. ಮೊದಲ ಒಂದು ಎರಡು ತಿಂಗಳ ಮಳೆಗೆ ಸಸಿಗಳಿಗೆ ತೊಂದರೆ ಕಾಣಿಸುವುದಿಲ್ಲ. ಕಾರಣ ಆಗ ಹೆಚ್ಚುವರಿ ನೀರನ್ನು ನೆಲ ಕುಡಿಯುತ್ತದೆ. ಆ ನಂತರ ಮಣ್ಣು ನೀರನ್ನು ಹೊರ ಬಿಡುವ ಸ್ಥಿತಿ ಉಂಟಾಗುವ ಕಾರಣ ಸಸಿಗಳ ಬೇರು ಕೊಳೆಯಲು ಪ್ರಾರಂಭವಾಗುತ್ತದೆ. ಇದರಿಂದ ಸಸಿ ಸೊರಗುತ್ತದೆ.
ಬಸಿ ವ್ಯವಸ್ಥೆ ಇಲ್ಲದಿದ್ದರೆ ಯಾವ ಸಮಸ್ಯೆ ಉಂಟಾಗುತ್ತದೆ?
ಸಾಮಾನ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ಅಡಿಕೆ, ತೆಂಗಿನ ಮರಗಳಿಗೆ ಸುಳಿ ಕೊಳೆ ಹೆಚ್ಚಾಗುತ್ತಿರುವುದಕ್ಕೆ ಒಂದು ಕಾರಣ ಸಮರ್ಪಕ ಬಸಿ ವ್ಯವಸ್ಥೆ ಇಲ್ಲದಿರುವಿಕೆ. ಬಸಿ ವ್ಯವಸ್ಥೆ ಇದ್ದಲ್ಲಿಯೂ ಈ ಸಮಸ್ಯೆ ಉಂಟಾಗುತ್ತದೆಯಾದರೂ ಪ್ರಮಾಣ ಕಡಿಮೆ ಇರುತ್ತದೆ.
ಗಂಟು ವಕ್ರವಾಗುವುದು ಸಹ ಬಸಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣದಿಂದ ಉಂಟಾಗುತ್ತದೆ. ಗಂಟು ವಕ್ರವಾಗುವುದಕ್ಕೆ ಮುಖ್ಯ ಕಾರಣ ಪೊಷಕಾಂಶದ ಅಸಮತೋಲನ. ಸಮತೋಲನದಲ್ಲಿ ಪೊಷಕಾಂಶ ಕೊಟ್ಟರೂ ಸಹ ಅಸಮತೋಲನ ಉಂಟಾಗುತ್ತದೆ. ಕಾರಣ, ಪೋಟ್ಯಾಶಿಯಂ ಮತ್ತು ರಂಜಕ ಇಳಿದು ಹೋಗಿ ನಷ್ಟವಾಗುತ್ತದೆ.ಸಾರಜನಕ ತ್ವರಿತವಾಗಿ ಲಭ್ಯವಾಗುತ್ತದೆ.
ಸುಳಿ ಮುರುಟುವ ರೋಗಕ್ಕೂ ಸಹ ಬಸಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದೂ ಒಂದು ಕಾರಣ. ಮೇಲೆ ಹೇಳಿದಂತೆ ಕೊಟ್ಟ ಪೊಷಕಗಳು ಕೆಲವು ನಷ್ಟವಾಗಿ ಕೆಲವು ಹೆಚ್ಚು ದೊರೆತು ಈ ಸಮಸ್ಯೆ ಉಂಟಾಗುತ್ತದೆ. ಅತಿಯಾದ ನೀರು ಪೋಷಗಳನ್ನು ಅದರಲ್ಲೂ ಪೊಟ್ಯಾಶಿಯಂ, ರಂಜಕ ಇವುಗಳನ್ನು ಬೇರಿನಿಂದ ಕೆಳಕ್ಕೆ ಇಳಿಯುವಂತೆ ಮಾಡುತ್ತದೆ. ಬೇರಿನಿಂದ ಕೆಳಸ್ಥರಕ್ಕೆ ಇಳಿದಾಗ ಅದು ಸಸ್ಯಕ್ಕೆ ಲಭ್ಯವಾಗುವುದಿಲ್ಲ. ಇದು ಮಳೆಗಾಲ ಅಲ್ಲದೆ ಬೇಸಿಗೆಯಲ್ಲೂ ಆಗುತ್ತದೆ.
ಎಲೆ ಚುಕ್ಕೆ ರೋಗಕ್ಕೂ ನೀರು ನಿಂತ ಸ್ಥಿತಿ ಅನುಕೂಲಕರವಾಗಿರುತ್ತದೆ. ನೀರು ನಿಂತಾಗ ಬೇರಿನ ಹೀರುವ ಬೇರುಗಳು ಕೊಳೆಯುತ್ತದೆ. ಆಹಾರದ ಕೊರತೆ ಉಂಟಾಗುತ್ತದೆ. ಸಸ್ಯ ಸೊರಗುತ್ತದೆ. ರೋಗಾಣುಗಳ ಪ್ರವೇಶಕ್ಕೆ ಅನುಕೂಲವಾಗುತ್ತದೆ.
ಬುಡಕೊಳೆ ರೋಗಕ್ಕೆ ಬಸಿಗಾಲುವೆ ಇಲ್ಲದಿರುವುದು ಒಂದು ಕಾರಣ. ಇತ್ತೀಚೆಗೆ ಮಾದ್ಯಮಗಳಲ್ಲಿ ಅಡಿಕೆಗೆ ಹೊಸ ರೋಗ ಎಂದು ಸುದ್ದಿಯಾಗುತ್ತಿರುವುದು ಬುಡಕೊಳೆ ರೋಗ. ಇದು ಒಂದು ಶಿಲೀಂದ್ರ ರೋಗವಾಗಿದ್ದು, ನೆಲೆ ತೇವ ಹೆಚ್ಚಾಗಿ ಆಗುವುದಾಗಿದೆ. ನೆಲದಲ್ಲಿ ನೀರು ಗಂಟೆಗಟ್ಟಲೆ ನಿಂತಾಗ ಫೈಟೋಪ್ಥೆರಾ ಶಿಲೀಂದ್ರ ಅಂಕುರವಾಗಿ ಬುಡ ಕೊಳೆತು ಸಾಯುತ್ತದೆ.
ಮರ/ಸಸಿಯ ಎಲೆ ಹಳದಿಯಾಗಿ ಇರುವುದು, ಪೋಷಕಗಳನ್ನು ಪೂರೈಕೆ ಮಾಡಿದಾಗಲೂ ಸಸ್ಯಗಳು ಸ್ಪಂದಿಸದೆ ಇರುವುದಕ್ಕೆ ಬೇರುಗಳ ಅಸ್ವಾಸ್ತ್ಯ್ಹವೇ ಕಾರಣ. ಇದು ನೀರು ವಿಷವಾದಾಗ ಆಗುತ್ತದೆ.
ಬರೇ ಇಷ್ಟೇ ಅಲ್ಲದೆ ಏಕದಳ ಸಸ್ಯಗಳ ಬೇರುಗಳು ನೆಲದಲ್ಲಿ ಉಸಿರಾಟ ನಡೆಸಲು ಸಹ ಬಸಿಗಾಲುವೆ ಅಗತ್ಯ. ಬಸಿಗಾಲುವೆ ಇರುವಲ್ಲಿ ಬೇರುಗಳು ಇಳಿದಿರುವುದನ್ನು ಗಮನಿಸಿ. ಈ ಬೇರುಗಳು ಸಸ್ಯಗಳಿಗೆ ಸ್ವಾಚೋಚ್ವಾಸಕ್ಕೆ ನೆರವಾಗುವಂತವುಗಳು. ಕಟ್ಟಹುಣಿ ( ಭತ್ತದ ಗದ್ದೆಗಳಲ್ಲಿ ದೊಡ್ಡ ಬದು)ಯಲ್ಲಿ ಬೆಳೆದ ತೆಂಗಿನ ಮರಗಳ ಬೇರುಗಳೂ ಸಹ ಹೀಗೇ ಇರುತ್ತವೆ.ಹಾಗಾಗಿ ಅವು ಉತ್ತಮ ಫಲ ಕೊಡುತ್ತವೆ. ಬಸಿಗಾಲುವೆಯ ಪಕ್ಕದಲ್ಲಿ ಇರುವ ಅಡಿಕೆ, ತೆಂಗಿನ ಮರಗಳು ಯಾವಾಗಲೂ ಏಕಪ್ರಕಾರವಾಗಿ ಇಳುವರಿ ಕೊಡುವುದು ವಿಶೇಷ. ಏಕದಳ ಸಸ್ಯಗಳ ಬೇರುಗಳು ಮೇಲೆ ಮೇಲೆ ಬರುವಂತವುಗಳಾಗಿದ್ದು, ಅವು ಮೇಲುಸ್ಥರದಲ್ಲಿ ಇದ್ದಷ್ಟು ಮರ ಆರೋಗ್ಯವಾಗಿರುತ್ತದೆ.
Good content
Thank you sir