ನೈಸರ್ಗಿಕ ವಿಕೋಪಗಳು, ಮಾನವನ ಕೃತ್ಯಗಳಿಂದ ಸ್ಥಳೀಯ ಜೀವ ವೈವಿಧ್ಯಗಳ ನಾಶ ಅವ್ಯಾಹತವಾಗುತ್ತಿದೆ. ಇದು ನಮ್ಮ ದೇಶದ ಕೃಷಿ, ಮಳೆ, ಇತ್ಯಾದಿಗಳಿಗೆ ಭಾರೀ ತೊಂದರೆಯನ್ನು ಉಂಟುಮಾಡಲಿದೆ. ಸೂಕ್ಷ್ಮವಾಗಿ ಗಮನಿಸಿದವರಿಗೆ ಇದರ ಅರಿವು ಆಗಿರಬಹುದು. ಅರಿವು ಆಗದವರಿಗೆ ಕೆಲವೇ ವರ್ಷಗಳಲ್ಲಿ ಅರಿವಿಗೆ ಬರಲಿದೆ.
ಕಾಸರಕನ ಮರ ಗೊತ್ತಾ ? ಈ ಪ್ರಶ್ನೆಯನ್ನು ಯಾರಲ್ಲಿಯಾದರೂ ಕೇಳಿದರೆ ಹಿಂದೆ ಹೇರಳವಾಗಿತ್ತು. ಈಗ ಹುಡುಕಿದರೆ ಮಾತ್ರ ಸಿಗುತ್ತದೆ ಎನ್ನುತ್ತಾರೆ. ಹಾಗೆಯೇ ಇನ್ನೊಂದು ಮರ ಇತ್ತು. “ಕನಪ್ಪಡೆ” ಎಂಬ ಹೆಸರಿನ ಈ ಮರ ಗುಡ್ಡ, ಕಾಡುಗಳಂಚಿನಲ್ಲಿ ಸಾಕಷ್ಟು ಇರುತ್ತಿತ್ತು. ಈಗ ಭಾರೀ ಅಪರೂಪವಾಗಿದೆ. ಇಂತಹ ನೂರಾರು ಸಾವಿರಾರು ಸಸ್ಯ ಜೀವ ವೈವಿದ್ಯಗಳು, ಹುಲ್ಲು, ಜರಿಗಿಡಗಳು ನಮ್ಮೆದುರೇ ಇಲ್ಲದಾಗಿವೆ. ಕೇವಲ ಸಸ್ಯವರ್ಗ ಮಾತ್ರವಲ್ಲ.ಕೆಲವು ಪ್ರಾಣಿ ಪಕ್ಷಿಗಳು ಕಾಣುವುದೇ ಅಪರೂಪವಾಗಿದೆ. ಕೆಲವು ಕೀಟಗಳು ಪ್ರಾಭಲ್ಯವನ್ನು ಹೊಂದುತ್ತಿವೆ. ಇನ್ನು ಕೆಲವು ನಶಿಸುವ ಹಂತದಲ್ಲಿದೆ. ಮುಖ್ಯವಾಗಿ ಪರಭಕ್ಷಕಗಳೆಂದ ರೈತಮಿತ್ರ ಕೀಟಗಳು ಕಣ್ಮರೆಯಾಗುತ್ತಿವೆ.ಹೊಸ ಸಸ್ಯಗಳು ಹುಟ್ಟಿಕೊಂಡು ಹಿಂದೆ ಇದ್ದ ಸಸ್ಯಗಳನ್ನು ಅಪ್ಪಚ್ಚಿ ಮಾಡಿದೆ. ಹಿಂದೆ ನಾವು ಕಂಡಿರದ ಕೆಲವು ಬಳ್ಳಿಗಳು, ಸಸ್ಯಗಳು, ಕುರುಚಲು ಗಿಡಗಳು ಈಗ ಎಲ್ಲೆಂದರಲ್ಲಿ ವ್ಯಾಪಿಸತೊಂಡಗಿದೆ.ಇವೆಲ್ಲಾ ಒಟ್ಟಾರೆಯಾಗಿ ಭೂಮಿಯ ಜೀವ ಚಕ್ರದಲ್ಲಿನ ಅಸಮತೋಲನಕ್ಕೆ ಕಾರಣವಾಗುತ್ತಿದೆ.
ಹೊರ ಪ್ರದೇಶದ ಜೀವಿಗಳು ಏನಿದು?
- ನಮ್ಮ ದೇಶದ ನೆಲ ಜಲ ಮತ್ತು ವಾತಾವರಣದಲ್ಲಿ ಹಿಂದೆ ಇದ್ದ ಸಸ್ಯಗಳು, ಜೀವಿಗಳಿಗಿಂತ ಭಿನ್ನವಾದ ಬೇರೆ ಸಸ್ಯ , ಜೀವಿಗಳು ಕಾಣಸಿಕ್ಕರೆ ಅದು ಬೇರೆ ಪ್ರದೇಶದಿಂದ ಬಂದದ್ದು ಎಂದರ್ಥ.
- ಕೀಟ ಶಾಸ್ತ್ರಜ್ಞರು ಕೆಲವು ಹೊಸ ಕೀಟಗಳನ್ನು ಗುರುತಿಸುತ್ತಾರೆ.
- ರೋಗ ಶಾಸ್ತ್ರಜ್ಞರು ನಮ್ಮ ದೇಶದಲ್ಲಿ ಇಲ್ಲದ್ದನ್ನು ಗುರುತಿಸುತ್ತಾರೆ.
- ಹಾಗೆಯೇ ಸಸ್ಯ ಶಾಸ್ತ್ರಜ್ಞರು ಸಸ್ಯ ವೈವಿದ್ಯಗಳಲ್ಲಿ ಹೊಸತನ್ನು ಗುರುತಿಸುತ್ತಾರೆ.
- ಇವೆಲ್ಲಾ ಅನ್ಯ ಪ್ರದೇಶದ ಜೀವಿಗಳು (alien species) ಎನ್ನಿಸುತ್ತವೆ.
- ಉದಾಹರಣೆಗೆ ಹೇಳುವುದಾದರೆ ಪಾರ್ಥೇನಿಯಂ ಎಂಬ ಕಳೆ ನಮ್ಮ ದೇಶದ ಕಳೆ ಸಸ್ಯವಲ್ಲ.
- ಹಾಗೆಯೇ ಈಗ ನಮ್ಮಲ್ಲಿ ಮಹಾಮಾರಿಯಾಗಿ ಕಾಡುತ್ತಿರುವ ರಬ್ಬರ್ ತೋಟದ ಮುಚ್ಚಲು ಬೆಳೆ ಮುಖುನ ನಮ್ಮದಲ್ಲ.
- ಅಕೇಶಿಯಾ, ಮಾಂಜಿಯಂ, ಸಹ ನಮ್ಮ ದೇಶದ್ದಲ್ಲ.
- ಕೃಷಿಕರ ಹೊಲದಲ್ಲಿ ಭಾರೀ ತೊಂದರೆ ಮಾಡುತ್ತಿರುವ ಆಪ್ರಿಕನ್ ಬಸವನ ಹುಳು (ಶಂಖದ ಹುಳ) ನಮ್ಮದಲ್ಲ.
- ಹಳದಿ ಸೇವಂತಿಕೆ ಸಸ್ಯ, ಸಮುದ್ರದ ಬದಿಯಲ್ಲಿ ಬೆಳೆಯುವ ಒಂದು ಬಳ್ಳಿ, ಹಾಗೆಯೇ ಲಂಟಾನ, ನಾಯಿ ತುಳಸಿ ಎಂದು ಕರೆಯಲ್ಪಡ್ಡುವ ಜಾತಿಗೆ ಸೇರಿದ ಲಕ್ಷಾಂತರ ಸಂಖ್ಯೆಯಲ್ಲಿ ಗಾಳಿಯ ಮೂಲಕ ಬೀಜ ಪ್ರಸಾರವಾಗುವ ಕಳೆ ಸಸ್ಯ, ಸಾಸಿವೆ ತರಹ ಕೋಡು ಬಿಡುವ ಬಳ್ಳಿ ಸಸ್ಯ ಇವೆಲ್ಲಾ ಬೇರೆ ಕಡೆಯಿಂದ ಬಂದದ್ದು.
- ಮುಂದುವರಿದು ಹೇಳುವುದಾದರೆ ಅಡಿಕೆಗೆ ಬಂದ ಎಲೆ ಚುಕ್ಕೆ ರೋಗದ ರೋಗಾಣು ಕೊಲೆಟ್ರೋಟ್ರಿಕಂ ಸಹ ನಮ್ಮ ದೇಶದ್ದಲ್ಲ.
- ಮಾವಿನ ಹಣ್ಣು ಕೊಳೆಯುವ ರೋಗಕ್ಕೆ ಕಾರಣವಾದ ಇದೇ ಗುಂಪಿನ ಶಿಲೀಂದ್ರ ಸಹ ನಮ್ಮ ದೇಶದ್ದಲ್ಲ.
- ಇಂತಹ ಸಾವಿರಾರು ಅನ್ಯ ಭಾಗದ ಜೀವಿಗಳು, ಸಸ್ಯಗಳು, ಕೀಟಗಳು ನಮ್ಮಲ್ಲಿ ಈಗ ಹಾಸುಹೊಕ್ಕಿವೆ.
- ಉತ್ತರ ಅಮೇರಿಕಾದಲ್ಲಿದ್ದ ನೀರ ಕಳೆ (Water hyacinth) ಈಗ ನಮ್ಮಲ್ಲಿಯೂ ಜಾಸ್ತಿಯಾಗುತ್ತಿದೆ.
- ಶೊಲಾ ಹುಲ್ಲುಗಾವಲುಗಳೂ ಸಹ ಬೇರೆ ಸಸ್ಯಗಳ ಆಕ್ರಮಣದಿಂದಾಗಿ ಹಿಂದಿನ ಸಸ್ಯ – ಜರಿಗಿಡಗಳನ್ನು ನಾಶಮಾಡುತ್ತಿವೆ.
ಭಾರತದ ಜೀವ ವೈವಿದ್ಯ ಜಗತ್ತಿಗೇ ಶ್ರೇಷ್ಟ:
- ನಮ್ಮ ದೇಶದ ಜೀವ ವೈವಿಧ್ಯ ಜಾಗತಿಕ ಹಾಟ್ ಸ್ಪಾಟ್ (Global biodiversity hotspot) ಆಗಿದೆ.
- ಹಾಗೆಯೇ ಅಮೆರಿಕಾವನ್ನು ಬಿಟ್ಟರೆ ಭಾರತವೇ ಜೀವ ವೈವಿಧ್ಯಗಳ ಅತೀ ದೊಡ್ಡ ಖಜಾನೆ.
- ಆದರೆ ಇವೆರಡೂ ಈಗ ಅತ್ಯಂತ ಕೆಳಮಟ್ಟಕ್ಕೆ ಇಳಿದಿವೆ. ಕೆಲವು ಲೆಕ್ಕಾಚಾರಗಳ ಪ್ರಕಾರ ಒಟ್ಟಾರೆ 60% ಸಸ್ಯ ಜೀವ ವೈವಿದ್ಯಗಳು ನಶಿಸುವ ಹಂತಕ್ಕೆ ಬಂದಿವೆ.
- ಇತ್ತೀಚೆಗೆ ಜರ್ಮನಿಯಲ್ಲಿ ಬೇರೆ ಬೇರೆ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಾಗಿತ್ತು.
- ಇದರಲ್ಲಿ ಹಲವಾರು ತಜ್ಞರು, ಸಸ್ಯ ವಿಜ್ಞಾನಿಗಳು ಭಾಗವಹಿಸಿದ್ದರು.
- ಇವರು ಹೇಳುವಂತೆ ಸುಮಾರು 37000 ಕ್ಕೂ ಹೆಚ್ಚು ಹೊಸ ಜೀವ ಪ್ರಭೇಧಗಳು (ಸಸ್ಯ,ಕೀಟ, ರೋಗಾಣು ಇತ್ಯಾದಿ) ಭೂಮಿಯಲ್ಲಿ ಪತ್ತೆಯಾಗಿವೆ.
- ಇವು ಮಾನವಕೃತವಾಗಿ ಬಂದವುಗಳಾಗಿವೆ. ಇವುಗಳಲ್ಲಿ ಸುಮಾರು 3500 ರಷ್ಟು ಪ್ರಾಣಿ, ಸಸ್ಯ ವರ್ಗಗಳ ಅಳಿವಿಗೆ ಕಾರಣವಾಗಿವೆ.
- ಈ ಹೊಸ ಜೀವಿಗಳಿಂದ ಉಂಟಾಗುವ ಆಕ್ರಮಣದಿಂದಾಗಿ ಭಾರೀ ಆರ್ಥಿಕ ನಷ್ಟವೂ ಉಂಟಾಗುತ್ತಿದೆ.
- ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಬರುತ್ತಿದೆ.
- ನಮ್ಮ ದೇಶಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕೇರಳದ ಮೀನುಗಾರರು ಒಂದು ಜಾತಿಯ ಮೃದ್ವಂಗಿ ( ಶಂಖದ ಹುಳು) ಕಾಟದಿಂದ ತತ್ತರಿಸಿದ್ದಾರೆ.
- ಇದು ಕೇರಳ ಮಾತ್ರವಲ್ಲ ಕರ್ನಾಟಕದ ಹಲವಾರು ಕಡೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ.
- ಇದಕ್ಕೆ ಕಾರಣ ಬೇರೆ ಕಡೆಯಿಂದ ಎರವಲಾಗಿ ಬಂದದ್ದು.
- ಇದು ಇನ್ನೂ ಇನ್ನೂ ದೊಡ್ಡ ಸಮಸ್ಯೆಯಾಗಲಿದ್ದು, ಜನಜೀವನಕ್ಕೆ ಅಡ್ಡಿಯಾದರೂ ಆಗಬಹುದು.
- ನಮ್ಮ ದೇಶದಲ್ಲಿ ಸುಮಾರು 2000 ದಷ್ಟು ಬೇರೆ ಕಡೆಯಿಂದ ಬಂದ ಜೀವಿಗಳಿದ್ದು, ಅದರಲ್ಲಿ 330 ಪ್ರಭೇಧಗಳು ಭಾರೀ ಆಕ್ರಮಣಕಾರಿಗಳಾಗಿವೆ.
- ಇವುಗಳ ನಿರ್ವಹಣೆಗಾಗಿ ದೇಶವು ಬಹಳಷ್ಟು ಖಚು ಮಾಡುತ್ತಿದೆ.
- ಬೇರೆ ಕಡೆಯಿಂದ ಬಂದ ಜೀವಿಗಳಿಂದ ಭಾರೀ ಆರ್ಥಿಕ ನಷ್ಟ ಅನುಭವಿಸುವ ಪ್ರಪಂಚದ ಪ್ರಮುಖ ರಾಷ್ಟ್ರಗಳೆಂದರೆ ಅಮೆರಿಕಾ, ಆಸ್ತ್ರೇಲಿಯಾ , ಬ್ರೆಜ಼ಿಲ್ ಚೈನಾ ಮತ್ತು ಭಾರತ ದೇಶ.
ನಮ್ಮ ದೇಶದ ಕಥೆ ಹೀಗೆ ಇದೆ:
- ತನಯಾ ನಾಯರ್ ಎಂಬ ಆಕ್ಸ್ಪರ್ಡ್ ವಿಶ್ವವಿಧ್ಯಾನಿಲಯದ ಸಂದರ್ಶಕ ಜೀವ ವೈವಿದ್ಯ ಅಧ್ಯಯನಾರ್ಥಿಯೊಬ್ಬರು ಹೇಳುತ್ತಾರೆ.
- ಭಾರತದ ಒಟ್ಟು ಭೂ ಪ್ರದೇಶದ ಸುಮಾರು ಅರ್ಧದಷ್ಟು ಪ್ರದೇಶಗಳಲ್ಲಿ ಬೇರೆ ಕಡೆಯಿಂದ ಬಂದ ಜೀವ ವೈವಿಧ್ಯಗಳು ಆಕ್ರಮಣಕಾರಿಯಾಗಿ ಬೆಳೆಯುತ್ತಿವೆ.
- ಭಾರತದ ನೈಸರ್ಗಿಕ ಕಾಡುಗಳೂ ಸಹ ಈ ಆಕ್ರಮಣಕಾರೀ ಸಸ್ಯವರ್ಗಗಳ ಧಾಳಿಗೆ ಒಳಗಾಗುತ್ತಿವೆ.
- ಇದರಿಂದಾಗಿ ಪರಿಸರ ಅಸಮತೋಲನ ಉಂಟಾಗುತ್ತದೆ.
- ನೀಲಗಿರಿ ಬೆಟ್ಟಗಳ ಹುಲ್ಲುಗಾವಲಿನಲ್ಲಿ ಬೇರೆ ಕಳೆ ಬೀಜಗಳು ಹುಟ್ಟಿ ಅವುಗಳ ಬೆಳವಣಿಗೆಯನ್ನು ಹತ್ತಿಕ್ಕುತ್ತಿವೆ.
- ಪಶ್ಚಿಮ ಘಟ್ಟದ ಹುಲ್ಲುಗಾವಲಿನ ವಿಶಿಷ್ಟ ಪ್ರಭೇಧದ ಝರಿ ಗಿಡಗಳ ಮೇಲೂ ಆಕ್ರಮಣಗಳು ನಡೆಯಲಾರಂಭಿಸಿದೆ.
- ಇದೆಲ್ಲಾ ಜೈವಿಕ ಆಕ್ರಮಣಗಳು.
- ಎಲ್ಲಿಂದಲೋ ಯಾವುದೋ ಮೂಲಗಳಿಂದ ಬೀಜವೊಂದು ಪ್ರ್ರವೇಶವಾಗಿ ಯಾರಿಗೂ ಗಮನಕ್ಕೆ ಬಾರದೆ ಅದು ಸೌಮ್ಯವಾಗಿ ನಮ್ಮ ಜೀವ ವೈವಿಧ್ಯಗಳ ಮೇಲೆ ಆಕ್ರಮಣ ಮಾಡಲಾರಂಭಿಸುತ್ತವೆ.
- ಇದರಿಂದಾಗಿ ಭೂಮಿ, ಸಮುದ್ರ, ನದಿ, ಕೆರೆ ಹಾಗೆಯೇ ಕೃಷಿ ಎಲ್ಲವೂ ತೊಂದರೆಗೊಳಗಾಗುತ್ತವೆ.
- ಮಾಲಿನ್ಯ ಉಂಟಾಗುತ್ತದೆ. ಜೀವ ವೈವಿಧ್ಯಗಳ ಒಟ್ಟಾರೆ ಸಂಕುಲಗಳಲ್ಲಿ ಒಂದಕ್ಕೊಂದು ಹೊಂದಾಣಿಕೆ, ವೈರುಧ್ಯಗಳಿರುತ್ತವೆ.
- ಇದು ಕಡಿದುಕೊಳ್ಳುತ್ತವೆ. ನಿಯಂತ್ರಣಕ್ಕೆ ಖರ್ಚುವೆಚ್ಚಗಳಾಗುತ್ತವೆ.
- ಹೊಸ ಹೊಸ ಔಷಧಿಗಳ ಆವಿಷ್ಕಾರಗಳಾಗಬೇಕಾಗುತ್ತದೆ.
ಅನ್ಯ ಪ್ರದೇಶದ ಜೀವಿಗಳು ಹೇಗೆ ಬರುತ್ತವೆ?
- ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಸ್ಯಗಳು, ಬೀಜಗಳು, ಆಹಾರ ವಸ್ತುಗಳು ಹಾಗೆಯೇ ಗೊಬ್ಬರಗಳನ್ನು ಆಮದು, ರಪ್ತು ಮಾಡುವಾಗ ಆ ಮೂಲಕ ರೋಗಕಾರಕಗಳು, ಕಳೆ ಬೀಜಗಳು, ಕೀಟಗಳು ಪ್ರಸಾರವಾಗುತ್ತದೆ.
- ಎಲ್ಲೋ ಒಂದೆಡೆ ಇದು ಹುಟ್ಟಿ ಮೊಳೆತು ನಂತರ ಅದರ ಬೀಜಗಳ ಮೂಲಕ ಸರ್ವವ್ಯಾಪಿಯಾಗುತ್ತದೆ.
- ಹಿಂದೆ ನಮ್ಮ ವ್ಯವಸ್ಥೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ತೀವ್ರ ತರವಾಗಿ ಕ್ವಾರಂಟೈನ್ ಎಂಬ ವ್ಯವಸ್ಥೆ ಇತ್ತು.
- ಈಗ ಅದು ಭಾರೀ ಸಡಿಲಿಕೆಯಾದಂತಿದೆ. ಈ ಮೂಲಕವೇ ಹಲವು ಅನ್ಯ ಜೀವಿಗಳು ಪ್ರಸಾರವಾಗುತ್ತವೆ.
- ಕೆಲವರು ಹೇಳುತ್ತಾರೆ ಹಿಂದೆ PL-480 ಎಂಬ ಕಾರ್ಯಕ್ರಮದಂತೆ ಭಾರತಕ್ಕೆ ಅಮೆರೀಕಾದಿಂದ ಗೋಧಿ ಆಮದು ಆಗಿತ್ತು.
- ಆ ಸಮಯದಲ್ಲಿ ನಮ್ಮಲ್ಲಿ ಕಮ್ಯುನಿಸ್ಟ್ ಎಂಬ ಗಿಡ, ಪಾರ್ಥೇನಿಯಂ, ಲಂಟಾನ ಮುಂತಾದವುಗಳು ಬಂದಿವೆ ಎಂದು.
- ಆ ನಂತರವೂ ಆಮದು ಆಗಿರಬಹುದು. ಇದರ ಜೊತೆಗೆ ಏನೇನು ಬಂದಿದೆಯೋ?
- ಇತ್ತೀಚೆಗೆ ಬೇರೆ ಬೇರೆ ದೇಶಗಳ ಹಣ್ಣು ಹಂಪಲು ಸಸ್ಯಗಳನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ.
- ಇದಕ್ಕೂ ಕ್ವಾರೆಂಟೈನ್ ಇಲ್ಲದೆ ಬಂದಿದ್ದರೆ ಅದರ ಮೂಲಕವೂ ಬರಬಹುದು.
ಜೀವ ವೈವಿಧ್ಯ ಎಂಬುದು ಆಯಾ ಪ್ರದೇಶದ ಮಳೆ, ಬೆಳೆ, ಕೃಷಿ, ಜೀವ ಸಂಕುಲಗಳ ಕ್ಷೇಮದ ಬದುಕಿಗೆ ಸಹಕಾರಿ. ಅವುಗಳ ಮೇಲೆ ಆಕ್ರಮಣಗಳಾದರೆ ಅದರ ಪರಿಣಾಮ ಮನುಷ್ಯ ಸೇರಿದಂತೆ ಇತರ ಜೀವಿಗಳ ಮೇಲೆ ಉಂಟಾಗುತ್ತದೆ. ರೋಗ ರುಜಿನಗಳು, ಹವಾಮಾನ ವ್ಯತ್ಯಯಗಳು, ನೀರಿನ ಕ್ಷಾಮ ಇವೆಲ್ಲಾ ಆಗುತ್ತದೆ. ಆದ ಕಾರಣ ಬಹಳ ಜಾಗರೂಕತೆ ವಹಿಸಬೇಕು.