ಎಲೆ ಚುಕ್ಕೆ ರೋಗ ಉಪಚಾರ – ತಿಳಿದು ಮಾಡದಿದ್ದರೆ ಸಮಸ್ಯೆ ಇನ್ನೂ ಹೆಚ್ಚಾಗಬಹುದು.

ಎಲೆ ಚುಕ್ಕೆ ರೋಗ ಔಷದೋಪಚಾರ – ತಿಳಿದು ಮಾಡದಿದ್ದರೆ ಸಮಸ್ಯೆ ಇನ್ನೂ ಹೆಚ್ಚಾಗಬಹುದು
ಎಲೆ ಚುಕ್ಕೆ ರೋಗಕ್ಕೆ ಸಿಕ್ಕ ಸಿಕ್ಕ ಔಷದೋಪಚಾರ ಮಾಡಬೇಡಿ. ಯಾರೋ ಹೇಳಿದರು ಎಂದು ಅದನ್ನು ಸಿಂಪಡಿಸುವುದು, ಅಥವಾ ನಾವೇ ಪ್ರಯೋಗ ಮಾಡಿ ನೋಡುವುದು ಮಾಡುವುದರ ಬದಲು ಸ್ವಲ್ಪ ಯೋಚಿಸಿ ಅಥವಾ ಈ ಬಗ್ಗೆ ಸ್ವಲ್ಪ ತಿಳಿದವರಲ್ಲಿ ಕೇಳಿಕೊಳ್ಳಿ. ರೋಗಗಳಿಗೆ ಕೆಲವು ಔಷಧಿಗಳು ನಿರೋಧಕ ಶಕ್ತಿ ಪಡೆದಿರಬಹುದು ಅಥವಾ ಅದು ಸಂಬಂಧಿಸಿದ ರೋಗಾಣುವಿಗೆ ಸೂಕ್ತ ಔಷದೋಪಚಾರ ಆಗಿರದೇ ಇರಬಹುದು. ಹಾಗಾಗಿ ಹುರುಳಿಲ್ಲದ ಸಲಹೆಗಳಿಗೆ ಮಾನ್ಯತೆ ಕೊಡುವ ಬದಲು ಸ್ವಲ್ಪ ನೀವೇ ವಿಮರ್ಶೆ ಮಾಡಿಕೊಳ್ಳಿ.
ಒಬ್ಬರು ಎಲೆ ಚುಕ್ಕೆ ರೋಗ ಇದೆ, ಬೋರ್ಡೋ ದ್ರಾವಣ ಸಿಂಪಡಿಸಬೇಕು ಎಂದು ವಾಟ್ಸ್ ಆಪ್ ನಲ್ಲಿ ಬಂದಿತ್ತು ಎಂದು ಕೇಳಿದರು. ಏನು ಹೇಳಿದ್ದಾರೆ ಎಂದು ಕೇಳಿದರೆ ಅದಕ್ಕೆ ಮೈಲುತುತ್ತೆ ಸುಣ್ಣಗಳ ಮಿಶ್ರಣ ಬೋರ್ಡೋ ದ್ರಾವಣ ಸ್ಟಾಂಗ್ ಆಗಿ ಸಿಂಪಡಿಸಬೇಕು ಎಂದಿದ್ದಾರೆ ಎಂದರು. ಅದು ಆಗುವ ಸಾಧ್ಯತೆ ಇಲ್ಲ ಎಂದರೆ ಅವರು ಒಪ್ಪಲು ಸಿದ್ದರಿಲ್ಲ.  ಅಗಲೇ ಸಿಂಪಡಿಸಿ ಆಗಿದೆಯಂತೆ.  ಇನ್ನು ಕೆಲವರಿಗೆ ತಿಳಿಸಿದ ಔಷಧಿಯ ಹೆಸರು ಸಹ  ಹೇಳಲು ಬರುವುದಿಲ್ಲ. ಕೆಲವು ಔಷಧಿ ಮಾರಾಟ ಮಾಡುವವರು ಇದನ್ನೇ ಅವಕಾಶ ಎಂದು  ಇದನ್ನು ಟ್ರೈ ಮಾಡಿ ಎಂದು ಯಾವುದೋ ಔಷಧಿ ಕೊಡುತ್ತಾರೆ. ರೈತರು ಸಿಂಪಡಿಸುತ್ತಾರೆ. ಫಲಿತಾಂಶ ಗೊತ್ತಾಗಲು ಸಮಯ ಬೇಕು. ಹಾಗಾಗಿ ಯಾರೂ ತಪ್ಪಿತಸ್ಥರಾಗುವುದಿಲ್ಲ. ಆಗ ಈ ರೋಗಾಣು ರೂಪಾಂತರ ಆದರಂತೂ ಎಲ್ಲರೂ ಈ ವಿಷಯದಲ್ಲಿ ಬಚಾವ್!

ಎಲೆ ಚುಕ್ಕೆ ರೋಗಕ್ಕೆ ಮಾಡಬೇಕಾದ ಉಪಚಾರ ಏನು?

ವೈದ್ಯರಲ್ಲಿ ಹೋಗಿ ನಿಮಗೆ ಏನಾದರೂ ಗಾಯ ಇತ್ಯಾದಿಗಳಾಗಿದ್ದರೆ ಅದನ್ನು ನೋಡಿ ತಜ್ಞರು ಮಾಡುವ ಉಪಚಾರ ವೃಣ ಇರುವ ಭಾಗದಲ್ಲಿ ಹಾಳಾದ ಮಾಂಸ ಕೀವು ಇತ್ಯಾದಿಗಳನ್ನು ಸ್ವಚ್ಚಗೊಳಿಸಿ ಔಷದೋಪಚಾರ  ಮಾಡುವುದು.ಸಸ್ಯ ರೋಗಗಳು ಯಾವುದೇ ಇದ್ದರೂ ಅದರ ಪರಿಣಾಮಕಾರಿ ನಿಯಂತ್ರಣಕ್ಕೆ ಮೊದಲಾಗಿ ಮಾಡಬೇಕಾದದ್ದು ರೋಗ ಗ್ರಸ್ತ ಕಾಯಿ, ಎಲೆ ಹಣ್ಣು ಗಿಡ ಇವುಗಳನ್ನು ಭಾಗಶಃ ತೆಗೆಯುವುದು ಅಥವಾ  ಪೂರ್ತಿ ತೆಗೆಯುವುದು. ಎಲ್ಲದಕ್ಕೂ ಮಿಗಿಲಾಗಿ ಕೃಷಿಕರಿಗೆ ರೋಗ ಎಂದರೆ ಏನು, ಕೀಟ ಎಂದರೆ ಏನು ಎಂದು ತಿಳಿದಿರಬೇಕು. ರೋಗ ಎಂಬುದು ಕಣ್ಣಿಗೆ ಕಾಣದ ರೋಗಕಾರಕ ಸೂಕ್ಷ್ಮಾಣು ಜೀವಿಗಳಿಂದ  ಬರುತ್ತದೆ. ಅದು ಶಿಲೀಂದ್ರ ಇರಬಹುದು, ವೈರಸ್ ಇರಬಹುದು ಅಥವಾ ಬ್ಯಾಕ್ಟೀರಿಯಾ ಇರಬಹುದು.  ಈ ರೋಗ ಕಾರಕಗಳು ಸಸ್ಯಾಂಗದ ಒಳಗೆ ಸೇರಿಕೊಂಡು ಬದನಿಕೆಯಂತೆ ಆ ಸಸ್ಯದ ಜೀವಕೋಶದೊಳಗೆ ಸೇರಿಕೊಳ್ಳುತ್ತವೆ.  ಎಲ್ಲೆಲ್ಲಿ ರೋಗ  ತಗಲಿ ಅದು ನಮ್ಮ ಗೋಚರಕ್ಕೆ ಬರುತ್ತದೆಯೋ ಅಲ್ಲಿ ಆ ರೋಗ ಕಾರಕಗಳ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಇರುವ ಸಾಧ್ಯತೆ ಹೆಚ್ಚು. ಕಾಯಿಗಳಿಗೆ ರೋಗ ತಗಲಿದರೆ ಆ ಕಾಯಿಯನ್ನು  ತೆಗೆದು ಸೂಕ್ತ ವಿಲೇವಾರಿ ಮಾಡಬೇಕು. ಆಗೆಯೇ ಎಲೆಗಳಾದರೆ ಅದನ್ನೂ. ಬಾಳೆಗೆ  ಸಿಗಟೋಕಾ ಎಲೆ ಚುಕ್ಕೆ ರೋಗ ಬರುವುದು ನಮಗೆಲ್ಲಾ ಗೊತ್ತಿದೆ. ಅದಕ್ಕೆ ಔಷಧಿ ಸಿಂಪರಣೆ ಮಾಡುವ ಮೊದಲು ರೋಗ ಬಾಧಿತ ಎಲೆಗಳನ್ನು ತೆಗೆದು ಅದನ್ನು ಸುಡುವ ಕೆಲಸ ಮಾಡಬೇಕು. ನಂತರ ಸಿಂಪರಣೆ ಮಾಡಬೇಕು. ಆಗ ಅದರ ಫಲಿತಾಂಶ ಉತ್ತಮವಾಗಿರುತ್ತದೆ.
ಅಡಿಕೆಯ ವಿಷಯದಲ್ಲೂ ಹಾಗೆಯೇ. ಅಡಿಕೆ ಮರದ ಕೆಳ ಬಾಗದ ಎಲೆಗಳಿಗೆ  ಮಾತ್ರ ಎಲೆಚುಕ್ಕೆ ರೋಗ ಬಾಧಿಸುತ್ತದೆ. ಸಾಮಾನ್ಯವಾಗಿ ಕೆಳಭಾಗದ  ಎರಡು ಮೂರು ಗರಿಗಳಲ್ಲಿ ರೋಗ ಚಿನ್ಹೆ ಹೆಚ್ಚು. ಅದನ್ನು ಕತ್ತರಿಸಿ ತೆಗೆಯಬೇಕು. ಎತ್ತರದ ಮರಗಳಿಂದ ಕತ್ತರಿಸುವುದು ಸ್ವಲ್ಪ ಕಷ್ಟವಾಗಬಹುದು. ಸಾಧಾರಣ 50 ಅಡಿ ತನಕದ ಮರಗಳ ಗರಿಗಳನ್ನು ಈಗಿನ ಹೊಸ ದೋಟಿಯ ಮೂಲಕ ಕತ್ತರಿಸಬಹುದು. ಇವುಗಳಲ್ಲಿಯೇ ಗರಿಷ್ಟ ಪ್ರಮಾಣದಲ್ಲಿ ಶಿಲೀಂದ್ರಗಳು ಇರುತ್ತವೆ. ಕತ್ತರಿಸಿದಾಗ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ಮರಕ್ಕೆ ಶಿಲೀಂದ್ರದ ಉಪಟಳವೂ ಸ್ವಲ್ಪ ಕಡಿಮೆಯಾಗುತ್ತದೆ.  
ಇಂತಹ ಸಸ್ಯಗಳಲ್ಲಿ 2-3 ಗರಿ ಕತ್ತರಿಸಲೇಬೇಕು.
ಇಂತಹ ಸಸ್ಯಗಳಲ್ಲಿ 2-3 ಗರಿ ಕತ್ತರಿಸಲೇಬೇಕು.

ಕತ್ತರಿಸಿದ ನಂತರ ಏನು ಮಾಡಬೇಕು:

ಬರೇ ಕತ್ತರಿಸಿ ತೆಗೆದು ಅದನ್ನು ಅಲ್ಲೇ ಬುಡದಲ್ಲಿ  ಹಾಕಿದರೆ ಅದರಿಂದ ಏನೂ ಪ್ರಯೋಜನ ಇಲ್ಲ. ಅದನ್ನು ಅಲ್ಲೇ ಹಾಕಿದರೆ ಅಥವಾ ಅಲ್ಲೇ ಎಲ್ಲಾದರೂ ಬಿಸಾಡಿದರೆ ಗಾಳಿಯ ಮೂಲಕ ಹರಡುವ ಶಿಲೀಂದ್ರ ಆದ ಕಾರಣ ಅದು ಮತ್ತೆ ತನ್ನ ಆಸರೆ ಸಸ್ಯಕ್ಕೆ HOST PLANT ಪ್ರಸಾರವಾಗುತ್ತದೆ. ಅದಕ್ಕಾಗಿ ಇವೆಲ್ಲವನ್ನೂ  ಒಂದು ಬುಟ್ಟಿಯಲ್ಲಿ ಹಾಕಿಕೊಂಡು ಒಂದೆಡೆ ಅಡಿಕೆ ಸಿಪ್ಪೆ ಅಥವಾ ಒಣಗಿದ ತೆಂಗಿನ ಗರಿಯನ್ನು ರಾಶಿ ಹಾಕಿ ಅದಕ್ಕೆ ಬೆಂಕಿ ಕೊಟ್ಟು ಅದರಲ್ಲಿ ಹಾಕಿ ಸುಡಬೇಕು. ಹೀಗೆ ಸುಡುವುದರಿಂದ ಶಿಲೀಂದ್ರಗಳು ನಾಶವಾಗುತ್ತದೆ. ಒಂದು ಅಡಿಕೆ ಮರದ ಎರಡು – ಮೂರು ಗರಿಗೆ ಎಲೆ ಚುಕ್ಕೆ ಬಾಧಿಸಿದೆ ಎಂದರೆ ಅದರಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿ ಶಿಲೀಂದ್ರಗಳು ಒಳಸೇರಿರುತ್ತವೆ. ಅವುಗಳನ್ನು ಸುಡುವುದರಿಂದ 50% ಕ್ಕೂ ಹೆಚ್ಚಿನ ಶಿಲೀಂದ್ರಗಳು ನಾಶವಾಗುತ್ತವೆ.
ಇಷ್ಟು ಮಾಡಿದ ನಂತರ ಅಡಿಕೆ ಮರ/ಸಸಿಗಳಿಗೆ ಎಲೆಗಳಿಗೆ ಎರಡು ಬದಿಗೂ ಬೀಳುವಂತೆ ಫ್ರೊಪಿಕೊನೆಜ಼ೊಲ್, Propiconazole ಅಥವಾ  ಟ್ರುಬೊಕೊನೆಜಾಲ್ Tebuconazole ಶಿಲೀಂದ್ರ ನಾಶಕ  ಮತ್ತು ಅದಕ್ಕೆ  ಪ್ರೊಪಿನೆಬ್ Propineb ಶಿಲೀಂದ್ರ ನಾಶಕವನ್ನು ಮಿಶ್ರಣ ಮಾಡಿ ಸಿಂಪಡಿಸಬೇಕು.  ಮೇಲಿನ ಎರಡು  ವಿಶಾಲ ಶ್ರೇಣಿಯ Broad-spectrum ಶಿಲೀಂದ್ರ ನಾಶಕವಾಗಿರುತ್ತದೆ.  ವಿಶಾಲ ಶ್ರೇಣಿ  ಎಂದರೆ fungicide that are designed to kill or manage a wide variety of organisms. ಎರಡನೆಯದ್ದು ಸ್ಪರ್ಶ ಶಿಲೀಂದ್ರ ನಾಶಕವಾಗಿದ್ದು ಅದು  ತಗಲಿದ ಭಾಗದಲ್ಲಿ ಅಂಟಿಕೊಳ್ಳುತ್ತದೆ. ಇದರಿಂದ ರಕ್ಷಣೆ ಸಿಗುತ್ತದೆ. ಮೊದಲ ಎರಡರಲ್ಲಿ ಒಂದನ್ನು ಒಂದು ಲೀ. ನೀರಿಗೆ 1 ಮಿಲಿ. ಪ್ರಮಾಣದಲ್ಲಿಯೂ, ಎರಡನೆಯದ್ದನ್ನು 1 ಲೀ ನೀರಿಗೆ 2.5 ಗ್ರಾಂ ನಂತೆಯೂ ಮಿಶ್ರಣ ಮಾಡಿ ಅದಕ್ಕೆ ಸಿಲಿಕಾನ್ Silicone Gum ಮೂಲದ ಅಂಟನ್ನು ಸೇರಿಸಬೇಕು. ಇದು ಹೆಚ್ಚು ಸಮಯದ ತನಕ ಅಂಟಿಕೊಂಡು ಕೆಲಸ ಮಾಡುತ್ತದೆ. ಯಾವುದೇ ಕಾರಣಕ್ಕೆ ಪ್ರಮಾಣಕ್ಕಿಂತ ಹೆಚ್ಚು ಬಳಸಬಾರದು. ಇದರಿಂದ ಶಿಲೀಂದ್ರಕ್ಕೆ ನಿರೋಧಕ ಶಕ್ತಿ ಬರಬಹುದು.

ನಂತರ ಏನು ಮಾಡಬೇಕು:

 ಬರೇ ಶಿಲೀಂದ್ರ ನಾಶಕ ಸಿಂಪಡಿಸಿದರೆ ಸಾಲದು. ಎರಡು ಮೂರು ದಿನಗಳ ನಂತರ ಎಲೆಗಳನ್ನು ಕತ್ತರಿಸಿ ಸಸ್ಯಕ್ಕೆ ಆಹಾರದ ಕೊರತೆ ಆಗದಂತೆಯೂ, ಗಿಡ/ಮರಗಳಿಗೆ ಹೆಚ್ಚುವರಿ ಶಕ್ತಿ ಕೊಡಲು ಪೋಷಕಾಂಶದ ಸಿಂಪರಣೆಯನ್ನೂ ಮಾಡಬೇಕು. ಪೊಟ್ಯಾಶಿಯಂ ಪೋಷಕಾಂಶ ಸಸ್ಯಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಹಾಗಾಗಿ ಪೊಟ್ಯಾಶಿಯಂ ಇಲ್ಲದ ಗೊಬ್ಬರವನ್ನು ಕೊಡಬೇಡಿ.ಸಾವಯವ ಗೊಬ್ಬರ ಕೊಡುವವರು ಪೊಟ್ಯಾಶ್ ಮೂಲದ ಗೊಬ್ಬರ ಕೊಡಬೇಕು.ಹೆಚ್ಚಿನ ಕಡೆ ಸೊಕ್ಕಿ ಬೆಳೆದ ಸಸ್ಯಗಳಿಗೆ ಮೊದಲು ರೋಗ ಬಂದಿದೆ. ನಂತರ ಅದು ಪ್ರಸಾರವಾಗಿದೆ. ಉರೆ ಹುಟ್ಟಿದ ಅಥವಾ ಬಿದ್ದು ತನ್ನಷ್ಟಕ್ಕೆ ಹುಟ್ಟಿದ ಗಿಡಗಳಿಗೆ ಬಹಳಷ್ಟು ಕಡೆ ಎಲೆ ಚುಕ್ಕೆ ರೋಗ ಇಲ್ಲ. ಸಾಕಿದವನು ಸೇಕುವುದು ಹೆಚ್ಚು ಎಂಬಂತೆ.

ಸುಡುವುದರ ಲಾಭ ಏನು:

ಗರಿಗಳನ್ನು ಸುಡುವುದರಿಂದ ರೋಗಾಣುಗಳ ನಾಶ ಆಗುತ್ತದೆ. ಈ ರೋಗಾಣುಗಳನ್ನು ರಾಸಾಯನಿಕಗಳಿಂದ ಕೊಲ್ಲುವುದಕ್ಕಿಂತ ಇದು ಉತ್ತಮ ಮತ್ತು ಅಗ್ಗ. ಇಲ್ಲಿ ಬಳಕೆ ಮಾಡಲು ಶಿಫಾರಸು ಮಾಡಿರುವ ಶಿಲೀಂದ್ರನಾಶಕಗಳು ಹೆಚ್ಚಿನ ಬೆಲೆಯವು ಆದ ಕಾರಣ ಅದನ್ನು  ಹೀಚ್ಚು ಹೆಚ್ಚು ಬಳಸುವ ಬದಲು ರೋಗಕಾರಕಗಳನ್ನು ಕಡಿಮೆ ಮಾಡಿ ಸಿಂಪರಣೆ ಮಾಡಿದರೆ ಫಲಿತಾಂಶ ಹೆಚ್ಚು. ಇದನ್ನು ಅಲ್ಲೇ ಕಾಂಪೋಸ್ಟು ಮಾಡಿದರೆ ಅಥವಾ ಬುಡಕ್ಕೆ ಹಾಕಿದರೆ ಆ ಶಿಲೀಂದ್ರ ಅಲ್ಲೇ ಇದ್ದು, ಅದು ಮತ್ತೆ ಮತ್ತೆ ಮರುಕಳಿಸುತ್ತಿರುತ್ತದೆ.

ಬುಡಭಾಗ ನೆನೆಯುವಂತೆ ನೀರಾವರಿ ಮಾಡಬೇಡಿ:

ಬೇಸಿಗೆ ಇರಲಿ, ಮಳೆಗಾಲ ಇರಲಿ, ನೀರಾವರಿ ಮಾಡುವಾಗ ಬುಡ ಭಾಗದಲ್ಲಿ ತೇವಾಂಶ ಇರುವಷ್ಟು ಮಾತ್ರ ನೀರಾವರಿ ಮಾಡಿ. ಮಣ್ಣಿನಲ್ಲಿ ನೀರು ನಿಲ್ಲಬಾರದು ಹೆಚ್ಚಾಗಿ ಜಿಗುಟು ಮಣ್ಣಿನಲ್ಲಿ ನೀರು ಹೆಚ್ಚಾದರೆ ಸಸ್ಯದ ಬೇರುಗಳಿಗೆ ತೊಂದರೆ. ಇದು ಸಸ್ಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ.ಬಹುತೇಕ ಶಿಲೀಂದ್ರ ರೋಗ, ದುಂಡಾಣು ರೋಗಗಳಿಗೆ ಮೂಲ ಕಾರಣ ನೀರು. ಇದನ್ನು ಹಿತ ಮಿತವಾಗಿ ಬಳಕೆ ಮಾಡಬೇಕು.
  
 
 

Leave a Reply

Your email address will not be published. Required fields are marked *

error: Content is protected !!