ಅಡಿಕೆ ಸಸಿ ಆಯ್ಕೆ ಮಾಡುವಾಗ ಈಗ ಯಾವ ಮುಂಜಾಗ್ರತೆ ವಹಿಸಬೇಕು?

ಅಡಿಕೆ ಸಸಿ ಆಯ್ಕೆ ಮಾಡುವಾಗ ಈಗ ಯಾವ ಮುಂಜಾಗ್ರತೆ ವಹಿಸಬೇಕು?
ಅಡಿಕೆ ತೋಟ ಮಾಡುವವರು  ಹಿಂದೆ ಇಂತಹ ಸಸಿ ಒಳ್ಳೆಯಯದು, ಇದನ್ನು ಆಯ್ಕೆ ಮಾಡಬೇಕು ಎಂದೆಲ್ಲಾ ಮುಂಜಾಗ್ರತಾ ಕ್ರಮ ಅನುಸರಿಸುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಗಮನಿಸಬೇಕಾದದ್ದು ಗಿಡದ ತಳಿ, ಬೆಳವಣಿಗೆ ಲಕ್ಷಣ ಮಾತ್ರವಲ್ಲದೆ ಗಿಡದ ಆರೋಗ್ಯವೂ ಸಹ. ಎಳೆ ಗಿಡಗಳ ಆರೋಗ್ಯ ಹೇಗಿದೆ ಎಂಬುದನ್ನು ಕೂಲಂಕುಶವಾಗಿ ನೋಡಿ ನಂತರ ಆಯ್ಕೆ ಮಾಡಿ ನೆಡಬೇಕು. ಬರೇ ಅಡಿಕೆ ಮಾತ್ರವಲ್ಲ ತೆಂಗಿನ ಸಸಿಯೂ ಹಾಗೆಯೇ. 
ಅಡಿಕೆ ಸಸಿ ನೆಡುವವರು ಅದು ಅವರೇ ಮಾಡಿದ ಗಿಡ ಇರಬಹುದು ಅಥವಾ ನರ್ಸರಿಯಿಂದ ಖರೀದಿ ಮಾಡಿ ನೆಡುವುದೇ ಇರಬಹುದು. ಬೀಜ ತಮ್ಮ ತೋಟದಿಂದಲೇ ಆಯ್ಕೆ ಮಾಡುವುದು ಇರಬಹುದು, ಅಥವಾ ಬೇರೆ ಕಡೆಯಿಂದ ಆಯ್ಕೆ ಮಾಡುವುದೂ ಇರಬಹುದು.ಆದರೆ ಆಯ್ಕೆ ಮಾಡುವ ತೋಟದಲ್ಲಿ ಮರಗಳ ಎಲೆಗಳಿಗೆ ಎಲೆ ಚುಕ್ಕೆ ರೋಗ ಇದೆಯೇ ಎಂದು ಗಮನಿಸಿ ಇದ್ದರೆ ಆ ತೋಟದ ಬೀಜದ ಆಯ್ಕೆ ಮಾಡಬೇಡಿ. ಹಾಗೆಯೇ ನರ್ಸರಿಯಿಂದ ಆಯ್ಕೆ ಮಾಡುವಾಗಲೂ ಅಲ್ಲಿರುವ ಸಸಿಗಳಲ್ಲಿ ಎಲೆ ಚುಕ್ಕೆ ರೋಗದ ಲಕ್ಷಣಗಳು ಇದೆಯೇ ಎಂದು ನೊಡಿಕೊಂಡು ಖಾತ್ರಿ ಆದರೆ ಮಾತ್ರ ಖರೀದಿಸಿ. 
ಸದ್ಯದ ಪರಿಸ್ಥಿತಿಯಲ್ಲಿ ಬಹಳ ಮುತುವರ್ಜಿಯಿಂದ ಭಾರೀ ಖರ್ಚು ಮಾಡಿ ಹೊಸ ಅಡಿಕೆ ತೋಟ ಮಾಡದೆ ಇರುವುದೇ ಉತ್ತಮ. ಬಹುತೇಕ ಎಲ್ಲಾ ಕಡೆಯಲ್ಲೂ ಹೆಚ್ಚು – ಕಡಿಮೆ ಪ್ರಮಾಣದಲ್ಲಿ ಎಲೆ ಚುಕ್ಕೆ ರೋಗ ಇದೆ. ಈ ರೋಗ ಹರಡುವ ರೋಗ ಆದ ಕಾರಣ ಅದು ಪ್ರದೇಶದಿಂದ ಪ್ರದೇಶಕ್ಕೆ ಹರಡುತ್ತದೆ. ಬೀಜದಿಂದಲೂ ಹರಡುತ್ತದೆ. ಹಾಗಾಗಿ ಬಹಳ ಜಾಗರೂಕತೆ ವಹಿಸಿ.

ಮುಖ್ಯವಾಗಿ ಸಸಿಗಳ ಎಲೆಯನ್ನು ಗಮನಿಸಿ:

ಗಿಡ ಆಯ್ಕೆ ಮಾಡುವಾಗ ಅದರ ಎಲೆಯನ್ನು ಕೂಲಂಕುಶವಾಗಿ ಗಮನಿಸಬೇಕು.  
ಕೆಳಗಿನ ಎರಡು ಎಲೆಯಿಂದ ಮೇಲಿನ ಎಲೆಗಳಲ್ಲಿ ಹಳದಿ ಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಇವೆಯೇ? 
ಹಾಗೆಯೇ ಕೆಳಭಾಗದ ಎಲೆಗಳಲ್ಲಿ ಕರಟಿದಂತಹ ಭಾಗಗಳಿವೆಯೇ? 
ಕೆಳ ಭಾಗದ ಎಲೆ ಹಳದಿಯಾಗಿ, ಅದರಲ್ಲಿ ಕಪ್ಪು ಚುಕ್ಕೆಗಳು ಇವೆಯೇ  ಇದನ್ನು ಗಮನಿಸಬೇಕು. 
ಸಸಿಯ ಬುಡದ ಎಲೆ ಒಣಗಿದ್ದು, ಅದು ಸಸಿಯಲ್ಲಿ ಕಿತ್ತು ತೆಗೆಯಲು ಕಷ್ಟವಾಗುವಂತೆ ಅಂಟಿಕೊಂಡಿರಬಾರದು.
ಅದು ಕಷ್ಟವಿಲ್ಲದೆ ತೆಗೆಯಲು ಬರಬೇಕು. ಒಂದು ವೇಳೆ ಇಂತಹ ಚಿನ್ಹೆಗಳು ಇದ್ದರೆ ಆ ಸಸ್ಯಕ್ಕೆ ಎಲೆ ಚುಕ್ಕೆ ರೋಗದ ಸೋಂಕು ತಗಲಿದೆ ಎಂದರ್ಥ. 
ಇಂತಹ ಗಿಡಗಳನ್ನು ಆಯ್ಕೆ ಮಾಡದೆ ಇರುವುದು ಸೂಕ್ತ.
ಎಲೆಯಲ್ಲಿ ಈ ತರಹ ಚುಕ್ಕೆ ಇರಬಾರದು
ಎಲೆಯಲ್ಲಿ ಈ ತರಹ ಚುಕ್ಕೆ ಇರಬಾರದು
ಒಂದು ವೇಳೆ ನರ್ಸರಿಗಳಿಂದ ಗಿಡ ಆಯ್ಕೆ ಮಾಡುವುದಾದರೆ ಇಂಥಹ ಗಿಡಗಳನ್ನು ಕೊಳ್ಳಬೇಡಿ. 
ನೀವೇ ಗಿಡ ಮಾಡಿದ್ದು ಆಗಿದ್ದರೆ, ಅದರಲ್ಲಿ ಎಲೆ ಚುಕ್ಕೆ ರೋಗದ ಚಿನ್ಹೆಗಳು ಇದ್ದರೆ ಅದನ್ನು ಈ ವರ್ಷವೇ ನೆಡುವ ಯೋಚನೆ ಇದ್ದರೆ ಅಂತಹ ಗಿಡಗಳ ಕೆಳಭಾಗದ ಒಂದು ಎರಡು ಗರಿಗಳನ್ನು ಕಡಿದು ತೆಗೆಯಿರಿ. 
ಹಾಗೆಯೇ ಮೇಲಿನ  ಗರಿಗಳಲ್ಲಿ  ದೊಡ್ಡ ಸುಟ್ಟ ಗಾಯದ ತರಹದ ಚಿನ್ಹೆ ಇದ್ದರೆ ಅದನ್ನು ಬರೇ ಎಲೆಯ ತುಂಡನ್ನು ಮಾತ್ರ ತೆಗೆಯಿರಿ. 
ಆ ನಂತರ ತೆಗೆದ ಎಲ್ಲಾ ಭಾಗಗಳನ್ನು ಸುಟ್ಟು ಹಾಕಿ. 
ನಂತರ ಆ ಸಸಿಗಳಿಗೆ 25  ಗ್ರಾಂ ANTRAKOL ಶಿಲೀಂದ್ರ ನಾಶಕ ಮತ್ತು 10 ಮಿಲಿ ಫಾಲಿಕ್ಯೂರ್  (10 ಲೀ. ನೀರಿಗೆ) ಬೆರೆಸಿ ಎಲೆಗಳಿಗೆ ಅಡಿಗೂ , ಮೇಲ್ಭಾಗಕ್ಕೂ ಹಾಗೆಯೇ ಸ್ವಲ್ಪ ಬುಡಕ್ಕೂ ಬೀಳುವಂತೆ ಸಿಂಪಡಿಸಿ. 
ಆ ನಂತರ ಎರಡು ದಿನ ಬಿಟ್ಟು ಒಮ್ಮೆ 19:19:19 ½  ಕಿಲೋ 100 ಲೀ. ನೀರಿಗೆ ಬೆರೆಸಿ ಎಲೆಯ ಎರಡೂ ಭಾಗಕ್ಕೆ ಸಿಂಪಡಿಸಿ. ಆಗ ಗಿಡಕ್ಕೆ ಶಕ್ತಿ  ಬರುತ್ತದೆ.
15-20 ದಿನಗಳಲ್ಲಿ ಗಿಡ ಹಚ್ಚ ಹಸುರು ಬಂದ ನಂತರ ಅದನ್ನು ನಾಟಿ ಮಾಡಿ.
ಈ ತರಹ ಬುಡದಲ್ಲಿ ಒಣಗಿದ ಭಾಗ ಇರಬಾರದು.
ಈ ತರಹ ಬುಡದಲ್ಲಿ ಒಣಗಿದ ಭಾಗ ಇರಬಾರದು.

ಹೇಗೆ ನಾಟಿ ಮಾಡಬೇಕು:

ಎಲೆ ಚುಕ್ಕೆ ರೋಗ ಇರುವ ಕಡೆಗಳಲ್ಲಿ ತಾನಾಗಿಯೇ ಹುಟ್ಟಿ ಬೆಳೆದ ಸಸಿಗಳಿದ್ದರೆ ಅದನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. 
ಅದಕ್ಕೆ ಯಾವ ರೋಗ ಸೋಂಕು ತಗಲಿದ್ದು ಕಾಣಿಸುವುದಿಲ್ಲ. 
ಕಾರಣ ಅದು ಆಳದಲ್ಲಿ ನೆಟ್ಟದ್ದು ಅಲ್ಲ. ಹಾಗೆಯೇ ಅದಕ್ಕೆ ಅನುಕೂಲ ಸ್ಥಿತಿಯಲ್ಲಿ ಅದು ಬೆಳೆದದ್ದು. 
ಅದೇ ರೀತಿಯಲ್ಲಿ ನೆಡುವಾಗ ಹೊಂಡ ಮಾಡಿ ನೆಡಬೇಡಿ. 
ಹೊಂಡ ಮಾಡಿದರೆ ಬಸಿಗಾಲುವೆ ಇರಲೇಬೇಕು. 
ಒಂದು ಬುಡಕ್ಕೆ 2 ಕಿಲೋ ಪ್ರಮಾಣದಲ್ಲಿ ಹುಡಿಯಾದ ಕಾಂಪೋಸ್ಟು ಗೊಬ್ಬರವನ್ನು ನೆಡುವ ಭಾಗಕ್ಕೆ ಹಾಕಿ ಮಣ್ಣು ಮಿಶ್ರಣ ಮಾಡಿ ಸಡಿಲವಾಗಿರುವಂತೆ ನೆಡಿ. 
ಬುಡ ಭಾಗದಲ್ಲಿ ಜಿಗುಟು ಮಣ್ಣು ಇರಬಾರದು. ಅದು ನೀರು ನಿಂತು ಬೇರು ಕೊಳೆಯುವಂತೆ ಮಾಡುತ್ತದೆ. 
ಬೇರಿನ ಬೆಳವಣಿಗೆ ಕುಂಠಿತವಾಗಿ ಸಸಿ ಹಳದಿಯಾಗುತ್ತದೆ. 
ತಾನಾಗಿಯೇ ಹುಟ್ಟಿದ ಸಸಿ ಹೇಗೆ ನಿರಾತಂಕವಾಗಿ ಬೆಳೆಯುತ್ತದೆಯೋ ಅಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಡಿ. 
ಹೀಗೆ ನೆಟ್ಟರೆ ಅದರ ಬೇರುಗಳು ತಕ್ಷಣ  ಚೆನ್ನಾಗಿ ಬೆಳೆದು ಗಿಡ ಆರೋಗ್ಯವಾಗಿರುತ್ತದೆ.

ಬೀಜ ಆಯ್ಕೆ ಮಾಡುವಾಗ ಜಾಗರೂಕತೆ ಇರಲಿ:

ಕಾಯಿಯಲ್ಲಿ ಇಂಥಹ ಕಲೆಗಳಿರುವ ಗೊನೆಯ ಬೀಜ ಆಯ್ಕೆ ಮಾಡಬೇಡಿ.
ಕಾಯಿಯಲ್ಲಿ ಇಂಥಹ ಕಲೆಗಳಿರುವ ಗೊನೆಯ ಬೀಜ ಆಯ್ಕೆ ಮಾಡಬೇಡಿ.
ಎಲೆ ಚುಕ್ಕೆ ರೋಗ ಬೀಜದ ಮೂಲಕ ಪ್ರಸಾರವಾಗುತ್ತದೆ. 
ಹಾಗಾಗಿ ಬೀಜವನ್ನು ಎಲೆ ಚುಕ್ಕೆ ರೋಗದ ಸೋಂಕು ಇಲ್ಲ ಎಂದು ಖಾತ್ರಿ ಇದ್ದರೆ ಮಾತ್ರ ಖರೀದಿಸಿ, ಅಥವಾ ನಿಮ್ಮ ಮರದಿಂದ ಆಯ್ಕೆ ಮಾಡಿ. 
ಇಲ್ಲವಾದರೆ ಅದು ಸಸಿ ಹಂತದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ. 
ಮೇಲೆ ಹೇಳಿದ ಶಿಲೀಂದ್ರ ನಾಶಕ ದ್ರಾವಣದಲ್ಲಿ ಬೀಜವನ್ನು ಅದ್ದಿ  ಅದನ್ನು ಮೊಳಕೆಗೆ ಇಟ್ಟರೆ ಉತ್ತಮ. 
ಬೀಜಕ್ಕೆ ಆಯ್ಕೆ ಮಾಡುವ ಗೊನೆಯ ಕಾಯಿಯಲ್ಲಿ  ಬೆಂದ ತರಹದ ಮಚ್ಚೆಗಳು ಇರುವ ಕಾಯಿಗಳಿದ್ದರೆ ಅಂತಹ ಗೊನೆಯನ್ನು ಬೀಜಕ್ಕೆ ಆಯ್ಕೆ ಮಾಡಬೇಡಿ. 
ಅದು ಒಂದೆರಡು ಇದ್ದರೂ ಸಹ.
ಎಲ್ಲಕ್ಕಿಂತ ಮಿಗಿಲಾಗಿ ಈಗ ಒಂದೆರಡು ವರ್ಷ ಅಡಿಕೆ ಗಿಡ ನೆಡುವ ಕಾರ್ಯ ಬೇಡ. ಇದನ್ನು ಮುಂದೂಡಿ. ಈಗಾಗಲೇ ಭಾರೀ ಪ್ರಮಾಣದಲ್ಲಿ ನೆರೆ ರಾಜ್ಯಗಳಲ್ಲಿ ತೋಟ ಹೆಚ್ಚಳವಾಗುತ್ತಿದೆ. ನಮ್ಮಲ್ಲೂ ಆಗುತ್ತಿದೆ. ಜೊತೆಗೆ ಎಲೆ ಚುಕ್ಕೆ ರೋಗ ಇಲ್ಲದ ಭಾಗಗಳೇ ಇಲ್ಲ. ಹಾಗಿರುವಾಗ  ಮುಂಜಾಗರೂಕತೆ ವಹಿಸುವುದು ಉತ್ತಮ. ಎಲೆ ಚುಕ್ಕೆ ರೋಗ ಗುಣಮುಖವಾಗದ ರೋಗ ಅಲ್ಲ. ನಿರ್ವಹಣೆಯಲ್ಲಿ ಇದನ್ನು ಸುಧಾರಿಸಿ ನಿಧಾನವಾಗಿ ಕಡಿಮೆ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!