ಯಾವ ಲೆಕ್ಕಾಚಾರಕ್ಕೂ ಸಿಗದ ಅಡಿಕೆ ಮಾರುಕಟ್ಟೆ ಮತ್ತೆ ಚೇತರಿಕೆಯತ್ತ ಮುಖಮಾಡಿದೆ. ಸಾಮಾನ್ಯವಾಗಿ ವಸ್ತುವೊಂದರ ಬೆಲೆ ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಭಿಸಿ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಆದರೆ ಅಡಿಕೆ ಹಾಗಿಲ್ಲ. ಬೆಳೆ ಹೆಚ್ಚಾದರೂ ಬೆಲೆ ಏರಬಹುದು. ಬೆಳೆ ಕಡಿಮೆಯಾದರೂ ಬೆಲೆ ಏರದೆ ಇರಬಹುದು. ಇದೆಲ್ಲಾ ಅಡಿಕೆ ಮಾರುಕಟ್ಟೆಯಲ್ಲಿ ಯಾವಾಗಲೂ ನಡೆಯುತ್ತಿರುವಂತದ್ದು.ವರ್ಷದುದ್ದಕ್ಕೂ ಗುಟ್ಕಾ ಫ್ಯಾಕ್ಟರಿ ನಡೆಯುತ್ತಿರುತ್ತದೆ. ಗುಟ್ಕಾ ತಿನ್ನುವವರು, ಪಾನ್ ತಿನ್ನುವವರು ಅದಕ್ಕೆ ರಜೆ / ವಿರಾಮ ಕೊಡುವ ಕ್ರಮವೇ ಇಲ್ಲ. ಆದರೂ ಬೆಲೆ ಮಾತ್ರ ಒಮ್ಮೊಮ್ಮೆ ಏರುತ್ತಾ ಹೋಗುತ್ತದೆ. ಒಮ್ಮೊಮ್ಮೆ ಇಳಿಕೆಯಾಗುತ್ತಾ ಬರುತ್ತದೆ.
ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಿ, ದಾದ್ತಾನು ಇಟ್ಟುಕೊಂಡು ಬೆಲೆ ಇಳಿಕೆ ಮಾಡುವ ಸನ್ನಿವೇಶ ಉಂಟಾದರೆ ಈಗಿನ ಧಾರಣೆಯಲ್ಲಿ ಹೆಚ್ಚೆಂದರೆ ಒಂದು ಎರಡು ತಿಂಗಳ ತನಕ ಇಳಿಕೆ ಮಾಡಿ ಮತ್ತೆ ಏರಿಕೆ ಮಾಡಲೇ ಬೇಕು. ಕಾರಣ ಅವರು ಖರೀದಿಸಿದ ಮಾಲಿಗೆ ಕನಿಷ್ಟ 10-15% ಆದರೂ ಲಾಭ ಸಿಗಬೇಕು. ಖರೀದಿದಾರರು ಯಾವಾಗಲೂ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ದರಕ್ಕೇ ಖರೀದಿ ಮಾಡುವುದು. ಹಾಗಾಗಿ ದರ ಹೆಚ್ಚಿಸಲೇ ಬೇಕು. ಒಂದು ವೇಳೆ ಖರೀದಿದಾರ ಅಡಿಕೆ ಬೇಡ ಎಂದು ಹೇಳಿದರೆ ಸಹ ಕೆಲವೇ ಕೆಲವು ಸಮಯ ತನಕ ಖರೀದಿ ನಿಲ್ಲಿಸಬಹುದು. ನಂತರ ಗುಟ್ಕಾ ಅಥವಾ ಇನ್ಯಾವುದೇ ಬಳಕೆ ಕ್ಷೇತ್ರಕ್ಕೆ ಕೊರತೆ ಆದಾಗ ಖರೀದಿ ಮಾಡಲೇಬೇಕು. ಯಾವ ಖರೀದಿದಾರನೂ ವರ್ಷಪೂರ್ತಿ ಬೇಕಾಗುವಷ್ಟು ಅಡಿಕೆಯನ್ನು ಖರೀದಿ ಮಾಡಿ ದಾಸ್ತಾನು ಇಟ್ಟುಕೊಳ್ಳುವುದು ಅಸಾಧ್ಯ. ಇದು ಸಣ್ಣ ಪುಟ್ಟ ಮೊತ್ತದ ವ್ಯವಹಾರ ಅಲ್ಲ. ಹಾಗಾಗಿ ಅಡಿಕೆ ಅಥವಾ ಕೊಬ್ಬರಿ ಅಥವಾ ಕಾಳು ಮೆಣಸು ಎಲ್ಲವೂ ಒಂದೆರಡು ತಿಂಗಳು ಇಳಿಕೆಯ ಹಾದಿ ಕಂಡರೆ ಮತ್ತೆ ಒಂದೆರಡು ತಿಂಗಳು ಏರಿಕೆ ಆಗಿಯೇ ಆಗುತ್ತದೆ.ಇದು ಮೂಖ್ಯವಾಗಿ ಬೆಳೆಗಾರರೆಲ್ಲರೂ ತಿಳಿದಿರಬೇಕಾದ ಸಂಗತಿ.
ಇಂದಿನ ಮಾರುಕಟ್ಟೆ ಸ್ಥಿತಿ:
ಚಾಲಿ ಅಡಿಕೆ ಮಾರುಕಟ್ಟೆ ಚೇತರಿಕೆ ಆಗದೆ ಯಥಾ ಸ್ಥಿತಿಯನ್ನು ಕಾಯ್ದುಕೊಂಡಿದೆ. ಖಾಸಗಿಯವರು ಕ್ಯಾಂಪ್ಕೋ ದರ ದ ಮೇಲೆ ಕಣ್ಣಿಟ್ಟು ಕಾಯುತ್ತಿದ್ದಾರೆ. ಕ್ಯಾಂಪ್ಕೋ ಒಂದು ತಿಂಗಳ ಗಡುವು ನೀಡಿದೆ. ಖರೀದಿದಾರರಿಗೆ ಬೇಡಿಕೆ ಇರುವಷ್ಟು ಅಡಿಕೆ ಸರಬರಾಜು ಆಗದಿದ್ದರೆ, ಬೆಲೆ ಕಡಿಮೆ ಎಂದು ಬೆಳೆಗಾರರು ಮಾರುಕಟ್ಟೆಗೆ ಅಡಿಕೆ ಬಿಡುತ್ತಿಲ್ಲ ಎಂಬ ನೆವದಲ್ಲಿ ದರ ಏರಿಕೆ ಪ್ರಾರಂಭವಾಗುತ್ತದೆ. ಬಹುಷಃ ಚಾಲಿ ಅಡಿಕೆ ದರ ಭಾರೀ ಕುಸಿತ ಕಂಡಿಲ್ಲ. ಅಕ್ಟೋಬರ್ ತಿಂಗಳಿಗೂ ಡಿಸೆಂಬರ್ ತಿಂಗಳಿಗೂ ಕಡಿಮೆಯಾದ ದರ ಕೇವಲ ರೂ.20 ಅಂದರೆ ಶೇ.4-5% ಮಾತ್ರ. ಹಾಗಾಗಿ 1% -2% ಈ ರೀತಿಯಲ್ಲಿ ದರ ಏರಿಕೆ ಪ್ರಾರಂಭವಾಗಲಿ ಇನ್ನೂ ಒಂದೆರಡು ವಾರ ಬೇಕಾಗಬಹುದು. ಮಕರ ಸಂಕ್ರಮಣ ಜನವರಿ ತಿಂಗಳ ಎರಡನೇ ವಾರದ ಸುಮಾರಿಗೆ ಹಿಂದಿನ ಧಾರಣೆ ಬರಬಹುದು ಎಂಬುದು ಈ ಹಿಂದಿನ ವರ್ಷಗಳ ಬೆಲೆ ಏರಿಕೆ ನೋಡಿ ಊಹಿಸಬಹುದು.
ಕೆಂಪಡಿಕೆ ರಾಶಿ ಬೆಲೆ ಇಳಿಕೆ ಪ್ರಾರಂಭವಾಗಿ 2 ತಿಂಗಳು ಆಗುತ್ತಾ ಬಂದಿದೆ. ಸಫ್ಟೆಂಬರ್ ತಿಂಗಳಲ್ಲಿ ರೂ.55,000 ಮುಟ್ಟ್ಟಿದ್ದ ಧಾರಣೆ ಅಲ್ಲಿಂದ ಇಳಿಕೆಯಾಗುತ್ತಾ ಡಿಸೆಂಬರ್ ತಿಂಗಳ ಎರಡನೇ ವಾರಕ್ಕೆ 40,000 ಕ್ಕೂ ಕೆಳಗೆ ಇಳಿಯಿತು.2 ವಾರ ಕಳೆಯುತ್ತಿದ್ದಂತೆ ಮೆಲ್ಲನೆ ಚೇತರಿಕೆ ಕಾಣಲಾರಂಭಿಸಿತು. ಇಳಿಕೆ ಪ್ರಾರಂಭವಾದೊಡನೆ ಶಿವಮೊಗ್ಗ, ಚಿತ್ರದುರ್ಗ, ಹೊನ್ನಾಳಿ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಅಡಿಕೆ ಬಂದೇ ಬಿಟ್ಟಿತು ಈ ಕಾರಣದಿಂದ ದರ ಏರಿಕೆ ಮಾಡಿ ಅವಕ ಕಡಿಮೆ ಮಾಡದೆ ನಿರ್ವಾಹವೇ ಇಲ್ಲದ ಸ್ಥಿತಿ ಉಂಟಾಯಿತು. ಇಂದು ದಿನಾಂಕ 19-12-2022 ರಂದು ಶಿವಮೊಗ್ಗ- ಚೆನ್ನಗಿರಿ ಮಾರುಕಟ್ಟೆಯಲ್ಲಿ ಸೋಮವಾರ ಗರಿಷ್ಟ 3550 -2022 ಚೀಲ ಅಡಿಕೆ ಮಾರಾಟವಾಗಿದೆ. ಉಳಿದೆಡೆ ಕೊಯಿಲು ನಡೆಯುತ್ತಿದ್ದು, ಇನ್ನೇನು ಸಿದ್ದವಾಗಬೇಕಾದ ಕಾರಣ ಅಷ್ಟೊಂದು ಪ್ರಮಾಣದಲ್ಲಿ ಬಂದಿಲ್ಲ. ಇಂದಿನ ಅಡಿಕೆ ಧಾರಣೆ ಸರಾಸರಿ 43,000 ತನಕ ಇತ್ತು. ಏರಿಕೆ ಪ್ರಾರಂಭವಾದ ಕಾರಣ ಮಂಗಳವಾರದಿಂದ ಅಡಿಕೆ ಬರುವ ಪ್ರಮಾಣ ಕಡಿಮೆಯಾಗಲಾರಂಭಿಸಿದೆ. ಸರಾಸರಿ ದರ ಮತ್ತು ಗರಿಷ್ಟ ದರಗಳ ಮಧ್ಯಂತರ ಕಡಿಮೆಯಾಗಿರುವುದೂ ಏರಿಕೆಯ ಒಂದು ಸೂಚನೆ ಎನ್ನುತ್ತಾರೆ. ಕಾರಣ ಕಳೆದ ವರ್ಷವೂ ಈ ಸಮಯದಲ್ಲಿ ಇಷ್ಟು ಅಲ್ಲದಿದ್ದರೂ ಸ್ವಲ್ಪ ಇಳಿಕೆಯೇ ಆಗಿ ಚೇತರಿಕೆ ಪ್ರಾರಂಭವಾಗಿತ್ತು. ಕೆಲವರ ಅಂದಾಜಿ ಈ ಸೀಸನ್ ನಲ್ಲಿ ರಾಶಿ ಅಡಿಕೆ ದರ 45,000 ಮುಟ್ಟಬಹುದು ಎಂಬ ನಿರೀಕ್ಷೆ ಇತು. ಆದರೆ ಅದು ಇನ್ನೂ ಸ್ವಲ್ಪ ಹೆಚ್ಚು ಏರಿಕೆ ಆಗುವ ಸೂಚನೆ ಕಾಣಿಸುತ್ತಿದೆ.
ಇಂದು ಎಲ್ಲೆಲ್ಲಿ ಯಾವ ಬೆಲೆಗೆ ಖರೀದಿ ನಡೆದಿದೆ:
ಚಾಲಿ ಅಡಿಕೆ ಸ್ವಲ್ಪ ಸಮಯದಲ್ಲಿ ಏರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲವೇ ಕೆಲವು ಖಾಸಗಿ ವ್ಯಾಪಾರಿಗಳು ಹಳೆ ಅಡಿಕೆಗೆ ಗುಣಮಟ್ಟ ನೋಡಿ ( ದೊಡ್ದ ಗಾತ್ರದ ಅಡಿಕೆಗೆ) 490 ತನಕ ಖರೀದಿ ಮಾಡಿದ ವರದಿ ಇದೆ. ಹೆಚ್ಚಿನವರು ಸರಾಸರಿ 480 ದರದಲ್ಲಿ ಖರೀದಿ ಮಾಡಿದ್ದಾರೆ.
- ಬಂಟ್ವಾಳ: ಹೊಸತು: 375.00 -380.00 – ಹಳತು:480 (ಸಿಂಗಲ್)- 545 (ಡಬ್ಬಲ್)
- ಬೆಳ್ತಂಗಡಿ: 370.00 -375.00 – ಹಳತು:480 (ಸಿಂಗಲ್)- 540 (ಡಬ್ಬಲ್)
- ಮಂಗಳೂರು: 370.00 -380.00 – ಹಳತು:478 (ಸಿಂಗಲ್)- 540 (ಡಬ್ಬಲ್)
- ಕಾರ್ಕಳ: 350.00 -375.00 – ಹಳತು:485 (ಸಿಂಗಲ್)- 545 (ಡಬ್ಬಲ್)
- ಪುತ್ತೂರು: 370.00 -380.00 – ಹಳತು:480 (ಸಿಂಗಲ್)- 545 (ಡಬ್ಬಲ್)
- ಕುಂದಾಪುರ: 350.00 -380.00 – ಹಳತು:485 (ಸಿಂಗಲ್)- 550 (ಡಬ್ಬಲ್)
- ಸುಳ್ಯ: 370.00 -380.00 – ಹಳತು:485 (ಸಿಂಗಲ್)- 545 (ಡಬ್ಬಲ್)
- ಕುಮಟಾ: 325.00 -335.00 – ಹಳತು:380-395 (ಸಿಂಗಲ್)
- ಸಿರ್ಸಿ: 386.00 -406.00 (ಹಳತು)
- ಸಾಗರ: 388.00 -395.00 (ಹಳತು)
- ಯಲ್ಲಾಪುರ: 386.00 -400.00 (ಹಳತು)
- ಪಟೋರಾ:250.00-360.00
- ಉಳ್ಳಿ ಗಡ್ಡೆ:150.00-275.00
- ಕರಿಕೋಕಾ:180-250.00
ಕೆಂಪಡಿಕೆ ಧಾರಣೆ:
ಕಳೆದ ವಾರಕ್ಕೆ ಹೋಲಿಸಿದರೆ ಇಂದು ಮಾರುಕಟ್ಟೆ ರೂ.3000 ಏರಿಕೆ ಆದಂತಿದೆ.ದರ ಸ್ವಲ್ಪ ಏರಿಕೆಯಾದ ಕಾರಣ ಬರುವ ಪ್ರಮಾಣ ಕಡಿಮೆಯಾಗಲಾರಂಭಿಸಿದೆ. ಚೆನ್ನಗಿರಿಯಲ್ಲಿ ಅತ್ಯಧಿಕ (1700) ಚೀಲ ಮಾರಾಟವಾಗಿದೆ. ಉಳಿದೆಡೆ ಮೂರಂಕೆಯ ಪ್ರಮಾಣ ಮಾತ್ರ. ದರ ನಿನ್ನೆಯಂತೆ ಸ್ಥಿರವಾಗಿದೆ.
- ಚೆನ್ನಗಿರಿ:43823-45100
- ಚಿತ್ರದುರ್ಗ:43880-44069
- ಶಿವಮೊಗ್ಗ:43609-44399
- ಸಿದ್ದಾಪುರ:43399-44289
- ಸಾಗರ:41,050-43400
- ಶಿರ್ಸಿ:43250-43750
- ಯಲ್ಲಾಪುರ: 45400-47000
- ಭದ್ರಾವತಿ 42800-43769:
- ದಾವಣಗೆರೆ:42100-43050
ಕರಿಮೆಣಸು ಧಾರಣೆ:
ಕರಿಮೆಣಸು ಹೊಸ ಕೊಯಿಲು ಪ್ರಾರಂಭವಾಗಿದೆ. ಹಳೆಯದಕ್ಕೂ ಹೊಸತಕ್ಕೂ ರೂ.10 ದರ ವ್ಯತ್ಯಾಸ ಇದೆ ಅಷ್ಟೇ. ನಿರೀಕ್ಷೆಯಂತೆ ಬೆಲೆ ಏರಿಕೆ ಆಗಲಿಲ್ಲ. ಆದರೂ ಕೊಯಿಲಿನ ಸಮಯಕ್ಕೆ ಸುಮಾರಾಗಿ 5 -10 % ದಷ್ಟು ದರ ಕಡಿಮೆಯಾಗುತ್ತದೆ. ಈ ವರ್ಷ ಹಾಗೆ ಆಗಲಿಲ್ಲ. ದೇಶದಲ್ಲೂ ಮೆಣಸಿನ ಬೆಳೆಗೆ ಭಾರೀ ರೋಗ ಕಂಡೂ ಬಂದಿದೆ. ವಿದೇಶಗಳಲ್ಲೂ ಉತ್ಪಾದನೆ ಕಡಿಮೆ ಇದೆ.. ಹಾಗಾಗಿ ಬೆಲೆ ಇಳಿಕೆ ಆಗುವ ಸಂಭವ ಕಡಿಮೆ.
- ಕರಾವಳಿಯ ಎಲ್ಲಾ ಕಡೆ ಕ್ಯಾಂಪ್ಕೋ ದರ ಅತ್ಯಧಿಕ. ಕಿಲೋ 490-00 ತನಕ ಖರೀದಿ ನಡೆಯುತ್ತಿದೆ. ಹೊಸ ಮೆಣಸು 480.00 ಇದೆ.
- ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು ಇಲ್ಲಿ 495.00 -500.00-505.00 ತನಕ ಖರೀದಿ ನಡೆಯುತ್ತಿದೆ. (ಗುಣಮಟ್ಟ ಅಗತ್ಯ)
ಕೊಬ್ಬರಿ ಮತ್ತು ತೆಂಗಿನಕಾಯಿ:
ಕೊಬ್ಬರಿ ದರ ಸಾರ್ವಕಾಲಿಕ ಇಳಿಕೆ ಕಂಡಿದೆ. ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಪ್ರತೀ ತಿಂಗಳೂ ರೂ.1000 ದಂತೆ ಇಳಿಕೆಯಾಗುತ್ತಿದೆ. ಈ ದಿನ ಖಾದ್ಯ ಕೊಬ್ಬರಿಗೆ 11600 ಗರಿಷ್ಟ ಬೆಲೆ ಇತ್ತು. ತೆಂಗಿನ ಕಾಯಿಯ ಬೆಲೆ ಸ್ವಲ್ಪ ಏರಿಕೆ ಆಗಿದ್ದು, ಉತ್ತಮ ಒಣಗಿದ ಕಾಯಿಗೆ ಕಿಲೋ 27-28 ತನಕ ಇದೆ. ಎಣ್ಣೆ ಕೊಬ್ಬರಿ ಬೆಲೆ ಕ್ವಿಂಟಾಲಿಗೆ 7500-9000 ತನಕ ಇದೆ.
ರಬ್ಬರ್ ದಾರಣೆ:
ರಬ್ಬರ್ ಬೆಲೆ ಇನ್ನೂ ಕಿಲೋ ರೂ. 1-2 ಇಳಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
- GREDE 1X:140.00
- RSS 4:135.50
- RSS 5:127.50
- RSS 3:136.00
- SCRAP:61-69
- LOT:121.00
ಚಾಲಿ ಹೊಂದಿರುವ ಬೆಳೆಗಾರರು ಒಂದು ಎರಡು ವಾರ ಕಾಯುವುದರಿಂದ ಸ್ವಲ್ಪ ಹೆಚ್ಚಿನ ದರ ನಿರೀಕ್ಷಿಸಬಹುದು. ಕೆಂಪಡಿಕೆ ಬೆಳೆಗಾರರು ಇರುವ ಪ್ರಮಾಣವನ್ನು ವಿಭಜಿಸಿ ಎರಡು ದಿನಕ್ಕೊಮ್ಮೆ ಮಾರುಕಟ್ತೆ ದರ ಗಮನಿಸಿ ಮಾರಾಟ ಮಾಡುವುದು ಸೂಕ್ತ. ಮೆಣಸು ದಾಸ್ತಾನು ಇಡಬಹುದು. ಫೆಬ್ರವರಿ ಮಾರ್ಚ್ ತನಕ ತೆಂಗಿನ ಕಾಯಿಯ ದರ ಇಳಿಕೆ ಆಗಲಾರದು.