ತೆಂಗಿನ ಮರದ ಕಾಂಡದಿಂದ ರಸ ಸೋರುವ ರೋಗಕ್ಕೆ ಸರಳ ಔಷಧಿ.

ತೆಂಗಿನ ಮರದ ಕಾಂಡದಿಂದ ರಸ ಸೋರುವ ರೋಗ
ತೆಂಗಿನ ಮರದ ಕಾಂಡದಲ್ಲಿ ಕೆಂಪಗಿನ ರಸ ಸೋರುವ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹಿಂದೆ ಇದು ಬಯಲು ಸೀಮೆಯಲ್ಲಿ ಹೆಚ್ಚಾಗಿತ್ತು. ಈಗ ಕರಾವಳಿಯಲ್ಲೂ ಕಂಡುಬರುತ್ತಿದೆ. ಬಹುತೇಕ ಹೆಚ್ಚಿನವರ ತೆಂಗಿನ ತೋಟದಲ್ಲಿ ಈ ಸಮಸ್ಯೆ ಇದ್ದು, ಬಹಳಷ್ಟು ಜನ ಇದನ್ನು ಗಮನಿಸಿಯೇ ಇರುವುದಿಲ್ಲ. ಮರದ ಶಿರ ಭಾಗ  ನಿತ್ರಾಣವಾಗಿ ಗರಿಗಳು ಕಾಂಡಕ್ಕೆ ಜೋತು ಬಿದ್ದು, ಕೆಲವು ಸಮಯದ ನಂತರ ಸತ್ತು ಹೋಗುತ್ತದೆ. ಬೆಳೆಗಾರರು ಏನೋ ಆಗಿ ಸತ್ತು ಹೋಗಿದೆ ಎಂದು ಸುಮ್ಮನಿರುತ್ತಾರೆ.
ತೆಂಗಿನ ಮರದ ಕಾಂಡದಲ್ಲಿ ರಸ ಸೋರುವುದು ಒಂದು ಶಿಲೀಂದ್ರ ರೋಗ. ಇದು ಯಾವ ಕಾರಣಕ್ಕೆ ಬರುತ್ತದೆ ಎಂಬುದು ಸ್ಪಷ್ಟವಾಗಿ ಹೇಳಲು ಬರುವುದಿಲ್ಲ.ಹಾಗಾಗಿ ಇದಕ್ಕೆ ನಿರ್ದಿಷ್ಟ ಕಾರಣ ಇಲ್ಲದ ರೋಗ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಬರ ಪರಿಸ್ಥಿತಿಯಲ್ಲೂ ಬರುತ್ತದೆ.ನೀರು ಹೆಚ್ಚಾದರೂ ಬರುತ್ತದೆ. ಇವೆರಡೂ ಸನ್ನಿವೇಶ ಅಲ್ಲದಿದ್ದರೂ ಬರುತ್ತದೆ. ಇದಕ್ಕೆ ಕಾರಣವಾದ ಶಿಲೀಂದ್ರ Thielaviopsis paradoxa   ಗಾಳಿಯ ಮೂಲಕ ಪ್ರಸಾರವಾಗುತ್ತದೆ. ಕೆಲವು ಕೀಟಗಳ ಮೂಲಕವೂ ಪ್ರಸಾರವಾಗುತ್ತದೆ. ಬಾಧಿತ ಮರದ ಕಾಂಡದಲ್ಲಿ ರಸ ಸೋರುವ ಮುಂಚೆ ಗರಿಗಳು ಬಾಗಲಾರಂಭಿಸುತ್ತವೆ.ಇದಕ್ಕೆ ಪರಿಣಾಮಕಾರೀ ಚಿಕಿತ್ಸೆ ಇಲ್ಲವೆಂದೇ ಹೇಳಿದರೂ ತಪ್ಪಾಗಲಾರದು. ಪ್ರಾರಂಭಿಕ ಹಂತದಲ್ಲಿ ಕೆಲವೊಮ್ಮೆ ಗುಣಮುಖವಾಗಬಹುದಾದರೂ ಗಮನಿಸುವುದು ತಡವಾದರೆ ಮರ ಸಾಯುತ್ತದೆ. ಒಂದು ಮರಕ್ಕೆ ಈ ರೋಗ ಬಂದರೆ ಬೇರೆ ಮರಗಳಿಗೂ ಪ್ರಸಾರವಾಗುತ್ತದೆ.

ರೋಗಕ್ಕೆ ಚಿಕಿತ್ಸೆ:

  • ಕೃಷಿ ತಜ್ಞರು ಈ ರೋಗ ನಿವಾರಣೆಗೆ ಬಾಧಿತ ಕಾಂಡದ ಚಕ್ಕೆಗಳನ್ನು ಎಲ್ಲೆಲ್ಲಿ ತನಕ ಕೆಂಪು ಕಲೆಗಳು ಇರುತ್ತವೆಯೋ ಅಲ್ಲಿ ತನಕ ತೆಗೆಯಲು ಶಿಫಾರಸು ಮಾಡುತ್ತಾರೆ.
  • ತೆಗೆದ ಚಕ್ಕೆಗಳನ್ನು ಸ್ವಲ್ಪವೂ ಅಲ್ಲೇ ಉಳಿಸದೆ ಸುಟ್ಟು ಹಾಕಬೇಕು.
  • ಚೆಕ್ಕೆ ತೆಗೆದ ಭಾಗಕ್ಕೆ ಟಾರು ಅಥವಾ ಬೋರ್ಡೋ ಪೇಸ್ಟ್  ಅಥವಾ AUREOFUNGIN-SOL ಲೇಪನ ಮಾಡಿ;
  • ಗಾಯಕ್ಕೆ ನೀರು ತಗಲಿ ಆ ಭಾಗ ಹೆಚ್ಚು ಹೆಚ್ಚು ಕೊಳೆತು ಹೋಗದಂತೆ ಸಿಮೆಂಟ್  ಲೇಪನ ಮಾಡಲು ಸಲಹೆ ನೀಡುತ್ತಾರೆ.
  • ಮರದ ಕಾಂಡಕ್ಕೆ ಗಾಯ ಆದರೆ ಈ ಸಮಸ್ಯೆ ಹೆಚ್ಚಾಗುತ್ತದೆ. ಆದ ಕಾರಣ ಗಾಯ ಮಾಡಬಾರದು.
  • ಇದಲ್ಲದೆ ಹೆಕ್ಸಾಕೊನೆಜ಼ೋಲ್ ಶಿಲೀಂದ್ರ ನಾಶಕ 2 ಮಿಲಿ +25 ಮಿಲಿ.ನೀರು ಬೆರೆಸಿ ಮರದ ಬೇರಿನ ಮೂಲಕ ಉಣಿಸುವುದರಿಂದ ರೋಗ ನಿಯಂತ್ರಣ ಆಗುತ್ತದೆ ಎನ್ನುತ್ತಾರೆ.
ರಸ ಸೋರಲು ಪ್ರಾರಂಭವಾದ ಮರದ  ಲಕ್ಷಣ
ರಸ ಸೋರಲು ಪ್ರಾರಂಭವಾದ ಮರದ ಲಕ್ಷಣ

ವಾಸ್ತವಿಕತೆ ಏನು:

  • ಈ ಶಿಲೀಂದ್ರ ರೋಗ ಬಂದು ಹೆಚ್ಚು ಸಮಯ ಆಗಿದ್ದರೆ ಮರದ ಕಾಂಡದ ಒಳಗೆಲ್ಲಾ ಘಾಸಿಯಾಗಿರುತ್ತದೆ.
  • ಶಿರ ಭಾಗದಿಂದ  ಬುಡ ಭಾಗದ ತನಕ ಅಲ್ಲಲ್ಲಿ ಆಹಾರ ನೀರು ಸರಬರಾಜು ಆಗುವ ಭಾಗಗಳು  ಜೀವ ಕಳಕೊಂಡ ಸ್ಥಿತಿಗೆ ತಲುಪಿರುತ್ತವೆ. 
  • ಎಲೆಗಳು ಒಣಗಲು ಪ್ರಾರಂಭವಾಗಿರುತ್ತದೆ. ಈ ಹಂತಕ್ಕೆ ಬಂದಾಗ ಯಾವ ಉಪಚಾರ ಮಾಡಿದರೂ ಆ ಮರವನ್ನು ಬದುಕಿಸಲು ಸಾಧ್ಯವಾಗಲಾರದು.
  • ರಸ ಸೋರಿದ ಭಾಗವನ್ನು ಕೆರೆದು ತೆಗೆದು ಸ್ವಚ್ಚಮಾಡಲು ಹೊರಟರೆ ಸರಿಯಾಗಿರುವ ಭಾಗ ಸಿಗುವುದೇ ದುಸ್ತರವಾಗುತ್ತದೆ.
  • ಹಾಗಾಗಿ ಉಪಚಾರ ಮಾಡಿದರೆ ಬದುಕಿಸಬಹುದು ಎಂಬ ಖಾತ್ರಿ ಇದ್ದರೆ ಮಾತ್ರ ಪ್ರಯತ್ನ ಮಾಡಬಹುದು.
ರಸ ಸೋರುವ ಲಕ್ಷಣ

ವೈಜ್ಞಾನಿಕವಲ್ಲದ ಉಪಚಾರ:

  • ಕೆಲವು ರೈತರು ಇಂತಹ ಸಮಸ್ಯೆ  ಉಂಟಾದಾಗ ಕಾಂಡದಿಂದ ರಸ ಸೋರಿದ ಜಾಗಕ್ಕೆ ದೊಂದಿಯ ಮೂಲಕ ಬೆಂಕಿಯ ಜ್ವಾಲೆಯನ್ನು ಹಿಡಿದು ಗುಣ ಪಡಿಸಿದ ಬಗ್ಗೆ ಹೇಳುತ್ತಾರೆ.
  • ಕೆಲವು ಜನ ಕಾಂಡದಲ್ಲಿ ರಸ ಸೋರಿದ ತಕ್ಷಣ ಆ ಭಾಹಕ್ಕೆ ಎಲ್ಲಿ ತನಕ ರಸ ಸೋರಿದೆಯೋ ಅಲ್ಲಿ ತನಕ  ಸಿಮೆಂಟ್ ಗಾರೆಯನ್ನು ಹಾಕಿ ಅದನ್ನು ಬದುಕಿಸಿದ ಉದಾಹರಣೆ ಇದೆ.

ಸಗಣಿ ಲೇಪನದಿಂದಲೂ ವಾಸಿಯಾಗುತ್ತದೆ:

  • ಮಿತ್ರರೊಬ್ಬರು ತಮ್ಮ ಮನೆಯ  ಹಸುವನ್ನು ಮೇಯಲು ಗದ್ದೆಯಲ್ಲಿ ಕಟ್ಟುವ ಸಂದರ್ಭದಲ್ಲಿ   ಮರವೊಂದರ ಕಾಂಡದಲ್ಲಿ ನೆತ್ತರು ಬಂದಂತೆ ಚಿನ್ಹೆಯನ್ನು  ಗಮನಿಸಿದರಂತೆ.
  • ಬುಡ ಭಾಗದಲ್ಲಿ  ಸುಮಾರು  3-4 ಅಡಿ ತನಕ ರಸ ಸೋರಿಕೆ ಆಗಿತ್ತಂತೆ.
  • ಈ ರೋಗದ ಬಗ್ಗೆ ತಿಳಿದ್ದಿದ್ದ ಅವರು ಅದರ  ಅಸೆ ಬಿಟ್ಟು ಅಲ್ಲೇ ಇದ್ದ ಹಸು ಹಾಕಿದ ಸಗಣಿಯನ್ನು ಆ ಭಾಗಕ್ಕೆ ಲೇಪನ ಮಾಡಿದರಂತೆ.
  • ನಂತರ ಕೆಲವು ದಿನಗಳ ಬಳಿಕ ನೊಡುವಾಗ ರಸ ಸೋರುವಿಕೆ ನಿಂತಿತ್ತು.
  • ಒಂದು ವರ್ಷದಲ್ಲಿ ಮರದ ಗರಿಗಳು ಬಾಗಿದ್ದು ಉದುರಿದ್ದವು, ಉಳಿದವು ನೇರವಾಗಿದ್ದವು.
  • ಈ ವಿಚಾರವನ್ನು ನನ್ನಲ್ಲಿ ಹೇಳಿದ್ದರು. ನಮ್ಮಲ್ಲೂ ಒಂದು ಮರಕ್ಕೆ ಈ ಸಮಸ್ಯೆ ಉಂಟಾಗಿತ್ತು. 
  • ಒಂದು ಮರ ಆಗಲೇ ಗರಿ ಒಣಗಿ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿತ್ತು.
  • ಅದರನ್ನು ಬದುಕಿಸುವುದು ಕಷ್ಟ ಎಂದು ಮರವನ್ನು ಕಡಿದು ಎಲ್ಲಾ ಭಾಗಗಳನ್ನೂ ಸುಟ್ಟು ವಿಲೇವಾರಿ ಮಾಡಿದೆವು.
  • ಹಾಗೆಯೇ ಒಂದು ಮರ ಗರಿ ಬಾಗಿತ್ತಾದರೂ ಗರಿ ಒಣಗುವ ಹಂತಕ್ಕೆ ಬರಲಿಲ್ಲ.
  • ಆ ಮರದ ಕಾಂಡಕ್ಕೆ ಎಲ್ಲಿಯ ತನಕ ರಸ ಸೋರಿಕೆ ಆಗಿದೆಯೋ ಅಲ್ಲಿ ತನಕ ಬೆರಣಿಯಂತೆ  ತಾಜಾ ಸಗಣಿಯ ಲೇಪನ ಮಾಡಿ ಸುಮ್ಮನಾದೆವು.
  • ಇದು ಕಳೆದ ವರ್ಷದ ನವೆಂಬರ್ ತಿಂಗಳು. ಈ ವರ್ಷ ಆ ಮರದಲ್ಲಿ ರಸ ಸೋರುವ ಸಮಸ್ಯೆ ಇಲ್ಲ. 
  • ಹಾಗೆಯೇ ಗರಿಗಳು ನೇರವಾಗಿವೆ. ಇಳುವರಿಯೂ ಇದೆ.
  • ಹಾಗೆಂದು ಹಿಂದಿನಷ್ಟು ಇಳುವರಿ ಇಲ್ಲ. ಇದು ಮುಂದೆ ಸರಿಯಾಗಬಹುದು ಎಂಬ ನಂಬಿಕೆ.
ರಸ ಸೋರಿದ ಭಾಗಕ್ಕೆ ಸಗಣಿಯ ಲೇಪನ
ರಸ ಸೋರಿದ ಭಾಗಕ್ಕೆ ಸಗಣಿಯ ಲೇಪನ
  • ಸಗಣಿಯ ಲೇಪನದಿಂದ ಬಹುಶಃ ಈ ರೋಗಕ್ಕೆ ಕಾರಣವಾದ ಶಿಲೀಂದ್ರದ ಬೆಳವಣಿಗೆ ನಿಲ್ಲುತ್ತದೆ.
  • ಸಸ್ಯಗಳಿಗೆ ಗಾಯ (ಸಿಗಿದುಕೊಂಡಾಗ, ಕತ್ತಿಯಲ್ಲಿ ಕಡಿದಾಗ) ಆದಾಗ ಆ ಭಾಗಕ್ಕೆ ಸಗಣಿಯ ಲೇಪನ ಮಾಡಿದರೆ ಅದು ಕೊಳೆಯುವುದನ್ನು  ತಡೆದು ಗಾಯ ಮಾಸುತ್ತದೆ.
  • ಸಗಣಿಯಲ್ಲಿರುವ ಮಿಥೇನ್ ಉತ್ಪಾದಿಸುವ ಬ್ಯಾಕ್ಟೀರಿಯಾ ಬಹುಶಃ ಶಿಲೀಂದ್ರ ನಿಯಂತ್ರಣಕ್ಕೆ ಸಹಕರಿಸುತ್ತದೆ ಎಂದು ಊಹಿಸಬಹುದು.
  • ಹಾಗೆಯೇ ರಸ ಸೋರಿದಾಗ ಅದಕ್ಕೆ ಕೆಲವು ನೊಣಗಳು (ಸೊಳ್ಳೆ) ಗಳು ಆಕರ್ಷಿತವಾಗಿ ಅದನ್ನು ತಮ್ಮ ಕಾಲಿನ ಮೂಲಕ ಪ್ರಸಾರ ಮಾಡುವುದಕ್ಕೂ ಅವಕಾಶ ಇರುವುದಿಲ್ಲ.
  • ಇದನ್ನು ಯಾರೂ ಸಂಶೋಧನೆಯ ಮೂಲಕ ದೃಢಪಡಿಸಿಲ್ಲ.
  • ಇದರ ಬಗ್ಗೆ ಸಂಶೋಧಕರು ಅಧ್ಯಯನ ಮಾಡಿದರೆ ಸರಳವಾಗಿ ರಸ ಸೋರುವ ಸಮಸ್ಯೆ ಉಂಟಾದರೆ ಚಿಕಿತ್ಸೆ ಮಾಡಬಹುದು.
ರಸ ಸೋರುವಿಕೆ ಉಂಟಾದಾಗ ಅದರ  ತಿರುಳಿನ ಒಳಗೆ ಹೀಗೆ ಆಗಿರುತ್ತದೆ.
ರಸ ಸೋರುವಿಕೆ ಉಂಟಾದಾಗ ಅದರ ತಿರುಳಿನ ಒಳಗೆ ಹೀಗೆ ಆಗಿರುತ್ತದೆ.
  • ಸಗಣಿಗೆ ಶಿಲೀಂದ್ರ ರೋಗ ನಿಯಂತ್ರಣ ಶಕ್ತಿ ಇರುವ ಬಗ್ಗೆ ಅಧ್ಯಯನಗಳು ನಡೆಯಬೇಕಾಗಿದೆ.  
  • ಇದರಿಂದ  ಕೆಲವೊಂದು ಸಸ್ಯ ರೋಗಗಳ ನಿಯಂತ್ರಣ  ಸುಲಭವಾಗಲೂಬಹುದು.
  • ಸಗಣಿಯ ಉಪಯೋಗದಿಂದ ಮಣ್ಣಿನಲ್ಲಿ ಸಾವಯವ ಅಂಶವೂ ಹೆಚ್ಚಳವಾಗಬಹುದು.
  • ಅಳಿಯುತ್ತಿರುವ ಹಸು ಸಂತತಿ ಉಳಿಸಲು ಇದು ನೆರವಾಗಬಹುದು.

ರಸ ಸೋರುವಿಕೆಯಿಂದ ಸತ್ತ ಮರಗಳನ್ನು ವಿಲೇವಾರಿ ಮಾಡಲೇಬೇಕು:

ಕೆಲವೊಮ್ಮೆ ನಾವು ಗಮನಿಸದೆ ರಸ ಸೋರುವ ರೋಗ ಉಲ್ಬಣವಾಗಿ ಮರ ಸಾಯುವ ಹಂತಕ್ಕೆ ಬರಬಹುದು. ಇಂತಹ ಮರಗಳ ಒಳಭಾಗದ ಎಲ್ಲಾ ಅಂಗಾಂಶಗಳೂ ಹಾನಿಗೊಳಗಾಗಿರುತ್ತವೆ. ಈ ಮರಗಳನ್ನು  ಹಾಗೆಯೇ ಸತ್ತು ಒಣಗಲು ಬಿಡಬಾರದು. ಅದನ್ನು ಕಡಿದು  ಕರಟಿಸಬೇಕು. ಬುಡಭಾಗವನ್ನು ಸಹ ಸಾಧ್ಯವಾದರೆ ತೆಗೆಯುವುದು ಸೂಕ್ತ. ಇಲ್ಲವಾದರೆ ಅದರ ಶಿಲೀಂದ್ರ ಬೇರೆ ಮರಗಳಿಗೆ ರೋಗವನ್ನು ಪ್ರಸಾರಮಾಡುತ್ತದೆ. ಕೆಲವೊಮ್ಮೆ ಮಿಂಚು ಆಘಾತದಿಂದ ಮರದ ಕಾಂಡದಲ್ಲಿ ರಸ ಸೋರುವುದು ಸಹ ಇದೆ. ಅದನ್ನೂ ಸಹ ಕಡಿದು ಅದರ ರಸ ಹೊರ ಸೂಸಲು ಅವಕಾಶ ಇಲ್ಲದಂತೆ ಕರಟಿಸಿ ಬಿಟ್ಟರೆ ಕೆಂಪು ಮೂತಿ ದುಂಬಿಯ  ಕಾಟ ಕಡಿಮೆಯಾಗುತ್ತದೆ. ಈ ರಸದ ವಾಸನೆಗೆ ಕೆಂಪು ಮೂತಿ ದುಂಬಿ ಬರುತ್ತದೆ.

Leave a Reply

Your email address will not be published. Required fields are marked *

error: Content is protected !!