ಅಡಿಕೆಗೆ ಬೇಸಿಗೆಯಲ್ಲಿ ಗೊಬ್ಬರ ಕೊಟ್ಟರೆ ಭಾರೀ ಪ್ರಯೋಜನ.

Areca yield

ಅಡಿಕೆ ತೆಂಗು ಗೆ ಹಾಗೆಯೇ ಯಾವುದೇ ಧೀರ್ಘಾವಧಿ ಬೆಳೆಗಳಿಗೆ ಪೋಷಕಗಳನ್ನು  ಬೇಸಿಗೆಯಲ್ಲಿ  ಕೊಡುವುದು ಅಧಿಕ ಇಳುವರಿ  ದೃಷ್ಟಿಯಿಂದ  ಉತ್ತಮ. ಇದರಲ್ಲಿ ಬೆಳೆಗಳಿಗೆ ಯಾವುದೇ ಹಾನಿ ಇರುವುದಿಲ್ಲ. ನಾವು ಕೊಡುವ ಪೋಷಕವನ್ನು ಸಸ್ಯಗಳು ಹೀರಿಕೊಳ್ಳಲು ಬೇರಿನ ಭಾಗದಲ್ಲಿ ತೇವಾಂಶ ಇರಬೇಕು. ಇದರ ಫಲಿತಾಂಶ ಅಧ್ಭುತ.

 • ಮನುಷ್ಯ ಪ್ರಾಣಿ ಯಾವುದೇ ಜೀವಿಗಳ ಶರೀರದ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ವ್ಯಯ ಆಗುವುದು ಬೆವರುವ ಬೇಸಿಗೆ ಕಾಲದಲ್ಲಿ.
 • ಈ ಸಮಯದಲ್ಲಿ ಹಸಿವು ಹೆಚ್ಚು. ತಿಂದದ್ದು ಬೇಗ ಜೀರ್ಣ ಆಗುತ್ತದೆ.
 • ಶರೀರ ಹೆಚ್ಚು ಶಕ್ತಿಯನ್ನು ಉತ್ಪಾದಿಸಿ ಅಂಗಾಗಗಳಿಗೆ ಕೊಡಬೇಕಾಗುತ್ತದೆ.
 • ಆದ ಕಾರಣ ಶಕ್ತಿ ಉತ್ಪಾದನೆಗೆ ಹೆಚ್ಚು ಹೆಚ್ಚು ಅಹಾರ ಬೇಕಾಗುತ್ತದೆ. ಸಸ್ಯಗಳೂ ಇದಕ್ಕೆ  ಹೊರತಲ್ಲ.

ಅಡಿಕೆ ಬೆಳೆ ಮತ್ತು ನಮ್ಮ ತಿಳುವಳಿಕೆ:

 • ಸಾಮಾನ್ಯವಾಗಿ ನಾವು ತಿಳಿದುಕೊಂದಿರುವುದು ಸಸ್ಯಗಳಿಗೆ ಬೇಸಿಗೆಯಲ್ಲಿ ಬೇಕಾಗುವುದು ನೀರು ಒಂದೇ ಎಂದು.
 • ಅದು ಒಂದು ಅವಶ್ಯಕತೆ ನಿಜ. ಆದರೆ ಅದರ ಜೊತೆಗೆ ಶಕ್ತಿಯ ಉತ್ಪಾದನೆಗೆ ಸಾಕಷ್ಟು ಪೋಷಕಾಂಶಗಳೂ ಬೇಕು.
 • ನೀರು ಒಂದನ್ನೇ ಕೊಡುತ್ತಿದ್ದರೆ ಸಸ್ಯಗಳು ಅಂತಹ ಉತ್ಪಾದಕತೆಯನ್ನು ತೋರಿಸುವುದಿಲ್ಲ.
 • ಅವು ಬರೇ ಬದುಕಿರುತ್ತವೆ. ಕೆಲವರು ನೀರು ಹೆಚ್ಚು ಹೆಚ್ಚು ಕೊಡಿ ಬೇರೆ ಏನೂ ಬೇಕಾಗುವುದಿಲ್ಲ.
 • ಈ ಸಮಯದಲ್ಲಿ ಗೊಬ್ಬರ ಕೊಟ್ಟರೆ ಮರಕ್ಕೆ ಮರದ ಬೇರುಗಳಿಗೆ ಹಾನಿಯಾಗುತ್ತದೆ ಎನ್ನುತ್ತಾರೆ.
 • ಇದು ಶುದ್ಧ ತಪ್ಪು.
 • ಬೇಸಿಗೆಯ ಈ ಸಮಯ ನಮ್ಮ ಪ್ರಮುಖ ತೋಟಗಾರಿಕಾ ಬೆಳೆಗಳ ಆಹಾರ ಅವಶ್ಯಕತೆಯ ಸಮಯವಾಗಿದ್ದು, ಉತ್ತಮ ಫಸಲು ಮತ್ತು ಫಸಲಿನ ಉಳಿಯುವಿಕೆಗೆ ಅನುಕೂಲವಾಗುವಂತೆ ಸಾಕಷ್ಟು ಪೋಷಕಗಳನ್ನು ಕೊಡುತ್ತಲೇ ಇರಬೇಕು.

ಅಡಿಕೆ – ತೆಂಗು , ಕಾಫೀ ಮುಂತಾದ ಬೆಳೆಗಳ ಮೇಲೊಮ್ಮೆ ದೃಷ್ಟಿ ಹರಿಸೋಣ. ಈ ಸಮಯದಲ್ಲಿ ಅಡಿಕೆ ಮರಗಳಲ್ಲಿ ಒಂದೆಡೆ ಬಲಿಯುತ್ತಿರುವ ಮಿಡಿಗಳು ಇರುತ್ತವೆ. ಇನ್ನೊಂದೆಡೆ ಹೊಸ ಹೊಸ ಹೂ ಗೊಂಚಲು ಬರುತ್ತಲೇ ಇರುತ್ತದೆ.  ತೆಂಗಿನಲ್ಲೂ ಹಾಗೆಯೇ. ಎಲೆ ಮಿಡಿಗಳೂ, ಬಲಿಯುತ್ತಿರುವ ಕಾಯಿಗಳೂ ಇರುತ್ತವೆ. ಇವೆಲ್ಲಾ ನೀರಿನ ಜೊತೆಗೆ ಪೋಷಕಗಳನ್ನೂ ಬಯಸುತ್ತವೆ.  ಕಾಫಿಯಲ್ಲಿ ಬೇಸಿಗೆಯ ಸಮಯದಲ್ಲಿ ಮಿಡಿ ಕಾಯಿಗಳು ಇರುತ್ತವೆ. ಈ ಸಮಯದಲ್ಲಿ  ಎಷ್ಟು ಆಹಾರ ಇದ್ದರೂ ಸಸ್ಯಕ್ಕೆ ಬೇಕಾಗುತ್ತದೆ. ಉಪಯೋಗ ಆಗುವ ಆಹಾರದ ಪ್ರಮಾಣ ಹೆಚ್ಚಾಗಿರುವ ಕಾರಣ ಅಲ್ಲಿ ಸರಬರಾಜು ಇಲ್ಲವಾದರೆ ಸಸ್ಯಗಳಲ್ಲಿ ಮಿಡಿ ಉದುರುವಿಕೆ, ಹೂ ಗೊಂಚಲು ಉದುರುವಿಕೆ ಹೆಚ್ಚಾಗುತ್ತದೆ.

summer manured arecanut palm- ಬೇಸಿಗೆಯಲ್ಲಿ ಗೊಬ್ಬರ ಕೊಟ್ಟ ಆಡಿಕೆ ಫಸಲು
ಬೇಸಿಗೆಯಲ್ಲಿ ಗೊಬ್ಬರ ಕೊಟ್ಟ ಆಡಿಕೆ ಫಸಲು

ಗೊಬ್ಬರ ಮತ್ತು  ಸಸ್ಯ ಶರೀರ ಮತ್ತು ಪೋಷಕ:

 • ಸಸ್ಯಗಳು ಹೆಚ್ಚಾಗಿ ಬೇಸಿಗೆಯ ಸಮಯದಲ್ಲಿ ಹೆಚ್ಚು ಹೆಚ್ಚು ಬೇರುಗಳನ್ನು ಉತ್ಪಾದಿಸುತ್ತವೆ.
 • ಕಾರಣ ಬೇರಿನ ಉತ್ಪಾದನೆಗೆ ಮಣ್ಣಿನಲ್ಲಿ ಬಿಸಿ ಇರಬೇಕು. ಬಿಸಿ ಮತ್ತು ತೇವಾಂಶ ಎರಡೂ ಸೇರಿದಾಗ ಬೇರಿನ ಉತ್ಪಾದನೆಗೆ ಅನುಕೂಲವಾಗುತ್ತದೆ.
 • ಬರೇ ಬೇರು ಬೆಳೆದರೆ ಪ್ರಯೋಜನ ಇಲ್ಲ. ಅವು ಆಹಾರ ದೊರೆತಾಗ ಮಾತ್ರ ಹೆಚ್ಚು ಚಟುವಟಿಕೆಯಲ್ಲಿರುತ್ತವೆ.
 • ಆ ಕಾರಣದಿಂದ ಬೇರಿನ ಬೆಳೆವಣಿಗೆಯನ್ನು ಉತ್ತೇಜಿಸಲು ಪೋಷಕಗಳನ್ನು ಕೊಡಲೇ ಬೇಕಾಗುತ್ತದೆ.
 • ಪೋಷಕಗಳನ್ನು ಪೂರೈಕೆ  ಮಾಡುತ್ತಿದ್ದರೆ ಬೇರಿನ ಮೂಲಕ ಆಹಾರವು ಸಸ್ಯಗಳಿಗೆ  ಲಭ್ಯವಾಗಿ ಫಸಲಿಗೆ ಅನುಕೂಲವಾಗುತ್ತದೆ.
 • ಫಸಲು ಅಪಕ್ವವಾಗಿ ಉದುರುವಿಕೆ, ಕಾಯಿಯ ಬೆಳವಣಿಗೆ ನಿರಾತಂಕವಾಗಿ ನಡೆಯುತ್ತದೆ.

ಪ್ರಯೋಜನ:

 • ಧೀರ್ಘಾವಧಿ ಬೆಳೆಗಳಾದ ಅಡಿಕೆ, ತೆಂಗು, ಕಾಫಿ, ಕೊಕ್ಕೋ ಯಾವುದೇ ಬೆಳೆಗೂ  ಬೇಸಿಗೆಯಲ್ಲಿ ಪೋಷಕಗಳನ್ನು ಪೂರೈಕೆ  ಮಾಡಿದಾಗ ಸಸ್ಯಗಳು ಹಚ್ಚ ಹಸುರಾಗಿರುತ್ತವೆ.
 • ಎಲೆಗಳು ಹಚ್ಚ ಹಸುರಾಗಿದ್ದರೆ ಅವು ಅಧಿಕ ಪ್ರಮಾಣದಲ್ಲಿ  ದ್ಯುತಿ ಸಂಸ್ಲೇಶಣ ಕ್ರಿಯೆ ನಡೆಸಿ ಉತ್ತಮವಾಗಿ ಬೆಳೆಯುತ್ತವೆ.
 • ಫಸಲು ಹೆಚ್ಚಳವಾಗುತ್ತದೆ. ಯಾವುದೇ ಹೂವಿನ ಕಾಯಿ ಕಚ್ಚಿ ಮಿಡಿ ಬೆಳೆಯಲು ಪೋಷಕಗಳು ಬೇಕು.
 • ಅದು ಈ ಸಮಯದಲ್ಲಿ ದೊರೆತರೆ ಅದರ ಫಲಿತಾಂಶವೇ ಬೇರೆ ಇರುತ್ತದೆ.
 • ಮಳೆಗಾಲ ಪ್ರಾರಂಭವಾಗುವಾಗ ಸಸ್ಯಗಳು ವಾತಾವರಣದಿಂದ ಪೊಷಕಗಳನ್ನು ಪಡೆಯುತ್ತವೆ.
 • ಆಗ ಈ ಹಿಂದೆ ಪೋಶಕಗಳು ಅದಕ್ಕೆ ಲಭ್ಯವಾಗಿದ್ದರೆ ಹಸಿವು ಇತಿಮಿತಿಯಲ್ಲಿದ್ದು, ಮಿಡಿ ಉದುರುವಿಕೆ, ರೋಗ , ಕೀಟ ಮುಂತಾದ ಸಮಸ್ಯೆ ಕಡಿಮೆಯಾಗುತ್ತದೆ.
 • ಒಟ್ಟಿನಲ್ಲಿ ಮರಗಳಿಗೆ ಆರೋಗ್ಯ ಚೆನ್ನಾಗಿರುತ್ತದೆ. ರೋಗ, ಕೀಟ ನಿರೋಧಕ  ಶಕ್ತಿ ಬರುತ್ತದೆ.  ಇಳುವರಿ 20-30 % ಹೆಚ್ಚಳವಾಗುತ್ತದೆ.

ಹೇಗೆ ಪೋಷಕಗಳನ್ನು ಕೊಡಬೇಕು:

 • ಬೇಸಿಗೆಯಲ್ಲಿ ಮಳೆಗಾಲದಲ್ಲಿ ಕೊಡುವ ವಿಧಾನದಲ್ಲಿ ಅಧಿಕ ಸಾಂದ್ರತೆಯಲ್ಲಿ ಪೋಷಕಗಳನ್ನು ಕೊಡಬಾರದು.
 • ಬೇಸಿಗೆಯಲ್ಲಿ ಎಷ್ಟು ನೀರಾವರಿ ಇದ್ದರೂ ಎಲ್ಲಾ ಭಾಗದ ಬೇರು ವಲಯಗಳೂ ಕ್ರಿಯಾತ್ಮಕವಾಗಿರುವುದಿಲ್ಲ.
 • ಆದ ಕಾರಣ  ಎಲ್ಲಿ ತೇವಾಂಶ ಉತ್ತಮವಾಗಿರುತ್ತದೆಯೋ ಅಲ್ಲಿ ಮಾತ್ರ ನೀಡಬೇಕು.
 • ಇದಕ್ಕೆ  ಸರಳ ಉಪಾಯ ನೀರಿನಲ್ಲಿ ಪೋಷಕಗಳನ್ನು ಕರಗಿಸಿ ಕಡಿಮೆ  ಸಾಂದ್ರತೆಯಲ್ಲಿ ತೇವಾಂಶ ಇರುವ ಜಾಗದಲ್ಲಿ ಎರೆಯುವುದು.
 • ಹನಿ ನೀರಾವರಿ ತೋಟಗಳಾದಲ್ಲಿ ಹನಿ ನೀರು ತೊಟ್ಟಿಕ್ಕುವ ಸ್ಥಳದಲ್ಲೂ , ಸ್ಪ್ರಿಂಕ್ಲರ್ ನೀರಾವರಿಯಾದಲ್ಲಿ ತೇವಾಂಶ ಇರುವ ಕಡೆಯಲ್ಲಿ ಈ ದ್ರಾವಣವನ್ನು ಎರೆಯಬೇಕು.
 •   ಯಾವಾಗಲೂ ಮರದ ಬುಡ ಭಾಗಕ್ಕೆ ಪೋಷಕಗಳನ್ನು ಹಾಕಬಾರದು.
 • ಬುಡದಿಂದ 2 ಅಡಿ ದೂರದಲ್ಲಿ ಹಾಕಿದರೆ ಅಲ್ಲಿ ಹೀರಿಕೊಳ್ಳುವ ಬೇರುಗಳು ಇರುತ್ತದೆ.
 • ಅದರ ಫಲಿತಾಂಶ ಹೆಚ್ಚು ಇರುತ್ತದೆ. ಹನಿ ನೀರಾವರಿಯಾದಲ್ಲಿ ನೀರಿನೊಂದಿಗೆ ಪೋಷಕಗಳನ್ನು ಕೊಡುವುದು ಉತ್ತಮ.

ಹೂ ಬಿಟ್ಟು ಕಾಯಿ ಕಚ್ಚುವ ಸಮಯದಲ್ಲಿ ಸಾರಜನಕ ಮತ್ತು ಪೊಟ್ಯಾಶಿಯಂ ಗೊಬ್ಬರದ ಅವಶ್ಯಕತೆ  ಹೆಚ್ಚು ಇರುತ್ತದೆ.  ಜೊತೆಗೆ ಸೂಕ್ಷ್ಮ ಪೋಷಕಾಂಶಗಳೂ ಬೇಕು. ರಂಜಕ ಗೊಬ್ಬರವನ್ನು ಹೂ ಹೊಂಚಲು ಮೂಡುವ ಪ್ರಾರಂಭದ ದಿನಗಳಲ್ಲಿ ( ನವೆಂಬರ್ –ಡಿಸೆಂಬರ್- ಜನವರಿ) ಕೊಟ್ಟು ಮುಗಿಸಬೇಕು.

ಬಹಳಷ್ಟು ಯಶಸ್ವೀ ಕೃಷಿಕರ ಹೊಲದಲ್ಲಿ ಹೆಚ್ಚು ಫಸಲು ಬರಲು ಮುಖ್ಯ ಕಾರಣ ನಿರಂತರ ಪೋಷಕಗಳ ಪೂರೈಕೆ. ಸಾವಯವ ಮೂಲದ ಪೋಷಕವಾಗಿದ್ದರೆ ನಿಧಾನವಾಗಿ ಬಿಡುಗಡೆ ಮಾಡುವಂತದ್ದನ್ನೂ , ರಾಸಾಯನಿಕವಾದರೆ ಹೆಚ್ಚು ಹೆಚ್ಚು ವಿಭಜಿತ ಕಂತುಗಳಲ್ಲಿ ಪೋಷಕಗಳನ್ನು ಕೊಡಬೇಕು. 

End of the article_____________________
search tags: Areca nut manure summer manuring  areca

Leave a Reply

Your email address will not be published. Required fields are marked *

error: Content is protected !!