ಅಡಿಕೆ ತೋಟದಲ್ಲಿ ಇರಲೇಬೇಕಾದ  ಮೂಲಭೂತ ಅವಶ್ಯಕತೆಗಳು. 

ಅಡಿಕೆ ತೋಟದಲ್ಲಿ ಇರಲೇಬೇಕಾದ ಮೂಲಭೂತ ಅವಶ್ಯಕತೆಗಳು

ಅಡಿಕೆ ತೋಟಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುವ ಪ್ರಮಾಣ ನೋಡಿದರೆ ಬಹುಷಃ ಜನ ಅನ್ನಕ್ಕಿಂತ ಹೆಚ್ಚು ಅಡಿಕೆ ತಿನ್ನುತ್ತಾರೆಯೋ ಅನ್ನಿಸುತ್ತದೆ. ಆದರೆ ಅಡಿಕೆ ತೋಟ ಹೆಚ್ಚಾದಷ್ಟು ಉತ್ಪಾದನೆ ಹೆಚ್ಚಾಗುವುದಿಲ್ಲ. ಕಾರಣ ಬಹುತೇಕ ಅಡಿಕೆ ತೋಟ ಮಾಡುವವರು ಮೂಲಭೂತ ಅವಶ್ಯಕತೆಯನ್ನು ಮಾಡಿಕೊಳ್ಳದೆ ತೋಟ ಮಾಡಿರುತ್ತಾರೆ. ಇದು ಬರೇ ಸಾವಿರಾರು ಮರಗಳ ತೋಟ  ಅಷ್ಟೇ.

ಅಡಿಕೆ ಮರಗಳು  ಆರೋಗ್ಯವಾಗಿರಬೇಕಾದರೆ ಅದನ್ನು ಬೆಳೆಸಿದ ಜಾಗ ಸರಿ ಇರಬೇಕು. ಆಗ  ಮಾತ್ರ ನಿರ್ದಿಷ್ಟ  ವರ್ಷಕ್ಕೆ ಫಲಕೊಟ್ಟು ಇಳುವರಿ ಏಕಪ್ರಕಾರ ನೀಡುತ್ತಾ ಇರುತ್ತದೆ. ಮರಗಳ ಆರೋಗ್ಯ ಮತ್ತು ಇಳುವರಿಗೆ ಅಗತ್ಯವಾಗಿ ಬೇಕಾಗುವುದು ಬಸಿ ವ್ಯವಸ್ಥೆ ಮತ್ತು ದಕ್ಷಿಣ ಮತ್ತು ನೈರುತ್ಯ ದಿಕ್ಕಿನ ಭಾಗದಲ್ಲಿ  ಬಿಸಿಲಿಗೆ ನಿರ್ಭಂಧ. ಇದನ್ನು ಮಾಡಿಕೊಂಡರೆ ಅಡಿಕೆ ಕೃಷಿಯಲ್ಲಿ ಪಾಸ್ ಆದಂತೆ.

ಸಸ್ಯಗಳಿಗೆ ನೀರು ಬೇಕು. ಅದು ಎಷ್ಟು ಬೇಕು ಅಷ್ಟು ಮಾತ್ರ ಇದ್ದರೆ ಅದರ ಆರೋಗ್ಯಕ್ಕೆ ಉತ್ತಮ. ಮಳೆ ಹೆಚ್ಚಾಗಿರುವ ಸಮಯದಲ್ಲಿ ನೀರು ತಂಗುವುದರಿಂದ ಸಸ್ಯಗಳ ಆಹಾರ ಸಂಗ್ರಾಹಕ ಬೇರಿಗೆ ಹಾನಿಯಾಗುತ್ತದೆ. ಇದರಿಂದ ಮರದ ಆರೋಗ್ಯ ಹಾಳಾಗುತ್ತದೆ.  ಮಣ್ಣನ್ನು ಮೊದಲು ಅರಿತುಕೊಂಡು  ಅಡಿಕೆ ತೋಟ ಮಾಡಬೇಕು. ಇತ್ತೀಚೆಗೆ ಅಂಟು ಮಣ್ಣಿನ ಭೂಮಿಯಲ್ಲೂ ಅಡಿಕೆ ತೋಟಗಳು  ಹೆಚ್ಚುತ್ತಿದ್ದು, ಇಲ್ಲೆಲ್ಲಾ ಅಡಿಕೆ ತೋಟ ಎಂದರೆ ಸಮಸ್ಯೆಗಳ ಗೂಡು ಆಗಿರುತ್ತದೆ. ಇದಕ್ಕೆಲ್ಲಾ ಪ್ರಮುಖ ಪರಿಹಾರ ಪ್ರತೀ ಗಿಡದ ಬುಡದಲ್ಲೂ ನೀರು ನಿಲ್ಲದಂತೆ ಮಾಡುವ ಬಸಿಗಾಲುವೆ.

ಬಸಿಗಾಲುವೆ ಇಲ್ಲದಿದ್ದರೆ ಏನಾಗುತ್ತದೆ?

  • ನಿಮ್ಮ ತೋಟದಲ್ಲಿ ಅಡಿಕೆ ಮರಗಳು ಎಷ್ಟು ಪೋಷಕಾಂಶ ಕೊಟ್ಟರೂ ಸ್ಪಂದಿಸದೇ ವರ್ಷದಿಂದ ವರ್ಷ ಇಳುವರಿ ಕಡಿಮೆಯಾಗುತ್ತದೆ.
  • ಸಸಿ/ ಮರಗಳ ಶಿರ ಭಾಗ ಸಪುರವಾಗುತ್ತಾ ಬರುತ್ತದೆ.
  •  ಮರದ ಬುಡದಲ್ಲಿ ನೀರು ತುಂಬಾ ಸಮಯದ ತನಕ ನಿಂತುಕೊಳ್ಳುತ್ತದೆ.
  • ಬೇರುಗಳು ಇದ್ದರೂ  ಅದರಲ್ಲಿ ಆಹಾರ ಸಂಗ್ರಹಿಸಿಕೊಡುವ ಕವಲು ಬೇರುಗಳು ಕಡಿಮೆಯಾಗುತ್ತದೆ.
  • ಮರ- ಗಿಡದ ಬುಡದಲ್ಲಿ ಮೇಲಿಂದ ಮೇಲೆ ಮತ್ತೆ ಮತ್ತೆ ಬೇರು ಮೂಡುತ್ತಾ ಬದುಕಿಗಾಗಿ ಅದು ಹೋರಟ ಮಾಡುತ್ತಾ ಇರುತ್ತದೆ.
  •  ಅಡಿಕೆ ಸಸಿಯ ಬುಡದ ಮಣ್ಣಿನಲ್ಲಿ ನೀರು ಹರಿದು ಹೋಗುತ್ತಿದ್ದರೂ ತೊಂದರೆ ಇಲ್ಲ. ಆದರೆ ನೀರು ಸ್ಥಬ್ಧವಾಗಿ ನಿಂತಿರಬಾರದು.
  • ಮುಷ್ಟಿ ಮಣ್ಣನ್ನು ಕೈಯಲ್ಲಿ ಅದುಮಿ ಹಿಡಿದಾಗ ಸ್ವಲ್ಪ ನೀರು ತೊಟ್ಟಿಕ್ಕಿದರೂ ಅದು ಅಗತ್ಯಕ್ಕಿಂತ ಹೆಚ್ಚಿನ ತೇವಾಂಶ ಎಂದರ್ಥ.
  • ಮರಗಳ ಕಾಂಡಕ್ಕೆ ವಾತಾವರಣದ ಬಿಸಿಯನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ.  ಪಶ್ಚಿಮ – ನೈರುತ್ಯ ದಿಕ್ಕಿನ ಭಾಗ ಒಣಗುತ್ತಾ ಬರುತ್ತದೆ.
  • ಎಲೆ ಹಳದಿಯಾಗುವುದು ಬಸಿ ವ್ಯವಸ್ಥೆ ಇಲ್ಲದ  ಕಾರಣದಿಂದ.
  • ಬಸಿಗಾಲುವೆ ಇಲ್ಲದ ತೋಟದ ಮರಗಳಿಗೆ ಆಯುಷ್ಯ ಕಡಿಮೆ ಇರುತ್ತದೆ.  
•	ಸಸಿಯನ್ನು ನೆಟ್ಟ ಆಳಕ್ಕನುಗುಣವಾಗಿ ಬೇರಿನಿಂದ ಕನಿಷ್ಟ ½ ಅಡಿಯಷ್ಟಾದರೂ  ಹೆಚ್ಚಿನ ಆಳಕ್ಕೆ ಬಸಿಗಾಲುವೆ ಬೇಕು.

ನಿಮಗೆ ಇದು ತಿಳಿದಿರಲಿ:

  • ಬೇರುಗಳು ಪಸರಿಸಿರುವ ಜಾಗದಲ್ಲಿ ಅದರಲ್ಲೂ ಅಡಿಕೆ- ತೆಂಗಿನ ತೋಟದಲ್ಲಿ ನೀರು ಬಸಿಯದೇ ಇದ್ದರೆ ಬೇರುಗಳು ಕೊಳೆಯಲಾರಂಭಿಸುತ್ತದೆ.
  •  ಬೇರುಗಳಿಗೆ ಹಾನಿಯಾದರೆ  ರೋಗ ಬರುತ್ತದೆ.
  •  ಪ್ರತೀಯೊಂದು ಸಸ್ಯದ ಬೇರುಗಳಲ್ಲೂ ಶ್ವಾಸೋಚ್ವಾಸದ ಅಂಗಗಳಿರುತ್ತದೆ.
  • ಅದರ ಸಮರ್ಪಕ ಕಾರ್ಯ ನಿರ್ವಹಣೆಗೆ ಸೂಕ್ತ ವಾತಾವರಣ  ಇರುವುದು ಅತೀ ಅಗತ್ಯ.
  • ತಾಳೆ ಜಾತಿಯ ಮರಗಳ ಬೇರುಗಳು ನೆಲದ ಮೇಲು ಭಾಗದಲ್ಲಿ ಸಡಿಲ ಮಣ್ಣಿನಲ್ಲಿ  ಹಬ್ಬುವಂತದ್ದು.
  • ಇದು ಅತೀ ಸೂಕ್ಷ್ಮ ಬೇರುಗಳಾಗಿದ್ದು, ನೀರು ನಿಲ್ಲುವಿಕೆ ಮುಂತಾದ ಸನ್ನಿವೇಷಗಳು ಉಂಟಾದಾಗ ಅದರ ಕೆಲಸಕ್ಕೆ ಅಡ್ಡಿಯಾಗುತ್ತದೆ.

ಈ ಸನ್ನಿವೇಶ ಬೇರೆ ಬೇರೆ ರೋಗಕ್ಕೂ ಕಾರಣವಾಗುತ್ತದೆ. ಇತ್ತೀಚೆಗೆ ಅಡಿಕೆ ತೋಟಗಳಲ್ಲಿ ಬಸಿಗಾಲುವೆಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅಸಾಧ್ಯವಾಗುವ ಕಾರಣ ರೋಗಗಳು ಹೆಚ್ಚಾಗಿವೆ.ಹಳದಿ ಎಲೆ ರೋಗ ಎಂಬ ಮಹಾಮಾರಿ ಪ್ರವೇಶವಾದುದೇ ಇದೇ ಕಾರಣದಿಂದ.

ಬೇರಿಗೆ ತೊಂದರೆಯಾದರೆ ಏನಾಗುತ್ತದೆ?

  • ಬೇರುಗಳ ಮೇಲ್ಮೈಯಲ್ಲಿ ಸಣ್ಣ ಸಣ್ಣ ರಂದ್ರಗಳಿದ್ದು, ಅದರ ಮುಖಾಂತರ ಉಸಿರಾಟ ಕ್ರಿಯೆ  ನಡೆಯುತ್ತದೆ.
  • ಬೇರಿನ ಸುತ್ತ ನೀರು ನಿಂತಾದ ಮಣ್ಣಿನಲ್ಲಿರುವ ಲವಣಾಂಶಗಳು ನೀರಿನಲ್ಲಿ ಕರಗಿ ಒಂದು ರೀತಿಯ  ಪೊರೆಯನ್ನು ಬೇರುಗಳ ಮೇಲ್ಮೈ ಯಲ್ಲಿ ಉಂಟು ಮಾಡುತ್ತದೆ.
  • ಇದು ಉಸಿರಾಟ ಕ್ರಿಯೆಗೆ ಅಡ್ಡಿಯುಂಟು ಮಾಡಿ  ಜೊತೆಗೆ ಅದರ ಅಗತ್ಯ ನೀರಿನ ಹೀರುವಿಕೆಗೂ ಕೂಡಾ ಅಡ್ಡಿಯುಂಟಾಗುತ್ತದೆ.
  •  ಬೇರು ಕೊಳೆತ ಮಿತಿ ಮೀರಿದಾಗ ಬುಡ ಕೊಳೆತು ಮರ ಸಾಯುತ್ತದೆ.
  • ಅಡಿಕೆ ಮರವೂ ಒಂದು ತಾಳೆ ಜಾತಿಯ ಸಸ್ಯವೇ ಆಗಿದ್ದು, ಇದರ ಬೇರಿನ ತುದಿಯಲ್ಲಿ ಒಂದು ಟೋಪಿ ತರಹದ ರಚನೆ ಇರುತ್ತದೆ.
  •  ಇದರಲ್ಲಿರುವ ಜೀವ ಕೊಶಗಳು ವಿಭಜನೆಗೊಳ್ಳುವ ಕಾರಣವೇ ಹೊಸ ಕವಲು ಬೇರುಗಳು, ಮತ್ತು ಅದರ ಬೆಳವಣಿಗೆ ಉಂಟಾಗುವುದು.
  • ಈ ತುದಿ ಭಾಗ ನೀರು ನಿಂತಾಗ ಕೊಳೆಯುತ್ತದೆ. ಆದ ಉಳಿದೆಲ್ಲಾ ಬೇರುಗಳ ಬೆಳವಣಿಗೆ ಮೂಲದಲ್ಲೇ ಹತ್ತಿಕ್ಕಲ್ಪಡುತ್ತದೆ.
  • ಮಣ್ಣು ಮತ್ತು ಸ್ಥಳವನ್ನು ಹೊಂದಿಕೊಂಡು ಒಂದು ದಿನ ನೀರು ನಿಂತರೆ ಅಥವಾ ಅಗತ್ಯಕ್ಕಿಂತ ತೇವಾಂಶ ಹೆಚ್ಚಾದರೆ ಬೇರುಗಳಿಗೆ ಉಸಿರು ಕಟ್ಟಿದ ಸ್ಥಿತಿ ಉಂಟಾಗುತ್ತದೆ.
  • ಮಣ್ಣಿ ನ ರಸಸಾರ ವ್ಯತ್ಯಾಸವಾಗಿ ಆಮ್ಲೀಯವಾಗುತ್ತದೆ. ಕೊಳೆಯುವುದು ಪ್ರಾರಂಭವಾಗುತ್ತದೆ

 ಇದು ಸಾಮಾನ್ಯವಾಗಿ ಮಳೆಗಾಲದಲ್ಲಿ ಆಗುವುದು. ಇದೇ ಸಮಯದಲ್ಲಿ ಬೇರುಗಳ ಮೂಡುವಿಕೆ (initiation) ಮತ್ತು ಬೆಳವಣಿಗೆ ( Growth)ಹೆಚ್ಚು ಇರುವುದು. ಆದ ಕಾರಣ ಬೆಳವಣಿಗೆಯ  ಎಲ್ಲಾ ಪ್ರಕ್ರಿಯೆಗೆ ಅಡ್ಡಿ ಉಂಟಾಗುತ್ತದೆ.ನೀರು ನಿಂತು ಬೇರು ಕೊಳೆತರೆ ಮಳೆ ಕಡಿಮೆಯಾದಾಗ ಹೊಸ ಬೇರು ಬರುತ್ತದೆ.ಅದು ಮತ್ತೆ ಬೆಳೆದು ಆಹಾರ ಸಂಗ್ರಹಿಸಿ ಕೊಡಬೇಕು. ಆ ಸಮಯಕ್ಕೆ ಮತ್ತೆ ಮಳೆಗಾಲ ಬಂದು ಪುನಃ ಆ ಬೇರು ಕೊಳೆಯಲಾರಂಭಿಸುತ್ತದೆ. ಯಾವಾಗಲೂ ಕೊಳೆಯುತ್ತಾ ಇದ್ದರೆ ಅದರ ಬೆಳವಣಿಗೆಗೆ ಆವಕಾಶವೇ ಸಿಗುವುದಿಲ್ಲ. ಹಾಗಾಗಿ ಗಿಡ ಏಳಿಗೆ ಆಗಲು ಅವಕಾಶ ಸಿಗುವುದಿಲ್ಲ.

ಬಸಿಗಾಲುವೆ ಹೇಗೆ ಇರಬೇಕು:

ಇಕ್ಕೆಲಗಳಲ್ಲು  ಬಸಿಗಾಲುವೆ ಬೇಕು
  • ಅಡಿಕೆ / ತೆಂಗು ಮುಂತಾದ ಬೆಳೆಗಳ ಬೇರು ವಲಯ ಇರುವ ಸ್ಥಳದ ತನಕ ಅಗತ್ಯವಾಗ 60% ತೇವಾಂಶಕ್ಕಿಂತ ಹೆಚ್ಚಿನ ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು.
  • ಸಸಿಯನ್ನು ನೆಟ್ಟ ಆಳಕ್ಕನುಗುಣವಾಗಿ ಬೇರಿನಿಂದ ಕನಿಷ್ಟ ½ ಅಡಿಯಷ್ಟಾದರೂ  ಹೆಚ್ಚಿನ ಆಳಕ್ಕೆ ನೀರು ಸರಾಗವಾಗಿ ಹರಿದು ಹೋಗುವ ಕಾಲುವೆ ಇರಬೇಕು.
  • ಕಾಲುವೆಗಳು ಪ್ರಾರಂಭದಿಂದ ಕೊನೆ ತನಕ ಕನಿಷ್ಟ ½ ಅಡಿಯಷ್ಟಾದರೂ ಓಟ ( ಇಳಿಜಾರು) ಇರಬೇಕು.
  • ಮಳೆಗಾಲ ಪೂರ್ತಿ ನೀರಿನ ಹರಿವು ಇರುವ ತನಕ ಅದರಲ್ಲಿ ಕಸ ಕಡ್ಡಿ ಸಿಕ್ಕಿಕೊಳ್ಳಬಾರದು. ಮಣ್ಣು ಕುಸಿತವಾಗಿ ಬೀಳಬಾರದು.
  • ಈ ಸಮಸ್ಯೆಗೆ ಅಂತರ್ಗತ ಬಸಿಗಾಲುವೆ ಹೆಚ್ಚು ಸಹಕಾರಿ.
  • ಮಣ್ಣಿನಲ್ಲಿ ಎಷ್ಟೇ ಒರತೆ ( ನೀರು ಜಿನುಗುವಿಕೆ) ಇದ್ದರೂ ಸಹ ಅದು ಸರಾಗವಾಗಿ ಹೊರ ಹರಿದು ಹೋಗುವಂತಿರಬೇಕು.
  • ಪ್ರತೀ ಎರಡು ಸಾಲಿಗೆ ಒಂದರಂತೆ  ಪ್ರತೀ ಗಿಡದ ಬುಡದಲ್ಲಿ ನೀರು ಸ್ವಲ್ಪವೂ ನಿಲ್ಲದಂತೆ  ನೀರು ಹರಿಯಲು ಕಾಲುವೆಗಳು ಬೇಕು.

ನೀರು ನಿಲ್ಲದ ಸ್ಥಳ, ಖುಷ್ಕಿ ಎಂದು ಬಸಿಗಾಲುವೆ ಮಾಡದೆ ಇರಬಾರದು. ಇಲ್ಲಿ ಕಣ್ಣಿಗೆ ಕಾಣಿಸುವಂತೆ ನೀರು ಇಲ್ಲದಿದ್ದರೂ ಬೇರು ವಲಯದ ಮಣ್ಣು 60% ಕ್ಕಿಂತ ಹೆಚ್ಚಿನ ತೇವಾಂಶವನ್ನು ಹೊಂದಿರುತ್ತದೆ.  ಒಂದು ಭರ್ಚಿ ಯನ್ನು ನೆಲದ ಒಳಗೆ 2 ಅಡಿ ತನಕ  ಹಾಕಿ ನೋಡಿದರೆ ಅಲ್ಲಿಒದ್ದೆ (ಕಲಸಿ ಹಾಕಿದ ತರಹ) ಮಣ್ಣು ಇದ್ದರೆ ನೀರಿನ ವಿಷ  (Water toxicity) ಉಂಟಾಗಿದೆ ಎಂದರ್ಥ.

  • ಕವಲು ಬಸಿಗಾಲುವೆಗಳು ಮತ್ತು ಅವುಗಳೆಲ್ಲಾ ಒಟ್ಟಾಗಿ  ಹರಿಯುವ ಮುಖ್ಯ ಬಸಿಗಾಲುವೆಗಳೂ, ಮಳೆ ನೀರು ಮತ್ತು ಒರತೆಯ ನೀರನ್ನು ಸ್ವಲ್ಪವೂ ತಂಗದೆ ಹೊರ ಹರಿಸುವಂತೆ ಇರಬೇಕು.
ಈ ಪದ್ದತಿಯಿಂದ ಅನುಕೂಲವಾಗುತ್ತದೆ.
ಎರಡು ಸಾಲುಗಳ ಮಧ್ಯೆ ಮಣ್ಣು ಹಾಕುವ ಈ ಪದ್ದತಿಯಿಂದ ಅನುಕೂಲವಾಗುತ್ತದೆ.

ಫಲಿತಾಂಶ ಏನು:

  • ಸಸ್ಯದ ಬೇರುಗಳು ವಿಶಾಲವಾಗಿ ಹಬ್ಬಿ ಆರೋಗ್ಯ ಉತ್ತಮವಾಗಿರುತ್ತದೆ.
  • ಮಣ್ಣಿನಲ್ಲಿ ತೇವಾಂಶ ಹೆಚ್ಚಾದಾಗ ಎರೆಹುಳಗಳು ಮೇಲೆ ಬರುತ್ತವೆ. ಅಲ್ಲಿಯೂ ಜೌಗು ಸ್ಥಿತಿ ಇದ್ದರೆ ಅದು ಸಾಯುತ್ತದೆ. ಸೂಕ್ಷ್ಮಾಣು ಜೀವಿಗಳೂ ಇಂತಹ ಮಣ್ಣಿನಲ್ಲಿ ಬದುಕಲಾರವು.
  • ಮಣ್ಣಿನಲ್ಲಿರುವ ಮತ್ತು ಕೊಡುವ ಎಲ್ಲಾ ಪೋಷಕಾಂಶಗಳೂ ಸಮರ್ಪಕವಾಗಿ ಸಸ್ಯಗಳಿಗೆ ಬಳಕೆಯಗುತ್ತದೆ.
  • ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಬರುತ್ತದೆ.
  • ಪಶ್ಚಿಮ ದಿಕ್ಕಿನ ಬಿಸಿಲಿನ ಹೊಡೆತಕ್ಕೂ ಸಸ್ಯಗಳು ಬೇಗ ಹಾಳಾಗಲಾರವು.
  • ಬಸಿಗಾಲುವೆ ಇರುವ ಕಾಲುವೆಯ ಗೋಡೆಗಳಲ್ಲಿ ಬೇರುಗಳು ನಿಬಿಡವಾಗಿ ಹಬ್ಬಿರುತ್ತವೆ.
  •  ಅವುಗಳು ಶ್ವಾಸೋಚ್ವಾಸ  ಕ್ರಿಯೆಯನ್ನು ನಿರಾತಂಕವಾಗಿ ಮಾಡುತ್ತವೆ. ಇದು ಇಳುವರಿ ಹೆಚ್ಚಳಕ್ಕೂ ಸಹಕಾರಿ

ಇತ್ತೀಚೆಗೆ ಹೆಚ್ಚಿನ ಬೆಳೆಗಾರರು ಯಂತ್ರಗಳ ಮೂಲಕ ಕಾಲುವೆ ಮಾಡಿ ಅಡಿಕೆ ಗಿಡ ನೆಡುತ್ತಾರೆ. ಈ ಪದ್ದತಿಯಲ್ಲಿ ನೀರಿನ ಸರಿಯಾದ ಬಸಿಯುವಿಕೆಗೆ ತುಂಬಾ ಅಡ್ಡಿ ಉಂಟಾಗುತ್ತದೆ. ಸಸಿ ಏಳಿಗೆ ಆಗುವುದಿಲ್ಲ. ಇದಕ್ಕಿಂತ ಹೊಂಡ ಮಾಡಿ ನೆಡುವುದು ಉತ್ತಮ. ಹೆಚ್ಚು ಆಳದ ಹೊಂಡ ಬೇಕಾಗಿಲ್ಲ. ಅಗಲ ಮಾತ್ರ 3 ಅಡಿಯಷ್ಟು ಸುತ್ತಳತೆ ಇದ್ದರೆ ಒಳ್ಳೆಯದು.

ಎಷ್ಟೋ ಬೆಳೆ ಸೂಕ್ಷ್ಮಗಳು ನಮಗೆ  ಗೊತ್ತಿದ್ದರೂ ಸಹ ನಾವು ಆದನ್ನು ನಿರ್ಲಕ್ಷ ಮಾಡುತ್ತೇವೆ. ಇದರಲ್ಲಿ ಒಂದು ಬಸಿಗಾಲುವೆ. ಬಸಿಗಾಲುವೆ ಮಾಡದೆ ಯಾವ ಕಾರಣಕ್ಕೂ ತೋಟ  ಮಾಡಬೇಡಿ. ಅದು ಪೈಲ್.

Leave a Reply

Your email address will not be published. Required fields are marked *

error: Content is protected !!