ಚಾಲಿ ದರ ಸ್ವಲ್ಪ ಇಳಿಕೆ ಸಾಧ್ಯತೆ- ಕೆಂಪಡಿಕೆ ಮೆಲ್ಲಮೆಲ್ಲನೆ ಚೇತರಿಕೆ.

by | Aug 2, 2022 | Horticulture Crops (ತೋಟದ ಬೆಳೆಗಳು), Arecanut (ಆಡಿಕೆ) | 0 comments

ಚಾಲಿ ದರ ಸ್ವಲ್ಪ ಇಳಿಕೆ ಮಾಡಿಯಾದರೂ  ಬೆಳೆಗಾರರಿಂದ ಅಡಿಕೆ ಮಾರುಕಟ್ಟೆಗೆ ಬಿಡುವಂತೆ ಮಾಡುವ ಸಾದ್ಯತೆ ಇದೆ.   ಕರಾವಳಿಯಲ್ಲಿ ಅಡಿಕೆ ವ್ಯಾಪಾರಿಗಳಿಗೆ ಅಡಿಕೆ ಸಿಗುವುದಿಲ್ಲ ಎನ್ನುತ್ತಾರೆ. ಸಾಂಸ್ಥಿಕ  ಖರೀದಿದರಾರು ದಿನದ ಹೆಚ್ಚಿನ ಹೊತ್ತು ಸುಮ್ಮನೆ  ಕುಳಿತು  ಲೆಕ್ಕಪತ್ರ ನೋಡುವುದು, ಬೇಜಾರಾದರೆ ಮೊಬೈಲ್ ಸುದ್ದಿ ಓದುವುದು ಮಾಡುತ್ತಾ ಸಮಯಕಳೆಯುವ ಸ್ಥಿತಿ ಉಂಟಾಗಿದೆ. ಬೆಳೆಗಾರರು 500 ಆಗಿಯೇ ಆಗುತ್ತದೆ ಎಂದು  ಅಡಿಕೆ ಒಳಗಿಟ್ಟಿದ್ದಾರೆ. ಇನ್ನು ವ್ಯಾಪಾರಿ ತಂತ್ರಗಾರಿಕೆಯಿಂದ ಅಡಿಕೆ ಹೊರ ಬರುವಂತೆ ಮಾಡಬೇಕೇ ಹೊರತು ಬೇರೆ ದಾರಿ ಇಲ್ಲ. ವ್ಯಾಪಾರಿ ತಂತ್ರ ಅಡಿಕೆಯ ಕುರಿತಾಗಿ ಏನಾದರೂ ಸುದ್ದಿ ಹಬ್ಬಿಸುವುದು ಮತ್ತು ಸ್ವಲ್ಪ ದರ ಇಳಿಕೆ ಮಾಡುವುದು. ಈ ಸನ್ನಿವೇಶದಲ್ಲಿ ಮಾತ್ರ ಬೆಳೆಗಾರರು ಅಡಿಕೆ ಹೊರ ಬಿಡುತ್ತಾರೆ. ಆದರೆ ಕೆಂಪಡಿಕೆಯ ದರ ಮಾತ್ರ ಇನ್ನು ಕೆಳಕ್ಕೆ ಇಳಿಯಲಾರದು. ಹಸಿ ಅಡಿಕೆ ಖರೀದಿ ದರ ಮತ್ತು ಪರಿಸ್ಥಿತಿ ಕೆಂಪಡಿಕೆ ದರ ಮೆಲ್ಲಮೆಲ್ಲನೆ  ಚೇತರಿಸುವ ಸೂಚನೆ ಕಾಣುತ್ತಿದೆ.

ಅಡಿಕೆ ಇರಲಿ ಇನ್ಯಾವುದೇ ಕೃಷಿ ಉತ್ಪನ್ನವಿರಲಿ, ದರ ಏರುವ ಸಮಯದಲ್ಲಿ ಯಾವ ಬೆಳೆಗಾರನೂ ವಸ್ತುವನ್ನು ಬಿಡುವುದಿಲ್ಲ. ಸ್ವಲ್ಪ ಕಾದು ನೋಡುತ್ತಾರೆ.  ತುಸು ಹೆಚ್ಚಿನ ದರ  ಸಿಕ್ಕರೆ ಸಿಗಲಿ ಎಂದು  ಮಾರಾಟ ಮುಂದೂಡುತ್ತಾರೆ. ದರದ ಏರಿಕೆಯ ತುದಿ ಯಾವುದು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಹಾಗಾಗಿ ದರ ಏರಿಕೆಯನ್ನೇ ನಿರೀಕ್ಷಿಸುತ್ತಿರುತ್ತಾರೆ. ಅದಕ್ಕನುಗುಣವಾಗಿ ಕೆಲವು ಸುದ್ದಿಗಳು ಆಸೆಯನ್ನು ಹುಟ್ಟು ಹಾಕುತ್ತವೆ. ಈಗ ಅದೇ ಆಗಿದೆ. ಹಳೆ ಅಡಿಕೆ ಈ ಪರಿ ಏರಬೇಕಾದರೆ ಹೊಸತು ಏರಿಕೆಯಾಗಲೇಬೇಕು ಎಂದು ಬೆಳೆಗಾರರು ಮಾರಾಟವನ್ನೇ ಮಾಡುತ್ತಿಲ್ಲ.  ವ್ಯವಹಾರ ನಡೆಯುತ್ತಿದ್ದರೆ ಅದರ ಚಲನೆಯೇ ಬೇರೆ. ವ್ಯವಹಾರ ಕುಂಠಿತವಾದರೆ ಅದಕ್ಕೆ ಬೇಕಾದ ತಂತ್ರಗಾರಿಕೆಯನ್ನು  ವ್ಯಾಪಾರಿ ವರ್ಗವೂ ಮಾಡುತ್ತದೆ. ನಮ್ಮ ರೈತರು ದರ ಇಳಿಕೆಯಾಗುತ್ತದೆ ಎಂಬ ಸುದ್ದಿ ಬಂದರೆ ತಕ್ಷಣ ಮಾರಾಟಕ್ಕೆ ಮುಂದಾಗುತ್ತಾರೆ. ಹಾಗಾಗಿ ಈಗ ವ್ಯಾಪಾರಿಗಳು ತಾತ್ಕಾಲಿಕವಾಗಿಯಾದರೂ ದರ ಇಳಿಸುವ ತಂತ್ರವನ್ನು ಮಾಡಲಿದ್ದಾರೆ. ಈಗಾಗಲೇ ಸುಳ್ಯ, ಬೆಳ್ಳಾರೆಗಳಲ್ಲಿ ಇದು ಪ್ರಾರಂಭವಾಗಿದ್ದು, ಉಳಿದೆಡೆಯೂ ದರ ಇಳಿಕೆಯಾಗಬಹುದು. ಇದು ಒಂದೆರಡು ವಾರದ ತನಕ ಮುಂದುವರಿಯಲಿದ್ದು, ನಂತರ ಸಹಜ ಸ್ಥಿತಿಗೆ ಬರಲಿದೆ.ಇನ್ನೂ ಮಾರುಕಟ್ಟೆಗೆ ಬರುವ ಅಡಿಕೆ  ಗುಣಮಟ್ಟ ರಹಿತವಾಗಿದ್ದು, ಅದನ್ನಾದರೂ ಖಾಲಿ ಮಾಡಿಸಲು ದರ ಇಳಿಕೆ ಮಾಡುವ ಸಾಧ್ಯತೆ ಇದೆ ಎಂಬುದಾಗಿ ಹೇಳುತ್ತಿದ್ದಾರೆ.

ಹಾಳಾದ ಅಡಿಕೆಗೆ ಬೇಡಿಕೆ ಇಲ್ಲವಂತೆ:

 • ಕರಾವಳಿಯ ಅಡಿಕೆ ಯಾವಾಗಲೂ ಉತ್ತಮ ಗುಣಮಟ್ಟದಲ್ಲಿ ಇರುತ್ತದೆ ಎಂಬ ಕಾರಣಕ್ಕೆ ಉಳಿದೆಡೆಯ ಚಾಲಿಗಿಂತ ಹೆಚ್ಚಿನ ದರ ಇರುತ್ತದೆ.
 • ಈ ವರ್ಷದ ಹವಾಮಾನ ವ್ಯತ್ಯಯದಿಂದ 50% ಗೂ ಹೆಚ್ಚು  ಅಡಿಕೆ ಸಂಸ್ಕರಣೆ ಸರಿಯಾಗದೆ ಹಾಳಾಗಿದೆ.
 • ಬಹುತೇಕ ಅಡಿಕೆ ಒಳಗೆ ಶಿಲೀಂದ್ರ ಬೆಳೆದಿದೆ.
 • ಆದನ್ನು ಕಚ್ಚಾ ಚಾಲಿಯ ಬಳಕೆಗೆ ಉಪಯೋಗಿಸಲು ಬರುವುದಿಲ್ಲ.
 • ಇದೆಲ್ಲಾವೂ ಗುಟ್ಕಾ ತಯಾರಿಕೆಗೇ ಹೋಗಬೇಕು ಹಾಗಾಗಿ ಉಳಿದೆಡೆಯ ಚಾಲಿಗಿಂತ ಸ್ವಲ್ಪ ಹೆಚ್ಚಿನ ದರ ಇದೆ.
 • ಒಂದು ವೇಳೆ ಪ್ರತೀ ವರ್ಷದಂತೆ ಈಗ ಉತ್ತಮ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರಲು ಪ್ರಾರಂಭವಾಗಿದ್ದರೆ, ಹಳೆ ಅಡಿಕೆ ಮತ್ತು ಹೊಸ ಅಡಿಕೆಗೆ ಭಾರೀ ದರ ವ್ಯತ್ಯಾಸ ಇರುತ್ತಿರಲಿಲ್ಲ ಎನ್ನುತ್ತಾರೆ ಅಡಿಕೆ ವ್ಯಾಪಾರಿಗಳೊಬ್ಬರು.
 • ಚಾಲಿ ಅಡಿಕೆಗೆ ಬೇಡಿಕೆ ಇದೆ. ಆದರೆ ಗುಣಮಟ್ಟದ ಚಾಲಿ ಬೇಕು.
 • ಉತ್ತರ ಭಾರತದ ವ್ಯಾಪಾರಿಗಳು “ಅಚ್ಚಾ ಸುಪಾರಿ” ಬೇಕು ಎನ್ನುತ್ತಾರಂತೆ.
 • ಈಗ ಹಳತು ಮಾತ್ರ ಒಳ್ಳೆಯದಿರುವ ಕಾರಣ ಅದಕ್ಕೆ ಬೆಲೆ ಬಂದಿದೆಯಂತೆ.
 • ಗುಣಮಟ್ಟದಲ್ಲಿ ನಮ್ಮ ಅಡಿಕೆಗಿಂತ ಆಮದು ಆಗುವ ಅಡಿಕೆ ಚೆನ್ನಾಗಿದೆ ಎಂಬುದಾಗಿ ಕೆಲವು ವರ್ತಕರು ಹೇಳುತ್ತಾರೆ.
 • ಆಮದು ಅಡಿಕೆ ಮಾರುಕಟ್ಟೆಯಲ್ಲಿ ಇದೆ ಸಹ.
ಕೆಂಪಡಿಕೆ ಸ್ವಲ್ಪ ಏರಿದೆ:

ಕೆಂಪಡಿಕೆ ಸ್ವಲ್ಪ ಏರಿದೆ:

 • ಕಳೆದ ವಾರದಿಂದ ಕೆಂಪಡಿಕೆ ದರ ಸಲ್ಪ ಏರಿಕೆಯಾಗುತ್ತಿದೆ.
 • ಸರಾಸರಿ 48,000 ಆಸುಪಾಸಿನಲ್ಲಿದ್ದ ದರ ಈಗ 50,000 ಸಮೀಪಕ್ಕೆ ಬಂದಿದೆ.
 • ಸರಾಸರಿ ದರಕ್ಕೂ ಗರಿಷ್ಟ ದರಕ್ಕೂ ಅಂತರ ತುಂಬಾ ಕಡಿಮೆಯಾಗಿದೆ.
 • ಜೊತೆಗೆ ಹಸಿ ಅಡಿಕೆ ಖರೀದಿ ದರ 7,200-7300 ತನಕ  ಏರಿಕೆಯಾಗಿದೆ.
 • ಈ ವಾರದಲ್ಲಿ ಕ್ವಿಂಟಾಲಿಗೆ 500-1000 ದಷ್ಟು ಏರಿಕೆ ಆಗಬಹುದು ಎಂಬ ಸುದ್ದಿ ಇದೆ.
 • ಈ ವರ್ಷದ ಮಳೆಯಿಂದ ಅಡಿಕೆ ಕೊಯಿಲಿಗೆ ತೊಂದರೆ ಉಂಟಾಗಿದೆ.
 • ಮಳೆ ಇನ್ನೂ ಸಪ್ಟೆಂಬರ್ ತನಕವೂ ಮುಂದುವರಿಯುವ ಸೂಚನೆ ಇದೆ.
 • ಅಲ್ಲಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷಿಗೆ ಬಹಳಷ್ಟು ತೊಂದರೆ ಆಗುತ್ತಿದೆ.
 • ಈಗಾಗಲೇ ದಾವಣಗೆರೆ, ಚಿತ್ರದುರ್ಗ, ಶಿರಾ ಇಲ್ಲೆಲ್ಲಾ ಕೊಯಿಲು ಪ್ರಾರಂಭವಾಗಿದ್ದು. ಮಳೆ ಅಡ್ಡಿಯಾಗಿದೆ.
 • ಹಾಗಾಗಿ ಹೊಸ ಅಡಿಕೆ ತಯಾರಾಗಲು ಇನ್ನೂ ಎರಡು ತಿಂಗಳು ಬೇಕಾಗಾಬಹುದು.
 • ಅಷ್ಟರ ವರೆಗೆ ದರ ಸ್ವಲ್ಪ ಸ್ವಲ್ಪ ಏರಿಕೆ ಕಾಣುತ್ತಲೇ ಮುಂದುವರಿಯಬಹುದು.
 • ಆದಾಗ್ಯೂ ಈ ವರ್ಷ ಗರಿಷ್ಟ 55,000 ಮೀರುವ ಸಾಧ್ಯತೆ ಕಷ್ಟ ಎನ್ನುತ್ತಾರೆ.
ದರ ಏರಿಕೆಗೆ ಅಡ್ದಿಯಾದ ಹಾಳಾದ ಅಡಿಕೆ
ದರ ಏರಿಕೆಗೆ ಅಡ್ದಿಯಾದ ಹಾಳಾದ ಅಡಿಕೆ

ಎಲ್ಲೆಲ್ಲಿ ಯಾವ ದರ ಇತ್ತು?

ಚಾಲಿ ಅಡಿಕೆ ಮಾರುಕಟ್ಟೆಯಾದ ಕರಾವಳಿಯಲ್ಲಿ ಸುಳ್ಯ, ಬೆಳ್ಳಾರೆ, ವಿಟ್ಲ, ಕಡಬ ಪುತ್ತೂರು ಕಡೆ ಸಾಮಾನ್ಯ ಅಡಿಕೆಗೆ 43,000  ತನಕವೂ, ಕೊಯಿಲಿನ ಉತ್ತಮ ಅಡಿಕೆಗೆ 45,000-45,500 ತನಕವೂ ಇದೆ. ಪ್ರಕಟಣೆಯ ದರಕ್ಕೂ ಖರೀದಿ ದರಕ್ಕೂ ಅಂತರ ಇದೆ.  ಖಾಸಗಿ ಖರೀದಿದಾರರ ದರ ಸಾಂಸ್ಥಿಕ ಖರೀದಿದಾರರಿಂದ ಕ್ವಿಂಟಲಿಗೆ ರೂ.1000 ಹೆಚ್ಚು ಇದೆ.  

 • ಹೊಸ ಅಡಿಕೆ: ಮಂಗಳೂರು ಸುತ್ತಮುತ್ತ ( ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಕಾರ್ಕಳ, ಕುಂದಾಪುರ) 375-430-435 ತನಕ ಖರೀದಿಯಾಗಿದೆ.
 • ಹಳೆ ಅಡಿಕೆ: 495 -550-555 ತನಕ ಖರೀದಿ ಆಗಿದೆ.
 • ಪುತ್ತೂರು ಸುತ್ತಮುತ್ತ ಸ್ವಲ್ಪ  ದರ ಸ್ವಲ್ಪ ಹೆಚ್ಚು ಇದ್ದು ಹೊಸ ಚಾಲಿ 375-440 ತನಕ ಖರೀದಿಯಾಗಿದೆ.
 • ಹಳೆ ಚಾಲಿ 500-560 ತನಕ ಖರೀದಿಯಾಗಿದೆ.
 • ಪಟೋರಾ ದರ ಇಳಿಕೆಯಾಗಿದೆ. ಜೂನ್ ತಿಂಗಳಲ್ಲಿ 400 ತನಕ ಏರಿದ್ದ ದರ ಈಗ 365 ಆಗಿದೆ.
 • ಕರಿ ಕೋಕಾ ದರ ಸ್ಥಿರವಾಗಿದೆ: ಕಿಲೋ 200-260-270 ದರಕ್ಕೆ ಖರೀದಿಸಲಾಗುತ್ತದೆ.
 • ಉಳ್ಳಿ ಗಡ್ಡೆ ದರ 200-260-265 ತನಕ ಖರೀದಿಸುತ್ತಾರೆ.  

ಇಂದು ಕರಾವಳಿಯ ಒಟ್ಟೂ ಮಾರುಕಟ್ಟೆಯಲ್ಲಿ ಸುಮಾರು 8 ಚೀಲಗಳಷ್ಟು ಹಳೆ ಚಾಲಿ ಸಂಗ್ರಹವಾಗಿದೆ. ಹೊಸತು ಸಹ 60 ಚೀಲಗಳಷ್ಟು ಮಾತ್ರ ಮಾರುಕಟ್ಟೆಗೆ ಬಂದಿದೆ. ಇದು ಹಿಂದಿನ, ಅದರ ಹಿಂದಿನ ವರ್ಷಕ್ಕೆಲ್ಲಾ ಹೋಲಿಸಿದರೆ 25% ದಷ್ಟೂ ಅಲ್ಲ. ಬೆಳೆಗಾರರಲ್ಲಿ ಅಡಿಕೆ ಇದೆ. ಮಾರುಕಟ್ಟೆಗೆ ಬಿಡುತ್ತಿಲ್ಲ.

 • ಶಿರಸಿಯಲ್ಲಿ ಚಾಲಿ ದರ ತುಸು ಏರಿಕೆಯಾಗಿದೆ.
 • 40558, 39345 ಈ ದರಕ್ಕೆ ಮಾರಾಟವಾಗಿದೆ.
 • ಯಲ್ಲಾಪುರದಲ್ಲಿ  40050, 39130 ಈ ದರ ಇತ್ತು.
 • ಸಿದ್ದಾಪುರ: 40239, 38499
 • ಸಾಗರ:  38312, 37832
 • ಕುಮಟಾ: ಹಳೆ ಚಾಲಿ 47372, 46879
 • ಹೊಸ ಚಾಲಿ: 39699, 39239

ಕುಮಟಾದ  ಚಾಲಿ ಅಡಿಕೆಯ ಗುಣಮಟ್ಟ ದಕ್ಷಿಣ ಕನ್ನಡ – ಉಡುಪಿ ಜಿಲೆಗಳ ಅಡಿಕೆಗೆ ಸಮನಾಗಿ ಇದ್ದು, ಇಲ್ಲಿ ದರ ಮಾತ್ರ ಶಿರಸಿ ಮಾರುಕಟ್ಟೆಯಷ್ಟೂ ಬರುವುದಿಲ್ಲ. ಮಂಗಳೂರು ಮಾರುಕಟ್ಟೆಯ ದರವೂ ಬರುವುದಿಲ್ಲ. ನಮ್ಮದು ಅತಂತ್ರವಾಗಿದೆ ಎನ್ನುತ್ತಾರೆ ಬೆಳೆಗಾರರು.

 • ಸಾಗರದಲ್ಲಿ ಸಿಪ್ಪೆ ಗೋಟಿಗೆ ಬೇಡಿಕೆ ಹೆಚ್ಚಾಗಲಾರಂಭಿಸಿದೆ. ಕಳೆದ ವಾರ 20000  ಸುಮಾರಿಗೆ ಇದ್ದುದು ಈ ವಾರ 22,200 ಕ್ಕೆ ಏರಿದೆ.   
ಉತ್ತಮ ಹಳೆ ಅಡಿಕೆಗೆ ಎಲ್ಲಿಲ್ಲದ ಬೇಡಿಕೆ
ಉತ್ತಮ ಹಳೆ ಅಡಿಕೆಗೆ ಎಲ್ಲಿಲ್ಲದ ಬೇಡಿಕೆ

ರಾಶಿ ಅಡಿಕೆ ದರ :

ಕೆಂಪಡಿಕೆ ಬೆಳೆಯುವ ಭಾಗಗಳಲ್ಲಿ ಈ ವರ್ಷ ಮಿಡಿ ಕಾಯಿ ಉದುರುವಿಕೆಯಿಂದ ಬೆಳೆ ಕಡಿಮೆ ಇದೆ. ಮಳೆ ಕಾರಣ ಕೆಲವು ರೋಗ ಬರುವುದೇ ಇಲ್ಲ ಎಂಬಲ್ಲಿಯೂ ಅಲ್ಪ ಸ್ವಲ್ಪ ರೋಗ ಕಾಣಿಸಿಕೊಂಡಿದೆ. ಮಳೆ ಹೀಗೇ ಮುಂದುವರಿದರೆ ಕೊಳೆ ರೋಗ ಹೆಚ್ಚಾಗಬಹುದು. ಹಾಗಾಗಿ ಬೆಲೆ ಇಳಿಕೆ ಸಾಧ್ಯತೆ ಇಲ್ಲ.

 • ಚೆನ್ನಗಿರಿ: 51199, 50980.
 • ಭದ್ರಾವತಿ: 50399, 49679
 • ಚಿತ್ರದುರ್ಗ: 50269, 50089
 • ದಾವಣಗೆರೆ 50702, 49377
 • ಹೊನ್ನಾಳಿ: 50099, 50099
 • ಹೊಸನಗರ;51769, 50709
 • ಸಾಗರ: 51099, 50299
 • ಸಿರ್ಸಿ:50299, 49142
 • ಶಿವಮೊಗ್ಗ: 50609, 50199
 • ಸಿದ್ದಾಪುರ:50055, 49849
 • ಯಲ್ಲಾಪುರ:50899, 48828
 • ತೀರ್ಥಹಳ್ಳಿ:51369, 50599

ಕೆಂಪಡಿಕೆ ಬೆಳೆಗಾರರು ಸ್ವಲ್ಪ ಸ್ವಲ್ಪವೇ ಮಾರಾಟಕ್ಕೆ ಬಿಡುವುದು ಸೂಕ್ತ. ಯಾಕೆಂದರೆ ಇನ್ನು ದರ ಏರಿಕೆಗೆ 2 ತಿಂಗಳ ಅವಕಾಶ ಮಾತ್ರ ಇದೆ. ಮಳೆ ಕಡಿಮೆಯಾದರೆ ಸಪ್ಟೆಂಬರ್ ತಿಂಗಳಿಗೆ ದಾವಣಗೆರೆ , ಚಿತ್ರದುರ್ಗ, ಹೊನ್ನಾಳಿ ಕಡೆಯ ಅಡಿಕೆ ಮಾರುಕಟ್ಟೆಗೆ ಬರಲಿದೆ. ಆ ನಂತರ ದರ ಏರಿಕೆ ಆಗುವುದು ಕಡಿಮೆ. ಚಾಲಿ ದರ ಸ್ವಲ್ಪ ಹಿಮ್ಮುಖ ಆದರೂ ಸಹ ಅಂಜಬೇಕಾಗಿಲ್ಲ. ಒಂದು ಅಥವಾ ಎರಡು ವಾರದಲ್ಲಿ ಮತ್ತೆ ಏರಿಕೆ ಕಾಣಲಿದೆ. ಚಾಲಿಗೆ ಬೇಡಿಕೆ ಇದೆ. ಮಳೆಗೆ ಸಿಕ್ಕ ಗುಣಮಟ್ಟ ರಹಿತ ಅಡಿಕೆ ಮಾರಾಟ ಮಾಡುವುದು ಸೂಕ್ತ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!