ಅಡಿಕೆ ಮಾರುಕಟ್ಟೆ ಸ್ಥಿತಿ ಮುಂದೆ ಏನಾಗಬಹುದು? ಹೊಸ ಚಾಲಿ 50000 ನಿರೀಕ್ಷೆ.

ಅಡಿಕೆ ಮಾರುಕಟ್ಟೆ ಸ್ಥಿತಿ ಮುಂದೆ ಏನಾಗಬಹುದು? ಹೊಸ ಚಾಲಿ 50000 ನಿರೀಕ್ಷೆ.

ಅಡಿಕೆ ಧಾರಣೆ ಏರಿಕೆಗೆ ಮುಹೂರ್ತ ಕೂಡಿ ಬಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಹುರುಪು ಪ್ರಾರಂಭವಾಗಿದೆ. ಈ ವರ್ಷ ಮತ್ತೆ ದರ ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ ಎಂಬುದಾಗಿ ಕೆಲವು ವ್ಯಾಪಾರಿಗಳು ಹೇಳುತ್ತಿದ್ದಾರೆ. ಈಗಿನ ಮಾರುಕಟ್ಟೆ  ದರ ಏರಿಕೆ ಗಮನಿಸಿದರೆ ಇನ್ನೂ ದರ ಏರಿಕೆಯಾಗುತ್ತಲೇ ಇರಬಹುದು ಎಂದೆನ್ನಿಸುತ್ತದೆ.

ಇಂದಿನ ಅಡಿಕೆ ದಾರಣೆಯ ಕಥೆ ಕೇಳಬೇಕು. ಹಳೆ ಅಡಿಕೆ ಖಾಸಗಿ ಮಾರುಕಟ್ಟೆಯಲ್ಲಿ 57000 ತನಕ ಮುಟ್ಟಿದೆ. ಬೆಳಗ್ಗೆ ಇದ್ದ ದರಕ್ಕಿಂತ  ಸಂಜೆ ಮತ್ತೆ 500 ರೂ. ಹೆಚ್ಚು. ಹಾಗೆಯೇ ಹೊಸ ಅಡಿಕೆಗೂ ಭಾರೀ ಬೇಡಿಕೆ. ದರ 46,000 ತನಕವೂ ಹೋಗಿದೆ. ಹಳೆ ಅಡಿಕೆ ಇಲ್ಲವೇ ಇಲ್ಲ. ಹೇಗಾದರೂ ಇರುವ ಹಳೆ ಅಡಿಕೆ ಹೊರ ತರಲೇ ಬೇಕು ಎಂಬ ಹಠವೋ ಗೊತ್ತಿಲ್ಲ ಇಲ್ಲದ ಅಡಿಕೆಗೆ ಎಲ್ಲಿಲ್ಲದ ಬೆಲೆ ಎಂಬಂತಾಗಿದೆ. ಇನ್ನು ಕೆಂಪಡಿಕೆ ದರ  ಹಾಗೆಯೇ ಇದೆ. ಸಹಕಾರಿ ವ್ಯವಸ್ಥೆಯಲ್ಲಿ ಶತಾಯ ಗತಾಯ ದರ ಏರಿಕೆಯಾಗುತ್ತಿಲ್ಲ. ಇಳಿಕೆಯೂ ಆಗುತ್ತಿಲ್ಲ.  ಆದರೆ ಖಾಸಗಿಯವರು ಲಡ್ಡಾದ ಅಡಿಕೆಗೂ ಸಹಕಾರಿ ವ್ಯವಸ್ಥೆಗಿಂತ 1000 ರೂ. ಹೆಚ್ಚಿನ ಬೆಲೆಗೆ ಖರೀದಿ ಮಾಡುತ್ತಿದ್ದಾರೆ ಎಂಬುದಾಗಿ ಬೆಳೆಗಾರರು ಹೇಳುತ್ತಿದ್ದಾರೆ.

ಹಳೆ ಅಡಿಕೆಯ ಬೆಲೆ ಏರಿಕೆ ಕಥೆ:

  • ಹಳೆ ಅಡಿಕೆಗೆ ಭಾರೀ ಬೇಡಿಕೆಯಿರುವ ಕಾರಣ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.
  • ಎಲ್ಲರೂ ಹಳತು ಇದೆಯೇ ಎಂದು ಕೇಳುತ್ತಿದ್ದಾರೆ. ಅದಕ್ಕೆ ಅಂತಹ ಗುಣಮಟ್ಟದ ಪರಾಕು ಸಹ ಇಲ್ಲ.
  • ಹಳತು ಆಗಿದ್ದರೆ ಸಾಕು ಬೆಲೆಗೆ ಯಾವ ಸಮಸ್ಯೆಯೂ ಇಲ್ಲ.
  • ಅಡಿಕೆ ಮಾರುಕಟ್ಟೆಯಲ್ಲಿ ಇಂತಹ ವಿಧ್ಯಮಾನ ಈ ತನಕ ಆಗಿಲ್ಲ ಎನ್ನುತ್ತಾರೆ ಪುತ್ತೂರು ಕಡಬದ ಒಬ್ಬ ವ್ಯಾಪಾರಿಗಳು. 
  • ಇಷ್ಟಕ್ಕೂ ಹಳೆ ಅಡಿಕೆ ಯಾರಲ್ಲಿ ಇದೆ? ಯಾರಲ್ಲೂ ಇಲ್ಲ.
  • ದಿನಕ್ಕೆ ಒಂದು ಎರಡು ಚೀಲ ಒಟ್ಟು ಹಾಕುವುದೂ ಕಷ್ಟವಾಗುತ್ತಿದೆ.
  • ಇಂದು ಬೆಳ್ತಂಗಡಿಯಲ್ಲಿ ಮಾತ್ರ 102 ಚೀಲ ಹಳೆ ಅಡಿಕೆ ಮಾರುಕಟ್ಟೆಗೆ ಬಂದಿದ್ದು, ಉಳಿದಂತೆ ಬಂಟ್ವಾಳದಲ್ಲಿ 10 ಚೀಲ, ಪುತ್ತೂರು, ಸುಳ್ಯ ಮಂಗಳೂರು ಇಲ್ಲಿ ಒಂದು ಚೀಲವೂ ಹಳೆ ಅಡಿಕೆ ಬಂದಿಲ್ಲ.
  • ಎಪಿಎಂಸಿ ವ್ಯಾಪ್ತಿಯಿಂದ ಹೊರಗೆ 5-10 ಚೀಲ ವ್ಯವಹಾರವಾಗಿಬಹುದು.
  • ಏನೇ ಆದರೂ ಅಡಿಕೆ ಇಲ್ಲ. ವ್ಯಾಪಾರಿಗಳಿಗೆ ಖರೀದಿದಾರರಿಗೆ ಕೊಡಬೇಕಾದ ಕಮಿಟ್ ಮೆಂಟ್ ಇದೆ ಹಾಗಾಗಿ ದರ ಏರುತ್ತಿದೆ.
  • ಕೆಂಪಡಿಕೆ ಮಾಡುವ ಕಡೆ ‘ಹಸ’ ಸರಕು ಎಂಬ ವಿಧ ಇದೆ.
  • ಅದು ತೀರಾ ಕಡಿಮೆ ಪ್ರಮಾಣದಲ್ಲಿ ತಯಾರಾಗುತ್ತದೆ. ಅದಕ್ಕೆ ಭಾರೀ ಬೆಲೆ ಹಾಗೆಯೇ ಆಗಿದೆ ಹಳೆ ಚಾಲಿ ಕಥೆ.

ವ್ಯಾಪಾರಿಗಳ ಆಟ ಅಲ್ಲ:

  • ಇಲ್ಲದ ಹಳೆ ಅಡಿಕೆಗೆ ಯಾಕೆ ದರ ಏರುತ್ತದೆ ಎಂಬ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತಾಡುತ್ತಾರೆ.
  • ಇದು ವ್ಯಾಪಾರಿಗಳ ಆಟ ಎಂತಲೂ ಹೇಳುತ್ತಾರೆ. ಹಾಗೆ ಮಾಡಲಿಕ್ಕೆ ಆಗುವುದೂ ಇಲ್ಲ. 
  • ದಾಸ್ತಾನು, ಆಟ ಈ ದರದಲ್ಲಿ ಮಾಡುವುದು ಬಹಳ ಕಷ್ಟದ್ದು. ಹಳೆ ಅಡಿಕೆಗೆ ಅದರದ್ದೇ ಆದ ಗಿರಾಕಿ ಇದ್ದಾರೆ.
  • ಅವರಿಗೆ ನಿರಂತರ ಅಡಿಕೆ ಪೂರೈಕೆ ಆಗುತ್ತಲೇ ಇರಬೇಕು. ಇಲ್ಲ ಎಂದು ಹೇಳುವಂತಿಲ್ಲ.
  • ಒಂದಂತೂ ನಿಜ ಹೀಗೆ ಮುಂದುವರಿದರೆ ಸಧ್ಯವೇ ಹಳೆ ಅಡಿಕೆಗೆ 60000 ಆದರೂ ಅಚ್ಚರಿ ಇಲ್ಲ.
  • ಆ ಸಮಯಕ್ಕೆ ಹಳೆ ಅಡಿಕೆ ಮಾರಾಟಕ್ಕೆ  ಬರಲಿಕ್ಕೆ ವುದೇ ಇಲ್ಲ ಎಂಬ ಸ್ಥಿತಿ ಉಂಟಾಗಲೂಬಹುದು.
  • ಆಗ ಹೊಸತು ಹಳೆಯದಾಗುತ್ತದೆ. ಹಿಂದೆಲ್ಲಾ ಚೌತಿ ನಂತರ ಹೊಸ ಅಡಿಕೆ ಹಳತಾಗುವುದು ಕ್ರಮ.
  • ಈ ವರ್ಷ ಅದೇ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ಹಳತು ಇಲ್ಲ ಎಂದಾದರೆ ಮುಂದೇನು? ಹೊಸತೇ ಹಳೆಯಡಿಕೆಯ ಸ್ಥಾನಕ್ಕೆ ಏರಲೇ ಬೇಕು ತಾನೇ?

ಈಗೀಗ ಕೆಲವು ವ್ಯಾಪಾರಿಗಳು ಅಲ್ಪಸ್ವಲ್ಪ ಹೊಸ ಅಡಿಕೆ ದಾಸ್ತಾನಿಗೆ ಮುಂದಾಗುತ್ತಿದ್ದಾರೆ. ಕಾರಣ ನಿಶ್ಚಿತವಾಗಿ  ಹಳತು ಇಲ್ಲದ ಕಾರಣ ಹೊಸತಕ್ಕೆ ಬೇಡಿಕೆ ಹೆಚ್ಚುತ್ತದೆ ಎಂಬುದು. ಇದನ್ನು ಹೆಚ್ಚಿನವರಿಗೆ ಮಾಡಲು ಆಗುವುದಿಲ್ಲ. ಅಂತಹ ಫಂಡ್ ಕ್ರೋಢೀಕರಣವೂ ಕಷ್ಟ. ಸದ್ಯದ ಪರಿಸ್ಥಿತಿಯಲ್ಲಿ ಇನ್ನು ಕೆಲವೇ ಸಮಯದಲ್ಲಿ ಹೊಸತಕ್ಕೆ 50,000 ಆದರೂ ಅಚ್ಚರಿ ಇಲ್ಲ.

ಹಳೆ ಅಡಿಕೆ ಏರಿಕೆ

ಹಳೆ ಅಡಿಕೆ ಕೊರತೆಯೇ ಇದಕ್ಕೆ ಕಾರಣ:

  • ಹಳೆ ಅಡಿಕೆ ಖರೀದಿಸುವ ಒಂದು ವರ್ಗವೇ ಇದೆ. ಇದನ್ನೇ ವ್ಯವಹಾರ ಮಾಡುವವವರೂ ಇದ್ದಾರೆ.
  • ಅದು ನಿರಂತರ ಮುಂದುವರಿಯುತ್ತಾ ಇರಬೇಕು. ಎಲ್ಲಿಯೂ ಬೇಡಿಕೆ – ಪೂರೈಕೆ  ನಿಲ್ಲಬಾರದು.
  • ಈ ವರ್ಷ ಹಳೆ ಅಡಿಕೆಗೆ ಬೆಲೆ ತೃಪ್ತಿಕರವಾಗಿ ಬಂದ ಕಾರಣ ಬಹುತೇಕ ಬೆಳೆಗಾರರು 54,000 ಆಸುಪಾಸಿಗೆ ಬಂದಾಗ ಮಾರಾಟ ಮಾಡಿದ್ದಾರೆ. 
  • ಇಷ್ಟೊಂದು ಬೆಲೆಯ ಅಡಿಕೆಯನ್ನು ದಾಸ್ತಾನು ಸಹ ಯಾರೂ ಇಡುವುದಿಲ್ಲ.
  • ಅಂತಹ ರಿಸ್ಕ್ ಯಾವ ವ್ಯಾಪಾರಿಯೂ ತೆಗೆದುಕೊಳ್ಳಲಾರ.
  • ಬಂದಂತೆ ಅದನ್ನು ಪಾಸ್ ಆನ್ ಮಾಡುತ್ತಾ ವ್ಯವಹಾರ ನಡೆದಿದೆ.
  • ಈಗ ಬೇಡಿಕೆಗನುಗುಣವಾಗಿ ಪೂರೈಕೆ ಮಾಡಲು ಕಷ್ಟವಾದ ಕಾರಣ  ರೈತರಲ್ಲಿ ಇದ್ದರೆ ಬರಲಿ ಎಂದು ದರ ಏರಿಕೆ ಅಷ್ಟೇ.

ಮುಂದಿನ ವರ್ಷ ಬೆಳೆ ಕಡಿಮೆ ಇದೆ:

  • ಅಡಿಕೆ ತೋಟಗಳು ಎಷ್ಟೇ ಹೆಚ್ಚಾದರೂ ಬೆಳೆ ಮಾತ್ರ ಹೆಚ್ಚಾಗುವುದಿಲ್ಲ.
  • ಈ ವರ್ಷದ ಹೊಸ ಫಸಲು ಬಹುತೇಕ ಎಲ್ಲರ ತೋಟದಲ್ಲೂ ಅರ್ಧಕ್ಕರ್ಧ ಉದುರಿ ನಷ್ಟವಾಗಿದೆ.
  • ಮೂರು ನಾಲ್ಕು ಗೊನೆ ಇದ್ದ ಮರದಲ್ಲಿ ಈಗಾಗಲೇ ಅರ್ಧ ಪಾಲು ಅಡಿಕೆ ಉದುರಿ ನಷ್ಟವಾಗಿದೆ ಎಂಬ ವರದಿ ಇದೆ.
  • ಕಳೆದ ವರ್ಷದ 2021-22 ಫಸಲು ಸ್ವಲ್ಪ ಹೆಚ್ಚಾಗಿದ್ದ ಕಾರಣ ಸಹಜವಾಗಿ ಈ ವರ್ಷ ಫಸಲು ಕಡಿಮೆ ಇದೆ.
  • ಇದು ಈಗಿನ ಮಾರುಕಟ್ಟೆಯ  ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ.
  • ಹಳೆ ತೋಟಗಳು  ಕಡಿಯಲ್ಪಟ್ಟು ಹೊಸ ತೋಟ ಆಗುತ್ತಿವೆ. ಹಾಗಾಗಿ ಸ್ವಲ್ಪ ಉತ್ಪಾದನೆ ಕಡಿಮೆಯಾಗಬಹುದು.

ಹಳತು ಮಾಡಿ ಮಾರಾಟ ಮಾಡಿ:

  • ಈ ವರ್ಷದ ಹಳೆ ಅಡಿಕೆ ಧಾರಣೆ ನೆಗೆತ ಎಲ್ಲಾ ಅಡಿಕೆ ಬೆಳೆಗಾರರಿಗೆ ಹೊಸ ಪಾಠವನ್ನು ಕಲಿಸಿದೆ.
  • ಅದಕ್ಕೆ ಇಷ್ಟು ಬೇಡಿಕೆ ಇದೆ ಎಂದು ಗೊತ್ತಾಗಿದೆ. ಹಾಗಾಗಿ ಉತ್ತಮ ಅಡಿಕೆಯನ್ನು ಈಗ ಸದ್ಯ ಮಾರಾಟಕ್ಕೆ ಮುಂದಾಗಬೇಡಿ.
  • ಕಳೆದ ಎರಡೂ ವರ್ಷಗಳಿಂದ ಅಡಿಕೆ ಧಾರಣೆ  ಚೆನ್ನಾಗಿದ್ದ ಕಾರಣ ಬೆಳೆಗಾರರು ಆರ್ಥಿಕವಾಗಿ ಅಷ್ಟು ಲಾಸ್ ನಲ್ಲಿ ಇಲ್ಲ.
  • ಹಾಗಾಗಿ  ನಿರೀಕ್ಷೆಯ ದರ ಬರುವ ತನಕ ಮಾರಾಟ ಮಾಡಬೇಡಿ.
  • ಇನ್ನೊಂದು ತಿಂಗಳು ಚೌತಿ ತನಕ ಕಾಯಿರಿ. ಈ ದರ ಅಲ್ಲದಿದ್ದರೂ  ಕ್ವಿಂಟಾಲಿಗೆ 50,000 ಕ್ಕೆ ಏರಿಕೆ ಆಗುತ್ತದೆ.

ಕೆಂಪಡಿಕೆಯ ಕಥೆ ಅರ್ಥವೇ ಆಗುತ್ತಿಲ್ಲ:

ಕೆಂಪಡಿಕೆಯ ಕಥೆ ಅರ್ಥವೇ ಆಗುತ್ತಿಲ್ಲ
  • ಚಾಲಿ ದರ ಏರಿಕೆಯಾದ ಲೆಕ್ಕದಲ್ಲಿ ಕೆಂಪಡಿಕೆ ದರ ಏರಿಕೆ ಆಗಲೇ ಇಲ್ಲ. ಇದು ಗರಿಷ್ಟ 50,000 ದಲ್ಲಿ ಸ್ತಬ್ಧವಾಗಿದೆ. 
  • ಹಾಗೆಂದು ಕೆಂಪಡಿಕೆಗೆ ಬೇಡಿಕೆ ಇಲ್ಲದಿಲ್ಲ. ಈ ವರ್ಷ ಬಹಳಷ್ಟು ಚಾಲಿ ಅಡಿಕೆ ಆದ ಕಾರಣ ಗುಟ್ಕಾ ತಯಾರಿಕೆಗೆ  ಬಹುತೇಕ ಚಾಲಿ ಅಡಿಕೆಯೇ ಬಳಕೆಯಾಗುತ್ತಿದೆ.
  • ಚಾಲಿಗೂ ಕೆಂಪಿಗೂ ಸುಮಾರು 8,000-9,000 ವ್ಯತ್ಯಾಸ ಇರುವ ಕಾರಣ ಕೆಂಪು ಖರೀದಿಯಲ್ಲಿ  ಸ್ವಲ್ಪ ಹಿಮ್ಮನಸ್ಸು.
  • ಇದಲ್ಲದೆ ಬಹುತೇಕ ಬೆಳೆಗಾರರು ಸೊಸೈಟಿಯಲ್ಲಿ  ಅಡಿಕೆ ಹಾಕಿ ಅಡ್ವಾನ್ಸ್ ತೆಗೆದುಕೊಂಡ ಕಾರಣ ಸೊಸೈಟಿ ಮತ್ತು ವರ್ತಕರ ನಡುವೆ ಒಳ ಒಪ್ಪಂದ ನಡೆದಿದೆ ಎನ್ನುತ್ತಾರೆ ಕೆಲವು ಬೆಳೆಗಾರರು.

ಈ ರೀತಿ ದರ ಏರಿಕೆ ಇಳಿಕೆ ಆಗದ ಸನ್ನಿವೇಶವನ್ನು ಬಲು ಧೀರ್ಘ ಕಾಲದ ತನಕ ಮುಂದುವರಿಸಿದರೆ ಬೆಳೆಗಾರರು ಮಾರಾಟ ಮಾಡಿಯೇ ತೀರುತ್ತಾರೆ. ಮಳೆಗಾಲದಲ್ಲಿ ಗೊಬ್ಬರ ಹಾಕುವಿಕೆ,  ರೋಗ ನಿರ್ವಹಣೆ , ಸ್ವಚ್ಚತೆ ಇತ್ಯಾದಿ ಕೆಲಸಗಳಿಗೆ ಹಣ ಬೇಕಾಗುತ್ತದೆ. ಆಗ ಮಾರಾಟ ಮಾಡುತ್ತಾರೆ. ಇನ್ನು ಆಗಸ್ಟ್ ತಿಂಗಳಿಗೆ ಕೊಯಿಲು ಪ್ರಾರಂಭವಾಗುತ್ತದೆ. ಚೇಣಿಯೂ ಪ್ರಾರಂಭವಾಗುತ್ತದೆ. ಆಗ ಮಾರಾಟ ಮಾಡದೆ ವಿನಹ ಬಂಡವಾಳ ಇರುವುದಿಲ್ಲ. ಈ ಎಲ್ಲ ಸಂದಿಗ್ಧಗಳು ಕಳೆದ ನಂತರ ದರ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ.

ಎಲ್ಲೆಲ್ಲಿ ಯಾವ ದರ ಇತ್ತು?

ಹೊಸ ಚಾಲಿ ಅಡಿಕೆ ಧಾರಣೆ ಕರಾವಳಿಯಲ್ಲಿ ಕ್ಯಾಂಪ್ಕೋ ಖರೀದಿ ದರ ಪುತ್ತೂರು ಸುಳ್ಯ, ವಿಟ್ಲ ಗಳಲ್ಲಿ ಕಿಲೋ. 375 – 440-450 ತನಕ ಇದೆ. ಬಹುತೇಕ ಉತ್ತಮ ಅಡಿಕೆ 440-445  ದರದಲ್ಲಿ ಮಾತ್ರ ಖರೀದಿ ಆಗಿದೆ.

  • ಮಂಗಳೂರು ಸುತ್ತಮುತ್ತ (ಬೆಳ್ತಂಗಡಿ, ಕಾರ್ಕಳ, ಕುಂದಾಪುರ , ವೇಣೂರು, ಬಂಟ್ವಾಳ) 375-440 ತನಕ ಖರೀದಿ ಆಗಿದೆ.
  • ಖಾಸಗಿ ವ್ಯಾಪಾರಿಗಳ ದರ: ಮಂಗಳೂರು ಸುತ್ತಮುತ್ತ  ಗರಿಷ್ಟ 445 ರೂ ಗೆ ಖರೀದಿ ಆಗಿದೆ.
  • ಹಳೆ ಚಾಲಿ ಕ್ಯಾಂಪ್ಕೋ  ದರ 490-560 ತನಕ ಖರೀದಿ ನಡೆದಿದೆ.
  • ಖಾಸಗಿ ದರ  ಉತ್ತಮ ಅಡಿಕೆಗೆ 560-570 ತನಕ ಖರೀದಿ ನಡೆದಿದೆ.
  • ಸಾಗರ:  375.99, 367.99
  • ಶಿರಸಿ: 398.98, 389.36
  • ಯಲ್ಲಾಪುರ : 398.99, 386.99
  • ಸಿದ್ದಾಪುರ:392.09, 386.99
  • ಕುಮಟಾ ಹಳೆಯದು:462.99, 458.19
  • ಹೊಸತು: 398.69, 394.29

ಸಿರ್ಸಿ, ಸಾಗರ, ಯಲ್ಲಾಪುರಗಳಲ್ಲಿ ಕಳೆದ ವಾರಕ್ಕಿಂತ  ಚಾಲಿ ದರ ಸ್ವಲ್ಪ ಏರಿಕೆಯಲ್ಲಿರುವ ಕಾರಣ ಹೊಸ ಚಾಲಿಗೆ ಬೇಡಿಕೆ ಪ್ರಾರಂಭವಾಗಿದೆ. ಸಿಪ್ಪೆ ಗೋಟು ದರ ಏರಿಕೆಯಾಗಿಲ್ಲ.

  • ಪಟೋರಾ ದರ ರೂ.10 ಕಡಿಮೆಯಾಗಿದೆ.ರೂ. 300-365
  • ಉಳ್ಳಿಗಡ್ಡೆ ದರ ರೂ.5 ಹೆಚ್ಚಳವಾಗಿದೆ. 200-255
  • ಕರಿಕೋಕಾ ಸ್ಥಿರವಾಗಿದೆ.ರೂ.200-265.

ಕೆಂಪಡಿಕೆ ಮಾರುಕಟ್ಟೆ:

ಕೆಂಪಡಿಕೆ  ರಾಶಿ ದರ ಏರಿಕೆಗೆ ಮುಹೂರ್ತ ಕೂಡಿ ಬಂದಿಲ್ಲ. ಅಡಿಕೆ ಬರುವ ಪ್ರಮಾಣ ಕಡಿಮೆ ಇದ್ದರೂ ದರ ಏರುತ್ತಿಲ್ಲ. ಸರಕು ತೀರಾ ಕಡಿಮೆ ಇದ್ದು ದರ ಏರುತ್ತಿದೆ. ಬೆಟ್ಟೆ ದರವೂ ಏರಿಕೆಯಾಗಿದೆ. ಪ್ರಮಾಣ ತುಂಬಾ ಕಡಿಮೆ. ಹೊಸನಗರದಲ್ಲಿ ನಿನ್ನೆ 1248 ಚೀಲ ಅಡಿಕೆ ವ್ಯಾಪಾರ ಆಗಿದೆ. ಚಿತ್ರದುರ್ಗ, 2 ಚೀಲ, ಚೆನ್ನಗಿರಿ 363 ಚೀಲ,ಸಾಗರ 78 ಚೀಲ, ಶಿರಸಿ 15 ಚೀಲ, ಯಲ್ಲಾಪುರ 227 ಚೀಲ, ತೀರ್ಥಹಳ್ಳಿ 434 ಚೀಲ ಮಾತ್ರ ವ್ಯವಹಾರ ಆಗಿದೆ.

  • ಶಿವಮೊಗ್ಗ: ರಾಶಿ.47969, 47599
  • ಸಾಗರ: ರಾಶಿ.49719, 48799
  • ಶಿರಸಿ: ರಾಶಿ.49699, 47477
  • ಯಲ್ಲಾಪುರ: ರಾಶಿ.54019, 50199
  • ಹೊಸನಗರ: ರಾಶಿ.50170, 49799
  • ಚಿತ್ರದುರ್ಗ: ರಾಶಿ.49369, 49189
  • ಚೆನ್ನಗಿರಿ: ರಾಶಿ.49309, 49088
  • ದಾವಣಗೆರೆ: ರಾಶಿ.49359, 48200
  • ಬಧ್ರಾವತಿ: ರಾಶಿ. 49399, 48265
  • ತೀರ್ಥಹಳ್ಳಿ: ರಾಶಿ. 49619, 49229
  • ಶಿವಮೊಗ್ಗ ಸರಕು: 79896, 74400
  • ತೀರ್ಥಹಳ್ಳಿ ಸರಕು: 80200, 72100

ಬೆಳೆಗಾರರು ಈಗ ಮಾರುಕಟ್ಟೆಗೆ ಅಡಿಕೆ ಬಿಡುತ್ತಿಲ್ಲ. ಸ್ವಲ್ಪ ಕಾಯುವ ತಂತ್ರ ಅನುಸರಿಸುತ್ತಿದ್ದಾರೆ. ಬಹುತೇಕ ಅಡಿಕೆ ವ್ಯಾಪಾರಸ್ಥರು ಅಡಿಕೆಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಕ್ಯಾಂಪ್ಕೋ ಸಹ ಹೆಚ್ಚಿನ ಖರೀದಿ ನಡೆಸಿಲ್ಲ ಎಂಬ ಮಾಹಿತಿ ಇದೆ. ಬೆಳೆಗಾರರ ಈ ನಡೆಯಿಂದ ಮಾರುಕಟ್ಟೆಯಲ್ಲಿ  ಕೊರತೆ ಉಂಟಾಗಿ ಬೆಲೆ ಏರಿಕೆ ಆಗಬಹುದು. ಉತ್ತಮ ಗುಣಮಟ್ಟದ ಹೊಸ ಅಡಿಕೆಯೂ ಸ್ಟಾಕು ಇಲ್ಲ. ಹಾಳಾದ ಅಡಿಕೆ ಯಾರೂ ಸ್ಟಾಕು ಇಟ್ಟುಕೊಳ್ಳದೆ ವಿಲೇವಾರಿ ಮಾಡಿದ್ದಾರೆ.

3 thoughts on “ಅಡಿಕೆ ಮಾರುಕಟ್ಟೆ ಸ್ಥಿತಿ ಮುಂದೆ ಏನಾಗಬಹುದು? ಹೊಸ ಚಾಲಿ 50000 ನಿರೀಕ್ಷೆ.

  1. ಅಡಿಕೆ ಬೆಳೆ ದರದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ ,ಅದರೆ ಅಡಿಕೆಯನ್ನು,ಯಾವ,ಯಾವ ದೇಶದವರು ,ಉಪಯೊಗಿಸುತ್ತಾರೆ,
    ಹಾಗು ಅಡಿಕೆಯಿಂದ ಏನೇನು ತಯಾರಿಸುತ್ತಾರೆ. ಹಾಗು ಬೇಡಿಕೆ ಹೇಗಿದೆ ಅಂತವರೈತರಿಗೆ ತಿಳಿಸಿ
    ಶಿಲ್ಪಾ ಪರಮೇಶ್ ಮೈದೊಳಲು.ಬದ್ರಾವತಿ

  2. Sir,

    We are having Warehouse of Capacity 30000 Metric Ton ( 1,30,000 Square Feet Area ) in Karighanur, Davanagere near PB NH Road ,if anyone interested can Approach us .

    Regards,

    R Basavaraja
    8383019890/
    9899414922.

Leave a Reply

Your email address will not be published. Required fields are marked *

error: Content is protected !!