ಬೀದರ್ ಜಿಲ್ಲೆಯ ಕೆಂಪು ಮಣ್ಣಿನಲ್ಲಿ ಸೇಬು ಬೆಳೆ ಬೆಳೆಯಬಹುದು. ಇದು ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಬೆಳೆಯಲ್ಲ. ಇದನ್ನು ಅಪ್ಪಾರಾವ್ ಭೋಸಲೆ ಎಂಬ ಪ್ರಗತಿಪರ ರೈತರು ಬೆಳೆದು ತೋರಿಸಿದ್ದಾರೆ.
ಕೆಲವೊಂದು ಬೆಳೆಗಳು ಸಾಂಪ್ರದಾಯಿಕವಾಗಿ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಬೆಳೆಯುವಂತದ್ದು ಎಂದು ಇತರರು ಅದರ ಗೋಜಿಗೆ ಹೋಗುವುದಿಲ್ಲ. ಕೆಲವೇ ಕೆಲವು ಆಸಕ್ತರು, ಬಂದರೆ ಬರುತ್ತದೆ, ಹೋದರೆ ಹೋಗುತ್ತದೆ ಎಂದು ಬೆಳೆಸಿ ನೋಡುವ ಮನಸ್ಸು ಮಾಡುತ್ತಾರೆ. ಕೆಲವೊಮ್ಮೆ ಅದು ಯಶಸ್ವಿಯೂ ಆಗುತ್ತದೆ. ಇಂತಹ ಉದಾಹರಣೆ ಸಾಕಷ್ಟು ಇದೆ. ಸಾಂಪ್ರದಾಯಿಕ ಪ್ರದೇಶ, ವಾತಾವರಣ, ಇದನ್ನು ಮೀರಿಯೂ ಕೆಲವು ಬೆಳೆಗಳುಬರುವ ಸಾಧ್ಯತೆ ಇದೆ. ಯಾವುದನ್ನೂ ಬೆಳೆಸಿ ನೋಡಬೇಕು. ಆಗಲೇ ತಿಳಿಯುವುದು.
ಸೇಬು ಗುಲಾಬಿ ಕುಟುಂಬದಲ್ಲಿನ (ರೋಸೇಸೀ) ಮೇಲಸ್ ಡೊಮೆಸ್ಟಿಕಾಕ್ಕೆ ಸೇರಿದ ಮತ್ತು ಸಮಶೀತೋಷ್ಣ ವಲಯದ ಕಾಶ್ಮೀದಲ್ಲಿ ಮಾತ್ರ ಬೆಳೆಯುವ ಹಣ್ಣು ಎಂಬು ಖ್ಯಾತಿ. ಈ ಕೆಂಪು ಚೆಲುವೆ ಸೇಬು ಹಣ್ಣು ಬೀದರ ಜಿಲ್ಲೆಯಲ್ಲಿಯೂ ಕೊನರಬಹುದೆಂದು ಯಾರೂ ಊಹಿಸಿರಲಿಲ್ಲ. ಇಲ್ಲಿನ ಹವಾಗುಣಕ್ಕೆ ಈ ಬೆಳೆ ಹೊಂದಿಕೊಳ್ಳುವುದಿಲ್ಲವೆಂದೇ ಬಹಳಷ್ಟು ಜನ ಭಾವಿಸಿದ್ದರು. ಸೇಬು ಹಣ್ಣನ್ನು ನಮ್ಮ ನೆಲದಲ್ಲಿಯೂ ಬೆಳೆಯಬಹುದೆಂದು, ಜಿಲ್ಲೆಯ ಹುಮನಾಬಾದ ತಾಲೂಕಿನ ಘಾಟಬೋರಳ ಗ್ರಾಮದ ಅಪ್ಪಾರಾವ ದಿಗಂಬರರಾವ ಭೋಸಲೆ ಅವರು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಜಿಲ್ಲೆಯ ಇತರ ರೈತರಿಗೆ ಮಾದರಿಯಾಗಿದ್ದಾರೆ.
ರೈತರ ಹಿನ್ನೆಲೆ:
- ಬೀದರ್ ಜಿಲ್ಲೆಯಲ್ಲಿ ಸೇಬು ಬೆಳೆಯುವ ಸಾಹಸಕ್ಕೆ ಮುಂದಾದವರಲ್ಲಿ ಇವರೇ ಮೊದಲಿಗರು.
- ಬಡ ಕೃಷಿಕ ಕುಟುಂಬದಲ್ಲಿ ಹುಟ್ಟಿದ 51 ವರ್ಷ ವಯಸ್ಸಿನ ಅಪ್ಪಾರಾವ ಓದಿದ್ದು ಕೇವಲ ಏಳನೆಯ ತರಗತಿ.
- ಕಡುಬಡತನದಿಂದಾಗಿ ಶಿಕ್ಷಣವನ್ನು ಮೊಟಕುಗೊಳಿಸಿ ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡರು.
- ಇವರಿಗಿರುವುದು ಏಳು ಎಕರೆ ಭೂಮಿ. ಇದರಲ್ಲಿ ಹೀರೇಕಾಯಿ, ಕುಂಬಳಕಾಯಿ, ಜೋಳ, ತೊಗರಿ ಮುಂತಾದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು.
- ಬದಲಾವಣೆ ಮಾಡುವುದರಿಂದ ಹೆಚ್ಚುವರಿ ಆದಾಯ ಗಳಿಸಬಹುದು ಎಂದು ಯೋಚಿಸಿದ ಇವರು ಹತ್ತೂರು ತಿರುಗಿ ಕಂಡು ತಿಳಿಯುವ ಮನಸ್ಸು ಮಾಡಿದರು.
- ಭೋಸಲೆ 1992 ರಲ್ಲಿ ಪಂಜಾಬ, ಹರಿಯಾಣಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಬೆಂಗಳೂರು, ಮೈಸೂರು ಮುಂತಾದೆಡೆ ಪ್ರಯಾಣ ಮಾಡಿ ಸೇಬು ಮತ್ತಿತರ ತೋಟಗಾರಿಕೆ ಬೆಳೆಗಳ ಮಾಹಿತಿ ಸಂಗ್ರಹಿಸಿದರು.
- ಸದಾ ಕೃಷಿಯಲ್ಲಿ ಪ್ರಯೋಗಶೀಲತೆ ಮತ್ತು ಹೊಸತನ ಕಂಡುಕೊಳ್ಳುವ ಛಲ, ಬದ್ಧತೆ, ದೃಢವಿಶ್ವಾಸದೊಂದಿಗೆ ಒಂದು ಎಕರೆ ಕೆಂಪು ಮತ್ತು ಬರಡು ಭೂಮಿಯಲ್ಲಿ ಹಿಮಾಚಲ ಪ್ರದೇಶ ಸಿಮ್ಲಾದ ಹೆಚ್‍ಆರ್‍ಎಂಎನ್-99(ಹರಿಮನ್) ತಳಿಯ ಸೇಬು ಹಣ್ಣನ್ನು ಬೆಳೆದು ಯಶಸ್ವಿಯಾಗಿದ್ದಾರೆ.
ನಾಟಿ ಮತ್ತು ನಿರ್ವಹಣೆ:
- ಸಸಿಗಳ ನಾಟಿಗಾಗಿ ಜೆಸಿಬಿಯಿಂದ 4×5 ಅಡಿ ಆಳದ ನಾಲೆ ತೆಗೆದು 8 ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಿಂದ ಮುಚ್ಚಿ 100 ಚೀಲ ಕೋಕೋವಿಟ್ ಗೊಬ್ಬರ ಮತ್ತು ಕೋನಿಕಾ ಔಷಧ ಸಿಂಪಡಿಸಿದರು.
- ಎಂಟು ದಿನಗಳ ಬಳಿಕ ಹಿಮಾಚಲ ಪ್ರದೇಶದ ರೂಪೇಶ ಸುನವಾನೆಯವರಿಂದ ಪ್ರತಿ ಸಸಿಗೆ 210 ರೂ.ದಂತೆ ಖರೀದಿಸಿದರು.
- 14×14 ಮತ್ತು ಸಾಲಿನಿಂದ ಸಾಲಿಗೆ 14×14 ಅಂತರ ಇಟ್ಟು ಸೇಬು ಸಸಿಗಳನ್ನು 2020 ರ ನವೆಂಬರಿನಲ್ಲಿ ನಾಟಿ ಮಾಡಿದರು.
- ನೀರಾವರಿಗೆ ಎರಡು ತೆರೆದ ಬಾವಿಗಳು. ಬಾವಿಗಳಿಂದ ಹನಿ ನೀರಾವರಿ ಮೂಲಕ ನೀರುಣಿಸುತ್ತಾರೆ,
- ಈ ಹಿಂದೆ ಹೂವಿನ ಬೇಸಾಯಕ್ಕೆ ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿಗಾಗಿ ಸಹಾಯಧನ ಪಡೆದಿದ್ದರು.
- ಅದೇ ವ್ಯವಸ್ಥೆಯಲ್ಲಿ ಸೇಬಿಗೂ ನೀರಾವರಿ ಮಾಡಿಕೊಂಡಿದ್ದಾರೆ.
- ಸೇಬಿನ ಸಸಿಗಳಿಗೆ ತಂಪು ವಾತಾವರಣ ಬೇಕು. ಅದನ್ನು ಕಲ್ಪಿಸಲು ಮಿಶ್ರಬೆಳೆಯಾಗಿ ಗಂಗಬೊಂಡ ತಳಿಯ ತೆಂಗನ್ನೂ ಬೆಳೆದಿದ್ದಾರೆ.
- ಇದು ಎಳನೀರಿಗೆ ಹೊಂದಿಕೆಯಾಗುವ ಉತ್ತಮ ತಳಿ. ಇಪ್ಪತ್ತು ದಿನಕ್ಕೊಮ್ಮೆ ಕಾಲುವೆಯ ಮೂಲಕ ಮತ್ತು ಪ್ರತಿದಿನ ಒಂದು ಗಂಟೆ ಹನಿ ನೀರಾವರಿ ಮೂಲಕ ನೀರುಣಿಸುವರು.
- ಪತ್ನಿ ಕಸ್ತೂರಬಾಯಿ, ಐದಾರು ಆಳುಗಳ ಸಹಾಯದಿಂದ ಕೃಷಿಕಾರ್ಯದಲ್ಲಿ ತೊಡಗಿದ್ದು, ಐದು ದನಗಳ ಸಾಕಣೆಯಿಂದ ಹಾಲನ್ನು ಪಡೆಯುತ್ತಿದ್ದಾರೆ.
- ಇವುಗಳ ತ್ಯಾಜ್ಯದಿಂದ ಜೀವಾಮೃತವನ್ನು ತಯಾರಿಸಿ ಸೇಬಿಗೆ 20 ದಿನಕ್ಕೊಮ್ಮೆ ಸಿಂಪಡಿಸುತ್ತಿರುವುದರಿಂದ ಸೇಬಿಗೆ ರೋಗಗಳ ಬಾಧೆ ಕಡಿಮೆ.
ನಾಟಿ ಮಾಡಿದ 11 ತಿಂಗಳಿಗೇ ಸಸಿಗಳ ಟ್ರಿಮ್ ಮಾಡಿದ್ದು, ಡಿಸೆಂಬರಿನಲ್ಲಿ ಹೂಬಿಟ್ಟು ಈಗ ಪ್ರತಿ ಗಿಡದಲ್ಲಿ20-25 ಹಣ್ಣುಗಳು ಬಿಟ್ಟು ಪಕ್ವವಾಗುತ್ತಿವೆ. ಇಲ್ಲಿನ ಹವಾಗುಣಕ್ಕನುಗುಣವಾಗಿ 15 ತಿಂಗಳ ಸೇಬಿನ ಗಿಡಗಳು ಸಮೃದ್ಧವಾಗಿ ಏಳೆಂಟು ಅಡಿ ಎತ್ತರ ಬೆಳೆದು ನಳನಳಿಸುತ್ತಿವೆ. ಈವರೆಗೆ ಸೇಬಿನ ಬೇಸಾಯಕ್ಕಾಗಿ ಒಟ್ಟು 5.5 ಲಕ್ಷ ರೂ. ವೆಚ್ಚವಾಗಿದ್ದು ಮುಂದೆ 7-8 ಲಕ್ಷದ ರೂ. ಆದಾಯ ನಿರೀಕ್ಷಿಸಿದ್ದಾರೆ.
ಸೇಬು ಮಾತ್ರವಲ್ಲ:
- ಅಪ್ಪಾರಾವ ಗುಜರಾತಿನನಿಂದ 500 ಕಾಲಿಪತ್ತಿ ತಳಿಯ ಸಪೋಟಾ ಗಿಡಗಳನ್ನು ಬೆಳೆಸಿದ್ದಾರೆ. 2018 ರಿಂದ ವರ್ಷಕ್ಕೆ ಮೂರು ಬಾರಿಯಂತೆ ಇಳುವರಿ ಪಡೆಯುತ್ತಾರೆ.
- ಇದರಲ್ಲಿ 12 ಲಕ್ಷದಷ್ಟು ಆದಾಯ ಪಡೆಯುತ್ತಾರೆ. ಕಾಲಿಪತ್ತಿ ಸಪೋಟಾ ಬಹಳ ಸಿಹಿಯಾಗಿದ್ದು, ಅಧಿಕ ಇಳುವರಿ ಕೊಡುವ ತಳಿಯಾಗಿದೆ.
- 2009ರಲ್ಲಿ ಗಂಗಬೊಂಡಂ ತಳಿಯ ತೆಂಗನ್ನು, ಬೆಳೆಸಿದ್ದು ಅದೂ ಫಲ ಕೊಡುತ್ತಿದೆ.
- ವಿವಿಧ ತಳಿಯ ಮಾವುಗಳನ್ನೂ ಬೆಳೆಸಿದ್ದಾರೆ. ನಾಗಪುರ ಕಿತ್ತಳೆ, ಅಂಜೂರ, ನೇರಳೆ, ಲಿಂಬೆ ಮತ್ತು ಗಜಲಿಂಬೆ, ಗೋಡಂಬಿ ಗಿಡಗಳನ್ನು ಸಹ ಬೆಳೆದು ಲಾಭ ಪಡೆಯುತ್ತಿದ್ದಾರೆ.
- ಕಷ್ಟಬಂದು ದುಡಿದ ಕಾರಣ ಈಗ ಆದಾಯ ಇದೆ. ಇದರಿಂದಾಗಿ ನೆಮ್ಮದಿಯ ಬದುಕು ಸಹ ರೂಪುಗೊಂಡಿದೆ,
ಸೇಬು ಹಣ್ಣಿನ ಬೆಳೆ ಮತ್ತು ವಾತಾವರಣ:
- ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಸೇಬು ವರ್ಷಕ್ಕೊಮ್ಮೆ ಫಸಲು ಕೊಟ್ಟರೆ ನಾವು ಬೆಳೆದ ಸೇಬು ಇಲ್ಲಿನ ವಾತಾವರಣದಲ್ಲಿ ವರ್ಷಕ್ಕೆರಡು ಸಲ ಅಂದರೆ ಡಿಸೆಂಬರ್ ಮತ್ತು ಮೇ ತಿಂಗಳಲ್ಲಿ ಇಳುವರಿ ಕೊಡುವುದು ವಿಶೇಷ.
- ಹಿತಮಿತ ನೀರು, ಸಾವಯವ ಗೊಬ್ಬರ, ಜೀವಾಮೃತದಿಂದ ಸೇಬು ಗಿಡಗಳ ಸರಿಯಾಗಿ ನಿರ್ವಹಣೆ ಮಾಡಿದರೆ ಗಿಡಗಳ ಜೀವಿತಾವಧಿ ಸುಮಾರು 25 ವರ್ಷವಿರುತ್ತದೆ.
- ಸೇಬು ಕೃಷಿಯನ್ನು ಸವಾಲಾಗಿ ಸ್ವೀಕರಿಸಿ ಕೇವಲ 15 ತಿಂಗಳಲ್ಲೇ ಇಳುವರಿ ಪಡೆಯಲಾದ ಸೇಬು ಹೆಚ್ಚು ರುಚಿಕಟ್ಟಾಗಿದೆ,
- ಹಣ್ಣಿನ ಗಾತ್ರ, ಆಕಾರ, ಬಣ್ಣ ಅತ್ಯಾಕರ್ಷಕವಾಗಿದೆ. ಈ ಸಲ ಹಣ್ಣು ಮಾರಾಟದ ಬಗ್ಗೆ ಯೋಚಿಸಿಲ್ಲ.
- ಮುಂದಿನ ಬೆಳೆ ಬಂದಾಗ ಯೋಚಿಸುವೆ ಎನ್ನುತ್ತಾರೆ.
- ಸೇಬು ಬೆಳೆಯನ್ನು ಗಾಳಿಮಳೆಯಿಂದ ಮತ್ತು ಜಾನುವಾಗಳಿಂದ ಸಂರಕ್ಷಿಸಲು ಪಾಲಿಹೌಸ್ ನಿರ್ಮಿಸಲು ಮತ್ತು ಹೊಲದ ಸುತ್ತ ತಂತಿಬೇಲಿ ಅಳವಡಿಸಲು ಯೋಜಿಸಲಾಗಿದೆ” ಎನ್ನುತ್ತಾರೆ ಅಪ್ಪಾರಾವ ಭೋಸಲೆ.
“ಸಾಂಪ್ರದಾಯಿಕವಾಗಿ ಸೇಬು ಬೆಳೆಯಲು ಬೇಸಿಗೆಯಲ್ಲಿ 21 ರಿಂದ 28 ಡಿಗ್ರಿ ಸೆಲ್ಸಿಯಸ್ ತಾಪಮಾನವಿರಬೇಕು.ಈ ಜಿಲ್ಲೆಯ ಬೇಸಿಗೆ ತಾಪಮಾನ 35 ರಿಂದ 40 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ಸೇಬು ಬೆಳೆಯಲು ಜಿಲ್ಲೆಯ ಹವಾಗುಣ ಸೂಕ್ತವಲ್ಲ. ಆದರೂ ಕೆಲವು ರೈತರು ಸ್ವ-ಇಚ್ಛೆಯಿಂದ ಹೆಚ್‍ಆರ್‍ಎಂಎನ್-99 ತಳಿಯ ಸೇಬು ಬೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಇವರಲ್ಲಿ ಸೇಬು ಕೃಷಿಯ ವಿಧಾನಗಳನ್ನು ಸರಿಯಾಗಿ ಅಳವಡಿಸಿಕೊಂಡ ಅಪ್ಪಾರಾವ ಭೋಸಲೆ ಸೇಬನ್ನು ಯಶಸ್ವಿಯಾಗಿ ಹೊರ ವಾತಾವರಣದಲ್ಲಿ ಬೆಳೆದಿದ್ದಾರೆ. ಸ್ಥಳೀಯ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಝಿಳ್ಳೆ ಮತು ಹಿರಿಯ ಸಹಾಯಕ ನಿರ್ದೇಶಕ ಮಾರುತಿ ಅವರು ತೋಟಕ್ಕೆ ಭೇಟಿ ನೀಡಿ ಸೇಬು ಕೃಷಿಯನ್ನು ಗಮನಿಸಿ ಪ್ರಶಂಸಿಸಿದ್ದಾರೆ. ರೈತರ ದೂರವಾಣಿ ಸಂಖ್ಯೆ:9535812365
ವರದಿ: ಜಿ.ಚಂದ್ರಕಾಂತ, ನಿವೃತ್ತ ಉಪನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. ಕಲಬುರಗಿ.