ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರು ತಮ್ಮ 56 ನೇ ಘಟಿಕೋತ್ಸವದಲ್ಲಿ ಎನ್ ಸಿ ಪಟೇಲ್ ಎಂಬ ಅ ತ್ಯುತ್ತಮ ಕೃಷಿಕರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಯೋಗ್ಯ ವ್ಯಕ್ತಿಗೆ ಯೋಗ್ಯ ಪುರಸ್ಕಾರ ಎನ್ನಿಸಿದೆ. ಶ್ರಿಯುತ ಎನ್ ಸಿ ಪಟೇಲ್ ಇವರು ತಮ್ಮ ಇಡೀ ಜೀವಮಾನವನ್ನೇ ಕೃಷಿಗಾಗಿ ಮುಡಿಪಾಗಿಟ್ಟವರು. ತೋಟಗಾರಿಕಾ ಬೆಳೆಗಳಾದ ಮಾವು, ದ್ರಾಕ್ಷಿ, ದಾಳಿಂಬೆ, ಸೀಬೆ, ನೇರಳೆ ಮುಂತಾದ ಬೆಳೆಗಳನ್ನು ಅಚ್ಚುಕಟ್ಟಾಗಿ ಬೆಳೆಯುತ್ತಿರುವ ಮಾದರಿ ರೈತ.
ನಾಗದಾಸನಹಳ್ಳಿ ಚಿಕ್ಕಕೆಂಪಣ್ಣ ಪಟೇಲ್ (Nagadasanahalli Chikakempanna patel) ಬೆಂಗಳೂರು ಹೊರವಲಯದ ಯಲಹಂಕದ ನಾಗದಾಸನಹಳ್ಳಿ ಎಂಬಲ್ಲಿ ಕೃಷಿ ಕಾಯಕ ಮಾಡುತ್ತಿರುವವರು.ನಿವೃತ್ತಿಯ ನಂತರ ಕೃಷಿಗಿಳಿಯುವವರು, ಸಾಫ್ಟ್‍ವೇರ್ ಬಿಟ್ಟು ಕೃಷಿಗಿಳಿದವರು, ಉತ್ತಮ ಆದಾಯದ ವೃತ್ತಿ-ಉದ್ಯೋಗದಲ್ಲಿದ್ದು ಕೃಷಿಗಿಳಿದವರ ಬಗ್ಗೆ ಅದೆಷ್ಟೋ ಕೇಳಿ ಬರುತ್ತಿದೆ. ಆದರೆ ಕೃಷಿಯನ್ನೇ ಪೂರ್ಣ ಪ್ರಮಾಣದಲ್ಲಿ ಸ್ವೀಕರಿಸಿ ಜೀವಮಾನವನ್ನೇ ಕೃಷಿಯಲ್ಲಿ ತೊಡಗಿಸಿಕೊಂಡು ಯಶ ಕಂಡ ಕೆಲವರಲ್ಲಿ ಒಬ್ಬರು ಎನ್ ಸಿ ಪಟೇಲ್ ರವರು.
ಕೃಷಿಯ ಹಿನ್ನೆಲೆ:
ತಿಂಡಿಯಂತೆ ಲದ್ದಿ – ಸಂಗದಂತೆ ಬುದ್ಧಿ ಎಂಬ ಮಾತನ್ನು ಹಿರಿಯರು ಹೇಳುವುದಿದೆ. ಎನ್ ಸಿ ಪಟೇಲ್ ರವರು ಎಳೆ ವಯಸ್ಸಿನಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿರುತ್ತಾರೆ. ಒಂದೆಡೆ ವಿಧ್ಯಾರ್ಜನೆ, ಅದರ ಜೊತೆಗೆ ಮನೆ ಹಿರಿಯರ ಜೊತೆ ಬೇಸಾಯ ಕೆಲಸದಲ್ಲೂ ತೊಗಡಿಸಿಕೊಂಡಿರುತ್ತಾರೆ. ಆ ಸಮಯದಲ್ಲಿ ತಮ್ಮ ಹಿರಿಯರು ಪಡುತ್ತಿದ್ದ ಕಷ್ಟಗಳನ್ನು ಮಕ್ಕಳೂ ಅನುಭವಿಸಿರುತ್ತಾರೆ. ಈ ಕಷ್ಟಗಳಿಂದ ನಾವು ಹೇಗೆ ಬಚಾವಾಗಬಹುದು, ಅಭಿವೃದ್ದಿಯಾಗಬಹುದು ಎಂಬ ಯೋಚನೆ ಅದೇ ಸಮಯದಲ್ಲಿ ಮಕ್ಕಳ ಮನಸ್ಸಿನಲ್ಲೂ ಮೂಡುತ್ತಿರುತ್ತದೆ. ಇಂತಹ ಕೆಲವು ಮಕ್ಕಳು ಮುಂದೆ ತಮ್ಮ ಹಿರಿಯರು ಮಾಡುತ್ತಿದ್ದ ವೃತ್ತಿಯನ್ನು ಇನ್ನೂ ಉತ್ತಮವಾಗಿ ಮುಂದುವರಿಸಿಕೊಂಡು ಹೋಗುವಲ್ಲಿ ಸಫಲರಾಗುತ್ತಾರೆ.
- ಎನ್ ಸಿ ಪಟೇಲ್ ರವರ ತಂದೆ, ತಾಯಿ (ನಾಗದಾಸನ ಹಳ್ಳಿ ಚಿಕ್ಕ ಕೆಂಪಣ್ಣ ಮತ್ತು ಮತ್ತು ಮುನಿಯಮ್ಮ)ಮೂಲತಃ ಕೃಷಿಕರು.
- ರಾಗಿ, ತೊಗರಿ, ಆಲೂಗಡ್ಡೆ, ಟೊಮೆಟೋ, ದ್ರಾಕ್ಷಿ ಮುಂತಾದ ಬೆಳೆಗಳನ್ನು ಬೆಳೆಸುತ್ತಿದ್ದರಂತೆ.
- ಆಗ ನಾಗದಾಸನಹಳ್ಳಿ ಎಂದರೆ ತೀರಾ ಹಿಂದುಳಿದ ಹಳ್ಳಿ. ರಸ್ತೆಗಳು ಇರಲಿಲ್ಲ.
- ಎಸ್.ಎಸ್.ಎಲ್.ಸಿ.ಯಲ್ಲಿರುವಾಗಲೇ ಕೃಷಿಗೆ ಧುಮಿಕಿಯೇ ಬಿಟ್ಟರಂತೆ.
- ಆ ಸಮಯದ ತನಕ ಎತ್ತುಗಳ ಮೂಲಕ ಹೊಲದ ಉಳುಮೆ ಮಾಡುತ್ತಿದ್ದರಂತೆ.
- ವಿದ್ಯುತ್ ಇರಲಿಲ್ಲ. ಕೊಳವೆ ಬಾವಿ ಇರಲಿಲ್ಲ. ಬಾವಿ ತೋಡಿ, ಡೀಸೆಲ್ ಪಂಪ್ ಮೂಲಕ ನೀರೆತ್ತಿ ಬೆಳೆಗಳಿಗೆ ಉಣಿಸುತ್ತಿದ್ದರು.
- ಈ ಎಲ್ಲಾ ಕಷ್ಟಗಳನ್ನು ಕಂಡ ಮಗ ಉಳುಮೆಗೆ ಟ್ರಾಕ್ಟರ್ ತಂದರೆ ಹೇಗೆ ? ನೀರೆತ್ತಲು ವಿದ್ಯುತ್ ಪಂಪ್ ಯಾಕೆ ಬಳಸಬಾರದು ?
- ಈ ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಅಧಿಕ ಆದಾಯದ ಬೇರೆ ಬೇರೆ ಬೆಳೆಗಳನ್ನು ಬೆಳೆಸಬಾರದೇಕೆ ಎಂದು ತನ್ನ ಯೋಚನೆಯನ್ನು ವಿಸ್ತರಿಸತೊಡಗಿದ್ದರಂತೆ.
- ಪದವಿ ( ಬಿ ಎ ) ಮುಗಿದ ತಕ್ಷಣ ಬಿ.ಡಿ.ಸಿ.ಸಿ. ಬ್ಯಾಂಕ್ ನಿಂದ ಸಾಲ ಮಾಡಿ ಟ್ರಾಕ್ಟರ್ ತಂದರಂತೆ.
- ಅದೇ ರೀತಿ 10,000 ಸಾಲ ಪಡೆದು ಇಂಡೋ ಡ್ಯಾನಿಶ್ ಡೈರಿ ಪ್ರಾಜೆಕ್ಟ್ ನ ಯೋಜನೆಯಂತೆ ಹಸು ಸಾಕಾಣಿಕೆ ಪ್ರಾರಂಭಿಸಿದರಂತೆ.
- ಕೋಳಿ ಸಾಕಣೆ ಮಾಡಿದರಂತೆ. ಆದರೆ ಹೈನುಗಾರಿಕೆಯಲ್ಲಿ, ಕೋಳಿ ಸಾಕಣೆಯಲ್ಲೂ ಕೈಸುಟ್ಟುಕೊಳ್ಳಬೇಕಾಯಿತಂತೆ.
ತೋಟಗಾರಿಕಾ ಬೆಳೆಗಳಿಂದ ಮೇಲೆದ್ದರು:
- ಕೃಷಿ ಬೆಳೆಗಳನ್ನು ಬಿಟ್ಟು ತೋಟಗಾರಿಕಾ ಬೆಳೆಗಳನ್ನು ಬೆಳೆಸಲಾರಂಭಿಸಿದ ತರುವಾಯ ಕೃಷಿಯಲ್ಲಿ ಲಾಭ ಕಂಡರು.
- ಎನ್. ಸಿ. ಪಟೇಲ್ ರ ಮೂಲ ಹೆಸರು ಪಟಾಲಪ್ಪ. ಇದು ಇವರ ಮನೆ ದೇವರ ಹೆಸರು.
- ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಪಟಾಲಪ್ಪ ಹೆಸರನ್ನು ಪಟೇಲ್ ಎಂದು ಬದಲಾಯಿಸಿಕೊಂಡರಂತೆ.
- ಇವರು ಪದವೀಧರರಾಗಿ ನಂತರ ಎಂ.ಎ. ಸಹ ಮಾಡಿದವರು. ಜೊತೆಗೆ ಕಾನೂನು ಪದವಿಯನ್ನೂ ಮಾಡಿ ವಕೀಲಿ ವೃತ್ತಿ ಪ್ರಾರಂಭಿಸಿದರು.
- ಕೃಷಿಯ ತುಡಿತದಿಂದ ಅದನ್ನು ಬಿಟ್ಟುಮರಳಿ ಕೃಷಿಗೆ ಇಳಿದರು.
- ಯಾವ ವೃತ್ತಿ ಅವನ ಮನೋಸ್ಥಿತಿಗೆ ಒಪ್ಪಿಗೆಯಾಗುವುದೋ ಅದರಲ್ಲಿ ಮಾತ್ರ ಮುಂದುವರಿಯಲು ಸಾಧ್ಯ.
- ಒತ್ತಾಯದಲ್ಲಿ ಯಾವುದನ್ನು ಮುಂದುವರಿಸಲೂ ಆಗುವುದಿಲ್ಲ.
- ಚಿಕ್ಕ ವಯಸ್ಸಿನಲ್ಲಿ ಕೆಲವು ಗಣ್ಯ ವ್ಯಕ್ತಿಗಳ ಸಹವಾಸ ಮಾಡಿದರು. ಇವರು ಹಿಂದೆಯೂ ರಾಜಕೀಯದಿಂದ ಬಲು ದೂರ.
- ಈಗಲೂ ಹಾಗೆ. ಹಾಗೆಂದು ಎಲ್ಲಾ ಪಕ್ಷದ, ಎಲ್ಲಾ ನಾಯಕರುಗಳ ಸಂಪರ್ಕವನ್ನು ತನ್ನ ಕೃಷಿ ವೃತ್ತಿಯ ಸಾಧನೆಯಿಂದ ಗಳಿಸಿದ್ದಾರೆ.
- ತೋಟಗಾರಿಕಾ ಜನಕರೆನಿಸಿದ ಡಾ. ಎಂ.ಎಚ್. ಮರಿಗೌಡರವರು, ದ್ರಾಕ್ಷಿ ತಜ್ಞರು, ದ್ರಾಕ್ಷಿ ಬೆಳೆ ವಿಶೇಷ ಅಧಿಕಾರಿಗಳಾಗಿದ್ದ ಶ್ರೀ ಗೋಪಾಲರವರು, ಡಾ. ಹಿತ್ತಲಮನಿ, ಹಣ್ಣುಗಳ ಮಾರುಕಟ್ಟೆ ತಜ್ಞರಾದ ಬಿ.ಎ. ಚೆನ್ನಪ್ಪ ಗೌಡ,ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಉಪಕುಲಪತಿಗಳು, ವಿಸ್ತರಣಾ ನಿರ್ದೇಶಕರು, ಹಾಗೂ ವಿಜ್ಞಾನಿಗಳ ಸಹವಾಸ ಇವರನ್ನು ವೃತ್ತಿಯಲ್ಲಿ ಮುಂದಕ್ಕೆ… ಮುಂದಕ್ಕೆ….. ಮತ್ತೂ ಮುಂದಕ್ಕೆ ಕರೆದೊಯ್ಯಿತು.
- ಉತ್ತಮರ ಸಂಗದಿಂದ ಇಂದು ಪಟೇಲರೇ ತೋಟಗಾರಿಕಾ ತಜ್ಞರಾದರು. ಇವರ ತಜ್ಞತೆಯ ಮುಂದೆ ಯಾರೂ ತಲೆ ತಗ್ಗಿಸಲೇ ಬೇಕು.
ಮಲ್ಲಿಕಾ ಮಾವು:
- ಎನ್ ಸಿ ಪಟೇಲ್ ರವರು 1980ನೇ ಇಸವಿಯಲ್ಲಿ ಆಗ ತಾನೇ ಬಿಡುಗಡೆಯಾದ ಮಲ್ಲಿಕಾ (mallika hubrid mango) ಮಾವನ್ನು ಸುಮಾರು 10 ಎಕ್ರೆ ಹೊಲದಲ್ಲಿ ಬೆಳೆಸಿದ್ದಾರೆ.
- ನೀಲಗಿರಿ ಮರಗಳಿದ್ದ ಹೊಲವನ್ನು ಮಾವಿಗೆ ಬದಲಾಯಿಸಲು ಸಹ ಪ್ರೇರಣೆ ಇವರ ಮಿತ್ರರು.
- ಅದೇ ರೀತಿಯಲ್ಲಿ 15 ಎಕ್ರೆಯಲ್ಲಿ ದ್ರಾಕ್ಷಿ ಬೇಸಾಯ, 5 ಎಕ್ರೆಯಲ್ಲಿ ಸೀಬೆ, 1 ಎಕ್ರೆಯಲ್ಲಿ ನೇರಳೆ, ದಾಳಿಂಬೆ ಮುಂತಾದ ಬೆಳೆಗಳನ್ನು ಬೆಳೆಸಿದ್ದಾರೆ.
- ಪಟೇಲರ ಯಾವತ್ತೂ ಯೋಚನೆ ಹೊಸ ಹೊಸ ಬೆಳೆಗಳನ್ನು ಬೆಳೆಯುವುದು.
- ಬರೇ ಬೆಳೆಯುವುದು ಮಾತ್ರವಲ್ಲ, ಅದರಲ್ಲಿ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವರು.
- ಆ ಸಮಯದಲ್ಲಿ ಅಂತಹ ರುಚಿಕಟ್ಟಿನ ಮಾವೇ ಇರಲಿಲ್ಲ.
- ಅದನ್ನು ಸ್ನೇಹಿತರಿಗೆ ಸಹಚರ ರೈತರಿಗೆ ಹಂಚಿ ಅವರೆಲ್ಲಾ ಮಲ್ಲಿಕಾ ಮಾವು ಬೆಳೆಯುವಂತೆ ಪ್ರೇರೇಪಿಸಿದವರು.
- ಒಂದು ರೀತಿಯಲ್ಲಿ ಮಲ್ಲಿಕಾ ಮಾವಿನ ತಳಿಯ ಪ್ರಚಾರಕ್ಕೆ ನೆರವಾದವರೇ ಇವರೆಂದರೆ ಅತಿಶಯೋಕ್ತಿಯಲ್ಲ.
- ಇದೇ ರೀತಿ ಉತ್ತರ ಭಾರತದಲ್ಲಿ ಬೆಳೆಯುತ್ತಿದ್ದ ದಶೇರಿ, ಆಮ್ರಪಾಲಿ, ಮಾವನ್ನೂ ತಂದು ಬೆಳೆಸಿದ ಮೊದಲಿಗರು.
ಹನಿ ನೀರಾವರಿಗೆ ಸಬ್ಸಿಡಿ ಮತ್ತು ಎನ್ ಸಿ ಪಟೇಲ್ ರವರ ತೋಟ:
- ಎನ್ ಸಿ ಪಟೇಲ್ ರವರ ಮಾವಿನ ಬೇಸಾಯ ಭಾರತದ ಸಮಸ್ತ ರೈತರಿಗೆ ಅನುಕೂಲವಾಗುವಂತ ಒಂದು ಕೊಡುಗೆ ಕೊಟ್ಟಿದೆ.
- ಒಮ್ಮೆ ಬೆಂಗಳೂರಿನ ಜಿಂದಾಲ್ ಫ್ಯಾಕ್ಟರಿಗೆ ಯಾವುದೋ ಕಾರ್ಯಕ್ರಮಕ್ಕೆ ಆಗಿನ ಭಾರತ ಸರಕಾರದ ಉಪಪ್ರಧಾನಿಗಳಾದ ಶ್ರೀ ದೇವೀಲಾಲ್‍ರವರು ಆಗಮಿಸಿದ್ದರು.
- ಆ ಸಮಯದಲ್ಲಿ ಮಿತ್ರರಾದ ಪ್ರೊಫೆಸರ್ ನರಸಿಂಹಯ್ಯರವರ ಸಲಹೆಯಂತೆ ಅವರ ಜೊತೆ ಕೆಲವು ಮಾವಿನ ಹಣ್ಣುಗಳನ್ನು ಹಿಡಿದುಕೊಂಡು ಅಲ್ಲಿಗೆ ಪಟೇಲರುವ ಹೋಗಿದ್ದರಂತೆ.
- ಮಾವಿನ ಹಣ್ಣನ್ನು ತಿಂದ ದೇವೀಲಾಲ್‍ರವರು, ಮರುದಿನ ಇಂತಹ ಮಾವು ಬೆಳೆಯುವ ತೋಟಕ್ಕೊಮ್ಮೆ ಹೋಗಬೇಕು ಎಂದು ಇಚ್ಛೆಪಟ್ಟದ್ದೂ ಆಯಿತು.
- ಮರುದಿನ ಬಂದದ್ದೂ ಆಯಿತು. ಬಂದು ಮಾವಿನ ತೋಟವೆಲ್ಲಾ ಸುತ್ತಾಡಿ, ನೀರಾವರಿಗಾಗಿ ಮಾಡಿದ ಹನಿ ನೀರಾವರಿ ವ್ಯವಸ್ಥೆಯನ್ನು ಕೈಯಲ್ಲಿ ಹಿಡಿದು ನೋಡಿ, ಅಲ್ಲೇ ಒಂದು ಮಹತ್ವದ ನಿರ್ಧಾರ ಕೈಗೊಂಡರು.
- ಆ ಸ್ಥಳದಲ್ಲೆ ಪಾರ್ಲಿಮೆಂಟಿನಲ್ಲಿ, ಚರ್ಚಿಸದೆ, ಅಗಿನ ಪ್ರಧಾನಮಂತ್ರಿಗಳಾಗಿದ್ದ ವಿ ಪಿ ಸಿಂಗ್ ಅವರಲ್ಲೂ ಕೇಳದೆ ಸಮಸ್ತ ಭಾರತ ದೇಶದಲ್ಲಿ ನೀರುಳಿತಾಯ ಮಾಡಬಲ್ಲ ಹನಿ ನೀರಾವರಿಗೆ ಸಬ್ಸಿಡಿ ಕೊಡಬೇಕು ಎಂದರಂತೆ. (ಆಗ ಮಾವಿನ ಬೆಳೆಗೆ ಹನಿ ನೀರಾವರಿ ಅಳವಡಿಸಿಕೊಂಡವರಲ್ಲಿ ಇವರೇ ಮೊದಲಿಗರು)
- ಅಲ್ಲಿಂದ ಪ್ರಾರಂಭವಾದ ಈ ಸಹಾಯಧನ ವ್ಯವಸ್ಥೆ ಇಂದಿಗೂ ಮುಂದುವರಿದಿದೆ.
- ಬರೇ ಇಷ್ಟೇ ಅಲ್ಲ ಬಹುತೇಕ ರಾಜಕೀಯ ಮುಖಂಡರುಗಳು, ಬೇರೆ ಬೇರೆ ಸಂಶೋಧನಾ ಕೇಂದ್ರಗಳ ವಿಜ್ಞಾನಿಗಳು ಪಟೇಲರ ತೋಟಕ್ಕೆ ಭೇಟಿ ನೀಡಿರುತ್ತಾರೆ.
- ಹೊರ ದೇಶಗಳ ಜನರೂ ಸಹ ಬಂದಿದ್ದಾರೆ.
ಇದೆಲ್ಲಾ ಯಾಕೆಂದರೆ ಇವರು ಮಾವು, ದ್ರಾಕ್ಷೆ, ಪೇರಳೆ ಮುಂತಾಧ ಬೆಳೆಗಳಲ್ಲಿ ಕೈಗೊಂಡಿರುವ ಹೊ ಹೊಸ ಪ್ರಯೋಗಗಳನ್ನು ಅರಿಯಲು.
ಇವರು ಮಾವಿನಲ್ಲಿ ಮೊದಲ ಬಾರಿಗೆ ಇನ್‍ಸಿಟು ಗ್ರಾಫ್ಟಿಂಗ್ (Insitu grafting or Changing of variety) ಪದ್ಧತಿಯನ್ನು ಪ್ರಾರಂಭಿಸಿದರು. ಇದು ಸಾವಿರಾರು ರೈತರಿಗೆ ತಮ್ಮ ಹಳೇ ತೋಟ ಪುನಃಶ್ಚೇತನಕ್ಕೆ ನೆರವಾಗಿದೆ.
ಮಾವು ಪೇರಳೆಯಲ್ಲಿ ಪ್ರೂನಿಂಗ್:
- ಮಾವು ಪೇರಳೆಯಲ್ಲಿ ಪ್ರೂನಿಂಗ್ (Punining) ಮಾಡುವುದನ್ನು ಸಹ ಇವರು ಮೊದಲಾಗಿ ಈ ಭಾಗಕ್ಕೆ ಪರಿಚಯಿಸಿದ್ದಾರೆ.
- ವರ್ಷ ವರ್ಷವೂ ಏಕ ಪ್ರಕಾರವಾಗಿ ಹೂಬಿಡಲು ಮತ್ತು ಮರದ ಉತ್ತಮ ಬೆಳವಣಿಗೆಗೆ ನೆರವಾಗಲು ಪ್ರೂನಿಂಗ್ ಅಗತ್ಯ.
- ಮಾವಿಗೆ ಪತ್ರಸಿಂಚನ ಬೇಕು. ಅದೇ ರೀತಿ ಹೂ ಬಿಡುವಾಗ ಕಾಯಿಗಳಿಗೆ ಸಿಂಪರಣೆ ಬೇಕಾಗುತ್ತದೆ.
- ಆ ಸಮಯದಲ್ಲಿ ಮರದ ಒಳಬಾಗ ಪ್ರೂನಿಂಗ ಮಾಡಿದರೆ ಎಲ್ಲಾ ಗೆಲ್ಲುಗಳಿಗೂ ಗಾಳಿ ಬೆಳೆಕು ಬಿದ್ದು ಇಳುವರಿ ಹೆಚ್ಚುತ್ತದೆ, ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ಕಂಡುಕೊಂಡಿದ್ದಾರೆ.
- ಎನ್ ಸಿ ಪಟೇಲ್ ರವರು ತಮ್ಮ ತೋಟದ ಮಾವಿನ ಹಣ್ಣುಗಳನ್ನು ತಾವೇ ಹಣ್ಣು ಮಾಡಿ, (ಎಥಿಲಿನ್ ಸುರಕ್ಷಿತ ಹಾರ್ಮೋನು ಉಪಚಾರ)ತಾವೇ ಪ್ಯಾಕಿಂಗ್ ಮಾಡಿ ಭಾಗಶಃ ನೇರ ಮಾರುಕಟ್ಟೆಯನ್ನೇ ಮಾಡುತ್ತಾರೆ ಎನ್ನಬಹುದು.
- ಕರುನಾಡ ಮಾವು ಎಂಬ ಹೆಸರಿನಲ್ಲಿ ಈ ಮಾವಿನ ಹಣ್ಣುಗಳು ಮಾರಾಟವಾಗುತ್ತವೆ. ಇವೆಲ್ಲವು ಪಟೇಲರ ಸಾಧನೆ.
- ನಾನು ಹೀಗೆ ಮಾಡುತ್ತೇನೆ, ನೀವೂ ಮಾಡಿ, ಲಾಭವಾಗುತ್ತದೆ ಎಂದು ಇತರ ಬೆಳೆಗಾರರಿಗೆ ತಿಳಿಸುವ ಕ್ರಮ.
- ಇವರ ಪ್ರಯತ್ನದಿಂದಾಗಿ ಕೋಲ್ಡ್ ಸ್ಟೋರೇಜ್ ಸದಸ್ಯರ ಸಂಖ್ಯೆ ಹೆಚ್ಚಳವಾದುದೂ ಅಲ್ಲದೆ, ಹಾಪ್‍ಕಾಮ್ಸ್‍ನಂತಹ ಸಂಸ್ಥೆ ಅಭಿವೃದ್ಧಿಯಾಗಲು ಸಹಕಾರಿಯಾಯಿತು.
- ಬಟರ್ ಫ್ರೂಟ್ ಕೃಷಿಯಲ್ಲೂ ಇವರು ತೊಡಗಿಸಿಕೊಂಡಿದ್ದಾರೆ.
- ಪಟೇಲರು ಒಂದು ಎಕ್ರೆ ಜಾಗದಲ್ಲಿ ನೇರಳೆ ಬೆಳೆ ಬೆಳೆಸಿದ್ದಾರೆ.
- 2001ನೇ ಇಸವಿಯ ಸುಮಾರಿಗೆ ಒಂದಷ್ಟು ನೇರಳೆ ಗಿಡ ನೆಟ್ಟರಂತೆ. ಅದರಲ್ಲಿ 2005ಕ್ಕೆ ಒಂದು ಮರದಲ್ಲಿ ಉತ್ತಮ ಇಳುವರಿ ಬಂದಿತಂತೆ.
- ಉಳಿದವು ಏನೂ ಖುಷಿ ಕೊಡಲಿಲ್ಲ. ಮೊದಲೇ ಮಾವಿನಲ್ಲಿ ಇನ್‍ಸಿಟು ಕಸಿ ಮಾಡಿ ಅನುಭವ ಹೊಂದಿದ್ದ ಪಟೇಲ್ ರವರು,
- ಎಲ್ಲಾ ಅನುತ್ಪಾದಕ ಮರಗಳನ್ನು ಟಾಪ್ ವರ್ಕಿಂಗ್‍ಗಾಗಿ ಕಡಿದು ಉತ್ತಮ ಇಳುವರಿ ಕೊಡುತ್ತಿದ್ದ ಮರದ ಗೆಲ್ಲನ್ನು ಅದಕ್ಕೆ ಕಸಿ ಮಾಡಿದರು.
- ಹೀಗೆ ಒಟ್ಟು 75 ಮರಗಳನ್ನು ಬೆಳೆಸಿದ್ದಾರೆ.
- ಕಳೆದ ಮೂರು ವರ್ಷಗಳಿಂದ ಇದರಲ್ಲಿ ಇಳುವರಿ ಬರುತ್ತಿದ್ದು, ಸರಾಸರಿ ಕಿಲೋಗೆ 150 ರೂ. ನಂತೆ ಬೆಂಗಳೂರು ನಗರದಲ್ಲಿ ಮಾರಾಟವಾಗುತ್ತಿದೆ.
- ಒಂದು ಎಕ್ರೆ ನೇರಳೆ ಬೇಸಾಯದಲ್ಲಿ ವರ್ಷಕ್ಕೆ 1 ರಿಂದ 1.5 ಲಕ್ಷ ಆದಾಯ ಕಡಿಮೆ ನಿರ್ವಹಣೆಯಲ್ಲಿ ಗಳಿಸಬಬಹುದು.
- ಎನ್ ಸಿ ಪಟೇಲ್ ರವರು ಹಿಂದೆ ಬೆಂಗಳೂರು ನೀಲಿ ದ್ರಾಕ್ಷಿ ಬೆಳೆಸುತ್ತಿದ್ದರು. ಈಗಲೂ ಬೆಳೆಸುತ್ತಿದ್ದಾರೆ.
- 1984ನೇ ಇಸವಿಯಲ್ಲಿ ಶ್ರೀ ಬಿ. ಗೋಪಾಲ್, ಕರ್ನಾಟಕದಲ್ಲಿ ದ್ರಾಕ್ಷಿ ಬೇಸಾಯ ಅಭಿವೃದ್ಧಿಯ ವಿಶೇಷದ ಅಧಿಕಾರಿಯವರ ಸಂಪರ್ಕವಾಯಿತು.
- ಅವರು ಪಟೇಲರೂ ಸೇರಿದಂತೆ ಕೆಲವು ದ್ರಾಕ್ಷಿ ಬೆಳೆಗಾರರನ್ನು ಹೊಸ ತಳಿ ಪರಿಚಯಕ್ಕಾಗಿ ಹೈದರಾಬಾದ್‍ಗೆ ಕರೆದುಕೊಂಡು ಹೋದರಂತೆ.
- ಅಲ್ಲಿ ಹೋಗಿ ನೋಡಿದ್ದೇ ತಡ, ಅಲ್ಲಿ ಬೆಳೆಯುತ್ತಿದ್ದ ದಿಲ್‍ಕುಶ್ ಸೀಡ್‍ಲೆಸ್ ದ್ರಾಕ್ಷಿ ಸಸಿ ತಂದು ಇಲ್ಲಿ ಬೆಳೆಸಲು ಪ್ರಾರಂಭಿಸಿದರು;
- ಇದಕ್ಕೆಲ್ಲಾ ಪ್ರೇರಣೆ ಡಾ.ಮರಿಗೌಡರು. ಆನಂತರ ದ್ರಾಕ್ಷಿಯಲ್ಲಿ ಬಂದಂತಹ ಬೇರೆ ಬೇರೆ ಹೊಸ ತಳಿಗಳನ್ನು ಬೆಳೆಸಿದರು.
- ಶರದ್ ಸೀಡ್‍ಲೆಸ್,ರೆಡ್ ಪ್ಲೇಮ್ ಈಗ ರೆಡ್ ಗ್ಲೋಬ್, ದ್ರಾಕ್ಷಿಯನ್ನು ಬೆಳೆಸುತ್ತಾರೆ.
- ದ್ರಾಕ್ಷಿ ಬೆಳೆಸಲು ಪ್ರಾರಂಭಿಸಿದ ನಂತರ ನನ್ನ ಸಾಲಗಳು ತೀರುವಳಿಯಾಯಿತು.
- ಹನಿ ನೀರಾವರಿ, ವೈಜ್ಞಾನಿಕ ಬೇಸಾಯ ಕ್ರಮ, ತಜ್ಞರ ಸಲಹೆ ಪ್ರಕಾರದಲ್ಲಿ ಗೊಬ್ಬರ ನೀಡಿದ ಪರಿಣಾಮದಿಂದ ಇವರು ಬೆಳೆದ ದ್ರಾಕ್ಷಿಯ ಹಣ್ಣು ಸವಿದ ಎಲ್ಲಾ ಗಣ್ಯಾತಿಗಣ್ಯರೂ ಭಾರೀ ಖುಷಿಪಟ್ಟಿದ್ದಾರೆ ಎನ್ನುತ್ತಾರೆ.
ಪಟೇಲ್ ಪಸಂದ್ ಹೊಸ ತಳಿ.
- ನಮ್ಮ ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಅದೆಷ್ಟೋ ಸಂಕರಣಗಳು ನಡೆಯುತ್ತವೆ. ಅದನ್ನು ನಾವು ಗಮನಿಸುವುದಿಲ್ಲ.
- ಪಟೇಲರ ತೋಟದಲ್ಲಿ ಇಂತಹ ಒಂದು ನೈಸರ್ಗಿಕ ತಳಿ ಸೃಷ್ಟಿ ಆಗಿದೆ. ಟಾಪ್ ವರ್ಕಿಂಗ್ ಮಾಡದೆ ಉಳಿಸಿದ ಒಂದು ವಾಟೆ ಗಿಡ ಹಾಗೇ ಉಳಿದಿತ್ತು.
- ಕಾಲಾನುಕ್ರಮದಲ್ಲಿ ಅದು ಹೂ ಬಿಟ್ಟಿತು. ಕಾಯಿಯಾಯಿತು.
- ಆ ಹಣ್ಣುಗಳನ್ನು ಸತತ 3-4 ವರ್ಷ ಪರೀಕ್ಷಿಸಿದಾಗ ರುಚಿ, ಬಣ್ಣ, ತಿರುಳು, ಪರಿಮಳ ಇತರ ಆಯ್ದ ತಳಿಗೆ ಸರಿಸಾಟಿಯಾಗಿತ್ತು.
- ವಿಜ್ಞಾನಿಗಳಿಗೆ ಸೇರಿದಂತೆ ಕೆಲವರಿಗೆ ಅದನ್ನು ನೀಡ ಅವರ ಅಭಿಪ್ರಾಯವನ್ನೂ ಒಟ್ಟು ಹಾಕಿದರು.
- ಎಲ್ಲರ ಅಭಿಪ್ರಾಯ ಒಂದೇ ಆಗಿತ್ತು. ಇದನ್ನು ಒಂದು ಹೊಸ ತಳಿಯೆಂದು ಗುರುತಿಸಬಹುದು ಎಂಬುದು.
- ಇದಕ್ಕೆ ಪಟೇಲ್ ಪಸಂದ್ ಎಂಬ ನಾಮಕರಣವನ್ನೂ ಮಾಡಲಾಯಿತು.
- ಕಡು ಕೇಸರಿ ಬಣ್ಣದ, ನೀರಿಲ್ಲದ, ಶ್ರೇಷ್ಠ ರುಚಿಯ ಪರಿಮಳದ ತಳಿ ಮಾವಿನ ತಳಿ ವೈವಿಧ್ಯಕ್ಕೆ ಪಟೇಲರ ಕೊಡುಗೆಯಾಗಿದೆ.
ಪಟೇಲರದ್ದು ವಿಶಿಷ್ಟ ವ್ಯಕ್ತಿತ್ವ
- ಸರಳ ಸಜ್ಜನ ವ್ಯಕ್ತಿ. ಹೆಸರು ಹೇಳಿದಾಕ್ಷಣ ಮೈ ನವಿರೇಳುವಷ್ಟು ಉನ್ನತ ವ್ಯಕ್ತಿತ್ವ.
- ಮಾತುಗಳು ತಳಮಟ್ಟದ ಕೃಷಿಕರ ಏಳಿಗೆಯ ಬಗ್ಗೆಯೇ. ಉಪಕಾರಿ ಮನೋಭಾವದವರು.
- ಇವರು ಯಾವುದೇ ಕೃಷಿಯನ್ನೂ ಪಕ್ಕಾ ವ್ಯಾವಹಾರಿಕವಾಗಿ ಮಾಡಿಲ್ಲ.
- ಅಂದರೆ ಮಲ್ಲಿಕಾ ಬೆಳೆಸಿ ನರ್ಸರಿ ಮಾಡಿ ಸಸಿ ಮಾರಾಟ, ನೇರಳೆ ಸಸಿ ಮಾರಾಟ ಹೀಗೆ ತಾನು ಬೆಳೆಸಿದ ಬೆಳೆಗಳ ಸಸ್ಯೋತ್ಪಾದನೆ ಮಾಡಿ ಮಾರಾಟ ಮಾಡಿ ಹಣ ಸಂಪಾದಿಸಲಿಲ್ಲ.
- ಅದನ್ನು ಉಚಿತವಾಗಿ ಇತರರಿಗೆ ಹಂಚಿ ಅದರ ಪ್ರಸಾರಕ್ಕೆ ನೆರವಾದವರು.
- ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೀಗೆ ಹಲವಾರು ಕಡೆ ಪಟೇಲರನ್ನು ನಿತ್ಯ ಸ್ಮರಿಸುವ ಹಲವಾರು ಕೃಷಿಕರಿದ್ದಾರೆ.
- ಪಟೇಲರು ಸೋತ ಕೃಷಿಕನಿಗೆ ನೀವು ಹೇಗೆ ಸೋತಿರಿ ಹೇಗೆ ಗೆಲ್ಲಬಹುದು ಎಂದು ಸಲಹೆ ನೀಡಿ ಅವರ ಏಳಿಗೆ ಬಯಸುವವರು.
- ದೇವರಾಜ ಅರಸುರವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಮಿತ್ರರಾದ ದ್ವಾರಕೀನಾಥ್ ಅವರು ನೀವು MA LLB ಮಾಡಿದವರು. ವಿಧ್ಯಾವಂತರು ರಾಜಕೀಯಕ್ಕೆ ಬೇಕು. ನಿಮ್ಮನ್ನು ರಾಜ್ಯಸಭಾ ಸದಸ್ಯ ಮಾಡುತ್ತೇವೆ ಎಂದು ಆಹ್ವಾನ ನೀಡಿದ್ದರು.
- ಆದರೆ ಪಟೇಲರು ನನಗೆ ರಾಜಕೀಯ ಬೇಡ. ಬೇಸಾಯವೇ ಆಗಬಹುದು ಎಂದು ಆ ಕಡೆಗೆ ಯಾವ ಮನಸ್ಸೂ ಮಾಡಿರಲಿಲ್ಲ.
ಕೃಷಿಕರಿಗೆ ಕಿವಿಮಾತು
- ಮುಂದಿನ ದಿನಗಳಲ್ಲಿ ನೀರಿನ ಕೊರತೆ ಇನ್ನೂ ತೀವ್ರವಾಗುವ ಎಲ್ಲಾ ಸಾಧ್ಯತೆಗಳಿವೆ.
- ಆ ವಿಷಮ ಸನ್ನಿವೇಶಗಳನ್ನು ಎದುರಿಸಲು ನಾವು ಸಿದ್ಧತೆ ಮಾಡಿಕೊಳ್ಳಬೇಕು.
- ಮಳೆ ನೀರಿನ ಸದ್ಬಳಕೆ, ಹನಿ ನೀರಾವರಿ, ಆಯಾ ಭೂಮಿಗೆ ಸೂಕ್ತವಾದ ಬೆಳೆ ಬೆಳೆಸುವುದೊಂದೇ ಬರಗಾಲದಿಂದ ಬಚಾವಾಗುವ ಉಪಾಯ.
- ಅನ್ನ ಹಾಕಿದ ಮನೆ ಕೆಡಲ್ಲ , ಗೊಬ್ಬರ ಹಾಕಿದ ಹೊಲ ಕೆಡಲ್ಲ.
- ಇದು ಪಟೇಲರು ಅನುಭವದ ಮಾತು. ಕೃಷಿ ಹೇಳುವಷ್ಟು ಸರಳ ಅಲ್ಲ.
- ಇತರ ವ್ಯವಹಾರಗಳಂತೆ ಈವತ್ತಿನಿಂದ ನಾಳೆಗೆ ಇದು ಏನನ್ನೂ ಕೊಡಲಾರದು.
- ರೈತನ ಪರಿಶ್ರಮದ ಪರೀಕ್ಷೆ ಆದ ನಂತರವೇ ಪ್ರತಿಫಲ. ಪರಿಶ್ರಮಕ್ಕೆ ಭೂಮಿತಾಯಿ ಪ್ರತಿಫಲ ಕೊಟ್ಟೇ ಕೊಡುತ್ತಾಳೆ.
- ವಾತಾವರಣ, ನೀರು, ಮಾರುಕಟ್ಟೆ ಮುಂತಾದ ಅನಿಶ್ಚಿತತೆಗಳು ಕೃಷಿಕನಿಗೆ ಸವಾಲಾಗಿ ಇದೆ.
- ಇದಕ್ಕೆಲ್ಲಾ ಧೃತಿಗೆಡದೆ ಸೋಲಿನ ಮೆಟ್ಟಲೇರುತ್ತಾ ಗೆಲುವಿನ ಗುರಿ ಸಾಧಿಸುವ ಛಲ ಇದ್ದರೆ ಮಾತ್ರ ಕೃಷಿ ಕೈಹಿಡಿಯುತ್ತದೆ.
- ನಾನು ಇಂದಿಗೂ ವ್ಯವಸಾಯವೆಂಬ ವೃತ್ತಿಯಲ್ಲಿ ಜೂಜಾಡುತ್ತಿದ್ದೇನೆ.
- ಸೋಲನ್ನು ಗೆಲ್ಲುವ ಧೈರ್ಯ ಇದ್ದರೆ ಕೃಷಿ ಒಳ್ಳೆಯದು.
- ಯಾರಿಗೂ ಅಡಿಯಾಳಾಗಿ ಇರಬೇಕಾಗಿಲ್ಲ. ಹೆಸರು ಕೊಳಕು ಮಾಡಿಕೊಳ್ಳಬೇಕಾಗಿಲ್ಲ.
- ಆಸಕ್ತಿ ಎಲ್ಲಕ್ಕಿಂತ ಮುಂಚೆ ಬೇಕು. ಯಾವಾಗಲೂ ಸಂಗೀತ ಗೊತ್ತಿದ್ದವರಲ್ಲಿ ಹಾಡು ಹೇಳಿಸಿಕೊಳ್ಳಬೇಕು.
- ತ್ಯಾಗ ಆಸಕ್ತಿ, ತಪಸ್ಸಿನಿಂದ ಕೃಷಿ ಕೈ ಹಿಡಿಯುತ್ತದೆ ಎಂಬುದು ಮಾತ್ರ ಸತ್ಯ. ನೆಮ್ಮದಿಯಂತೂ ಕೃಷಿಯಲ್ಲಿ ಇದ್ದೇ ಇದೆ.
- ಪಟೇಲರಿಗೆ ಈಗ ವಯಸ್ಸು 80 ದಾಟಿರಬೇಕು. ಸ್ವಲ್ಪ ಅನಾರೋಗ್ಯವಿದ್ದರೂ ಎಲ್ಲೇ ಕೃಷಿ ಕುರಿತ ಸಭೆಗಳಿದ್ದರೂ ಭೇಟಿಕೊಡುತ್ತಾರೆ.
ಇಂತಹ ವ್ಯಕ್ತಿಗೆ ಯಾವಾಗಲೋ ಡಾಕ್ಟರೇಟ್ ಕೊಟ್ಟು ಗೌರವಿಸಬೇಕಿತ್ತು. ತಡವಾಗಿಯಾದರೂ ಆಯ್ಕೆ ಮಾಡಿ ಗೌರವಿಸಿದ್ದು ಶ್ಲಾಘನೀಯ.ಪಟೇಲರ ಕೃಷಿ ಸಾಧನೆಗೆ ಬರೇ ಡಾಕ್ಟರೇಟ್ ಗೌರವಕ್ಕೆ ಮಾತ್ರ ಸಂದರೆ ಸಾಲದು, ಅವರ ಕೃಷಿ ಬದುಕು ಮತ್ತು ಸಾಧನೆ, ಹೊಸ ತಲೆಮಾರಿಗೆ ಒಂದು ಪಾಠವಾಗಿ ಮುಂದುವರಿಯಲಿ.