ಕೃಷಿ ಅರಣ್ಯ ದೊಂದಿಗೆ ಅರಶಿಣ ಬೆಳೆಸಿ ಮೌಲ್ಯವರ್ದನೆ.

ಕೃಷಿ ಅರಣ್ಯ ದೊಂದಿಗೆ ಅರಶಿನ ಬೆಳೆ

ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮದಲ್ಲಿ ನಲವತ್ತೆರಡು ವರ್ಷದ ಲಕ್ಷ್ಮೀಕಾಂತ ಹಿಬಾರೆಯವರು ಬಿರುಬಿಸಿಲಿನ  ನಾಡಾದರೂ ತಮ್ಮ 2.5 ಎಕರೆ ಬರಡು ಭೂಮಿಯಲ್ಲಿ ಉತ್ತಮ ಬೆಳೆ ಬೆಳೆದಿದ್ದಾರೆ. ಸಹಜ ಮತ್ತು ನೈಸರ್ಗಿಕ  ಕೃಷಿ ಅರಣ್ಯ ಪ್ರದೇಶದಲ್ಲಿ ಔಷಧಿಯುಕ್ತ ಅರಶಿಣವನ್ನು ಮಿಶ್ರ ಬೆಳೆಯಾಗಿ ಬೆಳೆದು ಉತ್ತಮ ಆದಾಯ ಸಂಪಾದಿಸಿದ್ದಾರೆ. ಮುಖ್ಯವಾಗಿ ಅರಶಿನ ಹುಡಿ ಮಾಡಿ ಮೌಲ್ಯವರ್ಧನೆ ಮಾಡಿದ್ದೇ ಈ ಲಾಭಕ್ಕೆ ಕಾರಣ.

ಲಕ್ಷ್ಮೀಕಾಂತ ಹಿಬಾರೆಯವರು ಕಳೆದ 10 ವರ್ಷದಿಂದ ಕೃಷಿ ಅರಣ್ಯ ಬೇಸಾಯ ಮಾಡುತ್ತಿದ್ದಾರೆ. ಇವರ ಹೊಲದಲ್ಲಿ ಬೆಳೆದಿರುವ ಬಗೆಬಗೆಯ ಅರಣ್ಯ ಮತ್ತು ತೋಟಗಾರಿಕಾ ಸಸ್ಯಗಳ ಒಟ್ಟು ಗಡಣ 3875.  ಈ ಕೃಷಿ ಅರಣ್ಯ ತೋಟದಲ್ಲಿ ಶ್ರೀಗಂಧವೂ ಒಂದು ಸದಸ್ಯ ಸಸ್ಯ. ಕೃಷಿ ಅರಣ್ಯದ ಜೊತೆಯಲ್ಲೂ ಮಿಶ್ರ ಬೆಳೆ  ಬೆಳೆಯಬಹುದು, ಇದರಲ್ಲಿ ಅರಶಿನ ಬೆಳೆ ಬೆಳೆದ ಅನುಭವ ಇವರದ್ದು. ಹಾಗೆ ತಜ್ಞರ ಸಲಹೆ ಮೇರೆಗೆ ಈ ಕೃಷಿಗೆ ಇಳಿದು ಮಿಶ್ರ  ಬೆಳೆಯಿಂದ ಆದಾಯ ಸಂಪಾದಿಸಿದ್ದಾರೆ. ಇವರ ಅರಣ್ಯ-ಕೃಷಿಯ ಸಾಧನೆಗಾಗಿ 2022 ರ ಜನವರಿ 26 ರಂದು ಕೃಷಿ ಪಂಡಿತ ಪ್ರಶಸ್ತಿ ಸಿಕ್ಕಿದೆ. ಬ್ಯಾಂಕ್ ಬರೋಡಾದಿಂದ ಅಕ್ಟೋಬರ್ 14 ರಂದು ಶ್ರೇಷ್ಠ ಕೃಷಿಕ ಪ್ರಶಸ್ತಿಯೂ ಸಿಕ್ಕಿದೆ. 2020 ರ ಡಿಸೆಂಬರ್ 16 ರಂದು ವಿಜಯ ಕರ್ನಾಟಕ ಪತ್ರಿಕೆಯ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಗಳಿಸಿದ್ದಾರೆ. ರೈತ ದಿನಾಚರಣೆಯಂದು 2020ರ ಡಿಸೆಂಬರ್ 23 ಕರ್ನಾಟಕ ರಕ್ಷಣಾ ವೇದಿಕೆಯಿಂದ ನೇಗಿಲಯೋಗಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.  ಊರಿನ ಹಲವಾರು ಸಂಘ ಸಂಸ್ಥೆಗಳೂ ಇವರನ್ನು ಸನ್ಮಾನಿಸಿವೆ. 

ಅರಶಿನ ಕೃಷಿಗೆ ಮಾರ್ಗದರ್ಶನ:

  • ಕೃಷಿ ವಿಜ್ಞಾನ ಕೇಂದ್ರದ ತಂತ್ರಜ್ಞರ ಮಾರ್ಗದರ್ಶನದಂತೆ ಹಿಬಾರೆಯವರು ಅರಶಿಣ ಬೇಸಾಯಕ್ಕಾಗಿ ಸೇಲಂ ತಳಿಯ ಅರಶಿಣ ಬೀಜದ ಗಡ್ಡೆಗಳನ್ನು ಪ್ರತಿ ಕೆ.ಜಿ.ಗೆ 40 ರೂ.ದಂತೆ 600 ಕೆ.ಜಿ. ಗಡ್ಡೆಗಳನ್ನು ಸಾರಿಗೆ ವೆಚ್ಚ ಸೇರಿ 26,000  ರೂ.ಗೆ ಖರೀದಿಸಿದ್ದಾರೆ.
  • ನೈಸರ್ಗಿಕ ಮತ್ತು ಜೈವಿಕ ಗೊಬ್ಬರಗಳಿಂದ ಭೂಮಿಯನ್ನು ಹದಗೊಳಿಸಿ ಮೂರು ಎಕರೆಯಲ್ಲಿ 3 ಅಡಿಯ ಏರು ಮಡಿಗಳನ್ನು ಮಾಡಿದರು.
  • ನಂತರ ಸಾಲಿನಿಂದ ಸಾಲಿಗೆ 8 ಅಡಿ ಹಾಗೂ ಬೀಜದಿಂದ ಬೀಜಕ್ಕೆ 1.5 ಅಡಿ ಅಂತರದಲ್ಲಿ  2021 ರ ಮೇ ಮಾಹೆಯಲ್ಲಿ ಅರಶಿಣ ಬೀಜಗಳನ್ನು ನಾಟಿ ಮಾಡಿದರು.
  • ಇದಕ್ಕಾಗಿ ಒಂದು ಲಕ್ಷ ರೂ. ವೆಚ್ಚವಾಗಿದೆ.

ಹನಿ ನೀರಾವರಿಯಿಂದ ವಾರಕ್ಕೊಮ್ಮೆ  ನೀರುಣಿಸುವುದಲ್ಲದೆ ಅರಶಿಣ ಬೆಳೆಗೆ ತಗಲುವ ರೋಗಗಳ ತಡೆಗಾಗಿ ಬೇವಿನೆಣ್ಣೆ, ಟ್ರೈಕೋಡರ್ಮಾ ಮುಂತಾದವನ್ನು ಬಳಸುತ್ತಿದ್ದಾರೆ. ಲಘು ಪೋಷಕಾಂಶ(ಮೈಕ್ರೋ ನ್ಯೂಟ್ರಿಯೆಂಟ್)ಗಳಿಗೆ ಪ್ರಾಶಸ್ತ್ಯ ನೀಡಿದ್ದರಿಂದ ಅರಶಿಣದ ಒಂದೊಂದು ಗಿಡ 4 ಅಡಿಗಿಂತ ಹೆಚ್ಚು ಎತ್ತರ ಸಮೃದ್ಧವಾಗಿ ಬೆಳೆದಿದ್ದವು. ಮೊದಲ ಬೆಳೆಯನ್ನು 10 ತಿಂಗಳಿಗೆ ಕಟಾವು ಮಾಡಲಾಗಿದ್ದು, ಒಂದೂವರೆ ಟನ್ ಇಳುವರಿ ಬಂದಿದೆ. ಈಗ ಒಂದು ತಿಂಗಳ ಎರಡನೇ  ಬೆಳೆಯಿದೆ.

  • ಹಿಬಾರೆ ಬೆಳೆದ ಅರಶಿಣವನ್ನು ಭಾರತ ಸರ್ಕಾರದ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಅರಶಿಣದ ಪ್ರಮುಖ ಅಂಶವಾದ ಕಕ್ರ್ಯುಮಿನ್ (Curcumine) ಶೇ 3.66  ರಷ್ಟು ಇರುವುದು ದೃಢಪಟ್ಟಿದೆ.
  • ಶ್ರೀಗಂಧದ  ಬೆಳೆಯ  ಮಧ್ಯಂತರದಲ್ಲಿ  ಅರಶಿಣ ಬೆಳೆದಿದ್ದಾರೆ.
  • ಶ್ರೀಗಂಧ ಬೆಳೆ ಬೆಳೆಸುವಾಗ ಅದರ ಆದಾಯ ಕೈಸೇರಲು 10-15 ವರ್ಷಗಳು ಬೇಕು.
  • ಅಷ್ಟರ ತನಕ ಅಲ್ಲಿ ಏನೂ ಆದಾಯ ಇಲ್ಲದಿರುವುದಕ್ಕೆ ಈ ಬೆಳೆ, ಜೊತೆಗೆ ಶುಧ್ಹ ಅರಶಿನಕ್ಕೆ ಬಾರೀ ಬೇಡಿಕೆ ಇದ್ದು, ಕೊಳ್ಳುವರಿಗೂ ಕೊರತೆ ಇಲ್ಲ.
ಕೃಷಿ ಅರಣ್ಯ ದೊಂದಿಗೆ ಅರಶಿನ ಬೆಳೆ

ಅರಶಿನ  ಭಾರೀ ಔಷಧೀಯ:  

  • ಅರಶಿನ ಎಂಬುದು ಆಯುರ್ವೇದ ಔಷದೋಪಚಾರಗಳಲ್ಲಿ ಪ್ರಮುಖವಾದದ್ದು.
  • ಇದಕ್ಕಿರುವಷ್ಟು ಔಷದೀಯ ಗುಣ  ಬೇರೆ ಯಾವುದಕ್ಕೂ ಇರಲಿಕ್ಕಿಲ್ಲ.
  • ಇದನ್ನು ಒಂದು ಎರಡು ರೋಗಗಳಿಗೆ ಮಾತ್ರ ಬಳಕೆ ಮಾಡುವುದಲ್ಲ.
  • ಚರ್ಮ ಸಂಬಂಧಿತ ಖಾಯಿಲೆಗಳಿಗೆ ಇದರ ಲೇಪನ ಮಾಡಲಾಗುತ್ತದೆ.
  • ಹೊಟ್ಟೆಗೆ ಸಂಬಂಧಿತ ಖಾಯಿಲೆಗಳಿಗೂ ಇದರ ಬಳಕೆ ಇದೆ. ಇದಕ್ಕಿ ವಿಷವನ್ನು ಶಮನ ಮಾಡುವ ಶಕ್ತಿಯೂ ಇದೆ.
  • ಇತ್ತೀಚಿನ ಸಂಶೋಧನೆಗಳಲ್ಲಿ ತಿಳಿದು ಬಂದಂತೆ ಇದು ಮನುಕ್ಲದ ಮಾರಣಾಂತಿಕ ಖಾಯಿಲೆಯಾದ ಕ್ಯಾನ್ಸರ್ ಅನ್ನು ಸಹ ಗುಣಪಡಿಸುವ ಶಕ್ತಿ ಹೊಂದಿದೆ. 
  • ಇದಕ್ಕೆಲ್ಲಾ ಬೇಕಾಗುವುದು ಪರಿಶುದ್ಧ ಕಲಬೆರಕೆ ರಹಿತ ಅರಶಿನ.

ಅರಶಿನ ಪುಡಿ ಮಾಡಿ ಮಾರಾಟ:

Hibare Turmeric powder
Hibare Turmeric powder
  • ಶುದ್ಧ ಅರಶಿನ ಪುಡಿ ಇದೆ ಎಂದರೆ ಎಷ್ಟಿದ್ದರೂ ಕೊಳ್ಳುವವರಿದ್ದಾರೆ.
  • ಅಡಿಗೆಯಿಂದ ಹಿಡಿದು ದೇವರ ಆರಾಧೆನೆ ವರೆಗೂ ಜನ ಬಯಸುವುದು ಶುದ್ಧ ಅರಶಿನವನ್ನು.
  • ರೈತರೇ ಬೆಳೆದು ಹುಡಿ ಮಾಡಿ ಕೊಡುತ್ತಾರೆ ಎಂದರೆ ಅದರ ಮೇಲೆ ಕೊಳ್ಳುವವರಿಗೆ ನಂಬಿಕೆ ಇರುತ್ತದೆ.
  • ಇವರು ಅರಶಿಣ ಪುಡಿ ತಯಾರಿಕೆಗಾಗಿ ಎಲ್ಲ ಅರಶಿಣ ಕೊಂಬುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಇತ್ತೀಚಿನ ತಂತ್ರಜ್ಞಾನದಂತೆ ಕುದಿಸಿ ಒಂದು ತಿಂಗಳು ಒಣಗಿಸುವರು.
  • ನಂತರ ಅರಶಿಣವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸ್ವಚ್ಛಗೊಳಿಸಿದ ಬಳಿಕ ಅರಶಿಣ ಪುಡಿ ತಯಾರಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
  • ಕಲಬುರಗಿಯ  ವಿವಿದೆಡೆಯಿರುವ ಅರಶಿಣ ಪುಡಿ ತಯಾರಿಕಾ ಯಂತ್ರಗಳಲ್ಲಿ ಬಾಡಿಗೆ ಆಧಾರದ ಮೇಲೆ ಪ್ರತಿ ಕೆ.ಜಿ.ಗೆ 30 ರೂ. ಪಾವತಿಸಿ “ಹಿಬಾರೆ” ಬ್ರ್ಯಾಂಡ್ Hibare Turmeric powder ಹೆಸರಿನಲ್ಲಿ ಅರಶಿಣ ಪುಡಿ ತಯಾರಿಸುತ್ತಿರುವರು.

ಮಾರಾಟ ಹೇಗೆ ಮಾಡಿದರು?

  • ರಾಜ್ಯದ ಮತ್ತು ನೆರೆಯ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ವಾಟ್ಸ್ ಅಪ್ Whats App ಮೂಲಕ ಅರಶಿಣ ಪುಡಿಯನ್ನು ಸಗಟು ದರದಲ್ಲಿ ಮಾರಾಟದ ವ್ಯವಸ್ಥೆ ಮಾಡಿದ್ದಾರೆ.
  • 250 ಗ್ರಾಂ, 500 ಗ್ರಾಂ ಮತ್ತು ಒಂದು ಕೆ.ಜಿ.ಯ  ಅರಶಿಣ ಪುಡಿಗಳನ್ನು ತಯಾರಿಸಿ, ಕ್ರಮವಾಗಿ100ರೂ 200ರೂ. ಮತ್ತು 400ರೂ. ದರ ನಿಗದಿಪಡಿಸಿದ್ದಾರೆ.
  • ಈವರೆಗೆ 700 ಕೆ.ಜಿ. ಅರಶಿಣ ಪುಡಿ ಮಾಡಿದ್ದು, 2 ಲಕ್ಷ ರೂ. ಆದಾಯದ ನಿರೀಕ್ಷೆ ಹೊಂದಿದ್ದಾರೆ.
  • ರಾಜ್ಯ ಸರ್ಕಾರದ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಡಾ.ಎಂ.ವಿ.ವೆಂಕಟೇಶ, ಕೃಷಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಇವರು ಉತ್ಪಾದಿಸಿದ ಪರಿಶುದ್ಧ ಅರಶಿಣ ಪುಡಿಯನ್ನು ಖರೀದಿಸುವುದರೊಂದಿಗೆ ಇವರ ಸಾಧನೆಯ ಬಗ್ಗೆ ಪ್ರಶಂಸಿಸಿರುವುದು ವಿಶೇಷವಾಗಿದೆ.

ಶ್ರೀಗಂಧದ ಮತ್ತು ರಕ್ತಚಂದನದ ಸಾಲುಗಳ ಮಧ್ಯದಲ್ಲಿ ಲಕ್ಷ್ಮೀಕಾಂತ ವಿವಿಧ ಮಿಶ್ರಬೆಳೆಗಳನ್ನೂ ಬೆಳೆಸಿ ಲಾಭ ಗಳಿಸುತ್ತಿದ್ದಾರೆ. “ಪ್ರಾಚೀನ ಕಾಲದಿಂದಲೂ ಅರಶಿಣವನ್ನು ಸೌಂದರ್ಯವರ್ಧಕ ಮತ್ತು ಔಷಧಿ ರೂಪದಲ್ಲಿ ಮತ್ತು ಎಲ್ಲ ಧಾರ್ಮಿಕ ಕಾರ್ಯಗಳಲ್ಲಿಯೂ ಬಳಸಲಾಗುತ್ತಿದೆ. ಇದು ಕೆಲವು ರೋಗಗಳು ಬಾರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಇದರ ಬೇಸಾಯ ಮತ್ತು ಜನಜಾಗೃತಿ ಮೂಡಿಸಬೇಕಾಗಿದೆ” ಎನ್ನುತ್ತಾರೆ ಲಕ್ಷ್ಮೀಕಾಂತ ಹಿಬಾರೆ. ಸಂಪರ್ಕ ಸಂಖ್ಯೆ9886108950. 

ರೈತರು ತಾವು ಬೆಳೆ ಎಷ್ಟೂ ಬೆಳೆಸಬಹುದು. ಆದರೆ ಅದನ್ನು ಮಾರುಕಟ್ಟೆ ಮಾಡುವಾಗ ಯಾರೋ ರಖಂ ಕೊಳ್ಳುವವರಿಗೆ ಮಾರಿಬಿಡುತ್ತಾರೆ. ಇದರಿಂದ ಬೆಳೆದವರಿಗೆ ಲಾಭವಾಗುವುದು ಕಡಿಮೆ. ಜೊತೆಗೆ ಗ್ರಾಹಕರಿಗೂ ಪರಿಶುದ್ಧ ವಸ್ತು ಹುಡುಕುವುದು ಕಷ್ಟವಾಗುತ್ತದೆ.ಈಗಿನ ತಾಂತ್ರಿಕತೆ ಬಳಸಿಕೊಂಡು, ಮೊಬೈಲ್, ವಾಟ್ಸ್ ಅಪ್, ಇನ್ಸ್ಟಾಗ್ರಾಂ, ಫ಼್ಹೇಸ್ ಬುಕ್ ಮುಂತಾದ ಪ್ರಚಾರ ಮಾಧ್ಯಮಗಳನ್ನು ಬಳಸಿಕೊಂಡು ಮಾರುಕಟ್ಟೆ ಮಾಡಿದರೆ ಲಾಭವಾಗುತ್ತದೆ.  ಹೊಸ ಹೊಸ ಮಾರಾಟ ಚಾಕಚಕ್ಯತೆಯೂ ಬರುತ್ತದೆ.

ವರದಿ: ಜಿ.ಚಂದ್ರಕಾಂತ, ನಿವೃತ್ತ ಉಪನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಲಬುರಗಿ

Leave a Reply

Your email address will not be published. Required fields are marked *

error: Content is protected !!