ಆಷಾಢದಲ್ಲಿ (ಆಟಿ) ಇದನ್ನು ಯಾವ ಉದ್ದೇಶಕ್ಕೆ ತಪ್ಪದೆ ತಿನ್ನಬೇಕು?

ಆಷಾಢದಲ್ಲಿ (ಆಟಿ) ಬಾಳೆದಂಡು ಯಾವ ಉದ್ದೇಶಕ್ಕೆ ತಪ್ಪದೆ ತಿನ್ನಬೇಕು

ಆಷಾಢ ಮಾಸದಲ್ಲಿ ಕೆಲವು ಆಹಾರ ವಸ್ತುಗಳನ್ನು ತಪ್ಪದೆ ತಿನ್ನಬೇಕು, ಇದರಲ್ಲಿ ಸಾಕಷ್ಟು  ಆರೋಗ್ಯ ಗುಣಗಳಿವೆ ಎಂಬುದೇ ನಮ್ಮ ಹಿರಿಯರು ಹೇಳಿರುವ ಉದ್ದೇಶ. ಇದರಲ್ಲಿ ಬಾಳೆ ದಂಡು ಒಂದು. ಬಾಳೆ ದಂಡನ್ನು ಬೇರೆ ಬೇರೆ ಅಡುಗೆಗಳ ಮೂಲಕ ಬಳಸಬಹುದಾಗಿದ್ದು , ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಈ ದಂಡಿನಲ್ಲಿ ಹಲವಾರು ಪೋಷಕಾಂಶಗಳಿರುವ ಕಾರಣ  ದೇಹಕ್ಕೆ ಶಕ್ತಿ ಕೊಡುತ್ತದೆ.

ಆಷಾಢ ಮಾಸದಲ್ಲಿ  ಮಳೆ ಹೆಚ್ಚು. ಹಿಂದೆಲ್ಲಾ ಈ ತಿಂಗಳಲ್ಲಿ  ವಾರಗಟ್ಟಲೆ ನಿರಂತರ ಮಳೆ ಬರುವುದು, ಮನೆಯಿಂದ ಹೊರಗೆ ತಲೆ ಹಾಕುವುದಕ್ಕೂ ಕಷ್ಟ ಎನ್ನುವ ಸ್ಥಿತಿ ಇತ್ತು. ಇಂತಹ ಮಳೆಗೆ ಬೆಳೆದ ತರಕಾರಿ ಎಲ್ಲವೂ ಕೊಳೆತು ಹೋಗುವುದು ಅಥವಾ ಹೂ ಬಿಡದೆ ಇರುವುದು ಸಾಮಾನ್ಯ. ಬಹುತೇಕ ತರಕಾರಿ ಕಾಯಿ ಕಚ್ಚಬೇಕಿದ್ದರೆ ಹೂವಾಗಬೇಕು, ಹೂವು ಆದರೆ ಅದು ಪರಾಗಸ್ಪರ್ಶ ಆಗಬೇಕು. ಈ ಎರಡಕ್ಕೂ ಅತಿಯಾದ ಮಳೆ ಬರುವಾಗ ಅವಕಾಶವೇ ಇರುವುದಿಲ್ಲ.  ಹಾಗಾಗಿ ಸಸ್ಯಾಹಾರಿಗಳಿಗೆ ಪದಾರ್ಥ ಮಾಡಲು ತರಕಾರಿ ಇಲ್ಲ. ಆಗ ಅಂಗಡಿಯಿಂದ ತರಕಾರಿ ತರುವ ಅಭ್ಯಾಸವೇ ಇರಲಿಲ್ಲ.  ಇಂತಹ ಸಮಯದಲ್ಲಿ ಪದಾರ್ಥಕ್ಕೆ ಬೆಳೆಯುವ ತರಕಾರಿಗಳೇ ಆಗಬೇಕಾಗಿಲ್ಲ. ಅದರ ಬದಲಿಗೆ ಬಾಳೆ ದಂಡು, ಕೆಸುವಿನ ಎಲೆ, ಹಲಸಿನ ಕಾಯಿಯ ಬೀಜ, ಬಿದಿರಿನ ಮೊಳಕೆ (ಕಳಲೆ) ಇತ್ಯಾದಿಗಳನ್ನು ಬಳಸಿ ಪದಾರ್ಥ ಮಾಡಬಹುದು. ಈ  ಸಂದೇಶವನ್ನು ಎಲ್ಲರಿಗೂ ತಲುಪಿಸಲಿಕ್ಕಾಗಿ ನಮ್ಮ ಹಿರಿಯರು ಆಷಾಢದಲ್ಲಿ ಈ ವಸ್ತುಗಳನ್ನು ಅಗತ್ಯವಾಗಿ ತಿನ್ನಬೇಕು ಎಂದಿದ್ದಾರೆ.

ಆಷಾಢದಲ್ಲಿ ತಿನ್ನಲೇ ಬೇಕು ಬಾಳೆ ದಂಡು:

  • ಬಾಳೆ ಸಾಮಾನ್ಯವಾಗಿ ಎಲ್ಲಾ ಕೃಷಿಕರ ಮನೆಯ ಹಿತ್ತಲಲ್ಲೂ ಬೆಳೆಯುವ ಸಸ್ಯ.
  • ಬಾಳೆಯಲ್ಲಿ ಗೂನೆ ಹಾಕಿ ಅದನ್ನು ಬೆಳೆದು ಕಡಿದ ನಂತರ ಆ ಬಾಳೆ ನಿರುಪಯುಕ್ತ.
  • ಈ ಬಾಳೆಯಲ್ಲಿರುವ ಮಧ್ಯದ ದಂಟಿನ ಭಾಗದಿಂದಲೇ ಬಾಳೆ ಗೊನೆ ಮೂಡುವುದು.  
  • ಗೊನೆ ಹುಟ್ಟಿನಿಂದ ಬೆಳವಣಿಗೆ ವರೆಗೆ ಆಹಾರ ಸರಬರಾಜು ಮಾಡುವ ಸಸ್ಯದ ಅಂಗ.
  • ಗೊನೆಗೆ ಆಹಾರ ಸರಬರಾಜು ಮಾಡಿ ಅದನ್ನು ಕಡಿದಾಗ ಆ ದಂಟಿನಲ್ಲಿ ಸುಮಾರಷ್ಟು ಪೋಷಕಾಂಶಗಳು ಉಳಿದಿರುತ್ತವೆ.
  • ಈ ಪೋಷಕಾಂಶಗಳಲ್ಲಿ ಪೊಟ್ಯಾಶಿಯಂ, ಮೆಗ್ನೀಶಿಯಂ ಮುಖ್ಯವಾದವುಗಳು.
  • ಮಾನವ ದೇಹಕ್ಕೆ ಯಾವಾಗಲೂ ಈ ಸತ್ವಗಳು ಬೇಕು.
  • ಉಳಿದ ಸಮಯದಲ್ಲಿ ಬೇರೆ ಬೇರೆ ಕಾಯಿಪಲ್ಲೆಗಳಿಂದ ಈ ಸತ್ವ ಸಿಗುವ ಸಾಧ್ಯತೆ ಇದೆ.
  • ಆದರೆ ಆಷಾಡದಲ್ಲಿ ವಿರಳ. ಹಾಗಾಗಿ ಆಷಾಢದಲ್ಲಿ ಇದನ್ನು ತಪ್ಪದೆ ತಿನ್ನಬೇಕು ಎಂದು ಹಿರಿಯರು ಹೇಳಿದ್ದರು.
ಬಾಳೆ ದಂಡು
  • ಬಾಳೆ ದಂಡಿನಲ್ಲಿ ಒಂದು ರೀತಿಯ ನಾರು ಇದೆ.
  • ಇದನ್ನು ಪ್ರತ್ಯೇಕಿಸಿ ಅದನ್ನು ಪಲ್ಯ, ಸಾಂಬಾರು, ಉಪ್ಪಿಟ್ಟು ಇತ್ಯಾದಿ ಮಾಡುತ್ತಾರೆ.
  • ಉಪ್ಪು ಹುಳಿ ಖಾರ ಸೇರಿದಾಗ ಅದು ಬಾಯಿಗೆ ರುಚಿಯಾಗಿ ಹೊಟ್ಟೆಗೆ ಸೇರುತ್ತದೆ.
  • ಬಾಳೆ ದಂಡಿನಲ್ಲಿರುವ ಪೋಷಕಾಂಶಗಳ ಬಗ್ಗೆ ಹಿರಿಯರಿಗೆ ಗೊತ್ತಿತ್ತೋ ಇಲ್ಲವೋ, ಬಾಳೆ ದಂಡು ತಿನ್ನಿ, ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದರು.
  • ಆರೋಗ್ಯ ಎಂಬ ಶಬ್ಧದಿಂದ ಜನ ಅದರತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಾರೆ.  
  • ಬಾಳೆ ದಂಡಿನ ಈ ರೀತಿಯ ಅಡುಗೆಯನ್ನು ವರ್ಷದ ಎಲ್ಲಾ ಸಮಯದಲ್ಲೂ ಮಾಡಬಹುದು.
  • ಅಡುಗೆ ಮಾಡಿ ಉಣ್ಣುವುದೇ ಸೂಕ್ತ.
  • ರಸ ಕುಡಿಯುವುದು, ಕಿಡ್ನಿ ಸಮಸ್ಯೆಗೆ ರಸಕ್ಕೆ ಸಕ್ಕರೆ ಸೇರಿಸುವುದು, ಬಾಳೆ ಕಾಂಡದಲ್ಲೇ ರಸ ಉತ್ಪಾದಿಸಿ ಅಲ್ಲೇ ಅದನ್ನು ಪ್ಯಾಕಿಂಗ್ ಮಾಡುವುದು ಮಾರಾಟ ಮಾಡುವುದು ಇದೆಲ್ಲಾ ಆಧುನೀಕರಣದ ವೇಷಗಳು.
  • ಹಾಗೆ ನೋಡಿದರೆ ಅದರ ರಸವನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅದರಲ್ಲಿರುವ ಸತ್ವಗಳು ದೇಹಕ್ಕೆ ಭಾರವಾದರೂ ಆಚ್ಚರಿ ಇಲ್ಲ.

ಮರಕೆಸುವಿನ ಪತ್ರೋಡೆ:

  • ಮರ ಕೆಸು ಎಂಬ ಒಂದು ಪ್ರಬೇಧದ ಕೆಸು ಮಳೆಗಾಲದಲ್ಲಿ ಅದರಲ್ಲು ಆಷಾಢದಲ್ಲಿ ಮರಗಳ ಸಂದಿನಲ್ಲಿ ಬೆಳೆಯುತ್ತದೆ.
  • ಇದು ಬದುಕುವುದು ಕಳಿತ ಸಾವಯವ ವಸ್ತುಗಳಲ್ಲಿ. ಮರದ ಪೊಟರೆ, ಮರಕ್ಕೆ ಅಂಟಿದ ಜರಿ ಗಿಡಗಳ ಸಂದಿನಲ್ಲಿ ಬೆಳೆಯುತ್ತದೆ.
  • ಮರ ಸತ್ತು ನೆಲಕ್ಕೆ ಬಿದ್ದರೆ ಅದರ ಹ್ಯೂಮಸ್ ನಲ್ಲೂ ನೆಲದಲ್ಲಿ ಬೆಳೆಯುತ್ತದೆ.
  • ತರಗೆಲೆಗಳ ರಾಶಿಯಲ್ಲಿ ನೆಟ್ಟರೂ ಬದುಕುತ್ತದೆ.
  • ಹೆಚ್ಚಾಗಿ ಇವು ದೊಡ್ದ ದೊಡ್ದ ಮರಗಳಲ್ಲಿ ಇರುತ್ತವೆ. 
  • ಮರದಲ್ಲಿ  ಮಳೆಗಾಲದಲ್ಲಿ ಬೆಳೆಯುವ ಹಾವಸೆ ಇದಕ್ಕೆ ಹುಲುಸಾಗಿ ಬೆಳೆಯಲು ಪೋಷಕವಾಗಿಯೂ ಕೆಲಸ ಮಾಡುತ್ತದೆ.
  • ಇದನ್ನು ಮಳೆಗಾಲದಲ್ಲಿ ತಿನ್ನುವುದರಿಂದ ಆರೋಗ್ಯಕ್ಕೆ ಅನುಕೂಲಗಳಿವೆ ಎಂದಿದ್ದಾರೆ ಹಿರಿಯರು.
ಮರ ಕೆಸು
  • ಮಳೆಗಾಲ, ಅದರಲ್ಲೂ ಆಷಾಢದಲ್ಲಿ ಮರಕೆಸು ತಿನ್ನಬೇಕು. ಶರೀರದ ನಂಜು ಹೋಗುತ್ತದೆ, ಎಂಬುದು ಹಿರಿಯರ ಹೇಳಿಕೆ.
  • ಕೆಸುವಿನ ಎಲೆ ಶರೀರಕ್ಕೆ ಉಷ್ಣಕಾರಕ. ಮಳೆಗಾಲ ದಲ್ಲಿ ಶೀತ ವಾತಾವರಣದಲ್ಲಿ ಶರೀರಕ್ಕೆ ಸ್ವಲ್ಪ ಉಷ್ಣ ಆಹಾರ ಬೇಕು.
  • ಅದನ್ನು ಕೆಸುವು ಒದಗಿಸುತ್ತದೆ. ಜೊತೆಗೆ ಕೆಸುವಿನ ಎಲೆಯಲ್ಲಿ ಸೆಲ್ಯುಲೋಸ್ ಇದ್ದು, ಇದು ಚಯಾಪಚಯ ಕ್ರಿಯೆಯನ್ನು ಉತ್ತಮಪಡಿಸುತ್ತದೆ.
  • ಆಷಾಢದಲ್ಲಿ ಮರಕೆಸು ಮಾತ್ರವಲ್ಲ ಎಲ್ಲ ನಮೂನೆಯ ಕೆಸುವನ್ನೂ ಬಳಕೆ ಮಾಡಬಹುದು.
  • ಕೆಸುವಿನ ಎಲೆಯಲ್ಲಿ ದಂಟಿನಲ್ಲಿ, ಗಡ್ಡೆಯಲ್ಲಿ ಕ್ಯಾಲ್ಸಿಯಂ ಆಕ್ಸಲೆಟ್  (Calcium Oxalate) ಆಮ್ಲ ಇದೆ.
  • ಅದು ತುರಿಕೆಗೆ ಕಾರಣವಾಗುತ್ತದೆ. ಇದು ತುರಿಕೆ ಅಲ್ಲ. ಸುಡುವಿಕೆ.
  • ಮರಕೆಸು, ಕಾಡುಕೆಸು, ಕೆಲವು ನೆಟ್ಟು ಬೆಳೆಸದ ಕೆಸುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
  • ಈ ಅಂಶ ಮಳೆಗಾಲದಲ್ಲಿ ನೀರು, ಮತ್ತು ಹೇರಳ ಪೊಷಕಾಂಶಗಳು ಪ್ರಕೃತಿಯಲ್ಲಿ ಸಿಗುವಾಗ ಕಡಿಮೆ ಇರುತ್ತದೆ.
  • ಅದಕ್ಕಾಗಿ ಈ ಸಮಯದಲ್ಲಿ ಬಳಕೆ ಮಾಡಬೇಕು ಎಂದಿದ್ದಾರೆ.
  • ಹಾಗೆಂದು ಇದರಲ್ಲಿ ಸತ್ವಾಂಶಗಳು ಇಲ್ಲವೆಂದಲ್ಲ. 
  • ಈ ಗಿಡದ ದಂಟು ನಂಜು ನಿವಾರಕ.
  • ಕಾಲಿಗೆ ಮುಳ್ಳು ತಾಗಿದರೆ ಮರಕೆಸವಿನ ದಂಟನ್ನು ಬಿಸಿ ಮಾಡಿ ಅದರ ರಸ ಅಲ್ಲಿಗೆ ಬಿಟ್ಟರೆ ಮುಳ್ಳು ಹೊರಬರುತ್ತದೆ.
  • ಮಳೆಗಾಲದಲ್ಲಿ ಮನೆಯಲ್ಲೇ ಕುಳಿತಿರುವಾಗ ತಮ್ಮ ಸೊಪ್ಪಿನ ಬೆಟ್ಟದಲ್ಲಿ ಸಹಜವಾಗಿ ಬೆಳೆಯುವ ಕೆಸುವಿನ ಎಲೆಯ ಪತ್ರಡೆ ಮಾಡಿ ತಿನ್ನಬಹುದು.  
  • (ಎಲೆಯನ್ನು ಹಾಗೆಯೇ ತಿನ್ನಲಿಕ್ಕೆ ಆಗುವುದಿಲ್ಲ, ಅದಕ್ಕೆ ಉಪ್ಪು ಹುಳಿ ಖಾರ ಸೇರಿಸಿ ಅಕ್ಕಿ ಹಿಟ್ಟು ಮಾಡಿ ಎಲೆಗಳಿಗೆ ಸವರಿ ಅದನ್ನು ಹಬೆಯಲ್ಲಿ ಬೇಯಿಸಿ ಮಾಡುವ ತಿಂಡಿಯೇ ಪತ್ರೋಡೆ)
  • ಅದರ ದಂಟನ್ನು ಪದಾರ್ಥ ಸಹ ಮಾಡಬಹುದು.
  • ಆ ದಿನದ ತಿಂಡಿಗೂ ಆಗುತ್ತದೆ, ಪದಾರ್ಥಕ್ಕೂ ಆಗುತ್ತದೆ ಎಂಬ ಉದ್ದೇಶವನ್ನಿಟ್ಟುಕೊಂದು ನಮ್ಮ ಹಿರಿಯರು ಇದನ್ನು ಹೇಳಿದ್ದಾರೆ.

ನೀರ್ ಕೆಸುವಿನ ಪದಾರ್ಥ:

ನೀರ್ ಕೆಸು ಅಥವಾ  ಚೇಟ್ಲ ಕೆಸು
ನೀರ್ ಕೆಸು ಅಥವಾ ಚೇಟ್ಲ ಕೆಸು
  • ನೀರು ಕೆಸು ಎಂಬ ಒಂದು ಪ್ರಬೇಧ ಇದೆ. ಇದರಲ್ಲಿ ಒಂದು ತೇಟ್ಲ ಕೆಸು.
  • ಇದು ಕರಾವಳಿಯಲ್ಲಿ ಸಾಮಾನ್ಯ ಹೆಸರು.
  • ಈ ಕೆಸವಿನ ಎಲೆಯನ್ನಾಗಲೀ ದಂಟನ್ನಾಗಲೀ ಅಧಿಕ ಮಳೆ ಇರುವ ಆಷಾಢ ಮಾಸವನ್ನು ಹೊರತುಪಡಿಸಿ  ಉಳಿದ ಸಮಯದಲ್ಲಿ ಬಳಕೆ ಮಾಡಲು ಸಾಧ್ಯವಿಲ್ಲ.
  • ಅಷ್ಟು ತುರಿಕೆ ಇರುತ್ತದೆ. ಆಷಾಢ ಮಾಸ ಮಳೆಗಾಲ ಪ್ರಾರಂಭವಾಗಿ ಕೆಸು ಗಿಡ ಬೆಳೆದು ಎಳೆಯದಾದ ಎಲೆಗಳನ್ನು ಹೊಂದಿರುತ್ತದೆ.
  • ಆಗ ಅದರಲ್ಲಿಈ ಆಮ್ಲ ಗುಣ ಕಡಿಮೆ ಇರುತ್ತದೆ. ಇದರ ಎಲೆಗಳು ಸಣ್ಣದಾಗಿರುತ್ತದೆ.
  • ಸಾಮಾನ್ಯವಾಗಿ ನೀರು ಹೆಚ್ಚು ಇರುವಲ್ಲಿ ಬೆಳೆಯುತ್ತದೆ.
  • ಹಾಗಾಗಿ ನೀರ್ ಕೆಸು ಎಂಬ ಹೆಸರು.
  • ಇದರ ಎಲೆಗಳನ್ನು  ಕೈಯಲ್ಲಿ ಸುರುಳಿ ಸುತ್ತಿ, ಅದನ್ನು  ಒಂದು ಗಂಟು ಹಾಕಿದರೆ ಅದಕ್ಕೆ ಹೆಸರು ತೇಟ್ಲ ಎಂದು.
  • ಇದನ್ನು ಸೌತೆ  ಹಲಸಿನ ಬೀಜದ ಪದಾರ್ಥ ಮಾಡುವಾಗ ಮಿಶ್ರಣ  ಮಾಡಿ ಅಡುಗೆ ಹುಳಿ ಮಾಡುತ್ತಾರೆ. 
  • ಮಳೆಗಾಲದಲ್ಲಿ ಹಸಿವು ಹೆಚ್ಚು. ಬಾಯಿ ಚಪಲವೂ ಹೆಚ್ಚು.
  • ಆಗ ಈ ಪದಾರ್ಥ ಬಹಳ ರುಚಿಕಟ್ಟಾಗಿರುತ್ತದೆ. ಇದರಲ್ಲೂ ಸತ್ವಗಳು ಇಲ್ಲವೆಂದಲ್ಲ.
ಚೇಟ್ಲ ತಯಾರಿಕೆ
ಚೇಟ್ಲ ತಯಾರಿಕೆ

ಕೆಸುವಿನ ಎಲೆಯಲ್ಲಿ ಇರುವ  Vitamin A and also contains adequate quantities of Vitamins C, B, Thiamine, Riboflavin, Folate, Manganese, Copper, Potassium and Iron. ಸತ್ವಗಳು ಈ ಸಮಯದಲ್ಲಿ ಎಲೆಯಲ್ಲಿ, ದಂಟಿನಲ್ಲಿ, ಬೇರಿನಲ್ಲಿ ಪೂರ್ಣ ಪ್ರಮಾಣದಲ್ಲಿರುತ್ತದೆ. ಮಳೆಗಾಲ ಪ್ರಾರಂಭವಾಗುವಾಗ  ಬಲಿತಿರುವುದಿಲ್ಲ. ಮಳೆಗಾಲ ಮುಗಿಯುವಾಗ ಗಿಡ ಬಲಿತು ಅದು ಹೆಚ್ಚುವರಿ ಆಗಿರುತ್ತದೆ.  ಹಾಗಾಗಿ ಆಷಾಢದಲ್ಲಿ ಸೇವನೆ ಉತ್ತಮ.

ಕಳಲೆ ಅಥವಾ ಬಿದಿರಿನ ಮರಿ:

  • ಮಳೆಗಾಲದಲ್ಲಿ ಅದರಲ್ಲೂ ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ ಬಿದಿರಿನ ಸಸ್ಯಗಳು ಬೇಸಿಗೆಯಲ್ಲಿ ಹೇಗಿದ್ದರೂ ತನ್ನ ಸಂತಾನಾಭಿವೃದ್ದಿಗಾಗಿ ಕಂದುಗಳನ್ನು ( bamboo shoots or Sucker) ಬಿಡುತ್ತದೆ.
  • ಈ ಕಂದುಗಳು ಹೆಚ್ಚಾದರೆ  ಬಿದಿರಿನ ಮಳೆ ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ಅದನ್ನು ಬೇಕಾದಷ್ಟೇ ಇಟ್ಟುಕೊಳ್ಳಲು ಕೆಲವು ಮೊಳಕೆಗಳನ್ನು ತೆಗೆಯಬೇಕು.
  • ಅದನ್ನು ಪದಾರ್ಥ ಮಾಡಿದರೆ  ಸದುಪಯೋಗವಾದಂತಾಗುತ್ತದೆ ಎಂಬ ಉದ್ಡೇಶಕ್ಕೆ ಹಿರಿಯರು ಆಷಾಢದಲ್ಲಿ ಕಳಲೆ ತಿನ್ನಬೇಕು ಎಂದಿದ್ದಾರೆ.
ಕಳಲೆ
  • ಕಳಲೆಯಲ್ಲಿ ಸತ್ವಾಂಶಗಳೂ ಇವೆ. ಈ ಸತ್ವಾಂಶಗಳು ಬೆಳೆದ ನಂತರ ಬಳಸಲಿಕ್ಕೆ ಆಗುವುದಿಲ್ಲ.
  • ಎಳೆಯದಿರುವಾಗ ಮಾತ್ರ ಅದನ್ನು ತುಂಡು ಮಾಡಲು ಸಾಧ್ಯವಾದ ಕಾರಣ ಆಗಲೇ ಅದನ್ನು ಬಳಕೆ ಮಾಡಲಾಗುತ್ತದೆ.
  • ಆಷಾಢ ಪ್ರಾರಂಭವಾಗುವಾಗ ಕಳಲೆ ಮೊಳಕೆ ಬಳಕೆಗೆ ಯೋಗ್ಯವಾಗಿರುತ್ತದೆ.
  • ನಂತರ ಇಲ್ಲ. ಹಾಗಾಗಿ ಆಷಾಢದಲ್ಲಿ ಅದನ್ನು ಬಳಕೆ ಮಾಡಬೇಕು.
  • ಕಳಲೆಯನ್ನು ಜಾಗರೂಕತೆಯಲ್ಲಿ ಬಳಕೆ ಮಾಡಬೇಕು ಅದರ ಸಿಪ್ಪೆ  ಚೆನ್ನಾಗಿ ತೆಗೆಯಬೇಕು.
  • ಬೇಕಾದಂತೆ ಕೊರೆದು ಅದನ್ನು ಒಂದು ದಿನ (ಕನಿಷ್ಟ 12 ಗಂಟೆ) ನೀರಿನಲ್ಲಿ ಇಟ್ಟು ಬಳಕೆ ಮಾಡಬೇಕು.
  • ಸ್ವಲ್ಪ ಸ್ವಲ್ಪ ಬಳಕೆ ಮಾಡಿದರೆ ಉತ್ತಮ. ಹೆಚ್ಚಾದರೆ ಅದನ್ನು ಶರೀರ ಜೀರ್ಣಿಸಿಕೊಳ್ಳಲಾರದು.
  • ಕಳಲೆಯಲ್ಲಿ ವಿಟಮಿನ್ ಗಳು. ಖನಿಜಗಳು. ಪ್ರೋಟೀನು, ನಾರು ಇತ್ಯಾದಿ ಹೇರಳವಾಗಿದ್ದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
  • ಹೃದಯದ ತೊಂದರೆ ಕಡಿಮೆ ಮಾಡುತ್ತದೆ ಎನ್ನುತ್ತಾರೆ.

ನಾವು ಕೆಲವು ಋತುಮಾನದ ಆಹಾರ ವಸ್ತುಗಳನ್ನು ಆಯಾ ಋತುಮಾನದಲ್ಲಿ ಬಳಕೆ ಮಾಡಬೇಕು. ಆಗಲೇ ಅದರಲ್ಲಿ ಸತ್ವಗಳು ಒಗ್ಗೂಡಿಕೊಂಡಿರುತ್ತವೆ. ಅವುಗಳನ್ನು ಆ ನಂತರ ಬಳಕೆ ಮಾಡಲಿಕ್ಕೂ ಆಗುವುದಿಲ್ಲ.  ಮಳೆಗಾಲದ ಶೀತ ಹವೆ, ಅದನ್ನು ಬೆಚ್ಚಗೆ ಮಾಡಲು ಇಂತಹ ಉಷ್ಣ ಆಹಾರಗಳನ್ನು ಸೇವನೆ ಮಾಡಿ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವ ಹಿರಿಯರ ಕ್ರಮ ಅತ್ತ ಆರೋಗ್ಯವೂ , ಇತ್ತ ಆಹಾರವೂ ಆಗಿರುತ್ತದೆ. ಇದನ್ನು ನಾವೂ ಮರೆಯದೆ ಪಾಲಿಸೋಣ.

Leave a Reply

Your email address will not be published. Required fields are marked *

error: Content is protected !!