ರೋಗ-ಕೀಟ ನಿರೋಧಕ ತಳಿಗಳು ನಿಮ್ಮ ಬಳಿಯಲ್ಲೇ ಇರಬಹುದು. ಹೇಗೆ ಹುಡುಕುವುದು?

by | Aug 30, 2021 | Indiginous Knowledge (ಪಾರಂಪರಿಕ ಜ್ಞಾನ) | 0 comments

ರೋಗ ನಿರೋಧಕ ಶಕ್ತಿ ಎಂಬುದು ಕೆಲವು ತಳಿಗಳ ವಂಶ ಗುಣ.  ಇದನ್ನು ಕೃಷಿ ವಿಜ್ಞಾನ ಅಧ್ಯಯನ ಮಾಡಿದವರೇ ಹುಡುಕಿ ಅಭಿವೃದ್ದಿಪಡಿಸಬೇಕಾಗಿಲ್ಲ. ಸಾಮಾನ್ಯ ರೈತರೂ ಅದನ್ನು ಅಭ್ಯಸಿಸಿ ತಮ್ಮ ಬಳಕೆಗಾದರೂ  ಉಪಯೋಗಿಸಿಕೊಳ್ಳಬಹುದು. ಈ ಬಗ್ಗೆ ಬೆಳಕು ಚೆಲ್ಲುವ ಒಂದು ಅಪರೂಪದ ಲೇಖನ ಇಲ್ಲಿದೆ.

ಕೆಲವು ರೈತರ ಅಡಿಕೆ ತೋಟದಲ್ಲಿ ಪ್ರತೀ ವರ್ಷ ಕೊಳೆ ಬರುತ್ತದೆ. ಹಾಗೆಂದು ಎಲ್ಲಾ ಮರಗಳಿಗೂ ಕೊಳೆ ಬರುವುದಿಲ್ಲ.  ಹಾಗೆಯೇ ಕರಿಮೆಣಸು, ತೆಂಗು,  ಏಲಕ್ಕಿ, ನೆಲಕಡ್ಲೆ, ಹತ್ತಿ, ದಾಳಿಂಬೆ,  ಎಲ್ಲಾ ಕೃಷಿ, ತೋಟಗಾರಿಕೆ, ತರಕಾರಿ , ಸಾಂಬಾರ ಬೆಳೆಗಳಲ್ಲೂ ಎಲ್ಲಾ ಸಸಿಗಳೂ ರೋಗಕ್ಕೆ ತುತ್ತಾಗುವುದಿಲ್ಲ. ಕೆಲವು ರೋಗ- ಕೀಟಗಳ ಉಪಟಳದ ಎಡೆಯಲ್ಲೂ  ಏನೂ ಆಗದೆ ಉಳಿಯುವವುಗಳು ಇವೆ.   ಊರಿಗೆ ಊರೇ ನೆಗಡಿ, ಜ್ವರ ಮುಂತಾದ  ಅಸ್ವಾಸ್ಥ್ಯಕ್ಕೆ ಒಳಗಾದರೂ  ಅದರಲ್ಲೂ ಕೆಲವರು ಏನೂ ಆಗದೆ ಬಚಾವಾಗಿರುತ್ತಾರೆ. ಅಂತವರಿಗೆ ರೋಗ ನಿರೋಧಕ ಶಕ್ತಿ ಇದೆ ಎಂದು ತೀರ್ಮಾನಿಸಬಹುದು. ಇದೇ ರೀತಿಯಲ್ಲಿ  ಕೃಷಿಕರು ತಮ್ಮ ಹೊಲದಲ್ಲೇ ತಾವು ಬೆಳೆಯುವ ಬೆಳೆಯಲ್ಲಿ ರೋಗ-ಕೀಟ ನಿರೋಧಕ ಶಕ್ತಿ ಪಡೆದ ತಳಿಯನ್ನು ಹುಡುಕಬಹುದು.

  • ಕಳೆದ ವರ್ಷ ಒಮ್ಮೆ ಹರಿಹರದ ಒಂದು ಊರಿಗೆ ಹೋಗಿದ್ದೆ.
  • ಒಂದು ಮನೆಯ ಜಗಲಿಯಲ್ಲಿ ಒಂದು ತೆಂಗಿನ ಮರ  ಇತ್ತು. ಜಗಲಿಗೆ ಕಾಂಕ್ರೀಟ್ ಹಾಕಿದ್ದಾರೆ. 
  • ಮನೆಯ ಯಜಮಾನರು ಹೇಳುತ್ತಾರೆ, ಈ ತೆಂಗಿನ ಮರಕ್ಕೆ ನೀರು, ಗೊಬ್ಬರ ಕೊಟ್ಟದ್ದೇ ಇಲ್ಲ ಎಂದು.
  • ಮರದ ಶಿರ ಭಾಗ ನೋಡಿದರೆ ಕೈ ಹಾಕಲು ಜಾಗ ಇಲ್ಲದಷ್ಟು ಕಾಯಿಗಳಿವೆ.
  • ಅದು ಗೊಬ್ಬರದ ಗುಣವೂ ಅಲ್ಲ. ನೀರೂ ಇಲ್ಲ. ಬರೇ ತಳಿ ಗುಣ.
ಎಲ್ಲಾ ಕಡೆಯಲ್ಲೂ ಕಂಡು ಬರುವ ಕರಿಮೆಣಸಿನ ರೋಗ ರಹಿತ ನಾಟೀ ತಳಿ
ಎಲ್ಲಾ ಕಡೆಯಲ್ಲೂ ಕಂಡು ಬರುವ ಕರಿಮೆಣಸಿನ ರೋಗ ರಹಿತ ನಾಟೀ ತಳಿ

ನೀರು- ಗೊಬ್ಬರ- ರೋಗ  ಇಲ್ಲದ ತಳಿ:

  • ಇಲ್ಲೊಬ್ಬರು ನನಗೆ ಗೊತ್ತಿರುವವರು ಒಂದು ಫೋಟೋ ಹಾಕಿದ್ದಾರೆ. 
  • ಇದನ್ನು ನಾನು ಕಳೆದ ವರ್ಷವೂ ಅವರ ತೋಟದಲ್ಲಿ ನೋಡಿದ್ದೇನೆ.
  • ಈ ಅಡಿಕೆ ಮರ ತೋಟದ ಒಂದು ಬದಿಯಲ್ಲಿ ಇದೆ.
  • ಇದಕ್ಕೆ ನೀರು ಬಿಡುವ ಕ್ರಮ ಇಲ್ಲ. ಗೊಬ್ಬರ  ಹಾಕುವುದೂ ಇಲ್ಲ.
  • ಕಾರಣ ಇದು  ಅದರಷ್ಟಕ್ಕೆ ಬಿದ್ದು, ಹೆಕ್ಕಲು  ಮರೆತು ಹುಟ್ಟಿ ಬೆಳೆದ ಗಿಡ.( ಉರುವಲು ಹುಟ್ಟಿದ್ದು)
  • ಇದು ಫಲ ಕೊಡಲು ಪ್ರಾರಂಭವಾಗಿ  3 ವರ್ಷ ಆಗಿದೆ.
  • ಈ ತನಕ ಅದಕ್ಕೆ ಯಾವ ಗೊಬ್ಬರವನ್ನೂ ನೀಡಿಲ್ಲ. ಕೊಳೆ ಔಷಧಿಯನ್ನೂ ಹೊಡೆದಿಲ್ಲ.
  • ಒಂದು ಧರೆಯ ಬದಿಯಲ್ಲಿ ಅದು ಇತರ ನೆಟ್ಟು ಬೆಳೆದ ಸಸಿಗಳಂತೆ ಬೆಳೆದು ಹೂ ಗೊಂಚಲು ಬಿಟ್ಟಿದೆ. 
  • ಕಾಯಿ ಕಚ್ಚಿದೆ. ಮೂರು ಗೊನೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ಅಡಿಕೆ ಇದೆ.
  • ಮೂರು ವರ್ಷಗಳ ಇದರ ಕ್ಷಮತೆಯನ್ನು ಗಮನಿಸಿದಾಗ ಇದಕ್ಕೆ ರೋಗ ನಿರೋಧಕ ಶಕ್ತಿ, ಬರ ನಿರೋಧಕ ಶಕ್ತಿ ಹಾಗೂ ಗೊಬ್ಬರದ ಶಕ್ತಿ ಇಲ್ಲದೆ ಬೆಳೆಯುವ ಅಂತಃ ಶಕ್ತಿ ಇದೆ ಎಂದು ತಿಳಿಯಬಹುದು. 
  • ಇದರ ಬೀಜವನ್ನು ಆಯ್ಕೆ ಮಾಡಿ ಅದನ್ನು ಬೆಳೆಸಿದರೆ ಅದಕ್ಕೆ ಈ ಗುಣ ಇದೆ ಎಂದಾದರೆ ಅದಕ್ಕೆ ರೋಗ- ಕೀಟ ಹಾಗೆಯೇ ಮೇಲಿನ ಎಲ್ಲಾ ಗುಣಗಳೂ ಇವೆ ಎಂದು ತೀರ್ಮಾನಕ್ಕೆ ಬರಬಹುದು. 
  • ಹಾಗೆಂದು ಅದರ ಎಲ್ಲಾ ಬೀಜಗಳಿಗೂ ಅದರ ಮಾತೃ ಗುಣ ಬರಲಿಕ್ಕಿಲ್ಲ.
  • ಸ್ವಲ್ಪ ಸಸಿಗಾದರೂ ಬರಬಹುದು.
  • ಇದು ಕಾಸರಗೋಡು ಜಿಲ್ಲೆ, ಸುಂಕದಕಟ್ಟೆ , ಕೋಳ್ಯೂರಿನ ಓರ್ವ ಕೃಷಿಕರ  ತೋಟದ ಬದಿಯಲ್ಲಿ ಬೆಳೆದ ಗಿಡ. 
  • ಇಂತದ್ದು ಅವರ ತೋಟದಲ್ಲಿ ಮಾತ್ರವಲ್ಲ ಬಹಳಷ್ಟು ರೈತರ ತೋಟದಲ್ಲೂ ಇರಬಹುದು.
ನೀರು, ಗೊಬ್ಬರ, ಔಷಧಿ ಇಲ್ಲದೆ ಬೆಳೆದ ಅಡಿಕೆ ಮರ
ನೀರು, ಗೊಬ್ಬರ, ಔಷಧಿ ಇಲ್ಲದೆ ಬೆಳೆದ ಅಡಿಕೆ ಮರ

ರೋಗ – ಕೀಟ ಎಲ್ಲದಕ್ಕೂ ಬಾಧಿಸುವುದಿಲ್ಲ:

  • ಶ್ರಿಂಗೇರಿ ಸುತ್ತಮುತ್ತ ಒಂದೆರಡು ಹಳದಿ ಎಲೆ ರೋಗ ಪೀಡಿತ ಅಡಿಕೆ ತೋಟಗಳಲ್ಲಿ ಗಮನಿಸಿದಾಗ ಬಹುತೇಕ ಅಡಿಕೆ ಮರಗಳು ಹಳದಿ ಎಲೆ ರೋಗಕ್ಕೆ ತುತ್ತಾಗಿದ್ದರೂ
  • ಅದರಲ್ಲಿ  ಕೆಲವೇ ಕೆಲವು ಅವುಗಳ ಎಡೆಯಲ್ಲೂ ರೋಗಕ್ಕೆ ತುತ್ತಾಗದೇ ಇರುವಂತಹ ಗಿಡಗಳು/ ಮರಗಳು ಇರುವುದನ್ನು ಕಂಡಿದ್ದೇನೆ. 
  • ಆ ತೋಟದಲ್ಲಿ ಹಳದಿ ಎಲೆಗೆ ಕಾರಣವಾದ ನಂಜಾಣುವಿನ ಬಾಧೆಗೆ ಬೇಗ ಬಲಿಯಾಗದೆ ಇರುವ ವಂಶ ಗುಣ ಪಡೆದ ತಳಿ ಇದು ಎಂದು ಬಾವಿಸಬಹುದು.
  • ಎಲ್ಲಾ ಬೆಳೆ ಬೆಳೆಯುವ ಹೊಲದಲ್ಲೂ ಇದು ಇದ್ದೇ ಇರುತ್ತದೆ.
  • ಆದರೆ ನಾವು ಅದನ್ನು ಗುರುತಿಸುವುದಿಲ್ಲ . 
  • ನಾವು ಬೆಳೆ ಬೆಳೆಯುವ ಹೊಲದಲ್ಲಿ ನಾವು ಎಲ್ಲಾ ಸಸಿಗಳನ್ನೂ ಚೆನ್ನಾಗಿ ಗಮನಿಸುವುದೂ ಇಲ್ಲ.
  • ಹಾಗಾಗಿ ನಮಗೆ ಅದರ ಎಲ್ಲಾ ಗುಣಗಳೂ ಅರಿವಿಗೆ ಬರುವುದಿಲ್ಲ.

ತಳಿ ಸಂರಕ್ಷಣೆಗೆ ತಜ್ಞರೇ ಆಗಬೇಕಾಗಿಲ್ಲ:

ಹರಿಹರದಲ್ಲಿ ಕಂಡ ಒಂದು ತೆಂಗಿನ ಮರ
ಹರಿಹರದಲ್ಲಿ ಕಂಡ ಒಂದು ತೆಂಗಿನ ಮರ
  • ನಮಗೆಲ್ಲಾ ಸಿದ್ದು ಹಲಸಿನ  ಬಗ್ಗೆ ಗೊತ್ತಿದೆ.
  • ಇತ್ತೀಚೆಗೆ ಶಿರಸಿಯ ಸಿದ್ದಾಪುರದಲ್ಲಿ  ಒಂದು  ಕರಿ ಮೆಣಸಿನ ತಳಿ (ಸುಗಂಧಿನಿ) ಯನ್ನು ರೈತರು ಅಭಿವೃದ್ದಿಪಡಿಸಿ ಅದಕ್ಕೆ ಪೇಟೆಂಟ್ ಪಡೆದುಕೊಂಡದ್ದು ನಮಗೆಲ್ಲಾ ಗೊತ್ತಿದೆ. 
  • ರೈತರೂ ತಮ್ಮ ಹೊಲದಲ್ಲಿ ಇರುವ ತಳಿಗಳ ವಿಶೇಷತೆಯನ್ನು ಸರಿಯಾಗಿ ಅಧ್ಯಯನ  ಮಾಡಿ ಅದರ ಗುಣಗಳ ಮೇಲೆ ಅದನ್ನು ತಮ್ಮ  ಹಕ್ಕಿನ ತಳಿಯಾಗಿ ಪರಿವರ್ತಿಸಬಹುದು.
  • ಅದನ್ನು ಇಷ್ಟ ಇದ್ದವರು ಮಾಡಬಹುದು, ಇಷ್ಟ ಇಲ್ಲದವರು  ತಮ್ಮ ಸ್ವಂತ ಬಳಕೆಗಾದರೂ ಇದನ್ನು ಉಪಯೋಗಿಸಿಕೊಳ್ಳಬಹುದು.

ತಳಿಯಲ್ಲಿ ಅಧಿಕ ಇಳುವರಿಯೇ ಮಾನದಂಡವಲ್ಲ:

ನಾಟಿ ಕರಿಮೆಣಸು
ನಾಟಿ ಕರಿಮೆಣಸು
  • ಕೆಲವು ರೈತರು ಅಧಿಕ ಇಳುವರಿ ಎಂದು ಅದರ ಹಿಂದೆ ಹೋಗುತ್ತಾರೆ.
  • ಕೃಷಿ ಎಂದರೆ ಲಾಭದಾಯಕ ಇಳುವರಿ  ಬೇಕು ನಿಜ.
  • ಅದರೆ ಖರ್ಚು ಇಲ್ಲದೆ ಮಧ್ಯಮ ಇಳುವರಿ ಪಡೆಯುವಂತಾದರೆ  ಅದೂ ಲಾಭವೇ ಆಗಿರುತ್ತದೆ.
  • ನಾವು ಅಧಿಕ ಇಳುವರಿಗೆ ಮಾಡುವ ಒಳ ಸುರಿಗಳ ಖರ್ಚು ಲೆಕ್ಕಾಚಾರ ಹಾಕಿದರೆ ನಮಗೆ ಮಧ್ಯಮ ಇಳುವರಿ ಬಂದರೂ ಅದು ಅಧಿಕ ಇಳುವರಿಗಿಂತ ಲಾಭದಾಯಕವಾಗುತ್ತದೆ.
  • ಭಾರತ ಸರಕಾರ ಈಗ ತಳಿ ಸಂರಕ್ಷಣೆ ಮತ್ತು  ರೈತರ ಹಕ್ಕು ಗಳು (Protection of plant varieties and  farmers right) ಎಂಬ  ಕಾಯಿದೆ  ಇದ್ದು, ಇದರಂತೆ  ವಿಶಿಷ್ಟ ಗುಣದ ತಳಿಗಳಿದ್ದರೆ ಅದನ್ನು ನಾವು ನೊಂದಣೆ ಮಾಡಬಹುದು.
  • ಇದು ತಜ್ಞರ ಸಮಿತಿಯಲ್ಲಿ  ಪಾಸ್ ಆದರೆ ಅದಕ್ಕೆ ನೀವೇ ಹಕ್ಕುದಾರರಾಗಿರುತ್ತೀರಿ.
  • ಅದನ್ನು ಯಾರೇ ಸಸಿ ಮಾಡಿ ಮಾರಾಟ ಮಾಡಿದರೂ ಅದರ ರಾಯಧನ ನಿಮಗೆ ಸಿಗುತ್ತದೆ.
  • ಸಿದ್ದು ಹಲಸು ಮರ ಇರುವ ಹೊಲದ ಮಾಲಿಕ ಲಕ್ಷಾಂತರ ರೂ. ಆದಾಯವನ್ನು ವರ್ಷ ವರ್ಷ ಗಳಿಸುವಂತೆ ನಾವೂ ಗಳಿಸಲು ಅಸಾಧ್ಯವೆಂದೇನೂ ಇಲ್ಲ.  

ಇದು ಒಂದು ಅಧ್ಯಯನ :

  • ಉತ್ತಮ ತಳಿ ರೋಗ ನಿರೋಧಕ ಗುಣದ ತಳಿ, ಆಯ್ಕೆ  ತಳಿ ಎಂದು ತೀರ್ಮಾನ ಮಾಡುವುದು ದೀರ್ಘಾವಧಿಯ ಕೆಲಸ.
  • ಅಲ್ಪಾವಧಿ ಬೆಳೆಗಳಲ್ಲಿ ಸ್ವಲ್ಪ ಬೇಗ ಇದನ್ನು ಗುರುತಿಸಬಹುದಾದರೂ ಧೀರ್ಘಾವಧಿ ತಳಿಗಳಲ್ಲಿ ಇದಕ್ಕೆ 7-8 ವರ್ಷಗಳು ಬೇಕಾಗಬಹುದು.
  • ಇಲ್ಲಿ ಮಕ್ಕಳಾಟಿಕೆ ಮಾಡುವಂತಿಲ್ಲ.  ಪ್ರತೀಯೊಬ್ಬ ಕೃಷಿಕನೂ  ಬರೇ ಬೀಜ ಬಿತ್ತುವುದು,ಗೊಬ್ಬರ ಹಾಕುವುದು, ಬೆಳೆ ತೆಗೆಯುವುದು ಮಾರಾಟ ಮಾಡುವುದು ಇಷ್ಟನ್ನೇ ಮಾಡುತ್ತಾ ಇರುವುದಲ್ಲ. 
  • ಸ್ವಲ್ಪ  ತನ್ನ ಅನುಭವಕ್ಕಾದರೂ ಇಂತಹ ವಿಷಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು.
  • ಜ್ಞಾನವು ಅನುಭವದಿಂದ ಬರುತ್ತದೆ.  ಒಳಗೆ ಒಳಗೆ ಹೋದಂತೆ ಹೊಸತು ಹೊಸತು ತಿಳಿಯುತ್ತದೆ.
  • ಮತ್ತೆ ಮತ್ತೆ ತಿಳಿದುಕೊಳ್ಳುವ ಕುತೂಹಲವೂ ಬರುತ್ತದೆ.
  • ಯಾವುದಕ್ಕೂ ನಾವು ಅದರಲ್ಲಿ ಇಳಿದು ನೋಡಬೇಕು.
  • ಕೆಲವು ಮಣ್ಣಿನಲ್ಲಿ ರೋಗ ಕೀಟ ಸಮಸ್ಯೆ ಕಡಿಮೆ ಇರುತ್ತದೆ.
  • ಅದಕ್ಕೆ ಕಾರಣ  ಆ ಮಣ್ಣಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಡುವ ಜೀವಾಣುಗಳೂ ಇರಬಹುದು.
  • VAM Vesicular arbuscular mycorrhizae,  ಹಾಗೆಯೇ ಇನ್ನಿತರ ಜೀವಾಣುಗಳು ಮಣ್ಣಿನಲ್ಲಿ ಇದ್ದಾಗ ಅವು ರೋಗವನ್ನು ತಡೆ ಹಿಡಿದು ಬೆಳೆಯನ್ನು ರಕ್ಷಿಸುತ್ತವೆ.

ರೈತರು ತಮ್ಮ ವೃತ್ತಿಯಲ್ಲಿ ಹೆಚ್ಚು ಹೆಚ್ಚು ತಜ್ಞತೆಯನ್ನು ಬೆಳೆಸಿಕೊಳ್ಳಬೇಕು. ಒಬ್ಬ ಏನೋ ಹೇಳಿದರೆ ಅದನ್ನು ಪ್ರಶ್ಣೆ ಮಾಡುವಷ್ಟು ತಜ್ಞತೆ ರೈತನಿಗೆ ಬರಬೇಕು. ಇದಕ್ಕೆ ಕೃಷಿ ಶಿಕ್ಷಣವೇ ಅಗತ್ಯವೆಂದಲ್ಲ. ರೈತನಲ್ಲಿ ಕೃಷಿ ಶಿಕ್ಷಣ ಇಲ್ಲದಿದ್ದರೂ ಅನುಭವದಲ್ಲಿ ಅವನ ಜ್ಞಾನ ಶಿಕ್ಷಣ ಪಡೆದವನಿಗಿಂತ ಹೆಚ್ಚು ಇರುತ್ತದೆ. ಅದನ್ನು ಒರೆಗೆ ಹಚ್ಚಿ ಪುಠಕ್ಕಿಡಬೇಕು. 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!