ಅಡಿಕೆ ಬೆಳೆಯ ಭವಿಷ್ಯದ ಸ್ಥಿತಿ ಏನಾಗಬಹುದು?

ಭವಿಷ್ಯದ ಅಡಿಕೆ ತೋಟ

ಅಡಿಕೆ ಬೆಳೆ ವಿಸ್ತರಣೆ ಆಗುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಅಡಿಕೆಗೆ ಬೆಲೆ ಇಲ್ಲದೆ ರೈತ ಕಂಗಾಲಾಗಬೇಕಾಗಬಹುದು ಎಂಬ ಆತಂಕ ಎಲ್ಲರಲ್ಲೂ ಇದೆ. ಆದರೆ ಅಂತದ್ದೇನೂ ಆಗುವುದಿಲ್ಲ.ಅಡಿಕೆ ಬೆಳೆ ಪ್ರದೇಶ ಹೆಚ್ಚಾದರೂ ಅದಕ್ಕನುಗುಣವಾಗಿ ಉತ್ಪಾದನೆ ಹೆಚ್ಚಳವಾಗುವುದಿಲ್ಲ. ಯಾಕೆ ಗೊತ್ತೇ?

ಹಿಂದೆ ಕರಾವಳಿ ಮಲೆನಾಡಿನಲ್ಲಿ ಅಡಿಕೆ ಬೆಳೆ ಇದ್ದುದು ಕಣಿವೆಯಂತಹ ತಗ್ಗು ಭಾಗಗಳಲ್ಲಿ ಮಾತ್ರ. ಆಗ ಖುಷ್ಕಿ  ಭೂಮಿಯಲ್ಲಿ ಅಡಿಕೆ ಬೆಳೆದರೆ  ಜನ ಅದೆಲ್ಲಾ ಆಗುವ ಹೋಗವಂತದ್ದೇ ಎಂದು ಹೇಳುತ್ತಿದ್ದರು.  ಪರಿಸ್ಥಿತಿ ಬದಲಾವಣೆ ಆಯಿತು. ಒಂದೆಡೆ ಭತ್ತದ ಗದ್ದೆಗಳೂ ಅಡಿಕೆ ಬೆಳೆಗೆ ಪರಿವರ್ತನೆಯಾದವು. ಏರು ತಗ್ಗಿನ ಗುಡ್ಡಗಾಡು ಪ್ರದೇಶದಲ್ಲೂ ಅಡಿಕೆ ಬೆಳೆಯಲು ಪ್ರಾರಂಭಿಸಿದರು. ನೀರು ಒಂದು ಇದ್ದರೆ ಅಡಿಕೆ ಎಲ್ಲಿಯೂ ಬೆಳೆಯಬಹುದು. ನೆಲದಲ್ಲಿ ನೀರು ಇಲ್ಲದೆ ಇರುವುದೇ ಇಲ್ಲ ಎಂದು ಎಷ್ಟು ಆಳವಾದರೂ  ಸೈ ಎಂದು  ಕೊಳವೆ ಬಾವಿ ಕೊರೆಸಿ ಅಡಿಕೆ ಕೃಷಿ ಮಾಡಲಾರಂಭಿಸಿದೆವು. ಅದಕ್ಕನುಗುಣವಾಗಿ  ಅಡಿಕೆಗೆ ಬೆಲೆಯೂ ಏರಿಕೆಯಾಗಲಾರಂಭಿಸಿತು. ಸಾಂಪ್ರದಾಯಿಕ ಪ್ರದೇಶಗಳನ್ನು ಬಿಟ್ಟು ಅಸಾಂಪ್ರದಾಯಿಕ ಪ್ರದೇಶಗಳಲ್ಲೂ ಅಡಿಕೆ ಬೆಳೆಯಲಾರಂಭಿಸಿದರು. ಇದೇ ರೀತಿ ಮುಂದುವರಿದರೆ ಇಡೀ ಕರ್ನಾಟಕ ಎಂಬುದು ಅಡಿಕೆ ಬೆಳೆಯ ರಾಜ್ಯ ಎಂದಾದರೂ ಅಚ್ಚರಿ ಇಲ್ಲ. 

 • ಅಡಿಕೆಯನ್ನು ಇವರೇ ಬೆಳೆಸಬೇಕು, ಇಲ್ಲಿಯೇ ಬೆಳೆಸಬೇಕು ಎಂಬ ಯಾವ ನಿರ್ಭಂಧವೂ ಇಲ್ಲ.
 • ಕೃಷಿಕರಾದವರು ಅದಾಯ ಹೆಚ್ಚುಇರುವ  ಬೆಳೆಯನ್ನು ಬೆಳೆಸಲು ಯಾವಾಗಲೂ ಸ್ವತಂತ್ರರು.
 • ಆದರೆ ಬೆಳೆ ಬೆಳೆಯುವಾಗ ಆ ಬೆಳೆಗೆ ನಮ್ಮ ಹೊಲದ ಮಣ್ಣು ವಾತಾವರಣ ಎಷ್ಟು ಹೊಂದಿಕೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳದೆ ಬೆಳೆಸಿದರೆ ಬಹಳ ನಷ್ಟ ಉಂಟಾಗುತ್ತದೆ.   
 • ಬಹುಷಃ ಈ ರೀತಿ  ಬೆಳೆ ಪ್ರದೇಶ ವಿಸ್ತರಣೆಯಾದರೂ ಅದರ ಸಮತೋಲನವನ್ನು ಅದು ಮಾಡಿಕೊಳ್ಳುತ್ತದೆ ಎಂಬುದು ಮಾತ್ರ ಸತ್ಯವಾದ ವಿಚಾರ.
ಇಂತಹ ಭೂ ಪ್ರಕೃತಿಯಲ್ಲಿ ಬೆಳೆದ ಅಡಿಕೆ ತೋಟ ಯಾವಾಗಲೂ ಉತ್ತಮ
ಇಂತಹ ಭೂ ಪ್ರಕೃತಿಯಲ್ಲಿ ಬೆಳೆದ ಅಡಿಕೆ ತೋಟ ಯಾವಾಗಲೂ ಉತ್ತಮ

ಸಮತೋಲನ ಹೇಗೆ:

 • ಅಡಿಕೆ ಬೆಳೆ ಎಲ್ಲರಲ್ಲೂ ಇದೆ. ಆದರೆ ಎಲ್ಲಾ ಕಡೆಯಲ್ಲೂ ಅದು ಸುಲಭದ ಬೆಳೆಯಾಗಿ ಇಲ್ಲ. 
 • ಅಡಿಕೆಗೆ ಹಿಂದಿನವರು ಕೆಲವು ಹೊಲಗಳು ಪ್ರಶಸ್ತವಲ್ಲ ಎಂದು ಅದರಲ್ಲಿ ಬೆಳೆ ಬೆಳೆಸುತ್ತಿರಲಿಲ್ಲ.
 • ಅಂತಹ ಹೊಲಗಳೆಂದರೆ ಮೂರೂ ಹಂಗಾಮಿನಲ್ಲೂ ಭತ್ತ ಬೆಳೆಯುವ  ಪ್ರದೇಶಗಳು. 
 • ಹಾಗೆಯೇ ಎತ್ತರ ತಗ್ಗಿನ ಗುಡ್ಡ ಭೂಮಿ. ಇಲ್ಲಿ ಬೆಳೆದರೆ  ಏನಾಗುತ್ತದೆ ಎಂಬುದು ನಮಗೆ ಈಗ ಗೊತ್ತಾಗಲಾರಂಭಿಸಿದೆ.

ಬೇರು ಹುಳದ ಉಪಟಳ:

 • ಕಳೆದ ಕೆಲವು ವರ್ಷಗಳಿಂದ ಅಡಿಕೆ ಬೆಳೆಯಲ್ಲಿ ಭಾರೀ ತಲೆನೋವಾಗಿ  ಪರಿಣಮಿಸಿರುವ  ಬೇರು ಹುಳದ ಬಾಧೆ  ಎಂಬುದು ಅಡಿಕೆ ಬೆಳೆಯನ್ನು ಹದ್ದು ಬಸ್ತಿನಲ್ಲಿ ಇಡಲು ಪ್ರಕೃತಿ ಕೊಟ್ಟಂತಹ ಬಳುವಳಿ ಎಂದೇ ಹೇಳಬಹುದು. 
 • ಬಹಳ ಜನರಿಗೆ ಈ ಮಾತು ಬೇಸರ ತರಬಹುದು. ಆದರೆ ಹಿರಿಯರೂ ಅಡಿಕೆಯೆ ಬೇರು ಹುಳದ ಬಗ್ಗೆ ಭಾರೀ ಅಧ್ಯಯನ ಮಾಡಿದ ಶ್ರಿಂಗೇರಿ ತಾಲೂಕು ಬೇಗಾನೆ ಕಾಡಪ್ಪನವರು ಹೇಳುತ್ತಿದ್ದುದು ನನಗೆ ಈಗಲೂ ನೆನಪಿದೆ. 
 • “ಅಡಿಕೆ ಮರಕ್ಕೆ ಬೇರು ಇರುವ ತನಕ ಅದಕ್ಕೆ ಬೇರು ಹುಳದ ಬಾಧೆ ಇರುತ್ತದೆ” 
 • ನಮ್ಮಲ್ಲಿ ಒಟ್ಟಾರೆಯಾಗಿ  10-15 %  ಅಡಿಕೆ ತೋಟಗಳು  ಬೇರು ಹುಳದ ಬಾಧೆಗೆ ಸಿಲುಕಿ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತಿದೆ.
ಬೇರು ಹುಳದಿಂದ ತೋಟ ಹಾಳಾಗಿರುವುದು
ಬೇರು ಹುಳದಿಂದ ತೋಟ ಹಾಳಾಗಿರುವುದು

ಸುಳಿ ಕೊಳೆ ರೋಗದ ಹೆಚ್ಚಳ:

 • ಇತ್ತೀಚೆಗೆ ಪ್ರಾರಂಭವಾದ  ಸುಳಿ ಕೊಳೆ ರೋಗ.
 • ಬಹುಷಃ ಸುಳಿ ಕೊಳೆ ರೋಗ ಇಂದು ಒಟ್ಟಾರೆ ಅಡಿಕೆ ಬೆಳೆಯಲ್ಲಿ 1% ದಷ್ಟು ಇದೆ.
 • ಇದು ವರ್ಷದಿಂದ ವರ್ಷ  ಹೆಚ್ಚಾಗುತ್ತಿದೆ. ಪರಿಹಾರ ಕ್ರಮಗಳಿಗೆ ಬಗ್ಗುತ್ತಿಲ್ಲ.
 • ಇದು ಇನ್ನೂ ಕೆಲವು ವರ್ಷಗಳಲ್ಲಿ ಹೆಚ್ಚಾಗುತ್ತಾ ಹೋಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.
 • ಅದಕ್ಕೆ ಮೂಲ ಕಾರಣ ಹವಾಮಾನವೇ ಹೊರತು ಮತ್ತೇನಲ್ಲ.
 • ಇದಕ್ಕೆ ಪರಿಹಾರ ಕ್ರಮಗಳಿದ್ದರೂ ಅದನ್ನು ಅನುಸರಿಸುವುದು ಹೇಳಿದಷ್ಟು ಸರಳ ಅಲ್ಲ.
 • ಮುಂದಿನ ದಿನಗಳಲ್ಲಿ ಅಕಾಲಿಕ ಮಳೆ ಆರ್ಧ್ರ ಹವಾಮಾನ  ಹಾಗೆಯೇ ಇನ್ನಿತರ ಮಣ್ಣು ನೀರು ಸಂಬಂಧಿತ ಕಾರಣಗಳಿಂದ ಇದು ಹೆಚ್ಚಾಗುತ್ತಾ ಬರುತ್ತದೆ.
 • ಅಡಿಕೆ ಮರ/ ಸಸಿಗೆ ಸುಳಿ ಕೊಳೆ ರೋಗ ಬಂದರೆ ಅದನ್ನು ಔಷದೋಪಚಾರ ಮಾಡಿ ವಾಸಿ ಮಾಡುವುದು ಸರಳ ಕೆಲಸ ಅಲ್ಲ.
 • ಮರದ ಸುಳಿಯಲ್ಲಿ ಯಾವುದೇ ನಿರ್ವಹಣೆ ಮಾಡಲು ಸಾಧ್ಯವೂ ಇಲ್ಲ.
 • ರೋಗ ಬಂದು ರೋಗಾಣುಗಳ ಸಂಖ್ಯೆ ವೃದ್ದಿಯಾಗಿ ಮತ್ತೆ ಹಬ್ಬುವುದು ಹೆಚ್ಚಾಗುತ್ತಾ ಇರುತ್ತದೆ.
ಸುಳಿ ಕೊಳೆ ರೋಗ ಅಡಿಕೆ ಬೆಳೆಗೆ ಒಂದು ಸಾವಾಲಗುತ್ತಿದೆ.
ಸುಳಿ ಕೊಳೆ ರೋಗ ಅಡಿಕೆ ಬೆಳೆಗೆ ಒಂದು ಸಾವಾಲಗುತ್ತಿದೆ.

ಅಣಬೆ ರೋಗ:

 • ಅಡಿಕೆ ಮರಗಳಿಗೆ ಬರುವ ಅಣಬೆ ರೋಗ ಎಂಬುದು ಒಂದು ಶಿಲೀಂದ್ರ ರೋಗವಾದರೂ ಅದು ಒಂದು ಹರಡುವ ರೋಗ.
 • ಹಿಂದೆಲ್ಲಾಈ ಸಮಸ್ಯೆ ತೀರಾ ಅಪರೂಪದಲ್ಲಿ ಕಂಡು ಬರುತ್ತಿತ್ತು.
 • ಈಗ ಅದರ ಹರಡುವಿಕೆ ಹೆಚ್ಚಾಗಿದೆ. ಅಣಬೆ ರೋಗ ಬಹಳ ಅಡಿಕೆ ತೋಟಗಳಲ್ಲಿ ಕಂಡು ಬರುತ್ತಿದ್ದು, ಇದು ಇನ್ನೂ ಇನ್ನೂ ಹೆಚ್ಚಳವಾಗುತ್ತಾ ಇರುತ್ತದೆ.

ಹಳದಿ ಎಲೆ ರೋಗ:

ಹೊಸ ಪ್ರದೇಶಗಳಿಗೂ ಹಬ್ಬುತ್ತಿದೆ ಹಳದಿ ಎಲೆ ರೋಗ
ಹೊಸ ಪ್ರದೇಶಗಳಿಗೂ ಹಬ್ಬುತ್ತಿದೆ ಹಳದಿ ಎಲೆ ರೋಗ
 • ಅಡಿಕೆ ಮರಗಳಿಗೆ 25-30 ವರ್ಷಗಳ ಹಿಂದೆ ಪ್ರಾರಂಭವಾದ ಹಳದಿ ಎಲೆ ರೋಗ ಅಡಿಕೆಯ ಇಳುವರಿಯ ಮೇಲೆ ಬಾರೀ ಹೊಡೆತವನ್ನು ಉಂಟು  ಮಾಡಿದೆ.
 • ಹಳದಿ ಎಲೆ ರೋಗ ಸುಳ್ಯ ಸಂಪಾಜೆ ಸುತ್ತಮುತ್ತ, ಹಾಗೆಯೇ ಶ್ರಿಂಗೇರಿ, ಕೊಪ್ಪ, ಬಾಳೆಹೊನ್ನೂರು, ಕಳಸ, ಜಯಪುರ ಸುತ್ತಮುತ್ತ  ಹೆಚ್ಚಾಗಿ ಕಂಡು ಬರುತ್ತದೆ ಎಂಬ ವರದಿಗಳಿವೆ.
 • ಕೂಲಂಕುಶವಾಗಿ ನೋಡಿದರೆ ಬರೇ ಈ ಭಾಗದಲ್ಲಿ ಮಾತ್ರವಲ್ಲ, 
 • ಅದರ ಸುತ್ತಮುತ್ತಲ ಪ್ರದೇಶಕ್ಕೂ ನಿಧಾನವಾಗಿ ಇದು ಹರಡುತ್ತಿದೆ.
 • ಕೆಲವು ಕಡೆ ಹಳದಿ ಎಲೆ ರೋಗದ ಚಿನ್ಹೆಗಳು ಎಲೆ ಲಕ್ಷಣದಲ್ಲಿ ಹೇಳುವುದನ್ನು ಎಲ್ಲರೂ ಗಮನಿಸಬಹುದು.
ADVERTISEMENT 32
ADVERTISEMENT

ಅಡಿಕೆ ಬೆಳೆಯುವುದೇ ಬಿಡುವುದೇ?

ಅಡಿಕೆ ಎಲ್ಲೆಲ್ಲಿ ಬೆಳೆಯುತ್ತದೆಯೋ ಅಲ್ಲೆಲ್ಲಾ ಬೆಳೆಯಿರಿ. ಆದರೆ ಬೆಳೆಯುವ ಮುಂಚೆ ನಿಮ್ಮ ಹೊಲದ ಮಣ್ಣು ಹೇಗಿದೆ ಎಂಬುದನ್ನು ಕೂಲಂಕುಶವಾಗಿ ಗಮನಿಸಿರಿ. ತೀರಾ ಜೌಗು  ಹೊಲ, ನೀರಿನ ಹರಿವಿಗೆ ಅನುಕೂಲ ಇಲ್ಲದ ಸ್ಥಳದಲ್ಲಿ ಅಡಿಕೆ ಬೆಳೆಯುವ ಸಾಹಸಕ್ಕೆ ಹೋಗಬೇಡಿ. ಇಲ್ಲಿ ಅಡಿಕೆ ಬೆಳೆದರೆ ಅದು ಯಾವಾಗಲೂ ಉತ್ಪಾದಕ ತೋಟ ಆಗಿರುವುದಿಲ್ಲ.

 • ಹೆಚ್ಚು ಸಮಯ ನೀರು ಇಂಗದೇ ಇರುವ ಅಂಟು ಮಣ್ಣಿರುವ ಸ್ಥಳದಲ್ಲಿ ಅಡಿಕೆ ಬೆಳೆಯಲು ಮುಂದಾಗಬೇಡಿ.
 • ಇಲ್ಲಿ ಬೇರುಗಳಿಗೆ ಉಸಿರಾಟಕ್ಕೆ ಅಡ್ದಿ ಉಂಟಾಗಬಹುದು.
 • ಹೆಚ್ಚಿನ ಖರ್ಚು ಮಾಡಿ, ಕೆಲವು  ಮಾರ್ಪಾಡುಗಳನ್ನು ಮಾಡಿ ಬೆಳೆಯಬಹುದು.
ಇಂತಹ ಮಣ್ಣು ಇರುವ ಕಡೆ ಅಡಿಕೆ ಬೆಳೆಯಬೇಡಿ. ಇಲ್ಲಿ ಬೇರು ಹುಳ ಖಾಯಂ
ಇಂತಹ ಮಣ್ಣು ಇರುವ ಕಡೆ ಅಡಿಕೆ ಬೆಳೆಯಬೇಡಿ. ಇಲ್ಲಿ ಬೇರು ಹುಳ ಖಾಯಂ
 • ಮರಳು ಹೆಚ್ಚಿನ ಪ್ರಮಾಣದಲ್ಲಿರುವ ಭೂಮಿಯಲ್ಲಿ ಅಡಿಕೆ ಬೆಳೆಯಬೇಡಿ.
 • ಇಲ್ಲಿ ಮರಕ್ಕೆ ಬೇರು ಹುಳ ಖಾಯಂ ಅತಿಥಿಯಾಗಿ ಕಾಡುತ್ತಲೇ ಇರುತ್ತದೆ.
 • ಪರಿಹಾರ ಕ್ರಮಗಳನ್ನು  ನಿರಂತರವಾಗಿ ಮಾಡುವ ಹಠ ಇದ್ದರೆ ಮಾತ್ರ ಇಲ್ಲಿ ಬೆಳೆಯಬಹುದು.
 • ತೆಂಗಿನ ಮರದಲ್ಲಿ ರಸ ಸೋರುವ ಸಮಸ್ಯೆ ಇದ್ದ ಕಡೆ ಅಡಿಕೆ ಬೆಳೆಯಬೇಡಿ.
 • ಇದು ಅಡಿಕೆಗೂ ಪ್ರಸಾರವಾಗುವ ರೋಗವಾಗಿದ್ದು,  ಅಡಿಕೆಗೆ ಅಣಬೆ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
 • ಮಳೆ ಆಗಾಗ ಬರುತ್ತಿರುವ ಪ್ರದೇಶದಲ್ಲಿ  ಅಡಿಕೆ ಬೆಳೆ ಬೆಳೆಯುವಾಗ ಹೆಚ್ಚಾಗಿ ಬಿಸಿಲು ಮಳೆ ವಾತಾವರಣದಿಂದ ಸುಳಿ ಕೊಳೆ ರೋಗ ಹೆಚ್ಚಾಗಿ ಬರುತ್ತದೆ.
 • ನಿರಂತರ ಮಳೆ ಆಗುವಲ್ಲಿ ಬರುವುದಕ್ಕಿಂತ ಇಲ್ಲಿ ಹೆಚ್ಚಾಗಿರುತ್ತದೆ.
 • ಹಳದಿ ಎಲೆ ರೋಗ ಇರುವ ಪ್ರದೇಶದಲ್ಲಿ ಮತ್ತೆ ಅಡಿಕೆ ಬೆಳೆ ಬೆಳೆಯುವ  ಪ್ರಯತ್ನ ಮಾಡಬೇಡಿ.
 • ಅದು ಒಂದು ವೈರಸ್ ರೋಗವಾಗಿದ್ದು,  ಯಾರು ಏನೇ ಹೇಳಿದರೂ ಇದಕ್ಕೆ ಅಷ್ಟೊಂದು ಸುಲಭವಾಗಿ  ಔಷದೋಪಚಾರ ಮಾಡಿ ನಿವಾರಣೆ ಮಾಡುವುದು ಕಷ್ಟಸಾಧ್ಯ.
 • ಈ ರೋಗ ಇರುವ ಪ್ರದೇಶಗಳ ಸುತ್ತಮುತ್ತಲಿನ  ಪ್ರದೇಶಗಳ ರೈತರೂ ಸಹ ಬಹಳ ಜಾಗರೂಕತೆಯಲ್ಲಿ ಅಡಿಕೆ ಬೆಳೆಸಬೇಕಾಗುತ್ತದೆ.
 • ಶಾಶ್ವತ ತೋಟಗಳು: ಅಡಿಕೆ ಮರಕ್ಕೆ ಹೊಂದುವ ವಾತಾವರಣ, ತಾಪಮಾನ  ಇರುವ ಅಚ್ಚುಕಟ್ಟಾದ ಕೆಲವು ನೈಸರ್ಗಿಕ ಪ್ರದೇಶಗಳಲ್ಲಿ ಬೆಳೆದ ಅಡಿಕೆ ಬೆಳೆ ಶಾಶ್ವತ ಬೆಳೆ.
 • ಇದಕ್ಕೆ ಅಯುಶ್ಯ ದುಪ್ಪಟ್ಟು. ಇಲ್ಲಿ ಸಮಸ್ಯೆಗಳು ಕಡಿಮೆ.
 • ಕಣಿವೆಯ  ಪ್ರದೇಶಗಳು, ಬದುಗಳಲ್ಲಿ ಮರ ಮಟ್ಟುಗಳಿಂದಾವೃತವಾದ ಎತ್ತರದ ಪ್ರದೇಶಗಳಲ್ಲಿ  ಬೆಳೆದ ಅಡಿಕೆ ಬೆಳೆಯೇ ಸಮಸ್ಯಾತೀತ.
 • ವಿಟ್ಲ, ಪುತ್ತೂರಿನ ಕೆಲವು ಭಾಗ, ಸುಳ್ಯದ ಕೆಲವು ಕಡೆ, ಕಾಸರಗೋಡು, ಶಿರಸಿ, ಕೊಪ್ಪ, ಶ್ರಿಂಗೇರಿ, ಸಾಗರ , ಸಿದ್ದಾಪುರ, ಯಲ್ಲಾಪುರ ಮುಂತಾದ ಕಡೆ  ಹೆಚ್ಚಾಗಿ ಇಂತ ಅಡಿಕೆ ತೋಟಗಳನ್ನು ನಾವು ಗಮನಿಸಬಹುದು.

ಇವೆಲ್ಲಾ ಕಾರಣಗಳಿಂದ ಅಡಿಕೆ ಬೆಳೆ ಹೆಚ್ಚಳವಾಗಿ ಮುಂದೆ ಅಡಿಕೆಗೆ ಏನಾಗುವುದೋ? ಎಂಬುದಾಗಿ ಯಾವ ರೈತನೂ ಆತಂಕವನ್ನು  ಪಡಬೇಕಾಗಿಲ್ಲ. ದಿನದಿಂದ ದಿನಕ್ಕೆ, ಅಡಿಕೆ ಬೆಳೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಾ ಇರುತ್ತದೆ. ಇದೇ  ಸಮತೋಲನವನ್ನೂ  ಮಾಡುತ್ತದೆ.  ಇದರಲ್ಲಿ ಯಾರೂ ಬೇಸರ ಪಡಬೇಕಾಗಿಯೂ ಇಲ್ಲ. 

Leave a Reply

Your email address will not be published. Required fields are marked *

error: Content is protected !!