ಆಷಾಢ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ- ಕುಂಭ ಮಾಸಕ್ಕೆ ಸ್ವಾಗತ.

ಆಷಾಢದ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ

ಆಷಾಢದ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ  ಎನ್ನುತ್ತಾರೆ ಹಿರಿಯರು. ಇದರ ಅರ್ಥ ಕೃಷಿಕರಿಗೆ ಮಾತ್ರ ಅರ್ಥವಾಗಬಲ್ಲದು.ಮಕರ ಸಂಕ್ರಮಣ ಕಳೆದ ತರುವಾಯ ಎಲ್ಲವೂ ಹಚ್ಚ ಹಸುರು.ರೈತನ ಶ್ರಮಕ್ಕೆ ಹವಾಮಾನದ ಬೆಂಬಲ ದೊರೆತಾಗ ಮಾತ್ರ ಅದು ಫಲಪ್ರದವಾಗುತ್ತದೆ. ಕೃಷಿ ಎಂಬ ವೃತ್ತಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಮ್ಮ ಹಿರಿಯರು ತಿಳಿದಿದ್ದ ಕೆಲವು ಅನುಭವ ಸೂಕ್ಷ್ಮಗಳನ್ನು ಇಂದಿನ ವಿಜ್ಞಾನ ಅರ್ಥ ಬಿಡಿಸಿ ಜನತೆಗೆ ತಿಳಿಸಿದೆ. ಹಿರಿಯರ ಅನುಭವ ಇಂದಿನ ವಿಜ್ಞಾನಿಗಳ ತಿಳುವಳಿಕೆಗಿಂತ ಇಂದಿಗೂ ಮುಂದೆಯೇ ಇದೆ.

 • ಆಟಿ (ಆಷಾಢ ಮಾಸ) ಕಳೆದರೆ  ಬೇಸಿಗೆ ಕಾಲ. ಮಾಗಿ( ಕುಂಭ ಮಾಸ) ಕಳೆದರೆ ಅದು ಮಳೆಗಾಲ ಇದು ನಮ್ಮ ಹಿರಿಯರ ಮಾತು
 • ಬೇಸಿಗೆಯಲ್ಲಿ ನೀರು ಕಡಿಮೆಯಾದರೂ ತೊಂದರೆ  ಇಲ್ಲ, ಚಳಿಗಾಲದಲ್ಲಿ ಮಾತ್ರ ಕಡಿಮೆಯಾಗಬಾರದು ಎನ್ನುತ್ತಾರೆ.
 • ಅದು ಮತ್ತೇನಕ್ಕೂ ಅಲ್ಲ. ಈ ಸಮಯದಲ್ಲಿ ಸಸ್ಯಗಳಿಗೆ  ವಾತಾವರಣ ತೇವಾಂಶವನ್ನು ಕೊಡುತ್ತದೆ.
 • ಹಿರಿಯರು ಹೇಳಿದ್ದರಲ್ಲಿ ವಿಜ್ಞಾನದ ಹಲವು ಅರ್ಥಗಳು ಅಡಗಿವೆ.
 • ಹಿರಿಯರು ಈ ಸಮಯದ ನಂತರ ಮಳೆಗಾಲ ಬರುತ್ತದೆ ಎಂದು ಹೇಳಿದ್ದು ಮತ್ತೇನಕ್ಕೂ ಅಲ್ಲ.
 • ಈ ತಿಂಗಳ ತರುವಾಯ ವಾತಾವರಣದಲ್ಲಿ ಆರ್ಧ್ರತೆ  ಹೆಚ್ಚುತ್ತದೆ.
 • ಸಸ್ಯಗಳು ಚಿಗುರಲು ಪ್ರಾರಂಭವಾಗುತ್ತದೆ. ಸಸ್ಯ ಬೆಳವಣಿಗೆಗೆ ಪೂರಕವಾಗಿ ವಾತಾವರಣ ಸಾಕಷ್ಟು ತೇವಾಂಶವನ್ನು ಕೊಡುತ್ತದೆ.
 • ಈ ಸಮಯದಲ್ಲಿ ಕೆಲವು ಹುಲ್ಲು, ಸಸ್ಯಗಳು ತನ್ನಷ್ಟಕ್ಕೇ ಹುಟ್ಟಿ, ತೇವಾಂಶ  ಇಲ್ಲದಿದ್ದರೂ ಹುಲುಸಾಗಿ ಬೆಳೆಯುತ್ತವೆ.

ಕೃಷಿ ಪರಂಪರೆ:

 • ಕೃಷಿ ಪರಂಪರೆ ಎಂದರೆ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತಾ ಬಂದ ಕೃಷಿ ಜ್ಞಾನ.
 • ಇದು ಒಟ್ಟಾರೆ ಹೇಳಿದ ಹೇಳಿಕೆಗಳಲ್ಲ.
 • ನಿರಂತರ ಪ್ರಯೋಗ ಮತ್ತು ಅನುಭವಗಳ ಆಧಾರದಲ್ಲಿ ಪಡೆದ ಜ್ಞಾನ.
 • ವಿಜ್ಞಾನವು ವಿಷಯಗಳನ್ನು  ಕೂಲಂಕುಷವಾಗಿ ಅಧ್ಯಯನ ಮಾಡಿ ಹೇಳಿದಂತೆ,
 • ನಮ್ಮ ಹಿರಿಯರ ಜ್ಞಾನವೂ ಸಹ ಕೂಲಂಕುಶವಾಗಿ ಅಧ್ಯಯನ ನಡೆಸಿದಂತದ್ದೇ ಆಗಿದೆ.
 • ಪ್ರಯೋಗಗಳು, ಪರೀಕ್ಷೆಗಳು, ಯಶಸ್ಸು, ವೈಫಲ್ಯಗಳನ್ನು ಅಬ್ಯಾಸ ಮಾಡಿಯೇ ಒಂದು ವಿಚಾರವನ್ನು ಗಾದೆ ರೂಪದಲ್ಲೋ ಅಥವಾ ಇನ್ಯಾವುದಾರರೂ ದೈವೀಕ ಮನೋಭಾವನೆ ಮೂಡಿಸುವ ರೂಪದಲ್ಲೋ ಜನರಿಗೆ ವರ್ಗಾವಣೆ ಮಾಡಿದ್ದರು.
 • ಇದೇ ನಮ್ಮ ಕೃಷಿಯ ಪಾರಂಪರಿಕ ಜ್ಞಾನ ಭಂಡಾರ.
 • ಆಧುನಿಕ ಕೃಷಿ ವಿಜ್ಞಾನಕ್ಕೆ ಒಂದು ತಲೆಮಾರಿನ ಇತಿಹಾಸ ಆದರೆ ನಮ್ಮ ಪಾರಂಪರಿಕ ಕೃಷಿ ವಿಜ್ಞಾನಕ್ಕೆ  ಶತ ಶತಮಾನಗಳ ಇತಿಹಾಸ.
 • ಇದುವೇ ಇಂದಿನ ಕೃಷಿ ವಿಜ್ಞಾನಕ್ಕೂ ಮೂಲಾಧಾರ.

ಮಾಮರ ಹೂವಾಗುವ ಕಾಲ ಇದು

ಆಷಾಢ ಕಳೆದ ನಂತರ ಬರುವ ಬಿಸಿಲು ಬಹಳ ಪ್ರಖರ. ಹಾಗಾಗಿ ಅಡಿಕೆ ಮರಗಳು, ಹಾಗೆಯೇ ಇನ್ನಿತರ ಮರಮಟ್ಟುಗಳ ಎಲೆಗಳು ಸುಟ್ಟಂತಾಗಿ ಹಳದಿಯಾಗುತ್ತವೆ. ಈ ಸಮಯದಲ್ಲಿ ವಾತಾವರಣದಲ್ಲಿ ತೇವಾಂಶ ಕಡಿಮೆ. ಜೊತೆಗೆ ಬಿಸಿಲು. ಹಾಗಾಗಿ ಸಸ್ಯಗಳು ಸೊರಗುತ್ತವೆ. ಇನ್ನು ಹಾಗಾಗುವುದಿಲ್ಲ. ಎಲೆಗಳೆಲ್ಲಾ ಹಸುರಾಗುತ್ತಾ ಬರುತ್ತವೆ. ಈ ತನಕ ಹೊಸತಾಗಿ ನೆಟ್ಟ ಸಸಿಗಳಿಗೆ ನೆರಳು ಬೇಕು. ಅದು ಸಹ ನೈರುತ್ಯ ಹಾಗೂ ದಕ್ಷಿಣ ದಿಕ್ಕಿಗೆ ಬಿಸಿಲಿನ ತಡೆ ಅಗತ್ಯವಾಗಿ ಬೇಕು. ಸೂರ್ಯನು ಇನ್ನು ದಕ್ಷಿಣ ದಿಕ್ಕಿನಿಂದ  (ದಕ್ಷಿಣಾಯನ)ಉತ್ತರ ದಿಕ್ಕಿನತ್ತ (ಉತ್ತರಾಯಣ) ಪಥ ಬದಲಿಸುವ ಕಾರಣ ಬಿಸಿಲಿನ ಹೊಡೆತ ಕಡಿಮೆಯಾಗುತ್ತದೆ.

ಕುಂಭ ಮಾಸದ ವಿಶೇಷ:

 • ಕುಂಭ ಮಾಸಕ್ಕೆ ಭೂಮಿ ತಾಯಿ ತನ್ನೆಲ್ಲಾ ಅಶೌಚ್ಯವನ್ನು ಕಳಚಿ ಶುದ್ಧವಾಗುವುದು ಎಂಬುದು ನಮ್ಮ ಹಿರಿಯರು ನಂಬಿಕೊಂಡು ಬಂದ ಸಂಪ್ರದಾಯ.
 • ಕುಂಭ ಸಂಕ್ರಮಣದ  ಹಿಂದಿನ ಮೂರು ದಿನ ಭೂಮಿ ಅಶುದ್ಧ ( ಕೆಡ್ಡೇಸ) ಎನ್ನುತ್ತಾರೆ.ಸಂಕ್ರಮಣದ ದಿನ ಶುದ್ಧ ಆಗುವುದು.
 • ಸೌರಮಾನ ಸಂಪ್ರದಾಯ ಪ್ರಕಾರ ಇದು ಹನ್ನೊಂದನೆಯ ತಿಂಗಳು.
 • ಮುಂದಿನ ಮೀನ ಮಾಸ ಕಳೆದರೆ ಹೊಸ ವರ್ಷ.
 • ನಮ್ಮ ಪಾರಂಪರಿಕ ಮಾಸಾಚರಣೆ.
 • ಕುಂಭ ಎಂದರೆ ಸಂಪತ್ತು.
 • ಮಡಕೆಯನ್ನು ಹಿರಿಯರು ನಿಧಿಗೆ ಹೋಲಿಸಿದ್ದಾರೆ.
 • ಇದಕ್ಕೆ ಹಲವಾರು ಐತಿಹಾಸಿಕ ಅರ್ಥಗಳಿವೆ.
 • ಸಮುದ್ರ ಮಥನ ಕಾಲದಲ್ಲಿ ದೇವತೆಗಳು ಮತ್ತು ರಾಕ್ಷಸರು ಅಮೃತ ಉಳ್ಳ  ಕುಂಭಕ್ಕಾಗಿ ಹೋರಾಡಿ, ದೇವತೆಗಳು ಅಥವಾ ಸಜ್ಜನರು ಮಡಕೆಯ ಅಮೃತವನ್ನು ಪಡೆದ ಮಾಸ ಇದು.
 • ಕುಂಭಮಾಸದಲ್ಲಿ ಮಹಾಶಿವರಾತ್ರಿ ಹಬ್ಬ ಬರುತ್ತದೆ.

ವಾತಾವರಣದ ಬದಲಾವಣೆ:

 • ಕುಂಭ ಮಾಸ ಬಂದ ನಂತರ ವಾತಾವರಣ ಬದಲಾಗುತ್ತದೆ.
 • ಚಳಿ ದೂರವಾಗುತ್ತದೆ. ಸೆಖೆ ಹೆಚ್ಚಾಗುತ್ತದೆ.
 • ವಾತಾವರಣದಲ್ಲಿ ಆರ್ಧ್ರತೆ ಹೆಚ್ಚಿ ಬೆವರುವಿಕೆ ಜಾಸ್ತಿಯಾಗುತ್ತದೆ.
 • ಮುಂದೆ ಕೆಲವೇ ದಿನಗಳಲ್ಲಿ ವಸಂತ ಋತು ಬರುತ್ತದೆ.
 • ಆ ಸಮಯದಲ್ಲಿ ಸಸ್ಯಗಳೂ ಸಹ ಚಿಗುರಲು ಪ್ರಾರಂಭವಾಗುತ್ತದೆ.
 • ಕಾಡಿನ ಮರಮಟ್ಟುಗಳು, ಸಸ್ಯಗಳು ಹೆಚ್ಚು ಹೆಚ್ಚು ಹೂ ಬಿಡುತ್ತವೆ.
 • ಕಾಯಿ ಹಣ್ಣುಗಳಾಗುತ್ತದೆ. ಪ್ರಾಣಿ ಪಕ್ಷಿಗಳಿಗೆ ಹೇರಳ ಆಹಾರ ದೊರೆಯುತ್ತದೆ.
 • ಹಬ್ಬ,ಜಾತ್ರೆ ಮುಂತಾದ ಆಚರಣೆಗಳು ಈ ಸಮಯದ ನಂತರ ಹೆಚ್ಚಾಗುತ್ತದೆ.

ಫಸಲು ಇನ್ನು ಹೆಚ್ಚು

ಕುಂಭ ಮಾಸದಲ್ಲಿ ಬೆಳೆ:

 • ಕುಂಭ ಮಾಸ ಬಂದ ನಂತರ ಗಡ್ಡೆ ಗೆಣಸುಗಳು ಸುಪ್ತಾವಸ್ತೆಯನ್ನು ಬಿಟ್ಟು ಮೊಳಕೆ ಬರಲು ಪ್ರಾರಂಭವಾಗುತ್ತದೆ.
 •  ಇನ್ನು ಶುಂಠಿ, ಅರಶಿನ, ಕೆಸು, ಗಡ್ಡೆ ಗೆಣಸಿನ ಯಾವುದೇ ಬೆಳೆಯನ್ನೂ ನಾಟಿ ಮಾಡಬಹುದು.
 • ನೀರಾವರಿಗೆ ಏನು ಎಂಬ ಪ್ರಶ್ನೆ  ಸಹಜವಾಗಿ ಬರುತ್ತದೆ. ವಾತಾವರಣ ಸಾಕಷ್ಟು ನೀರು ಕೊಡುತ್ತದೆ.
 • ಕೇರಳದ ಹೆಚ್ಚಿನ ಕಡೆ ನೇಂದ್ರ ಬಾಳೆ, ಸುವರ್ಣ ಗಡ್ಡೆ, ಅರಶಿನ, ಮರಗೆಣಸು ನೆಡುತ್ತಾರೆ.
 • ರಾಜ್ಯದ ಮಲೆನಾಡಿನಲ್ಲಿ ಈ ಸಮಯದಲ್ಲೇ ಶುಂಠಿ, ಅರಶಿನ ನಾಟಿ ಪ್ರಾರಂಭಿಸುವುದು ಇದೇ ಸಮಯದಲ್ಲಿ.
 • ಈ ಸಮಯದಲ್ಲಿ ಗಡ್ಡೆ ಗೆಣಸುಗಳನ್ನು ಮನೆಯೊಳಗೆ  ಇಟ್ಟರೂ ಸಹ ಅದು ಮೊಳಕೆ ಒಡೆದು ಬೆಳಕಿನತ್ತ ಮುಖ ಮಾಡುತ್ತದೆ.

ಹೊಂಡ ಮಾಡಿ ತಳಭಾಗವನ್ನು ನೆನೆಸಿ ಮೇಲ್ಭಾಗದಲ್ಲಿ ಸಾವಯವ ತ್ಯಾಜ್ಯಗಳನ್ನು ದಪ್ಪಕ್ಕೆ ಹಾಕಿ ತೇವಾಂಶ ಸಂರಕ್ಷಿಸಿ ಆಗಾಗ ಬರುವ ಮಳೆಯ ಆಧಾರದಲ್ಲಿ ಹಿಂದಿನವರು ಇವುಗಳನ್ನು ಬೆಳೆಸುತ್ತಿದ್ದರು. ಈಗ ಮಳೆ ಇಲ್ಲ. ನೀರಾವರಿ ಬೇಕು. ಆದಾಗ್ಯೂ ವಾತಾವರಣದಲ್ಲ್ಲಿ 80 % ಕ್ಕೂ ಹೆಚ್ಚು ಆರ್ಧ್ರತೆ  ಇರುವ ಕಾರಣ ಸಸ್ಯಗಳು ವಾತಾವರಣದಿಂದ ಸಾಕಷ್ಟು ನೀರನ್ನು ಪಡೆಯುತ್ತವೆ. ಇದಕ್ಕೆ ಅನುಕೂಲವಾಗುವಂತೆ ಪ್ರಕೃತಿ ಹೆಚ್ಚು ಚಿಗುರು ಹೆಚ್ಚು ಎಲೆಗಳನ್ನು ಅನುಗ್ರಹಿಸುತ್ತದೆ.

 • ಕುಂಭ ಮಾಸ ಪ್ರಾರಂಭವಾದರೆ ನಂತರ ಆಯಾ ಊರಿನ ಜಾತ್ರೆ, ಹಬ್ಬ, ವಿಶೇಷ ದಿನಗಳಂದು ಮಳೆ ಬರುತ್ತದೆ ಎನ್ನುತ್ತಾರೆ  ಹಿರಿಯರು,.
 • ಹಿಂದೆ ಬರುತ್ತಿತ್ತು. ಈಗ ಕಾಲ ಬದಲಾಗಿ ಸ್ವಲ್ಪ ವ್ಯತ್ಯಾಸವಾಗಿದೆ.

ಕುಂಭ ಮಾಸ ದ ಮುಂದಿನ ದಿನಗಳು ಎಲ್ಲರಿಗೂ ಶುಭದಾಯಕವಾಗಲಿ. ಕುಂಭ ಮಾಸದಲ್ಲಿ ಬಿತ್ತನೆ ಮಾಡಿ ಅಧಿಕ ಲಾಭ ಪಡೆಯಿರಿ.

Leave a Reply

Your email address will not be published. Required fields are marked *

error: Content is protected !!