ಬಿದಿರು ಬೆಳೆದರೆ ಸಸಿಯೊಂದಕ್ಕೆ ಸರಕಾರ ರೂ. 120 ಕೊಡುತ್ತದೆ.

ನೆಟ್ಟು ಬೆಳೆಸಿದ ಬಿದಿರು

ಬಿದಿರು ಬೆಳೆಸಿ, ಭಾರೀ ಆದಾಯಗಳಿಸಿ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿರುವಾಗ ರೈತರಿಗೆ ಈ ವಿಚಾರದಲ್ಲಿ ಆಸಕ್ತಿ ಬರುವುದು ಸಹಜ.

ಭಾರತ ಸರಕಾರ ಬಿದಿರು ಅಭಿವೃದಿಗೆ ಪ್ರತ್ಯೇಕ ಮಿಷನ್  ಸ್ಥಾಪಿಸಿದೆ. ಪ್ಲಾಸ್ಟಿಕ್ ಬದಲಿಗೆ ಬಿದಿರು ಬಳಕೆಗೆ ಬರಬೇಕು. ರೈತರಿಗೆ ಆದಾಯ ಸಿಗಬೇಕು. ಬಿದಿರಿನ ಮೂಲಕ ನೆಲ ಜಲ ಸಂರಕ್ಷಣೆಯೂ ಆಗಬೇಕು ಎಂಬುದು ಈ ಯೋಜನೆಯ ಉದ್ದೇಶ. ಆದರೆ ಬಿದಿರು ಕೃಷಿಗೂ ಒಂದು ಇತಿ ಮಿತಿ ಇದೆ.

ಒಂದು ಕಾಲದಲ್ಲಿ ಬಿದಿರಿನ ಬಳಕೆ ಅಪರಿಮಿತವಾಗಿತ್ತು. ಬಿದಿರನ್ನು ಬಳಸಿ ಮನೆಯ ಚಾವಣಿಯನ್ನೂ ಮಾಡುತ್ತಿದ್ದರು. ಬಿದಿರಿನ ಏಣಿ, ಬಿದಿರಿನ ಬುಟ್ಟಿ ಏನೇನೂ ಸಾಮಾಗ್ರಿಗಳನ್ನು ತಯಾರಿಸಲಾಗುತ್ತಿತ್ತು. ಅದರಲ್ಲೇ ಪಳಗಿದವರೂ ಇದ್ದರು. ಕಾಲಕ್ರಮೇಣ ಬಿದಿರಿನ ಸ್ಥಾನವನ್ನು ಪ್ಲಾಸ್ಟಿಕ್ ಆವರಿಸಿ ಬಿದಿರು  ತೆರೆಮರೆಗೆ ಸರಿಯಿತು. ಬಿದಿರಿನ ಕೆಲಸ ಮಾಡುವವರೂ ಬೇರೆ ವೃತ್ತಿಯನ್ನು ಆರಿಸಿಕೊಂಡರು. ಆದರೆ ಸರಕಾರ ಬಿದಿರಿನ ಅಭಿವೃದ್ದಿಗೆ ಮತ್ತೆ ಚಾಲನೆ ನೀಡಿದೆ. ಕೆಲವು ಸಂಘಟನೆಗೆಗಳು,  ಜನರು,  ಬಿದಿರಿನ ಪ್ರಚಾರದಲ್ಲೂ ತೊಡಗಿದ್ದಾರೆ.

ಬಿದಿರಿಗೆ ಬೇಡಿಕೆ ಇದೆ. ಬಾರೀ ಬೆಲೆ ಬರುತ್ತದೆ ಎನ್ನುತ್ತಾರೆ. ಆದರೆ ಯಾವ  ಕಾರಣಕ್ಕೆ ಸರಕಾರ ಬಿದಿರಿನ ನೆಡು ತೋಪು ಮಾಡಿದರೂ ಅದು ಬೆಳೆದು ಹೂವಾದರೂ ಅದರ ತಂಟೆಗೆ ಹೋಗದೆ ಅದನ್ನು ಅಲ್ಲೇ ಮಣ್ಣಾಗಲು ಬಿಟ್ಟಿದೆಯೋ ತಿಳಿಯದು. ಇದನ್ನು ದೃಶ್ಯವನ್ನು ನಾವು ತೀರ್ಥಹಳ್ಳಿಯಿಂದ  ಶಿವಮೊಗ್ಗ  ಹೋಗುವ ದಾರಿಯಲ್ಲಿ ಈ ಕಾಣಬಹುದು. ಯಾವ ಪೇಪರ್ ಮಿಲ್ಲಿನವರೂ ಬಿದಿರು ಬಳಸಲೇ ಇಲ್ಲವೇನೋ? ಬಹುಶಃ ಬಿದಿರು ಕಡಿಸುವುದಕ್ಕೆ ಅದರಿಂದ ಹುಟ್ಟುವ ಆದಾಯ ಸಾಲದಾಗಿದೆಯೋ ತಿಳಿಯದು. ಒಟ್ಟಿನಲ್ಲಿ ಬಿದಿರಿಗೆ ಬೇಡಿಕೆ ಇದೆ ಎನ್ನುತ್ತಾರೆ. ಬೆಳೆಸಿದ ಬಿದಿರನ್ನು ಕೊಳ್ಳುವವರಿಲ್ಲ. ಬಿದಿರಿಗೆ ಬದಲಿಯಾಗಿ ಪ್ಲಾಸ್ಟಿಕ್, ಅಲ್ಯೂಮೀನಿಯಂ, ಹಾಗೆಯೇ ಇನ್ನಿತರ ಲೋಹಗಳು ಹಾಸು ಹೊಕ್ಕಾಗಿವೆ. ಇನ್ನು ಇವೆಲ್ಲವೂ ತೆರೆಮರೆಗೆ ಸರಿದರೆ ಮಾತ್ರ ಬಿದಿರು ನೇಪಥ್ಯಕ್ಕೆ ಬರಲು ಸಾಧ್ಯ.

ನೆಟ್ಟು ಬೆಳೆಸಿದ ಬಿದಿರು ಬೆಳೆ- Planted bamboo

ಬಿದಿರಿನ ಚರಿತ್ರೆ:

ಬಿದಿರಿನಲ್ಲಿ ಮುಳ್ಳು ಇರುವ ಬಿದಿರು Giant thorny Bamboo or Indian Thorny bamboo, Bambusa Bambos ಅನಾದಿ ಕಾಲದಿಂದಲೂ ನಮ್ಮಲ್ಲಿ ಇದ್ದ ಬಿದಿರು. ಇದರಷ್ಟು ಗಟ್ಟಿಮುಟ್ಟಾದ ಬಿದಿರು ಮತ್ತೊಂದಿಲ್ಲ. ಆದರೆ ಇದನ್ನು ಮೆಳೆಗಳಿಂದ ಬಿಡಿಸುವುದು ಹರಸಾಹಸ. ಅದಕ್ಕಾಗಿ ವಿದೇಶಿ ಮೂಲದ ಕೆಲವು ಬಿದಿರುಗಳನ್ನು ನಮ್ಮ ದೇಶಕ್ಕೆ ಪರಿಚಯಿಸಲಾಗಿದೆ. ಅವುಗಳಲ್ಲಿ ಮುಳ್ಳು ಇಲ್ಲ. ಹಾಗೆಯೇ ಬೆಳೆವಣಿಗೆಯೂ ಶೀಘ್ರವಾಗಿದೆ. ಇಂತಹ ಬಿದಿರು ನೆಟ್ಟು ಬೆಳೆಸಲು ಯೋಗ್ಯ. ಇವುಗಳಿಂದ ಮೌಲ್ಯವರ್ಧಿತ ಉತ್ಪನ್ನ ತಯಾರಿಕೆಯೂ ಸುಲಭ. ಹಿಂದೆ ಮುಳ್ಳಿರುವ ಬಿದಿರಿನ ಮೆಳೆಗಳನ್ನು ನಿರಂತರ ಮುಳ್ಳುಗಳನ್ನು ಸವರಿ ಅದನ್ನು ಬೇಲಿಗಳಿಗೆ ಬಳಕೆ ಮಾಡಿ ಬಿದಿರು ಬೇಕಾದಾಗ ಕಡಿಯಲು ಅನುಕೂಲವಾಗುವಂತೆ ಮಾಡಿಕೊಳ್ಳುತ್ತಿದ್ದರು. ಈಗ ಅದು ಸಾಧ್ಯವಾಗುವುದಿಲ್ಲ. ಅಂತಹ ಕೆಲಸಗಾರ ಲಭ್ಯತೆಯೂ ಇಲ್ಲ. ಮುಳ್ಳಿಲ್ಲದ ಬಿದಿರು ಮಾತ್ರ ಕಡಿಯಲು ಮತ್ತು ಸಾಗಾಣಿಗೆ ಯೋಗ್ಯ. ಕಾರಣ ಅದರಲ್ಲಿ ಕೆಲಸ ಕಡಿಮೆ.

ಮುಳ್ಳಿಲ್ಲದ ವಾಣಿಜ್ಯ ಬಿದಿರು ತಳಿಗಳು:

ಬರ್ಮಾ ಬಿದಿರು- Burma bambo

ದಕ್ಷಿಣ ಏಷ್ಯಾ ದೇಶಗಳಲ್ಲಿ, ಫಿಲಿಫಿನ್ಸ್ ,ಮಧ್ಯ ಅಮೇರಿಕಾ,ಮುಂತಾದ ದೇಶಗಳಲ್ಲಿ ಕೆಲವು  ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ದೈತ್ಯ ಬಿದಿರುಗಳನ್ನು ನಮ್ಮ ದೇಶಕ್ಕೆ ಬೆಳೆಸಲು ಅನುಕೂಲವಾಗುವಂತೆ ಪರಿಚಯಿಸಲಾಗಿದೆ. ಅವುಗಳೆಂದರೆ ಬರ್ಮಾ ಬಿದಿರು, ಅಥವಾ ಜೈಂಟ್  ಬಾಂಬೋ, ಗುವಾಡುವಾ ಮುಂತಾದವುಗಳು.ವಿದೇಶಗಳಲ್ಲಿ ಬಣ್ಣದ ಬಿದಿರುಗಳೂ ಇರುವ ಬಗ್ಗೆ ಮಾಹಿತಿ ಇದೆ. ಅವು ಇನ್ನೂ ಇಲ್ಲಿ ಪರಿಚಯಿಸಲ್ಪಟ್ಟಿಲ್ಲ. ಮುಳ್ಳಿಲ್ಲದ ಬರ್ಮಾ ಬಾಂಬೋ, ಜೈಂಟ್ ಬಾಂಬೋ,( Dendrocalamus jaiganttimus)  ಗುವಾ ಡುವಾ ( Guadua angustifolia) ತಳಿಗಳು ವಾಣಿಜ್ಯ ಬೇಸಾಯಕ್ಕೆ ಸೂಕ್ತವಾದ ತಳಿಗಳು.

ಸ್ಥಳೀಯವಾಗಿ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಬೆಳೆಯಲ್ಪಡುವ  ಕೊಕ್ಕೆ ಬಿದಿರು ಸ್ಥಳೀಯವಾಗಿ ನಿಯಮಿತ ಬೇಡಿಕೆಯನ್ನು ಪಡೆದಿದೆ. ಮಹಾರಾಷ್ಟ, ಗೋವಾ,ಮತ್ತು ಕರ್ನಾಟಕದ ಗಡಿ ಭಾಗ ಬೆಳಗಾವಿ ಸಮೀಪದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡು ಬರುವ ಒಂದು ಪ್ರಭೇಧದ ಬಿದಿರಿಗೆ( Dendrocalamus stockssi )ಒಳಭಾಗದಲ್ಲಿ ಟೊಳ್ಳು ಅವಕಾಶ ಇರುವುದಿಲ್ಲ. ಹೆಚ್ಚು ದಪ್ಪ ಬೆಳೆಯದ ಸುಮಾರು 30-40 ಅಡಿ ತನಕ ಮಾತ್ರ ಬೆಳೆಯುವ ಈ ಬಿದಿರು ಬಹಳ ಗಟ್ಟಿ ಮುಟ್ಟಾದ ಬಿದಿರು.

ಒಳ ಭಾಗದಲ್ಲಿ ಟೊಳ್ಳು ಇಲ್ಲದ ಬಿದಿರು-Hoole less bamboo
ಒಳ ಭಾಗದಲ್ಲಿ ಟೊಳ್ಳು ಇಲ್ಲದ ಬಿದಿರು-Hoole less bamboo  2
ಬೆಳಗಾವಿ, ಗೋವಾ- ಮಹಾರಾಷ್ಟ್ರ ಗಡಿಯಲ್ಲಿನೈಸರ್ಗಿಕವಾಗಿ ಬೆಳೆಯುವ ಒಳ ಭಾಗದಲ್ಲಿ ಟೊಳ್ಳು ಇಲ್ಲದ ಬಿದಿರು.

ಎಲ್ಲಾ ಬಿದಿರುಗಳ ಕಥೆ:

ಬಿದಿರುಗಳಿಗೆ ನಿರ್ಧಿಷ್ಟ ಆಯುಶ್ಯ ಎಂಬುದಿದೆ. ಇವೆಲ್ಲಾ ಸರಿ ಸುಮಾರು 50-60 ವರ್ಷಗಳೆಂದು ಅಂದಾಜು ಮಾಡಲಾಗಿದೆ. ಹಳದಿ ಕಾಂಡದ ಬಿದಿರು, ಕೆಲವು ಹೊಳೆ ದಂಡೆಯಲ್ಲಿ ಬೆಳೆಯುವ ಬಿದಿರುಗಳಿಗೆ ಹೂ ಬಿಡುವ ಗುಣ ಇಲ್ಲ ಎನ್ನಲಾಗುತ್ತಿದೆ. ಉಳಿದೆಲ್ಲಾ ಬಿದಿರು ಹೂ ಬಿಡುವುದು ನಂತರ ಸಾಯುವುದು ಪ್ರಕೃತಿ ನಿಯಮ. ಬೆಳಗಾವಿ. ಮಹಾರಾಷ್ಟ್ರದ ಅಂಬೋಲಿ ಸುತ್ತಮುತ್ತ ಬೆಳೆಯುವ ಬಿದಿರು ಹೂ ಬಿಡುವ ಗುಣ ಹೊಂದಿರದ ವಿಶಿಷ್ಟ ಬಿದಿರು ತಳಿಯಾಗಿ ಹೆಸರು ಮಾಡಿದೆ. ಯಾವ ಬಿದಿರು ಹೂ ಬಿಡುತ್ತದೆಯೋ ಆ ಬಿದಿರಿನ  ಬೀಜ ರಹಿತವಾದ ಯಾವುದೇ ಸಸ್ಯಾಭಿವೃದ್ದಿ  ಮಾಡಿದರೂ ಅದು ತನ್ನ ನಿರ್ದಿಷ್ಟ ಪ್ರಾಯ ಆದಾಗ ಹೂ ಬಿಡುತ್ತದೆ. ಆ ಕಾರಣಕ್ಕೆ ವಿಜ್ಞಾನಿಗಳು ಬಿದಿರನ್ನು ಬೀಜದ ಮೂಲಕವೇ ಸಸ್ಯಾಭಿವೃದ್ದಿ ಮಾಡಬೇಕು ಎಂದಿದ್ದಾರೆ. ಬೀಜದಿಂದ ಮಾಡಿದ ಸಸಿಗೆ ಅದರ ಪೂರ್ಣ ಆಯುಸ್ಸು ಇರುತ್ತದೆ.

ಬಿದಿರು ಎಲ್ಲಿ ಬೆಳೆಯಬಹುದು:

ಸ್ವ ಬಳಕೆಗೆ ಬೇಕಾದ ಬಿದಿರು- bambofpr self use

ಬಿದಿರು ಬೆಳೆಯುವ ನೈಸರ್ಗಿಕ ಸ್ಥಳ ಕಾಡು. ಕಾಡಿನ ಫಲವತ್ತಾದ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಮಳೆ ಹೆಚ್ಚು ಬರುವ ಪ್ರದೇಶಗಳಲ್ಲಿ ಇದರ ಬೆಳವಣಿಗೆ ಉತ್ತಮವಾಗಿರುತ್ತದೆ. ಫಲವತ್ತಾಗಿರದ ಮಣ್ಣಿನಲ್ಲಿ ಬೆಳೆದಾಗ ಕೆಲವು ವರ್ಷ ನಿಧಾನ ಬೆಳವಣಿಗೆ ಹೊಂದಿ ಕ್ರಮೇಣ ಉತ್ತಮವಾಗಿ ಬೆಳೆಯುತ್ತದೆ.

ಬಿದಿರು ಒಂದು ದೈತ್ಯ ಹುಲ್ಲು. ಇದರಲ್ಲಿ ವರ್ಷವೂ ಸಾಕಷ್ಟು ಎಲೆ ಉದುರುತ್ತದೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದಕ್ಕೆ ತಾಯಿ ಬೇರು ಇಲ್ಲ. ಬೇರುಗಳು ನೆಲದ ಮೇಲ್ಭಾಗದಲ್ಲಿ ಹಬ್ಬಿಕೊಂಡು ಇಡೀ ಮೆಳೆಯನ್ನು ರಕ್ಷಿಸುತ್ತದೆ.ಮಣ್ಣು ಸವಕಳಿಯನ್ನು ತಡೆಯುತ್ತದೆ. ಒಣ ಪ್ರದೇಶದಲ್ಲಿ ಬಿದಿರು ಬೆಳೆದರೆ ಅದು ಬಹಳ ನಿಧಾನವಾಗಿ ಬೆಳವಣಿಗೆ ಹೊಂದುತ್ತದೆ. ಅದರೆ ಅದಕ್ಕೆ ಬಹಳ ಗಡಸುತನ ಇರುತ್ತದೆ.

ಬಿದಿರು ಎಲ್ಲಿ ಲಾಭದಾಯಕ:

ನಿರುಪಯುಕ್ತ ಭೂಮಿಯಲ್ಲಿ ಕುರುಚಲು ಸಸ್ಯಗಳನ್ನು ಬೆಳೆಸುವ ಬದಲು  ಬಿದಿರನ್ನು ಬೆಳೆದರೆ ಮಣ್ಣು ಫಲವತ್ತಾಗುತ್ತದೆ.ಹಾಗೆಂದು ಕೊಳ್ಳುವವರ ಜೊತೆ ಕರಾರು ಇಲ್ಲದೆ ವಿನಹ ಯಾರೂ ಬಿದಿರನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುವುದು ಸೂಕ್ತವಲ್ಲ. ಸರಕಾರದ ಯೋಜನೆಗಳ ಲಾಭ ಪಡೆಯುವುದಕ್ಕೊಸ್ಕರ ಕೆಲವು ಅಂಗಾಂಶ ಕಸಿ ನಿರತರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಇದನ್ನು ಪ್ರಚಾರ ಮಾಡಬಹುದು. ಆದರೆ ಬೆಳೆಯುವಾಗ ಮಾತ್ರ ಖರೀದಿ ಒಪ್ಪಂದ ಇಲ್ಲದೆ ಬೆಳೆಯಬೇಡಿ. ಬಿದಿರು ಬೆಳೆದಷ್ಟೂ  ಬೆಲೆ ಹೆಚ್ಚಾಗುತ್ತದೆ ಎಂದು ತಿಳಿಯಬೇಡಿ. ಬಿದಿರಿನ ಒಂದು ಕಡ್ಡಿ ಸುಮಾರು 3-4 ವರ್ಷ ಬೆಳೆದು ನಂತರ ಒಣಗಿ ಸಾಯುತ್ತದೆ. ಹೊಸತಾಗಿ ಬೇರೆ ಮೊಳಕೆ ಹುಟ್ಟಿಕೊಳ್ಳುತ್ತದೆ. ನಿರಂತರ ವರ್ಷಕ್ಕೊಮ್ಮೆ ಕಡಿಯುವಂತಿದ್ದರೆ ಮಾತ್ರ ಅದು ಲಾಭದಾಯಕ.

ಬಿದಿರಿನ ಕಳಲೆಗೆ ಬೇಡಿಕೆ ಇದೆ ನಿಜ. ಅದನ್ನು ಸಾಕಷ್ಟು ಮೌಲ್ಯವರ್ಧನೆ ಮಾಡಲೂ ಸಾಧ್ಯವಿದೆ. ಇದನ್ನು ಮಾಡುವ ಆಸಕ್ತಿ ಉಳ್ಳವರಿಗೆ ಅದರಿಂದ ಲಾಭ ಮಾಡಿಕೊಳ್ಳಬಹುದು.

ಬಿದಿರು ಬೆಳೆದವರಿಗೆ ಸಸಿಗೆ 120 ರೂ:

ಭಾರತ ಸರಕಾರ ರಾಷ್ಟೀಯ ಬಿದಿರು ಮಿಷನ್ (National Bambo mission) PRIME MINISTER NATIONAL BAMBOO MISSION.) ಎಂಬ ಬಿದಿರು  ಅಭಿವೃದ್ದಿ ಯೋಜನೆಯನ್ನು https://www.sarkariyojnaa.com/national-bamboo-mission/   ಹಾಕಿಕೊಂಡಿದೆ.  ಬಿದಿರಿನ ಬಳಕೆಯಿಂದ ಪ್ಲಾಸ್ಟಿಕ್ ಕಡಿಮೆ ಮಾಡಬೇಕು ಎಂಬುದು  ಇದರ ಮುಖ್ಯ ಉದ್ದೇಶ.ಪ್ರತೀ ಸಸಿಗೆ 120 ರೂ . ನಂತೆ ಸಹಾಯಧನವನ್ನೂ ನೀಡುತ್ತದೆ. ಒಳ್ಳೆಯ ಯೋಜನೆ. ಆದರೆ ಸರಕಾರ ಬಿದಿರು ಬೆಳೆದ ಮೇಲೆ ಕೊಳ್ಳುವವರ ಜೊತೆ ಒಪ್ಪಂದ ಮಾಡಿಕೊಂಡ ಬಗ್ಗೆ ಯಾವ  ಉಲ್ಲೇಖವೂ ಇಲ್ಲ. ರೈತರಿಗೆ ಬೆಳೆಯಲು ಹೇಳುವುದು ಸುಲಭ. ಆದರೆ ಬೆಳೆದ ಮೇಲೆ ಅದಕ್ಕೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಬಹಳ ಮುಖ್ಯ. ಸರಕಾರ ಬಿದಿರಿನ ಕರಕುಶಲ ವಸ್ತುಗಳನ್ನು ತಯಾರು ಮಾಡುವವರನ್ನು ಪ್ರೋತ್ಸಾಹಿಸುತ್ತದೆ. ಅವರಿಗೆ ಸಹಾಯವನ್ನೂ ಮಾಡಬಹುದು. ಆದರೆ ಅಂತವರು ಮುಂದೆ ಬರಬೇಕು. ಅವರು ಅದನ್ನು ನಿರಂತರ ಮುಂದುವರಿಸಬೇಕು. ಆಗ ಮಾತ್ರ ಬೆಳೆದ ರೈತರಿಗೆ ಅನುಕೂಲ ಆಗಬಹುದು. ಒಂದು ವೇಳೆ ಬಿದಿರಿಗೆ ಮಾರುಕಟ್ಟೆ ಸಮಸ್ಯೆ ಆದರೆ ಸರಕಾರ ಮತ್ತೆ ಬಿದಿರ ಮೆಳೆಗೆ 120 ಅಥವಾ 1200 ಕೊಟ್ಟರೂ ಅದನ್ನು ವಿಲೇವಾರಿ ಮಾಡಲು ಈ ಮೊತ್ತ ಸಾಲದಾಗಬಹುದು. ಆ ಹೊಲದಿಂದ ಬಿದಿರನ್ನು ಯಂತ್ರಗಳ ಸಹಾಯದಿಂದ ಕಿತ್ತು ತೆಗೆಯಲಷ್ಟೇ ಇದು ಸರಿಹೊಂದಬಹುದು.

ಬಿದಿರು ಒಂದು ಕೃಷಿ ಅರಣ್ಯ ಅಲ್ಲ:

ಮಣ್ಣು ಸಂರಕ್ಷಣೆಗೆ ಬಿದಿರು ವರ- bamboo for soil conservation
ಮಣ್ಣು ಸಂರಕ್ಷಣೆಗೆ ಬಿದಿರು ವರ

ಬಿದಿರನ್ನು ಹೊಲದ ಬದುಗಳಲ್ಲಿ ಬೆಳೆಸಿದರೆ ಅದರ ಸುತ್ತ ಸುಮಾರು 15-20 ಅಡಿ ತನಕ ಬೇರೆ ಸಸ್ಯ ಬೆಳೆಯಲಾರದು. ಅದರೆ ಬೇರುಗಳು ನಿಬಿಡವಾಗಿ ಹಬ್ಬಿ  ಫಲವತ್ತತೆಯನ್ನು ಹೀರಿಕೊಳ್ಳುತ್ತದೆ. ಪಕ್ಕದ ಬೆಳೆಯನ್ನು ಸೊರಗುವಂತೆ ಮಾಡುತ್ತದೆ.ಆ ದ ಕಾರಣ ಇದನ್ನು ಪ್ರತ್ಯೇಕವಾಗಿಯೇ ಬೆಳೆಯಬೇಕಾಗುತ್ತದೆ.  ಪ್ರತ್ಯೇಕವಾಗಿ ಬೆಳೆದಾಗ ಎಕ್ರೆಗೆ ಕನಿಷ್ಟ ವಾರ್ಷಿಕ 50,000 ರೂ.ಗಳ ಆದಾಯವನ್ನು ಅದು ಕೊಡಬೇಕಾಗುತ್ತದೆ.

ಬಿದಿರು ಬೇಡ ಎಂದಲ್ಲ. ಬೆಳೆಸಿ.

ಸ್ವಂತದ ಬಳಕೆಗೆ ಮತ್ತು ಸ್ಥಳೀಯ ಬೇಡಿಕೆ ಇದ್ದರೆ ಅದಕ್ಕೆ ಪೂರೈಕೆ ಮಾಡುವಷ್ಟು ಮಾತ್ರ ಬೆಳೆಸುವುದೇ ಸಧ್ಯದ ಸ್ಥಿತಿಯಲ್ಲಿ ಸೂಕ್ತ ಎನ್ನಿಸುತ್ತದೆ. ದೊಡ್ಡ ಪ್ರಮಾಣಕ್ಕೆ ಹೋದರೆ ಅದಕ್ಕೆ ಲಾಭಕೊಡಬಲ್ಲ ಮಾರುಕಟ್ಟೆ ಅವಕಾಶ ಬೇಕಾಗುತ್ತದೆ. ಭೂಮಿಯ ಉತ್ಪಾದಕತೆಗೆ ಅನುಗುಣವಾದ ಬೆಳೆ ಹಾಕಿದರೆ ಮಾತ್ರ ಕೃಷಿಕನಿಗೆ ಲಾಭವಾಗುತ್ತದೆ. ಮನೆಬಳಕೆಗೆ ಬೇಕಾದ ಬಿದಿರು ಬೆಳೆಯಿರಿ.

ಸರಕಾರದ ಅರಣ್ಯ ಇಲಾಖೆ ತಮ್ಮ ಸುಪರ್ದಿಯ ಕಾಡುಗಳಲ್ಲಿ ಬೇಕಾದಷ್ಟು ಬಿದಿರು ಬೆಳೆಸಲಿ. ಆನೆ ಮುಂತಾದವುಗಳಿಗೆ ಆಹಾರ ಆಗುತ್ತದೆ. ಭೂ ಕುಸಿತವೂ ತಡೆಯುತ್ತದೆ. ಕಾಡೂ ಆಗುತ್ತದೆ.ರೈತರಿಗೆ ಖಾತ್ರಿಯ ಆದಾಯ ಇದ್ದರೆ ಮಾತ್ರ ಬೆಳೆಸಲು ಸಲಹೆ ಕೊಡಿ.

Leave a Reply

Your email address will not be published. Required fields are marked *

error: Content is protected !!