ನಾವೆಲ್ಲಾ ಅಡಿಕೆ ಬೆಳೆಗಾರರು. ಆದರೆ ನಮಗೆ ಇನ್ನೂ ಸ್ಪಷ್ಟವಾಗಿ ನಾವು ಬೆಳೆದ ಅಡಿಕೆ ಯಾವುದಕ್ಕೆ ಬಳಕೆಯಾಗುತ್ತದೆ ಎಂದು ಗೊತ್ತೇ ಇಲ್ಲ.ನಾವು ಬೆಳೆಯುವ ಅಡಿಕೆ ಸಧ್ಯದ ಮಟ್ಟಿಗೆ ಬಳಕೆಯಾಗುವುದು ಈ ಎಲ್ಲಾ ರೂಪಗಳಲ್ಲಿ ಜಗಿದು ಉಗುಳುವುದಕ್ಕೆ ಮಾತ್ರ.
ಅಡಿಕೆ ಎಂದರೆ ಅದು ಟ್ಯಾನಿನ್ (ಚೊಗರು) ಒಳಗೊಂಡ ಒಂದು ಬೀಜ ಎಂದು ವ್ಯಾಖ್ಯಾನಿಸಬಹುದು. ಅಡಿಕೆ ಕಾಯಿ ಬೆಳೆದು ಹಣ್ಣಾದ ಮೇಲೆ ಕೊಯಿಲು ಮಾಡಿ ನಿರ್ದಿಷ್ಟ ದಿನಗಳ ವರೆಗೆ ಸೂರ್ಯನ ಬೆಳಕಿನಲ್ಲಿ ಒಣಗಿಸಿ, ಸಿಪ್ಪೆ ಸುಲಿದಾಗ ದೊರೆಯುವುದು ಚಾಲಿ ಅಥವಾ ಸುಪಾರಿ ಅಥವಾ ಬಿಳಿ ಅಡಿಕೆ. ಹದವಾಗಿ ಬೆಳೆಯುವಾಗ ಕೊಯಿಲು ಮಾಡಿ ತಾಜಾ ಇರುವಾಗಲೇ ಸಿಪ್ಪೆ ತೆಗೆದು ಬೇಯಿಸಿ ಒಣಗಿಸಿದರೆ ಅದು ಕೆಂಪಡಿಕೆ, ಅಥವಾ ಬೇಯಿಸಿದ ಅಡಿಕೆ ಆಗುತ್ತದೆ. ಇದನ್ನೇ ರೆಡ್ ಸುಪಾರಿ ಎನ್ನುತ್ತಾರೆ. ಈ ಎರಡು ವಿಧಾನದಲ್ಲಿ ಮಾತ್ರ ಅಡಿಕೆಯನ್ನು ಸಂಸ್ಕರಿಲಾಗುತ್ತದೆ.
ಬಹುತೇಕ ಅಡಿಕೆ ಬೆಳೆಗಾರರು ತಾವು ಬೆಳೆಯುವ ಅಡಿಕೆ ಬೇರೆ ಬೇರೆ ಬಳಕೆಗೆ ಹೋಗುತ್ತದೆ. ಆದ ಕಾರಣ ಎಷ್ಟು ಬೆಳೆದರೂ ಅದಕ್ಕೆ ಬೇಡಿಕೆ ಇದೆ ಎಂದು ತಿಳಿದಿದ್ದಾರೆ. ಆದರೆ ವಾಸ್ತವಿಕತೆ ಹೇಗಿದೆ ಗೊತ್ತೇ?
ಅಡಿಕೆಯ ಉಪಯೋಗಗಳು:
- ಅಡಿಕೆಯನ್ನು ಈ ತನಕವೂ ತಿಂದು ಉಗುಳುವ ಉದ್ದೇಶಕ್ಕೆ ಮಾತ್ರವೇ ಬಳಕೆ ಮಾಡಲಾಗುತ್ತಿದೆ.
- ತಿಂದು ಉಗುಳಲು ಇಷ್ಟು ಅಡಿಕೆ ಬೇಕೇ ಎಂದು ಯೋಚಿಸಬೇಡಿ.
- ನಮ್ಮ ಊರಿನ ಒಂದು ಬೀಡದ ಅಂಗಡಿಯಲ್ಲಿ (ಅದು ಸ್ಥಳೀಯ ಎಲೆ ಅಡಿಕೆ ಅಂಗಡಿ) ನಾಲ್ಕು ಬೀಡಾ ಆಗಬೇಕಾದರೆ 1 ಹಣ್ಣು ಅಡಿಕೆ ಬೇಕಾಗುತ್ತದೆ.
- ಸುಮಾರು 7 ವರ್ಷಕ್ಕೆ ಹಿಂದೆ ಮ್ಯಾಂಮ್ಕೋಸ್ ನ ಅಧ್ಯಕ್ಷರಾಗಿದ್ದ ಶ್ರೀ ನರಸಿಂಹ ಭಂಡಾರಿಯವರು ಹೇಳುವುದನ್ನು ಕೇಳಿದ್ದೆ,
- ನಮ್ಮ ರಾಜ್ಯಕ್ಕೇ ದಿನಕ್ಕೆ ಸುಮಾರು 3-4 ಲೋಡುಗಳಷ್ಟು ಗುಟ್ಕಾ ಬೇಕಾಗುತ್ತದೆ.
- ಹಾಗಿರುವಾಗ ಬೇರೆ ಬೇರೆ ರಾಜ್ಯಗಳ ಬಳಕೆದಾರರಿಗೆ ಎಷ್ಟೊಂದು ಪ್ರಮಾಣದಲ್ಲಿ ಗುಟ್ಕಾ ಬೇಕಾಗುವುದಿಲ್ಲ.
- ಇದಕ್ಕೆಲ್ಲಾ ಕೆಂಪಡಿಕೆ , ಒಡೆದ ಪಟೋರಾ, ಸಿಪ್ಪೆ ಗೋಟು, ಉಳ್ಳಿಗಡ್ಡೆ, ಕರಿಗೋಟು, ಹುಡಿ ಇವೆಲ್ಲಾ ಬಳಕೆಯಾಗುತ್ತದೆ.
- ಊಹಿಸಿ ಸುಮಾರು 130 ಕೋಟಿ ಜನ ಸಂಖ್ಯೆ ಇರುವ ನಮ್ಮ ದೇಶದಲ್ಲಿ ಸುಮಾರು 10-15 % ಜನ ಗುಟ್ಕಾ, ತಾಂಬೂಲ ತಿನ್ನುವವರು ಇದ್ದರೆ , ಎಷ್ಟೊಂದು ಅಡಿಕೆ ಬೇಕಾಗಬಹುದು?
- ಒಂದು ಮನೆಯಲ್ಲಿ ಒಬ್ಬ ಎಲೆ ಅಡಿಕೆ ತಿನ್ನುವವ ಇದ್ದರೆ ಅವನಿಗೆ ದಿನಕ್ಕೆ ಕನಿಷ್ಟ 2 ಅಡಿಕೆ ಬೇಕು.
ಚಾಲಿ ಅಡಿಕೆ:
- ಅಡಿಕೆ ಬೆಳೆಯಲಾಗುವ ನಮ್ಮ ಊರಿನ ಒಂದು ಪಾನ್ ಬೀಡಾದ ಅಂಗಡಿಗೆ ದಿನಕ್ಕೆ 1 ಕಿಲೋ ಚಾಲಿ ಅಡಿಕೆ ಬೇಕು.
- ಅಡಿಕೆ ಬೆಳೆ ಇಲ್ಲದ ರಾಜ್ಯದ ಜಿಲ್ಲೆಗಳಲ್ಲಿ ಬುಟ್ಟಿಯಲ್ಲಿ ತುಂಬು ಅಡಿಕೆಯನ್ನು ಆಂಗಡಿ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತದೆ.
- ಅದೇ ಮಹಾರಾಷ್ಟದಿಂದ ಮೊದಲ್ಗೊಂಡು ಉತ್ತರ ಭಾರತದಾದ್ಯಂತ ಎಲ್ಲಾ ರಾಜ್ಯಗಳ ಪಟ್ಟಣದ ಪಾನ್ ಬೀಡಾ ಅಂಗಡಿಗಳಿಗೆ ಎಷ್ಟು ಅಡಿಕೆ ಬೇಕಾಗಬಹುದು?
- ಗುಜರಾತ್ ನ ಅಹಮದಾಬಾದ್ ನ ಒಂದು ಬೀದಿಯಲ್ಲಿ ಅಶೋಕಾ ಪಾನ್ ಶಾಪ್ ಎಂಬ ಒಂದು ಅಂಗಡಿಯಲ್ಲಿ ನಾನು ಗಮನಿಸಿದಂತೆ ನಿಮಿಷಕ್ಕೊಂದು ಪಾನ್ ಮಾರಾಟವಾಗುತ್ತದೆ.
- ಇಲ್ಲಿ ಪಾನ್ ತಯಾರು ಮಾಡಲಿಕ್ಕೇ ಎರಡು ಜನ ಇರುತ್ತಾರೆ .
- ಇದನ್ನು ಊಟಕ್ಕೆ ಎಲೆ ಹಾಕಿ ಬಡಿಸಿಟ್ಟಂತೆ ಗ್ರಾಹಕರಿಗೆ ಕೊಡಲು ಇಟ್ಟಿರುತ್ತಾರೆ.
- ಇಲ್ಲೆಲ್ಲಾ ಒಂದೊಂದು ಅಂಗಡಿಗಳಲ್ಲಿ ಹತ್ತಾರು ಕಿಲೋ ಅಡಿಕೆ ಬಳಕೆಯಾಗುತ್ತದೆ.
- ಚಾಲಿಯನ್ನು ಬೇರೆ ಬೇರೆ ನಮೂನೆಯಲ್ಲಿ ಕತ್ತರಿಸಿ ಅದನ್ನು ಪಾನ್ ಬೀಡಾ ಕ್ಕೆ ಬಳಕೆ ಮಾಡಲಾಗುತ್ತದೆ.
ಕೆಂಪಡಿಕೆಯ ಬಳಕೆ:
- ಕೆಂಪಡಿಕೆಯನ್ನು ಉತ್ತರ ಕರ್ನಾಟಕದಿಂದ ಆರಂಭವಾಗಿ ದೇಶದಾದ್ಯಂತ ಕಚ್ಚಾ ಎಲೆ ಅಡಿಕೆ ತಿನ್ನಲು ಬಳಕೆ ಮಾಡುತ್ತಾರೆ.
- ಬಹುತೇಕ ಎಲ್ಲಾ ಕಡೆ ರಸ್ತೆ ಬದಿಯಲ್ಲಿ, ಕಿರಾಣಿ ಅಂಗಡಿಗಳಲ್ಲಿ ತರಾವಳಿಯಂತೆ ಬುಟ್ಟಿ , ಚೀಲದಲ್ಲಿ ತುಂಬಿ ಇದನ್ನು ಇಟ್ಟಿರುತ್ತಾರೆ.
- ಅದು 1988 ಸುಮಾರಿಗೆ ಪಾನ್ ಮಸಾಲ ಎಂಬ ತಯಾರಿಕೆ ಪ್ರಾರಂಭವಾಯಿತು.
- ಆಗ ಈ ಕೆಂಪಡಿಕೆ ಇದಕ್ಕೆ ಗರಿಷ್ಟ ಪ್ರಮಾಣದಲ್ಲಿ ಬಳಕೆಯಾಗಲು ಪ್ರಾರಂಭವಾಯಿತು.
- ಈ ಉದ್ದಿಮೆ ಬೆಳೆದು ಅಡಿಕೆ ಬೆಳೆಗಾರರಿಗೆ ಮೌಲ್ಯವೂ ಬಂತು. ಈಗಲೂ ಕಚ್ಚಾ ಎಲೆ ಅಡಿಕೆಗೆ ತಿನ್ನಲು ಇದನ್ನೇ ಬಳಕೆ ಮಾಡುತ್ತಾರೆ.
- ಕರಾವಳಿಯಲ್ಲಿ ಮಾತ್ರ ಹಣ್ಣು ಅಡಿಕೆಯನ್ನು ಬಳಕೆ ಮಾಡುವುದು.
ಪಾನ್ ಮತ್ತು ಗುಟ್ಕಾ ಮಾತ್ರವಲ್ಲ:
- ಪಾನ್ ಬೀಡಾ ಎಂಬುದು ಅಂಗಡಿಗಳಲ್ಲಿ ಮಾರಾಟವಾಗುವ ಉತ್ಪನ್ನ.
- ಗುಟ್ಕಾ ಸಿದ್ದ ಪ್ಯಾಕೆಟ್ ಗಳಲ್ಲಿ ಅಡಿಕೆ ಮತ್ತು ಇನ್ನಿತರ ವಸ್ತುಗಳನ್ನು ಮಿಶ್ರಣ ಮಾಡಿ ತಯಾರಿಸುವಂತದ್ದು.
- ಇದಲ್ಲದೆ ದೇಶದ ಬೇರೆ ಬೇರೆ ಕಡೆಗಳಲ್ಲಿ ಟನ್ ಗಟ್ಟಲೆ ಸಿಹಿ ಸುಪಾರಿ ಕಾಜೂ ಸುಪಾರಿ, ಸೆಂಟೆಡ್ ಸುಪಾರಿ, ಹುರಿದ ಸುಪಾರಿ, ಸಾಂಬಾರ ಸುಪಾರಿ ತಯಾರಾಗುತ್ತದೆ.
- ಅಡಿಕೆಯಿಂದ ಬೇರೆ ಬೇರೆ ಉತ್ಪನ್ನ ತಾಯಾರಿಸುವ ಅಸಂಖ್ಯಾತ ಉದ್ದಿಮೆಗಳು ಉತ್ತರ ಭಾರತದ ಕಲ್ಕತ್ತಾ ರಾಜಸ್ಥಾನ ಮುಂತಾದ ಕಡೆ ಹಾಗೆಯೇ ನಮ್ಮ ರಾಜ್ಯದಲ್ಲೂ ಇದೆ.
- ಯಾಕೆ ನಮ್ಮ ರಾಜ್ಯದ ಸಿರಸಿಯ TSS ನಲ್ಲೂ ದಿನಕ್ಕೆ ಟನ್ ಗೂ ಹೆಚ್ಚು ಸುಪಾರಿಯ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
- ಇವೆಲ್ಲಾ ಸಭೆ ಸಮಾರಂಭಗಳಲ್ಲಿ ಸಭಾಲಂಕಾರ ಮತ್ತು ಅಥಿತಿ ಸತ್ಕಾರಕ್ಕೆ ಬಳಕೆಯಾಗುತ್ತದೆ.
ಪೈಂಟ್ ಗೆ ಹೋಗುತ್ತದೆಯೇ?
- ಅಡಿಕೆಯಲ್ಲಿ ಯಾವುದೇ ಅಂಟು ಗುಣ ಇಲ್ಲ.
- ಇದಕ್ಕೆ ಕೆಂಪು ಹೊರತಾಗಿ ಬೇರೆ ಯಾವ ಬಣ್ಣವೂ ಇಲ್ಲ.
- ಇದರ ಬಣ್ಣ ಸಿಂಥೆಟಿಕ್ ಬಣ್ಣದಷ್ಟು ಬಾಳ್ವಿಕೆ ಬರುವಂತದ್ದೂ ಅಲ್ಲ.
- ಜೊತೆಗೆ ಪೈಂಟ್ ಬೆಲೆಗೂ ಅಡಿಕೆಯ ಬೆಲೆಗೂ ದುಪ್ಪಟ್ಟಿಗಿಂತಲೂ ಹೆಚ್ಚು ಅಂತರ ಇದೆ.
- ಆದ ಕಾರಣ ಪೈಂಟ್ ಉದ್ದೇಶಕ್ಕೆ ಅಡಿಕೆಯನ್ನು ಬಳಕೆ ಮಾಡಿದರೆ ಪೈಂಟ್ ಬಹಳ ದುಬಾರಿಯಾಗಬಹುದು.
- ಈಗ ಈಗಿನ ಅಡಿಕೆ ದರದಲ್ಲಿ ಅದನ್ನು ಪೈಂಟ್ ಗೆ ಸೇರಿಸಲು ಸಾಧ್ಯವಿಲ್ಲ.
- ಹಿಂದೆ ಕೆಂಪಡಿಕೆ ಮಾಡುವ ಪ್ರದೇಶಗಳಿಂದ ತಮಿಳುನಾಡು ಮೂಲದ ಕೆಲವು ಮಗ್ಗ ಉದ್ದಿಮೆದಾರರು ಚೊಗರನ್ನು ಒಯ್ಯುತ್ತಿದ್ದರು.
- ಶಿವಮೊಗ್ಗದ ಹೊಸನಗರ –ನಿಟ್ಟೂರಿನಲ್ಲಿ ಈ ರೀತಿ ಚೊಗರನ್ನು ಒಟ್ಟು ಸೇರಿಸಿ ಲೋಡು ಗಟ್ಟಲೆ ಕೊಡುವವರು ಇದ್ದರು.
- ಈಗ ಅದರ ಬದಲಿಗೆ ಸಿಂಥೆಟಿಕ್ ಬಣ್ಣವನ್ನೇ ಬಳಕೆ ಮಾಡಲಾಗುತ್ತದೆ.
ಇತರ ಉಪಯೋಗಗಳು:
ಅಡಿಕೆಯನ್ನು ಬಳಸಿ ಚಹಾ ಮಾಡಲಿಕ್ಕಾಗುತ್ತದೆ ಎಂಬ ಸುದ್ದಿ ನಮಗೆಲ್ಲಾ ಗೊತ್ತಿದೆ. ಆದರೆ ಇದು ಒಬ್ಬ ರೈತ ಬೆಳೆದ ಅಡಿಕೆಯನ್ನು ಸ್ವಲ್ಪ ಉಪಯ್ಯೋಗ ಮಾಡಲು ಮಾತ್ರ. ಅಡಿಕೆಯ ಚಹಾ ಮಾರುಕಟ್ಟೆಗೆ ಬಂದರೆ ಅದರ ಬೆಲೆ ಈಗಿನ ಚಹಾ ಹುಡಿಗಿಂತ ದುಪ್ಪಟ್ಟು ಹೆಚ್ಚಳವಾಗಬಹುದು! ಇದು ಅಡಿಕೆ ಉತ್ಪಾದನಾ ಮಹಾಸಾಗರದಲ್ಲಿ ಒಂದು ಬಿಂದುವಿನ ಕೊಡುಗೆ ಮಾತ್ರ.
ಹಾಗೆ ನೋಡಿದರೆ ಅಡಿಕೆಯನ್ನು ಹುರಿದು ಕಾಫೀ ಮಾಡಲಿಕ್ಕೆ ಅಗುತ್ತದೆ ಎಂದು ಸುಮಾರು 20-30 ವರ್ಷಗಳ ಹಿಂದೆಯೇ ಕಾಸರೋಡಿನ ಬಾಯಾರಿನ ಒಬ್ಬ ಅಡಿಕೆ ಬೆಳೆಗಾರರು ಮಾಡಿ ತೋರಿಸಿದ್ದರು.ಅಡಿಕೆ ಕಾಫಿಯನ್ನು ಕುಡಿದವರೂ ಹಲವರು ಇದ್ದಾರೆ. ಆಗ ಅದರ ಆವಶ್ಯಕತೆ ಇಲ್ಲದ ಕಾರಣ ಅವರನ್ನು ಗುರುತಿಸಿದವರೇ ಇಲ್ಲ.
ಅಡಿಕೆಯ ಗಾಜು ಮಾಡಲು ಸಾಧ್ಯ ಎನ್ನುತ್ತಾರೆ. ಆದರೆ ಆ ಗಾಜು ಈಗ ಮಾರುಕಟ್ಟೆಯಲ್ಲಿ ಸಿಗುವ ಗಾಜಿಗಿಂತ ಬಹಳ ದುಬಾರಿಯಾಗಬಹುದು. ಇಷ್ಟಕ್ಕೂ ಇದರ ಬಳಕೆಗೆ ತುಂಬಾ ಮಿತಿ ಇದೆ. ಮೊದಲೇ ಹೇಳಿದಂತೆ ಇದು ಸಾಗದರ ನೀರಿನಲ್ಲಿ ಒಂದು ಬಿಂದು ಅಷ್ಟೇ. ಅದೇ ರೀತಿಯಲ್ಲಿ ಈಗ ಸುದ್ದಿಯಲ್ಲಿರುವ ಹೋಳಿಗೆ ಅಥವಾ ಇನ್ಯಾವುದೇ ಉಪಯೋಗ ಇದ್ದರೂ ಇದು ಕ್ವಿಂಟಾಲು ಅಡಿಕೆ ಉತ್ಪಾದನೆಯಲ್ಲಿ 1 ಕಿಲೋ ಪ್ರಮಾಣದಷ್ಟು ಮಾತ್ರ.
ಅಡಿಕೆ ಬೆಳೆಯುವಲ್ಲಿ ಅದರ ಉತ್ಪನ್ನ ಬರಬೇಕು:
ಅಡಿಕೆ ಬೆಳೆಯುವ ಕಡೆ ಸಿದ್ದ ಉತ್ಪನ್ನ ತಯಾರಾಗುವುದು ಗರಿಷ್ಟ ಶೇ. 5 ರಷ್ಟು. ಉಳಿದುದೆಲ್ಲವೂ ಹೊರ ರಾಜ್ಯಗಳಲ್ಲಿ ತಯಾರಾಗಿ ನಮಗೆ ಸಿಗುತ್ತಿದೆ. ಇದನ್ನು ನಾವು ಮಾಡಲು ಪ್ರಯತ್ನಿಸಿದರೆ ಅದಕ್ಕೆ ಬಹಳ ಚಾನ್ಸ್ ಇದೆ.
ಅಡಿಕೆ ಬೆಳೆದರೆ ಇನ್ನು 5-6 ವರ್ಷದ ನಂತರ ಅದಕ್ಕೆ ಇದೇ ಬೇಡಿಕೆ ಇರಬಹುದೇ ಇದು ಎಲ್ಲರ ಪ್ರಶ್ನೆ. ಇದಕ್ಕೆ ಯಾರಲ್ಲೂ ಉತ್ತರ ಇಲ್ಲ. ಉತ್ತರ ಸಿಗಬೇಕಾದರೆ ಪರ್ಯಾಯ ಬಳಕೆ ಬಲವಾಗಲೇ ಬೇಕು. ಸಾಮಾಜಿಕ ಅರೋಗ್ಯ ದೃಷ್ಟಿಯಿಂದ ಅಡಿಕೆಯ ಈಗಿನ ಬಳಕೆ ಒಳ್ಳೆಯದಲ್ಲ.