ಅಡಿಕೆ ಕಾಯಿ ಒಡೆಯುವುದಕ್ಕೆ ಕಾರಣ ಮತ್ತು ಪರಿಹಾರ .

ಕಾಯಿ ಒಡೆಯುವ ತೊಂದರೆ

ಹೆಚ್ಚಿನವರ ಅಡಿಕೆ ತೋಟದಲ್ಲಿ ಎಳೆಯ ಕಾಯಿ ಒಡೆದು ಬೀಳುವ ಸಮಸ್ಯೆ ಇದೆ. ಎಲ್ಲರೂ ಸೂಕ್ತ ಪರಿಹಾರಕ್ಕಾಗಿ ಸಿಕ್ಕ ಸಿಕ್ಕವರ ಅಭಿಪ್ರಾಯಗಳನ್ನು ಕೇಳುತ್ತಿರುತ್ತಾರೆ. ಯಾವ ಪರಿಹಾರ ಕೈಗೊಂಡರೂ  ಕಾಯಿ ಒಡೆಯುವಿಕೆ ಅಥವಾ ಅಂಡೋಡಕ ಮಾತ್ರ ಕಡಿಮೆ ಆಗುವುದೇ ಇಲ್ಲ.

ಕೆಲವರ ಅಡಿಕೆ ತೋಟಗಳಲ್ಲಿ 10-15 % ಫಸಲು ಅಂಡೋಡಕದಿಂದ ಹಾಳಾಗುತ್ತದೆ. ಕಾಯಿ ಬಲಿತಂತೆ ಬುಡದಲ್ಲಿ ಉದುರಿಬಿದ್ದ ರಾಶಿ ರಾಶಿ ಹಾಳಾದ ಅಡಿಕೆ ಕಾಣಸಿಗುತ್ತದೆ. ಕೆಲವರು ಬೋರಾನ್ ಕೊರತೆಯಿಂದ ಹೀಗಾಗುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಸತುವಿನ ಕೊರತೆಯಿಂದ ಹೀಗೆ ಆಗುತ್ತದೆ ಎನ್ನುತ್ತಾರೆ. ಅದಕ್ಕೆ ಬೇಕಾದ ಪೋಷಕಗಳನ್ನು ಬಳಸಿ, ಈ ವರ್ಷ ಸರಿಯಾಗದಿದ್ದರೂ ಮುಂದಿನ ವರ್ಷಕ್ಕೆ ಸರಿಯಾಗಬಹುದು ಎಂಬ ಸಮಾದಾನಪಟ್ಟುಕೊಂಡು  ಇರುತ್ತಾರೆ.

 • ಅಂಡೋಡಕಕ್ಕೆ ಪರಿಹಾರ ಕಂಡವರು ಬಹಳ ಕಡಿಮೆ.
 • ಬೇರೆ ಬೇರೆ ಪೋಷಕಗಳನ್ನು ಕೊಟ್ಟು ಸರಿಮಾಡಿದ ಉದಾಹರಣೆಗಿಂತ ತನ್ನಷ್ಟಕ್ಕೆ ಸರಿಯಾದದ್ಡೇ ಹೆಚ್ಚು.
 • ಅಂಡೋಡಕ ಎಂಬುದು ಪೋಷಕಗಳ ವ್ಯತ್ಯಯದಿಂದ ಆಗುತ್ತದೆ ಎಂಬ ಬಗ್ಗೆ ಇನ್ನೂ ಒಮ್ಮತಾಭಿಪ್ರಾಯ ಇಲ್ಲ.
ಅಡಿಕೆಯ ಕಾಯಿ ಒಡೆದದ್ದು

ಪೋಷಕಗಳ ಕೊರತೆಯಿಂದ ಆಗುವುದಲ್ಲ:

 • ತಜ್ಞರು ಕಾಯಿ ಒಡೆಯುವುದಕ್ಕೆ ಬೋರಾನ್ ಕೊರತೆ ಕಾರಣ. ಬೋರಾನ್ ಕೊಡುವುದರಿಂದ ಇದನ್ನು ಸ್ವಲ್ಪ ಮಟ್ಟಿಗೆ ಸರಿ ಪಡಿಸಬಹುದು ಎನ್ನುತ್ತಾರೆ.
 • ಆದರೆ ಬೋರಾನ್ ಕೊಟ್ಟು ಇದನ್ನು ಸರಿಪಡಿಸಿದವರು ತುಂಬಾ ಕಡಿಮೆ.
 • ಕೆಲವರು ಸತು ಕೊರತೆಯಿಂದ ಹೀಗೆ ಆಗುತ್ತದೆ ಎನ್ನುತ್ತಾರೆ.
 • ಸತುವಿನ ಸಲ್ಫೇಟ್ ಕೊಟ್ಟವರ ತೋಟದಲ್ಲೂ ಇದು ಸರಿಯಾದ ನಿದರ್ಶನ ಇಲ್ಲ.
 • ಇನ್ನು ಕೆಲವರು ಕ್ಯಾಲ್ಸಿಯಂ ಕೊರತೆಯಿಂದ ಆಗುತ್ತದೆ ಎನ್ನುತ್ತಾರೆ.
 • ಇದಕ್ಕಾಗಿ ಕ್ಯಾಲ್ಸಿಯಂ ನೈಟ್ರೇಟ್ ಅಥವಾ ಸುಣ್ಣ ಹಾಕಿಯೂ ನೋಡಿದ್ದುಂಟು.
 • ಅಡಿಕೆ ಉದುರುವುದು ಇದರಿಂದಲೂ ನಿಂತದ್ದಿಲ್ಲ.
 • ಹಾಗಾದರೆ ಇದು ಯಾವ ಸಮಸ್ಯೆ? ಏನೂ ಪರಿಹಾರ ಇಲ್ಲವೇ? ಎಲ್ಲಾ ಅಡಿಕೆ ಬೆಳೆಗಾರರ  ಈ ಸಮಸ್ಯೆಗೆ ಉತ್ತರ ಇನ್ನೂ ಅಸ್ಪಷ್ಟ.
 • ಮೇಲಿನ ಎಲ್ಲಾ ಪರಿಹಾರಗಳೂ ಒಂದು ಚಾನ್ಸ್ ನೋಡಿ.
 • ಸರಿಯಾದರೂ ಆಗಬಹುದು ಎಂಬ ಸಮಜಾಯಿಶಿ ಮಾತ್ರ.

ಯಾವ ಕಾರಣಕ್ಕೆ ಹೀಗೆ ಆಗುತ್ತದೆ:

 • ತೋಟದಲ್ಲಿ ಎಲ್ಲಾ ಮರಗಳಲ್ಲೂ ಹೀಗೆ ಅಗುತ್ತಿದೆಯೇ ?
 • ಹಾಗಿದ್ದರೆ ಅದು ಒಂದು ಪೋಷಕಾಂಶಗಳ ಅಸಮತೋಲನದಿಂದ ಉಂಟಾಗಿರುವ ನ್ಯೂನತೆ ಎಂದು ತೀರ್ಮಾನಕ್ಕೆ ಬರಬಹುದು.
 • 1000 ಮರಗಳು ಇದ್ದಲ್ಲಿ 10-20 ಹೆಚ್ಚೆಂದರೆ 50 ಮರಗಳಿಗೆ ಮಾತ್ರ ಈ ಸಮಸ್ಯೆ ಇರುತ್ತದೆ.
 • ಎಲ್ಲವೂ ಒಂದೇ ಕಡೆ ಇರುವುದಿಲ್ಲ. ಒಂದೊಂದು ಒಂದೊಂದು ಕಡೆ ಇರುವುದು ನಮಗೆಲ್ಲಾ ಗೊತ್ತಿದೆ. 
 • ಹಾಗಿರುವಾಗ  ಆ ಸಸಿಗೆ ಮಾತ್ರವೇ ಯಾಕೆ ಪೋಷಕಾಂಶದ ಕೊರತೆ ಉಂಟಾಗಲು ಸಾಧ್ಯ?
 • ಎಲ್ಲಾ ಗಿಡ/ ಮರಗಳಿಗೂ ಏಕ ಪ್ರಕಾರ ಗೊಬ್ಬರಗಳನ್ನು ಪೂರೈಕೆ ಮಾಡುವಾಗ  ಕೆಲವೇ ಕೆಲವು ಸಸಿ/ ಮರಗಳಿಗೆ ಮಾತ್ರ ಈ ಸಮಸ್ಯೆ ಉಂಟಾಗುತ್ತದೆ ಎಂದಾದರೆ
 • ಅದು ಯಾವ ಪೋಷಕಾಂಶದ ಕೊರತೆಯೂ ಅಲ್ಲ.
 • ಒಂದು ವೇಳೆ ಅದು ಪೋಷಕಾಂಶ ಕೊಟ್ಟಾಗ ಅದಕ್ಕೆ ಸ್ಪಂದಿಸಿ ಸರಿಯಾಗಿದ್ದೇ ಆದರೆ ಆ ಸಸ್ಯಕ್ಕೆ ತಳಿಗುಣದಲ್ಲೇ ಆ ಪೋಷಕದ ಅಗತ್ಯ ಹೆಚ್ಚು ಇರಬಹುದು.
 • ಇಂತದ್ದು ಆಗುವುದು ತುಂಬಾ ಅಪರೂಪ.
ಗೊಂಚಲಿನಲ್ಲೇ ಒಡೆದು ನಂತರ ಬೀಳುವಿಕೆ

ಇದು ಒಂದು ಶಾರೀರಿಕ ಸಮಸ್ಯೆ:

 • ಅಡಿಕೆ ಬೆಳೆಯುವಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿದ ರೈತರ ಪ್ರಕಾರ  ಇದು ಒಂದು ಶಾರೀರಿಕ  ಸಮಸ್ಯೆ.  
 • ಕೆಲವು ಅಧ್ಯಯನಕಾರರೂ ಇದೇ  ಅಭಿಪ್ರಾಯವನ್ನು  ವ್ಯಕ್ತಪಡಿಸುತ್ತಾರೆ.
 • ಹೆಚ್ಚಾಗಿ ಎಳೆ ಸಸಿಗಳಲ್ಲಿ ಜಾಸ್ತಿ. ಅಪರೂಪಕ್ಕೆ ಕೆಲವೊಮ್ಮೆ ದೊಡ್ಡ ಮರಗಳಲ್ಲೂ ಕಂಡು ಬರುತ್ತದೆಯಾದರೂ ಮರ ಬೆಳೆದಂತೆ ಕಡಿಮೆಯಾಗುತ್ತದೆ.
 • ಶಾರೀರಿಕ ಸಮಸ್ಯೆ ಆದ ಕಾರಣವೇ ಅದು ಎಲ್ಲಾ ಮರಗಳಲ್ಲಿಯೂ ಆಗುವುದಿಲ್ಲ.
 • ದಪ್ಪ ಕಾಂಡದ ಮರಗಳಲ್ಲಿ ಇದರ ಸಮಸ್ಯೆ ಹೆಚ್ಚು.
 • ಹಾಗೆಂದು ಸಪುರ ಕಾಂಡದ ಮರಗಳಲ್ಲೂ ಇಲ್ಲದಿಲ್ಲ.

ಇನ್ನೂ ಕೆಲವು ಮರಗಳಲ್ಲಿ ಒಂದು ವರ್ಷ ಒಡೆಯುವಿಕೆ ಇರುತ್ತದೆ, ಮತ್ತೊಂದು ವರ್ಷ ಇರುವುದಿಲ್ಲ. ಇದನ್ನು ಗಮನಿಸಿದಾಗ ಪೋಷಕಾಂಶದ ವ್ಯತ್ಯಯವೋ ಅಥವಾ ವಾತಾವರಣ, ನೀರು ಇತ್ಯಾದಿಗಳ ಸಮಸ್ಯೆಯೋ ಆಗಿರಬಹುದು ಎನ್ನಿಸುತ್ತದೆ.

ADVERTISEMENT 36
ADVERTISEMENT

ಫಲ ನೀಡಬಹುದಾದ ಪರಿಹಾರಗಳು:

 • ಸಾಮಾನ್ಯವಾಗಿ ಅಂಡೊಡಕ ಸಮಸ್ಯೆ ಉಂಟಾಗುವುದು ಮಳೆ ಬಂದ ತರುವಾಯ.
 • ಮಳೆ ಬಂದು ನೆಲ ತೇವ ಆದಾಗ ಅಡಿಕೆ ಒಡೆದು ಬೀಳುತ್ತದೆ.
 • ಬೀಳುವ ಮುಂಚೆ ಕಾಯಿಗಳು ಎಳೆಯದಾಗಿದ್ದರೂ ಹಣ್ಣಾದ ಬಣ್ಣ ಕಾಣಿಸುತ್ತದೆ.
 • ಮಳೆ ಬರುವ ಸಮಯದಲ್ಲೇ ಈ ಸಮಸ್ಯೆ ಹೆಚ್ಚಾದ ಕಾರಣ  ಅದು ಸ್ವಲ್ಪ ಮಟ್ಟಿಗೆ ಸಾರಜನಕದ ಹೆಚ್ಚಿನ ಹೀರುವಿಕೆ (Intake) ಅಥವಾ ಬಳಕೆಯಿಂದಾಗಿ ಆಗುತ್ತದೆ ಎಂದು ಊಹಿಸಬಹುದು.
 • ಮೊದಲ ಮಳೆಗೆ ಸಾರಜನಕ ಹೆಚ್ಚಿನ ಪ್ರಮಾಣದಲ್ಲಿ ನೆಲಕ್ಕೆ ದೊರೆಯುತ್ತದೆ.
 • ಸಸ್ಯಗಳು ಅದನ್ನು ಹೇರಳವಾಗಿ ಬಳಸಿಕೊಳ್ಳುತ್ತವೆ.
 • ಆಗ ಇತರ ಪೋಷಕಗಳ ಕೊರತೆ ಉಂಟಾಗಲೂಬಹುದು.
 • ಅದಕ್ಕಾಗಿ ಮಳೆಗಾಲ ಪ್ರಾರಂಭದ ಸಮಯದಲ್ಲಿ ಇಂತಹ ಮರಗಳಿಗೆ ರಂಜಕ ಮತ್ತು ಪೊಟ್ಯಾಶ್ ಮಾತ್ರ ಪೂರೈಕೆ ಮಾಡಬೇಕು.
 • ಯಾವ ಯಾವ ಮರದಲ್ಲಿ ಕಾಯಿ ಒಡಕ ಇದೆಯೋ ಅಂತಹ ಮರಗಳನ್ನು ಮಾರ್ಕ್ ಮಾಡಿಕೊಳ್ಳಬೇಕು.
 • ಅದಕ್ಕೆ ಮೇಲಿನಂತೆ ಗೊಬ್ಬರ ಕೊಡಬೇಕು.
 • ಬೇಸಿಗೆಯಲ್ಲಿ ಸ್ವಲ್ಪ ನೀರಿನ ಕೊರತೆ ಆಗುವಂತೆ  ಮಾಡುವುದು ಉತ್ತ,ಮ.
 • ಕೆಲವು  ನಾಟೀ ಪರಿಹಾರಗಳನ್ನು ಕೆಲವು ರೈತರು ಹೇಳುವುದಿದೆ.
 • ಸಿಂಗಾರದ ಬುಡ ಭಾಗವನ್ನು ಸ್ವಲ್ಪ ಚೂರಿಯಲ್ಲಿ ಗೀರು ಹಾಕಿದರೆ ( ಮಳೆ ಪ್ರಾರಂಭವಾಗುವ ಸಮಯ) ಇದು ಕಡಿಮೆಯಾಗುತ್ತದೆ ಎನ್ನುವವರು ಇದ್ದಾರೆ.
 • ಹಾಗೆಯೇ ಅಡಿಕೆ ಮರಕ್ಕೆ ಮೊಳೆ ಹೊಡೆಯಬೇಕು ಎನ್ನುವವರೂ ಇದ್ದಾರೆ.
 • ಇದರಲ್ಲಿ ಮೊದಲನೇ  ಕ್ರಮವನ್ನು ಪಾಲಿಸಿದರೆ ಸ್ವಲ್ಪ ಫಲ ಇದೆ.
 • ಎರಡನೆಯದ್ದು ಮೂಢ ನಂಬಿಕೆ.
 • ಅಡಿಕೆ ಸಸಿ ಆಯ್ಕೆ ಮಾಡುವಾಗ ಅಂಡೋಡಕ ಇಲ್ಲದ ಮರಗಳಿರುವ ತೋಟದಿಂದ ಬೀಜ ಆಯ್ಕೆ ಮಾಡಿ.
 • ಬೀಜ ಆಯ್ಕೆ ಮಾಡುವ ಮರದ  ಸುತ್ತ ಮುತ್ತ ಇಂತಹ ಅಡಿಕೆ  ಆಗುವ ಮರ ಇರಬಾರದು.
 • ಮಂಜೆ ಆಗುವ ( ಅರೆ ಬಲಿತಾಗ ಹಣ್ಣಾಗುವ ಅಥವಾ ಎಳೆ ಗೊನೆಯೇ  ಹಣ್ಣಿನಂತೆ ಬಣ್ಣ ಕಂಡು ಬರುವ ಮರದಿಂದ ಬೀಜ ಆಯ್ಕೆ ಮಾಡಬೇಡಿ.
 • ಮರಕ್ಕೆ ಹೆಚ್ಚು ಸಾರಜನಕ ಕೊಡಬೇಡಿ.
 • ಮಳೆಗಾಲ ಪ್ರಾರಂಭದಲ್ಲಿ ಸಾರಜನಕ ಗೊಬ್ಬರ ಕೊಡದೆ ರಂಜಕ  ಮತ್ತು ಪೊಟ್ಯಾಶ್ ಮಾತ್ರ ಇರುವ 0:53:34  ಗೊಬ್ಬರ ಪ್ರತೀ ಮರಕ್ಕೆ 25 -30  ಗ್ರಾಂ ಪ್ರಮಾಣದಲ್ಲಿ ಕೊಡಿ.
 • ಗರಿಷ್ಟ ಪ್ರಮಾಣದಲ್ಲಿ ಒಡೆಯುವಿಕೆ ಕಡಿಮೆಯಾಗುತ್ತದೆ.
 • ಮಳೆ ಮುಗಿದು ಅಡಿಕೆ  ಬೆಳವಣಿಗೆ ಆಗಲು ಪ್ರಾರಂಭವಾದ ಅನಂತರ ಕೊಟ್ಟಿಗೆ ಗೊಬ್ಬರವನ್ನು  ಕೊಡಿ. 
 • ಮರದ ಕಾಂಡ  ದಪ್ಪವಾಗಿರುವ , ಎಲೆ ಹಚ್ಚ ಹಸುರಾಗಿರುವ  ಮರದಲ್ಲೇ ಇದು ಹೆಚ್ಚಾಗಿರುತ್ತದೆ( ಅಪವಾದಗಳೂ ಇವೆ)
 • ಅಂತಹ ಮರ ಸೊಕ್ಕಿರುತ್ತದೆ. ಪೋಷಕಾಂಶದ ಅಸಮತೋಲನ ಉಂಟಾಗಿರುತ್ತದೆ. ಯಾವುದು ಹೆಚ್ಚಾಗಿದೆ, ಯಾವುದು ಕೊರತೆ ಆಗಿದೆ ಎಂಬುದನ್ನು ಗಮನಿಸಿ ಅದನ್ನು ಕೊಡಿ. 

ಅಂಡೋಡಕಕ್ಕೆ ನಿರ್ದಿಷ್ಟ  ಕಾರಣ ಏನು ಎಂಬುದು ನಿಖರವಾಗಿ ಅಧ್ಯಯನ ಆಗಿಲ್ಲ. ನಿಖರ ಪರಿಹಾರವೂ ಇಲ್ಲ. ಒಂದು ವರ್ಷ  ಅಂಡೋಡಕ ಇಲ್ಲವಾದರೂ ಮತ್ತೊಂದು ವರ್ಷ  ಆಗುವುದೂ ಇದೆ.  ಒಟ್ಟಿನಲ್ಲಿ ರೈತರು ಇಂತಹ ಸಮಸ್ಯೆ ಉಳ್ಳ ಅಡಿಕೆ ಮರಗಳನ್ನು ಗುರುತು ಮಾಡಿ ಅದಕ್ಕೆ ಏನು ಮಾಡಿದ್ದೇವೆ. ಉಳಿದ ಮರಕ್ಕೂ ಇದಕ್ಕೂ ವ್ಯತ್ಯಾಸ ಇದನ್ನೆಲ್ಲಾ ಗಮನಿಸಿ, ತಪ್ಪನ್ನು ಸರಿ ಮಾಡಿಕೊಂಡು  ಬದಲಾವಣೆ ಮಾಡುವುದೇ ಪರಿಹಾರ.

2 thoughts on “ಅಡಿಕೆ ಕಾಯಿ ಒಡೆಯುವುದಕ್ಕೆ ಕಾರಣ ಮತ್ತು ಪರಿಹಾರ .

 1. ಇದಕ್ಕೆ ಪರಿಹಾರ ಏನೆಂದರೆ ಆ ಮರದ ಒಂದು ಸಿಂಗಾರ ತೆಗೆಯೊದು ಆಗ ಸರಿ ಆಗುತ್ತದೆ ಅಂದರೆ ಅರ್ಥ ಹೀಗೇ ಆಯಿತಲ್ಲ ಆ ಸಿಂಗಾರ ಅರಳಿ ಅದಕ್ಕೆ ಬೇಕಾದ ಆಹಾರ ಇನ್ನೊಂದಕ್ಕೆ ಸಿಗುತ್ತೆ ಅಂದಾಗ ಪೋಶಕಾಂಶದ ಕೊರತೆ
  ಇನ್ನೊಂದು ತಳಿಯ ವಿಚಾರವೂ ಹೌದು

Leave a Reply

Your email address will not be published. Required fields are marked *

error: Content is protected !!